ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರೊಂದಿಗೆ ಕೆಲಸಮಾಡುವುದು ಆನಂದದಾಯಕ

ದೇವರೊಂದಿಗೆ ಕೆಲಸಮಾಡುವುದು ಆನಂದದಾಯಕ

“ದೇವರೊಂದಿಗೆ ಕೆಲಸಮಾಡುವವರಾದ ನಾವು ಸಹ ನಿಮ್ಮನ್ನು, ನೀವು ಆತನ ಅಪಾತ್ರ ದಯೆಯನ್ನು ಪಡೆದುಕೊಂಡು ಅದರ ಉದ್ದೇಶವನ್ನು ಕಳೆದುಕೊಳ್ಳಬಾರದೆಂದು ಬೇಡಿಕೊಳ್ಳುತ್ತೇವೆ.”—2 ಕೊರಿಂ. 6:1.

ಗೀತೆಗಳು: 75, 74

1. ಯೆಹೋವನು ಸರ್ವಶ್ರೇಷ್ಠ ದೇವರಾಗಿದ್ದರೂ ಇತರರಿಗೆ ಏನು ಮಾಡಲು ಆಮಂತ್ರಣ ಕೊಟ್ಟಿದ್ದಾನೆ?

ಯೆಹೋವನು ಸರ್ವಶ್ರೇಷ್ಠ ದೇವರು. ಎಲ್ಲವನ್ನೂ ಸೃಷ್ಟಿಸಿದ್ದು ಆತನೇ. ಆತನ ವಿವೇಕ ಅಗಾಧ. ಶಕ್ತಿ ಅಪರಿಮಿತ. ಇದನ್ನು ಆತನು ಯೋಬನಿಗೆ ಮನದಟ್ಟು ಮಾಡಿದನು. ಆಗ ಯೋಬ ಹೀಗಂದನು: “ನೀನು ಸಕಲ ಕಾರ್ಯಗಳನ್ನು ನಡಿಸಬಲ್ಲಿಯೆಂತಲೂ ಯಾವ ಸಂಕಲ್ಪವೂ ನಿನಗೆ ಅಸಾಧ್ಯವಲ್ಲವೆಂತಲೂ ತಿಳಿದುಕೊಂಡೇ ಇದ್ದೇನೆ.” (ಯೋಬ 42:2) ಯೆಹೋವನು ತಾನು ಉದ್ದೇಶಿಸಿದ್ದನ್ನು ಯಾರ ಸಹಾಯವೂ ಇಲ್ಲದೆ ಮಾಡಶಕ್ತನು. ಆದರೂ ಆತನು ತನ್ನ ಉದ್ದೇಶವನ್ನು ನೆರವೇರಿಸುವಾಗ ತನ್ನೊಂದಿಗೆ ಕೆಲಸ ಮಾಡಲು ಇತರರನ್ನು ಆಮಂತ್ರಿಸುತ್ತಾನೆ. ಇದು ಆತನ ಪ್ರೀತಿಯನ್ನು ತೋರಿಸುತ್ತದೆ.

2. ಯಾವ ಪ್ರಾಮುಖ್ಯ ಕೆಲಸ ಮಾಡಲು ಯೆಹೋವನು ಯೇಸುವನ್ನು ಆಮಂತ್ರಿಸಿದನು?

2 ಯೆಹೋವನು ಮೊತ್ತಮೊದಲಾಗಿ ತನ್ನ ಮಗನಾದ ಯೇಸುವನ್ನು ಸೃಷ್ಟಿಸಿದನು. ಬಳಿಕ ಬೇರೆಲ್ಲವನ್ನು ಸೃಷ್ಟಿಸುವುದರಲ್ಲಿ ತನ್ನೊಂದಿಗೆ ಕೆಲಸಮಾಡಲು ಅವನನ್ನು ಆಮಂತ್ರಿಸಿದನು. (ಯೋಹಾ. 1:1-3, 18) ಯೇಸುವಿನ ಕುರಿತು ಅಪೊಸ್ತಲ ಪೌಲನು ಹೇಳಿದ್ದು: “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಇರುವ ದೃಶ್ಯವಾದ ಮತ್ತು ಅದೃಶ್ಯವಾದ ಇತರ ಎಲ್ಲವುಗಳು, ಅವು ಸಿಂಹಾಸನಗಳಾಗಿರಲಿ ಪ್ರಭುತ್ವಗಳಾಗಿರಲಿ ಸರಕಾರಗಳಾಗಿರಲಿ ಅಧಿಕಾರಗಳಾಗಿರಲಿ ಎಲ್ಲವೂ ಅವನ ಮೂಲಕವೇ ಸೃಷ್ಟಿಸಲ್ಪಟ್ಟವು; ಅವನ ಮೂಲಕವೂ ಅವನಿಗಾಗಿಯೂ ಸೃಷ್ಟಿಸಲ್ಪಟ್ಟವು.” (ಕೊಲೊ. 1:15-17) ಹೀಗೆ ಯೆಹೋವನು ತನ್ನ ಮಗನಿಗೆ ಒಂದು ಪ್ರಾಮುಖ್ಯ ಕೆಲಸವನ್ನು ಕೊಟ್ಟದ್ದು ಮಾತ್ರವಲ್ಲ ಅದರ ಕುರಿತು ಇತರರಿಗೂ ಪ್ರಕಟಪಡಿಸಿ ಗೌರವಿಸಿದನು.

3. ಯೆಹೋವನು ಆದಾಮನಿಗೆ ಯಾವ ಕೆಲಸ ಮಾಡಲು ಆಮಂತ್ರಿಸಿದನು? ಏಕೆ?

3 ಯೆಹೋವನು ತನ್ನೊಂದಿಗೆ ಕೆಲಸಮಾಡಲು ಮಾನವರಿಗೆ ಕೂಡ ಆಮಂತ್ರಣ ಕೊಟ್ಟನು. ಉದಾಹರಣೆಗಾಗಿ ಪ್ರಾಣಿಗಳಿಗೆ ಹೆಸರಿಡುವ ಕೆಲಸವನ್ನು ಆದಾಮನಿಗೆ ಕೊಟ್ಟನು. (ಆದಿ. 2:19, 20) ಈ ಕೆಲಸವನ್ನು ಮಾಡುತ್ತಿರುವಾಗ ಆದಾಮನಿಗಾದ ಆನಂದವನ್ನು ಊಹಿಸಿಕೊಳ್ಳಿ. ಒಂದೊಂದು ಪ್ರಾಣಿ ಹೇಗೆ ಕಾಣುತ್ತದೆ, ಅದರ ಚಲನವಲನ ಹೇಗಿದೆ, ಎಲ್ಲವನ್ನು ಜಾಗ್ರತೆಯಿಂದ ಗಮನಿಸಿ ಅದಕ್ಕೆ ತಕ್ಕಂತ ಹೆಸರನ್ನು ಕೊಟ್ಟನು. ಎಲ್ಲ ಪ್ರಾಣಿಗಳನ್ನು ಸೃಷ್ಟಿಸಿದ್ದು ಯೆಹೋವನೇ ಆಗಿದ್ದರಿಂದ ಆತನೇ ಅವುಗಳಿಗೆ ಹೆಸರನ್ನಿಡುವುದು ಕಷ್ಟವಿರಲಿಲ್ಲ. ಆದರೂ ಆದಾಮನನ್ನು ಯೆಹೋವನು ತುಂಬ ಪ್ರೀತಿಸಿದ್ದರಿಂದ ಆ ಕೆಲಸವನ್ನು ಅವನಿಗೇ ಬಿಟ್ಟುಕೊಟ್ಟನು. ಅಲ್ಲದೆ ಇಡೀ ಭೂಮಿಯನ್ನು ಪರದೈಸಾಗಿ ಮಾಡುವ ಕೆಲಸವನ್ನೂ ಕೊಟ್ಟನು. (ಆದಿ. 1:27, 28) ಆದರೆ ಆದಾಮನು ನಂತರ ದೇವರೊಂದಿಗೆ ಕೆಲಸಮಾಡುವುದನ್ನು ಬಿಟ್ಟುಬಿಟ್ಟನು. ಫಲಿತಾಂಶವಾಗಿ ಅವನೂ ಅವನ ಸಂತತಿಯವರೂ ತುಂಬ ಕಷ್ಟನೋವುಗಳಿಗೆ ಗುರಿಯಾದರು.—ಆದಿ. 3:17-19, 23.

4. ದೇವರ ಚಿತ್ತವನ್ನು ನೆರವೇರಿಸಲಿಕ್ಕಾಗಿ ಆತನೊಂದಿಗೆ ಇತರರು ಹೇಗೆ ಕೆಲಸಮಾಡಿದರು?

4 ಸಮಯಾನಂತರ ಯೆಹೋವನು ತನ್ನೊಂದಿಗೆ ಕೆಲಸ ಮಾಡುವಂತೆ ಬೇರೆಯವರನ್ನು ಆಮಂತ್ರಿಸಿದನು. ನೋಹ ನಾವೆಯನ್ನು ಕಟ್ಟಿದನು. ಇದರಿಂದ ಅವನೂ ಅವನ ಕುಟುಂಬವೂ ಜಲಪ್ರಳಯದಿಂದ ಪಾರಾಯಿತು. ಮೋಶೆಯು ಇಸ್ರಾಯೇಲ್‌ ಜನಾಂಗವನ್ನು ಐಗುಪ್ತದಿಂದ ಬಿಡುಗಡೆಮಾಡಿದನು. ಯೆಹೋಶುವನು ಇಸ್ರಾಯೇಲ್ಯರನ್ನು ವಾಗ್ದತ್ತ ದೇಶಕ್ಕೆ ನಡೆಸಿದನು. ಸೊಲೊಮೋನನು ಯೆರೂಸಲೇಮಿನಲ್ಲಿ ದೇವಾಲಯವನ್ನು ಕಟ್ಟಿದನು. ಮರಿಯಳು ಯೇಸುವಿನ ತಾಯಿಯಾದಳು. ಈ ಎಲ್ಲ ನಂಬಿಗಸ್ತರು ಮತ್ತು ಇನ್ನೂ ಅನೇಕರು ಯೆಹೋವನ ಚಿತ್ತವನ್ನು ನೆರವೇರಿಸುವುದರಲ್ಲಿ ಆತನೊಂದಿಗೆ ಕೆಲಸಮಾಡಿದರು.

5. (ಎ) ನಮಗಿಂದು ಯಾವ ಕೆಲಸವನ್ನು ಯೆಹೋವನು ಕೊಟ್ಟಿದ್ದಾನೆ? (ಬಿ) ಈ ಕೆಲಸವನ್ನು ನಮ್ಮಿಂದ ಮಾಡಿಸುವ ಅಗತ್ಯ ಯೆಹೋವನಿಗೆ ಇದೆಯಾ? (ಲೇಖನದ ಆರಂಭದ ಚಿತ್ರ ನೋಡಿ.)

5 ಈ ಸೌಭಾಗ್ಯವನ್ನು ನಮಗೂ ಕೊಟ್ಟಿದ್ದಾನಾ? ಹೌದು. ದೇವರ ರಾಜ್ಯವನ್ನು ಬೆಂಬಲಿಸಲು ನಮಗೆ ಆಮಂತ್ರಣ ಕೊಟ್ಟಿದ್ದಾನೆ. ದೇವರ ಸೇವೆ ಮಾಡುವ ಅನೇಕ ಅವಕಾಶಗಳು ನಮ್ಮ ಮುಂದಿವೆ. ನಮ್ಮಲ್ಲಿ ಎಲ್ಲರೂ ಒಂದೇ ರೀತಿಯಲ್ಲಿ ಆತನ ಸೇವೆಮಾಡಲು ಶಕ್ತರಲ್ಲದಿದ್ದರೂ ದೇವರ ರಾಜ್ಯದ ಸುವಾರ್ತೆಯನ್ನು ನಾವೆಲ್ಲರೂ ಸಾರಬಲ್ಲೆವು. ಈ ಕೆಲಸವನ್ನು ಯೆಹೋವನೇ ಮಾಡಬಹುದಿತ್ತು. ಭೂಮಿಯಲ್ಲಿರುವ ಜನರೊಂದಿಗೆ ನೇರವಾಗಿ ಆತನೇ ಸ್ವರ್ಗದಿಂದ ಮಾತಾಡಬಹುದಿತ್ತು. ಕಲ್ಲುಗಳು ಕೂಡ ದೇವರ ರಾಜ್ಯದ ರಾಜನ ಬಗ್ಗೆ ತಿಳಿಸುವಂತೆ ಯೆಹೋವನು ಮಾಡಶಕ್ತನು ಎಂದು ಯೇಸು ಹೇಳಿದನು. (ಲೂಕ 19:37-40) ಆದರೆ ಯೆಹೋವನು ಆತನ “ಜೊತೆ ಕೆಲಸಗಾರರಾಗಿ” ಸೇವೆಮಾಡುವ ಅವಕಾಶವನ್ನು ನಮಗೆ ಕೊಟ್ಟಿದ್ದಾನೆ. (1 ಕೊರಿಂ. 3:9) ಅಪೊಸ್ತಲ ಪೌಲ ಹೀಗೆ ಬರೆದನು: “ದೇವರೊಂದಿಗೆ ಕೆಲಸಮಾಡುವವರಾದ ನಾವು ಸಹ ನಿಮ್ಮನ್ನು, ನೀವು ಆತನ ಅಪಾತ್ರ ದಯೆಯನ್ನು ಪಡೆದುಕೊಂಡು ಅದರ ಉದ್ದೇಶವನ್ನು ಕಳೆದುಕೊಳ್ಳಬಾರದೆಂದು ಬೇಡಿಕೊಳ್ಳುತ್ತೇವೆ.” (2 ಕೊರಿಂ. 6:1) ದೇವರೊಂದಿಗೆ ಕೆಲಸಮಾಡುವುದು ಒಂದು ದೊಡ್ಡ ಗೌರವ. ಇದರಿಂದ ನಮಗೆ ತುಂಬ ಆನಂದ ಸಿಗುತ್ತದೆ. ಏಕೆಂಬುದಕ್ಕೆ ಕೆಲವು ಕಾರಣಗಳನ್ನು ಚರ್ಚಿಸೋಣ.

ದೇವರೊಂದಿಗೆ ಕೆಲಸ ಮಾಡುವುದು ಆನಂದದಾಯಕ

6. ದೇವರ ಜ್ಯೇಷ್ಠ ಪುತ್ರನು ತಂದೆಯೊಂದಿಗೆ ಕೆಲಸ ಮಾಡಿದ್ದರ ಬಗ್ಗೆ ತನ್ನ ಅನಿಸಿಕೆಯನ್ನು ವರ್ಣಿಸಿದ್ದು ಹೇಗೆ?

6 ಯೆಹೋವನೊಂದಿಗೆ ಕೆಲಸ ಮಾಡುವುದು ಆತನ ಸೇವಕರಿಗೆ ಯಾವಾಗಲೂ ಸಂತೋಷ ಕೊಟ್ಟಿದೆ. ಭೂಮಿಗೆ ಬರುವ ಮುಂಚೆ ದೇವರ ಜ್ಯೇಷ್ಠ ಪುತ್ರ ಹೀಗಂದನು: “ಯೆಹೋವನು ತನ್ನ ಸೃಷ್ಟಿಕ್ರಮದಲ್ಲಿ ಮೊದಲು ನನ್ನನ್ನು ನಿರ್ಮಿಸಿದನು; . . . ನಾನು ಆತನ ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ [ಇದ್ದೆನು.]” (ಜ್ಞಾನೋ. 8:22, 30) ಯೇಸು ತನ್ನ ತಂದೆಯಾದ ಯೆಹೋವನೊಂದಿಗೆ ಕೆಲಸಮಾಡಿದಾಗ ಅನೇಕಾನೇಕ ವಿಷಯಗಳನ್ನು ಮಾಡಿ ಪೂರೈಸಿದನು ಮತ್ತು ಯೆಹೋವನು ತನ್ನನ್ನು ನಿಜವಾಗಿಯೂ ಪ್ರೀತಿಸುತ್ತಾನೆಂದು ತಿಳಿದುಕೊಂಡನು. ಇದು ಅವನಿಗೆ ಸಂತೋಷವನ್ನು ಕೊಟ್ಟಿತು. ನಮಗೂ ಆ ಸಂತೋಷ ಸಿಗುತ್ತದಾ?

ಬೇರೆಯವರಿಗೆ ಸತ್ಯವನ್ನು ಕಲಿಸುವುದಕ್ಕಿಂತ ಹೆಚ್ಚು ಸಂತೃಪ್ತಿ ತರುವ ಕೆಲಸ ಬೇರೊಂದಿಲ್ಲ! (ಪ್ಯಾರ 7 ನೋಡಿ)

7. ಸಾರುವ ಕೆಲಸವು ನಮಗೆ ಸಂತೋಷವನ್ನು ತರುತ್ತದೆ ಏಕೆ?

7 ನಾವು ತೆಗೆದುಕೊಳ್ಳುವಾಗಲೂ ಕೊಡುವಾಗಲೂ ಸಂತೋಷ ಸಿಗುತ್ತದೆಂದು ಯೇಸು ಹೇಳಿದನು. (ಅ. ಕಾ. 20:35) ಸತ್ಯವನ್ನು ನಾವು ಪಡೆದುಕೊಂಡಾಗ ನಮಗೆ ಸಂತೋಷ ಸಿಕ್ಕಿತು. ಆದರೆ ಆ ಸತ್ಯವನ್ನು ಇತರರಿಗೆ ಕೊಡುವಾಗ ಕೂಡ ನಮಗೆ ಆನಂದವಾಗುತ್ತದೆ. ಏಕೆ? ಏಕೆಂದರೆ ಅವರು ಬೈಬಲ್‌ ಬೋಧನೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡಾಗ, ದೇವರೊಂದಿಗೆ ಸಂಬಂಧ ಬೆಳೆಸಿಕೊಳ್ಳುವಾಗ ಅವರಿಗಾಗುವ ಸಂತೋಷ ನೋಡಿ ನಮಗೂ ಸಂತೋಷವಾಗುತ್ತದೆ. ಅವರು ತಮ್ಮ ಯೋಚನೆಯಲ್ಲಿ, ಜೀವನರೀತಿಯಲ್ಲಿ ಬದಲಾವಣೆ ಮಾಡಿಕೊಂಡಾಗಲೂ ನಮಗೆ ಆನಂದವಾಗುತ್ತದೆ. ಸಾರುವ ಕೆಲಸವು ನಾವು ಮಾಡುತ್ತಿರುವ ಅತಿ ಪ್ರಾಮುಖ್ಯ ಹಾಗೂ ಸಂತೃಪ್ತಿಕರ ಕೆಲಸ. ಇದರ ಮೂಲಕ ಅನೇಕರು ದೇವರ ಸ್ನೇಹಿತರಾಗಲು ಮತ್ತು ನಿತ್ಯಜೀವ ಪಡೆಯಲು ಸಾಧ್ಯವಾಗುತ್ತದೆ.—2 ಕೊರಿಂ. 5:20.

8. ಯೆಹೋವನೊಂದಿಗೆ ಕೆಲಸ ಮಾಡುವುದರಿಂದ ಸಿಗುವ ಸಂತೋಷದ ಕುರಿತು ಕೆಲವರು ಏನಂದಿದ್ದಾರೆ?

8 ದೇವರ ಕುರಿತು ಕಲಿಯುವಂತೆ ನಾವು ಇತರರಿಗೆ ಸಹಾಯ ಮಾಡುವಾಗ ಯೆಹೋವನನ್ನು ಮೆಚ್ಚಿಸುತ್ತೇವೆ ಮತ್ತು ಸೇವೆಗಾಗಿ ನಾವು ಮಾಡುವ ಪ್ರಯತ್ನಗಳನ್ನು ಆತನು ಅಮೂಲ್ಯವಾಗಿ ಕಾಣುತ್ತಾನೆ. ಇದು ಕೂಡ ನಮಗೆ ಸಂತೋಷ ತರುತ್ತದೆ. (1 ಕೊರಿಂಥ 15:58 ಓದಿ.) ಇಟಲಿಯಲ್ಲಿ ವಾಸಿಸುವ ಮಾರ್ಕೋ ಎಂಬ ಸಹೋದರ ಹೇಳುವುದು: “ನಾನು ನನ್ನಿಂದಾದಷ್ಟು ಪೂರ್ಣವಾಗಿ ಯೆಹೋವನ ಸೇವೆ ಮಾಡುತ್ತಿದ್ದೇನೆ. ಇದರಿಂದ ಸಿಗುವ ಸಂತೋಷವನ್ನು ವರ್ಣಿಸಲು ಪದಗಳೇ ಇಲ್ಲ. ಯಾಕೆಂದರೆ ಯೆಹೋವನು ಮನುಷ್ಯರಂತೆ ನಮ್ಮ ಕೆಲಸವನ್ನು ಬೇಗನೆ ಮರೆತುಬಿಡುವ ದೇವರಲ್ಲ.” ಆ ದೇಶದಲ್ಲೇ ಸೇವೆಮಾಡುವ ಫ್ರಾಂಕೋ ಹೇಳುವುದು: “ತನ್ನ ವಾಕ್ಯದ ಮತ್ತು ಆಧ್ಯಾತ್ಮಿಕ ಏರ್ಪಾಡುಗಳ ಮೂಲಕ ಯೆಹೋವನು ನಮಗೆ ಪ್ರತಿ ದಿನವೂ ‘ನಾನು ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ಹೇಳುತ್ತಾನೆ. ನಾವು ಮಾಡುವ ಎಲ್ಲವೂ ಏನೂ ಇಲ್ಲವೆಂಬಂತೆ ನಮಗೆ ಕಂಡರೂ ಆತನಿಗದು ಪ್ರಾಮುಖ್ಯವಾಗಿದೆ. ಹಾಗಾಗಿ ದೇವರೊಂದಿಗೆ ಕೆಲಸಮಾಡುವುದು ನನಗೆ ಸಂತೋಷವನ್ನು, ಜೀವನಕ್ಕೆ ಅರ್ಥವನ್ನು ಕೊಡುತ್ತದೆ.”

ದೇವರಿಗೆ, ಸಹೋದರರಿಗೆ ಹತ್ತಿರವಾಗುತ್ತೇವೆ

9. ಯೆಹೋವ ಮತ್ತು ಯೇಸುವಿನ ಮಧ್ಯೆ ಯಾವ ರೀತಿಯ ಸಂಬಂಧವಿತ್ತು? ಏಕೆ?

9 ನಾವು ಪ್ರೀತಿಸುವ ವ್ಯಕ್ತಿಯ ಜೊತೆ ಕೆಲಸ ಮಾಡುವಾಗ ಅವರಿಗೆ ತುಂಬ ಹತ್ತಿರವಾಗುತ್ತೇವೆ. ಅವರ ಗುಣ ಸ್ವಭಾವಗಳ ಕುರಿತು ಚೆನ್ನಾಗಿ ತಿಳಿದುಕೊಳ್ಳುತ್ತೇವೆ. ಅವರ ಗುರಿಗಳೇನು, ಅವನ್ನು ಮುಟ್ಟಲು ಅವರು ಹೇಗೆ ಪ್ರಯತ್ನಿಸುತ್ತಾರೆ ಎಂದು ನಮಗೆ ಗೊತ್ತಾಗುತ್ತದೆ. ಯೇಸು ಯೆಹೋವನ ಜೊತೆಗೆ ಬಹುಶಃ ಕೋಟ್ಯಾಂತರ ವರ್ಷ ಕೆಲಸಮಾಡಿದನು. ಅವರಿಬ್ಬರ ಮಧ್ಯೆ ಪ್ರೀತಿ ವಾತ್ಸಲ್ಯ ಎಷ್ಟು ಬಲವಾಯಿತೆಂದರೆ ಯಾವುದೂ ಅವರ ಸಂಬಂಧವನ್ನು ಮುರಿಯಲು ಸಾಧ್ಯವಿರಲಿಲ್ಲ. “ನಾನೂ ತಂದೆಯೂ ಒಂದಾಗಿದ್ದೇವೆ” ಎಂದು ಯೇಸು ಹೇಳುವಷ್ಟರ ಮಟ್ಟಿಗೆ ಅವರು ಆಪ್ತರಾಗಿದ್ದರು. (ಯೋಹಾ. 10:30) ಅವರು ನಿಜವಾಗಿ ಐಕ್ಯವಾಗಿದ್ದರು ಮತ್ತು ಜೊತೆಯಾಗಿ ಕೆಲಸಮಾಡಿದಾಗ ಒಬ್ಬರಿಗೊಬ್ಬರು ಪೂರ್ತಿ ಸಹಕಾರ ಕೊಟ್ಟರು.

10. ಸಾರುವ ಕೆಲಸದಿಂದ ನಾವು ದೇವರಿಗೆ ಮತ್ತು ಸಹೋದರರಿಗೆ ಹೇಗೆ ಹತ್ತಿರವಾಗುತ್ತೇವೆ?

10 ತನ್ನ ಶಿಷ್ಯರಲ್ಲಿ ಕೂಡ ಅದೇ ರೀತಿಯ ಐಕ್ಯವಿರುವಂತೆ ಯೇಸು ಯೆಹೋವನಲ್ಲಿ ಬೇಡಿಕೊಂಡನು. “ನಾವು ಒಂದಾಗಿರುವ ಪ್ರಕಾರ ಇವರೂ ಒಂದಾಗಿರುವಂತಾಗುವುದು” ಎಂದವನು ಹೇಳಿದನು. (ಯೋಹಾ. 17:11) ನಾವು ದೇವರ ಮಟ್ಟಗಳಿಗೆ ಅನುಸಾರ ಜೀವಿಸಿ ಸಾರುವ ಕಾರ್ಯದಲ್ಲಿ ಭಾಗವಹಿಸುತ್ತಾ ಇರುವಾಗ ದೇವರ ಅದ್ಭುತ ಗುಣಗಳನ್ನು ಚೆನ್ನಾಗಿ ತಿಳಿದುಕೊಳ್ಳುತ್ತೇವೆ. ಆತನಲ್ಲಿ ಭರವಸೆಯಿಡಲು ಕಲಿಯುತ್ತೇವೆ. ಆತನ ಮಾರ್ಗದಲ್ಲಿ ನಡೆಯುವುದು ಏಕೆ ಜಾಣತನವೆಂದು ತಿಳಿಯುತ್ತೇವೆ. ಹೀಗೆ ನಾವು ದೇವರಿಗೆ ಆಪ್ತರಾಗುತ್ತೇವೆ. ಆಗ ಆತನೂ ನಮಗೆ ಆಪ್ತನಾಗುತ್ತಾನೆ. (ಯಾಕೋಬ 4:8 ಓದಿ.) ಸಾರುವ ಕೆಲಸದಿಂದ ನಾವು ನಮ್ಮ ಸಹೋದರ ಸಹೋದರಿಯರಿಗೆ ಸಹ ಆಪ್ತರಾಗುತ್ತೇವೆ. ಏಕೆಂದರೆ ನಮ್ಮ ಸಂತೋಷಕ್ಕಿರುವ ಕಾರಣಗಳು, ಸಮಸ್ಯೆಗಳು ಒಂದೇ ರೀತಿಯದ್ದಾಗಿವೆ. ನಮಗಿರುವ ಗುರಿಗಳೂ ಒಂದೇ ರೀತಿಯದ್ದು. ನಾವು ಒಟ್ಟಾಗಿ ಸೇವೆ ಮಾಡಿ, ಒಟ್ಟಾಗಿ ಸಂತೋಷಪಟ್ಟು, ಒಟ್ಟಾಗಿ ತಾಳಿಕೊಳ್ಳುವವರು. ಬ್ರಿಟನ್‌ನಲ್ಲಿರುವ ಒಕ್ಟೇವಿಯ ಹೇಳುವುದು: “ಯೆಹೋವನ ಜೊತೆ ಕೆಲಸ ಮಾಡುವುದರಿಂದ ನಾನು ಇತರರಿಗೆ ಇನ್ನಷ್ಟು ಹತ್ತಿರವಾಗಿದ್ದೇನೆ.” ಈ ಸ್ನೇಹಕ್ಕೆ ಕಾರಣ ಅವಳ ಮತ್ತು ಅವಳ ಸ್ನೇಹಿತರಿಗಿದ್ದ ಒಂದೇ ರೀತಿಯ ಜೀವನರೀತಿ ಮತ್ತು ಗುರಿಗಳು ಎಂದು ಅವಳು ವಿವರಿಸುತ್ತಾಳೆ. ನಮಗೆ ಕೂಡ ಅದೇ ರೀತಿ ಅನಿಸುತ್ತದೆ ನಿಶ್ಚಯ. ಯೆಹೋವನನ್ನು ಮೆಚ್ಚಿಸುವುದಕ್ಕೆ ನಮ್ಮ ಸಹೋದರರು ಎಷ್ಟು ಶ್ರಮಪಡುತ್ತಾರೆಂದು ನೋಡುವಾಗ ನಾವೂ ಅವರಿಗೆ ಹತ್ತಿರವಾಗುತ್ತೇವೆ.

11. ಹೊಸ ಲೋಕದಲ್ಲಿ ನಾವು ಯೆಹೋವನಿಗೂ ನಮ್ಮ ಸಹೋದರರಿಗೂ ಹೇಗೆ ಇನ್ನೂ ಹೆಚ್ಚು ಹತ್ತಿರವಾಗುವೆವು?

11 ದೇವರ ಮೇಲೆ ಮತ್ತು ಸಹೋದರರ ಮೇಲೆ ನಮಗೆ ಪ್ರೀತಿಯಿದೆ. ಹೊಸ ಲೋಕದಲ್ಲಿ ಅದು ಇನ್ನೂ ಹೆಚ್ಚು ಬಲಗೊಳ್ಳುವುದು. ಭವಿಷ್ಯದಲ್ಲಿ ನಾವು ಯಾವೆಲ್ಲ ಆಶ್ಚರ್ಯಕರ ಕೆಲಸಗಳನ್ನು ಮಾಡಲಿದ್ದೇವೆಂದು ಯೋಚಿಸಿ. ಪುನರುತ್ಥಾನವಾಗಿ ಬರುವವರನ್ನು ಸ್ವಾಗತಿಸಲಿದ್ದೇವೆ, ಯೆಹೋವನ ಕುರಿತು ಅವರಿಗೆ ಕಲಿಸಲಿದ್ದೇವೆ. ಈ ಭೂಮಿಯನ್ನು ಪರದೈಸಾಗಿ ಮಾಡುವುದರಲ್ಲಿಯೂ ಕೆಲಸಮಾಡುವೆವು. ಇವೆಲ್ಲವನ್ನೂ ಜೊತೆಗೂಡಿ ಮಾಡುವುದು ಮತ್ತು ಕ್ರಿಸ್ತನ ಆಳ್ವಿಕೆಯ ಕೆಳಗೆ ಜೊತೆಜೊತೆಯಾಗಿ ಪರಿಪೂರ್ಣತೆಗೆ ಏರುವುದು ನಮಗೆ ತುಂಬ ಆನಂದವನ್ನು ತರಲಿದೆ. ಮಾನವರೆಲ್ಲರೂ ಒಬ್ಬರಿಗೊಬ್ಬರು ಇನ್ನಷ್ಟು ಹತ್ತಿರವಾಗುವರು. ಯೆಹೋವನಿಗೂ ಹೆಚ್ಚು ಆಪ್ತರಾಗುವರು. ಯಾಕೆಂದರೆ ಆತನು ‘ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತಾನೆ.’—ಕೀರ್ತ. 145:16.

ನಮಗೆ ಸಂರಕ್ಷಣೆಯಾಗಿದೆ

12. ಸಾರುವ ಕೆಲಸವು ನಮಗೆ ಹೇಗೆ ಸಂರಕ್ಷಣೆಯಾಗಿದೆ?

12 ಯೆಹೋವನೊಂದಿಗೆ ನಮಗಿರುವ ಸಂಬಂಧವನ್ನು ನಾವು ಕಾಪಾಡಿಕೊಳ್ಳಬೇಕು. ಸೈತಾನನ ಲೋಕದಲ್ಲಿ ಜೀವಿಸುತ್ತಿರುವ ಕಾರಣ ಮತ್ತು ಅಪರಿಪೂರ್ಣರಾಗಿರುವ ಕಾರಣ ನಾವು ಲೋಕದವರಂತೆ ಯೋಚಿಸಲು ಮತ್ತು ನಡೆಯಲು ಆರಂಭಿಸುವುದು ತುಂಬ ಸುಲಭ. ಆದರೆ ನಾವು ಲೋಕದ ಮನೋಭಾವವನ್ನು ಎದುರಿಸಬೇಕು. ಇದು ಪ್ರವಾಹಕ್ಕೆ ಎದುರಾಗಿ ಈಜುವುದಕ್ಕೆ ಸಮಾನವಾಗಿದೆ. ಇದು ಸುಲಭವಲ್ಲ. ನಮ್ಮೆಲ್ಲ ಶಕ್ತಿಯನ್ನು ಬಳಸಿ ನಾವು ಹೋಗಬೇಕಾದ ದಿಕ್ಕಿಗೆ ಈಜಬೇಕು. ಅದೇ ರೀತಿ ಸೈತಾನನ ಲೋಕ ಹೋಗುತ್ತಿರುವ ದಿಕ್ಕಿನಲ್ಲಿ ಹೋಗದಿರಲು ನಾವು ಶ್ರಮಿಸಬೇಕು. ಸಾರುವ ಕೆಲಸವು ಸೈತಾನನ ಲೋಕದ ವಿರುದ್ಧ ಹೇಗೆ ಸಂರಕ್ಷಣೆಯಾಗಿದೆ? ನಾವು ಯೆಹೋವನ ಮತ್ತು ಬೈಬಲಿನ ಕುರಿತು ಮಾತಾಡುವಾಗ ಯಾವುದು ಪ್ರಾಮುಖ್ಯವೋ ಯಾವುದು ಒಳ್ಳೆಯದೋ ಆ ವಿಷಯಗಳಿಗೆ ಗಮನ ಕೊಡುತ್ತೇವೆ, ನಮ್ಮ ನಂಬಿಕೆಯನ್ನು ದುರ್ಬಲಗೊಳಿಸುವ ವಿಷಯಗಳಿಗಲ್ಲ. (ಫಿಲಿ. 4:8) ಸಾರುವ ಕೆಲಸವು ನಮ್ಮ ನಂಬಿಕೆಯನ್ನು ಬಲಗೊಳಿಸುತ್ತದೆ ಏಕೆಂದರೆ ಅದು ನಮಗೆ ದೇವರ ವಾಗ್ದಾನಗಳನ್ನೂ ಆತನ ಪ್ರೀತಿಯ ಮಟ್ಟಗಳನ್ನೂ ನೆನಪಿಗೆ ತರುತ್ತದೆ. ಸೈತಾನ ಮತ್ತು ಅವನ ಲೋಕದ ವಿರುದ್ಧ ನಮ್ಮನ್ನು ಸಂರಕ್ಷಿಸಿಕೊಳ್ಳಲು ಬೇಕಾದ ಗುಣಗಳನ್ನು ಬೆಳೆಸುವಂತೆ ಸಹ ಸಾರುವ ಕೆಲಸ ಸಹಾಯ ಮಾಡುತ್ತದೆ.—ಎಫೆಸ 6:14-17 ಓದಿ.

13. ಸಾರುವ ಕೆಲಸದ ಕುರಿತು ಆಸ್ಟ್ರೇಲಿಯದ ಒಬ್ಬ ಸಹೋದರನ ಅನಿಸಿಕೆಯೇನು?

13 ಸಾರುವುದರಲ್ಲಿ, ಅಧ್ಯಯನ ಮಾಡುವುದರಲ್ಲಿ, ಸಭೆಯವರಿಗೆ ನೆರವಾಗುವುದರಲ್ಲಿ ಕಾರ್ಯಮಗ್ನರಾಗಿರುವುದು ಸಹ ನಮಗೆ ಸಂರಕ್ಷಣೆ. ಯಾಕೆಂದರೆ ಆಗ ನಮಗೆ ನಮ್ಮ ಕಷ್ಟಗಳ ಬಗ್ಗೆ ಅತಿಯಾಗಿ ಯೋಚಿಸಲು ಸಮಯವೇ ಇರುವುದಿಲ್ಲ. ಆಸ್ಟ್ರೇಲಿಯದ ಜೊಯೆಲ್‌ ಎಂಬ ಸಹೋದರ ಹೇಳುವುದು: “ಜನರು ಅನುಭವಿಸುತ್ತಿರುವ ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಸಾರುವ ಕೆಲಸ ನನಗೆ ನೆರವಾಗುತ್ತದೆ. ಅವರ ಸಮಸ್ಯೆಗಳನ್ನು ನೋಡುವಾಗ ನಾನು ಬೈಬಲ್‌ ತತ್ವಗಳನ್ನು ಅನ್ವಯಿಸಿದ್ದರಿಂದ ಎಷ್ಟು ಪ್ರಯೋಜನ ಪಡೆದಿದ್ದೇನೆಂದು ನೆನಪಾಗುತ್ತದೆ. ದೀನನಾಗಿ ಉಳಿಯಲು ಅದು ಸಹಾಯ ಮಾಡಿದೆ. ಯೆಹೋವನ ಮೇಲೆ, ನನ್ನ ಸಹೋದರ ಸಹೋದರಿಯರ ಮೇಲೆ ಭರವಸೆ ಇಡಲು ಅವಕಾಶ ಕೊಟ್ಟಿದೆ.”

14. ನಾವು ಸಾರುವ ಕೆಲಸವನ್ನು ನಿಲ್ಲಿಸದೆ ಮುಂದುವರಿಸುತ್ತಿರುವುದು ದೇವರಾತ್ಮವು ನಮ್ಮೊಂದಿಗಿದೆ ಎಂದು ಹೇಗೆ ತೋರಿಸುತ್ತದೆ?

14 ದೇವರಾತ್ಮವು ನಮ್ಮೊಂದಿಗಿದೆ ಎಂಬ ಭರವಸೆಯನ್ನು ಸಹ ಸಾರುವ ಕೆಲಸ ಹೆಚ್ಚಿಸುತ್ತದೆ. ದೃಷ್ಟಾಂತಕ್ಕಾಗಿ, ನಿಮ್ಮ ಸಮಾಜದಲ್ಲಿರುವ ಜನರಿಗೆ ಬ್ರೆಡ್‌ ಸಪ್ಲೈ ಮಾಡುವ ಕೆಲಸ ನಿಮ್ಮದು ಎಂದು ನೆನಸಿ. ಈ ಕೆಲಸಕ್ಕಾಗಿ ನಿಮಗೆ ಸಂಬಳ ಸಿಗುವುದಿಲ್ಲ. ನಿಮ್ಮ ಎಲ್ಲ ಖರ್ಚನ್ನು ನೀವೇ ನೋಡಿಕೊಳ್ಳಬೇಕು. ಅಲ್ಲದೆ ಹೆಚ್ಚಿನ ಜನರಿಗೆ ಬ್ರೆಡ್‌ ಇಷ್ಟವಿಲ್ಲ. ಅದನ್ನು ತಂದದ್ದಕ್ಕಾಗಿ ಕೆಲವರು ನಿಮ್ಮನ್ನು ದ್ವೇಷಿಸುತ್ತಾರೆ ಕೂಡ. ಇಂಥ ಕೆಲಸವನ್ನು ಎಷ್ಟು ಸಮಯದ ತನಕ ಮಾಡುತ್ತಾ ಇರುವಿರಿ? ಬೇಗನೆ ನಿಮಗೆ ನಿರಾಶೆಯಾಗಬಹುದು ಮತ್ತು ಕೆಲಸ ಬಿಟ್ಟುಬಿಡಲೂ ಬಹುದು. ಹಾಗೆಯೇ ಸಾರುವ ಕೆಲಸಕ್ಕೆ ಸಮಯ, ಹಣ ನಾವೇ ಖರ್ಚುಮಾಡುತ್ತೇವೆ. ಜನರು ನಮ್ಮ ಮೇಲೆ ಸಿಟ್ಟಾಗುತ್ತಾರೆ, ಗೇಲಿಮಾಡುತ್ತಾರೆ. ಆದರೂ ವರ್ಷಾನುವರ್ಷ ನಮ್ಮಲ್ಲಿ ಹೆಚ್ಚಿನವರು ಈ ಕೆಲಸವನ್ನು ಮುಂದುವರಿಸುತ್ತಾ ಇದ್ದೇವೆ. ದೇವರಾತ್ಮವು ನಮಗೆ ಸಹಾಯ ಮಾಡುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ.

ಯೆಹೋವನಿಗೂ ಇತರರಿಗೂ ಪ್ರೀತಿ ತೋರಿಸುತ್ತೇವೆ

15. ಸಾರುವ ಕೆಲಸಕ್ಕೂ ಮಾನವರಿಗಾಗಿ ದೇವರಿಗಿರುವ ಉದ್ದೇಶಕ್ಕೂ ಏನು ಸಂಬಂಧ?

15 ಮಾನವರಿಗಾಗಿ ಯೆಹೋವನಿಗಿರುವ ಉದ್ದೇಶಕ್ಕೂ ಸಾರುವ ಕೆಲಸಕ್ಕೂ ಏನು ಸಂಬಂಧ? ಮನುಷ್ಯರು ಸದಾಕಾಲ ಜೀವಿಸಬೇಕೆನ್ನುವುದೇ ದೇವರ ಉದ್ದೇಶವಾಗಿತ್ತು. ಆದಾಮನು ಪಾಪಮಾಡಿದಾಗಲೂ ಆ ಉದ್ದೇಶ ಬದಲಾಗಲಿಲ್ಲ. (ಯೆಶಾ. 55:11) ನಾವು ಪಾಪಮರಣದಿಂದ ಬಿಡುಗಡೆ ಹೊಂದಲು ಯೆಹೋವನು ಒಂದು ಏರ್ಪಾಡನ್ನು ಮಾಡಿದನು. ಆ ಏರ್ಪಾಡು ಏನು? ಯೇಸು ಭೂಮಿಗೆ ಬಂದು ತನ್ನ ಜೀವವನ್ನು ನಮಗಾಗಿ ಯಜ್ಞವಾಗಿ ಕೊಟ್ಟದ್ದೇ. ಅದರಿಂದ ಮಾನವರು ಪ್ರಯೋಜನ ಪಡೆಯಬೇಕಾದರೆ ಅವರು ದೇವರಿಗೆ ವಿಧೇಯರಾಗಬೇಕು. ಹಾಗಾಗಿ ದೇವರು ತಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬುದನ್ನು ಯೇಸು ಜನರಿಗೆ ಕಲಿಸಿದನು. ತನ್ನ ಶಿಷ್ಯರು ಕೂಡ ಅದನ್ನೇ ಮಾಡುವಂತೆ ಆಜ್ಞಾಪಿಸಿದನು. ನಾವು ಜನರಿಗೆ ಸಾರುವಾಗ ಮತ್ತು ದೇವರ ಸ್ನೇಹಿತರಾಗಲು ಅವರಿಗೆ ಸಹಾಯ ಮಾಡುವಾಗ ದೇವರೊಂದಿಗೆ ಕೆಲಸಮಾಡುತ್ತಿದ್ದೇವೆ. ಈ ಮೂಲಕ ಮಾನವರನ್ನು ಪಾಪಮರಣದಿಂದ ರಕ್ಷಿಸಲು ದೇವರು ಪ್ರೀತಿಯಿಂದ ಮಾಡಿದ ಏರ್ಪಾಡಿನಲ್ಲಿ ಜೊತೆಗೂಡುತ್ತೇವೆ.

16. ಸಾರುವ ಕೆಲಸವು ದೇವರ ಅತಿ ದೊಡ್ಡ ಆಜ್ಞೆಗಳಿಗೆ ಹೇಗೆ ಸಂಬಂಧಿಸಿದೆ?

16 ನಿತ್ಯಜೀವ ಪಡೆಯಲು ಜನರಿಗೆ ಸಹಾಯ ಮಾಡುವಾಗ ಅವರ ಮೇಲೆ ಮತ್ತು ಯೆಹೋವನ ಮೇಲೆ ನಮಗೆ ಪ್ರೀತಿಯಿದೆಯೆಂದು ತೋರಿಸುತ್ತೇವೆ. “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು ಎಂಬುದು [ಯೆಹೋವನ] ಚಿತ್ತವಾಗಿದೆ.” (1 ತಿಮೊ. 2:4) ದೇವರ ಅತಿ ದೊಡ್ಡ ಆಜ್ಞೆ ಯಾವುದೆಂದು ಒಬ್ಬ ಫರಿಸಾಯನು ಕೇಳಿದಾಗ ಯೇಸು ಉತ್ತರಿಸಿದ್ದು: “‘ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.’ ಇದೇ ಅತಿ ದೊಡ್ಡದಾದ ಮತ್ತು ಮೊದಲನೆಯ ಆಜ್ಞೆಯಾಗಿದೆ. ಇದರಂತಿರುವ ಎರಡನೆಯ ಆಜ್ಞೆಯು, ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.’” (ಮತ್ತಾ. 22:37-39) ಸುವಾರ್ತೆಯನ್ನು ಸಾರುವಾಗ ನಾವು ಈ ಆಜ್ಞೆಗಳಿಗೆ ವಿಧೇಯರಾಗುತ್ತೇವೆ.—ಅಪೊಸ್ತಲರ ಕಾರ್ಯಗಳು 10:42 ಓದಿ.

17. ಸುವಾರ್ತೆ ಸಾರುವ ಸುಯೋಗದ ಬಗ್ಗೆ ನಿಮ್ಮ ಅನಿಸಿಕೆ ಏನು?

17 ನಾವು ನಿಜಕ್ಕೂ ಆಶೀರ್ವದಿತ ಜನರು! ನಮಗೆ ಸಂತೋಷವನ್ನು ತರುವ ಕೆಲಸವನ್ನು ಯೆಹೋವನು ಕೊಟ್ಟಿದ್ದಾನೆ. ಇದು ನಮ್ಮನ್ನು ಆತನಿಗೆ ಮತ್ತು ಸಹೋದರರಿಗೆ ಹತ್ತಿರ ತರುತ್ತದೆ. ಆತನೊಂದಿಗಿನ ನಮ್ಮ ಸಂಬಂಧವನ್ನು ಸಹ ಕಾಪಾಡುತ್ತದೆ. ದೇವರ ಮೇಲೆ, ಇತರರ ಮೇಲೆ ನಮಗಿರುವ ಪ್ರೀತಿ ತೋರಿಸಲು ಅವಕಾಶ ಕೊಡುತ್ತದೆ. ಲೋಕದ ಸುತ್ತಲು ಯೆಹೋವನಿಗೆ ಲಕ್ಷಾಂತರ ಸೇವಕರಿದ್ದಾರೆ. ಅವರೆಲ್ಲರೂ ತೀರಾ ಬೇರೆ ಬೇರೆಯಾದ ಸನ್ನಿವೇಶಗಳಲ್ಲಿದ್ದಾರೆ. ನಾವು ಯುವಕರಾಗಿರಲಿ ವೃದ್ಧರಾಗಿರಲಿ, ಬಡವರಾಗಿರಲಿ ಶ್ರೀಮಂತರಾಗಿರಲಿ, ಬಲಿಷ್ಠರಾಗಿರಲಿ ಬಲಹೀನರಾಗಿರಲಿ ನಮ್ಮ ನಂಬಿಕೆ ಬಗ್ಗೆ ಇತರರೊಂದಿಗೆ ಮಾತಾಡಲು ನಮ್ಮಿಂದ ಆಗುವುದೆಲ್ಲವನ್ನೂ ಮಾಡುತ್ತೇವೆ. ಫ್ರಾನ್ಸ್‌ನಲ್ಲಿರುವ ಶ್ಯಾಂಟಲ್‌ಳಂತೆ ನಮಗೂ ಅನಿಸುತ್ತದೆ. ಅವಳಂದದ್ದು: “ವಿಶ್ವದಲ್ಲೇ ಅತಿ ಬಲಾಢ್ಯನಾದ, ಎಲ್ಲಾದರ ನಿರ್ಮಾಣಿಕನಾದ, ಸಂತೋಷದ ದೇವರು ನನಗನ್ನುವುದು ‘ಹೋಗು, ಹೋಗಿ ಮಾತಾಡು. ನನ್ನ ಪರವಾಗಿ ಮಾತಾಡು. ಹೃದಯದಿಂದ ಮಾತಾಡು. ನಾನು ನಿನಗೆ ಶಕ್ತಿ ಕೊಡ್ತೇನೆ. ನನ್ನ ವಾಕ್ಯವಾದ ಬೈಬಲ್‌, ದೇವದೂತರ ಬೆಂಬಲ, ಭೂಮಿಯಲ್ಲಿರುವ ಸಹೋದರರ ಬೆಂಬಲ, ಪ್ರಗತಿಪರ ತರಬೇತಿ, ಸೂಕ್ತ ಸಮಯದಲ್ಲಿ ಸರಿಯಾದ ಸೂಚನೆ ಎಲ್ಲವನ್ನೂ ಕೊಡ್ತೇನೆ.’ ಯೆಹೋವನು ಹೇಳೋದನ್ನು ಮಾಡೋದು, ಆತನ ಜೊತೆಯಲ್ಲೇ ಕೆಲಸ ಮಾಡೋದು ನಿಜವಾಗ್ಲೂ ಒಂದು ದೊಡ್ಡ ಸುಯೋಗ!”