ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಿಮ್ಮ ಸಹೋದರ ಪ್ರೀತಿಯನ್ನು ಮುಂದುವರಿಸಲು’ ನಿಶ್ಚಯಿಸಿ!

‘ನಿಮ್ಮ ಸಹೋದರ ಪ್ರೀತಿಯನ್ನು ಮುಂದುವರಿಸಲು’ ನಿಶ್ಚಯಿಸಿ!

“ನಿಮ್ಮ ಸಹೋದರ ಪ್ರೀತಿಯು ಮುಂದುವರಿಯಲಿ.”—ಇಬ್ರಿ. 13:1.

ಗೀತೆಗಳು: 72, 119

1, 2. ಪೌಲನು ಇಬ್ರಿಯ ಕ್ರೈಸ್ತರಿಗೆ ಏಕೆ ಪತ್ರ ಬರೆದನು?

ಇಸವಿ 61. ಇಸ್ರಾಯೇಲ್‌ ದೇಶದಲ್ಲಿದ್ದ ಎಲ್ಲ ಸಭೆಗಳಲ್ಲಿ ಸಾಧಾರಣ ಮಟ್ಟಿಗೆ ಶಾಂತಿ ಇತ್ತು. ಆದರೆ ಅಪೊಸ್ತಲ ಪೌಲನು ರೋಮ್‌ನಲ್ಲಿ ಸೆರೆಮನೆಯಲ್ಲಿದ್ದನು. ಅವನ ಜೊತೆಗಾರ ತಿಮೊಥೆಯನಿಗೆ ಆಗತಾನೇ ಸೆರೆಯಿಂದ ಬಿಡುಗಡೆ ಆಗಿತ್ತು. ಪೌಲ ತನ್ನ ಬಿಡುಗಡೆಗಾಗಿ ಕಾಯುತ್ತಿದ್ದನು. ಹೊರಗೆ ಬಂದ ಮೇಲೆ ತಿಮೊಥೆಯನ ಜೊತೆಯಲ್ಲಿ ಯೂದಾಯದಲ್ಲಿದ್ದ ಕ್ರೈಸ್ತರನ್ನು ಭೇಟಿಮಾಡಬೇಕೆಂದಿದ್ದನು. (ಇಬ್ರಿ. 13:23) ಆದರೆ ಮುಂದೆ ಐದು ವರ್ಷಗಳಲ್ಲಿ ಯೂದಾಯದಲ್ಲಿ, ಅದರಲ್ಲೂ ಯೆರೂಸಲೇಮಿನಲ್ಲಿದ್ದ ಕ್ರೈಸ್ತರಿಗೆ ಆ ಊರನ್ನೇ ಬಿಟ್ಟು ಓಡಿಹೋಗಲಿಕ್ಕಿತ್ತು. ಏಕೆಂದರೆ ಯೇಸು ಮುಂತಿಳಿಸಿದಂತೆ ಸೈನ್ಯಗಳು ಯೆರೂಸಲೇಮಿಗೆ ಮುತ್ತಿಗೆ ಹಾಕಲಿದ್ದವು. ಅದನ್ನು ನೋಡಿದ ಕೂಡಲೇ ಆ ಕ್ರೈಸ್ತರು ತಕ್ಷಣ ಕ್ರಿಯೆಗೈಯಬೇಕಿತ್ತು.—ಲೂಕ 21:20-24.

2 ಯೇಸು ತನ್ನ ಹಿಂಬಾಲಕರಿಗೆ ಆ ಎಚ್ಚರಿಕೆ ಕೊಟ್ಟು 28 ವರ್ಷ ದಾಟಿದ್ದವು. ಆ ಎಲ್ಲ ವರ್ಷಗಳಲ್ಲಿ ಇಸ್ರಾಯೇಲ್‌ ದೇಶದಲ್ಲಿದ್ದ ಕ್ರೈಸ್ತರು ತುಂಬ ಹಿಂಸೆ, ಕಷ್ಟಗಳನ್ನು ಅನುಭವಿಸಿದರೂ ನಂಬಿಗಸ್ತರಾಗಿ ಉಳಿದಿದ್ದರು. (ಇಬ್ರಿ. 10:32-34) ಆದರೆ ಮುಂದೆ ಇನ್ನೂ ಕಷ್ಟದ ಪರಿಸ್ಥಿತಿ ಬರಲಿತ್ತು. ಅವರಿಗೆ ಅಲ್ಲಿಯ ವರೆಗೆ ಬಂದಿದ್ದ ನಂಬಿಕೆಯ ಪರೀಕ್ಷೆಗಳಲ್ಲೇ ಅತೀ ದೊಡ್ಡ ಪರೀಕ್ಷೆ ಬರಲಿತ್ತು. ಇದಕ್ಕಾಗಿಯೇ ಪೌಲನು ಅವರನ್ನು ಸಿದ್ಧಗೊಳಿಸಬೇಕೆಂದಿದ್ದನು. (ಮತ್ತಾ. 24:20, 21; ಇಬ್ರಿ. 12:4) ಯೇಸುವಿನ ಮಾತಿಗೆ ವಿಧೇಯತೆ ತೋರಿಸಿ ಓಡಿಹೋಗಿ ಜೀವ ಉಳಿಸಿಕೊಳ್ಳಬೇಕಾದರೆ ಆ ಕ್ರೈಸ್ತರಿಗೆ ಹಿಂದೆಂದಿಗಿಂತಲೂ ಹೆಚ್ಚು ಸಹನೆ ಮತ್ತು ನಂಬಿಕೆ ಬೇಕಾಗಿತ್ತು. (ಇಬ್ರಿಯ 10:36-39 ಓದಿ.) ಆದ್ದರಿಂದಲೇ ಆ ಪ್ರಿಯ ಕ್ರೈಸ್ತರ ನಂಬಿಕೆಯನ್ನು ಬಲಪಡಿಸಲು ಒಂದು ಪತ್ರ ಬರೆಯುವಂತೆ ಯೆಹೋವನು ಪೌಲನನ್ನು ಪ್ರೇರಿಸಿದನು. ಆ ಪತ್ರವನ್ನೇ ಈಗ ‘ಇಬ್ರಿಯ ಪುಸ್ತಕ’ ಎಂದು ಕರೆಯಲಾಗುತ್ತದೆ.

3. ಇಬ್ರಿಯ ಪುಸ್ತಕದಲ್ಲಿ ನಾವೇಕೆ ಆಸಕ್ತರಾಗಿರಬೇಕು?

3 ದೇವರ ಜನರಾದ ನಾವಿಂದು ಇಬ್ರಿಯ ಪುಸ್ತಕದಲ್ಲಿ ಆಸಕ್ತರಾಗಿರಬೇಕು. ಏಕೆಂದರೆ ನಾವಿರುವ ಪರಿಸ್ಥಿತಿಯು ಹಿಂದೆ ಯೂದಾಯದಲ್ಲಿದ್ದ ಕ್ರೈಸ್ತರ ಪರಿಸ್ಥಿತಿಯಂತೆಯೇ ಇದೆ. ನಾವೀಗ ‘ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳಲ್ಲಿ’ ಜೀವಿಸುತ್ತಿದ್ದೇವೆ. ತೀವ್ರ ಕಷ್ಟ, ಹಿಂಸೆ ಬಂದರೂ ನಂಬಿಗಸ್ತಿಕೆಯಿಂದ ತಾಳಿಕೊಂಡಿದ್ದೇವೆ. (2 ತಿಮೊ. 3:1, 12) ಆದರೆ ನಮ್ಮಲ್ಲಿ ಹೆಚ್ಚಿನವರು ನೇರವಾದ ಹಿಂಸೆಯನ್ನು ಅನುಭವಿಸುತ್ತಿರಲಿಕ್ಕಿಲ್ಲ. ಶಾಂತಿಯ ಪರಿಸ್ಥಿತಿಗಳಲ್ಲಿ ಜೀವಿಸುತ್ತಿರಬಹುದು. ಹಾಗಿದ್ದರೂ ಪೌಲನ ಸಮಯದಲ್ಲಿದ್ದ ಕ್ರೈಸ್ತರಂತೆ ನಾವು ಎಚ್ಚರದಿಂದಿರಬೇಕು. ಏಕೆ? ಬಲು ಬೇಗನೆ ನಮ್ಮ ನಂಬಿಕೆಗೆ ಅತೀ ದೊಡ್ಡ ಪರೀಕ್ಷೆ ಬರಲಿದೆ!ಲೂಕ 21:34-36 ಓದಿ.

4. (ಎ) 2016ರ ವರ್ಷವಚನ ಯಾವುದು? (ಬಿ) ಅದೇಕೆ ಸೂಕ್ತವಾಗಿದೆ?

4 ಆ ಪರೀಕ್ಷೆಯನ್ನು ಎದುರಿಸಲು ನಾವು ಹೇಗೆ ಸಿದ್ಧರಾಗಬಹುದು? ನಮ್ಮ ನಂಬಿಕೆಯನ್ನು ಈಗ ಬಲಪಡಿಸಿಕೊಳ್ಳುವ ಮೂಲಕ. ಇದನ್ನು ಮಾಡಲು ಇಬ್ರಿಯ ಪುಸ್ತಕದಲ್ಲಿ ಪೌಲನು ತಿಳಿಸಿರುವ ಅನೇಕ ವಿಷಯಗಳು ಸಹಾಯಮಾಡುತ್ತವೆ. ಅವುಗಳಲ್ಲಿ ಒಂದು ಮುಖ್ಯ ವಿಷಯ ಇಬ್ರಿಯ 13:1ರಲ್ಲಿದೆ. ಅದು ಹೀಗನ್ನುತ್ತದೆ: “ನಿಮ್ಮ ಸಹೋದರ ಪ್ರೀತಿಯು ಮುಂದುವರಿಯಲಿ.” ಈ ವಚನವೇ 2016ರ ವರ್ಷವಚನ.

2016ರ ವರ್ಷವಚನ: “ನಿಮ್ಮ ಸಹೋದರ ಪ್ರೀತಿಯು ಮುಂದುವರಿಯಲಿ.” ಇಬ್ರಿಯ 13:1

ಸಹೋದರ ಪ್ರೀತಿ ಅಂದರೇನು?

5. ಸಹೋದರ ಪ್ರೀತಿ ಅಂದರೇನು?

5 ಸಹೋದರ ಪ್ರೀತಿಯ ಅರ್ಥವೇನು? ಪೌಲನು ಇಲ್ಲಿ ಬಳಸಿದ ಗ್ರೀಕ್‌ ಪದದ (ಫಿಲಡೆಲ್ಫಿಯಾ) ಅರ್ಥ “ಸಹೋದರನ ಮೇಲೆ ಮಮತೆ” ಎಂದಾಗಿದೆ. ಸಹೋದರ ಪ್ರೀತಿ ಎನ್ನುವುದು ಒಂದು ಕುಟುಂಬದ ಮಧ್ಯೆ ಅಥವಾ ಆಪ್ತ ಸ್ನೇಹಿತರ ಮಧ್ಯೆ ಇರುವ ಗಾಢವಾದ, ಹೃದಯದಾಳದ ಭಾವನೆ. (ಯೋಹಾ. 11:36) ನಾವು ಹೊರಗಿನವರಿಗೆ ಬರೀ ತೋರಿಸಿಕೊಳ್ಳಲಿಕ್ಕಾಗಿ ಸಹೋದರ ಸಹೋದರಿಯರಂತೆ ನಾಟಕವಾಡುವುದಿಲ್ಲ. ನಾವು ನಿಜವಾಗಿಯೂ ಸಹೋದರ ಸಹೋದರಿಯರೇ. (ಮತ್ತಾ. 23:8) ಪೌಲ ಹೇಳಿದ್ದು: “ಸಹೋದರ ಪ್ರೀತಿಯಲ್ಲಿ ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ರೋಮ. 12:10) ಈ ಮಾತುಗಳು ನಮ್ಮ ಸಹೋದರರೊಂದಿಗೆ ನಮಗಿರುವ ಮಮತೆಯ ಬಂಧವನ್ನು ತೋರಿಸಿಕೊಡುತ್ತವೆ. ಈ ಸಹೋದರ ಪ್ರೀತಿ ಮಾತ್ರವಲ್ಲ ಕ್ರೈಸ್ತ ತತ್ವಗಳಿಗೆ ಅನುಸಾರವಾದ ಪ್ರೀತಿ (ಅಗಾಪೆ) ತೋರಿಸುವಲ್ಲಿ ನಾವು ಜೊತೆ ಕ್ರೈಸ್ತರೊಟ್ಟಿಗೆ ಆಪ್ತ ಸ್ನೇಹಿತರಾಗಿರಲು ಮತ್ತು ಐಕ್ಯದಿಂದಿರಲು ಆಗುತ್ತದೆ.

6. ನಿಜ ಕ್ರೈಸ್ತರು ಯಾರನ್ನು ‘ಸಹೋದರ’ ಎಂದು ಪರಿಗಣಿಸುತ್ತಾರೆ?

6 “ಸಹೋದರ ಪ್ರೀತಿ” ಎಂಬ ಪದಪ್ರಯೋಗ ಹೆಚ್ಚಾಗಿ ಕ್ರೈಸ್ತರಿಗೆ ಸಂಬಂಧಿಸಿದ ಸಾಹಿತ್ಯದಲ್ಲಿ ನೋಡಲು ಸಿಗುತ್ತದೆ. ಹಿಂದಿನ ಕಾಲದಲ್ಲಿ ಯೆಹೂದ್ಯರು “ಸಹೋದರ” ಎಂಬ ಪದವನ್ನು ಹೆಚ್ಚಾಗಿ ಸಂಬಂಧಿಕರಿಗೆ ಬಳಸುತ್ತಿದ್ದರು. ಒಮ್ಮೊಮ್ಮೆ ಮಾತ್ರ ಕುಟುಂಬದವರಲ್ಲದ ವ್ಯಕ್ತಿಗೆ ಬಳಸುತ್ತಿದ್ದರು. ಆದರೆ ಯೆಹೂದ್ಯನಲ್ಲದ ವ್ಯಕ್ತಿಯನ್ನು ಅವರು ಯಾವತ್ತೂ ಸಹೋದರನೆಂದು ಕರೆಯುತ್ತಿರಲಿಲ್ಲ. ನಿಜ ಕ್ರೈಸ್ತರಾದ ನಾವು ನಿಜ ಕ್ರೈಸ್ತರಲ್ಲಿ ಪ್ರತಿಯೊಬ್ಬನನ್ನು ‘ಸಹೋದರ’ ಎಂದು ಪರಿಗಣಿಸುತ್ತೇವೆ. ಅವನು ಯಾವ ದೇಶದವನಾಗಿದ್ದರೂ ಸರಿಯೇ. (ರೋಮ. 10:12) ನಾವು ಒಬ್ಬರನ್ನೊಬ್ಬರನ್ನು ಸಹೋದರರಂತೆ ಪ್ರೀತಿಸಲು ಯೆಹೋವನೇ ಕಲಿಸಿದ್ದಾನೆ. (1 ಥೆಸ. 4:9) ಆದರೆ ಸಹೋದರ ಪ್ರೀತಿ ತೋರಿಸುವುದನ್ನು ಮುಂದುವರಿಸುವುದು ಯಾಕೆ ತುಂಬ ಮುಖ್ಯ?

ಸಹೋದರ ಪ್ರೀತಿ ತೋರಿಸುವುದನ್ನು ಮುಂದುವರಿಸಲು ಕಾರಣ

7. (ಎ) ನಾವು ಸಹೋದರ ಪ್ರೀತಿಯನ್ನು ತೋರಿಸಲು ಅತೀ ಮುಖ್ಯ ಕಾರಣ ಯಾವುದು? (ಬಿ) ನಮ್ಮ ಮಧ್ಯೆ ಇರುವ ಪ್ರೀತಿಯನ್ನು ಹೆಚ್ಚಿಸಲು ಇನ್ನೊಂದು ಕಾರಣವೇನು?

7 ಸಹೋದರ ಪ್ರೀತಿ ತೋರಿಸಲು ಅತೀ ಮುಖ್ಯ ಕಾರಣವೇನೆಂದರೆ ಅದನ್ನು ತೋರಿಸುವಂತೆ ಯೆಹೋವನೇ ನಮಗೆ ಹೇಳಿದ್ದಾನೆ. ನಾವು ಸಹೋದರರನ್ನು ಪ್ರೀತಿಸದಿದ್ದರೆ ಯೆಹೋವನನ್ನು ಪ್ರೀತಿಸುತ್ತೇವೆಂದು ಹೇಳಲಾಗದು. (1 ಯೋಹಾ. 4:7, 20, 21) ಇನ್ನೊಂದು ಕಾರಣವೇನೆಂದರೆ, ಕಷ್ಟದ ಸಮಯದಲ್ಲಿ ಒಬ್ಬರಿಗೆ ಇನ್ನೊಬ್ಬರ ಸಹಾಯ ಬೇಕೇ ಬೇಕು. ಉದಾಹರಣೆಗೆ, ಪೌಲನು ಇಬ್ರಿಯ ಕ್ರೈಸ್ತರಿಗೆ ಪತ್ರ ಬರೆದಂಥ ಸಮಯದಲ್ಲಿ, ಅವರಲ್ಲಿ ಕೆಲವರು ಮನೆಮಾರನ್ನೆಲ್ಲ ಬಿಟ್ಟುಹೋಗಬೇಕಾದ ಸಮಯ ಬೇಗನೆ ಬರಲಿದೆಯೆಂದು ಅವನಿಗೆ ಗೊತ್ತಿತ್ತು. ಆ ಸಮಯದಲ್ಲಿ ಎಷ್ಟು ಕಷ್ಟ ಇರಲಿದೆಯೆಂದು ಯೇಸು ವರ್ಣಿಸಿದ್ದನು. (ಮಾರ್ಕ 13:14-18; ಲೂಕ 21:21-23) ಆದ್ದರಿಂದ ಆ ಸಮಯ ಬರುವ ಮುಂಚೆಯೇ ಕ್ರೈಸ್ತರು ತಮ್ಮ ಮಧ್ಯೆ ಇರುವ ಪ್ರೀತಿಯನ್ನು ಹೆಚ್ಚಿಸಬೇಕೆಂದು ಪೌಲನು ಹೇಳಿದನು.—ರೋಮ. 12:9.

8. ಮಹಾ ಸಂಕಟ ಶುರುವಾಗುವ ಮುಂಚೆ ಅಂದರೆ ಈಗಲೇ ನಾವೇನು ಮಾಡಬೇಕು?

8 ಮಾನವ ಇತಿಹಾಸದಲ್ಲಿ ಹಿಂದೆಂದೂ ಬಂದಿರದ ಮಹಾ ಸಂಕಟ ನಮ್ಮ ಕಾಲದಲ್ಲೂ ಬೇಗನೆ ಶುರುವಾಗಲಿದೆ. (ಮಾರ್ಕ 13:19; ಪ್ರಕ. 7:1-3) ಆಗ ನಾವು ಈ ಬುದ್ಧಿವಾದವನ್ನು ಪಾಲಿಸಬೇಕು: “ನನ್ನ ಜನರೇ, ಬನ್ನಿರಿ, ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಿಲು ಮುಚ್ಚಿಕೊಳ್ಳಿರಿ; ದೈವರೋಷವು ತೀರುವ ತನಕ ಒಂದು ಕ್ಷಣ ಅವಿತುಕೊಳ್ಳಿರಿ.” (ಯೆಶಾ. 26:20) ಆ ‘ಕೋಣೆಗಳು’ ನಮ್ಮ ಸಭೆಗಳು ಆಗಿರಬಹುದು. ನಮ್ಮ ಸಹೋದರ ಸಹೋದರಿಯರ ಜೊತೆ ಸೇರಿ ನಾವು ಯೆಹೋವನನ್ನು ಅಲ್ಲಿ ಆರಾಧಿಸುತ್ತೇವೆ. ನಾವು ತಪ್ಪದೆ ಕೂಟಗಳಿಗೆ ಹಾಜರಾದರಷ್ಟೇ ಸಾಲದು. ಇನ್ನೂ ಹೆಚ್ಚಿನದ್ದನ್ನು ಮಾಡಬೇಕು. ಅದೇನು? ಒಬ್ಬರಿಗೊಬ್ಬರು ಪ್ರೀತಿ ತೋರಿಸುವಂತೆ ಮತ್ತು ಒಳ್ಳೇದನ್ನು ಮಾಡಲು ಪ್ರೋತ್ಸಾಹಿಸುವಂತೆ ಪೌಲನು ಇಬ್ರಿಯ ಕ್ರೈಸ್ತರಿಗೆ ನೆನಪಿಸಿದನು. (ಇಬ್ರಿ. 10:24, 25) ನಾವು ಸಹ ನಮ್ಮ ಸಹೋದರ ಪ್ರೀತಿಯನ್ನು ಈಗಲೇ ಹೆಚ್ಚಿಸಿಕೊಳ್ಳಬೇಕು. ಆಗ ಭವಿಷ್ಯದಲ್ಲಿ ಯಾವುದೇ ಕಷ್ಟಗಳು ಬಂದರೂ ಅದನ್ನು ತಾಳಿಕೊಳ್ಳಲು ನಮಗೆಲ್ಲರಿಗೂ ಸಹಾಯವಾಗುತ್ತದೆ.

9. (ಎ) ಇಂದು ಸಹೋದರ ಪ್ರೀತಿ ತೋರಿಸಲು ನಮಗೆ ಯಾವ ಅವಕಾಶಗಳಿವೆ? (ಬಿ) ಯೆಹೋವನ ಜನರು ಸಹೋದರ ಪ್ರೀತಿ ತೋರಿಸಿರುವ ಉದಾಹರಣೆಗಳನ್ನು ಕೊಡಿ.

9 ಮಹಾ ಸಂಕಟ ಆರಂಭವಾಗುವ ಮುಂಚೆ ಈಗಲೂ ನಮಗೆ ಸಹೋದರ ಪ್ರೀತಿ ತೋರಿಸಲು ಅನೇಕ ಅವಕಾಶಗಳಿವೆ. ಭೂಕಂಪ, ನೆರೆಹಾವಳಿ, ಚಂಡಮಾರುತ, ಸುನಾಮಿ ಇನ್ನಿತರ ನೈಸರ್ಗಿಕ ವಿಪತ್ತುಗಳಿಂದಾಗಿ ಎಷ್ಟೋ ಮಂದಿ ಸಹೋದರರು ಕಷ್ಟಪಡುತ್ತಿದ್ದಾರೆ. ಕೆಲವರು ಹಿಂಸೆಯನ್ನು ತಾಳಿಕೊಳ್ಳುತ್ತಿದ್ದಾರೆ. (ಮತ್ತಾ. 24:6-9) ಈ ಲೋಕದಲ್ಲಿ ಭ್ರಷ್ಟಾಚಾರ ತುಂಬಿರುವುದರಿಂದ ದಿನೇದಿನೇ ಹಣಕಾಸಿನ ತೊಂದರೆಗಳೂ ಹೆಚ್ಚುತ್ತಿವೆ. (ಪ್ರಕ. 6:5, 6) ಆದರೆ ನಮ್ಮ ಸಹೋದರರಿಗೆ ಕಷ್ಟಗಳು ಎಷ್ಟು ಜಾಸ್ತಿಯಾಗುತ್ತವೊ ಅವರ ಮೇಲಿನ ಪ್ರೀತಿ ತೋರಿಸಲು ಅಷ್ಟೇ ಹೆಚ್ಚು ಅವಕಾಶಗಳು ನಮಗೆ ಸಿಗುತ್ತವೆ. ಈ ಲೋಕದವರಲ್ಲಿ ಪ್ರೀತಿ ಇಲ್ಲದಿದ್ದರೂ ನಾವು ಸಹೋದರ ಪ್ರೀತಿ ತೋರಿಸುವುದನ್ನು ಮುಂದುವರಿಸಬೇಕು. (ಮತ್ತಾ. 24:12) [1]—ಕೊನೆ ಟಿಪ್ಪಣಿ ನೋಡಿ.

ಸಹೋದರ ಪ್ರೀತಿ ತೋರಿಸುವುದನ್ನು ಮುಂದುವರಿಸಲು ಏನು ಮಾಡಬೇಕು?

10. ನಾವೀಗ ಏನನ್ನು ಚರ್ಚಿಸಲಿದ್ದೇವೆ?

10 ನಮಗೆ ಹತ್ತಾರು ಸಮಸ್ಯೆಗಳಿದ್ದರೂ ಸಹೋದರ ಪ್ರೀತಿ ತೋರಿಸುವುದನ್ನು ಮುಂದುವರಿಸಲು ಏನು ಮಾಡಬೇಕು? ಇಂಥ ಮಮತೆ ನಮಗಿದೆಯೆಂದು ಹೇಗೆ ತೋರಿಸಬಲ್ಲೆವು? “ನಿಮ್ಮ ಸಹೋದರ ಪ್ರೀತಿಯು ಮುಂದುವರಿಯಲಿ” ಎಂದು ಅಪೊಸ್ತಲ ಪೌಲನು ಹೇಳಿದ ನಂತರ ಅದನ್ನು ಮಾಡುವ ಅನೇಕ ವಿಧಾನಗಳನ್ನು ಪಟ್ಟಿಮಾಡಿದನು. ಅವುಗಳಲ್ಲಿ 6 ವಿಧಾನಗಳನ್ನು ಈಗ ನೋಡೋಣ.

11, 12. ಅತಿಥಿಸತ್ಕಾರ ತೋರಿಸುವುದರ ಅರ್ಥವೇನು? (ಲೇಖನದ ಆರಂಭದ ಚಿತ್ರ ನೋಡಿ.)

11 ‘ಅತಿಥಿಸತ್ಕಾರ ಮಾಡುವುದನ್ನು ಮರೆಯಬೇಡಿರಿ.’ (ಇಬ್ರಿಯ 13:2 ಓದಿ.) “ಅತಿಥಿಸತ್ಕಾರ” ಎಂಬ ಪದದ ಅರ್ಥವೇನು? ಪೌಲನು ಇಲ್ಲಿ ಬಳಸಿದ ಪದದ ಅರ್ಥ “ಅಪರಿಚಿತರಿಗೆ ತೋರಿಸುವ ದಯೆ” ಎಂದಾಗಿದೆ. ಆ ಪದಗಳು, ಪರಿಚಯವಿಲ್ಲದ ವ್ಯಕ್ತಿಗಳಿಗೆ ದಯೆ ತೋರಿಸಿದ ಅಬ್ರಹಾಮ ಮತ್ತು ಲೋಟನನ್ನು ನಮ್ಮ ನೆನಪಿಗೆ ತರುತ್ತವೆ. ಆ ಅಪರಿಚಿತರು ನಿಜವಾಗಿ ದೇವದೂತರೆಂದು ಅವರಿಗೆ ಗೊತ್ತಾದದ್ದು ಆಮೇಲೆಯೇ. (ಆದಿ. 18:2-5; 19:1-3) ಈ ಉದಾಹರಣೆಗಳು, ಅತಿಥಿಸತ್ಕಾರ ಮಾಡುವ ಮೂಲಕ ಸಹೋದರ ಪ್ರೀತಿ ತೋರಿಸಲು ಇಬ್ರಿಯ ಕ್ರೈಸ್ತರನ್ನು ಉತ್ತೇಜಿಸಿದವು.

12 ನಾವು ಅತಿಥಿಸತ್ಕಾರ ಹೇಗೆ ಮಾಡಬಲ್ಲೆವು? ಸಹೋದರ ಸಹೋದರಿಯರನ್ನು ಮನೆಗೆ ಊಟಕ್ಕೆ, ಒಡನಾಟಕ್ಕೆ, ಪರಸ್ಪರ ಪ್ರೋತ್ಸಾಹಕ್ಕೆ ಕರೆಯುವ ಮೂಲಕ. ಸಂಚರಣ ಮೇಲ್ವಿಚಾರಕ ಮತ್ತು ಅವರ ಪತ್ನಿಯ ಒಳ್ಳೇ ಪರಿಚಯ ನಮಗಿರದಿದ್ದರೂ ಅವರನ್ನು ಮನೆಗೆ ಕರೆಯಬಹುದು. (3 ಯೋಹಾ. 5-8) ನಮ್ಮ ಸಹೋದರರನ್ನು ಆಮಂತ್ರಿಸಿದಾಗ ಬಗೆಬಗೆಯ ಅಡುಗೆ ಮಾಡುವ, ತುಂಬ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಅತಿಥಿಸತ್ಕಾರದ ಉದ್ದೇಶ, ನಮ್ಮ ದೊಡ್ಡಸ್ತಿಕೆ ತೋರಿಸಿಕೊಳ್ಳಲಿಕ್ಕೆ ಅಲ್ಲ ಬದಲಾಗಿ ಅವರನ್ನು ಪ್ರೋತ್ಸಾಹಿಸುವುದಕ್ಕೇ ಆಗಿದೆ. ನಮಗೇನಾದರೂ ಉಪಕಾರ ಮಾಡಲು ಆಗುವವರಿಗೆ ಮಾತ್ರ ನಾವು ಅತಿಥಿಸತ್ಕಾರ ಮಾಡಬಾರದು. (ಲೂಕ 10:42; 14:12-14) ಮನಸ್ಸಿನಲ್ಲಿಡಬೇಕಾದ ಮುಖ್ಯ ವಿಷಯವೇನೆಂದರೆ, ನಮಗೆಷ್ಟೇ ಕೆಲಸಗಳಿರಲಿ ಅತಿಥಿಸತ್ಕಾರ ತೋರಿಸಲು ಮರೆತುಬಿಡಬಾರದು!

13, 14. ಸೆರೆಯಲ್ಲಿರುವವರನ್ನು ನಾವು ಹೇಗೆ ನೆನಪಿನಲ್ಲಿಡಬೇಕು?

13 ‘ಸೆರೆಯಲ್ಲಿರುವವರನ್ನು ನೆನಪಿನಲ್ಲಿಟ್ಟುಕೊಳ್ಳಿರಿ.’ (ಇಬ್ರಿಯ 13:3 ಓದಿ.) ಪೌಲನು ಇದನ್ನು ಬರೆದಾಗ, ನಂಬಿಕೆಯ ಕಾರಣ ಸೆರೆಮನೆಯಲ್ಲಿದ್ದ ಸಹೋದರರ ಬಗ್ಗೆ ಹೇಳುತ್ತಿದ್ದನು. ಇಬ್ರಿಯ ಕ್ರೈಸ್ತರು ‘ಸೆರೆಯಲ್ಲಿದ್ದವರಿಗೆ ಸಹಾನುಭೂತಿ’ ತೋರಿಸಿದ್ದಕ್ಕಾಗಿ ಪೌಲನು ಅವರನ್ನು ಶ್ಲಾಘಿಸಿದನು. (ಇಬ್ರಿ. 10:34) ಪೌಲನು ನಾಲ್ಕು ವರ್ಷ ಸೆರೆಯಲ್ಲಿದ್ದಾಗ ಕೆಲವು ಸಹೋದರರು ಅಲ್ಲಿಗೆ ಹೋಗಿ ಸಹಾಯಮಾಡಿದ್ದರು. ಆದರೆ ದೂರದಲ್ಲಿ ವಾಸಿಸುತ್ತಿದ್ದ ಇಬ್ರಿಯ ಕ್ರೈಸ್ತರು ಸಹ ಅವನಿಗೆ ಸಹಾಯಮಾಡಿದ್ದರು. ಹೇಗೆ? ಅವನಿಗಾಗಿ ಮನಃಪೂರ್ವಕ ಪ್ರಾರ್ಥನೆಗಳನ್ನು ಮಾಡುವ ಮೂಲಕ.—ಫಿಲಿ. 1:12-14; ಇಬ್ರಿ. 13:18, 19.

14 ಇಂದು, ಅನೇಕ ಸಾಕ್ಷಿಗಳು ತಮ್ಮ ನಂಬಿಕೆಯ ಕಾರಣ ಸೆರೆಮನೆಯಲ್ಲಿದ್ದಾರೆ. ಹತ್ತಿರದಲ್ಲಿ ವಾಸಿಸುವ ಸಹೋದರರು ಅಲ್ಲಿಗೆ ಹೋಗಿ ತಮ್ಮಿಂದಾದ ಸಹಾಯವನ್ನು ಅವರಿಗೆ ಕೊಡುತ್ತಾರೆ. ಆದರೆ ನಮ್ಮಲ್ಲಿ ಹೆಚ್ಚಿನವರು ಸೆರೆಯಲ್ಲಿರುವವರಿಂದ ತುಂಬ ದೂರದಲ್ಲಿ ವಾಸಿಸುತ್ತಿದ್ದೇವೆ. ನಾವು ಅವರನ್ನು ನೆನಪಿನಲ್ಲಿಟ್ಟು ಹೇಗೆ ಸಹಾಯಮಾಡಬಹುದು? ಅವರಿಗಾಗಿ ಅತ್ಯಾಸಕ್ತಿಯಿಂದ ಎಡೆಬಿಡದೆ ಪ್ರಾರ್ಥನೆ ಮೂಲಕ ಸಹೋದರ ಪ್ರೀತಿ ತೋರಿಸಬಹುದು. ಉದಾಹರಣೆಗೆ ಎರಿಟ್ರೀಯ ದೇಶದಲ್ಲಿ ಸಹೋದರರು, ಸಹೋದರಿಯರು ಮತ್ತು ಮಕ್ಕಳು ಸಹ ಸೆರೆಯಲ್ಲಿದ್ದಾರೆ. ಪೌಲಸ್‌ ಎಸಾಯು, ಐಸಾಕ್‌ ಮೊಗೊಸ್‌, ನೆಗೆಡೆ ಟೆಕ್ಲೆಮರ್ಯಾಮ್‌ ಎಂಬ ಸಹೋದರರಂತೂ 20ಕ್ಕೂ ಹೆಚ್ಚು ವರ್ಷಗಳಿಂದ ಸೆರೆಮನೆಯಲ್ಲಿದ್ದಾರೆ. ಇವರೆಲ್ಲರಿಗಾಗಿ ನಾವು ಮರೆಯದೆ ಪ್ರಾರ್ಥಿಸಬೇಕು.

15. ನಮ್ಮ ವಿವಾಹಬಂಧಕ್ಕೆ ಹೇಗೆ ಗೌರವ ತೋರಿಸಬಹುದು?

15 “ವಿವಾಹವು ಎಲ್ಲರಲ್ಲಿಯೂ ಗೌರವಾರ್ಹವಾಗಿರಲಿ.” (ಇಬ್ರಿಯ 13:4 ಓದಿ.) ನೈತಿಕವಾಗಿ ಶುದ್ಧರಾಗಿ ಉಳಿಯುವ ಮೂಲಕವೂ ನಾವು ಸಹೋದರ ಪ್ರೀತಿ ತೋರಿಸಬಹುದು. (1 ತಿಮೊ. 5:1, 2) ಉದಾಹರಣೆಗೆ, ಸಭೆಯಲ್ಲಿ ಯಾರಾದರೊಬ್ಬರು ಒಬ್ಬ ಸಹೋದರ, ಒಬ್ಬ ಸಹೋದರಿ ಅಥವಾ ಅವರ ಕುಟುಂಬದವರಲ್ಲಿ ಒಬ್ಬರೊಂದಿಗೆ ಲೈಂಗಿಕ ಅನೈತಿಕತೆ ನಡೆಸುತ್ತಾರೆ ಎಂದಿಟ್ಟುಕೊಳ್ಳಿ. ಆಗ ನಮ್ಮ ಸಹೋದರರ ಮಧ್ಯೆ ಇರುವ ಭರವಸೆ ಒಡೆದುಹೋಗುತ್ತದೆ. (1 ಥೆಸ. 4:3-8) ಇದರ ಬಗ್ಗೆಯೂ ಯೋಚಿಸಿ: ಗಂಡನು ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದಾನೆಂದು ಹೆಂಡತಿಗೆ ಗೊತ್ತಾದರೆ ಅವಳಿಗೆಷ್ಟು ನೋವಾಗಬಹುದು! ಗಂಡ ತನ್ನನ್ನು ಪ್ರೀತಿಸುತ್ತಾನೆ, ವಿವಾಹದ ಏರ್ಪಾಡನ್ನು ಗೌರವಿಸುತ್ತಾನೆ ಎಂಬ ಭಾವನೆ ಅವಳಲ್ಲಿ ಉಳಿಯಲಿಕ್ಕಿಲ್ಲ.—ಮತ್ತಾ. 5:28.

16. ಇರುವುದರಲ್ಲೇ ತೃಪ್ತರಾಗಿದ್ದರೆ ಸಹೋದರ ಪ್ರೀತಿ ತೋರಿಸಲು ನಮ್ಮಿಂದ ಹೇಗೆ ಸಾಧ್ಯವಾಗುತ್ತದೆ?

16 ‘ನಿಮಗಿರುವವುಗಳಲ್ಲಿ ತೃಪ್ತರಾಗಿರಿ.’ (ಇಬ್ರಿಯ 13:5 ಓದಿ.) ಯೆಹೋವನ ಮೇಲೆ ಭರವಸೆಯು ನಮ್ಮ ಬಳಿ ಏನಿದೆಯೊ ಅದರಲ್ಲೇ ತೃಪ್ತರಾಗಿರಲು ಸಹಾಯಮಾಡುತ್ತದೆ. ನಾವು ತೃಪ್ತರಾಗಿದ್ದರೆ ಸಹೋದರ ಪ್ರೀತಿ ತೋರಿಸಲು ನಮ್ಮಿಂದಾಗುತ್ತದೆ. ಹೇಗೆಂದರೆ ಆಗ ನಾವು ಹಣ, ವಸ್ತುಗಳಿಗಿಂತ ನಮ್ಮ ಸಹೋದರ ಸಹೋದರಿಯರಿಗೆ ಹೆಚ್ಚು ಬೆಲೆಕೊಡುತ್ತೇವೆ. (1 ತಿಮೊ. 6:6-8) ಅಲ್ಲದೆ, ಸಹೋದರರ ಬಗ್ಗೆ ಅಥವಾ ನಮ್ಮ ಜೀವನದ ಕಷ್ಟಗಳ ಬಗ್ಗೆ ಯಾವಾಗಲೂ ಗೊಣಗುತ್ತಾ ಇರುವುದಿಲ್ಲ. ಸಭೆಯಲ್ಲಿ ಇತರರನ್ನು ನೋಡಿ ಹೊಟ್ಟೆಕಿಚ್ಚುಪಡುವುದಿಲ್ಲ, ಅವರ ಹತ್ತಿರ ಏನಿದೆಯೊ ಅದನ್ನು ಆಶಿಸುವುದೂ ಇಲ್ಲ. ಅದರ ಬದಲು ಧಾರಾಳ ಮನಸ್ಸಿನವರಾಗಿರುತ್ತೇವೆ.—1 ತಿಮೊ. 6:17-19.

17. ಧೈರ್ಯದಿಂದಿದ್ದರೆ ಸಹೋದರ ಪ್ರೀತಿ ತೋರಿಸಲು ಹೇಗೆ ಸಾಧ್ಯವಾಗುತ್ತದೆ?

17 ‘ಧೈರ್ಯದಿಂದಿರಿ.’ (ಇಬ್ರಿಯ 13:6 ಓದಿ.) ಯೆಹೋವನ ಮೇಲೆ ಭರವಸೆಯು ಕಷ್ಟದ ಪರೀಕ್ಷೆಗಳನ್ನು ಎದುರಿಸಲು ಬೇಕಾದ ಧೈರ್ಯ ಕೊಡುತ್ತದೆ. ಇಂಥ ಧೈರ್ಯವಿದ್ದರೆ, ಕಷ್ಟಪರೀಕ್ಷೆಗಳ ಮಧ್ಯೆಯೂ ನಾವು ಕುಗ್ಗಿಹೋಗುವುದಿಲ್ಲ. ಈ ಮನೋಭಾವ ಇದ್ದರೆ ನಾವು ಸಹೋದರ ಸಹೋದರಿಯರಿಗೆ ಪ್ರೋತ್ಸಾಹದ, ಸಮಾಧಾನದ ಮಾತುಗಳನ್ನು ಹೇಳಿ ಸಹೋದರ ಪ್ರೀತಿ ತೋರಿಸುತ್ತೇವೆ. (1 ಥೆಸ. 5:14, 15) ಮಹಾ ಸಂಕಟದ ಸಮಯದಲ್ಲೂ ಧೈರ್ಯದಿಂದ ಇರುತ್ತೇವೆ. ಏಕೆಂದರೆ ನಮ್ಮ ಬಿಡುಗಡೆ ಹತ್ತಿರವಿದೆಯೆಂದು ನಮಗೆ ತಿಳಿದಿರುತ್ತದೆ.—ಲೂಕ 21:25-28.

ಹಿರಿಯರು ನಿಮಗಾಗಿ ಮಾಡುವ ಕೆಲಸಕ್ಕಾಗಿ ಕೃತಜ್ಞರಾಗಿದ್ದೀರಾ?(ಪ್ಯಾರ 18 ನೋಡಿ)

18. ಸಭಾ ಹಿರಿಯರಿಗಾಗಿ ನಮ್ಮ ಸಹೋದರ ಪ್ರೀತಿಯನ್ನು ಹೇಗೆ ಹೆಚ್ಚಿಸಬಲ್ಲೆವು?

18 “ಮುಂದಾಳುತ್ವ ವಹಿಸುತ್ತಿರುವವರನ್ನು ಜ್ಞಾಪಕಮಾಡಿಕೊಳ್ಳಿರಿ.” (ಇಬ್ರಿಯ 13:7, 17 ಓದಿ.) ಸಭೆಯಲ್ಲಿರುವ ಹಿರಿಯರು ನಮಗಾಗಿ ಕಷ್ಟಪಟ್ಟು ಕೆಲಸಮಾಡಲು ತಮ್ಮ ಸ್ವಂತ ಸಮಯವನ್ನು ಬಳಸುತ್ತಾರೆ. ಯಾವುದೇ ಆರ್ಥಿಕ ಲಾಭವಿಲ್ಲದೆ ಅವರು ನಮಗಾಗಿ ಪಡುತ್ತಿರುವ ಶ್ರಮದ ಬಗ್ಗೆ ಯೋಚಿಸಬೇಕು. ಆಗ ಅವರ ಮೇಲೆ ನಮಗಿರುವ ಪ್ರೀತಿ, ಕೃತಜ್ಞತೆ ಹೆಚ್ಚುತ್ತದೆ. ಅವರು ತಮ್ಮ ಕೆಲಸದಲ್ಲಿ ಆನಂದ ಕಳಕೊಳ್ಳಲು ಇಲ್ಲವೇ ಹತಾಶರಾಗಲು ಕಾರಣವಾಗುವ ಯಾವುದನ್ನೂ ನಾವು ಮಾಡಬಾರದು. ಬದಲಿಗೆ ಸಂತೋಷದಿಂದ ವಿಧೇಯತೆ ತೋರಿಸಬೇಕು. ಹೀಗೆ ‘ಅವರ ಕೆಲಸದ ನಿಮಿತ್ತ ನಾವು ಅವರಿಗೆ ಪ್ರೀತಿಯಿಂದ ಅತ್ಯಧಿಕ ಪರಿಗಣನೆ ತೋರಿಸುತ್ತೇವೆ.’—1 ಥೆಸ. 5:13.

ಇನ್ನಷ್ಟು ಹೆಚ್ಚಾಗಿ ಸಹೋದರ ಪ್ರೀತಿ ತೋರಿಸಿ

19, 20. ಸಹೋದರ ಪ್ರೀತಿಯನ್ನು ಹೇಗೆ ಹೆಚ್ಚೆಚ್ಚಾಗಿ ತೋರಿಸುತ್ತಾ ಇರಬಲ್ಲೆವು?

19 ಯೆಹೋವನ ಜನರು ಸಹೋದರ ಪ್ರೀತಿಗಾಗಿ ಪ್ರಸಿದ್ಧರು. ಪೌಲನ ದಿನಗಳಲ್ಲೂ ಹೀಗೆಯೇ ಇತ್ತು. ಆದರೂ ಆ ಪ್ರೀತಿಯನ್ನು ‘ಇನ್ನೂ ಹೆಚ್ಚು ಪೂರ್ಣವಾದ ರೀತಿಯಲ್ಲಿ ತೋರಿಸುತ್ತಾ ಮುಂದುವರಿಯುವಂತೆ’ ಪೌಲನು ಸಹೋದರರನ್ನು ಪ್ರೋತ್ಸಾಹಿಸಿದನು. (1 ಥೆಸ. 4:9, 10) ಈ ವಿಷಯದಲ್ಲಿ ಅಭಿವೃದ್ಧಿಮಾಡಲು ಅವಕಾಶ ಯಾವಾಗಲೂ ಇದ್ದೇ ಇರುತ್ತದೆ!

20 ಆದ್ದರಿಂದ ಈ ವರ್ಷ ನಮ್ಮ ರಾಜ್ಯ ಸಭಾಗೃಹದಲ್ಲಿ ಹಾಕಲಾಗಿರುವ ವರ್ಷವಚನವನ್ನು ನೋಡಿದಾಗ ಈ ಪ್ರಶ್ನೆಗಳ ಬಗ್ಗೆ ಧ್ಯಾನಿಸೋಣ: ನಾನು ಅತಿಥಿಸತ್ಕಾರ ಮಾಡುವುದನ್ನು ಹೇಗೆ ಹೆಚ್ಚಿಸಲಿ? ಸೆರೆಮನೆಯಲ್ಲಿರುವ ಸಹೋದರರಿಗೆ ಹೇಗೆ ಸಹಾಯಮಾಡಲಿ? ದೇವರು ಮಾಡಿರುವ ವಿವಾಹದ ಏರ್ಪಾಡಿಗೆ ಗೌರವ ತೋರಿಸುತ್ತಿದ್ದೇನಾ? ಇರುವುದರಲ್ಲೇ ತೃಪ್ತರಾಗಿರುವಂತೆ ನನಗೆ ಯಾವುದು ಸಹಾಯಮಾಡುವುದು? ಯೆಹೋವನ ಮೇಲೆ ಹೇಗೆ ಹೆಚ್ಚು ಭರವಸೆ ತೋರಿಸಬಲ್ಲೆ? ಮುಂದಾಳತ್ವ ವಹಿಸುವವರಿಗೆ ಹೆಚ್ಚು ವಿಧೇಯತೆ ತೋರಿಸುವುದು ಹೇಗೆ? ಈ 6 ಕ್ಷೇತ್ರಗಳಲ್ಲಿ ಅಭಿವೃದ್ಧಿಮಾಡಲು ಪ್ರಯಾಸಪಡೋಣ. ಆಗ, “ನಿಮ್ಮ ಸಹೋದರ ಪ್ರೀತಿಯು ಮುಂದುವರಿಯಲಿ” ಎಂಬ ವರ್ಷವಚನದ ಮಾತುಗಳು ಬರೀ ಗೋಡೆಯ ಮೇಲಿನ ಫಲಕದಲ್ಲಿ ಉಳಿಯದೆ ನಮ್ಮ ಜೀವನದಲ್ಲಿ ಪಾಲಿಸುವ ಮಾತುಗಳಾಗಿ ಇರುವವು!—ಇಬ್ರಿ. 13:1.

^ [1] (ಪ್ಯಾರ 9) ವಿಪತ್ತುಗಳ ಸಮಯದಲ್ಲಿ ಯೆಹೋವನ ಸಾಕ್ಷಿಗಳು ತೋರಿಸಿರುವ ಸಹೋದರ ಪ್ರೀತಿಯ ಉದಾಹರಣೆಗಳಿಗಾಗಿ ಜುಲೈ 15, 2002 ಕಾವಲಿನಬುರುಜು ಪುಟ 8-9 ನೋಡಿ.