ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ವಿವೇಕಿಗಳೊಂದಿಗೆ ಸಹವಾಸ ಮಾಡಿ ಪ್ರಯೋಜನ ಪಡೆದೆ

ವಿವೇಕಿಗಳೊಂದಿಗೆ ಸಹವಾಸ ಮಾಡಿ ಪ್ರಯೋಜನ ಪಡೆದೆ

ತುಂಬ ವರ್ಷಗಳ ಹಿಂದೆ ಅಮೆರಿಕದ ಸೌತ್‌ ಡಕೋಟ ಎಂಬ ರಾಜ್ಯದಲ್ಲಿರುವ ಬ್ರೂಕಿಂಗ್ಸ್‌ ಎಂಬಲ್ಲಿ ನಡೆದ ಘಟನೆ. ಬೆಳಗ್ಗಿನ ಜಾವ ಕೊರೆಯುವ ಚಳಿಯಲ್ಲಿ ನಾನು ಮತ್ತು ಕೆಲವರು ಒಂದು ಶೆಡ್ಡಿನಲ್ಲಿ ನಡುಗುತ್ತಾ ನಿಂತಿದ್ದೆವು. ಎಲ್ಲವೂ ಹೆಪ್ಪುಗಟ್ಟುವಂಥ ಹವಾಮಾನ ಬೇಗ ಬರುತ್ತಿದೆ ಅಂತ ಆ ಚಳಿಯಿಂದ ಗೊತ್ತಾಗುತ್ತಿತ್ತು. ನಮ್ಮ ಮುಂದೆ ಒಂದು ದೊಡ್ಡ ತೊಟ್ಟಿ ಇತ್ತು. ಅದರಲ್ಲಿರುವ ನೀರೂ ತಣ್ಣಗಿತ್ತು. ನಾನು ಯಾಕೆ ಅಲ್ಲಿ ನಿಂತಿದ್ದೆ ಅಂತ ಹೇಳುವ ಮುಂಚೆ ಸ್ವಲ್ಪ ನನ್ನ ಜೀವನದ ಬಗ್ಗೆ ಹೇಳುತ್ತೇನೆ.

ನನ್ನ ಕುಟುಂಬ

ಆಲ್ಫ್ರೆಡ್‌ ದೊಡ್ಡಪ್ಪ ಮತ್ತು ಅಪ್ಪ

ನಾನು ಹುಟ್ಟಿದ್ದು 1936ರ ಮಾರ್ಚ್‌ 7ರಂದು. ನನ್ನ ಅಪ್ಪಅಮ್ಮಗೆ ನಾಲ್ಕು ಮಕ್ಕಳು, ನಾನೇ ಕೊನೆಯವ. ಸೌತ್‌ ಡಕೋಟದ ಪೂರ್ವ ಭಾಗದಲ್ಲಿರುವ ಒಂದು ಚಿಕ್ಕ ತೋಟದಲ್ಲಿ ನಮ್ಮ ಮನೆ ಇತ್ತು. ವ್ಯವಸಾಯ ಮಾಡುತ್ತಿದ್ದೆವು, ದನಕರುಗಳನ್ನು ಸಾಕುತ್ತಿದ್ದೆವು. ಆದರೆ ಇದೇ ನಮ್ಮ ಜೀವನದಲ್ಲಿ ಸರ್ವಸ್ವ ಆಗಿರಲಿಲ್ಲ. ನನ್ನ ಹೆತ್ತವರು 1934ರಲ್ಲಿ ಯೆಹೋವನ ಸಾಕ್ಷಿಗಳಾಗಿ ದೀಕ್ಷಾಸ್ನಾನ ಪಡೆದಿದ್ದರು. ಯೆಹೋವನಿಗೆ ತಮ್ಮ ಜೀವನವನ್ನೇ ಸಮರ್ಪಣೆ ಮಾಡಿದ್ದರಿಂದ ಆತನ ಚಿತ್ತ ಮಾಡುವುದು ಅವರಿಗೆ ಅತಿ ಪ್ರಾಮುಖ್ಯವಾಗಿತ್ತು. ನನ್ನ ತಂದೆ ಕ್ಲಾರನ್ಸ್‌ ಮತ್ತು ನಂತರ ನನ್ನ ದೊಡ್ಡಪ್ಪ ಆಲ್ಫ್ರೆಡ್‌ ಸೌತ್‌ ಡಕೋಟದಲ್ಲಿದ್ದ ಕಾಂಡೀ ಎಂಬ ಚಿಕ್ಕ ಸಭೆಯಲ್ಲಿ ಕಂಪನಿ ಸರ್ವೆಂಟ್‌ (ಈಗ ಹಿರಿಯರ ಮಂಡಲಿಯ ಸಂಯೋಜಕ ಎಂದು ಕರೆಯಲಾಗುತ್ತದೆ) ಆಗಿ ಸೇವೆ ಮಾಡಿದರು.

ನಾವು ಕುಟುಂಬವಾಗಿ ಕೂಟಗಳಿಗೆ ತಪ್ಪದೆ ಹೋಗುತ್ತಿದ್ದೆವು. ಮನೆಮನೆ ಸೇವೆಗೂ ತಪ್ಪದೆ ಹೋಗಿ ಮಾನವಕುಲಕ್ಕೆ ಸಿಗಲಿರುವ ಅದ್ಭುತ ಭವಿಷ್ಯದ ಬಗ್ಗೆ ಜನರಿಗೆ ತಿಳಿಸುತ್ತಿದ್ದೆವು. ನನ್ನ ಹೆತ್ತವರ ಮಾದರಿಯಿಂದ ಮತ್ತು ಅವರು ಕೊಟ್ಟ ತರಬೇತಿಯಿಂದ ನಮಗೂ ಯೆಹೋವನ ಮೇಲೆ ಪ್ರೀತಿ ಬಂತು. ನಾನು ಮತ್ತು ನನ್ನ ಅಕ್ಕ ಡಾರಥಿ ಆರು ವರ್ಷ ಪ್ರಾಯದಲ್ಲಿ ರಾಜ್ಯ ಪ್ರಚಾರಕರಾದೆವು. 1943ರಲ್ಲಿ ನಾನು ‘ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ’ ಸೇರಿದೆ. ಆಗಷ್ಟೇ ಆ ಶಾಲೆ ಶುರುವಾಗಿತ್ತು.

1952ರಲ್ಲಿ ಪಯನೀಯರ್‌ ಸೇವೆಮಾಡುತ್ತಿದ್ದಾಗ

ಸಮ್ಮೇಳನ ಅಧಿವೇಶನಗಳಿಗೂ ನಮ್ಮ ಕುಟುಂಬ ತುಂಬ ಪ್ರಾಧಾನ್ಯತೆ ಕೊಡುತ್ತಿತ್ತು. 1949ರಲ್ಲಿ ಸೌತ್‌ ಡಕೋಟದ ಸೂ ಫಾಲ್ಸ್‌ನಲ್ಲಿ ನಡೆದ ಅಧಿವೇಶನ ನನಗೆ ಈಗಲೂ ನೆನಪಿದೆ. ಸಹೋದರ ಗ್ರಾಂಟ್‌ ಸೂಟರ್‌ ಅವರು “ಅಂತ್ಯ ನೀವು ನೆನಸುವುದಕ್ಕಿಂತ ಹತ್ತಿರ ಇದೆ!” ಎಂಬ ಭಾಷಣ ಕೊಟ್ಟರು. ಸಮರ್ಪಣೆ ಮಾಡಿಕೊಂಡಿರುವ ಎಲ್ಲಾ ಕ್ರೈಸ್ತರು ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ತಮ್ಮ ಜೀವನವನ್ನು ಮುಡಿಪಾಗಿಡಬೇಕೆಂದು ಅವರು ಒತ್ತಿ ಹೇಳಿದರು. ಅದರ ನಂತರ ನನ್ನ ಜೀವನವನ್ನು ಯೆಹೋವನಿಗೆ ಸಮರ್ಪಣೆ ಮಾಡಿಕೊಂಡೆ. ಅದೇ ವರ್ಷ ನವೆಂಬರ್‌ 12ರಂದು ಬ್ರೂಕಿಂಗ್ಸ್‌ನಲ್ಲಿ ನಡೆದ ಸರ್ಕಿಟ್‌ ಸಮ್ಮೇಳನದಲ್ಲಿ ದೀಕ್ಷಾಸ್ನಾನ ತೆಗೆದುಕೊಂಡೆ. ನಾನು ಆರಂಭದಲ್ಲಿ ತಿಳಿಸಿದ ಆ ಶೆಡ್ಡಿನಲ್ಲಿ ಯಾಕೆ ನಿಂತಿದ್ದೆ ಅಂತ ಈಗ ಗೊತ್ತಾಯಿತಾ? ಉಕ್ಕಿನಿಂದ ಮಾಡಲಾಗಿದ್ದ ಆ ದೊಡ್ಡ ತೊಟ್ಟಿಯಲ್ಲಿ ದೀಕ್ಷಾಸ್ನಾನ ಪಡೆಯಲು ನಾವು ನಾಲ್ಕು ಮಂದಿ ತಯಾರಾಗಿ ನಿಂತಿದ್ದೆವು.

ಅನಂತರ ನಾನು ಪಯನೀಯರ್‌ ಆಗಬೇಕೆಂದು ನಿರ್ಧರಿಸಿದೆ. 1952ರ ಜನವರಿ 1ರಂದು ಪಯನೀಯರ್‌ ಸೇವೆ ಆರಂಭಿಸಿದೆ. ಆಗ ನನಗೆ 15 ವರ್ಷ. ಬೈಬಲು ವಿವೇಕಿಗಳ ಅಥವಾ “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು” ಎಂದು ಹೇಳುತ್ತದೆ. (ಜ್ಞಾನೋ. 13:20) ನನ್ನ ಕುಟುಂಬದಲ್ಲೂ ಅನೇಕ ವಿವೇಕಿಗಳಿದ್ದರು. ಹಾಗಾಗಿ ಪಯನೀಯರ್‌ ಆಗಬೇಕೆಂಬ ನನ್ನ ನಿರ್ಧಾರವನ್ನು ಬೆಂಬಲಿಸಿದರು. ದೊಡ್ಡಪ್ಪ ಜೂಲ್ಯಸ್‌ ಜೊತೆ ನಾನು ತುಂಬ ಸಾರಿ ಸೇವೆಗೆ ಹೋಗಿದ್ದೇನೆ. ಆಗ ಅವರಿಗೆ 60 ವರ್ಷ. ನನಗೂ ಅವರಿಗೂ ವಯಸ್ಸಿನಲ್ಲಿ ತುಂಬ ವ್ಯತ್ಯಾಸ ಇದ್ದರೂ ಒಟ್ಟಿಗೆ ಸೇವೆಗೆ ಹೋಗುವುದೆಂದರೆ ನಮ್ಮಿಬ್ಬರಿಗೂ ತುಂಬ ಇಷ್ಟ ಆಗುತ್ತಿತ್ತು. ಅವರಿಂದ ಮತ್ತು ಜೀವನದಲ್ಲಿ ಅವರಿಗಾಗಿರುವ ಅನುಭವದಿಂದ ನಾನು ತುಂಬ ಕಲಿಯಲಿಕ್ಕಾಯಿತು. ಅಕ್ಕ ಡಾರಥಿ ಸಹ ಸ್ವಲ್ಪ ಸಮಯದಲ್ಲೇ ಪಯನೀಯರ್‌ ಆದಳು.

ಸರ್ಕಿಟ್‌ ಮೇಲ್ವಿಚಾರಕರು ತೋರಿಸಿದ ಕಾಳಜಿ

ನಾನು ಚಿಕ್ಕವನಿದ್ದಾಗ, ಸರ್ಕಿಟ್‌ ಮೇಲ್ವಿಚಾರಕರು ನಮ್ಮ ಮನೆಯಲ್ಲಿ ಉಳುಕೊಳ್ಳಲು ಏರ್ಪಾಡುಗಳನ್ನು ಅಪ್ಪಅಮ್ಮ ಮಾಡುತ್ತಿದ್ದರು. ಹೀಗೆ ಬಂದವರಲ್ಲಿ ಸಹೋದರ ಜೆಸ್ಸಿ ಮತ್ತು ಅವರ ಪತ್ನಿ ಲಿನ್‌ ಕಾಂಟ್‌ವೆಲ್‌ ನನಗೆ ತುಂಬ ಸಹಾಯ ಮಾಡಿದರು. ಅವರಿಗೆ ನನ್ನ ಬಗ್ಗೆ ಕಾಳಜಿ ಇತ್ತು. ತುಂಬ ಪ್ರೋತ್ಸಾಹಿಸಿದರು. ಅಕ್ಕಪಕ್ಕದ ಸಭೆಗಳಿಗೆ ಭೇಟಿ ನೀಡುತ್ತಿದ್ದಾಗಲೂ ನನ್ನನ್ನು ಸೇವೆಗೆ ಕರೆದುಕೊಂಡು ಹೋಗುತ್ತಿದ್ದರು. ನಾನು ಅವರೊಂದಿಗೆ ಕಳೆದ ಸಮಯ ತುಂಬ ಚೆನ್ನಾಗಿತ್ತು. ನನಗೂ ಅವರಂತೆ ಯೆಹೋವನ ಸೇವೆಯಲ್ಲಿ ಕಾರ್ಯಮಗ್ನನಾಗಿರಬೇಕು, ಪಯನೀಯರ್‌ ಸೇವೆ ಮಾಡಬೇಕು ಅಂತ ಅನಿಸಿತು.

ನಂತರ ಸಹೋದರ ಬಡ್‌ ಮಿಲ್ಲರ್‌ ನಮ್ಮ ಸರ್ಕಿಟ್‌ ಮೇಲ್ವಿಚಾರಕರಾಗಿ ಬಂದರು. ಅವರು ಮತ್ತು ಅವರ ಪತ್ನಿ ಜೋನ್‌ ನಮ್ಮ ಸಭೆಗೆ ಭೇಟಿ ನೀಡಿದಾಗ ನನಗೆ 18 ವರ್ಷ. ಆಗ ಮಿಲಿಟರಿಗೆ ವ್ಯಕ್ತಿಗಳನ್ನು ಆಯ್ಕೆಮಾಡುವ ಸಮಿತಿಯ ಮುಂದೆ ನಾನು ಹಾಜರಾಗಬೇಕಿತ್ತು. ನಾನು ಮಾಡಬೇಕೆಂದು ಅವರು ಹೇಳಿದ ಕೆಲಸ, ರಾಜಕೀಯ ವಿಷಯದಲ್ಲಿ ತಟಸ್ಥರಾಗಿರಬೇಕೆಂದು ಯೇಸು ಕೊಟ್ಟ ಆಜ್ಞೆಗೆ ವಿರುದ್ಧವಾಗಿತ್ತು ಎಂದು ನನಗನಿಸಿತು. ನನಗಂತೂ ದೇವರ ರಾಜ್ಯದ ಸುವಾರ್ತೆ ಸಾರಬೇಕೆಂಬ ಆಸೆ ಇತ್ತು. (ಯೋಹಾ. 15:19) ಆದ್ದರಿಂದ ನನ್ನನ್ನು ಧಾರ್ಮಿಕ ಪ್ರಚಾರಕನಾಗಿ ಪರಿಗಣಿಸಬೇಕೆಂದು ಮನವಿ ಮಾಡಿದೆ.

ಈ ಸಮಿತಿಯ ಮುಂದೆ ಹಾಜರಾಗಲಿಕ್ಕಿದ್ದಾಗ, ಸಹೋದರ ಮಿಲ್ಲರ್‌ ‘ನಾನೂ ನಿನ್ನ ಜೊತೆ ಬರ್ತೇನೆ’ ಎಂದು ಹೇಳಿದಾಗ ನನಗೆ ಸಂತೋಷವಾಯಿತು. ಅವರು ತುಂಬ ಧೈರ್ಯಶಾಲಿ. ಮನುಷ್ಯರ ಭಯ ಇರಲಿಲ್ಲ. ಅವರಿಗೆ ಬೈಬಲ್‌ ವಚನಗಳು ಕೂಡ ತುಂಬ ಚೆನ್ನಾಗಿ ಗೊತ್ತಿತ್ತು. ಅವರು ನನ್ನ ಜೊತೆ ಬಂದಾಗ ನನಗೆ ತುಂಬ ಧೈರ್ಯ ಸಿಕ್ಕಿತು. 1954ರ ಬೇಸಗೆಕಾಲ ಮುಗಿಯಲಿಕ್ಕಿದ್ದಾಗ ಸಮಿತಿ ನನ್ನ ಮನವಿಯನ್ನು ಸ್ವೀಕರಿಸಿ ನನ್ನನ್ನು ಒಬ್ಬ ಧಾರ್ಮಿಕ ಪ್ರಚಾರಕನಾಗಿ ಪರಿಗಣಿಸಿತು. ಇದರಿಂದ ನಾನು ಯಾವುದೇ ಅಡ್ಡಿತಡೆಯಿಲ್ಲದೆ ಯೆಹೋವನ ಸೇವೆಯನ್ನು ಹೆಚ್ಚು ಮಾಡಲಿಕ್ಕಾಯಿತು.

ಬೆತೆಲಿಗೆ ಸೇರಿದ ಹೊಸದರಲ್ಲಿ, ಫಾರ್ಮ್‌ ಟ್ರಕ್‌ ಪಕ್ಕದಲ್ಲಿ

ಇದಾಗಿ ಸ್ವಲ್ಪದರಲ್ಲೇ ನನಗೆ ಬೆತೆಲ್‌ ಸೇವೆಯ ಆಮಂತ್ರಣ ಸಿಕ್ಕಿತು. ನ್ಯೂಯಾರ್ಕ್‌ನ ಸ್ಟೇಟನ್‌ ಐಲ್ಯಾಂಡ್‌ನಲ್ಲಿದ್ದ ವಾಚ್‌ಟವರ್‌ ಫಾರ್ಮ್‌ಗೆ ಬರುವಂತೆ ಹೇಳಲಾಯಿತು. ಅಲ್ಲಿ ನಾನು ಸುಮಾರು ಮೂರು ವರ್ಷ ಸೇವೆ ಮಾಡಿದೆ. ಅಲ್ಲಿದ್ದಾಗ ವಿವೇಕಿಗಳಾಗಿದ್ದ ಅನೇಕ ಸಹೋದರ ಸಹೋದರಿಯರ ಪರಿಚಯವಾಯಿತು, ಅವರೊಂದಿಗೆ ಕೆಲಸಮಾಡಲು ಸಾಧ್ಯವಾಯಿತು. ಅವರಿಂದ ಎಷ್ಟೋ ವಿಷಯಗಳನ್ನು ಕಲಿಯಲಿಕ್ಕಾಯಿತು.

ಬೆತೆಲ್‌ ಸೇವೆ

ಸೊಸೈಟಿಯ ರೇಡಿಯೋ ಸ್ಟೇಷನ್‌ ಹತ್ತಿರ, ಸಹೋದರ ಫ್ರಾನ್ಸ್‌ ಜೊತೆ

ಸ್ಟೇಟನ್‌ ಐಲ್ಯಾಂಡ್‌ನಲ್ಲಿದ್ದ ಫಾರ್ಮ್‌ನಲ್ಲಿ ಸೊಸೈಟಿಯ ರೇಡಿಯೋ ಸ್ಟೇಷನ್‌ (WBBR) ಸಹ ಇತ್ತು. ಇದನ್ನು ಯೆಹೋವನ ಸಾಕ್ಷಿಗಳು 1924ರಿಂದ 1957ರ ವರೆಗೆ ಬಳಸುತ್ತಿದ್ದರು. ಬೆತೆಲ್‌ ಕುಟುಂಬದ 15ರಿಂದ 20 ಮಂದಿಯನ್ನು ಮಾತ್ರ ಫಾರ್ಮ್‌ನಲ್ಲಿ ಕೆಲಸಮಾಡಲು ನೇಮಿಸಲಾಗಿತ್ತು. ಅಲ್ಲಿ ಹೆಚ್ಚಿನವರು ಯುವ ಪ್ರಾಯದವರು, ಅನುಭವ ಇಲ್ಲದವರು. ಆದರೆ ವಯಸ್ಸಾಗಿದ್ದ ಒಬ್ಬ ಅಭಿಷಿಕ್ತ ಸಹೋದರ ನಮ್ಮ ಜೊತೆ ಕೆಲಸ ಮಾಡುತ್ತಿದ್ದರು. ಅವರ ಹೆಸರು ಎಲ್ಡನ್‌ ವುಡ್‌ವರ್ತ್‌. ಅವರು ನಮ್ಮೆಲ್ಲರಿಗೆ ತಂದೆ ತರ ಇದ್ದರು. ಎಷ್ಟೋ ವಿಷಯಗಳನ್ನು ಕಲಿಸಿಕೊಟ್ಟರು. ಕೆಲವೊಮ್ಮೆ ನಮ್ಮ ಮಧ್ಯೆ ಏನಾದರೂ ಸಮಸ್ಯೆ ಆಗಿಬಿಟ್ಟರೆ, “ತನ್ನ ಸೇವೆಯಲ್ಲಿ ಯೆಹೋವನು ಉಪಯೋಗಿಸುವ ಜನರಲ್ಲಿ ಅಪರಿಪೂರ್ಣತೆಗಳಿದ್ದರೂ ಅವರ ಮೂಲಕ ಸಾಧಿಸುತ್ತಿರುವ ಕೆಲಸ ಅದ್ಭುತ” ಎಂದು ಸಹೋದರ ವುಡ್‌ವರ್ತ್‌ ಹೇಳುತ್ತಿದ್ದರು.

ಹ್ಯಾರಿ ಪೀಟರ್‌ಸನ್‌ರಿಗೆ ಸಾರುವ ಕೆಲಸ ತುಂಬ ಇಷ್ಟ

ಸಹೋದರ ಫ್ರೆಡ್ರಿಕ್‌ ಡಬ್ಲ್ಯು. ಫ್ರಾನ್ಸ್‌ ಸಹ ನಮ್ಮೊಂದಿಗಿದ್ದರು. ನಮ್ಮೆಲ್ಲರಿಗೆ ಸಹಾಯ ಮಾಡುತ್ತಿದ್ದರು. ಅವರೂ ವಿವೇಕಿಯಾಗಿದ್ದರು. ಅವರಿಗೆ ಬೈಬಲ್‌ ಬಗ್ಗೆ ಚೆನ್ನಾಗಿ ಗೊತ್ತಿತ್ತು. ನಮ್ಮೆಲ್ಲರ ಬಗ್ಗೆ ಅವರಿಗೆ ಕಾಳಜಿ ಇತ್ತು. ಸಹೋದರ ಹ್ಯಾರಿ ಪೀಟರ್‌ಸನ್‌ ನಮ್ಮ ಅಡಿಗೆಭಟ್ಟರಾಗಿದ್ದರು. ಅವರ ಹೆಸರು ಪೀಟರ್‌ಸನ್‌ ಅಲ್ಲ, ಪಾಪಾರ್ಯೀರೊಪುಲೊಸ್‌. ನಮಗೆ ಪೀಟರ್‌ಸನ್‌ ಅಂತ ಕರೆಯುವುದು ಸುಲಭವಾಗಿತ್ತು. ಇವರು ಸಹ ಅಭಿಷಿಕ್ತರಾಗಿದ್ದರು. ಸೇವೆಗೆ ಹೋಗುವುದೆಂದರೆ ಇವರಿಗೆ ಪಂಚಪ್ರಾಣ. ಬೆತೆಲ್‌ನಲ್ಲಿ ತಮ್ಮ ಕೆಲಸವನ್ನು ಚೆನ್ನಾಗಿಯೇ ಮಾಡುತ್ತಿದ್ದರು. ಸೇವೆಗೂ ತಪ್ಪದೆ ಹೋಗುತ್ತಿದ್ದರು. ಪ್ರತಿ ತಿಂಗಳು ನೂರಾರು ಪತ್ರಿಕೆಗಳನ್ನು ಕೊಡುತ್ತಿದ್ದರು. ಇವರಿಗೂ ಬೈಬಲ್‌ ಬಗ್ಗೆ ಚೆನ್ನಾಗಿ ಗೊತ್ತಿತ್ತು. ನಾವು ಕೇಳುತ್ತಿದ್ದ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರು.

ವಿವೇಕಿಗಳಾದ ಸಹೋದರಿಯರಿಂದ ಕಲಿತೆ

ಚಳಿಗಾಲದಲ್ಲಿ ಉಪಯೋಗಿಸಲಿಕ್ಕಾಗಿ ಫಾರ್ಮ್‌ನಲ್ಲಿ ಬೆಳೆದ ಹಣ್ಣು ತರಕಾರಿಗಳನ್ನು ಉಪ್ಪಿನಕಾಯಿ ಮತ್ತು ಜ್ಯಾಮ್‌ ಮಾಡಿ ಇಡುತ್ತಿದ್ದೆವು. ವರ್ಷಕ್ಕೆ ಒಂದು ಲೀಟರಿನ 45,000 ಡಬ್ಬಿಗಳಲ್ಲಿ ಇದನ್ನು ತುಂಬಿಸಿ ಬೆತೆಲ್‌ ಕುಟುಂಬಕ್ಕೆ ಕಳುಹಿಸುತ್ತಿದ್ದೆವು. ನಾನು ಎಟಾ ಹತ್‌ ಎಂಬ ಸಹೋದರಿಯೊಟ್ಟಿಗೆ ಕೆಲಸ ಮಾಡುತ್ತಿದ್ದೆ. ಅವರು ತುಂಬ ವಿವೇಕಿ. ಉಪ್ಪಿನಕಾಯಿ ಮತ್ತು ಜ್ಯಾಮ್‌ ಮಾಡುವುದು ಹೇಗೆ ಎಂದು ಅವರೇ ಹೇಳಿ ಕೊಡುತ್ತಿದ್ದರು. ಹತ್ತಿರದ ಸಭೆಗಳಲ್ಲಿದ್ದ ಸಹೋದರಿಯರು ಬಂದು ನಮಗೆ ಸಹಾಯ ಮಾಡುತ್ತಿದ್ದರು. ಸಹೋದರಿ ಎಟಾ ಈ ಸಹೋದರಿಯರಿಗೆ ಕೆಲಸ ಕೊಡುತ್ತಿದ್ದರು. ಸಹೋದರಿ ಎಟಾಗೆ ಉಪ್ಪಿನಕಾಯಿ ಮತ್ತು ಜ್ಯಾಮ್‌ ಮಾಡಲು ಚೆನ್ನಾಗಿ ಗೊತ್ತಿದ್ದರೂ ಫಾರ್ಮ್‌ನ ಮೇಲ್ವಿಚಾರಣೆ ಮಾಡುತ್ತಿದ್ದ ಸಹೋದರರ ಮಾತನ್ನು ಯಾವಾಗಲೂ ಕೇಳುತ್ತಿದ್ದರು. ಅವರು ನಮ್ಮೆಲ್ಲರಿಗೂ ಒಳ್ಳೇ ಮಾದರಿ ಆಗಿದ್ದರು.

ಆ್ಯಂಜಲ ಮತ್ತು ನಾನು, ಸಹೋದರಿ ಎಟಾ ಹತ್‌ ಜೊತೆ

ಫಾರ್ಮ್‌ನಲ್ಲಿ ಸಹಾಯ ಮಾಡಲು ಬರುತ್ತಿದ್ದ ಯುವ ಸಹೋದರಿಯರಲ್ಲಿ ಆ್ಯಂಜಲ ರೊಮಾನೊ ಒಬ್ಬರು. ಇವರು ಸತ್ಯಕ್ಕೆ ಬಂದಾಗ ಸಹೋದರಿ ಎಟಾ ತುಂಬ ಸಹಾಯ ಮಾಡಿದ್ದರು. ನಾನು ಆ್ಯಂಜೀಯನ್ನು 1958ರ ಏಪ್ರಿಲ್‌ ತಿಂಗಳಲ್ಲಿ ಮದುವೆಯಾದೆ. 58 ವರ್ಷಗಳಿಂದ ನಾವು ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡುತ್ತಿದ್ದೇವೆ. ಇಷ್ಟು ವರ್ಷಗಳಲ್ಲಿ ಆ್ಯಂಜೀ ಯೆಹೋವನಿಗೆ ತೋರಿಸಿದ ನಿಷ್ಠೆಯಿಂದಾಗಿ ನಮ್ಮ ವಿವಾಹಬಂಧ ಬಲವಾಗಿದೆ. ಆ್ಯಂಜೀ ಸಹ ತುಂಬ ವಿವೇಕಿ. ಏನೇ ತೊಂದರೆ ಎದುರಾದರೂ ಅವಳು ಅದನ್ನು ಚೆನ್ನಾಗಿ ನಿಭಾಯಿಸುತ್ತಾಳೆ ಅನ್ನುವ ಭರವಸೆ ನನಗಿದೆ.

ಮಿಷನರಿ ನೇಮಕ ಮತ್ತು ಸಂಚರಣ ಕೆಲಸ

1957ರಲ್ಲಿ ಸಹೋದರರು ಸ್ಟೇಟನ್‌ ಐಲ್ಯಾಂಡ್‌ನಲ್ಲಿದ್ದ ರೇಡಿಯೋ ಸ್ಟೇಷನ್‌ ಅನ್ನು ಮಾರಿದಾಗ ನಾನು ಸ್ವಲ್ಪ ಸಮಯದ ವರೆಗೆ ಬ್ರೂಕ್ಲಿನ್‌ ಬೆತೆಲಿನಲ್ಲಿ ಸೇವೆ ಮಾಡಿದೆ. ಆಮೇಲೆ ಆ್ಯಂಜೀಯನ್ನು ಮದುವೆಯಾದಾಗ ಬೆತೆಲ್‌ ಬಿಡಬೇಕಾಯಿತು. ಮೂರು ವರ್ಷ ನಾವು ಸ್ಟೇಟನ್‌ ಐಲ್ಯಾಂಡ್‌ನಲ್ಲಿ ಪಯನೀಯರ್‌ ಸೇವೆ ಮಾಡಿದೆವು. ಸೊಸೈಟಿಯ ರೇಡಿಯೋ ಸ್ಟೇಷನ್‌ ಅನ್ನು ಖರೀದಿಸಿದ್ದ ಹೊಸ ಮಾಲೀಕರ ಹತ್ತಿರ ನಾನು ಸ್ವಲ್ಪ ಸಮಯ ಕೆಲಸಕ್ಕಿದ್ದೆ. ಆ ರೇಡಿಯೋ ಸ್ಟೇಷನ್‌ ಅನ್ನು WPOW ಎಂದು ಕರೆಯಲಾಯಿತು.

ಎಲ್ಲಿ ಬೇಕಿದ್ದರೂ ಹೋಗಿ ಸೇವೆ ಮಾಡಲು ಸಾಧ್ಯವಾಗುವಂತೆ ನಾವು ಜೀವನವನ್ನು ಸರಳವಾಗಿಟ್ಟೆವು. ಹಾಗಾಗಿ 1961ರಲ್ಲಿ ವಿಶೇಷ ಪಯನೀಯರರಾಗಿ ನೆಬ್ರಾಸ್ಕದಲ್ಲಿರುವ ಫಾಲ್ಸ್‌ ಸಿಟಿಗೆ ಹೋಗುವಂತೆ ಹೇಳಲಾದಾಗ ಸಂತೋಷದಿಂದ ಹೋದೆವು. ನಾವು ಇಲ್ಲಿಗೆ ಬಂದ ಸ್ವಲ್ಪದರಲ್ಲೇ ನ್ಯೂಯಾರ್ಕ್‌ನ ಸೌತ್‌ ಲ್ಯಾನ್ಸಿಂಗ್‌ನಲ್ಲಿ ನಡೆಯಲಿದ್ದ ‘ರಾಜ್ಯ ಶುಶ್ರೂಷಾ ಶಾಲೆ’ಗೆ ಹೋಗುವ ಆಮಂತ್ರಣ ಸಿಕ್ಕಿತು. ಈ ಶಾಲೆಯಲ್ಲಿ ಸಿಕ್ಕಿದ ತರಬೇತಿ ತುಂಬ ಚೆನ್ನಾಗಿತ್ತು. ಶಾಲೆ ಮುಕ್ತಾಯಗೊಂಡ ಮೇಲೆ ನಾವು ಪುನಃ ನೆಬ್ರಾಸ್ಕಕ್ಕೆ ಹೋಗುತ್ತೇವೆ ಅಂದುಕೊಂಡಿದ್ದೆವು. ಆದರೆ ಕಾಂಬೋಡಿಯದಲ್ಲಿ ಮಿಷನರಿಗಳಾಗಿ ಸೇವೆ ಮಾಡುವ ಹೊಸ ನೇಮಕ ಸಿಕ್ಕಿತು! ಆಗ್ನೇಯ ಏಷ್ಯಾದಲ್ಲಿರುವ ಈ ಸುಂದರ ದೇಶದಲ್ಲಿ ನೋಡಿದ, ಕೇಳಿಸಿಕೊಂಡ ವಿಷಯಗಳು ಮತ್ತು ತಿಂದ ಆಹಾರ ಹೊಸದಾಗಿತ್ತು. ಅಲ್ಲಿನ ಜನರಿಗೆ ರಾಜ್ಯದ ಸುವಾರ್ತೆ ಸಾರಲು ನಮಗೆ ತುಂಬ ಮನಸ್ಸಿತ್ತು.

ನಂತರ ಕಾಂಬೋಡಿಯದಲ್ಲಿ ರಾಜಕೀಯ ಸನ್ನಿವೇಶ ಬದಲಾಯಿತು. ನಾವು ದಕ್ಷಿಣ ವಿಯೆಟ್ನಾಮ್‌ಗೆ ಹೋಗಬೇಕಾಯಿತು. ದುಃಖದ ಸಂಗತಿ ಏನೆಂದರೆ, ನಾವಲ್ಲಿ ಎರಡು ವರ್ಷ ಇದ್ದ ಮೇಲೆ ನನ್ನ ಆರೋಗ್ಯ ತುಂಬ ಕೆಟ್ಟುಹೋಯಿತು. ನಾವು ಅಮೆರಿಕಕ್ಕೆ ಹಿಂದಿರುಗಬೇಕಾಯಿತು. ಆರೋಗ್ಯ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಿತ್ತು. ಚೇತರಿಸಿಕೊಂಡ ನಂತರ ನಾವು ಪುನಃ ಪಯನೀಯರ್‌ ಸೇವೆ ಆರಂಭಿಸಿದೆವು.

1975ರಲ್ಲಿ ನಾನು ಮತ್ತು ಆ್ಯಂಜಲ, ಒಂದು ಟಿವಿ ಸಂದರ್ಶನ ಕೊಡುವ ಮುಂಚೆ

1965ರ ಮಾರ್ಚ್‌ ತಿಂಗಳಿಂದ ನಾವು ಸಂಚರಣ ಕೆಲಸ ಆರಂಭಿಸಿದೆವು. ಸರ್ಕಿಟ್‌ ಮತ್ತು ಜಿಲ್ಲಾ ಮೇಲ್ವಿಚಾರಕನಾಗಿ ನಾನು 33 ವರ್ಷ ಸೇವೆ ಮಾಡಿದೆ. ಅಧಿವೇಶನಗಳಿಗಾಗಿ ಏರ್ಪಾಡು ಮಾಡಲು ಸಹಾಯ ಮಾಡಿದೆ. ಇದನ್ನು ತುಂಬ ಆನಂದಿಸಿದೆ. ಏಕೆಂದರೆ ಚಿಕ್ಕಂದಿನಿಂದಲೇ ನನಗೆ ಅಧಿವೇಶನಗಳೆಂದರೆ ತುಂಬ ಇಷ್ಟ. ಕೆಲವು ವರ್ಷಗಳ ತನಕ ನಾವು ನ್ಯೂಯಾರ್ಕ್‌ ನಗರದಲ್ಲಿರುವ ಮತ್ತು ಅದರ ಸುತ್ತಲಿರುವ ಸಭೆಗಳನ್ನು ಭೇಟಿ ಮಾಡಿದೆವು. ಅಧಿವೇಶನಗಳನ್ನು ಹೆಚ್ಚಾಗಿ ಯಾಂಕೀ ಸ್ಟೇಡಿಯಂನಲ್ಲಿ ನಡೆಸಲಾಗುತ್ತಿತ್ತು.

ಪುನಃ ಬೆತೆಲಿಗೆ ಬಂದೆವು ಮತ್ತು ದೇವಪ್ರಭುತ್ವಾತ್ಮಕ ಶಾಲೆಗಳು

ನನಗೆ ಮತ್ತು ಆ್ಯಂಜೀಗೆ ಇಷ್ಟು ವರ್ಷಗಳಲ್ಲಿ ಅನೇಕ ಹೊಸ ನೇಮಕಗಳು ಸಿಕ್ಕಿದವು. ಇದರಿಂದ ಹೊಸ ಸವಾಲುಗಳನ್ನು ಎದುರಿಸಿದೆವು. 1995ರಲ್ಲಿ ‘ಶುಶ್ರೂಷಾ ತರಬೇತಿ ಶಾಲೆ’ಯಲ್ಲಿ ಶಿಕ್ಷಕನಾಗಿ ನೇಮಕ ಸಿಕ್ಕಿತು. ಮೂರು ವರ್ಷಗಳಾದ ಮೇಲೆ ನಮ್ಮನ್ನು ಬೆತೆಲಿಗೆ ಕರೆಯಲಾಯಿತು. 40 ವರ್ಷಗಳ ಹಿಂದೆ ನಾನು ನನ್ನ ಪೂರ್ಣ ಸಮಯದ ಸೇವೆಯನ್ನು ಬೆತೆಲಿನಲ್ಲೇ ಆರಂಭಿಸಿದ್ದೆ. ಈಗ ಪುನಃ ಬೆತೆಲಿಗೆ ಬಂದಿರುವುದರಿಂದ ಸಂತೋಷವಾಯಿತು. ಸ್ವಲ್ಪ ಸಮಯ ಸರ್ವಿಸ್‌ ಡಿಪಾರ್ಟ್‌ಮಂಟ್‌ನಲ್ಲಿ ಕೆಲಸ ಮಾಡಿದೆ. ಸಂಘಟನೆ ಏರ್ಪಡಿಸಿದ ಅನೇಕ ಶಾಲೆಗಳಲ್ಲೂ ಶಿಕ್ಷಕನಾಗಿ ಕೆಲಸ ಮಾಡಿದೆ. 2007ರಲ್ಲಿ ಆಡಳಿತ ಮಂಡಲಿ ಬೆತೆಲಿನಲ್ಲಿ ನಡೆಸಲಾಗುವ ಎಲ್ಲ ಶಾಲೆಗಳನ್ನು ನೋಡಿಕೊಳ್ಳಲು ದೇವಪ್ರಭುತ್ವಾತ್ಮಕ ಶಾಲೆಗಳ ಇಲಾಖೆಯನ್ನು ಸ್ಥಾಪಿಸಿತು. ಕೆಲವು ವರ್ಷ ನಾನು ಈ ಇಲಾಖೆಯ ಮೇಲ್ವಿಚಾರಕನಾಗಿದ್ದೆ.

ಇತ್ತೀಚೆಗೆ ಬೆತೆಲಿನಲ್ಲಿ ನಡೆಸಲಾಗುವ ಶಾಲೆಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಸಭಾ ಹಿರಿಯರಿಗಾಗಿರುವ ಶಾಲೆ 2008ರಲ್ಲಿ ಶುರುವಾಯಿತು. ನಂತರ ಎರಡು ವರ್ಷಗಳಲ್ಲಿ 12,000ಕ್ಕಿಂತ ಹೆಚ್ಚಿನ ಹಿರಿಯರು ಪ್ಯಾಟರ್‌ಸನ್‌ ಮತ್ತು ಬ್ರೂಕ್ಲಿನ್‌ ಬೆತೆಲಿನಲ್ಲಿ ತರಬೇತಿ ಪಡೆದರು. ಈಗ ಈ ಶಾಲೆಯನ್ನು ಅನೇಕ ಕಡೆಗಳಲ್ಲಿ ನಡೆಸಲಾಗುತ್ತಿದೆ. 2010ರಲ್ಲಿ ‘ಶುಶ್ರೂಷಾ ತರಬೇತಿ ಶಾಲೆ’ಯ ಹೆಸರನ್ನು ‘ಅವಿವಾಹಿತ ಸಹೋದರರಿಗಾಗಿ ಬೈಬಲ್‌ ಶಾಲೆ’ ಎಂದು ಬದಲಾಯಿಸಲಾಯಿತು. ‘ಕ್ರೈಸ್ತ ದಂಪತಿಗಳಿಗಾಗಿ ಬೈಬಲ್‌ ಶಾಲೆ’ ಎಂಬ ಹೊಸ ಶಾಲೆಯನ್ನೂ ಆರಂಭಿಸಲಾಯಿತು.

2014ರ ಸೆಪ್ಟೆಂಬರ್‌ನಲ್ಲಿ ಈ ಎರಡೂ ಶಾಲೆಗಳನ್ನು ಒಂದುಮಾಡಿ ‘ರಾಜ್ಯ ಪ್ರಚಾರಕರ ಶಾಲೆ’ ಎಂದು ಹೆಸರಿಡಲಾಯಿತು. ಈ ಶಾಲೆಗೆ ದಂಪತಿಗಳೂ ಹಾಜರಾಗಬಹುದು, ಅವಿವಾಹಿತ ಸಹೋದರ ಸಹೋದರಿಯರೂ ಹಾಜರಾಗಬಹುದು. ಬೇರೆ ದೇಶಗಳಲ್ಲೂ ಈ ಶಾಲೆಯನ್ನು ನಡೆಸಲಾಗುತ್ತದೆ ಎಂಬ ಸುದ್ದಿ ಕೇಳಿ ಲೋಕವ್ಯಾಪಕವಾಗಿ ಅನೇಕರು ಪುಳಕಿತಗೊಂಡರು. ತುಂಬ ಮಂದಿಗೆ ಈ ಶಾಲೆಗೆ ಹಾಜರಾಗುವ ಅವಕಾಶ ಸಿಗಲಿದೆ ಎಂದು ನೆನಸುವಾಗ ತುಂಬ ಖುಷಿಯಾಗುತ್ತದೆ. ಈ ತರಬೇತಿಯನ್ನು ಪಡೆಯಲು ತಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದ ಎಷ್ಟೋ ಮಂದಿಯನ್ನು ಭೇಟಿಮಾಡಲು ಸಾಧ್ಯವಾಗಿದೆ. ಇದಕ್ಕೆ ನಾನು ತುಂಬ ಆಭಾರಿ.

ತಣ್ಣಗಿದ್ದ ಆ ತೊಟ್ಟಿಯಲ್ಲಿ ದೀಕ್ಷಾಸ್ನಾನ ಪಡೆಯುವುದಕ್ಕೆ ಮುಂಚಿನಿಂದ ಈಗಿನ ತನಕ ನನಗೆ ನನ್ನ ಜೀವನದಲ್ಲಿ ಎಷ್ಟೋ ಮಂದಿ ವಿವೇಕಿಗಳು ಸಿಕ್ಕಿದ್ದಾರೆ. ಇದಕ್ಕೆ ನಾನು ಯೆಹೋವನಿಗೆ ಕೃತಜ್ಞತೆ ಹೇಳುತ್ತೇನೆ. ಯೆಹೋವನ ಬಗ್ಗೆ ಹೆಚ್ಚನ್ನು ತಿಳಿದುಕೊಂಡು ಹೆಚ್ಚು ಸೇವೆ ಮಾಡಲು ಇವರೆಲ್ಲರೂ ನನಗೆ ಸಹಾಯ ಮಾಡಿದ್ದಾರೆ. ಇವರಲ್ಲಿ ಕೆಲವರು ನನಗಿಂತ ಚಿಕ್ಕವರು, ಕೆಲವರು ದೊಡ್ಡವರು. ಅವರಲ್ಲಿ ಅನೇಕರ ಸಂಸ್ಕೃತಿಯೂ ಬೇರೆ. ಆದರೆ ಅವರೆಲ್ಲರಿಗೆ ಯೆಹೋವನ ಮೇಲೆ ತುಂಬ ಪ್ರೀತಿ ಇದೆ ಅನ್ನುವುದು ಅವರು ನಡೆದುಕೊಂಡ ರೀತಿ ಮತ್ತು ಅವರ ಮನೋಭಾವದಿಂದ ಗೊತ್ತಾಗುತ್ತಿತ್ತು. ಯೆಹೋವನ ಜನರಲ್ಲಿ ವಿವೇಕಿಗಳಾದ ಅನೇಕ ಸ್ನೇಹಿತರು ನನಗೆ ಸಿಕ್ಕಿದ್ದಾರೆ. ಇವರಿಂದ ನಾನು ಎಷ್ಟೋ ವಿಷಯಗಳನ್ನು ಕಲಿತಿದ್ದೇನೆ. ಇದಕ್ಕೆ ನಾನು ತುಂಬ ತುಂಬ ಆಭಾರಿ.

ಲೋಕದ ಬೇರೆಬೇರೆ ಕಡೆಯಿಂದ ಬರುವ ವಿದ್ಯಾರ್ಥಿಗಳನ್ನು ಭೇಟಿಮಾಡುವುದೆಂದರೆ ನನಗಿಷ್ಟ