ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಾರಿಬಾರಿ ಬಿದ್ದೆದ್ದ ಸೇತುವೆ

ಬಾರಿಬಾರಿ ಬಿದ್ದೆದ್ದ ಸೇತುವೆ

ಬಾರಿಬಾರಿ ಬಿದ್ದೆದ್ದ ಸೇತುವೆ

ಬಲ್ಗೇರಿಯ ದ ಎಚ್ಚರ! ಲೇಖಕರಿಂದ

ಮಧ್ಯೋತ್ತರ ಬಲ್ಗೇರಿಯದಲ್ಲಿ ಓಸೂಮ್‌ ಎಂಬ ನದಿ ಹರಿಯುತ್ತದೆ. ಈ ನದಿಗೆ ಲೊವೆಕ್‌ ಪಟ್ಟಣದಲ್ಲಿ ಮೇಲ್ಛಾವಣಿಯಿರುವ ಒಂದು ಸೇತುವೆಯಿದೆ (covered bridge). ಅದರ ಮನಮೋಹಕ ವಿನ್ಯಾಸದ ಇತಿಹಾಸವು, ಅದನ್ನು ಬಳಸುವ ಜನರಂತೆಯೇ ಬಲು ಸ್ವಾರಸ್ಯಕರ.

ಈ ಸೇತುವೆಯನ್ನು ಮೊದಲ ಬಾರಿ ಜಗತ್ತಿನ ಗಮನಕ್ಕೆ ತಂದವನು ಆಸ್ಟ್ರಿಯದ ಭೂವಿಜ್ಞಾನಿ ಅಮೀಬ್ವೇ. 1830 ರ ದಶಕದಲ್ಲಿ ಅವನು ಲೊವೆಕ್‌ ಪಟ್ಟಣಕ್ಕೆ ಭೇಟಿಯನ್ನಿತ್ತಾಗ ಈ ಸೇತುವೆಯನ್ನು ನೋಡಿದನು. “ಮೇಲ್ಛಾವಣಿಯಿದ್ದು, ಚಿಕ್ಕ ಚಿಕ್ಕ ಅಂಗಡಿಗಳಿಂದ ಝಗಮಗಿಸುತ್ತಿರುವ ಒಂದು ಕಲ್ಲಿನ ಸೇತುವೆ” ಎಂದು ಅವನದನ್ನು ವರ್ಣಿಸಿ ಬರೆದನು. ಹೌದು, ಈ ಅಪೂರ್ವ ಸೇತುವೆಯು ಲೊವೆಕ್‌ ನಗರದ ಇಬ್ಭಾಗಗಳನ್ನು ಜೋಡಿಸಿ ಸಾರಿಗೆಸಂಪರ್ಕಕ್ಕೆ ಕೊಂಡಿಯಾಗಿತ್ತು ಮತ್ತು ಒಂದು ಮಾರುಕಟ್ಟೆಯೂ ಆಗಿತ್ತು! ಆದುದರಿಂದಲೇ ಇದು ಲೊವೆಕ್‌ ನಗರದ ಹೆಗ್ಗುರುತು ಎಣಿಸಿಕೊಂಡಿತು.

ಆರಂಭದಲ್ಲಿ ಲೊವೆಕ್‌ನ ಚಾವಣಿ ಸೇತುವೆಯನ್ನು ಕಲ್ಲಿನಿಂದಲ್ಲ ಬದಲಿಗೆ ಮರದಿಂದ ಕಟ್ಟಲಾಗಿತ್ತು. ಆದರೆ ಅನೇಕ ವರ್ಷಗಳಿಂದ ನೆರೆಹಾವಳಿಗೆ ತುತ್ತಾಗಿ ಹಾಳಾಗಿದ್ದರಿಂದ ಅದನ್ನು ಪುನರ್ನಿರ್ಮಾಣಗೊಳಿಸಬೇಕಾಯಿತು. ಕೊನೆಗೊಮ್ಮೆ 1872 ರಲ್ಲಿ ಆ ಮರದ ಸೇತುವೆಯು ನೆರೆಯ ಪಾಲಾಗಿ ಸಂಪೂರ್ಣವಾಗಿ ಕೊಚ್ಚಿಕೊಂಡುಹೋಯಿತು. ನಗರದ ಇನ್ನೊಂದು ಬದಿಯ ಜನರೊಂದಿಗಿನ ಸಂಪರ್ಕ ಕಡಿದುಹೋಯಿತು.

ಅಳಿದುಳಿದ ಸೇತುವೆಯನ್ನು ದುರಸ್ತಿಗೊಳಿಸುವುದು ದುಸ್ಸಾಧ್ಯವಾಗಿತ್ತು. ಆದುದರಿಂದ, ಸುಭದ್ರವಾದ ಹೊಸ ಸೇತುವೆಯನ್ನು ವಿನ್ಯಾಸಿಸಿ ಕಟ್ಟಲು ಬಲ್ಗೇರಿಯದ ಪ್ರಸಿದ್ಧ ಕಟ್ಟಡ ನಿರ್ಮಾಣಗಾರ ಕೋಲ್ಯೊ ಫೀಚೆಟೋ ಎಂಬವರಿಗೆ ಗುತ್ತಿಗೆ ವಹಿಸಲಾಯಿತು.

ವಿನೂತನ ವಿನ್ಯಾಸ

ಫೀಚೆಟೋ, ಮೊದಲಿದ್ದ ಸೇತುವೆಯ ವಿನ್ಯಾಸದಲ್ಲೇ ಸಣ್ಣ ಅಂಗಡಿಗಳಿರುವ ಚಾವಣಿ ಸೇತುವೆಯನ್ನು ನಿರ್ಮಿಸಲು ತೀರ್ಮಾನಿಸಿದನು. 275 ಅಡಿ ಉದ್ದ 33 ಅಡಿ ಅಗಲದ ಈ ಸೇತುವೆಗೆ ಆಸರೆಯಾಗಿ ಅಂಡಾಕಾರದ ಆಧಾರಸ್ತಂಭಗಳನ್ನು ಕಟ್ಟಿದನು. ಈ ಆಧಾರಸ್ತಂಭಗಳ ಒಂದು ಅಂಚು ಮೇಲಿನಿಂದ ಕೆಳಗಿನ ವರೆಗೆ ಮೊನಚಾಗಿದ್ದು, ಪ್ರವಾಹಕ್ಕೆ ವಿರುದ್ಧ ದಿಕ್ಕಿನಲ್ಲಿ ಮುಖಮಾಡಿ ನಿಂತಿದ್ದವು. 15 ಅಡಿ ಎತ್ತರದ ಈ ನಿಲುಗಂಬಗಳ ಆಕಾರ ವಿನೂತನವಾಗಿತ್ತು. ಸೇತುವೆಯ ನಿಲುಗಂಬಗಳ ಮಧ್ಯ ಭಾಗದಿಂದ ಹೆಚ್ಚುಕಡಿಮೆ ಮೇಲೆ ವರೆಗೆ ಕಂಡಿಗಳಿದ್ದವು. ಇದರಿಂದ ಪ್ರವಾಹ ಬಂದಾಗ ನೀರು ಸರಾಗವಾಗಿ ಹರಿದುಹೋಗಲು ಅನುಕೂಲವಾಗುತ್ತಿತ್ತು. ಫೀಚೆಟೋ ಈ ನಿಲುಗಂಬಗಳ ಮೇಲ್ಭಾಗದಲ್ಲಿ ಗಟ್ಟಿಮುಟ್ಟಾದ ಓಕ್‌ ಮರದ ಅಡ್ಡತೊಲೆಗಳನ್ನೂ ಹಲಗೆಗಳನ್ನೂ ಹಾಸಿದನು. ಸೇತುವೆಯ ಉಳಿದ ಭಾಗಗಳು ಮತ್ತು ಅದರ ಮೇಲೆ ಇಕ್ಕಡೆಗಳಲ್ಲಿದ್ದ 64 ಅಂಗಡಿಗಳನ್ನು ಬೀಚ್‌ ಮರದಿಂದ ನಿರ್ಮಿಸಲಾಯಿತು. ಚಾವಣಿಯು ಸಹ ಬೀಚ್‌ ಮರದ್ದೇ ಆಗಿತ್ತು. ಆದರೆ ಅದರ ಮೇಲೆ ಕಬ್ಬಿಣದ ಷೀಟ್‌ಗಳನ್ನು ಹಾಸಲಾಯಿತು.

ಫೀಚೆಟೋ ವಿನ್ಯಾಸದ ಮತ್ತೊಂದು ಆಸಕ್ತಿಕರ ವೈಶಿಷ್ಟ್ಯವೆಂದರೆ, ಸೇತುವೆಯ ಆಧಾರ ತೊಲೆಗಳನ್ನು ಜೋಡಿಸಲು ಕಬ್ಬಿಣ ಮತ್ತು ಮೊಳೆಗಳ ಬದಲಿಗೆ ಮರದ ಪ್ಲಗ್ಗ್‌ಗಳನ್ನು ಬಳಸಿದ್ದೇ. ಅಲ್ಲದೆ, ರಸ್ತೆಯ ಮರದ ಅಡಿಗಟ್ಟಿನ ಮೇಲೆ ಕಲ್ಲುಗಳನ್ನು ಹಾಕಿ ಅದರ ಮೇಲೆ ಜಲ್ಲಿಕಲ್ಲನ್ನು ಹರಡಲಾಯಿತು. ಹಗಲಿನಲ್ಲಿ ಗೋಡೆಗಳಲ್ಲಿದ್ದ ಸಣ್ಣ ಸಣ್ಣ ಕಿಟಕಿಗಳಿಂದಲೂ ಚಾವಣಿಯ ಕಂಡಿಗಳಿಂದಲೂ ತೂರಿಬರುತ್ತಿದ್ದ ನೇಸರನ ಕಿರಣಗಳು ಬೆಳಕು ಚೆಲ್ಲುತ್ತಿದ್ದವು. ಸಂಜೆ ಹೊತ್ತಿನಲ್ಲಿ ಗ್ಯಾಸ್‌ ಲಾಟೀನುಗಳು ಬೆಳಗುತ್ತಿದ್ದವು. ಈ ಹೊಸ ಸೇತುವೆಯನ್ನು ಕಟ್ಟಿ ಮುಗಿಸಲು ಸುಮಾರು ಮೂರು ವರ್ಷಗಳು ಬೇಕಾದವು [1].

ಸೇತುವೆಯ ಮೇಲಿನ ಜನಜೀವನ

ಸೇತುವೆಯ ಮೇಲೆ ಜನಜೀವನ ಹೇಗಿತ್ತು? ಪ್ರತ್ಯಕ್ಷಸಾಕ್ಷಿಯೊಬ್ಬನ ವರ್ಣನೆಯನ್ನು ನೀವೇ ಕೇಳಿ: “ಚಲಿಸುವ ಕಾರು, ಕುದುರೆ ಬಂಡಿ ಅಥವಾ ಹೊರೆಹೊತ್ತ ಕತ್ತೆಗಳ ಒಡಾಟದಿಂದ ವ್ಯಾಪಾರಿಗಳಿಗಾಗಲಿ ದಾರಿಹೋಕರಿಗಾಗಲಿ ಪ್ರೇಕ್ಷಕರಿಗಾಗಲಿ ಅಷ್ಟೇನು ಅಡಚಣೆಯಾಗುತ್ತಿರಲಿಲ್ಲ. ಇವರೆಲ್ಲರ ಸ್ವರಗಳು, ತವರದ ಕೆಲಸಗಾರರ . . . ಮತ್ತು ಮಾರಾಟಗಾರರ ಕೂಗಿನೊಂದಿಗೆ ಸಮ್ಮಿಳಿತವಾಗುತ್ತಿತ್ತು. ಆ ಸೇತುವೆ ಮೇಲಿನ ಜನಜೀವನವೇ ಭಿನ್ನ. ವರ್ಣರಂಜಿತವಾದ ಚಿಕ್ಕ ಚಿಕ್ಕ ಅಂಗಡಿಗಳು ಉಣ್ಣೆ ಬಟ್ಟೆ, ಮಣಿಸರ, ತರತರದ ವಸ್ತುಗಳಿಂದ ವಿಜೃಂಭಿಸುತ್ತಿದ್ದವು. ಇವುಗಳ ಶೈಲಿ, ಪದ್ಧತಿ ವಿಶಿಷ್ಟ.”

ಈ ಚಾವಣಿ ಸೇತುವೆಯಲ್ಲಿ ಜನರು ತಮಗೆ ಬೇಕಾದ ಸಾಮಾನುಗಳನ್ನು ಖರೀದಿಸಲು ಮಾತ್ರವಲ್ಲ ಮನೋರಂಜನೆಗಾಗಿಯೂ ಗುಂಪುಗೂಡುತ್ತಿದ್ದರು. ಏಕೆಂದರೆ ಹೆಚ್ಚಿನ ಅಂಗಡಿ ಮಾಲೀಕರು ಸಂಗೀತಗಾರರೂ ಆಗಿದ್ದರು. ಮೇಲೆ ತಿಳಿಸಲಾದ ಪ್ರತ್ಯಕ್ಷಸಾಕ್ಷಿ ತಿಳಿಸಿದ್ದು: “ಕ್ಷೌರದಂಗಡಿಗಳಲ್ಲಿ ಐದಾರು ಕ್ಷೌರಿಕರಿದ್ದರು. ಇವರು ಕೇವಲ ಕ್ಷೌರಿಕರಷ್ಟೇ ಅಲ್ಲ ಉತ್ತಮ ಸಂಗೀತಗಾರರೂ ಆಗಿದ್ದರು. ಮುಖ್ಯವಾಗಿ ತಂತಿವಾದ್ಯಗಳನ್ನು ನುಡಿಸುತ್ತಿದ್ದರು. ಅವನ್ನು ನುಡಿಸಲು ಅವರು ಆಗಾಗ್ಗೆ ಬಿಡುವು ಮಾಡಿಕೊಳ್ಳುತ್ತಿದ್ದರು. ಗಿರಾಕಿಗಳಂತೂ ಅವರು ನುಡಿಸಿ ಮುಗಿಸುವ ವರೆಗೂ ಖುಷಿಯಿಂದ ಕಾಯುತ್ತಿದ್ದರು.” ಒಂದನೇ ಲೋಕ ಯುದ್ಧದ ಬಳಿಕ ಕೆಲವು ಕ್ಷೌರಿಕರು ಬಾರ್ಬರ್‌ ಆರ್ಕೆಸ್ಟ್ರಾದ ಸ್ಥಾಪಕರಾದರು.

ವಿಪತ್ತಿನ ಬರಸಿಡಿಲು

ಫೀಚೆಟೋ ಕಟ್ಟಿದ ಸೇತುವೆಯು ಸುಮಾರು 50 ವರ್ಷಗಳ ವರೆಗೆ ನೆರೆ, ಯುದ್ಧ ಮತ್ತಿತರ ದುರಂತಗಳನ್ನೂ ತಾಳಿಕೊಂಡು ಸ್ಥಿರವಾಗಿ ನಿಂತಿತು. ಆದರೆ 1925, ಆಗಸ್ಟ್‌ 2/3 ರ ರಾತ್ರಿ ಈ ಸೇತುವೆಗೆ ಬೆಂಕಿ ಬಿದ್ದು ಉರಿಯಹತ್ತಿದಾಗ ಅದರ ಪ್ರಕಾಶವು ಇಡೀ ಲೋವೇಕ್‌ ನಗರವನ್ನೇ ಆವರಿಸಿತು. ಇದು ಆ ಮನಮೋಹಕ ಸೇತುವೆಯನ್ನು ಸುಟ್ಟು ಬೂದಿಮಾಡಿತು. ಇದು ಸಂಭಿವಿಸಿದ್ದಾದರೂ ಹೇಗೆ? ಇಂದಿನ ವರೆಗೂ ಅದು ಯಾರಿಗೂ ಗೊತ್ತಿಲ್ಲ. ನಿರ್ಲಕ್ಷ್ಯದಿಂದ ಬೆಂಕಿ ಬಿತ್ತೋ ದುರುದ್ದೇಶದಿಂದ ಯಾರಾದರು ಬೆಂಕಿ ಇಟ್ಟರೋ ಯಾರೂ ಅರಿಯರು. ವಿಷಯ ಏನೇ ಆಗಿರಲಿ ಮತ್ತೊಮ್ಮೆ ಲೊವೆಕ್‌ನ ಸಂಪರ್ಕ ಕೊಂಡಿಯಾದ ಸೇತುವೆ ಇಲ್ಲದೆ ಹೋಯಿತು.

ಮತ್ತೊಂದು ಹೊಸ ಚಾವಣಿ ಸೇತುವೆಯನ್ನು 1931 ರಲ್ಲಿ ನಿರ್ಮಿಸಲಾಯಿತು [2]. ಇದರಲ್ಲೂ ರಸ್ತೆಬದಿಗಳಲ್ಲಿ ಸಾಲಾಗಿ ಸಣ್ಣ ಅಂಗಡಿ ಮತ್ತು ರಿಪೇರಿಯಂಗಡಿಗಳು ಇದ್ದವು! ಆದರೆ ಈ ನವೀನ ಸೇತುವೆಯ ನಿರ್ಮಾಣಗಾರರು ಈ ಬಾರಿ ಮರ ಮತ್ತು ಕಲ್ಲನ್ನು ಬಳಸದೆ ಉಕ್ಕು ಹಾಗೂ ಕಾಂಕ್ರೀಟ್‌ನಿಂದ ಸೇತುವೆಯನ್ನು ಕಟ್ಟಿದರು. ಇದು ಫೀಚೆಟೋ ಕಟ್ಟಿದ ಸೇತುವೆಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಅದಕ್ಕೆ ಗಾಜಿನ ಮೇಲ್ಛಾವಣಿಯಿತ್ತು. ಆದರೆ ಸೇತುವೆಯ ಮಧ್ಯದ ಸ್ವಲ್ಪ ಭಾಗಕ್ಕೆ ಹೊರ ಗೋಡೆಗಳು ಇರಲಿಲ್ಲ. 1981/82 ರಲ್ಲಿ ಮತ್ತೊಮ್ಮೆ ಸೇತುವೆಯನ್ನು ಕೋಲ್ಯೊ ಫೀಚೆಟೋನ ಮೂಲ ವಿನ್ಯಾಸದಂತೆಯೇ ಪುನರ್ನಿರ್ಮಿಸಲಾಯಿತು [3].

ಮೇಲ್ಛಾವಣಿಯಿರುವ ಈ ಸೇತುವೆಯು ಲೊವೆಕ್‌ ಪಟ್ಟಣದ ಕಿರೀಟವಾಗಿದೆ. ಇದು ನುರಿತ ಕೆಲಸಗಾರರ ಮಹತ್ಸಾಧನೆಯೂ ಹೌದು. ಇಂದಿಗೂ ಸಾಲು ಸಾಲು ಅಂಗಡಿಗಳಿಂದ ಕಂಗೊಳಿಸುವ ಈ ಸೇತುವೆಯು ತನ್ನನ್ನು ಹಾದು ಹೋಗುವ ಸ್ಥಳಿಕರ ಮತ್ತು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. (g 1/08)

[ಪುಟ 22ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಬಲ್ಗೇರಿಯ

ಸೋಫಿಯಾ

ಲೊವೆಕ್‌

[ಪುಟ 23ರಲ್ಲಿರುವ ಚಿತ್ರ ಕೃಪೆ]

ಫೋಟೋ 2: From the book Lovech and the Area of Lovech