ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೊಂಬೆಗಳ ಅಪೆರಾಗೆ ಹೋಗೋಣವೇ?

ಬೊಂಬೆಗಳ ಅಪೆರಾಗೆ ಹೋಗೋಣವೇ?

ಬೊಂಬೆಗಳ ಅಪೆರಾಗೆ ಹೋಗೋಣವೇ?

ಆಸ್ಟ್ರಿಯದ ಎಚ್ಚರ! ಲೇಖಕರಿಂದ

“ಸಂಗೀತವು ತುಂಬ ಸೊಗಸಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಸೂತ್ರದಬೊಂಬೆಗಳ ನಟನೆಯಿಂದ ದಂಗಾಗಿಹೋದೆ. ಅವು ಅತಿ ನವಿರಾದ ಭಾವಾಭಿನಯಗಳನ್ನು ಸಹ ಅಭಿನಯಿಸಿದವು. ಹಿಂದೆಂದೂ ಯಾವುದೇ ಗೊಂಬೆಯಾಟದಲ್ಲಿ ನಾನು ಇದನ್ನು ನೋಡಿರಲಿಲ್ಲ.”

ಈ ವ್ಯಕ್ತಿ ಪುಟ್ಟ ಮಕ್ಕಳಿಗೆ ತೋರಿಸುವ ಗೊಂಬೆಯಾಟವನ್ನು ವರ್ಣಿಸುತ್ತಿದ್ದಾರೋ? ಇಲ್ಲ. ವಾಸ್ತವದಲ್ಲಿ ಸೂತ್ರದಬೊಂಬೆಗಳ ಅಪೆರಾ (ಸಂಗೀತನಾಟಕ) ಗೆ ಹೋದ ಒಬ್ಬ ವಯಸ್ಕಳ ಉತ್ಸಾಹಭರಿತ ಮಾತುಗಳಿವು. ಈ ಅಸಾಧಾರಣ ಅಪೆರಾ ಎಲ್ಲಿ ಪ್ರದರ್ಶಿಸಲ್ಪಡುತ್ತದೆ? ಆಸ್ಟ್ರಿಯದ ಸಾಲ್ಸ್‌ಬರ್ಗ್‌ ನಗರದ ಅತ್ಯಂತ ಅಸಾಧಾರಣ ಅಪೆರಾ ಥಿಯೇಟರ್‌ನಲ್ಲಿ. ಪ್ರಸಿದ್ಧ ಸಂಗೀತರಚಕ ಮೋಸಾರ್ಟ್‌ ಹುಟ್ಟಿದ್ದು ಈ ಸಾಲ್ಸ್‌ಬರ್ಗ್‌ ನಗರದಲ್ಲೇ.

ಆದರೆ ಎರಡು-ಮೂರು ಅಡಿಯಷ್ಟು ಎತ್ತರದ ಮರದ ಸೂತ್ರದಬೊಂಬೆಗಳು ಸಂಗೀತನಾಟಕ ನಡೆಸುವುದರ ಬಗ್ಗೆ ಎಂದಾದರೂ ಕೇಳಿದ್ದೀರಾ? ಸಾಲ್ಸ್‌ಬರ್ಗ್‌ ಸೂತ್ರದಬೊಂಬೆ ಥಿಯೇಟರ್‌ನಲ್ಲಿರುವ ಗೊಂಬೆಗಳು ಅದನ್ನೇ ಮಾಡುತ್ತವೆ. ಅವು ವೇದಿಕೆಯ ಮೇಲೆ ಕುಣಿಯಲಾರಂಭಿಸುವಾಗ ಸಭಿಕರು ಮಂತ್ರಮುಗ್ಧರಾಗಿ, ಮನಸೂರೆಗೊಳಿಸುವಂಥ ಸಂಗೀತ ಹಾಗೂ ಕನಸಿನ ಇನ್ನೊಂದು ಲೋಕಕ್ಕೆ ಒಯ್ಯಲ್ಪಡುತ್ತಾರೆ.

ನೈಜತೆ ಹಾಗೂ ಕಲ್ಪನೆಯ ಸಂಗಮ

ಪ್ರಥಮ ದೃಶ್ಯಕ್ಕಾಗಿ ಪೀಠಿಕಾ ಸಂಗೀತ ನುಡಿಸಲ್ಪಟ್ಟು, ತೆರೆ ಸರಿದಾಗ ಕಣ್ಣಿಗೆ ಬೀಳುವ ದೃಶ್ಯದಿಂದ ಸಭಿಕರಿಗೆ ಕೆಲವೊಮ್ಮೆ ಅಚ್ಚರಿಯಾಗುವುದುಂಟು. ವೇದಿಕೆಯ ಮೇಲೆ ದಾಟಿಹೋಗುತ್ತಾ ನೀಳ ಗೀತೆಯನ್ನು ಹಾಡುತ್ತಿದ್ದಾರೋ ಎಂಬಂತೆ ಭಾವಾಭಿನಯಿಸುತ್ತಿರುವ ಆಕೃತಿಗಳು ನಿಜವಾಗಿಯೂ ಮರದ ಬೊಂಬೆಗಳೋ ಮತ್ತು ಆ ಬೊಂಬೆಗಳ ತಲೆಯ ಮೇಲಿರುವ ನವುರಾದ ದಾರಗಳ ಕುರಿತೇನು? ಕೆಲವು ಸಂದರ್ಶಕರಂತೂ ತಮ್ಮ ನಿರಾಶೆಯನ್ನು ಹತ್ತಿಕ್ಕಲಾರದೆ, ‘ಇದೇನು? ಎಲ್ಲವೂ ಕಣ್ಣಿಗೆ ಬೀಳುತ್ತಿದೆ. ಆ ಬೊಂಬೆಗಳನ್ನಾಡಿಸುವ ದಾರಗಳೂ ನಮಗೆ ಕಾಣುತ್ತಿವೆ’ ಎಂದು ನೆನಸುತ್ತಾರೆ. ಅಷ್ಟುಮಾತ್ರವಲ್ಲದೆ ವೇದಿಕೆಯ ಮುಂದೆ ವಾದ್ಯಗಾರರ ಕುಳಿಯೂ ಇಲ್ಲ ವಾದ್ಯಗಾರರೂ ಇಲ್ಲ. ರೆಕಾರ್ಡ್‌ಮಾಡಲಾದ ಅಪೆರಾ ಸಂಗೀತವನ್ನು ನುಡಿಸುವ ವಿಚಾರ ಕೆಲವರಿಗೆ ಹಿಡಿಸುವುದಿಲ್ಲ. ಅಪೆರಾಗೆ ಹೋಗುವ ರೂಢಿಯುಳ್ಳ ಒಬ್ಬ ವ್ಯಕ್ತಿ ಸಿಟ್ಟಿನಿಂದ ‘ಛೇ, ಇದೆಂಥ ಅಪೆರಾ!’ ಎಂದು ನೆನಸಬಹುದು. ಆದರೆ ಸ್ವಲ್ಪ ನಿಲ್ಲಿ! ನಿಧಾನವಾಗಿ ಮತ್ತು ಅರಿವಿಲ್ಲದೇ ಸಭಿಕರ ಮನಸ್ಸು ಬದಲಾಗುತ್ತದೆ.

ಪ್ರದರ್ಶನದ ಆರಂಭದಲ್ಲಿ ಸಭಿಕರಿಗಿದ್ದ ಅನುಮಾನಗಳು ಕಳೆದ ಬಳಿಕ ಈ ಬೊಂಬೆಗಳು ಅವರನ್ನು ಮೋಡಿಮಾಡ ತೊಡಗುತ್ತವೆ. ವೇದಿಕೆಯ ಮೇಲೆ ನೈಜತೆ ಹಾಗೂ ಕಲ್ಪನೆಯ ಮನಮೋಹಕ ಸಂಗಮವಾಗುತ್ತದೆ. ಆ ಸೂತ್ರದಬೊಂಬೆಗಳನ್ನು ಆಡಿಸುವ ರೇಷ್ಮೆ ದಾರಗಳನ್ನು ಈಗ ಯಾರೂ ನೋಡುವುದಿಲ್ಲ. ಪ್ರೇಕ್ಷಕರು ಆ ಬೊಂಬೆಗಳ ನಟನೆಯಿಂದ ಮಾತ್ರವಲ್ಲ ಆ ಪ್ರದರ್ಶನ ಒಂದು ಚಿಕ್ಕ ಅಪೆರಾ ಥಿಯೇಟರ್‌ನ ವೇದಿಕೆಯ ಮೇಲೆ ನಡೆಯುತ್ತಿದೆ ಎಂಬ ಅಸಾಮಾನ್ಯ ಸಂಗತಿಯಿಂದಲೂ ರೋಮಾಂಚಿತರಾಗುತ್ತಾರೆ. ಇದೊಂದು ವಿಚಿತ್ರ ಸಂಗತಿಯೆಂದು ಅವರಿಗೆ ಈಗ ಅನಿಸುವುದಿಲ್ಲ. ತಾವು ನೋಡುತ್ತಿರುವುದು ನಿರ್ಜೀವ ಬೊಂಬೆಗಳೆಂಬುದನ್ನೂ ಮರೆತುಬಿಡಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಹೌದು, ಈ ಬೊಂಬೆಗಳಿಗೆ ಸಂಶಯವಾದಿ ಪ್ರೇಕ್ಷಕರನ್ನು ಸಹ ರೋಮಾಂಚನಗೊಳಿಸುವ, ಅವರನ್ನು ತಮ್ಮದೇ ಆದ ಪುಟ್ಟ ಲೋಕಕ್ಕೆ ಕೊಂಡೊಯ್ಯುವ ಅದ್ಭುತ ಸಾಮರ್ಥ್ಯವಿದೆ.

ವೇದಿಕೆಯ ಮೇಲೆ ಮತ್ತು ಹಿಂದೆ

ವೇದಿಕೆಯ ಹಿಂದೆ ಆಗುವಂಥ ಕೆಲಸವು, ವೇದಿಕೆಯ ಮೇಲೆ ನಡೆಯುವಂಥ ಪ್ರದರ್ಶನದಷ್ಟೇ ಮನಮೋಹಕವಾಗಿದೆ. ಈ ಪ್ರದರ್ಶನದ ನಿಜವಾದ ಕಲಾವಿದರು ವೇದಿಕೆಯ ಹಿಂದಿರುವ ಸೂತ್ರಧಾರರೇ. ಇವರು ವೇದಿಕೆಯ ಮೇಲ್ಗಡೆ ಇರುತ್ತಾರೆಂದು ಹೇಳುವುದೇ ಸೂಕ್ತ ಏಕೆಂದರೆ ಅವರು ವೇದಿಕೆ ಮೇಲ್ಗಡೆಯಿರುವ ಒಂದು ಸೇತುವೆಯ ಮೇಲೆ ನಿಂತು ಬೊಂಬೆಗಳನ್ನು ಆಡಿಸುತ್ತಾರೆ. ಈ ಸೂತ್ರಧಾರರು ಒಂದು ರೀತಿಯ ಸನ್ನೆ ಭಾಷೆಯನ್ನಾಡುತ್ತಿದ್ದಾರೊ ಎಂಬಂತೆ ತಮ್ಮ ಕೈಗಳನ್ನು ತಿರುಚಿ-ತಿರುಗಿಸಿದ ಪ್ರಕಾರವೇ ಆ ಸೂತ್ರದಬೊಂಬೆಗಳು ಹಾಡುತ್ತವೆ, ಅಳುತ್ತವೆ, ದ್ವಂದ್ವಯುದ್ಧ ಮಾಡುತ್ತವೆ ಇಲ್ಲವೆ ಗೌರವನಮನ ಮಾಡುತ್ತವೆ. ಇವೆಲ್ಲವೂ ನೈಜ ಅಪೆರಾ ಹಾಡುಗಾರರ ಅಭಿನಯಗಳಂತೆಯೇ ಇರುತ್ತವೆ.

ಈ ಕಲೆ ಏಕೆ ಇಷ್ಟೊಂದು ಮನಸೆಳೆಯುವಂಥದ್ದಾಗಿದೆ ಎಂದು ವಿವರಿಸುತ್ತಾ ದ ನ್ಯೂ ಯಾರ್ಕ್‌ ಟೈಮ್ಸ್‌ ವಾರ್ತಾಪತ್ರಿಕೆ ಒಮ್ಮೆ ಹೇಳಿದ್ದು: “ವೇದಿಕೆಯ ಹಿಂದಿರುವ ವ್ಯಕ್ತಿಗಳು ಯಾವುದೇ ವಯಸ್ಸಿನ, ಸ್ತ್ರೀ ಅಥವಾ ಪುರುಷನ ಪಾತ್ರವನ್ನು ವಹಿಸಶಕ್ತರು. ಆದರೆ ಅವರಿಗೆ ಒಂದು ಗುಣವಂತೂ ಇರಲೇಬೇಕು ಮತ್ತು ಅದು ಸಹ ದೊಡ್ಡ ಪ್ರಮಾಣದಲ್ಲಿ. ಚಾಕಚಕ್ಯತೆಯೇ ಅದಾಗಿದೆ.” ಸಾಲ್ಸ್‌ಬರ್ಗ್‌ನ ಸೂತ್ರಧಾರರು ತಮ್ಮ ಬೊಂಬೆಗಳಲ್ಲಿ ಜೀವಕಳೆ ತುಂಬಿಸುವ ಕೌಶಲವು ನಿಜವಾಗಿ ಬೆರಗುಗೊಳಿಸುವಂಥದ್ದು!

ನಿರ್ಜೀವ ಪ್ರತಿಮೆಗಳ ಬದಲಿಗೆ ಕೈಗೊಂಬೆಗಳು

ಸಾಲ್ಸ್‌ಬರ್ಗ್‌ ಸೂತ್ರದಬೊಂಬೆಗಳ ಥಿಯೇಟರ್‌ 1913 ರಲ್ಲಿ ಆರಂಭವಾಗಿ 90 ಕ್ಕಿಂತಲೂ ಹೆಚ್ಚು ವರ್ಷ ಯಶಸ್ವಿಯಾಗಿ ನಡೆದಿದೆ. ಮೋಸಾರ್ಟ್‌ರ ಅಪೆರಾಗಳಲ್ಲೊಂದನ್ನು ಪ್ರಥಮ ಬಾರಿ ಈ ನಾಟಕ-ಕಂಪನಿಯು ಪ್ರದರ್ಶಿಸಿದ್ದು ಅದೇ ವರ್ಷದಲ್ಲಿ. ಆ ಥಿಯೇಟರ್‌ನ ಸ್ಥಾಪಕನು, ಶಿಲ್ಪಿಯಾಗಿದ್ದ ಆ್ಯಂಟೊನ್‌ ಐಕಾ ಎಂಬವನು. ಐಕಾ ತನ್ನ ಕೆಲಸ ಕಲಿತದ್ದು ಮ್ಯೂನಿಕ್‌ನಲ್ಲಿ. ನಂತರ ಅವನು, ಅಸಾಧಾರಣ ರೀತಿಯ ನೈಜ ಅಭಿನಯಗಳನ್ನು ಮಾಡಸಾಧ್ಯವಿದ್ದ ಸೂತ್ರದಬೊಂಬೆಗಳನ್ನು ರಚಿಸಿದನು. ಆರಾಧನಾ ಪೀಠಗಳ ಮೇಲಿಡಲಾಗುವ ಚಲಿಸದ ಪ್ರತಿಮೆಗಳನ್ನು ಕೆತ್ತುವುದಕ್ಕಿಂತ ಸೂತ್ರದಬೊಂಬೆಗಳನ್ನು ರಚಿಸುವುದು ತನಗೆ ಹೆಚ್ಚಿನ ಸಂತೋಷ ಕೊಡುತ್ತದೆಂದು ಅವನು ಬೇಗನೆ ಗಮನಿಸಿದನು.

ಸ್ವಲ್ಪ ಸಮಯದೊಳಗೆ ಐಕಾವಿನ ಕುಟುಂಬದಲ್ಲಿ ಉಳಿದವರು ಸಹ ಈ ರೀತಿಯ ಮನೋರಂಜನೆಗೆ ಮನಸೋತರು. ಅವರು ಈ ಬೊಂಬೆಗಳಿಗಾಗಿ ಉಡುಪುಗಳನ್ನು ಹೊಲಿಯಲು ಉತ್ಸಾಹದಿಂದ ಸಹಾಯಮಾಡಿದರು ಮತ್ತು ಸಂಗೀತ ಹಾಗೂ ಸಂವಾದದಲ್ಲಿ ನೆರವಾದರು. ಅವರಿಗೆ ಎಷ್ಟೊಂದು ಯಶಸ್ಸು ಲಭಿಸಿತೆಂದರೆ ಇನ್ನಿತರ ಸಂಗೀತ ಕಾರ್ಯಕ್ರಮಗಳನ್ನು ಸಹ ರಚಿಸಿ ಪ್ರದರ್ಶಿಸಲಾರಂಭಿಸಿದರು. 1927 ರಿಂದ ಹಿಡಿದು, ಅವರು ಬೇರೆ ದೇಶಗಳಿಗೂ ಹೋಗಿ ಪ್ರದರ್ಶನಗಳನ್ನು ನೀಡಲು ಆಮಂತ್ರಿಸಲ್ಪಟ್ಟರು. ಈಗೀಗ, ಜಪಾನ್‌ ಮತ್ತು ಯುನೈಟೆಡ್‌ ಸ್ಟೇಟ್ಸ್‌ನಂಥ ಹಲವಾರು ದೇಶಗಳಲ್ಲಿ ಅಂಥ ಪ್ರದರ್ಶನಗಳನ್ನು ಕ್ರಮವಾಗಿ ನೀಡುತ್ತಿರುತ್ತಾರೆ. ಎಲ್ಲ ಸಂಸ್ಕೃತಿಗಳ ಜನರು ಸೂತ್ರದಬೊಂಬೆಗಳ ಮನೋರಂಜನೆಯನ್ನು ಮೆಚ್ಚುತ್ತಾರೆ.

ಈ ಮನೋರಂಜನೆ ನಿಮಗೊ?

ಅಪೆರಾ ಅಂದರೆ “ಸಾಮಾನ್ಯವಾಗಿ ವೇಷಭೂಷಧಾರಿಗಳಾದ ಗಾಯಕರು, ವಾದ್ಯಸಂಗೀತದೊಂದಿಗೆ ಹಾಡಿ ಅಭಿನಯಿಸುವ ನಾಟಕ” ಎಂದು ಅರ್ಥನಿರೂಪಿಸಲಾಗಿದೆ (ದ ಕನ್‌ಸೈಸ್‌ ಆಕ್ಸ್‌ಫರ್ಡ್‌ ಡಿಕ್ಷನೆರಿ ಆಫ್‌ ಮ್ಯೂಸಿಕ್‌) . ಅಪೆರಾ ಲಿಬ್ರೆಟೊ ಅಂದರೆ ಕೃತಿಪಾಠಗಳು ಮಿಥ್ಯೆ, ಇತಿಹಾಸ, ಬೈಬಲ್‌ ವೃತ್ತಾಂತಗಳು ಮತ್ತು ಕಲ್ಪನೆಗಳ ಮೇಲಾಧರಿತವಾಗಿರುತ್ತವೆ. ಇವುಗಳ ಕಥಾವಸ್ತು ದುರಂತ, ಪ್ರಣಯ ಇಲ್ಲವೆ ಹಾಸ್ಯರಸದಿಂದ ಕೂಡಿರಬಲ್ಲದು. ಈ ಸೂತ್ರದಬೊಂಬೆಗಳ ಥಿಯೇಟರ್‌ನಲ್ಲಿ ಸಾಮಾನ್ಯವಾಗಿ ನಡೆಸಲಾಗುವ ಅಪೆರಾಗಳು ಹೆಚ್ಚಾಗಿ ಜರ್ಮನ್‌ ಇಲ್ಲವೆ ಇಟ್ಯಾಲಿಯನ್‌ ಭಾಷೆಯಲ್ಲಿರುತ್ತವೆ. ಆದುದರಿಂದ ನೀವು ಆ ಅಪೆರಾವನ್ನು ಆನಂದಿಸಬೇಕಾದರೆ ಅದರ ಭಾಷಾಂತರ ಪಾಠವನ್ನು ಪರಿಶೀಲಿಸುವುದು ಒಳ್ಳೇದು.

ಒಂದು ನಿರ್ದಿಷ್ಟ ಅಪೆರಾ ತನಗೆ ಸೂಕ್ತವೊ ಅಲ್ಲವೊ ಎಂದು ಕ್ರೈಸ್ತನೊಬ್ಬನು ಹೇಗೆ ನಿರ್ಣಯಿಸುವನು? ಇದನ್ನು, ಗಾಯಕರ ಪ್ರಸಿದ್ಧಿಯಿಂದ ಮಾತ್ರವೇ ಅಳೆಯಬಹುದೋ? ಇಲ್ಲವೇ ಸಂಗೀತದ ಮಾಧುರ್ಯದಿಂದ ನಿರ್ಣಯಿಸಬಹುದೋ? ಅಥವಾ ಅದರ ಕಥಾವಸ್ತುವಿನಿಂದಲೋ?

ಬೇರೆಲ್ಲ ಮನೋರಂಜನೆಯ ವಿಷಯದಲ್ಲಿ ಮಾಡುವಂತೆಯೇ, ಒಂದು ಅಪೆರಾಗೆ ಕಿವಿಗೊಡಬೇಕೋ ಇಲ್ಲವೇ ಅದನ್ನು ವೀಕ್ಷಿಸಬೇಕೋ ಎಂಬುದನ್ನು ಕ್ರೈಸ್ತನೊಬ್ಬನು ನಿರ್ಣಯಿಸುವ ಅತ್ಯುತ್ತಮ ವಿಧಾನವು, ಅದರ ಕಥಾವಸ್ತುವನ್ನು ಅಪೊಸ್ತಲ ಪೌಲನು ಕೊಟ್ಟ ಮಾನದಂಡದೊಂದಿಗೆ ಅಳೆಯುವುದೇ ಆಗಿದೆ. ಅದು ಹೀಗಿದೆ: “ಕಡೇ ಮಾತೇನಂದರೆ, ಸಹೋದರರೇ, ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.”​—⁠ಫಿಲಿಪ್ಪಿ 4:⁠8. (g 1/08)

[ಪುಟ 8ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಆಸ್ಟ್ರಿಯ

ವಿಯೆನ್ನ

ಸಾಲ್ಸ್‌ಬರ್ಗ್‌

[ಪುಟ 8ರಲ್ಲಿರುವ ಚಿತ್ರ]

ವಿಭಿನ್ನ ಅಪೆರಾಗಳಲ್ಲಿ ಆಡಲಿಕ್ಕಾಗಿ ಸೂತ್ರದಬೊಂಬೆಗಳ ಒಂದು ಪೂರ್ತಿ ತಂಡ ಸಜ್ಜಾಗಿದೆ

[ಪುಟ 9ರಲ್ಲಿರುವ ಚಿತ್ರ]

ಸಾಲ್ಸ್‌ಬರ್ಗ್‌ ಸೂತ್ರದಬೊಂಬೆಗಳ ಥಿಯೇಟರ್‌

[ಪುಟ 10ರಲ್ಲಿರುವ ಚಿತ್ರ]

ಸ್ಥಾಪಕನಾದ ಆಂಟೊನ್‌ ಐಕಾ

[ಕೃಪೆ]

ಸಾಲ್ಸ್‌ಬರ್ಗ್‌ ಸೂತ್ರದಬೊಂಬೆಗಳ ಥಿಯೇಟರ್‌ ಕೃಪೆ

[ಪುಟ 8ರಲ್ಲಿರುವ ಚಿತ್ರ ಕೃಪೆ]

All photos on pages 8 and 9: By courtesy of the Salzburg Marionette Theatre