ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಹಿಳಾ ದೌರ್ಜನ್ಯ ಒಂದು ಜಾಗತಿಕ ಸಮಸ್ಯೆ

ಮಹಿಳಾ ದೌರ್ಜನ್ಯ ಒಂದು ಜಾಗತಿಕ ಸಮಸ್ಯೆ

ಮಹಿಳಾ ದೌರ್ಜನ್ಯ ಒಂದು ಜಾಗತಿಕ ಸಮಸ್ಯೆ

ನವೆಂಬರ್‌ 25 ನ್ನು ಪ್ರತಿ ವರ್ಷ ಅಂತರರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನ ದಿನವಾಗಿ ವೀಕ್ಷಿಸಲಾಗುತ್ತದೆ. ಸ್ತ್ರೀ-ಹಕ್ಕುಗಳ ಉಲ್ಲಂಘನೆಯ ಕುರಿತು ಜನಜಾಗ್ರತಿಯನ್ನು ಮೂಡಿಸುವ ಸಲುವಾಗಿ 1999 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಈ ದಿನವನ್ನು ಗೊತ್ತುಪಡಿಸಿತು. ಆದರೆ ಇಂಥದೊಂದು ದಿನವನ್ನು ಸ್ಥಾಪಿಸುವ ಅಗತ್ಯವಾದರೂ ಏನಿತ್ತು?

ಅನೇಕ ಪುರುಷ ಪ್ರಧಾನ ಸಂಸ್ಕೃತಿಗಳಲ್ಲಿ ಮಹಿಳೆಯರನ್ನು ಕೀಳಾಗಿ ಕಂಡು ಎರಡನೆಯ ಸ್ಥಾನಕ್ಕೆ ತಳ್ಳಲಾಗುತ್ತದೆ. ಅವರ ಕುರಿತ ದುರಭಿಪ್ರಾಯಗಳು ಸಮಾಜದಲ್ಲಿ ಆಳವಾಗಿ ಬೇರೂರಿವೆ. ಲಿಂಗಾಧಾರಿತ ದೌರ್ಜನ್ಯದ ಎಲ್ಲ ಮುಖಗಳು ಮುಂದುವರಿದ ರಾಷ್ಟ್ರಗಳಲ್ಲೂ ಸದಾ ಕಾಡುತ್ತಿರುವ ಸಮಸ್ಯೆಯಾಗಿವೆ. ವಿಶ್ವಸಂಸ್ಥೆಯ ಮಾಜಿ ​ಜೆನರಲ್‌ ಸೆಕ್ರಿಟರಿ ಕೋಫೀ ಅನಾನ್‌ ಅವರ ಪ್ರಕಾರ “ಸ್ತ್ರೀ ದೌರ್ಜನ್ಯ ಜಾಗತಿಕವಾಗಿದ್ದು ಎಲ್ಲ ಸಮಾಜ ಸಂಸ್ಕೃತಿಗಳಲ್ಲಿ ಕಂಡುಬರುತ್ತದೆ. ಹೆಣ್ಣು ಯಾವುದೇ ಜಾತಿ, ಜನಾಂಗ, ಸಾಮಾಜಿಕ ನೆಲೆ, ಹುಟ್ಟು ಅಥವಾ ಅಂತಸ್ತಿಗೆ ಸೇರಿರಲಿ ಅದು ಅವಳನ್ನು ಬಾಧಿಸುತ್ತದೆ.”

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಮಾಜಿ ವಿಶೇಷ ​ವರದಿಗಾರಳಾದ ರಾಧಿಕ ಕುಮಾರಸ್ವಾಮಿ ಹೇಳುವ ಪ್ರಕಾರ ಅಧಿಕಾಂಶ ಮಹಿಳೆಯರಿಗೆ ಸ್ತ್ರೀ ದೌರ್ಜನ್ಯವೆಂದರೆ “ಒಂದು ನಿಷಿದ್ಧ ಪ್ರಕರಣ, ಸಮಾಜದಿಂದ ಮರೆಯಾಗಿಡಬೇಕಾದ ಸಂಗತಿ ಮತ್ತು ಬದುಕಿನಲ್ಲಿ ತಪ್ಪಿಸಿಕೊಳ್ಳಲಾಗದ ನಿಜತ್ವ ಆಗಿರುತ್ತದೆ.” ಹಿಂಸೆಗೆ ಬಲಿಯಾದವರನ್ನು ಅಧ್ಯಯನಮಾಡುವ ಹಾಲೆಂಡಿನ ಸಂಘಟನೆಯೊಂದು ಪ್ರಕಟಿಸಿದ ಅಂಕಿಅಂಶದ ಮೇರೆಗೆ ದಕ್ಷಿಣ ಅಮೆರಿಕದ ದೇಶವೊಂದರಲ್ಲಿ 23% ಮಹಿಳೆಯರು ಅಂದರೆ ಪ್ರತಿ ನಾಲ್ಕು ಸ್ತ್ರೀಯರಲ್ಲಿ ಒಬ್ಬಳು ಗೃಹ ಹಿಂಸಾಚಾರಕ್ಕೆ ಬಲಿಯಾಗುತ್ತಾಳೆ. ತದ್ರೀತಿಯಲ್ಲಿ, ಯೂರೋಪಿನ ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬಳು ತನ್ನ ಜೀವಮಾನದಲ್ಲಿ ಗೃಹ ಹಿಂಸಾಚಾರಕ್ಕೆ ತುತ್ತಾಗುತ್ತಾಳೆ ಎಂದು ಯೂರೋಪಿಯನ್‌ ಕೌನ್ಸಿಲ್‌ ಅಂದಾಜುಮಾಡುತ್ತದೆ. ಇಂಗ್ಲೆಂಡ್‌ ಹಾಗೂ ವೇಲ್ಸ್‌ನ ಬ್ರಿಟಿಷ್‌ ಹೋಮ್‌ ಆಫೀಸ್‌ನ ಪ್ರಕಾರ ಇತ್ತೀಚಿನ ಒಂದು ವರ್ಷದಲ್ಲಿ ಪ್ರತಿ ವಾರ ಸರಾಸರಿ ಇಬ್ಬರು ಸ್ತ್ರೀಯರು ತಮ್ಮ ಪ್ರಸ್ತುತ ಅಥವಾ ಮಾಜಿ ಸಂಗಾತಿಯಿಂದ ಹತ್ಯೆಗೀಡಾಗಿದ್ದರು. ಇಂಡಿಯಾ ಟುಡೇ ಇಂಟರ್‌ನ್ಯಾಷನಲ್‌ ಪತ್ರಿಕೆ ವರದಿಸಿದ್ದು: “ಭಾರತದಾದ್ಯಂತ ಇರುವ ಮಹಿಳೆಯರನ್ನು ಭಯದ ನೆರಳು ಬೆಂಬಿಡದೆ ಹಿಂಬಾಲಿಸುತ್ತದೆ. ಅತ್ಯಾಚಾರವು ಮೂಲೆಮೂಲೆಯಲ್ಲಿ, ಒಂದೊಂದು ಬೀದಿಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಅವರಿಗೆ ಯಾವುದೇ ಕ್ಷಣದಲ್ಲಿ ಥಟ್ಟನೆ ಎದುರಾಗುವ ಆಗಂತುಕವಾಗಿದೆ.” ಅಮೆನೆಸ್ತಿ ಇಂಟರ್‌ನ್ಯಾಷನಲ್‌ ಎಂಬ ಸಂಸ್ಥೆ ಹೆಣ್ಣುಮಕ್ಕಳ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯವು ಇಂದು “ಮಾನವ ಹಕ್ಕುಗಳು ಎದುರಿಸುವ ಅತಿ ದೊಡ್ಡ ಸಮಸ್ಯೆ” ಆಗಿದೆಯೆಂದು ವರ್ಣಿಸುತ್ತದೆ.

ಮೇಲೆ ತಿಳಿಸಲಾದ ಎಲ್ಲ ಅಂಕಿಅಂಶಗಳು ಸ್ತ್ರೀಯರ ಕುರಿತು ದೇವರಿಗಿರುವ ನೋಟವನ್ನು ಪ್ರತಿಬಿಂಬಿಸುತ್ತವೋ? ಈ ಪ್ರಶ್ನೆಯನ್ನು ಮುಂದಿನ ಲೇಖನವು ಚರ್ಚಿಸುವುದು. (g 1/08)