ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಶ್ಲೀಲ ಮಾತುಗಳನ್ನಾಡುವುದು ತಪ್ಪೋ?

ಅಶ್ಲೀಲ ಮಾತುಗಳನ್ನಾಡುವುದು ತಪ್ಪೋ?

ಯುವ ಜನರು ಪ್ರಶ್ನಿಸುವುದು

ಅಶ್ಲೀಲ ಮಾತುಗಳನ್ನಾಡುವುದು ತಪ್ಪೋ?

ನಾನು ಸಹಪಾಠಿಗಳಂತಾಗಲು ಬಯಸಿದೆ. ಆದ್ದರಿಂದಲೇ ಅಶ್ಲೀಲ ಮಾತುಗಳನ್ನಾಡುವ ಅಭ್ಯಾಸವನ್ನು ಕಲಿತಿರಬೇಕು.”​—⁠ಮೆಲಾನೀ. *

ಅಶ್ಲೀಲ ಮಾತುಗಳನ್ನಾಡುವುದು ಅಷ್ಟೊಂದು ಗಂಭೀರ ವಿಷಯವೆಂದು ನಾನೆಣಿಸಲಿಲ್ಲ. ನಾನು ಎಲ್ಲಾ ಸಮಯಗಳಲ್ಲಿ, ಶಾಲೆ ಮತ್ತು ಮನೆಯಲ್ಲಿಯೂ ಜನರು ಅಶ್ಲೀಲ ಮಾತುಗಳನ್ನಾಡುವುದನ್ನು ಕೇಳಿಸಿಕೊಂಡಿದ್ದೇನೆ.”​—⁠ಡೇವಿಡ್‌.

ಅನೇಕ ವೇಳೆ ವಯಸ್ಕರು ಅಶ್ಲೀಲ ಮಾತುಗಳನ್ನಾಡುವಾಗ ಇಲ್ಲವೇ ದುರ್ಭಾಷೆ ಬಳಸುವಾಗ ಅದು ಸಾಮಾನ್ಯ ಸಂಗತಿಯೆಂದೂ, ಅದನ್ನೇ ಯುವ ಜನರು ಬಳಸುವಾಗ ಅದು ಅತಿ ಕೆಟ್ಟದ್ದೆಂದೂ ಏಕೆ ಪರಿಗಣಿಸಲಾಗುತ್ತದೆ? ದುರ್ಭಾಷೆಯು ಹಿತಕರವೋ ಅಲ್ಲವೋ ಎಂಬುದನ್ನು ಒಬ್ಬ ವ್ಯಕ್ತಿಯ ವಯಸ್ಸು ನಿರ್ಣಯಿಸುತ್ತದೋ? ಅನೇಕ ಜನರು ಅಶ್ಲೀಲ ಭಾಷೆಯನ್ನು ಬಳಸುವುದರಿಂದ ಮತ್ತು ಕೇವಲ ವಯಸ್ಕರು ಇದನ್ನು ಬಳಸಬಹುದು ಆದರೆ ಯುವ ಜನರು ಹಾಗೆ ಮಾಡುವಂತಿಲ್ಲ ಎನ್ನುವ ಇಬ್ಬಗೆಯ ಮಟ್ಟಗಳಿರುವುದರಿಂದ “ಅದರಲ್ಲಿ ತಪ್ಪೇನಿದೆ?” ಎಂದು ನೀವು ನ್ಯಾಯವಾಗಿ ಕೇಳಬಹುದು.

ದುರ್ಭಾಷೆಯಾಡುವಂತೆ ಯಾವುದು ಪ್ರಭಾವಿಸುತ್ತದೆ?

ಅಶ್ಲೀಲ ಭಾಷೆಯು ಎಲ್ಲೆಲ್ಲೂ ಹಬ್ಬಿದೆ ಎನ್ನುವುದರಲ್ಲಿ ಸಂಶಯವಿಲ್ಲ. ವಾಸ್ತವದಲ್ಲಿ, ಶಾಲೆಯಲ್ಲಿ ಕೇಳಿಸಿಕೊಳ್ಳುವ ಪ್ರತಿಯೊಂದು ಅಸಭ್ಯ ಮಾತಿಗೆ ಕೇವಲ ಒಂದೊಂದು ರೂಪಾಯಿ ಸಿಗುವುದಾದರೂ ಜೀವನವಿಡೀ ನಾವು ಕೆಲಸವನ್ನೇ ಮಾಡಬೇಕಾಗಿರುತ್ತಿರಲಿಲ್ಲ ಮತ್ತು ನಮ್ಮ ಹೆತ್ತವರು ಕೂಡ ಕೆಲಸದಿಂದ ನಿವೃತ್ತರಾಗಬಹುದಿತ್ತು ಎಂಬುದಾಗಿ ಕೆಲವು ಯುವಜನರು ಹೇಳುತ್ತಾರೆ. 15 ರ ಪ್ರಾಯದ ಈವ್‌ ಎಂಬಾಕೆಯು ಹೇಳುವುದು: “ನನ್ನ ಸಹಪಾಠಿಗಳು ಮಾಮೂಲಿನ ಸಂಭಾಷಣೆಗಳಲ್ಲಿ ಕೂಡ ಪ್ರತಿ ವಾಕ್ಯದಲ್ಲಿ ಹಲವಾರು ಅಶ್ಲೀಲ ಪದಗಳನ್ನು ಬಳಸುತ್ತಾರೆ. ದಿನವಿಡೀ ಇಂಥ ಮಾತುಗಳನ್ನೇ ಕೇಳುತ್ತಿರುವಲ್ಲಿ ಅಶ್ಲೀಲ ಮಾತುಗಳನ್ನಾಡುವುದರಿಂದ ದೂರವಿರುವುದು ಕಷ್ಟವೇ ಸರಿ.”

ಈವ್‌ಳಂತೆ ನೀವು ಕೂಡ ಅಶ್ಲೀಲ ಮಾತುಗಳನ್ನಾಡುವ ಜನರಿಂದ ಸುತ್ತುವರಿಯಲ್ಪಟ್ಟಿದ್ದೀರೋ? ನೀವು ಕೂಡ ಆ ಅಭ್ಯಾಸವನ್ನು ಬೆಳೆಸಿಕೊಂಡಿದ್ದೀರೋ? * ಹಾಗಿರುವಲ್ಲಿ ಅಶ್ಲೀಲ ಮಾತುಗಳನ್ನಾಡುವಂತೆ ಯಾವುದು ನಿಮ್ಮನ್ನು ಪ್ರಚೋದಿಸುತ್ತಿದೆ ಎನ್ನುವುದನ್ನು ಪರೀಕ್ಷಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಒಮ್ಮೆ ಅದನ್ನು ಗುರುತಿಸಿದ ನಂತರ ಆ ಅಭ್ಯಾಸವನ್ನು ಸುಲಭವಾಗಿ ಹೋಗಲಾಡಿಸಬಲ್ಲಿರಿ.

ಇದನ್ನು ಮನಸ್ಸಿನಲ್ಲಿಡುತ್ತಾ ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸಿ.

ಹೆಚ್ಚಿನ ಸಂದರ್ಭಗಳಲ್ಲಿ ನೀವು ಯಾಕೆ ಅಶ್ಲೀಲ ಮಾತುಗಳನ್ನಾಡುತ್ತೀರಿ?

ಕೋಪ ಅಥವಾ ಆಶಾಭಂಗವನ್ನು ವ್ಯಕ್ತಪಡಿಸಲು

ಇತರರ ಗಮನ ಸೆಳೆಯಲು

ಸಮಾನಸ್ಥರ ಮೆಚ್ಚಿಕೆ ಪಡೆಯಲು

ದಿಟ್ಟರೆಂದು ತೋರಿಸಿಕೊಳ್ಳಲು

ಅಧಿಕಾರವನ್ನು ಪ್ರತಿಭಟಿಸಲು

ಇತರ .....

ಯಾವ ಸನ್ನಿವೇಶದಲ್ಲಿ ಅತಿ ಹೆಚ್ಚು ಅಶ್ಲೀಲ ಮಾತುಗಳನ್ನಾಡುವ ಪ್ರವೃತ್ತಿ ನಿಮಗಿದೆ?

ಶಾಲೆಯಲ್ಲಿ

ಕೆಲಸದ ಸ್ಥಳದಲ್ಲಿ

ಇ-ಮೇಲ್‌ಗಳಲ್ಲಿ, ಎಸ್‌ಎಮ್‌ಎಸ್‌ಗಳಲ್ಲಿ

ನಾನೊಬ್ಬನೇ/ಳೇ ಇರುವಾಗ

ನೀವಾಡುವ ಅಶ್ಲೀಲ ಮಾತುಗಳನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?

ಸಮಾನಸ್ಥರು ಬಳಸುತ್ತಾರೆ

ಹೆತ್ತವರು ಬಳಸುತ್ತಾರೆ

ಶಿಕ್ಷಕರು ಬಳಸುತ್ತಾರೆ

ಮನೋರಂಜನೆಯಲ್ಲೂ ಇದೇ ತುಂಬಿದೆ

ಇದೊಂದು ದೊಡ್ಡ ವಿಷಯವಲ್ಲ​—⁠ಕೇವಲ ಮಾತುಗಳು ತಾನೇ

ಇದರಿಂದ ಪೇಚಾಟಪಡದ ಜನರೊಂದಿಗೆ ಮಾತ್ರ ನಾನು ಅಶ್ಲೀಲ ಮಾತುಗಳನ್ನಾಡುತ್ತೇನೆ.

ಇತರ .....

ಈ ಅಭ್ಯಾಸವನ್ನು ಜಯಿಸಲು ಏಕೆ ಶ್ರಮಿಸಬೇಕು? ಅಶ್ಲೀಲ ಮಾತುಗಳನ್ನಾಡುವುದು ನಿಜಕ್ಕೂ ತಪ್ಪೋ? ಮುಂದಿನ ವಿಷಯಗಳನ್ನು ಪರಿಗಣಿಸಿರಿ.

ಅವು ಕೇವಲ ಮಾತುಗಳಲ್ಲ. ಯೇಸು ಹೇಳಿದ್ದು: “ನಿಮ್ಮ ಮಾತುಗಳು ನಿಮ್ಮ ಹೃದಯದಲ್ಲೇನಿದೆಯೋ ಅದನ್ನು ವ್ಯಕ್ತಪಡಿಸುತ್ತವೆ.” (ಲೂಕ 6:​45, ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌) ನಾವೇನನ್ನು ಹೇಳುತ್ತೇವೋ ಅದು ನಾವು ಯಾವ ವಿಧದ ವ್ಯಕ್ತಿಯಾಗಿರಲು ಬಯಸುತ್ತೇವೆಂಬುದನ್ನು ಮಾತ್ರವಲ್ಲ ನಾವು ಈಗಾಗಲೇ ಎಂಥವರಾಗಿದ್ದೇವೆಂಬುದನ್ನು ತೋರಿಸಿಕೊಡುತ್ತದೆ ಎನ್ನುವುದನ್ನು ಗಮನದಲ್ಲಿಡಿ. ಇತರರು ದುರ್ಭಾಷೆಯನ್ನು ಬಳಸುತ್ತಾರೆಂಬ ಕಾರಣಮಾತ್ರದಿಂದ ನೀವದನ್ನು ಆಡುತ್ತಿರುವುದಾದರೂ, ಅವರ ಮಾದರಿಯನ್ನು ಅನುಸರಿಸುವುದು ‘ಬಹು ಮಂದಿಯ ಜೊತೆಯಲ್ಲಿ ನೀವು ಸೇರಿದ್ದೀರಿ’ ಮತ್ತು ನೀವು ನಿಮ್ಮ ಸ್ವಂತ ಮಟ್ಟಗಳಿಗೆ ಅಂಟಿಕೊಳ್ಳುವವರಲ್ಲ ಎಂಬುದನ್ನು ತೋರಿಸಿಕೊಡುತ್ತದೆ.​—⁠ವಿಮೋಚನಕಾಂಡ 23:⁠2.

ಅಷ್ಟೇ ಅಲ್ಲ. ಭಾಷಾ ಪರಿಣತರಾದ ಜೇಮ್ಸ್‌ ವಿ. ಒಕಾನರ್‌ ಹೇಳುವುದು: “ಅನೇಕ ವೇಳೆ ಅಶ್ಲೀಲ ಮಾತುಗಳನ್ನಾಡುವ ಜನರು ಅಸಮ್ಮತರೂ, ತಪ್ಪು ಕಂಡುಹಿಡಿಯುವವರೂ, ಕೋಪಿಷ್ಠರೂ, ವಾದಿಸುವವರೂ, ಅಸಮಾಧಾನಿಗಳೂ ಆಗಿರುತ್ತಾರೆ.” ಉದಾಹರಣೆಗೆ, ಅಶ್ಲೀಲ ಮಾತುಗಳನ್ನಾಡುವವರು ತಾವು ಎಣಿಸಿದಂತೆ ನಡೆಯದಿರುವಾಗ ಅಂಥ ಮಾತುಗಳನ್ನಾಡುತ್ತಾರೆ. ಏಕೆಂದರೆ ಎಲ್ಲವೂ ತಾವೆಣಿಸಿದಂತೆಯೇ ನಡೆಯಬೇಕು ಎಂದವರ ಅಭಿಪ್ರಾಯ. ಇದು ಅವರು ತಪ್ಪನ್ನು ಸಹಿಸಲಾರರು ಎನ್ನುವಂತಿರುತ್ತದೆ. ಆದರೆ ಮತ್ತೊಂದು ಪಕ್ಕದಲ್ಲಿ, ಅಶ್ಲೀಲ ಮಾತುಗಳನ್ನಾಡದವರು “ಹೆಚ್ಚಾಗಿ ಶಾಂತ ಸ್ವಭಾವದವರೂ, . . . ದಿನನಿತ್ಯದ ತೊಂದರೆಗಳನ್ನು ನಿಭಾಯಿಸಲು ಶಕ್ತರಾದ ಪ್ರೌಢ ವ್ಯಕ್ತಿಗಳೂ ಆಗಿರುತ್ತಾರೆ,” ಎಂದು ಒಕಾನರ್‌ ಹೇಳುತ್ತಾರೆ. ಯಾವ ವಿಧದ ವ್ಯಕ್ತಿಯಾಗಿರಲು ನೀವು ಬಯಸುತ್ತೀರಿ?

ಅಶ್ಲೀಲ ಮಾತುಗಳನ್ನಾಡುವುದು ನಿಮ್ಮ ಹೆಸರಿಗೆ ಮಸಿ ಬಳಿಯುತ್ತದೆ. ಹೆಚ್ಚಿನ ಯುವ ಜನರಂತೆ ನೀವು ಕೂಡ ನಿಮ್ಮ ತೋರಿಕೆಯ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುತ್ತೀರಿ. ಒಳ್ಳೇ ಅಭಿಪ್ರಾಯವನ್ನು ಮೂಡಿಸಲು ನೀವು ಬಯಸುತ್ತೀರಿ. ನೀವು ಹೇಗೆ ಕಾಣುತ್ತೀರಿ ಎನ್ನುವುದಕ್ಕಿಂತ ನೀವು ಹೇಗೆ ಮಾತಾಡುತ್ತೀರೋ ಅದು ಇತರರ ಮೇಲೆ ಹೆಚ್ಚಿನ ಪ್ರಭಾವಬೀರುತ್ತದೆ ಎನ್ನುವುದು ನಿಮಗೆ ತಿಳಿದಿದೆಯೇ? ನಿಜತ್ವವೇನೆಂದರೆ, ನಿಮ್ಮ ಮಾತುಗಳು ಈ ಕೆಳಗಿನಂಥ ವಿಚಾರಗಳನ್ನು ನಿರ್ಧರಿಸುತ್ತವೆ:

ಯಾರು ನಿಮ್ಮ ಸ್ನೇಹಿತರಾಗಲು ಬಯಸುತ್ತಾರೆ.

ನೀವು ನಿರ್ದಿಷ್ಟ ಕೆಲಸಕ್ಕೆ ಸೇರಿಸಲ್ಪಡುವಿರೋ ಇಲ್ಲವೋ.

ನಿಮಗೆ ಸಿಗುವ ಗೌರವ.

ನಮ್ಮ ತೋರಿಕೆಯು ಜನರಲ್ಲಿ ಮೂಡಿಸುವ ಯಾವುದೇ ಮೊದಲ ಅಭಿಪ್ರಾಯವು ಹೆಚ್ಚಾಗಿ ನಾವು ಮಾತನಾಡಲು ಆರಂಭಿಸುವಾಗ ಮಾಯವಾಗಬಹುದು. ಒಕಾನರ್‌ ಹೇಳುವುದು: “ನೀವು ಯೋಚಿಸದೇ ಆಡುವ ಹೊಲಸು ಭಾಷೆಯಿಂದಾಗಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಎಷ್ಟೊಂದು ಅವಕಾಶಗಳನ್ನು ಕಳೆದುಕೊಂಡಿದ್ದೀರಿ ಅಥವಾ ಎಷ್ಟು ಬಾರಿ ಯಾರನ್ನಾದರೂ ದೂರಮಾಡಿದ್ದೀರಿ ಅಥವಾ ಗೌರವ ಕಳೆದುಕೊಂಡಿದ್ದೀರಿ ಎಂಬುದು ನಿಮಗೆ ತಿಳಿದಿರಲಿಕ್ಕಿಲ್ಲ.” ಇದರಿಂದ ನೀವು ಯಾವ ಪಾಠ ಕಲಿಯಬಹುದು? ನಿಮ್ಮ ಮಾತು ಅಶ್ಲೀಲವಾಗಿದ್ದರೆ ಹಾನಿಯಾಗುವುದು ನಿಮಗೇ.

ಅಶ್ಲೀಲ ಮಾತುಗಳನ್ನಾಡುವುದು ವಾಕ್‌ ಶಕ್ತಿಯ ದಾತನಿಗೆ ಅಗೌರವ ತೋರಿಸುತ್ತದೆ. ನೀವು ನಿಮ್ಮ ಸ್ನೇಹಿತನೊಬ್ಬನಿಗೆ ಷರ್ಟ್‌ ಇಲ್ಲವೆ ಸ್ನೇಹಿತೆಗೆ ಬ್ಲೌಸನ್ನು ಉಡುಗೊರೆಯಾಗಿ ನೀಡಿದ್ದೀರೆಂದು ಭಾವಿಸಿ. ಆ ಉಡುಪನ್ನು ಅವರು ಚಿಂದಿಯಾಗಿ ಇಲ್ಲವೇ ಕಾಲೊರೆಸಲು ಬಳಸುವುದನ್ನು ನೋಡುವಾಗ ನಿಮಗೆ ಹೇಗನಿಸೀತು? ಹಾಗಾದರೆ ವಾಕ್‌ ಶಕ್ತಿಯೆಂಬ ವರದಾನವನ್ನು ನಾವು ದುರುಪಯೋಗಿಸುವಾಗ ನಮ್ಮ ಸೃಷ್ಟಿಕರ್ತನಿಗೆ ಹೇಗನಿಸಬಹುದು ಎನ್ನುವುದನ್ನು ಸ್ವಲ್ಪ ಯೋಚಿಸಿ. ಆದ್ದರಿಂದ “ಎಲ್ಲಾ ಕಹಿತನ, ಕೋಪ, ಕ್ರೋಧ, ಕಲಹ, ದುರ್ಭಾಷೆ ಇವುಗಳನ್ನೂ ಎಲ್ಲಾ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ,” ಎಂದು ದೇವರ ವಾಕ್ಯವು ಹೇಳಿರುವುದು ಅಚ್ಚರಿಯೇನಲ್ಲ.​—⁠ಎಫೆಸ 4:​31, NIBV.

ನೀವು ನೋಡಿರುವಂತೆ ಅಶ್ಲೀಲ ಮಾತುಗಳನ್ನಾಡುವುದನ್ನು ನಿಲ್ಲಿಸಲು ನ್ಯಾಯಸಮ್ಮತ ಕಾರಣಗಳಿವೆ. ಈ ಪ್ರವೃತ್ತಿಯು ಈಗಾಗಲೇ ಆಳವಾಗಿ ಬೇರೂರಿರುವಲ್ಲಿ ನೀವದನ್ನು ಹೇಗೆ ಕಿತ್ತೊಗೆಯಬಹುದು?

ಮೊದಲನೆಯದಾಗಿ: ಬದಲಾವಣೆ ಮಾಡಬೇಕಾದ ಅಗತ್ಯವನ್ನು ಗ್ರಹಿಸಿಕೊಳ್ಳಿ. ಮಾತಾಡುವ ರೀತಿಯನ್ನು ಬದಲಾಯಿಸುವ ಮೂಲಕ ಹೇಗೆ ಪ್ರಯೋಜನ ಪಡೆದುಕೊಳ್ಳಬಲ್ಲಿರಿ ಎಂದು ಅರ್ಥಮಾಡಿಕೊಳ್ಳುವ ತನಕ ನೀವು ಅಶ್ಲೀಲ ಮಾತುಗಳನ್ನಾಡುವುದನ್ನು ನಿಲ್ಲಿಸಲಾರಿರಿ. ಅಶ್ಲೀಲ ಮಾತುಗಳನ್ನಾಡುವುದನ್ನು ನಿಲ್ಲಿಸಲು ಈ ಮುಂದಿನ ಯಾವ ಅಂಶಗಳು ನಿಮಗೆ ಸ್ಫೂರ್ತಿ ನೀಡುತ್ತವೆ?

ವಾಕ್‌ ಶಕ್ತಿಯ ದಾತನನ್ನು ಮೆಚ್ಚಿಸಬೇಕು

ಇತರರಿಂದ ಹೆಚ್ಚಿನ ಗೌರವ ಪಡೆಯಬೇಕು

ನನ್ನ ಶಬ್ದಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು

ನನ್ನ ವ್ಯಕ್ತಿತ್ವವನ್ನು ಉತ್ತಮಗೊಳಿಸಬೇಕು

ಎರಡನೆಯದಾಗಿ: ಅಶ್ಲೀಲ ಮಾತುಗಳನ್ನಾಡುವಂತೆ ಯಾವುದು ನಿಮ್ಮನ್ನು ಪ್ರೇರಿಸುತ್ತದೆಂಬುದನ್ನು ಕಂಡುಹಿಡಿಯಿರಿ. ಮೆಲಾನೀ ಹೇಳುವುದು: “ಅಶ್ಲೀಲ ಮಾತುಗಳನ್ನಾಡುವುದು ನನ್ನಲ್ಲಿ ದಿಟ್ಟತನವನ್ನು ಉಂಟುಮಾಡಿತು. ಜನರು ನನ್ನೊಂದಿಗೆ ದರ್ಪದಿಂದ ವ್ಯವಹರಿಸುವುದು ನನಗೆ ಇಷ್ಟವಿರಲಿಲ್ಲ. ನನ್ನೆಲ್ಲಾ ಸ್ನೇಹಿತರು ಮಾಡಿದಂತೆಯೇ ಜನರನ್ನು ಗದರಿಸುವ ಮೂಲಕ ಮೇಲುಗೈ ಪಡೆಯಲು ಬಯಸುತ್ತಿದ್ದೆ.”

ನಿಮ್ಮ ಕುರಿತೇನು? ನೀವೇಕೆ ಅಶ್ಲೀಲ ಮಾತುಗಳನ್ನಾಡುತ್ತೀರಿ ಎನ್ನುವುದನ್ನು ತಿಳಿದುಕೊಳ್ಳುವುದು ನೀವು ಸಮಸ್ಯೆಯನ್ನು ಹೇಗೆ ಬಗೆಹರಿಸುವಿರೆಂಬುದನ್ನು ನಿರ್ಧರಿಸಲು ಅತಿ ಮುಖ್ಯ. ಉದಾಹರಣೆಗೆ, ಎಲ್ಲರೂ ಅಶ್ಲೀಲ ಮಾತುಗಳನ್ನಾಡುತ್ತಾರೆಂಬ ಕಾರಣಕ್ಕೆ ನೀವೂ ಆಡುವಲ್ಲಿ ನಿಮ್ಮ ಸ್ವಂತ ಸಾಮರ್ಥ್ಯಗಳಲ್ಲಿ ಭರವಸೆ ಹೆಚ್ಚಿಸಲು ಕಲಿಯುವ ಅಗತ್ಯ ನಿಮಗಿದೆ. ನಿಮ್ಮ ಸ್ವಂತ ವ್ಯಕ್ತಿತ್ವದ ಬಗ್ಗೆ ಯೋಗ್ಯ ಹೆಮ್ಮೆಪಡುವುದು ಅಭಿವೃದ್ಧಿಯ ಅತ್ಯಾವಶ್ಯಕ ಭಾಗ. ಇದು ಅಶ್ಲೀಲ ಮಾತುಗಳನ್ನಾಡುವ ಪ್ರವೃತ್ತಿಯನ್ನು ಹೋಗಲಾಡಿಸಲು ಒಂದು ದೊಡ್ಡ ಸಹಾಯಕ.

ಮೂರನೆಯದಾಗಿ: ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲಿಕ್ಕಾಗಿ ಪರ್ಯಾಯ ಮಾರ್ಗಗಳನ್ನು ಹುಡುಕಿರಿ. ಈ ಪ್ರವೃತ್ತಿಯನ್ನು ಹೋಗಲಾಡಿಸಲು ಅಶ್ಲೀಲ ಮಾತುಗಳನ್ನಾಡುವಂತೆ ಮಾಡುವ ಮಾನಸಿಕ ಪ್ರಚೋದನೆಯನ್ನು ನಿಗ್ರಹಿಸುವುದಷ್ಟೇ ಸಾಲದು. ದುರ್ಭಾಷೆ ಬಳಸುವ ಪ್ರವೃತ್ತಿಯನ್ನು ಜಯಿಸುವುದರಲ್ಲಿ “ನೂತನ ಸ್ವಭಾವವನ್ನು” ಧರಿಸಿಕೊಳ್ಳುವುದೂ ಸೇರಿದೆ. (ಎಫೆಸ 4:22-24) ಇದು ಹೆಚ್ಚಿನ ಸ್ವ-ನಿಯಂತ್ರಣವನ್ನು ಹಾಗೂ ಸ್ವ-ಗೌರವವನ್ನು ಗಳಿಸುವಂತೆ ಅಲ್ಲದೇ ಇತರರನ್ನೂ ಗೌರವಿಸುವಂತೆ ಸಹಾಯ ಮಾಡುವುದು.

ನೂತನ ಸ್ವಭಾವವನ್ನು ಧರಿಸಿಕೊಳ್ಳುವಂತೆ ಮತ್ತು ಅದನ್ನು ಕಾಪಾಡಿಕೊಳ್ಳುವಂತೆ ಈ ಮುಂದಿನ ಶಾಸ್ತ್ರವಚನಗಳು ನಿಮಗೆ ಸಹಾಯ ಮಾಡುವವು.

ಕೊಲೊಸ್ಸೆ 3:2: “ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ.”

ಅನ್ವಯ: ಯೋಗ್ಯವಾದ ವಿಷಯಗಳನ್ನು ಮಾನ್ಯಮಾಡುವಂತೆ ನಿಮ್ಮ ಮನಸ್ಸನ್ನು ತರಬೇತುಗೊಳಿಸಿ. ನೀವು ಮಾತಾಡುವ ವಿಧವನ್ನು ನಿಮ್ಮ ಆಲೋಚನೆಗಳು ಪ್ರಭಾವಿಸುತ್ತವೆ.

ಜ್ಞಾನೋಕ್ತಿ 13:20: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”

ಅನ್ವಯ: ನಿಮ್ಮ ಸಹವಾಸಿಗಳು ಉಪಯೋಗಿಸುವ ಮಾತು ನಿಮ್ಮ ಮೇಲೂ ಪ್ರಭಾವಬೀರಬಹುದು.

ಕೀರ್ತನೆ 19:14: “ಯೆಹೋವನೇ, ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ.”

ಅನ್ವಯ: ನಾವು ವಾಕ್‌ ಶಕ್ತಿಯೆಂಬ ವರದಾನವನ್ನು ಹೇಗೆ ಉಪಯೋಗಿಸುತ್ತೇವೆಂಬುದನ್ನು ಯೆಹೋವನು ಗಮನಿಸುತ್ತಾನೆ.

ಇನ್ನೂ ಹೆಚ್ಚಿನ ಸಹಾಯದ ಅಗತ್ಯ ನಿಮಗಿದೆಯೇ? ನೀವು ದುರ್ಭಾಷೆಯನ್ನು ಎಷ್ಟು ಸಲ ಉಪಯೋಗಿಸಿದ್ದೀರೆಂಬುದನ್ನು ಪಟ್ಟಿಮಾಡಲು ಮತ್ತು ನಿಮ್ಮ ಪ್ರಗತಿಯನ್ನು ಪತ್ತೆಹಚ್ಚಲು ಈ ಮೇಲಿನ ತಃಖ್ತೆಯನ್ನು ಏಕೆ ಉಪಯೋಗಿಸಬಾರದು? ನಿಮ್ಮ ಶಬ್ದಭಂಡಾರವನ್ನು ಎಷ್ಟು ಬೇಗನೆ ಹೆಚ್ಚಿಸಲು ಶಕ್ತರಾಗುವಿರೆಂದರೆ, ಅದನ್ನು ಗಮನಿಸಿ ನಿಮಗೇ ಆಶ್ಚರ್ಯವಾಗುವುದು!(g 3/08)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

ಇದರ ಕುರಿತು ಯೋಚಿಸಿರಿ

ಅಶ್ಲೀಲ ಮಾತುಗಳ ಬಳಕೆ

ನಿಮ್ಮೆಡೆಗೆ ಯಾವ ರೀತಿಯ ಸ್ನೇಹಿತರನ್ನು ಆಕರ್ಷಿಸುವುದು?

ನೀವು ಉದ್ಯೋಗಕ್ಕೆ ಸೇರಿಸಲ್ಪಡುವ ಸಾಧ್ಯತೆಯನ್ನು ಹೇಗೆ ಬಾಧಿಸಬಹುದು?

ಇತರರಲ್ಲಿ ನಿಮ್ಮ ಬಗ್ಗೆ ಯಾವ ಅಭಿಪ್ರಾಯವನ್ನು ಮೂಡಿಸುವುದು?

[ಪಾದಟಿಪ್ಪಣಿಗಳು]

^ ಈ ಲೇಖನದಲ್ಲಿರುವ ಹೆಸರುಗಳನ್ನು ಬದಲಾಯಿಸಲಾಗಿದೆ.

^ ದುರ್ಭಾಷೆಯಿಂದ ದೂರವಿರಲು ಕ್ರೈಸ್ತರಿಗೆ ಬಲವಾದ ಕಾರಣವಿದೆ. ಏಕೆಂದರೆ ಬೈಬಲ್‌ ಹೇಳುವುದು: “ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು.” “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ.”​—⁠ಎಫೆಸ 4:29; ಕೊಲೊಸ್ಸೆ 4:⁠6.

[ಪುಟ 21ರಲ್ಲಿರುವ ಚಾರ್ಟು]

ನಿಮ್ಮ ಪ್ರಗತಿಯನ್ನು ಪತ್ತೆಹಚ್ಚಿ

ಸೋಮವಾರ ಮಂಗಳವಾರ ಬುಧವಾರ ಗುರುವಾರ ಶುಕ್ರವಾರ ಶನಿವಾರ ಭಾನುವಾರ

ವಾರ 1 ..... ..... ..... ..... ..... ..... .....

ವಾರ 2 ..... ..... ..... ..... ..... ..... .....

ವಾರ 3 ..... ..... ..... ..... ..... ..... .....

ವಾರ 4 ..... ..... ..... ..... ..... ..... .....

[ಪುಟ 20ರಲ್ಲಿರುವ ಚಿತ್ರ]

ಬಹುಮೂಲ್ಯ ಉಡುಗೊರೆಯನ್ನು ನೀವು ದುರುಪಯೋಗಿಸುವುದಿಲ್ಲ. ವಾಕ್‌ ಶಕ್ತಿಯೆಂಬ ವರದಾನವನ್ನು ದುರುಪಯೋಗಿಸುವುದೇಕೆ?