ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಿಮದಲ್ಲೂ ಹಾಯಾಗಿರುವುದು!

ಹಿಮದಲ್ಲೂ ಹಾಯಾಗಿರುವುದು!

ಹಿಮದಲ್ಲೂ ಹಾಯಾಗಿರುವುದು!

ಫಿನ್‌ಲೆಂಡ್‌ನ ಎಚ್ಚರ! ಲೇಖಕರಿಂದ

ಮೈಯನ್ನು ಬೆಚ್ಚಗಿಡುವ ಉಡುಪು ಮತ್ತು ಪಾದರಕ್ಷೆಗಳು ಇಲ್ಲದಿರುವಲ್ಲಿ ಉತ್ತರ ಅಕ್ಷಾಂಶದ ಪ್ರದೇಶಗಳ ಕೊರೆಯುವ ಚಳಿಯನ್ನು ಸಹಿಸುವುದು ಕಷ್ಟ ಮಾತ್ರವಲ್ಲ ಸಾವು ಕೂಡ ಖಂಡಿತ. ಆದರೂ, ವರ್ಷದ ಯಾವುದೇ ಋತುವಾಗಿರಲಿ ಅಸಂಖ್ಯಾತ ಪ್ರಾಣಿಪಕ್ಷಿಗಳ ಜೀವನ ಇಲ್ಲಿ ಸಾಗುತ್ತಿದೆ. ಈ ಜೀವಿಗಳು ತುಪ್ಪುಳುಚರ್ಮ ಅಥವಾ ಗರಿಗಳ ಬೆಚ್ಚಗಿನ ಹೊದಿಕೆಯಿಂದ ಪ್ರಯೋಜನ ಹೊಂದುವುದಲ್ಲದೇ ಹಿಮದ ಆಶ್ಚರ್ಯಕರ ನಿರೋಧಕ ಶಕ್ತಿಯನ್ನೂ ಉತ್ತಮವಾಗಿ ಬಳಸಿಕೊಳ್ಳುತ್ತವೆ.

ಹಿಮವು ನೀರಾವಿಯಿಂದ ಉಂಟಾದ ಮಂಜುಗಡ್ಡೆಯ ಹರಳುಗಳಿಂದ ಕೂಡಿದೆ. ಹತ್ತು ಇಂಚು ಹಿಮವು ಸುಮಾರು ಒಂದು ಇಂಚು ನೀರಿಗೆ ಸಮಾನ. ಹೀಗೆ ಹಿಮದಲ್ಲಿ ಬಹಳಷ್ಟು ಗಾಳಿ ಇರುತ್ತದೆ. ಈ ಗಾಳಿ, ಹರಳುಗಳ ಮಧ್ಯೆ ಬಂಧಿಸಲ್ಪಟ್ಟಿದೆ. ಹಿಮದ ಈ ಆಶ್ಚರ್ಯಕರ ರಚನೆ ವಿಪರೀತ ಚಳಿಯ ನಿರೋಧಕವಾಗಿದ್ದು ಬೀಜ ಮತ್ತು ಸಸ್ಯಗಳನ್ನು ಹಿಮಕರಗುವ ವಸಂತಕಾಲದ ತನಕ ಸಂರಕ್ಷಿಸುತ್ತದೆ. ಈ ಸಮಯದಲ್ಲಿ, ಘನೀಕೃತ ನೀರಿನ ದೊಡ್ಡ ಜಲಾಶಯದಂತಿರುವ ಹಿಮವು ಕರಗಿ ನೆಲಕ್ಕೆ ನೀರನ್ನು ಒದಗಿಸಿ ನದಿಗಳನ್ನು ತುಂಬಿಸುತ್ತದೆ.

ಹಿಮಾವೃತ ಬದುಕು

ತುಪ್ಪುಳುಚರ್ಮವಿರುವ ಬೇರೆಬೇರೆ ಚಿಕ್ಕಪುಟ್ಟ ಪ್ರಾಣಿಗಳು ಹಿಮದ ಕೆಳಗಿರುವ ಸುರಂಗ ಮಾರ್ಗಗಳಲ್ಲಿ ಸರಸರನೆ ಚಲಿಸುತ್ತಾ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗುತ್ತವೆ. ಅವುಗಳಲ್ಲಿ ಹೆಚ್ಚಿನವು ಆಹಾರದ ಹುಡುಕಾಟದಲ್ಲಿ ಮೈಮರೆತಿರುತ್ತವೆ. ಇವುಗಳಲ್ಲಿ ಲೆಮಿಂಗ್‌ಗಳು, ವೋಲ್‌ಗಳು, ಉದ್ದಮೂತಿಯ ಸಣ್ಣ ಇಲಿಗಳು ಸೇರಿವೆ. ಈ ಇಲಿಗಳು ನಿಶಾಚರಿ ಕೀಟಭಕ್ಷಕ ಮಖಮಲ್‌ ಹೆಗ್ಗಣಗಳ ಜಾತಿಯವು. ಇನ್ನೊಂದು ಕಡೆಯಲ್ಲಿ ಇಲಿಗಳು ಹಿಮದ ಮೇಲ್ಮೈಮೇಲೆ ಸರ್ರನೆ ಓಡುತ್ತಾ ಕಾಳುಗಳು, ಹಣ್ಣುಗಳು, ಬೀಜಗಳು ಮತ್ತು ಎಳೆಯ ಮರಗಳ ಮೃದು ಹೊರ ತೊಗಟೆಗಳನ್ನು ಹುಡುಕಾಡುತ್ತಿರುತ್ತವೆ.

ಈ ಚಿಕ್ಕ ಸಸ್ತನಿಗಳು ದೇಹದ ಉಷ್ಣತೆಯನ್ನು ಸಮರ್ಪಕವಾಗಿ ಹೇಗೆ ಕಾಪಾಡಿಕೊಳ್ಳುತ್ತವೆ? ಅನೇಕ ಸಸ್ತನಿಗಳಲ್ಲಿ ಚಳಿಗಾಲದಲ್ಲಿ ಬೆಚ್ಚಗಿಡುವ ತುಪ್ಪುಳುಕವಚ ಮಾತ್ರವಲ್ಲ ದೇಹದೊಳಗೆ ಶಾಖೋತ್ಪತ್ತಿಮಾಡುವ ಶೀಘ್ರಗತಿಯ ಜೀವರಾಸಾಯನಿಕ ಕ್ರಿಯೆಯೂ ನಡೆಯುತ್ತದೆ. ನೀವು ಊಹಿಸಸಾಧ್ಯವಿರುವಂತೆ ಈ ಜೀವಂತ ತಾಪಕಗಳಿಗೆ ಬಹಳಷ್ಟು ಇಂಧನದ ಆವಶ್ಯಕತೆ ಇದೆ. ಉದಾಹರಣೆಗೆ ಉದ್ದಮೂತಿಯ ಇಲಿಗಳು ಸರಿಸುಮಾರು ತಮ್ಮ ದೇಹದ ತೂಕದಷ್ಟು ಕೀಟಗಳನ್ನು, ಮರಿಹುಳುಗಳನ್ನು ಮತ್ತು ಗೂಡುಹುಳುಗಳನ್ನು ತಿನ್ನುತ್ತವೆ. ಪ್ರಮಾಣಾನುಗುಣವಾಗಿ ಉದ್ದಮೂತಿಯ ಅತಿ ಚಿಕ್ಕ ಇಲಿಗಳು ಇನ್ನೂ ಹೆಚ್ಚು ತಿನ್ನುತ್ತವೆ! ಆದ್ದರಿಂದಲೇ ಅವುಗಳು ಎಚ್ಚರವಿರುವ ಪ್ರತಿಯೊಂದು ಕ್ಷಣವೂ ಆಹಾರಕ್ಕಾಗಿ ಹುಡುಕಾಡುತ್ತಿರುತ್ತವೆ.

ಇತರ ಪರಭಕ್ಷಕ ಪ್ರಾಣಿಗಳಿಗೆ, ಗೂಬೆ ಮತ್ತು ವೀಸಲ್‌ ಜಾತಿಗೆ ಸೇರಿದ ಅರ್ಮಿನ್‌ ಹಾಗೂ ಅತಿ ಚಿಕ್ಕ ವೀಸಲ್‌ಗಳ ಸಮೇತ ಅನೇಕ ಚಿಕ್ಕ ಸಸ್ತನಿಗಳು ನೆಚ್ಚಿನ ಆಹಾರ. ಸಣಕಲು ದೇಹದ ಚುರುಕು ವೀಸಲ್‌ಗಳು ತಮ್ಮ ಆಹಾರವನ್ನು ಅರಸುತ್ತಾ ಅಂಕುಡೊಂಕಾದ ಬಿಲಗಳಲ್ಲಿ ಒಳಗಿಂದೊಳಗೇ ಒಂದರಿಂದ ಮತ್ತೊಂದಕ್ಕೆ ಓಡುವುದರಲ್ಲಿ ಬಹಳ ಕುಶಲತೆ ಹೊಂದಿವೆ. ವೀಸಲ್‌ಗಳು ತಮಗಿಂತ ದೊಡ್ಡ ಗಾತ್ರದ ಮೊಲಗಳನ್ನೂ ಬೇಟೆಯಾಡುತ್ತವೆ.

ಗೂಬೆಗಳು ಸಹ ಕೊಳ್ಳೆಯನ್ನು ಅರಸುತ್ತಿರುತ್ತವೆ. ದೊಡ್ಡದಾದ ಬೂದು ಗೂಬೆಯ ಶ್ರವಣಶಕ್ತಿ ಎಷ್ಟು ತೀಕ್ಷ್ಣವಾಗಿದೆಯೆಂದರೆ ದಟ್ಟವಾಗಿರದ ಹಿಮದಡಿಯಲ್ಲಿ ಚಲಿಸುತ್ತಿರುವ ವೋಲ್‌ ಅನ್ನೂ ಅದು ಕಂಡುಹಿಡಿಯಬಲ್ಲದು. ಒಮ್ಮೆ ತನ್ನ ಕೊಳ್ಳೆಯನ್ನು ಕಂಡುಹಿಡಿದ ನಂತರ ಅದು ರಭಸದಿಂದ ಮುನ್ನುಗ್ಗಿ ಅಸಹಾಯಕ ಬಲಿಯನ್ನು ತನ್ನ ಮೊನಚಾದ ಕಾಲುಗುರುಗಳಿಂದ ಹಿಡಿದು ದೂರಕ್ಕೆ ಕೊಂಡೊಯ್ಯುತ್ತದೆ. ದಟ್ಟವಾದ ಹಿಮವಿರುವಾಗ ಅನೇಕ ಪರಭಕ್ಷಕ ಪ್ರಾಣಿಗಳು ಹಸಿವು ಅಥವಾ ಆಹಾರಾಭಾವದಿಂದ ಸಾಯುತ್ತವೆ. ಇದರಿಂದಾಗಿ, ಬೇಟೆಯಾಗುವ ಪ್ರಾಣಿಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತದೆ.

ಅನೇಕ ಪ್ರಾಣಿಗಳು ಚಳಿಗಾಲದಲ್ಲಿ ಆಹಾರದ ಅಭಾವವಾಗದಂತೆ ಬೇಸಿಗೆಯ ತಿಂಗಳುಗಳಲ್ಲಿ ಯಥೇಚ್ಛವಾಗಿ ದೊರಕುವ ಆಹಾರವನ್ನು ಪ್ರತ್ಯೇಕವಾಗಿ ಒಟ್ಟುಗೂಡಿಸಿಟ್ಟು ಚಳಿಗಾಲದಲ್ಲಿ ಬಳಸುತ್ತವೆ. ಆದರೆ ಸಾಮಾನ್ಯವಾಗಿ ಚಳಿಗಾಲದಲ್ಲೂ ಸ್ವಲ್ಪಮಟ್ಟಿಗಿನ ಆಹಾರ ಯಾವಾಗಲೂ ದೊರಕುತ್ತದೆ. ಉದಾಹರಣೆಗೆ, ಕಡವೆಗಳು ಮರಗಳ, ಹೆಚ್ಚಾಗಿ ಪೈನ್‌ ಮರಗಳ ಎಳೆಯ ಕೊಂಬೆಗಳನ್ನು ತಿನ್ನುತ್ತಿರುತ್ತವೆ. ಅಳಿಲುಗಳು ತಮ್ಮ ಉಗ್ರಾಣಗಳಲ್ಲಿ ಬಚ್ಚಿಟ್ಟ ಪುಷ್ಟಿಕರ ಕಾಳುಗಳನ್ನು ಹಾಗೂ ಮೊಲಗಳು ಎಳೆಯ ತೊಗಟೆ, ಸಣ್ಣ ರೆಂಬೆಗಳು ಮತ್ತು ಮೊಗ್ಗುಗಳನ್ನು ತಿನ್ನುತ್ತವೆ. ಕೆಲವು ಜಾತಿಯ ಹಕ್ಕಿಗಳು ಘನೀಕೃತ ಬೆರಿ ಹಣ್ಣುಗಳನ್ನು ಮತ್ತು ಪೈನ್‌ ಮರದ ಚಿಗುರನ್ನು ತಿನ್ನಲು ಇಷ್ಟಪಡುತ್ತವೆ.

ನೇರವಾಗಿ ಹಿಮಕ್ಕೆರಗುವುದು!

ಅಸಂಖ್ಯಾತ ಹಕ್ಕಿಗಳು ಹಗಲಲ್ಲಿ ವಿಶ್ರಮಿಸುವಾಗ ಅಥವಾ ರಾತ್ರಿಯಲ್ಲಿ ಮಲಗುವಾಗ ಬೆಚ್ಚಗಿರಲಿಕ್ಕಾಗಿ ಹಿಮದ ನಿರೋಧಕ ಶಕ್ತಿಯನ್ನು ಬಳಸಿಕೊಳ್ಳುತ್ತವೆ. ಇವುಗಳಲ್ಲಿ ಹೇಸಲ್‌ಹೆನ್‌, ಕಪ್ಪು ಗ್ರೌಸ್‌, ಟಾರ್ಮಿಗನ್‌ ಅಲ್ಲದೇ ಲಿನಿಟ್‌, ಬುಲ್‌ಫಿಂಚ್‌ ಮತ್ತು ಗುಬ್ಬಿಗಳಂಥ ಚಿಕ್ಕ ಹಕ್ಕಿಗಳೂ ಸೇರಿವೆ. ಹಿಮವು ದಟ್ಟವೂ ಮೆತ್ತಗೂ ಆಗಿರುವಲ್ಲಿ ಕೆಲವೊಂದು ಹಕ್ಕಿಗಳು, ಕಡಲಹಕ್ಕಿಗಳು ನೀರಿಗೆ ಧುಮುಕುವಂತೆ ಹಾರುತ್ತಲೇ ನೇರವಾಗಿ ಹಿಮದೊಳಗೆ ಎರಗಬಲ್ಲವು. ಈ ಚತುರ ಉಪಾಯವು ಪರಭಕ್ಷಕ ಪ್ರಾಣಿಗಳಿಗೆ ನೋಡಲು ಯಾ ಮೂಸಲು ಯಾವುದೇ ಹೆಜ್ಜೆ ಗುರುತನ್ನು ಬಿಟ್ಟುಹೋಗದಂತೆ ಸಾಧ್ಯಮಾಡುತ್ತದೆ.

ಹಕ್ಕಿಗಳು ಒಮ್ಮೆ ಹಿಮದ ದಿಬ್ಬದೊಳಗೆ ಹೋದಾಗ ಮೂರು ಅಡಿ ಉದ್ದದ ಸಮತಲದ ಕುಳಿಯನ್ನು ತೋಡುತ್ತವೆ. ಇದನ್ನು ಫಿನ್‌ಲೆಂಡ್‌ನ ಭಾಷೆಯಲ್ಲಿ ಕ್ಯೆಪೀ ಎಂದು ಕರೆಯುತ್ತಾರೆ. ರಾತ್ರಿಯ ಗಾಳಿ ಹಿಮದೊಳಗೆ ಅಡಗಿರುವ ಜೀವಿಗಳ ಯಾವುದೇ ಗುರುತನ್ನು ಮೇಲ್ಮೈಯಿಂದ ಅಳಿಸಿಹಾಕುತ್ತದೆ. ಜನರು ನಡೆಯುತ್ತಾ ಈ ಅಡಗುದಾಣದ ಹತ್ತಿರ ಹೆಜ್ಜೆಹಾಕುವಲ್ಲಿ ಹಿಮದ ಕರಕರ ಸದ್ದು ಹಕ್ಕಿಗಳನ್ನು ಎಚ್ಚರಿಸುತ್ತದೆ. ಹಕ್ಕಿಗಳು ಆವೇಶದಿಂದ ರೆಕ್ಕೆ ಬಡಿಯುತ್ತಾ ಹೊರಬರುವಾಗ ಉಂಟಾಗುವ ಹಿಮದ ಸಿಡಿತದ ಶಬ್ದದಿಂದ ಅವರಿಗೆಷ್ಟು ಆಘಾತವಾಗಬಲ್ಲದು!

ಚಳಿಗಾಲದ ‘ಪೋಷಾಕನ್ನು’ ಧರಿಸುವುದು

ಋತು ಬದಲಾಗುವಾಗ, ಉತ್ತರ ಧ್ರುವದ ಜೀವಿಗಳು ಬೇಸಿಗೆಯ ತುಪ್ಪುಳುಚರ್ಮ ಅಥವಾ ಗರಿಗಳನ್ನು ಕಳೆದುಕೊಂಡು ಚಳಿಗಾಲಕ್ಕೆ ತಕ್ಕದಾದ ‘ಪೋಷಾಕನ್ನು’ ಧರಿಸಿಕೊಳ್ಳುವ ಮೂಲಕ ತಮ್ಮ ವೇಷ ಬದಲಾಯಿಸುತ್ತವೆ. ಫಿನ್‌ಲೆಂಡ್‌ನಲ್ಲಿ ಧ್ರುವ ಪ್ರದೇಶದ ನರಿಗಳು, ನೀಲಿ ಮೊಲ, ಹಲವು ಜಾತಿಯ ವೀಸಲ್‌ಗಳು ಶರತ್ಕಾಲದಲ್ಲಿ ಬಿಳಿಯ ಅಥವಾ ಬಹುತೇಕ ಬಿಳಿಯದಾದ ದಟ್ಟ ತುಪ್ಪುಳುಚರ್ಮವನ್ನು ಬೆಳೆಸಿಕೊಳ್ಳುತ್ತವೆ. *

ಅದೇ ಪ್ರಕಾರ, ಬಣ್ಣಬಣ್ಣದ ಮಚ್ಚೆಗಳುಳ್ಳ ಟಾರ್ಮಿಗನ್‌ ಹಕ್ಕಿಯ ಪಕ್ವ ಗರಿಗಳು ಹೊಳೆಯುವ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಬೇಸಿಗೆಯ ತಿಂಗಳುಗಳಲ್ಲಿ ಅವುಗಳ ಕಾಲ್ಬೆರಳುಗಳಲ್ಲಿ ಅಲ್ಲೊಂದು ಇಲ್ಲೊಂದು ಕಾಣಬರುವ ಗರಿಗಳು ಈಗ ಒತ್ತೊತ್ತಾಗಿರುತ್ತವೆ ಮತ್ತು ಅವು “ಹಿಮ-ಷೂಗಳಂತೆ” ಕಾರ್ಯವೆಸಗುತ್ತವೆ. ಪೋಷಾಕನ್ನು ಬದಲಾಯಿಸುವಾಗ ಅವುಗಳ ಬಣ್ಣಬಣ್ಣದ ಗರಿಗಳು ಭಾಗಶಃ ಹಿಮಾವೃತವಾದ ನೆಲದಂತಿರುವುದರಿಂದ ಬೇಟೆಗೆ ಬಲಿಯಾಗುವುದರಿಂದ ಸಂರಕ್ಷಣೆಯನ್ನು ಪಡೆಯುತ್ತವೆ.

ಅನೇಕ ಹಕ್ಕಿಗಳು ಹಿಮ ಅಥವಾ ಮಂಜಿನಲ್ಲಿ ಬರಿಗಾಲಲ್ಲೇ ನಡೆಯುತ್ತವಾದರೂ ಅವುಗಳಿಗೆ ಯಾವುದೇ ಹಾನಿ ಅಥವಾ ತೊಂದರೆಯಾಗುವುದಿಲ್ಲ ಏಕೆಂದು ನೀವೆಂದಾದರೂ ಆಶ್ಚರ್ಯಗೊಂಡಿದ್ದೀರೋ? ಅವುಗಳ ಕಾಲುಗಳಲ್ಲಿ ಸೊಗಸಾಗಿ ರೂಪಿಸಲ್ಪಟ್ಟ ಉಷ್ಣ ವಿನಿಮಯಕವಿದೆ. ಈ ಬೆರಗುಗೊಳಿಸುವ ವಿನ್ಯಾಸವು ಹೃದಯದ ಅಪಧಮನಿಯಿಂದ ಬಿಸಿರಕ್ತ ಕಾಲುಗಳಿಗೆ ಹರಿಯುವಂತೆ ಮತ್ತು ಪಾದಗಳಿಂದ ಹಿಂಬರುವ ತಣ್ಣಗಾದ ರಕ್ತವನ್ನು ಬಿಸಿಯಾಗುವಂತೆ ಮಾಡುತ್ತದೆ.

ಹೌದು, ಹಿಮಮಯ ಶೀತವಲಯದಿಂದ ಹಿಡಿದು ಸೆಕೆಯಿಂದ ಕೂಡಿದ ಉಷ್ಣವಲಯಗಳಲ್ಲಿರುವ ಜೀವರಾಶಿಯು ಭೂಮಿಯ ತಾಪ ಮತ್ತು ಚಳಿಯಲ್ಲಾಗುವ ವೈಪರೀತ್ಯಗಳನ್ನು ಸಹಿಸಿಕೊಳ್ಳುತ್ತಾ ಕೇವಲ ಬದುಕುತ್ತದೆ ಮಾತ್ರವಲ್ಲ ವೃದ್ಧಿಯೂ ಆಗುತ್ತದೆ. ಇಂತಹ ಜೀವಿಗಳನ್ನು ಕಂಡುಹಿಡಿದು ಅವುಗಳ ಛಾಯಾಚಿತ್ರ ತೆಗೆಯುವ ಸ್ತ್ರೀಪುರುಷರನ್ನು ಅವರ ಪ್ರಯತ್ನಗಳಿಗಾಗಿ ಸೂಕ್ತವಾಗಿಯೇ ಎಷ್ಟೊಂದು ಹೊಗಳಲಾಗುತ್ತದೆ! ಹಾಗಿರುವಲ್ಲಿ, ಭೂಮಿಯಲ್ಲಿ ಜೀವಂತ ಅದ್ಭುತಗಳನ್ನು ಸೃಷ್ಟಿಮಾಡಿದಾತನನ್ನು ನಾವು ಎಷ್ಟು ಹೆಚ್ಚಾಗಿ ಸ್ತುತಿಸಬೇಕು! ಪ್ರಕಟನೆ 4:11 ತಿಳಿಸುವುದು: “ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” (g 2/08)

[ಪಾದಟಿಪ್ಪಣಿ]

^ ಸಾಮಾನ್ಯ ಹೆಸರುಗಳು ಭಿನ್ನವಾಗಿರಬಹುದು. ಉದಾಹರಣೆಗೆ, ನೀಲಿ ಮೊಲಕ್ಕೆ ಬೆಟ್ಟದ ಮೊಲ, ಟಂಡ್ರ ಮೊಲ ಹಾಗೂ ಇನ್ನೂ ಅನೇಕ ಹೆಸರುಗಳಿವೆ.

[ಪುಟ 14ರಲ್ಲಿರುವ ಚೌಕ/ಚಿತ್ರ]

ಚಳಿಗಾಲದಲ್ಲೂ ಕಾರ್ಯಮಗ್ನ ಕ್ರೈಸ್ತರು

ಚಳಿಗಾಲದಲ್ಲಿ ಫಿನ್‌ಲೆಂಡ್‌ನಲ್ಲಿರುವ ಯೆಹೋವನ ಸಾಕ್ಷಿಗಳು ಚಳಿಗಾಲಕ್ಕೆ ತಕ್ಕದಾದ ಉಡುಪನ್ನು ತೊಟ್ಟು ಆಧ್ಯಾತ್ಮಿಕ ಚಟುವಟಿಕೆಗಳನ್ನು ಮುಂದುವರಿಸುತ್ತಾರೆ. ಕೆಲವು ಸಾಕ್ಷಿಗಳು ಕ್ರೈಸ್ತ ಕೂಟಗಳಿಗಾಗಿ ಬಹು ದೂರದ ವರೆಗೆ ಪ್ರಯಾಣಿಸಬೇಕಾದರೂ ಸಂತೋಷದಿಂದ ಹಾಜರಾಗುತ್ತಾರೆ. ಆದ್ದರಿಂದಲೇ ಗ್ರಾಮೀಣ ಕ್ಷೇತ್ರಗಳಲ್ಲಿ ದೀರ್ಘಾವಧಿಯ ಚಳಿಗಾಲದಲ್ಲೂ ಕೂಟದ ಹಾಜರಿ ಕಡಿಮೆಯಾಗುವುದಿಲ್ಲ. ಸಾರ್ವಜನಿಕ ಶುಶ್ರೂಷೆಯಲ್ಲೂ ಯೆಹೋವನ ಸಾಕ್ಷಿಗಳು ಕಾರ್ಯಮಗ್ನರಾಗಿರುತ್ತಾರೆ. ನಿಜವಾಗಿಯೂ ಸೃಷ್ಟಿಕರ್ತನಾದ ಯೆಹೋವ ದೇವರಿಗೆ ಸಾಕ್ಷಿ ಕೊಡುವುದನ್ನು ಅವರು ಮಹಾ ಸದವಕಾಶವಾಗಿ ಪರಿಗಣಿಸುತ್ತಾರೆ. ಆದ್ದರಿಂದಲೇ ಆತನ ರಾಜ್ಯವನ್ನು ಘೋಷಿಸಲಿಕ್ಕಾಗಿ ತಮ್ಮ ಮನೆಯೊಳಗಿನ ಬೆಚ್ಚಗಿನ ವಾತಾವರಣವನ್ನು ಸಹ ಬಿಟ್ಟು ಸಂತೋಷದಿಂದ ಹೊರಗೆ ಕಾಲಿರಿಸುತ್ತಾರೆ.​—⁠ಮತ್ತಾಯ 24:⁠14.

[ಪುಟ 12, 13ರಲ್ಲಿರುವ ಚಿತ್ರ]

ಗವಿಯೊಳಗಿರುವ ಪೆಟ್ರೆಲ್‌ಗಳು

[ಕೃಪೆ]

By courtesy of John R. Peiniger

[ಪುಟ 12, 13ರಲ್ಲಿರುವ ಚಿತ್ರ]

ಅರ್ಮಿನ್‌

[ಕೃಪೆ]

Mikko Pöllänen/Kuvaliiteri

[ಪುಟ 13ರಲ್ಲಿರುವ ಚಿತ್ರ]

ಹಂಸಗಳು

[ಪುಟ 13ರಲ್ಲಿರುವ ಚಿತ್ರ]

ಮೊಲ

[ಪುಟ 13ರಲ್ಲಿರುವ ಚಿತ್ರ]

ಧ್ರುವ ನರಿ