ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನ ದೃಷ್ಟಿಕೋನ

ಧ್ಯಾನ

ಧ್ಯಾನ

ಧ್ಯಾನ ಅಂದರೇನು?

“ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು.”—ಕೀರ್ತನೆ 77:12.

ಜನರ ಅಭಿಪ್ರಾಯ:

ಧ್ಯಾನದಲ್ಲಿ ಅನೇಕ ವಿಧಗಳಿವೆ. ಇವುಗಳಲ್ಲಿ ಹೆಚ್ಚಿನವು ಪುರಾತನ ಧರ್ಮಗಳಿಂದ ಬಂದದ್ದಾಗಿವೆ. ಒಬ್ಬ ಬರಹಗಾರನು ಹೇಳುವುದು, “ನಮ್ಮ ಮನಸ್ಸನ್ನು ಶೂನ್ಯವಾಗಿ ಇಟ್ಟಾಗಲೇ ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ.” ಮನಸ್ಸನ್ನು ಶೂನ್ಯವಾಗಿರಿಸಿ ನಿರ್ದಿಷ್ಟ ಪದಗಳ ಮೇಲೆ ಅಥವಾ ಚಿತ್ರಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದರೆ ಮನಶ್ಶಾಂತಿ, ಸ್ಪಷ್ಟವಾದ ಯೋಚನಾ ಲಹರಿ ಹಾಗೂ ಆಧ್ಯಾತ್ಮಿಕ ಜ್ಞಾನೋದಯ ಸಿಗುತ್ತದೆ ಎನ್ನುವುದು ಆ ಬರಹಗಾರನ ಮಾತಿನ ಅರ್ಥ.

ಬೈಬಲ್‌ ಏನು ಹೇಳುತ್ತದೆ?

ಧ್ಯಾನಕ್ಕೆ ಬೈಬಲ್‌ ಹೆಚ್ಚಿನ ಮಹತ್ವ ಕೊಡುತ್ತದೆ. (ಯೆಹೋಶುವ 1:8) ಹಾಗಂತ ಮನಸ್ಸನ್ನು ಶೂನ್ಯವಾಗಿರಿಸಬೇಕೆಂದು, ಒಂದು ಪದ, ವಾಕ್ಯ ಅಥವಾ ಮಂತ್ರವನ್ನು ಜಪಿಸಬೇಕೆಂದು ಬೈಬಲ್‌ ಹೇಳುವುದಿಲ್ಲ. ಬದಲಿಗೆ ಒಂದು ಉದ್ದೇಶದೊಂದಿಗೆ ಒಳ್ಳೇ ವಿಷಯಗಳ ಕುರಿತು ಆಲೋಚಿಸುವಂತೆ ಉತ್ತೇಜಿಸುತ್ತದೆ. ಉದಾಹರಣೆಗೆ ದೇವರ ಗುಣಗಳು, ಮಟ್ಟಗಳು ಹಾಗೂ ಸೃಷ್ಟಿಯ ಕುರಿತು ಧ್ಯಾನಿಸಬಹುದು. ದೇವರಿಗೆ ನಂಬಿಗಸ್ತನಾಗಿದ್ದ ಪುರುಷನೊಬ್ಬನು ಪ್ರಾರ್ಥನೆಯಲ್ಲಿ ಹೀಗೆ ಹೇಳಿದನು: “ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ; ನಿನ್ನ ಕೈಕೆಲಸಗಳನ್ನು ಸ್ಮರಿಸುತ್ತೇನೆ.” (ಕೀರ್ತನೆ 143:5) ಅವನು ಹೀಗೂ ಹೇಳಿದನು: “ನಾನು ಹಾಸಿಗೆಯ ಮೇಲಿದ್ದುಕೊಂಡು ನಿನ್ನನ್ನು ಸ್ಮರಿಸುವಾಗ ರಾತ್ರಿಯ ಜಾವಗಳಲ್ಲಿ ನಿನ್ನನ್ನು ಧ್ಯಾನಿಸುತ್ತಿರುವೆನು.”—ಕೀರ್ತನೆ 63:6.

 ಧ್ಯಾನದಿಂದ ನಮಗೇನು ಪ್ರಯೋಜನ?

“ಶಿಷ್ಟನ ಹೃದಯ ವಿವೇಚಿಸಿ [ಧ್ಯಾನಿಸಿ, NW] ಉತ್ತರಕೊಡುತ್ತದೆ.” —ಜ್ಞಾನೋಕ್ತಿ 15:28.

ಬೈಬಲ್‌ ಏನು ಹೇಳುತ್ತದೆ?

ಯೋಗ್ಯ ರೀತಿಯ ಧ್ಯಾನವು ನಮ್ಮ ಆಂತರಿಕ ವ್ಯಕ್ತಿತ್ವವನ್ನು ಉತ್ತಮಗೊಳಿಸುತ್ತದೆ, ಶಾಂತ ಮನಸ್ಸನ್ನು ಕೊಡುತ್ತದೆ, ನೈತಿಕ ಬಲವನ್ನೂ ನೀಡುತ್ತದೆ. ಆಗ ನಾವು ಸೂಕ್ಷ್ಮ ಪರಿಜ್ಞಾನದಿಂದ ತಿಳಿವಳಿಕೆಯಿಂದ ನಡೆದುಕೊಳ್ಳುತ್ತೇವೆ, ಮಾತಾಡುತ್ತೇವೆ. (ಜ್ಞಾನೋಕ್ತಿ 16:23) ಇಂಥ ಧ್ಯಾನ ನಮ್ಮ ಜೀವನದಲ್ಲಿ ಆನಂದ ತುಂಬಿ ಯಶಸ್ಸು ತರುತ್ತದೆ. ದೇವರ ಬಗ್ಗೆ ಕ್ರಮವಾಗಿ ಧ್ಯಾನಮಾಡುವ ವ್ಯಕ್ತಿಯ ಕುರಿತು ಕೀರ್ತನೆ 1:3ರಲ್ಲಿ ಹೀಗೆ ಹೇಳಲಾಗಿದೆ: “ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.”

ಧ್ಯಾನವು ನಮ್ಮ ಗ್ರಹಿಸುವ ಸಾಮರ್ಥ್ಯ ಹಾಗೂ ನೆನಪಿನ ಶಕ್ತಿಯನ್ನು ಹರಿತಗೊಳಿಸುತ್ತದೆ. ಉದಾಹರಣೆಗೆ, ಸೃಷ್ಟಿಯ ಕುರಿತು ಅಥವಾ ಬೈಬಲಿನ ಯಾವುದಾದರೂ ಒಂದು ವಿಷಯದ ಕುರಿತು ಅಧ್ಯಯನ ಮಾಡಿದಾಗ ಅನೇಕ ಆಸಕ್ತಿಕರ ಸತ್ಯಾಂಶಗಳು ನಮಗೆ ತಿಳಿದುಬರುತ್ತವೆ. ಆದರೆ ಅವುಗಳ ಕುರಿತು ನಾವು ಧ್ಯಾನಿಸುವಾಗ, ಅವು ಒಂದಕ್ಕೊಂದು ಹೇಗೆ ಸಂಬಂಧಿಸಿವೆ ಎಂದು ನೋಡಲು ಆಗುತ್ತದೆ ಮತ್ತು ಈಗಾಗಲೇ ತಿಳಿದಿರುವ ವಿಷಯಕ್ಕೂ ಈಗ ತಿಳಿದುಕೊಂಡ ವಿಷಯಕ್ಕೂ ಸಂಬಂಧ ಕಲ್ಪಿಸಲು ಆಗುತ್ತದೆ. ಒಬ್ಬ ಬಡಗಿ ಅನೇಕ ಮರದ ತುಂಡುಗಳನ್ನು ಸೇರಿಸಿ ಹೇಗೆ ಸುಂದರ ರೂಪ ಕೊಡುತ್ತಾನೋ ಹಾಗೆಯೇ ನಾವು ಕಲಿತ ಎಲ್ಲ ಸತ್ಯಾಂಶಗಳ ಕುರಿತು ಧ್ಯಾನಿಸುವಾಗ ಒಂದು ಸ್ಪಷ್ಟ ಚಿತ್ರಣ ಮನಸ್ಸಿಗೆ ಬರುತ್ತದೆ.

ಧ್ಯಾನದ ಮೇಲೆ ನಮಗೆ ಹತೋಟಿ ಇರಬೇಕಾ?

“ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?”—ಯೆರೆಮಿಾಯ 17:9.

ಬೈಬಲ್‌ ಏನು ಹೇಳುತ್ತದೆ?

“ಒಳಗಿನಿಂದ ಅಂದರೆ ಮನುಷ್ಯರ ಹೃದಯದಿಂದ, ಹಾದರ ಕಳ್ಳತನ ಕೊಲೆ ವ್ಯಭಿಚಾರ ಲೋಭ ದುಷ್ಕೃತ್ಯ ವಂಚನೆ ಸಡಿಲುನಡತೆ ಅಸೂಯೆ ತುಂಬಿದ ಕಣ್ಣು . . . ವಿಚಾರಹೀನತೆ ಮುಂತಾದವುಗಳ ಕುರಿತಾದ ಹಾನಿಕಾರಕ ಆಲೋಚನೆಗಳು ಹೊರಬರುತ್ತವೆ.” (ಮಾರ್ಕ 7:21, 22) ಬೆಂಕಿಯನ್ನು ಹೇಗೆ ನಿಯಂತ್ರಿಸಬೇಕೋ ಹಾಗೆಯೇ ಧ್ಯಾನವನ್ನು ನಿಯಂತ್ರಿಸಬೇಕು. ಇಲ್ಲದಿದ್ದಲ್ಲಿ ಕೆಟ್ಟ ಯೋಚನೆಗಳು ನಮ್ಮ ಮನಸ್ಸಿನೊಳಗೆ ಹೋಗಿ ಕೆಟ್ಟ ಆಶೆಗಳನ್ನು ಹುಟ್ಟಿಸುತ್ತವೆ. ಆ ಆಶೆಗಳು ಬೆಳೆದು ಕೆಟ್ಟ ಕೃತ್ಯಗಳನ್ನು ಮಾಡುವಂತೆ ಕುಮ್ಮಕ್ಕು ಕೊಡುತ್ತವೆ.—ಯಾಕೋಬ 1:14, 15.

ಯಾವ ವಿಷಯಗಳು ‘ಸತ್ಯವೂ ನೀತಿಯುತವೂ ಶುದ್ಧವೂ ಪ್ರೀತಿಯೋಗ್ಯವೂ ಆಗಿವೆಯೋ, ಯಾವುದರ ಬಗ್ಗೆ ಮೆಚ್ಚುಗೆಯ ಮಾತುಗಳು ನುಡಿಯಲ್ಪಟ್ಟಿವೆಯೋ, ಯಾವುದು ಸದ್ಗುಣ ಮತ್ತು ಸ್ತುತಿಗೆ ಯೋಗ್ಯವಾಗಿದೆಯೋ’ ಅವುಗಳ ಬಗ್ಗೆ ಧ್ಯಾನಿಸಿರಿ ಎಂದು ಬೈಬಲ್‌ ಪ್ರೋತ್ಸಾಹಿಸುತ್ತದೆ. (ಫಿಲಿಪ್ಪಿ 4:8, 9) ನಾವು ಯಾವಾಗ ಇಂಥ ಒಳ್ಳೇ ವಿಷಯಗಳನ್ನು ನಮ್ಮ ಮನಸ್ಸೆಂಬ ನೆಲದಲ್ಲಿ ಬಿತ್ತುತ್ತೇವೋ ಆಗ ಸುಮಧುರ ಫಲಗಳನ್ನು ಕೊಯ್ಯುವೆವು. ಆ ಫಲಗಳೆಂದರೆ ಸುಂದರ ಗುಣಗಳು, ಸೌಜನ್ಯಭರಿತ ಮಾತು ಹಾಗೂ ಇತರರೊಂದಿಗೆ ಒಳ್ಳೇ ಸಂಬಂಧ.—ಕೊಲೊಸ್ಸೆ 4:6. (g14-E 05)