ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸ್ನೇಹಪರ ದ್ವೀಪ”ಗಳಲ್ಲಿ ದೇವರ ಸ್ನೇಹಿತರು

“ಸ್ನೇಹಪರ ದ್ವೀಪ”ಗಳಲ್ಲಿ ದೇವರ ಸ್ನೇಹಿತರು

“ಸ್ನೇಹಪರ ದ್ವೀಪ”ಗಳಲ್ಲಿ ದೇವರ ಸ್ನೇಹಿತರು

ಇಸವಿ 1932ರಲ್ಲಿ ಒಂದು ಹಾಯಿ ಹಡಗು ಬೆಲೆಕಟ್ಟಲಾಗದ ಕೆಲವು ಬೀಜಗಳನ್ನು ಟೊಂಗಾಕ್ಕೆ ತಂದಿತು. “ಮೃತರು ಎಲ್ಲಿದ್ದಾರೆ?” (ಇಂಗ್ಲಿಷ್‌) ಎಂಬ ಪುಸ್ತಿಕೆಯನ್ನು ಆ ಹಡಗಿನ ಮುಖ್ಯಸ್ಥನು ಚಾರ್ಲ್ಸ್‌ ವೀಟಿ ಎಂಬವನಿಗೆ ನೀಡಿದನು. ತಾನು ಸತ್ಯವನ್ನು ಕಂಡುಕೊಂಡೆನೆಂದು ಚಾರ್ಲ್ಸ್‌ಗೆ ಸಂಪೂರ್ಣ ಮನವರಿಕೆಯಾಯಿತು. ಸ್ವಲ್ಪ ಸಮಯದ ಅನಂತರ, ಆ ಪುಸ್ತಿಕೆಯನ್ನು ತನ್ನ ಮಾತೃಭಾಷೆಗೆ ಭಾಷಾಂತರಿಸಲು ಚಾರ್ಲ್ಸ್‌ ಅನುಮತಿ ಕೋರಿದಾಗ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯವು ಒಪ್ಪಿಗೆಯನ್ನು ನೀಡಿತು. ಈ ಕೆಲಸವನ್ನು ಮುಗಿಸಿದ ಬಳಿಕ, ಭಾಷಾಂತರಿಸಲ್ಪಟ್ಟ ಈ ಪುಸ್ತಿಕೆಯನ್ನು ಛಾಪಿಸಿ ಅದರ 1,000 ಪ್ರತಿಗಳನ್ನು ಚಾರ್ಲ್ಸ್‌ಗೆ ಕಳುಹಿಸಲಾಯಿತು ಮತ್ತು ಅವನು ಅದನ್ನು ವಿತರಿಸಲಾರಂಭಿಸಿದನು. ಈ ರೀತಿಯಲ್ಲಿ ಯೆಹೋವನ ರಾಜ್ಯದ ಕುರಿತಾದ ಸತ್ಯದ ಬೀಜಗಳು ಟೊಂಗಾ ರಾಜ್ಯದಲ್ಲಿ ಬಿತ್ತಲ್ಪಡಲು ಆರಂಭಗೊಂಡಿತು.

ದಕ್ಷಿಣ ಪೆಸಿಫಿಕ್‌ನ ಭೂಪಟದಲ್ಲಿ, ಎಲ್ಲಿ ಅಂತಾರಾಷ್ಟ್ರೀಯ ದಿನಾಂಕ ರೇಖೆಯು ಮಕರ ವೃತ್ತವನ್ನು ಒಂದುಗೂಡುತ್ತದೋ ಆ ಸ್ಥಳಕ್ಕೆ ಪಶ್ಚಿಮದಲ್ಲಿ ನೀವು ಟೊಂಗಾ ರಾಜ್ಯವನ್ನು ಕಾಣಸಾಧ್ಯವಿದೆ. ಇದರ ಅತಿ ದೊಡ್ಡ ದ್ವೀಪವು ಟೊಂಗಟಬು. ಇದು, ನ್ಯೂ ಸೀಲೆಂಡ್‌ನ ಆಕ್‌ಲೆಂಡ್‌ನಿಂದ 2,000 ಕಿಲೊಮೀಟರ್‌ ಈಶಾನ್ಯದಲ್ಲಿದೆ. ಟೊಂಗಾ ರಾಜ್ಯದಲ್ಲಿ 171 ದ್ವೀಪಗಳಿವೆ ಮತ್ತು ಇವುಗಳಲ್ಲಿ 45 ಜನನಿವಾಸಿತ ದ್ವೀಪಗಳಾಗಿವೆ. 18ನೇ ಶತಮಾನದ ಪ್ರಖ್ಯಾತ ಬ್ರಿಟಿಷ್‌ ಪರಿಶೋಧಕ ಜೇಮ್ಸ್‌ ಕುಕ್‌ ಈ ದೂರದಲ್ಲಿರುವ ದ್ವೀಪಗಳನ್ನು ‘ಸ್ನೇಹಪರ ದ್ವೀಪಗಳು’ ಎಂದು ಕರೆದನು.

ಸುಮಾರು 1,06,000 ಜನಸಂಖ್ಯೆಯನ್ನು ಹೊಂದಿರುವ ಟೊಂಗಾ, ಮೂರು ದ್ವೀಪ ಗುಂಪುಗಳಾಗಿ ವಿಭಾಗಿಸಲ್ಪಟ್ಟಿದೆ. ಅವುಗಳಲ್ಲಿ ಮುಖ್ಯವಾಗಿರುವಂಥದ್ದು ಟೊಂಗಟಬು, ಹಾಆಪೈ, ಮತ್ತು ವಾವಾವೂ. ಯೆಹೋವನ ಸಾಕ್ಷಿಗಳ ಐದು ಸ್ಥಳಿಕ ಸಭೆಗಳಲ್ಲಿ ಮೂರು ಸಭೆಗಳು ಹೆಚ್ಚು ಜನಸಂಖ್ಯೆಯಿರುವ ಟೊಂಗಟಬುವಿನಲ್ಲಿವೆ, ಒಂದು ಹಾಆಪೈನಲ್ಲಿದೆ, ಮತ್ತು ಇನ್ನೊಂದು ವಾವಾವೂವಿನಲ್ಲಿದೆ. ದೇವರ ಸ್ನೇಹಿತರಾಗುವಂತೆ ಅಲ್ಲಿನ ಜನರಿಗೆ ಸಹಾಯಮಾಡಲು, ರಾಜಧಾನಿಯಾದ ನೂಕೂಆಲೋಫಾದ ಹತ್ತಿರ ಯೆಹೋವನ ಸಾಕ್ಷಿಗಳ ಒಂದು ಮಿಷನೆರಿ ಗೃಹ ಮತ್ತು ಒಂದು ಭಾಷಾಂತರ ಆಫೀಸು ಸಹ ಇದೆ.​—⁠ಯೆಶಾಯ 41:⁠8.

ಇಸವಿ 1964ರ ತನಕ ಚಾರ್ಲ್ಸ್‌ ವೀಟಿ ದೀಕ್ಷಾಸ್ನಾನ ಪಡೆದುಕೊಂಡಿರದಿದ್ದರೂ, 1930ಗಳಿಂದಲೇ ಅವರು ಒಬ್ಬ ಯೆಹೋವನ ಸಾಕ್ಷಿಯಾಗಿ ಪ್ರಖ್ಯಾತರಾಗಿದ್ದರು. ಸಾಕ್ಷಿಕಾರ್ಯದಲ್ಲಿ ಅವರೊಂದಿಗೆ ಇತರರೂ ಜೊತೆಗೂಡಿದರು, ಮತ್ತು 1966ರಲ್ಲಿ 30 ಜನರಿಗೆ ಸ್ಥಳಾವಕಾಶವುಳ್ಳ ಒಂದು ರಾಜ್ಯ ಸಭಾಗೃಹವನ್ನು ಕಟ್ಟಲಾಯಿತು. 1970ರಲ್ಲಿ 20 ರಾಜ್ಯ ಪ್ರಚಾರಕರುಳ್ಳ ಒಂದು ಸಭೆಯು ನೂಕೂಆಲೋಫಾದಲ್ಲಿ ಸ್ಥಾಪನೆಗೊಂಡಿತು.

ಅಂದಿನಿಂದ, ಟೊಂಗಾ ದ್ವೀಪಗಳಲ್ಲಿ ಯೆಶಾಯನ ಪ್ರವಾದನೆಯ ನೆರವೇರಿಕೆಯನ್ನು ಸ್ಪಷ್ಟವಾಗಿ ಕಾಣಸಾಧ್ಯವಾಯಿತು: “[ಅವರು] ಯೆಹೋವನನ್ನು ಘನಪಡಿಸಿ ದ್ವೀಪಾಂತರಗಳಲ್ಲಿ ಆತನ ಸ್ತೋತ್ರವನ್ನು ಹಬ್ಬಿಸಲಿ.” (ಯೆಶಾಯ 42:12) ರಾಜ್ಯ ಕಾರ್ಯದ ಏಳಿಗೆಯು ಮುಂದುವರಿದಿದೆ, ಮತ್ತು ಇದು ಅನೇಕರು ಯೆಹೋವನೊಂದಿಗೆ ಒಂದು ಸಂಬಂಧದೊಳಕ್ಕೆ ಬರುವಂತೆ ಸಹಾಯಮಾಡಿದೆ. 2003ರಲ್ಲಿ ನೂಕೂಆಲೋಫಾದಲ್ಲಿ ನಡೆದ ಜಿಲ್ಲಾ ಅಧಿವೇಶನಕ್ಕೆ 407 ಮಂದಿ ಹಾಜರಾದರು, ಮತ್ತು 5 ಮಂದಿ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಬೆಳವಣಿಗೆಯ ಸಂಭಾವ್ಯತೆಯನ್ನು ಸೂಚಿಸುತ್ತಾ, 2004ರ ಜ್ಞಾಪಕಾಚರಣೆಗೆ 621 ಮಂದಿ ಹಾಜರಾದರು.

ಸರಳ ಜೀವನವನ್ನು ನಡೆಸುವುದು

ಹಾಗಿದ್ದರೂ, ರಾಜಧಾನಿಯಿಂದ ದೂರದಲ್ಲಿರುವ ಸ್ಥಳಗಳಲ್ಲಿ ಈಗಲೂ ರಾಜ್ಯ ಪ್ರಚಾರಕರ ಅಗತ್ಯವು ತೋರಿಬರುತ್ತಿದೆ. ಉದಾಹರಣೆಗೆ, ಹಾಆಪೈ ದ್ವೀಪಗುಂಪಿಗೆ ಸೇರಿದ 16 ಜನನಿವಾಸಿತ ದ್ವೀಪಗಳಲ್ಲಿ ವಾಸಿಸುತ್ತಿರುವ 8,500 ಜನರಿಗೆ ಬೈಬಲಿನ ಸತ್ಯದ ಕುರಿತು ಇನ್ನೂ ಹೆಚ್ಚನ್ನು ಕೇಳಿಸಿಕೊಳ್ಳುವ ಅಗತ್ಯವಿದೆ. ಹಾಆಪೈ ಗುಂಪಿನಲ್ಲಿ ಹೆಚ್ಚಾಗಿ, ಅತಿ ದೂರದ ತನಕದ ಬಿಳಿ ಮರಳ ಕಿನಾರೆಗಳುಳ್ಳ ತಗ್ಗಾದ, ತಾಳೆ ಮರಗಳಿಂದ ತುಂಬಿದ ದ್ವೀಪಗಳಿವೆ. ಸಾಗರದ ನೀರು ಅತಿ ಶುದ್ಧವಾಗಿದ್ದು, ಅನೇಕವೇಳೆ 30 ಮೀಟರ್‌ ಆಳದ ವರೆಗೆ ನಾವು ನೋಡಸಾಧ್ಯವಿದೆ. ಹವಳ ದಿಬ್ಬಗಳ ಮತ್ತು ನೂರಕ್ಕಿಂತಲೂ ಹೆಚ್ಚಿನ ಜಾತಿಯ ಬಣ್ಣಬಣ್ಣದ ಉಷ್ಣವಲಯದ ಮೀನುಗಳ ಮಧ್ಯದಲ್ಲಿ ಈಜುವುದು ಒಂದು ಅಪೂರ್ವ ಅನುಭವವಾಗಿದೆ. ಹಳ್ಳಿಗಳು ಸಾಮಾನ್ಯವಾಗಿ ಸಣ್ಣದಾಗಿರುತ್ತವೆ. ಮನೆಗಳು ಸರಳವಾಗಿದ್ದರೂ, ಉಷ್ಣವಲಯದ ಸುಂಟರಗಾಳಿಯನ್ನು ಎದುರಿಸಿ ನಿಲ್ಲಶಕ್ತವಾಗುವಂತೆ ಕಟ್ಟಲ್ಪಟ್ಟಿವೆ.

ದೀವಿ ಹಲಸಿನ ಮತ್ತು ಮಾವಿನ ಮರಗಳು ನೆರಳನ್ನೂ ಆಹಾರವನ್ನೂ ಒದಗಿಸುತ್ತವೆ. ಆಹಾರ ಸಂಗ್ರಹ ಮತ್ತು ತಯಾರಿ ಈ ಮೊದಲಾದ ಕೆಲಸಗಳಲ್ಲಿಯೇ ಅಲ್ಲಿನ ಜನರ ದೈನಂದಿನ ಜೀವನದ ಹೆಚ್ಚಿನ ಸಮಯವು ವ್ಯಯವಾಗುತ್ತದೆ. ದ್ವೀಪನಿವಾಸಿಗಳು ಹಂದಿ ಮಾಂಸವನ್ನಲ್ಲದೆ ಸಾಗರದಿಂದ ದೊರಕುವ ಆಹಾರವನ್ನು ಸಹ ಸಮೃದ್ಧವಾಗಿ ಆನಂದಿಸುತ್ತಾರೆ. ಕುಟುಂಬಗಳು ತಮ್ಮ ತೋಟದಲ್ಲಿ ಗೆಡ್ಡೆಗೆಣಸುಗಳ ಬೆಳೆಗಳನ್ನು ಮತ್ತು ತರಕಾರಿಗಳನ್ನು ಬೆಳೆಸುತ್ತವೆ. ನಿಂಬೆ ಜಾತಿಯ ಹಣ್ಣುಗಳ ಮರಗಳು ಯಾವುದೇ ಮಾನವ ಪ್ರಯತ್ನವಿಲ್ಲದೆ ಬೆಳೆಯುತ್ತವೆ; ತೆಂಗಿನ ಮರಗಳು ಮತ್ತು ಬಾಳೆಹಣ್ಣಿನ ಗಿಡಗಳು ಹೇರಳವಾಗಿವೆ. ಔಷಧಿಗಾಗಿ ಉಪಯುಕ್ತವಾಗಿರುವ ಗಿಡಮೂಲಿಕೆಗಳು, ಎಲೆಗಳು, ತೊಗಟೆ, ಮತ್ತು ಬೇರುಗಳ ಕುರಿತಾದ ಸ್ಥಳಿಕ ಜ್ಞಾನವು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಾಗಿಸಲ್ಪಡುತ್ತದೆ.

ಆದರೆ ಹಾಆಪೈಯಲ್ಲಿರುವ ಅತ್ಯಂತ ಮನಮೋಹಕ ಸೊತ್ತು ಅಲ್ಲಿನ ಸ್ನೇಹಪರ ಜನರು. ಅವರು ಬಹಳ ಸುಲಭವಾಗಿ ಪ್ರಶಾಂತ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ಸರಳತೆಯು ಅಲ್ಲಿನ ಜೀವನ ಶೈಲಿಯಾಗಿದೆ. ಹೆಚ್ಚಿನ ಸ್ತ್ರೀಯರು, ಬುಟ್ಟಿಗಳನ್ನು, ಬೂಟೇದಾರ ವಸ್ತ್ರವನ್ನು, ಮತ್ತು ಚಾಪೆಗಳನ್ನು ತಯಾರಿಸುವುದೇ ಮುಂತಾದ ಕರಕುಶಲ ಕೆಲಸಗಳಲ್ಲಿ ಒಳಗೂಡಿರುತ್ತಾರೆ. ಟೊಂಗಾದ ಹೆಂಗಸರು ಒಟ್ಟಾಗಿ ಒಂದು ಮರದ ನೆರಳಿನಲ್ಲಿ ಕುಳಿತುಕೊಂಡು ಮಾತಾಡುತ್ತಾ, ಹಾಡುತ್ತಾ, ನಗುತ್ತಾ ಕೆಲಸವನ್ನು ಮಾಡುತ್ತಾರೆ. ಅನೇಕವೇಳೆ ಅವರ ಮಕ್ಕಳು ಅಥವಾ ಹಸುಗೂಸುಗಳು ಪಕ್ಕದಲ್ಲಿಯೇ ಆಟವಾಡುತ್ತಾ ಇಲ್ಲವೆ ನಿದ್ರೆಮಾಡುತ್ತಿರುತ್ತಾರೆ. ಹೆಚ್ಚಾಗಿ ಸ್ತ್ರೀಯರೇ ನೀರಿನ ಇಳಿತದ ಸಮಯದಲ್ಲಿ ಚಿಪ್ಪುಮೀನು ಮತ್ತು ಆಹಾರಕ್ಕಾಗಿ ಉಪಯೋಗಿಸುವ ಇತರ ಸಮುದ್ರ ಜೀವಿಗಳನ್ನು ಹಿಡಿಯುತ್ತಾರೆ. ಅಷ್ಟುಮಾತ್ರವಲ್ಲದೆ, ರುಚಿಕರವಾದ ಸ್ಯಾಲಡ್‌ ತಯಾರಿಸಲು ಉಪಯುಕ್ತವಾಗಿರುವ ಮತ್ತು ತಿನ್ನಲು ಕರುಂಕುರುಂ ಆಗಿರುವ ಸಮುದ್ರದಕಳೆಯನ್ನು ಸಹ ಅವರು ತರುತ್ತಾರೆ.

ಹೆಚ್ಚಿನ ಗಂಡಸರು ತಮ್ಮ ಸಮಯವನ್ನು ತೋಟಗಾರಿಕೆ, ಮೀನುಗಾರಿಕೆ, ಕೆತ್ತನೆ ಕೆಲಸ, ದೋಣಿಯನ್ನು ಕಟ್ಟುವುದು, ಮತ್ತು ಮೀನಿನ ಬಲೆಗಳನ್ನು ದುರಸ್ತುಮಾಡುವುದರಂಥ ಕೆಲಸಗಳಲ್ಲಿ ಕಳೆಯುತ್ತಾರೆ. ಗಂಡಸರು, ಹೆಂಗಸರು ಮತ್ತು ಮಕ್ಕಳು ಒಂದು ದ್ವೀಪದಿಂದ ಇನ್ನೊಂದಕ್ಕೆ ತಮ್ಮ ಸಂಬಂಧಿಕರನ್ನು ಭೇಟಿಮಾಡಲು, ಔಷಧೋಪಚಾರಕ್ಕಾಗಿ, ಮತ್ತು ವಸ್ತುಗಳನ್ನು ಖರೀದಿಸಲು ಅಥವಾ ಮಾರಲು, ಚಾವಣಿಯಿರುವ ಮೀನಿನ ಸಣ್ಣ ದೋಣಿಗಳಲ್ಲಿ ಪ್ರಯಾಣಿಸುತ್ತಾರೆ.

ಸುವಾರ್ತೆ ತಲಪಲು ಯಾವುದೇ ಸ್ಥಳವು ತೀರಾ ದೂರವಾಗಿಲ್ಲ

ಇಂಥ ಒಂದು ಸಹಜ ಸೊಬಗುಳ್ಳ ಪರಿಸರಕ್ಕೆ, 2002ರ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ಇಬ್ಬರು ಮಿಷನೆರಿಗಳು ಮತ್ತು ಇಬ್ಬರು ಪಯನೀಯರ್‌ ಶುಶ್ರೂಷಕರು ಕಾಲಿರಿಸಿದರು. ಹಾಆಪೈಗೆ ಈ ಹಿಂದೆ ಆಗಿಂದಾಗ್ಗೆ ಕೆಲವು ಸಾಕ್ಷಿಗಳು ಭೇಟಿನೀಡಿದ್ದರು ಮತ್ತು ಅಲ್ಲಿನ ಜನರಲ್ಲಿ ಕೆಲವರು ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಸಾಹಿತ್ಯವನ್ನು ಪಡೆದುಕೊಂಡು ಅವರೊಂದಿಗೆ ಬೈಬಲ್‌ ಅಧ್ಯಯನವನ್ನು ಸಹ ಮಾಡುತ್ತಿದ್ದರು.

ಅಲ್ಲಿಗೆ ಭೇಟಿನೀಡಿದ ಈ ನಾಲ್ಕು ಬೈಬಲ್‌ ಶಿಕ್ಷಕರಿಗೆ ಮೂರು ಗುರಿಗಳಿದ್ದವು: ಬೈಬಲ್‌ ಸಾಹಿತ್ಯವನ್ನು ವಿತರಿಸುವುದು, ಮನೆ ಬೈಬಲ್‌ ಅಧ್ಯಯನಗಳನ್ನು ಆರಂಭಿಸುವುದು, ಮತ್ತು ಕರ್ತನ ಸಂಧ್ಯಾ ಭೋಜನದ ಆಚರಣೆಗೆ ಆಸಕ್ತ ಜನರನ್ನು ಆಮಂತ್ರಿಸುವುದು. ಈ ಮೂರು ಗುರಿಗಳೂ ಸಾಧಿಸಲ್ಪಟ್ಟವು. ಯೇಸುವಿನ ಮರಣದ ಜ್ಞಾಪಕಾಚರಣೆಗೆ ಹಾಜರಾಗಲು ನೀಡಿದ ಆಮಂತ್ರಣಕ್ಕೆ 97 ಮಂದಿ ಪ್ರತಿಕ್ರಿಯಿಸಿದರು. ಇವರಲ್ಲಿ ಕೆಲವರು ಬಿರುಸಾದ ಮಳೆ ಮತ್ತು ಗಾಳಿಯ ಹೊರತಾಗಿಯೂ ತೆರೆದ ದೋಣಿಗಳಲ್ಲಿ ಪ್ರಯಾಣಿಸಿ ಬಂದರು. ಹವಾಮಾನವು ಉತ್ತಮವಾಗಿರದ ಕಾರಣ, ಜ್ಞಾಪಕಾಚರಣೆಯು ನಡೆಸಲ್ಪಟ್ಟ ಸ್ಥಳದಲ್ಲಿಯೇ ಅನೇಕರು ಆ ರಾತ್ರಿಯನ್ನು ಕಳೆದು, ಮರುದಿನ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಬೇಕಾಯಿತು.

ಜ್ಞಾಪಕಾಚರಣೆಯ ಭಾಷಣಕಾರರು ಸಹ ಬಹಳ ಪರಿಶ್ರಮಪಡಬೇಕಿತ್ತು. ಮಿಷನೆರಿಯಾಗಿದ್ದ ಭಾಷಣಕಾರರು ಹೀಗೆ ನೆನಪುಮಾಡಿಕೊಳ್ಳುತ್ತಾರೆ: “ಒಂದೇ ಸಾಯಂಕಾಲದಂದು ಜ್ಞಾಪಕಾಚರಣೆಯ ಎರಡು ಭಾಷಣಗಳನ್ನು, ಅದೂ ವಿದೇಶಿ ಭಾಷೆಯಲ್ಲಿ ನೀಡುವುದು ಎಷ್ಟು ದಿಗಿಲುಹುಟ್ಟಿಸುವ ವಿಚಾರವೆಂಬುದನ್ನು ನಾನು ನಿಮಗೆ ಹೇಳಬೇಕೆಂದಿಲ್ಲ. ನಾನೆಷ್ಟು ಭಯದಿಂದಿದ್ದೆ ಎಂದು ನೀವು ಊಹಿಸಬಲ್ಲಿರಿ. ಪ್ರಾರ್ಥನೆಯು ನಿಜವಾಗಿಯೂ ನನಗೆ ತುಂಬ ಸಹಾಯಮಾಡಿತು. ಭಾಷಣದ ಸಮಯದಲ್ಲಿ ನನ್ನ ನೆನಪಿಗೆ ಬಂದ ಪದಗಳು ಅಥವಾ ವಾಕ್ಯಗಳು ನನಗೆ ತಿಳಿದಿದ್ದವೆಂದು ನನಗೇ ಗೊತ್ತಿರಲಿಲ್ಲ!”

ಹಾಆಪೈ ದ್ವೀಪಗಳಲ್ಲಿ ಆಗಲೇ ಇದ್ದ ಆಸಕ್ತಿಯನ್ನು ಸೌವಾರ್ತಿಕರು ಬೆಳೆಸಿದ ಫಲಿತಾಂಶವಾಗಿ ಅದೇ ಕ್ಷೇತ್ರಕ್ಕೆ ಸೇರಿದ ಎರಡು ವಿವಾಹಿತ ದಂಪತಿಗಳು ದೀಕ್ಷಾಸ್ನಾನವನ್ನು ಪಡೆದುಕೊಂಡರು. ಇವರಲ್ಲಿ ಒಂದು ದಂಪತಿಯ ವಿಷಯದಲ್ಲಿ, ಗಂಡನು ಸ್ಥಳಿಕ ಚರ್ಚಿನಲ್ಲಿ ಒಬ್ಬ ಪಾದ್ರಿಯಾಗಲು ತರಬೇತಿಪಡೆದುಕೊಳ್ಳುತ್ತಿದ್ದಾಗ ಸಾಕ್ಷಿಗಳ ಸಾಹಿತ್ಯದಲ್ಲಿ ಆಸಕ್ತಿಯನ್ನು ತೋರಿಸಿದನು.

ಆರ್ಥಿಕವಾಗಿ ಬಡವರಾಗಿದ್ದರೂ, ಈ ಮನುಷ್ಯ ಮತ್ತು ಅವನ ಪತ್ನಿಯು ಚರ್ಚಿನಲ್ಲಿ ವಾರ್ಷಿಕ ಹಣಸಂಗ್ರಹದ ಸಮಯದಲ್ಲಿ ತಮ್ಮ ಹೆಸರುಗಳು ಕರೆಯಲ್ಪಡುವಾಗ ದೊಡ್ಡ ಮೊತ್ತದ ಹಣದಾನವನ್ನು ಕೊಡುತ್ತಿದ್ದರು. ಈ ಮುಂಚೆ ಅಲ್ಲಿಗೆ ಭೇಟಿನೀಡಿದ್ದ ಒಬ್ಬ ಸಾಕ್ಷಿಯು ಆ ವ್ಯಕ್ತಿ ತನ್ನ ಬೈಬಲನ್ನು ತೆರೆದು 1 ತಿಮೊಥೆಯ 5:8ನ್ನು ಓದುವಂತೆ ಕೇಳಿದನು. ಅಲ್ಲಿ ಅಪೊಸ್ತಲ ಪೌಲನು ಬರೆದದ್ದು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” ಈ ಬೈಬಲ್‌ ಮೂಲತತ್ತ್ವವು ಆ ಗಂಡನ ಹೃದಯವನ್ನು ಸ್ಪರ್ಶಿಸಿತು. ಚರ್ಚಿನ ಆರ್ಥಿಕ ತಗಾದೆಯನ್ನು ಪೂರೈಸುವ ಸಲುವಾಗಿ ತಾನು ತನ್ನ ಕುಟುಂಬದ ಮೂಲಭೂತ ಅಗತ್ಯತೆಗಳನ್ನು ಒದಗಿಸಲು ತಪ್ಪಿಹೋಗುತ್ತಿದ್ದೇನೆ ಎಂಬುದನ್ನು ಅವನು ಗ್ರಹಿಸಿಕೊಂಡನು. ಮುಂದಿನ ವಾರ್ಷಿಕ ಹಣಸಂಗ್ರಹದ ಸಮಯದಲ್ಲಿ, ಅವನ ಜೇಬಿನಲ್ಲಿ ಹಣವಿದ್ದರೂ 1 ತಿಮೊಥೆಯ 5:8ನ್ನು ಮರೆಯಲು ಅವನಿಗೆ ಸಾಧ್ಯವಾಗಲಿಲ್ಲ. ಅವನ ಹೆಸರು ಕರೆಯಲ್ಪಟ್ಟಾಗ, ತನ್ನ ಕುಟುಂಬದ ಅಗತ್ಯತೆಗಳನ್ನು ಪೂರೈಸುವುದು ಹೆಚ್ಚು ಪ್ರಾಮುಖ್ಯ ಎಂದು ಅವನು ಧೈರ್ಯದಿಂದ ಪಾದ್ರಿಗೆ ತಿಳಿಸಿದನು. ಇದರ ಪರಿಣಾಮವಾಗಿ, ಆ ದಂಪತಿಯನ್ನು ಬಹಿರಂಗವಾಗಿ ತುಚ್ಛೀಕರಿಸಲಾಯಿತು, ಮತ್ತು ಅವರು ಚರ್ಚಿನ ಹಿರಿಯರಿಂದ ಬೈಯಲ್ಪಟ್ಟರು.

ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನಮಾಡಿದ ಅನಂತರ, ಈ ಮನುಷ್ಯನು ಮತ್ತು ಅವನ ಪತ್ನಿಯು ಸುವಾರ್ತೆಯ ಪ್ರಚಾರಕರಾದರು. ಗಂಡನು ತಿಳಿಸುವುದು: “ಬೈಬಲ್‌ ಸತ್ಯವು ನನ್ನನ್ನು ಬದಲಾಯಿಸಿದೆ. ನಾನು ಈಗ ನನ್ನ ಕುಟುಂಬದೊಂದಿಗೆ ಕ್ರೂರವಾಗಿಯೂ ಕಠೋರವಾಗಿಯೂ ವರ್ತಿಸುವುದಿಲ್ಲ. ಅತಿಯಾಗಿ ಕುಡಿಯುವುದೂ ಇಲ್ಲ. ನನ್ನ ಜೀವನದಲ್ಲಿ ಸತ್ಯವು ತಂದಂಥ ಬದಲಾವಣೆಗಳನ್ನು ನನ್ನ ಹಳ್ಳಿಯ ಜನರು ಗಮನಿಸಬಲ್ಲರು. ಅವರು ಸಹ ನನ್ನಂತೆಯೇ ಸತ್ಯವನ್ನು ಪ್ರೀತಿಸಲು ಆರಂಭಿಸುವರೆಂದು ನಿರೀಕ್ಷಿಸುತ್ತೇನೆ.”

ಹುಡುಕಾಟದಲ್ಲಿ ಉಪಯೋಗಿಸಲ್ಪಟ್ಟ ಕ್ವೆಸ್ಟ್‌

ಇಸವಿ 2002ರ ಜ್ಞಾಪಕಾಚರಣೆಯ ಕೆಲವು ತಿಂಗಳುಗಳ ಅನಂತರ, ಇನ್ನೊಂದು ಹಾಯಿ ಹಡಗು ಬೆಲೆಕಟ್ಟಲಾಗದ ಸರಕುಗಳನ್ನು ಹಾಆಪೈಗೆ ತಂದಿತು. ನ್ಯೂ ಸೀಲೆಂಡ್‌ನಿಂದ ಬಂದ 18 ಮೀಟರ್‌ ಉದ್ದದ ಕ್ವೆಸ್ಟ್‌ ಎಂಬ ಹೆಸರಿನ ಹಡಗು ಟೊಂಗಾದ ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ಸಂಚರಿಸಿತು. ಅದರಲ್ಲಿ, ಗ್ಯಾರೀ ಮತ್ತು ಹಿಟೀ ಎಂಬ ದಂಪತಿಯರು ಮತ್ತು ಅವರ ಮಗಳಾದ ಕೇಟೀ ಇದ್ದರು. ಟೊಂಗಾದ ಒಂಭತ್ತು ಮಂದಿ ಸಹೋದರ ಸಹೋದರಿಯರು ಮತ್ತು ಇಬ್ಬರು ಮಿಷನೆರಿಗಳು ಎರಡು ಜಲಯಾನಗಳಲ್ಲಿ ಅವರನ್ನು ಜೊತೆಗೂಡಿದರು. ಸ್ಥಳಿಕ ಸಾಕ್ಷಿಗಳು, ಹಡಗನ್ನು ಸಮುದ್ರದಲ್ಲಿ ಕುಶಲತೆಯಿಂದ ನಡೆಸಲು ಮತ್ತು ಕೆಲವೊಮ್ಮೆ ನಕ್ಷೆಯಲ್ಲಿ ಗುರುತಿಸಲ್ಪಟ್ಟಿರದ ಬಂಡೆಗಳ ಮಧ್ಯದಿಂದ ನಡೆಸಲು ಸಹ ಸಹಾಯಮಾಡಿದರು. ಇದು ಮೋಜಿಗಾಗಿ ಮಾಡಲ್ಪಡುತ್ತಿದ್ದ ಜಲಯಾನಗಳಾಗಿರಲಿಲ್ಲ. ಹಡಗಿನಲ್ಲಿದ್ದವರು ಬೈಬಲ್‌ ಸತ್ಯವನ್ನು ಇತರರಿಗೆ ಕಲಿಸುವ ಸಲುವಾಗಿ ದ್ವೀಪದಿಂದ ದ್ವೀಪಕ್ಕೆ ಪ್ರಯಾಣಿಸುತ್ತಿದ್ದರು. ಅವರು 14 ದ್ವೀಪಗಳನ್ನು ಭೇಟಿನೀಡುವ ಮೂಲಕ ಸಾಗರದ ವಿಸ್ತಾರವಾದ ಕ್ಷೇತ್ರವನ್ನು ಆವರಿಸಿದರು. ಇದರಲ್ಲಿ ಕೆಲವು ದ್ವೀಪಗಳಲ್ಲಿ ರಾಜ್ಯದ ಸುವಾರ್ತೆಯು ಹಿಂದೆಂದೂ ಸಾರಲ್ಪಟ್ಟಿರಲಿಲ್ಲ.

ಜನರು ಹೇಗೆ ಪ್ರತಿಕ್ರಿಯಿಸಿದರು? ಸಾಮಾನ್ಯವಾಗಿ, ಸಮುದ್ರವನ್ನು ದಾಟಿ ತಮ್ಮಲ್ಲಿಗೆ ಬಂದಿರುವ ಸೌವಾರ್ತಿಕರನ್ನು ಅತಿ ಕುತೂಹಲ, ಬೆಚ್ಚಗಿನ ಭಾವ, ಮತ್ತು ದ್ವೀಪದ ಸಾಂಪ್ರದಾಯಿಕ ಅತಿಥಿಸತ್ಕಾರದೊಂದಿಗೆ ಸ್ವಾಗತಿಸಲಾಯಿತು. ದ್ವೀಪನಿವಾಸಿಗಳಿಗೆ ಈ ಭೇಟಿಯ ಉದ್ದೇಶವು ಒಮ್ಮೆ ಅರ್ಥವಾದ ಅನಂತರ ಅವರು ಆಳವಾದ ಗಣ್ಯತೆಯನ್ನು ವ್ಯಕ್ತಪಡಿಸಿದರು. ದ್ವೀಪನಿವಾಸಿಗಳು ದೇವರ ವಾಕ್ಯವನ್ನು ಗೌರವಿಸುತ್ತಾರೆ ಮತ್ತು ತಮ್ಮ ಆಧ್ಯಾತ್ಮಿಕ ಅಗತ್ಯದ ಅರುಹುಳ್ಳವರಾಗಿದ್ದಾರೆ ಎಂಬುದನ್ನು ಭೇಟಿನೀಡಿದ ಸಾಕ್ಷಿಗಳು ಸ್ಪಷ್ಟವಾಗಿ ತಿಳಿದುಕೊಂಡರು.​—⁠ಮತ್ತಾಯ 5:⁠3.

ಭೇಟಿನೀಡುತ್ತಿದ್ದ ಸಾಕ್ಷಿಗಳು ಅನೇಕಬಾರಿ ಉಷ್ಣವಲಯದ ಮರಗಳಡಿಯಲ್ಲಿ ಕುಳಿತು, ತಮ್ಮನ್ನು ಸುತ್ತುವರಿದಿರುವ ಜನರ ಅಸಂಖ್ಯಾತ ಶಾಸ್ತ್ರೀಯ ಪ್ರಶ್ನೆಗಳನ್ನು ಚರ್ಚಿಸುತ್ತಿದ್ದರು. ಕತ್ತಲಾದ ಅನಂತರ ಆ ಬೈಬಲ್‌ ಚರ್ಚೆಗಳನ್ನು ಮನೆಗಳಲ್ಲಿ ಮುಂದುವರಿಸಲಾಗುತ್ತಿತ್ತು. ಒಂದು ದ್ವೀಪದಲ್ಲಿನ ನಿವಾಸಿಗಳು ಹಿಂದಿರುಗಿ ಹೋಗುತ್ತಿದ್ದ ಸಾಕ್ಷಿಗಳನ್ನು ಕರೆದು ಹೀಗೆ ಹೇಳಿದರು: “ಹೋಗಬೇಡಿ! ನೀವು ಹೋದರೆ ನಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಯಾರು ನೀಡುತ್ತಾರೆ?” ಒಬ್ಬಾಕೆ ಸಾಕ್ಷಿಯು ತಿಳಿಸುವುದು: “ಸತ್ಯಕ್ಕಾಗಿ ಹಸಿದಿರುವ ಅನೇಕ ಕುರಿಸದೃಶ ಜನರನ್ನು ಹಿಂದಕ್ಕೆ ಬಿಟ್ಟುಹೋಗುವುದು ಯಾವಾಗಲೂ ಬಹಳ ಕಷ್ಟಕರವಾಗಿತ್ತು. ಸತ್ಯದ ಅನೇಕ ಬೀಜಗಳು ಬಿತ್ತಲ್ಪಟ್ಟಿವೆ.” ಒಂದು ದ್ವೀಪಕ್ಕೆ ಕ್ವೆಸ್ಟ್‌ ಹಡಗು ಬಂದು ತಲಪಿದಾಗ, ಅಲ್ಲಿರುವ ಎಲ್ಲ ಜನರು ಶೋಕವನ್ನು ವ್ಯಕ್ತಪಡಿಸುವ ಉಡುಪು ಧರಿಸಿರುವುದನ್ನು ಸಾಕ್ಷಿಗಳು ನೋಡಿದರು. ಇದಕ್ಕೆ ಕಾರಣ, ಪಟ್ಟಣದ ಅಧಿಕಾರಿಯ ಪತ್ನಿಯು ಅಂದೇ ತೀರಿಕೊಂಡಿದ್ದಳು. ಆ ಸಮಯದಲ್ಲಿ ಸಾಕ್ಷಿಗಳು, ಬೈಬಲಿನಲ್ಲಿದ್ದ ಸಾಂತ್ವನದ ಸಂದೇಶವನ್ನು ಅವರಿಗೆ ತಿಳಿಸಿದಕ್ಕಾಗಿ ಅಧಿಕಾರಿಯು ವೈಯಕ್ತಿಕವಾಗಿ ಸಹೋದರರಿಗೆ ಉಪಕಾರ ಹೇಳಿದನು.

ಕೆಲವು ದ್ವೀಪಗಳನ್ನು ಸುಲಭವಾಗಿ ಪ್ರವೇಶಿಸಲು ಸಾಧ್ಯವಿರಲಿಲ್ಲ. ಹಿಟೀ ವಿವರಿಸುವುದು: “ಒಂದು ದ್ವೀಪವು ಹೇಗಿತ್ತೆಂದರೆ ಅದಕ್ಕೆ ಹಡಗು ಬಂದು ನಿಲ್ಲಬಹುದಾದ ಇಳಿಜಾರು ಪ್ರದೇಶವಿರಲಿಲ್ಲ, ಬದಲಾಗಿ ಒಂದು ಅಥವಾ ಹೆಚ್ಚು ಮೀಟರುಗಳಷ್ಟು ಎತ್ತರದ ವರೆಗೆ ಸಮುದ್ರದಿಂದ ನೇರವಾಗಿ ಮೇಲೇರಿರುವ ಕಡಿದಾದ ಬಂಡೆಗಳಿದ್ದವು. ನಮ್ಮ ರಬ್ಬರ್‌ ಕಿರುದೋಣಿಯಲ್ಲಿ ಮಾತ್ರವೇ ಅದನ್ನು ಸಮೀಪಿಸಸಾಧ್ಯವಿತ್ತು. ಮೊದಲಾಗಿ, ನಾವು ಆ ದ್ವೀಪದ ಹತ್ತಿರ ಬಂದೊಡನೆ ನಮ್ಮ ಚೀಲಗಳನ್ನು ಎತ್ತರದ ದಡದಲ್ಲಿರುವ ಜನರ ಕೈಗೆ ಬಿಸಾಡಬೇಕಿತ್ತು. ಅನಂತರ, ಯಾವಾಗ ಸಮುದ್ರದ ನೀರು ಉಕ್ಕೇರಿ ನಮ್ಮ ಕಿರುದೋಣಿಯನ್ನು ಮೇಲಕ್ಕೇರಿಸುತ್ತದೋ ಆಗ ತಕ್ಷಣವೇ, ಅಂದರೆ ನೀರು ತಗ್ಗುವ ಮುನ್ನ ನಾವು ದಡಕ್ಕೆ ಹಾರಬೇಕಿತ್ತು.”

ಆದರೆ ಹಡಗಿನಲ್ಲಿದ್ದ ಎಲ್ಲರೂ ಧೀರ ನಾವಿಕರಾಗಿರಲಿಲ್ಲ. ಎರಡು ವಾರಗಳ ಸಮುದ್ರಯಾನದ ಅನಂತರ, ಮುಖ್ಯ ದ್ವೀಪವಾದ ಟೊಂಗಟಬುವಿಗೆ ಹಿಂದಿರುಗಿ ಪ್ರಯಾಣಿಸುವ ಕುರಿತು ನೌಕಾಧಿಪತಿಯು ಬರೆದದ್ದು: “ನಮ್ಮ ಮುಂದೆ 18 ತಾಸುಗಳ ಪ್ರಯಾಣವಿದೆ. ಎಡೆಬಿಡದೆ ನಾವು ಇಷ್ಟು ತಾಸುಗಳ ಪ್ರಯಾಣವನ್ನು ಮಾಡಲಾರೆವು, ಏಕೆಂದರೆ ನಮ್ಮ ಮಧ್ಯೆ ಕೆಲವರಿಗೆ ಸಮುದ್ರಪಿತ್ತವಿದೆ. ನಾವು ಮನೆಗೆ ಹಿಂದಿರುಗಿ ಹೋಗುವುದನ್ನು ನೆನಸುವಾಗ ನಮಗೆ ಸಂತೋಷವಾಗುತ್ತದೆ, ಆದರೆ ಅದೇ ಸಮಯದಲ್ಲಿ ರಾಜ್ಯದ ಸಂದೇಶಕ್ಕೆ ಕಿವಿಗೊಟ್ಟ ಅನೇಕ ಜನರನ್ನು ಬಿಟ್ಟುಹೋಗಬೇಕಲ್ಲ ಎಂದು ತುಂಬ ದುಃಖವೂ ಆಗುತ್ತದೆ. ನಾವು ಅವರನ್ನು ಯೆಹೋವನ ಕೈಗೊಪ್ಪಿಸುತ್ತೇವೆ. ಅವರು ಆಧ್ಯಾತ್ಮಿಕವಾಗಿ ಬೆಳೆಯುವಂತೆ ಆತನ ಪವಿತ್ರಾತ್ಮ ಮತ್ತು ದೇವದೂತರು ಸಹಾಯಮಾಡುವರು.”

ಉಜ್ವಲ ಪ್ರತೀಕ್ಷೆಗಳುಳ್ಳ ದ್ವೀಪಗಳು

ಕ್ವೆಸ್ಟ್‌ ಹಡಗು ಹಿಂದಿರುಗಿ ಹೆಚ್ಚುಕಡಿಮೆ ಆರು ತಿಂಗಳುಗಳು ಕಳೆದ ಅನಂತರ, ಇಬ್ಬರು ವಿಶೇಷ ಪಯನೀಯರ್‌ ಶುಶ್ರೂಷಕರಾದ ಸ್ಟೀವನ್‌ ಮತ್ತು ಮಾಲಾಕೀ ಎಂಬವರು, ಹಾಆಪೈ ದ್ವೀಪಗುಂಪಿನಲ್ಲಿ ಸಾರುವಂತೆ ನೇಮಿಸಲ್ಪಟ್ಟರು. ಅಲ್ಲಿ ಅವರು, ಇತ್ತೀಚೆಗೆ ದೀಕ್ಷಾಸ್ನಾನ ಪಡೆದುಕೊಂಡ ಎರಡು ದಂಪತಿಗಳೊಂದಿಗೆ ಬೈಬಲನ್ನು ಕಲಿಸುವ ಕೆಲಸದಲ್ಲಿ ಜೊತೆಗೂಡಿದರು. ತಾತ್ವಿಕ ವಿಷಯಗಳ ಕುರಿತಾದ ಸ್ವಾರಸ್ಯಕರ ಚರ್ಚೆಗಳು ನಡೆಯುತ್ತಿವೆ, ಮತ್ತು ಪ್ರಚಾರಕರು ಬೈಬಲಿನ ಉತ್ತಮ ಉಪಯೋಗವನ್ನು ಮಾಡುತ್ತಿದ್ದಾರೆ.

ಇಸವಿ 2003ರ ಡಿಸೆಂಬರ್‌ 1ರಂದು ಹಾಆಪೈಯಲ್ಲಿ ಒಂದು ಸಭೆಯು ಸ್ಥಾಪಿಸಲ್ಪಟ್ಟಿತು ಮತ್ತು ಇದು ಟೊಂಗಾದಲ್ಲಿನ ಐದನೇ ಸಭೆಯಾಗಿದೆ. ಹಾಜರಾಗುವವರಲ್ಲಿ ಹೆಚ್ಚಿನವರು ಮಕ್ಕಳು. ಅವರು ಗಮನಕೊಟ್ಟು ಆಲಿಸಲು ಕಲಿತಿದ್ದಾರೆ. ಅವರು ಮೌನವಾಗಿ ಕುಳಿತುಕೊಳ್ಳುತ್ತಾರೆ ಮತ್ತು ಸಭಿಕರೊಂದಿಗೆ ಚರ್ಚೆಯನ್ನು ಒಳಗೊಂಡ ಭಾಗಗಳಲ್ಲಿ ಭಾಗವಹಿಸಲು ತವಕಿಸುತ್ತಾರೆ. “ಬೈಬಲ್‌ ಕಥೆಗಳ ನನ್ನ ಪುಸ್ತಕದ ಕುರಿತು ಅವರಿಗಿರುವ ಜ್ಞಾನವು, ಅವರ ಹೆತ್ತವರು ತಮ್ಮ ಮಕ್ಕಳಿಗೆ ಬೈಬಲಿನ ಸತ್ಯವನ್ನು ಬೋಧಿಸಬೇಕೆಂಬ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ” ಎಂದು ಸರ್ಕಿಟ್‌ ಮೇಲ್ವಿಚಾರಕರು ತಿಳಿಸಿದರು. ನಿಶ್ಚಯವಾಗಿಯೂ ಆ ದ್ವೀಪಗಳು ಯೆಹೋವನ ಇನ್ನೂ ಹೆಚ್ಚಿನ ಸ್ನೇಹಿತರ ಕೊಯ್ಲಿನ ಉಜ್ವಲ ಪ್ರತೀಕ್ಷೆಗಳುಳ್ಳದ್ದಾಗಿವೆ.

ಎಪ್ಪತ್ತು ವರುಷಗಳ ಹಿಂದೆ ಚಾರ್ಲ್ಸ್‌ ವೀಟಿ, “ಮೃತರು ಎಲ್ಲಿದ್ದಾರೆ?” (ಇಂಗ್ಲಿಷ್‌) ಎಂಬ ಪುಸ್ತಿಕೆಯನ್ನು ಅವನ ಮಾತೃಭಾಷೆಯಾದ ಟಾಂಗನ್‌ ಭಾಷೆಗೆ ಭಾಷಾಂತರಿಸಿದಾಗ, ತನ್ನ ಸ್ವದೇಶದ ಜನರ ಹೃದಯದಲ್ಲಿ ರಾಜ್ಯದ ಬೀಜವು ಈ ಹಂತದ ವರೆಗೆ ಬೇರೂರುವುದೆಂದು ಅವರು ಎಣಿಸಿರಲಿಕ್ಕಿಲ್ಲ. ಅಂದಿನ ಆ ಚಿಕ್ಕ ಆರಂಭದಿಂದ, ನಮ್ಮ ಭೂಗೋಳದ ಆ ಮೂಲೆಯಲ್ಲೂ ಸುವಾರ್ತೆಯ ಸದಾ ವಿಸ್ತರಿಸುತ್ತಿರುವ ಘೋಷಣೆಯನ್ನು ಆಶೀರ್ವದಿಸುವುದನ್ನು ಯೆಹೋವನು ಮುಂದುವರಿಸಿದ್ದಾನೆ. ಇಂದು, ಯೆಹೋವನ ಕಡೆಗೆ ತಿರುಗುತ್ತಿವೆ ಎಂಬುದಾಗಿ ಹೇಳಬಹುದಾದ ದೂರದ ದ್ವೀಪಗಳಲ್ಲಿ ಟೊಂಗಾ ಸಹ ಒಂದಾಗಿದೆ ಎಂದು ನಿಜವಾಗಿಯೂ ಹೇಳಸಾಧ್ಯವಿದೆ. (ಕೀರ್ತನೆ 97:1; ಯೆಶಾಯ 51:⁠5) ಆ ‘ಸ್ನೇಹಪರ ದ್ವೀಪಗಳು’ ಇಂದು ಅನೇಕ ಯೆಹೋವನ ಸ್ನೇಹಿತರಿಗೆ ಬೀಡಾಗಿದೆ.

[ಪುಟ 8ರಲ್ಲಿರುವ ಚಿತ್ರ]

ಚಾರ್ಲ್ಸ್‌ ವೀಟಿ, 1983

[ಪುಟ 9ರಲ್ಲಿರುವ ಚಿತ್ರ]

ಬೂಟೇದಾರ ವಸ್ತ್ರವನ್ನು ತಯಾರಿಸುವುದು

[ಪುಟ 10ರಲ್ಲಿರುವ ಚಿತ್ರ]

ಟೊಂಗಾದಲ್ಲಿ ಸುವಾರ್ತೆಯನ್ನು ಹಬ್ಬಿಸಲು “ಕ್ವೆಸ್ಟ್‌” ಎಂಬ ಹೆಸರಿನ ಈ ಹಡಗನ್ನು ಉಪಯೋಗಿಸಲಾಯಿತು

[ಪುಟ 11ರಲ್ಲಿರುವ ಚಿತ್ರ]

ಭಾಷಾಂತರ ತಂಡ, ನೂಕೂಆಲೋಫಾ

[ಪುಟ 9ರಲ್ಲಿರುವ ಚಿತ್ರ ಕೃಪೆ]

ಬೂಟೇದಾರ ವಸ್ತ್ರವನ್ನು ತಯಾರಿಸುವುದು: © Jack Fields/CORBIS; ಪುಟ 8 ಮತ್ತು 9ರ ಹಿನ್ನೆಲೆ, ಹಾಗೂ ಮೀನುಹಿಡಿಯುವುದು: © Fred J. Eckert