ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನ್ಯಾಯಕ್ಕಾಗಿ ಸ್ಥಿರನಿಲ್ಲುವ ನ್ಯಾಯಾಧೀಶ

ನ್ಯಾಯಕ್ಕಾಗಿ ಸ್ಥಿರನಿಲ್ಲುವ ನ್ಯಾಯಾಧೀಶ

ದೇವರ ಸಮೀಪಕ್ಕೆ ಬನ್ನಿರಿ

ನ್ಯಾಯಕ್ಕಾಗಿ ಸ್ಥಿರನಿಲ್ಲುವ ನ್ಯಾಯಾಧೀಶ

ಅರಣ್ಯಕಾಂಡ 20:2-13

ಮಾನವ ನ್ಯಾಯಾಧೀಶರು ಕೊಡುವಂಥ ತೀರ್ಪುಗಳು ನ್ಯಾಯವಲ್ಲದ್ದೂ ತೀರ ಕಠಿನವಾದದ್ದೂ ಆಗಿರಬಲ್ಲವು. ಯೆಹೋವ ದೇವರು ಹಾಗೆಂದೂ ಮಾಡುವುದಿಲ್ಲ. ಆತನು “ನ್ಯಾಯವನ್ನು ಮೆಚ್ಚುವವನು.” (ಕೀರ್ತನೆ 37:28) ತಾಳ್ಮೆ ತೋರಿಸುತ್ತಾನಾದರೂ ಅನ್ಯಾಯದೆಡೆಗೆ ಕಣ್ಮುಚ್ಚಿಕೊಂಡಿರುವುದಿಲ್ಲ. ನ್ಯಾಯಕ್ಕಾಗಿ ಸ್ಥಿರನಿಲ್ಲುತ್ತಾನೆ. ಆತನು ವ್ಯಾಜ್ಯ ಹಾಗೂ ದಂಗೆಯ ಪ್ರಕರಣವೊಂದನ್ನು ಹೇಗೆ ನಿರ್ವಹಿಸಿದನೆಂದು ಪರಿಗಣಿಸಿ. ಇದು ಬೈಬಲಿನ ಅರಣ್ಯಕಾಂಡ ಪುಸ್ತಕದ 20ನೇ ಅಧ್ಯಾಯದಲ್ಲಿದೆ.

ಪ್ರಾಚೀನ ಇಸ್ರಾಯೇಲ್ಯರ ಅರಣ್ಯ ಪ್ರಯಾಣದ ಕೊನೆಯಲ್ಲಿ ಅವರಿಗೆ ನೀರಿನ ಅಭಾವವುಂಟಾಯಿತು. * ಆ ಜನರು ತಮ್ಮನ್ನು ಮುನ್ನಡೆಸುತ್ತಿದ್ದ ಮೋಶೆ ಆರೋನರೊಂದಿಗೆ ವಿವಾದಕ್ಕಿಳಿದು, “ನೀವು ಯೆಹೋವನ ಸಭೆಯವರಾದ ನಮ್ಮನ್ನೂ ನಮ್ಮ ಪಶುಗಳನ್ನೂ ಈ ಮರುಳುಕಾಡಿಗೆ ಕರಕೊಂಡು ಬಂದು ಯಾಕೆ ಸಾಯಿಸುತ್ತೀರಿ?” ಎಂದು ಹೇಳಿದರು. (ವಚನ 4) ಅರಣ್ಯವು “ಕೆಟ್ಟ ಸ್ಥಳ” ಎಂದೂ ಅಲ್ಲಿ “ಕುಡಿಯುವದಕ್ಕೆ ನೀರಾದರೂ ಇಲ್ಲ” ಎಂದೂ ಅವರು ದೂರಿದರು. ಅಷ್ಟುಮಾತ್ರವಲ್ಲದೆ ಅಲ್ಲಿ “ಅಂಜೂರವಿಲ್ಲ, ದ್ರಾಕ್ಷೆಯಿಲ್ಲ, ದಾಳಿಂಬವಿಲ್ಲ” ಎಂದೂ ಗುಣುಗುಟ್ಟಿದರು. ವರ್ಷಗಳ ಹಿಂದೆ ಇಸ್ರಾಯೇಲ್ಯ ಗೂಢಚಾರರು ಕಾನಾನ್‌ ದೇಶಕ್ಕೆ ಹೋಗಿ ತೆಗೆದುಕೊಂಡು ಬಂದದ್ದು ಆ ಫಲಗಳನ್ನೇ. (ವಚನ 5; ಅರಣ್ಯಕಾಂಡ 13:23) ಇಂಥ ಫಲಭರಿತ ದೇಶವನ್ನು ಪ್ರವೇಶಿಸಲು ಹಿಂದಿನ ತಲೆಮಾರು ನಿರಾಕರಿಸಿತ್ತು. ಈಗಲಾದರೋ ಈ ಅರಣ್ಯ ಆ ದೇಶದಂತಿಲ್ಲವೆಂದು ಇಸ್ರಾಯೇಲ್ಯರು ಮೋಶೆ ಆರೋನರನ್ನು ಪರೋಕ್ಷವಾಗಿ ದೂರಿದರು!

ಯೆಹೋವನು ಆ ಗುಣುಗುಟ್ಟುವವರ ಮಾತನ್ನು ತಳ್ಳಿಹಾಕಲಿಲ್ಲ. ಬದಲಿಗೆ ಮೋಶೆಗೆ ಮೂರು ಸಂಗತಿಗಳನ್ನು ಮಾಡುವಂತೆ ಹೇಳಿದನು. ಅವನು ತನ್ನ ಕೋಲನ್ನು ಕೈಯಲ್ಲಿ ಹಿಡಿದು, ಜನರನ್ನು ಕೂಡಿಸಿ, ‘ಅವರ ಎದುರಿನಲ್ಲೇ ಆ ಕಡಿದಾದ ಬಂಡೆಗೆ ನೀರುಕೊಡಬೇಕೆಂದು ಆಜ್ಞಾಪಿಸಬೇಕಿತ್ತು.’ (ವಚನ 7, 8) ಮೋಶೆ ವಿಧೇಯತೆಯಿಂದ ಮೊದಲ ಎರಡು ಸಂಗತಿಗಳನ್ನು ಮಾಡಿದನಾದರೂ ಮೂರನೆಯದನ್ನು ಮಾಡಲು ತಪ್ಪಿಹೋದನು. ನಂಬಿಕೆಯಿಂದ ಆ ಬಂಡೆಯ ಸಂಗಡ ಮಾತಾಡುವ ಬದಲು ಕೋಪಾವೇಶದಿಂದ ಜನರ ಸಂಗಡ ಮಾತಾಡುತ್ತಾ “ದ್ರೋಹಿಗಳೇ, ಕೇಳಿರಿ; ನಾವು ಈ ಬಂಡೆಯೊಳಗಿಂದಲೇ ನಿಮಗೋಸ್ಕರ ನೀರನ್ನು ಬರಮಾಡಬೇಕೋ” ಎಂದು ಹೇಳಿದನು. (ವಚನ 10; ಕೀರ್ತನೆ 106:32, 33) ತದನಂತರ ಮೋಶೆ ಬಂಡೆಯನ್ನು ಎರಡು ಸಾರಿ ಹೊಡೆದನು. “ಆಗ ನೀರು ಪ್ರವಾಹವಾಗಿ ಹೊರಟಿತು.”—ವಚನ 11.

ಹೀಗೆ ಮೋಶೆ ಮತ್ತು ಜೊತೆಯಲ್ಲಿದ್ದ ಆರೋನನು ಗಂಭೀರ ಪಾಪಗೈದರು. ದೇವರು ಅವರಿಗೆ, ‘ನೀವಿಬ್ಬರೂ ನನ್ನ ಮಾತಿಗೆ ವಿರೋಧವಾಗಿ ತಿರುಗಿಬಿದ್ದಿದ್ದೀರಿ’ ಎಂದು ಹೇಳಿದನು. (ಅರಣ್ಯಕಾಂಡ 20:24) ದ್ರೋಹಿಗಳೆಂದು ಜನರ ಮೇಲೆ ಆರೋಪ ಹಾಕಿದ ಮೋಶೆಆರೋನರೇ ಈ ಸಂದರ್ಭದಲ್ಲಿ ದೇವರ ಅಪ್ಪಣೆ ಮೀರುವ ಮೂಲಕ ದ್ರೋಹಿಗಳಾದರು. ಇದಕ್ಕಾಗಿ ದೇವರು ಕೊಟ್ಟ ತೀರ್ಪು ಸ್ಪಷ್ಟವಾಗಿತ್ತು. ಅದೇನೆಂದರೆ, ಮೋಶೆಆರೋನರು ಇಸ್ರಾಯೇಲ್ಯರನ್ನು ವಾಗ್ದತ್ತದೇಶಕ್ಕೆ ನಡೆಸಬಾರದು. ಈ ದಂಡನೆ ತೀರ ಕಠಿನವಾಗಿತ್ತೋ? ಖಂಡಿತ ಇಲ್ಲ. ಹೀಗನ್ನಲು ಹಲವಾರು ಕಾರಣಗಳಿವೆ.

ಮೊದಲಾಗಿ, ಜನರು ದ್ರೋಹಿಗಳೆಂದು ತೀರ್ಪು ಮಾಡುವುದಂತೂ ಬಿಡಿ, ಅವರೊಂದಿಗೆ ಮಾತಾಡುವಂತೆಯೂ ದೇವರು ಮೋಶೆಗೆ ಹೇಳಿರಲಿಲ್ಲ. ಎರಡನೆಯದಾಗಿ, ಮೋಶೆಆರೋನರು ದೇವರಿಗೆ ಮಹಿಮೆಕೊಡಲು ತಪ್ಪಿಹೋದರು. ‘ನೀವು ನನ್ನ ಗೌರವವನ್ನು ಕಾಪಾಡದೆಹೋದಿರಿ’ ಎಂದು ದೇವರು ಹೇಳಿದನು. (ವಚನ 12) ‘ನಾವು ನೀರನ್ನು ಬರಮಾಡುವೆವು’ ಎಂದು ಮೋಶೆ ಹೇಳಿದಾಗ ಅದ್ಭುತಕರವಾಗಿ ನೀರನ್ನು ಒದಗಿಸುವಾತನು ದೇವರಲ್ಲ, ತಾವೇ ಎಂಬಂತೆ ಮಾತಾಡಿದನು. ಮೂರನೆಯದಾಗಿ, ಈ ದಂಡನೆಯು ದೇವರು ಹಿಂದೆ ಕೊಟ್ಟಂಥ ತೀರ್ಪುಗಳಿಗೆ ಹೊಂದಿಕೆಯಲ್ಲಿತ್ತು. ಆತನಿಗೆ ದ್ರೋಹಿಗಳಾದ ಹಿಂದಿನ ತಲೆಮಾರಿನವರು ಕಾನಾನ್‌ ದೇಶವನ್ನು ಪ್ರವೇಶಿಸಬಾರದೆಂದು ದೇವರು ತೀರ್ಪನ್ನಿತ್ತಿದ್ದನು. ಮೋಶೆಆರೋನರಿಗೂ ಅದೇ ತೀರ್ಪು ಕೊಟ್ಟನು. (ಅರಣ್ಯಕಾಂಡ 14:22, 23) ನಾಲ್ಕನೆಯದಾಗಿ, ಮೋಶೆಆರೋನರು ಇಸ್ರಾಯೇಲಿನ ನಾಯಕರಾಗಿದ್ದರು. ಹೆಚ್ಚಿನ ಜವಾಬ್ದಾರಿಯುಳ್ಳವರು ದೇವರಿಗೆ ಹೆಚ್ಚಿನ ಲೆಕ್ಕವನ್ನು ಒಪ್ಪಿಸಬೇಕು.—ಲೂಕ 12:48.

ಯೆಹೋವನು ನ್ಯಾಯಕ್ಕಾಗಿ ಸ್ಥಿರ ನಿಲ್ಲುವಾತನು. ನ್ಯಾಯವನ್ನೇ ಮೆಚ್ಚುವವನಾಗಿರುವ ಆತನು ಅನ್ಯಾಯದ ತೀರ್ಪುಗಳನ್ನು ಎಂದೂ ಕೊಡಲಾರನು. ಈ ನ್ಯಾಯಾಧೀಶನು ಖಂಡಿತವಾಗಿಯೂ ನಮ್ಮ ಭರವಸೆ ಹಾಗೂ ಗೌರವಕ್ಕೆ ಅರ್ಹನಲ್ಲವೇ? (w09 09/01)

[ಪಾದಟಿಪ್ಪಣಿ]

^ ಪ್ಯಾರ. 5 ಇಸ್ರಾಯೇಲ್ಯರು ಐಗುಪ್ತದಿಂದ ಬಿಡುಗಡೆಯಾಗಿ ದೇವರು ಅಬ್ರಹಾಮನಿಗೆ ವಾಗ್ದಾನಿಸಿದ್ದ ಕಾನಾನ್‌ ದೇಶವನ್ನು ಪ್ರವೇಶಿಸಲಿದ್ದರು. ಆದರೆ ಆ ದೇಶವನ್ನು ನೋಡಲು ಹೋಗಿದ್ದ ಗೂಢಚಾರರಲ್ಲಿ 10 ಮಂದಿ ವಾಪಸ್ಸು ಬಂದು ಆ ಸ್ಥಳದ ಬಗ್ಗೆ ಕೆಟ್ಟ ವರದಿ ಕೊಟ್ಟಾಗ ಜನರೆಲ್ಲರೂ ಮೋಶೆಯ ವಿರುದ್ಧ ಗುಣುಗುಟ್ಟಿದರು. ಈ ಕಾರಣದಿಂದ ಅವರು ಅರಣ್ಯದಲ್ಲೇ 40 ವರ್ಷ ಕಳೆಯಬೇಕೆಂದು ಯೆಹೋವನು ವಿಧಿಸಿದನು. ಆ ದಂಗೆಕೋರ ತಲೆಮಾರಿನವರೆಲ್ಲರೂ ಸತ್ತುಹೋಗಲು ಈ ಸಮಯ ಸಾಕಾಗಿತ್ತು.