ಆಡಳಿತ ಮಂಡಲಿಯಿಂದ ನಿಮಗೊಂದು ಪತ್ರ
ಪ್ರಿಯ ಸಹೋದರ ಸಹೋದರಿಯರೇ:
ಕ್ರಿ.ಪೂ. ಏಳನೇ ಶತಮಾನದಲ್ಲಿ ಪ್ರವಾದಿ ಯೆಹೆಜ್ಕೇಲ ಒಂದು ಅದ್ಭುತವಾದ ದರ್ಶನ ನೋಡಿದನು. ಅದರಲ್ಲಿ ಬೃಹದಾಕಾರದ ಒಂದು ಸ್ವರ್ಗೀಯ ರಥವನ್ನು ನೋಡಿದನು. ಅದು ವಿಶ್ವದ ಪರಮಾಧಿಕಾರಿಯ ನಿಯಂತ್ರಣದಲ್ಲಿತ್ತು. ಅದು ಚಲಿಸುವ ವಿಧ ಎಲ್ಲಕ್ಕಿಂತ ಹೆಚ್ಚು ಅಚ್ಚರಿ ಮೂಡಿಸುವಂತಿತ್ತು. ಅದು ಮಿಂಚಿನ ವೇಗದಲ್ಲಿ ಚಲಿಸುತ್ತಿತ್ತು. ದಿಕ್ಕು ಬದಲಿಸುವಾಗಲೂ ಅದರ ವೇಗ ಕಡಿಮೆಯಾಗದೆ, ಚಕ್ರಗಳು ಓರೆಯಾಗಿ ಹೊರಳದೆ ಮಿಂಚಿನ ವೇಗದಲ್ಲೇ ಸಾಗುತ್ತಿತ್ತು.—ಯೆಹೆ. 1:4, 9, 12, 14, 16-27.
ಯೆಹೋವನ ವಿಶ್ವ ಸಂಘಟನೆಯ ಸ್ವರ್ಗೀಯ ಭಾಗ ಯಾವಾಗಲೂ ಚಲಿಸುತ್ತಾ ಇರುತ್ತದೆ ಎನ್ನುವುದನ್ನು ಈ ದರ್ಶನ ನಮಗೆ ನೆನಪಿಸುತ್ತದೆ. ಸಂಘಟನೆಯ ಭೂ ಭಾಗದ ಬಗ್ಗೆ ಏನು? ಭೂಮಿಯಲ್ಲಿರುವ ತನ್ನ ಸಂಘಟಿತ ಜನರನ್ನು ಸಹ ಯೆಹೋವನು ಆಶ್ಚರ್ಯಗೊಳಿಸುವ ವೇಗದಲ್ಲಿ ನಡೆಸುತ್ತಿದ್ದಾನೆಂದು ಕಳೆದ ಸೇವಾ ವರ್ಷ ಸ್ಪಷ್ಟವಾಗಿ ತೋರಿಸುತ್ತದೆ!
ಅಮೆರಿಕದಲ್ಲಿ ಬೆತೆಲ್ ಕುಟುಂಬದ ಸದಸ್ಯರು ಬ್ರೂಕ್ಲಿನ್ನಿಂದ ನ್ಯೂಯಾರ್ಕ್ನ ವಾರ್ವಿಕ್ನಲ್ಲಿರುವ ಹೊಸ ಮುಖ್ಯಕಾರ್ಯಾಲಯಕ್ಕೆ, ಕಾಂಪ್ಲೆಕ್ಸ್ಗಳಲ್ಲಿರುವ ಕಟ್ಟಡಗಳಿಗೆ ಅಥವಾ ಕ್ಷೇತ್ರಕ್ಕೆ ಹೋಗಲು ಸಿಕ್ಕಿದ ಹೊಸ ನೇಮಕಕ್ಕೆ ಸ್ಥಳಾಂತರಿಸುವುದರಲ್ಲಿ ತಲ್ಲೀನರಾಗಿದ್ದರು. ಇತರ ದೇಶಗಳಲ್ಲಿರುವ ಬೆತೆಲ್ ಸದಸ್ಯರು ಕೂಡ ಹೊಸ ಕಟ್ಟಡ ನಿರ್ಮಾಣದಲ್ಲಿ, ಕಟ್ಟಡಗಳನ್ನು ನವೀಕರಿಸುವುದರಲ್ಲಿ, ತಮ್ಮ ಶಾಖಾ ಕಛೇರಿಯನ್ನು ಇನ್ನೊಂದು ಶಾಖಾ ಕಛೇರಿಯ ಜೊತೆ ಒಂದಾಗಿಸುವ ಕೆಲಸದಲ್ಲಿ ಅಥವಾ ಹೊಸ ಜಾಗಕ್ಕೆ ಸ್ಥಳಾಂತರ ಆಗುವುದರಲ್ಲಿ ಮಗ್ನರಾಗಿದ್ದರು. ನಿಮ್ಮ ಬಗ್ಗೆ ಏನು? ನೀವು ಈ ರೀತಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿರದಿದ್ದರೂ ಬೇರೆ ವಿಧಗಳಲ್ಲಿ ಕಾರ್ಯಮಗ್ನರು ಆಗಿದ್ದೀರಿ ಎನ್ನುವುದರಲ್ಲಿ ಸಂಶಯವಿಲ್ಲ.
ಯೆಹೋವನ ಸಂಘಟನೆ ಚಲಿಸುವ ವೇಗಕ್ಕೆ ತಕ್ಕಂತೆ ಲೋಕದೆಲ್ಲೆಡೆ ದೇವಜನರು ಹಿಂದಿಗಿಂತಲೂ ಹೆಚ್ಚು ಕಾರ್ಯಮಗ್ನರಾಗಿ ಇರುವುದನ್ನು ನೋಡಿ ಆಡಳಿತ ಮಂಡಲಿಗೆ ಸಂತೋಷ ಆಗುತ್ತಿದೆ ಮತ್ತು ಪ್ರೋತ್ಸಾಹ ಸಿಕ್ಕಿದೆ. ದೇವಜನರಲ್ಲಿ ಅನೇಕರು ಪ್ರಚಾರಕರ ಅಗತ್ಯವಿರುವ ಸ್ಥಳಕ್ಕೆ ಹೋಗಿ ನೆಲೆಸಿದ್ದಾರೆ. ಇನ್ನು ಕೆಲವರು ಸೇವೆ ಹೆಚ್ಚಿಸಲಿಕ್ಕಾಗಿ ಹೊಸ ಭಾಷೆ ಕಲಿತಿದ್ದಾರೆ. ಮತ್ತಿತರರು ಹೊಸದಾದ, ತಾವು ಯಾವತ್ತೂ ಪ್ರಯತ್ನಿಸಿರದ ಸಾರುವ ವಿಧಾನವನ್ನು ಪ್ರಯತ್ನಿಸಿ ನೋಡಿದ್ದಾರೆ. ಇನ್ನೂ ಬೇರೆಬೇರೆ ವಿಧಾನಗಳಲ್ಲಿ ಹಲವರು ತಮ್ಮ ಸೇವೆಯನ್ನು ಹೆಚ್ಚಿಸಿದ್ದಾರೆ. ಹೀಗೆ, ವೃದ್ಧರು, ಕಾಯಿಲೆ ಇರುವವರು ಸೇರಿದಂತೆ ಎಲ್ಲ ನಂಬಿಗಸ್ತ ಕ್ರೈಸ್ತರು ಜೀವದ ಓಟವನ್ನು ನಿಷ್ಠೆಯಿಂದ ಓಡುತ್ತಿದ್ದಾರೆ. ಇವರೆಲ್ಲರೂ ಯೆಹೋವನ ಸೇವೆಯನ್ನು ಮುಂದುವರಿಸುತ್ತಾ ಸೈತಾನ ಸುಳ್ಳುಗಾರ ಎಂದು ಬಯಲುಪಡಿಸುವುದರಲ್ಲಿ ಸಹಾಯ ನೀಡುತ್ತಿದ್ದಾರೆ.—1 ಕೊರಿಂ. 9:24.
ನಿಮ್ಮ ಈ ಮನೋಭಾವ ಯೆಹೋವನ ಗಮನಕ್ಕೆ ಬಾರದೆ ಹೋಗುವುದಿಲ್ಲ. (ಇಬ್ರಿ. 6:10) ನಿಮ್ಮ ಈ ಸಿದ್ಧಮನಸ್ಸು ನಮಗೆ ಅಬ್ರಹಾಮ, ಸಾರಳನ್ನು ನೆನಪಿಸುತ್ತದೆ. ಅಬ್ರಹಾಮ ತನ್ನ ಕುಟುಂಬದೊಟ್ಟಿಗೆ ಕಲ್ದೀಯರ ಊರ್ ಪಟ್ಟಣವನ್ನು ಬಿಟ್ಟು ಕಾನಾನಿಗೆ ಹೊರಟಾಗ ಅವನಿಗೆ 70 ವರ್ಷ ದಾಟಿತ್ತು. ಕಾನಾನಿನಲ್ಲಿ ತನ್ನ ಉಳಿದ ಜೀವಮಾನವನ್ನು ಅಂದರೆ ಇನ್ನೊಂದು ನೂರು ವರ್ಷ ಗುಡಾರದಲ್ಲಿ ಕಳೆಯಲಿದ್ದನು. ಅವನೂ ಅವನ ಪ್ರಿಯ ಪತ್ನಿ ಎಂಥಾ ಸಿದ್ಧಮನಸ್ಸನ್ನು ತೋರಿಸಿದರು ಅಲ್ಲವೇ!—ಆದಿ. 11:31; ಅ. ಕಾ. 7:2, 3.
ನೀವು ಇದೇ ಮನೋಭಾವ ತೋರಿಸುತ್ತಿದ್ದೀರಾ? ಈ ಕಷ್ಟದ ಸಮಯದಲ್ಲಿ ನಂಬಿಗಸ್ತಿಕೆಯಿಂದ ಸೇವೆ ಮಾಡುತ್ತಿರುವ ನೀವೆಲ್ಲರೂ ಯೇಸು ಹೇಳಿದ್ದನ್ನೇ ಮಾಡುತ್ತಿದ್ದೀರಿ. ಅವನು ಹೇಳಿದ್ದು: “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ.”—ಮತ್ತಾ. 28:19.
“ಹೋಗಿ” ಎಂದು ಯೇಸು ಹೇಳಿದ ಪದ ನಾವು ಕ್ರಿಯಾಶೀಲರಾಗಿ ಇರಬೇಕು ಎನ್ನುವುದನ್ನು ಸೂಚಿಸುತ್ತದೆ. ಕಳೆದ ವರ್ಷ ಕ್ರಿಸ್ತನ ಹುರುಪಿನ ಹಿಂಬಾಲಕರು ಸಾಧಿಸಿರುವ ಕೆಲಸವನ್ನು ನೋಡುವಾಗ ಸಂತೋಷವಾಗುತ್ತಿದೆ! ಎಲ್ಲ ದೇಶಗಳ ಜನರಿಗೆ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸದ ಮೇಲೆ ಯೆಹೋವನು ಪ್ರಬಲ ಹಸ್ತವಿಟ್ಟು ಆಶೀರ್ವದಿಸಿದ್ದಾನೆ ಎನ್ನುವುದು ತುಂಬ ಸ್ಪಷ್ಟವಾಗಿ ಕಾಣುತ್ತಿದೆ.—ಈ ಸುವಾರ್ತೆಗೆ ಅನೇಕರು ಸ್ಪಂದಿಸುತ್ತಿದ್ದಾರೆ. ಕಳೆದ ವರ್ಷ ಪ್ರಚಾರಕರ ಉಚ್ಚಾಂಕ 83,40,847 ಮತ್ತು ಪ್ರತಿ ತಿಂಗಳು ನಡೆಸಲಾದ ಸರಾಸರಿ ಬೈಬಲ್ ಅಧ್ಯಯನಗಳು 1,01,15,264 ಆಗಿತ್ತು. ನಿಜವಾಗಲೂ ಸ್ವರ್ಗೀಯ ರಥ ವೇಗವಾಗಿ ಸಾಗುತ್ತಿದೆ ಮತ್ತು ಅದರ ಜೊತೆ ನೀವೂ ಕೂಡ! ಯೆಹೋವನು ರಕ್ಷಣೆಯ ಬಾಗಿಲನ್ನು ಮುಚ್ಚಲು ಇನ್ನೂ ಹೆಚ್ಚು ಸಮಯವಿಲ್ಲ. ಆದ್ದರಿಂದ ಈ ಕಡಿಮೆ ಸಮಯದಲ್ಲೂ ನಿಮ್ಮ ಒಳ್ಳೇ ಕೆಲಸವನ್ನು ನಿಲ್ಲಿಸದೆ ಮುಂದುವರಿಸಿ.
‘ಯೆಹೋವನಲ್ಲಿ ಭರವಸೆ ಇಟ್ಟು ಒಳ್ಳೇದನ್ನು ಮಾಡಿ.’ (ಕೀರ್ತ. 37:3) 2017ರ ಈ ವರ್ಷವಚನ ಸೂಕ್ತವಾಗಿದೆ. ಯೆಹೋವನಿಗೆ ಪವಿತ್ರ ಸೇವೆ ಸಲ್ಲಿಸುವ ಮೂಲಕ ಒಳ್ಳೇದನ್ನು ಮಾಡುತ್ತಾ ನೀವು ವರ್ಷವಚನದ ಮಾತುಗಳಿಗೆ ವಿಧೇಯತೆ ತೋರಿಸಿದರೆ ಯೆಹೋವನ ಮೇಲೆ ನಿಮಗೆ ಭರವಸೆ ಇದೆ ಎಂದು ತೋರಿಸಿಕೊಡುತ್ತೀರಿ. ನೀವು ಯಾವತ್ತೂ ಒಬ್ಬಂಟಿಯಲ್ಲ ಎನ್ನುವುದನ್ನು ಯಾವಾಗಲೂ ಮನಸ್ಸಿನಲ್ಲಿಡಿ. “ನೋಡಿರಿ, ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂದು ಯೇಸು ಹೇಳಿದ ಮಾತುಗಳು ಇಂದಿಗೂ ಸತ್ಯವಾಗಿವೆ.—ಮತ್ತಾ. 28:20.
ನಿಮ್ಮ ನಂಬಿಗಸ್ತ ಸೇವೆಯನ್ನು ಯೆಹೋವನು ಖಂಡಿತ ಆಶೀರ್ವದಿಸುತ್ತಾನೆ ಎನ್ನುವ ಭರವಸೆ ನಿಮಗಿರಲಿ. ನೀವು ಯೆಹೋವನಿಗಾಗಿ ಮಾಡುವ ಕೆಲಸ ಚಿಕ್ಕದ್ದಾಗಿರಲಿ, ದೊಡ್ಡದ್ದಾಗಿರಲಿ ಅತ್ಯುತ್ತಮವಾದದ್ದನ್ನು ಆತನಿಗೆ ಕೊಟ್ಟಿದ್ದೀರಿ ಮತ್ತು ಸರಿಯಾದ ಉದ್ದೇಶದಿಂದ ಕೊಟ್ಟಿದ್ದೀರಿ ಎನ್ನುವುದನ್ನು ಆತನು ನೋಡುತ್ತಾನೆ. ನಿಮ್ಮ ಎಲ್ಲ ಉಡುಗೊರೆಗಳು ಆತನ ಹೃದಯವನ್ನು ಸ್ಪರ್ಶಿಸುತ್ತವೆ. ಆತನಿಗೆ ಸಂತೋಷ ತರುತ್ತವೆ. (2 ಕೊರಿಂ. 9:6, 7) ತಪ್ಪದೇ ಪ್ರಾರ್ಥನೆ ಮಾಡುವ, ದೇವರ ವಾಕ್ಯದ ಅಧ್ಯಯನ ಮಾಡುವ, ಕ್ರೈಸ್ತ ಕೂಟಗಳಿಗೆ ಹಾಜರಾಗುವ, ಸೇವೆಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವ ಮೂಲಕ ನಿಮ್ಮ ಪ್ರೀತಿಯ ತಂದೆಗೆ ಇನ್ನೂ ಹತ್ತಿರವಾಗಿ.
ಪಿಶಾಚನಿಗಿರುವ “ಸಮಯಾವಧಿಯು ಸ್ವಲ್ಪ,” ಅದು ಕಡಿಮೆಯಾಗುತ್ತಾ ಬರುತ್ತಿದೆ. ಹಾಗಾಗಿ ಯೆಹೋವನಿಗೆ ನಿಷ್ಠೆ ತೋರಿಸುವ ಮಾರ್ಗದಿಂದ ನಮ್ಮನ್ನು ಹೊರಗೆಳೆಯಲು ಆ ದುಷ್ಟ ದಂಗೆಕೋರ ಟೊಂಕಕಟ್ಟಿ ನಿಂತಿದ್ದಾನೆ. (ಪ್ರಕ. 12:12) ಯೆಹೋವನ ಹತ್ತಿರವೇ ಇರಿ. ಆಗ ಪಿಶಾಚನ ಪ್ರತಿಯೊಂದು ಪ್ರಯತ್ನವೂ ವಿಫಲವಾಗುತ್ತದೆ. (ಕೀರ್ತ. 16:8) ನಾವು ನಿಮ್ಮನ್ನು ತುಂಬ ಪ್ರೀತಿಸುತ್ತೇವೆ ಮತ್ತು ಈ ಕಡೇ ದಿವಸಗಳಲ್ಲಿ ಕರ್ತನ ಕೆಲಸದಲ್ಲಿ ನೀವು ನಮಗೆ ಕೊಡುತ್ತಿರುವ ಬೆಂಬಲವನ್ನು ತುಂಬ ಮಾನ್ಯಮಾಡುತ್ತೇವೆ.
ನಿಮ್ಮ ಸಹೋದರರು,
ಯೆಹೋವ ಸಾಕ್ಷಿಗಳ ಆಡಳಿತ ಮಂಡಲಿ