ಅವರ ಬಟ್ಟೆ ಮತ್ತು ಹೊರತೋರಿಕೆ ನನ್ನ ಪ್ರಗತಿಗೆ ಅಡ್ಡಗಾಲಾಗಿತ್ತು
ಅವರ ಬಟ್ಟೆ ಮತ್ತು ಹೊರತೋರಿಕೆ ನನ್ನ ಪ್ರಗತಿಗೆ ಅಡ್ಡಗಾಲಾಗಿತ್ತು
ಐಲೀನ್ ಬ್ರುಮ್‌ಬಾಗ್ ಹೇಳಿದ ಪ್ರಕಾರ
ನಾನು ಅಮಿಶ್ ಮತ್ತು ಮೆನನೈಟ್ ಪಂಗಡದ ತರ ಇರೋ ಓಲ್ಡ್ ಜರ್ಮನ್ ಬ್ಯಾಪ್ಟಿಸ್ಟ್ ಬ್ರೆದ್ರೆನ್ ಚರ್ಚಿನವಳಾಗಿದ್ದೆ. ಜರ್ಮನಿಯಲ್ಲಿ ಈ ಪಂಗಡ 1708ರಲ್ಲಿ ಶುರುವಾಯ್ತು. “ಕ್ರಿಸ್ತನ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಅಂತ ಕೆಲವರು ಬಯಸಿದ್ರಿಂದ ಇಂಥ ಪಂಗಡಗಳು ಶುರುವಾದವು” ಅಂತ ದ ಎನ್‌ಸೈಕ್ಲಪೀಡಿಯ ಆಫ್ ರಿಲಿಜಿಯನ್ ಹೇಳುತ್ತೆ. ಅದಕ್ಕೆ ಮಿಷನರಿಗಳನ್ನ ಬೇರೆಬೇರೆ ದೇಶಗಳಿಗೆ ಕಳುಹಿಸಿದರು.
1719ರಲ್ಲಿ ಅಲೆಕ್ಸಾಂಡರ್ ಮ್ಯಾಕ್ ಮತ್ತು ಇನ್ನು ಕೆಲವರು ಅಮೆರಿಕಾದ ಪೆನ್ಸಿಲ್ವೇನಿಯಾಗೆ ಬಂದರು. ಇವರು ನಡೆಸಿದ ಈ ಗುಂಪಿನಿಂದ ಹೊಸಹೊಸ ಗುಂಪುಗಳು ಹುಟ್ಟಿಕೊಂಡವು. ಆದ್ರೆ ಅಲೆಕ್ಸಾಂಡರ್ ಹೇಳಿದ್ದನ್ನ ಒಬ್ಬೊಬ್ಬರೂ ಒಂದೊಂದು ತರ ಅರ್ಥಮಾಡಿಕೊಂಡು ಅದನ್ನು ಬೇರೆಯವರಿಗೂ ಕಲಿಸ್ತಿದ್ದರು. ನಮ್ಮ ಚರ್ಚಲ್ಲಿ 50 ಜನ ಇದ್ವಿ. ಧರ್ಮಗುರುಗಳು ಹೇಳೋ ಪ್ರತಿಯೊಂದನ್ನೂ ಚಾಚೂತಪ್ಪದೇ ಪಾಲಿಸೋದು ಮತ್ತು ಬೈಬಲ್ ಓದೋದು ತುಂಬ ಪ್ರಾಮುಖ್ಯ ಅಂತ ನಮಗೆ ಅನಿಸುತ್ತಿತ್ತು.
ನಾವು ಮೂರು ತಲೆಮಾರಿಂದ ಇದೇ ಚರ್ಚಿಗೆ ಹೋಗುತ್ತಿದ್ವಿ. ನನಗೆ 13 ವರ್ಷ ಆದಾಗ ದೀಕ್ಷಾಸ್ನಾನ ತಗೊಂಡೆ. ಆಟೋಮೊಬೈಲ್, ಟ್ರ್ಯಾಕ್ಟರ್, ಟೆಲಿಫೋನ್, ರೇಡಿಯೋ ಅಥವಾ ಬೇರೆ ಎಲೆಕ್ಟ್ರಿಕ್ ಉಪಕರಣಗಳನ್ನ ಬಳಸುವುದು ಅಥವಾ ಇಟ್ಟುಕೊಳ್ಳುವುದು ದೊಡ್ಡ ತಪ್ಪು ಅಂತ ಚರ್ಚಿನವರು ಹೇಳುತ್ತಿದ್ದರು. ಸ್ತ್ರೀಯರು ಸಿಂಪಲ್ಲಾಗಿ ಬಟ್ಟೆ ಹಾಕುತ್ತಿದ್ದರು, ಕೂದಲನ್ನ ಕಟ್ ಮಾಡುತ್ತಿರಲಿಲ್ಲ. ತಲೆ ಕಾಣದ ಹಾಗೆ ಹ್ಯಾಟಿನಿಂದ ಅಥವಾ ಬಟ್ಟೆಯಿಂದ ಮುಚ್ಚುತ್ತಿದ್ವಿ. ಗಂಡಸರೆಲ್ಲ ಗಡ್ಡ ಬಿಡುತ್ತಿದ್ದರು. ಒಂದುವೇಳೆ ನಾವು ಮಾಡರ್ನ್ ಬಟ್ಟೆಗಳನ್ನ, ಮೇಕಪನ್ನ, ಒಡವೆಗಳನ್ನ ಹಾಕೋದಾದರೆ ಯೇಸುವಿನ ಮಾತನ್ನ ತಳ್ಳಿಹಾಕಿ ಈ ಲೋಕದವರ ತರ ಆಗಿಬಿಡುತ್ತೀವೇನೋ ಅಂತ ಅನಿಸುತ್ತಿತ್ತು.
ಬೈಬಲ್ ದೇವರ ವಾಕ್ಯ ಆಗಿರೋದ್ರಿಂದ ಅದನ್ನು ಗೌರವಿಸಬೇಕು ಅಂತ ನಮಗೆ ಕಲಿಸುತ್ತಿದ್ದರು. ಪ್ರತಿದಿನ ತಿಂಡಿ ತಿನ್ನೋ ಮುಂಚೆ ಅಪ್ಪ ಬೈಬಲ್ ಓದುತ್ತಿದ್ದರು. ಆಮೇಲೆ ಅದನ್ನ ನಮ್ಮೆಲ್ಲರಿಗೂ ವಿವರಿಸುತ್ತಿದ್ದರು. ಅಪ್ಪ ಪ್ರಾರ್ಥನೆ ಮಾಡುವಾಗ ನಾವೆಲ್ಲರೂ ಮೊಣಕಾಲೂರುತ್ತಿದ್ವಿ. ಆಮೇಲೆ ಅಮ್ಮ, ಕರ್ತನ ಪ್ರಾರ್ಥನೆಯನ್ನು ಹೇಳುತ್ತಿದ್ದರು. ಪ್ರತಿದಿನ ಬೆಳಿಗ್ಗೆ ನಾವೆಲ್ಲರೂ ಒಟ್ಟಿಗೆ ಕುಟುಂಬವಾಗಿ ಆರಾಧನೆ ಮಾಡುತ್ತಿದ್ದರಿಂದ ನಂಗೆ ತುಂಬ ಖುಷಿ ಆಗುತ್ತಿತ್ತು. ಅದಕ್ಕೋಸ್ಕರ ಯಾವಾಗಲೂ ಕಾಯುತ್ತಿದ್ದೆ.
ಇಂಡಿಯಾನಾದಲ್ಲಿರೋ ಡೆಲ್ಫಿ ಅನ್ನೋ ಪಟ್ಟಣದಲ್ಲಿ ನಮಗೊಂದು ಹೊಲ ಇತ್ತು. ನಾವು ಅಲ್ಲೇ ಇದ್ದು ಬೆಳೆ ಬೆಳೆಯುತ್ತಿದ್ವಿ. ಅದನ್ನು ಕುದುರೆಗಾಡಿಯಲ್ಲಿ ತಗೊಂಡು ಮನೆಮನೆಯಲ್ಲಿ, ಬೀದಿಬೀದಿಯಲ್ಲಿ ಮಾರುತ್ತಿದ್ವಿ. ಕಷ್ಟಪಟ್ಟು ದುಡಿಯೋದು ದೇವರ ಸೇವೆ ಅಂತ ಅಂದುಕೊಂಡ್ವಿ. ಭಾನುವಾರ ಸಬ್ಬತ್ ದಿನ ಆಗಿರೋದ್ರಿಂದ ಅವತ್ತೊಂದಿನ ಬಿಟ್ಟು ಬಾಕಿ ದಿನ ಕಷ್ಟಪಟ್ಟು ದುಡಿಯುತ್ತಿದ್ವಿ. ಕೆಲವೊಮ್ಮೆ ಹೊಲದಲ್ಲಿ ಎಷ್ಟು ಕೆಲಸ ಇರುತ್ತಿತ್ತು ಅಂದ್ರೆ ಆಧ್ಯಾತ್ಮಿಕ ವಿಷಯಗಳಿಗೆ ಗಮನ ಕೊಡುವುದು ಕಷ್ಟ ಆಗ್ತಿತ್ತು.
ಕುಟುಂಬ ಜೀವನ
ನನಗೆ 17 ವರ್ಷ ಇದ್ದಾಗ ಅಂದ್ರೆ 1963ರಲ್ಲಿ ನಾನು ಜೇಮ್ಸ್‌ನ ಮದುವೆಯಾದೆ. ಅವರು ನಮ್ಮ ಚರ್ಚಿನವರೇ. ತಾತ ಮುತ್ತಾತರ ಕಾಲದಿಂದಲೂ ಅವರು ಇದೇ ಧರ್ಮದಲ್ಲಿದ್ದರು. ನಮ್ಮಿಬ್ಬರಿಗೂ ದೇವರ ಸೇವೆ ಮಾಡಬೇಕು ಅನ್ನೋ ಆಸೆ ಇತ್ತು. ಅಷ್ಟೇ ಅಲ್ಲ ನಮ್ಮದೇ ಸತ್ಯಧರ್ಮ ಅಂತ ನಂಬಿದ್ವಿ.
1975ರಷ್ಟಕ್ಕೆ ನಮಗೆ 6 ಮಕ್ಕಳಿದ್ದರು. 1983ರಲ್ಲಿ ನಮ್ಮ ಕೊನೆ ಮಗ ಹುಟ್ಟಿದ. 7 ಮಕ್ಕಳಲ್ಲಿ ನಮಗೆ ಒಬ್ಬಳೇ ಹೆಣ್ಣುಮಗಳು. ಅವಳ ಹೆಸರು ರೆಬೆಕ್ಕ. ಕಷ್ಟಪಟ್ಟು ದುಡಿಯುತ್ತಿದ್ವಿ, ಸರಳ ಜೀವನ ನಡೆಸುತ್ತಿದ್ವಿ. ನಮ್ಮ ಅಪ್ಪ-ಅಮ್ಮ ನಮಗೆ ಏನು ಕಲಿಸುತ್ತಿದ್ದರೋ ಅದೇ ಬೈಬಲ್ ತತ್ವಗಳನ್ನು ನಮ್ಮ ಮಕ್ಕಳಿಗೂ ಕಲಿಸೋಕೆ ಪ್ರಯತ್ನ ಮಾಡಿದ್ವಿ.
ನಮ್ಮ ಚರ್ಚಿನವರಿಗೆ ಹೊರತೋರಿಕೆ ತುಂಬ ಮುಖ್ಯ ಆಗಿತ್ತು. ಒಬ್ಬ ವ್ಯಕ್ತಿಯ ಹೃದಯದಲ್ಲಿ ಏನಿದೆ ಅಂತ ಕಂಡುಹಿಡಿಯುವುದು ತುಂಬ ಕಷ್ಟ. ಆದರೆ ಅವನು ಹಾಕೋ ಬಟ್ಟೆಯಿಂದಾನೇ ಅವನು ಎಂಥವನು ಅಂತ ಕಂಡುಹಿಡಿಯಬಹುದು ಅಂತ ಅಂದುಕೊಳ್ಳುತ್ತಿದ್ವಿ. ಒಬ್ಬ ವ್ಯಕ್ತಿ ಹೇರ್‌ಸ್ಟೈಲ್ ಮಾಡಿದ್ರೆ ಅಥವಾ ದೊಡ್ಡದೊಡ್ಡ ಡಿಸೈನ್ ಇರೋ ಬಟ್ಟೆ ಹಾಕಿಕೊಂಡರೆ ಅವನಿಗೆ ತುಂಬ ಸೊಕ್ಕಿದೆ ಅಂತ ತೀರ್ಮಾನ ಮಾಡಿಬಿಡುತ್ತಿದ್ವಿ. ಕೆಲವೊಮ್ಮೆ ಬೈಬಲ್ ಏನು ಹೇಳುತ್ತೆ ಅನ್ನೋದಕ್ಕಿಂತ ಇಂಥ ವಿಷಯಗಳೇ ನಮಗೆ ಪ್ರಾಮುಖ್ಯ ಆಗಿಬಿಡುತ್ತಿತ್ತು.
ಜೈಲಿನಲ್ಲಿ ಆದ ಅನುಭವ
ನನ್ನ ಮೈದುನ ಜೆಸ್ಸಿ ಚಿಕ್ಕವಯಸ್ಸಿನಿಂದ ಓಲ್ಡ್ ಬ್ರೆದ್ರೆನ್ ಚರ್ಚಿಗೆ ಬರುತ್ತಿದ್ದ. ಮಿಲಿಟರಿಗೆ ಸೇರಿಲ್ಲ ಅಂತ 1960ರ ಕೊನೆಯಷ್ಟರಲ್ಲಿ ಅವನನ್ನ ಜೈಲಿಗೆ ಹಾಕಿದರು. ಯುದ್ಧ ಮಾಡೋದು ತಪ್ಪು ಅಂತ ನಂಬುತ್ತಿದ್ದ ಯೆಹೋವನ ಸಾಕ್ಷಿಗಳನ್ನು ಅವನು ಅಲ್ಲಿ ಭೇಟಿಯಾದ. (ಯೆಶಾಯ 2:4; ಮತ್ತಾಯ 26:52) ಅವರ ಜೊತೆ ಬೈಬಲ್ ಬಗ್ಗೆ ಮಾತಾಡೋಕೆ ತುಂಬ ಇಷ್ಟಪಡುತ್ತಿದ್ದ. ಯೆಹೋವನ ಸಾಕ್ಷಿಗಳು ನಡೆದುಕೊಳ್ಳೋ ರೀತಿ ಅವನಿಗೆ ಇಷ್ಟ ಆಯ್ತು. ಅದಾದ್ಮೇಲೆ ಅವನು ಬೈಬಲ್ ಸ್ಟಡಿಯನ್ನು ತೆಗೆದುಕೊಂಡ. ನಂತರ ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆದುಕೊಂಡ. ಅವನು ಹೀಗೆ ಮಾಡಿದ್ದಕ್ಕೆ ನಮಗೆ ತುಂಬ ಬೇಜಾರಾಯ್ತು.
ಜೆಸ್ಸಿ ಕಲಿತ ಎಲ್ಲ ವಿಷಯಗಳನ್ನು ನನ್ನ ಯಜಮಾನ್ರ ಹತ್ತಿರ ಹಂಚಿಕೊಳ್ಳುತ್ತಿದ್ದ. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ನನ್ನ ಯಜಮಾನರಿಗೆ ಸಿಗೋ ತರ ಅವನು ಏರ್ಪಾಡು ಮಾಡಿದ. ಇದನ್ನು ಓದುತ್ತಾ ಓದುತ್ತಾ ಅವರಿಗೆ ಬೈಬಲ್ ಕಲಿಯೋ ಆಸಕ್ತಿ ಜಾಸ್ತಿ ಆಯ್ತು. ಅವರಿಗೆ ದೇವರ ಸೇವೆ ಮಾಡೋದಂದ್ರೆ ತುಂಬ ಇಷ್ಟ. ಆದರೆ ಅದನ್ನ ಮಾಡೋಕೆ ಆಗ್ತಿಲ್ಲ ಅನ್ನೋ ಕೊರಗು ಯಾವಾಗಲೂ ಅವರನ್ನು ಕಾಡುತ್ತಿತ್ತು. ಅದಕ್ಕೆ ಅವರು ದೇವರ ಬಗ್ಗೆ ಕಲಿಯೋಕೆ ಸಿಗುವ ಸಂದರ್ಭಗಳನ್ನೆಲ್ಲ ಚೆನ್ನಾಗಿ ಬಳಸಿಕೊಳ್ಳುತ್ತಿದ್ದರು.
ಅಮಿಶ್, ಮೆನನೈಟ್ಸ್ ಮತ್ತು ಬೇರೆ ಓಲ್ಡ್ ಬ್ರೆದ್ರೆನ್ ಚರ್ಚಿನವರು ಈ ಲೋಕದವರ ತರ ಇದ್ದರೂ ಅವರ ಪುಸ್ತಕಗಳನ್ನು ಓದಬಹುದು ಅಂತ ನಮ್ಮ ಧಾರ್ಮಿಕ ಮುಖಂಡರು ಹೇಳಿದ್ರು. ನಮ್ಮ ಅಪ್ಪನಿಗೆ ಯೆಹೋವನ ಸಾಕ್ಷಿಗಳನ್ನು ಕಂಡರೆ ಆಗುತ್ತಿರಲಿಲ್ಲ. ಅದಕ್ಕೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಓದಲೇಬಾರದು ಅಂತ ಹೇಳುತ್ತಿದ್ದರು. ಹಾಗಾಗಿ ನನ್ನ ಯಜಮಾನ್ರು ಈ ಪತ್ರಿಕೆಗಳನ್ನು ಓದುವಾಗ ನನಗೆ ತುಂಬ ಹೆದರಿಕೆ ಆಗುತ್ತಿತ್ತು. ಯಾಕಂದ್ರೆ ಅವರು ಎಲ್ಲಿ ಸುಳ್ಳು ಧರ್ಮಕ್ಕೆ ಸೇರಿಬಿಡುತ್ತಾರೋ ಅಂತ ಭಯಪಡುತ್ತಿದ್ದೆ.
ನಮ್ಮ ನಂಬಿಕೆಯ ಬಗ್ಗೆ ನನ್ನ ಯಜಮಾನ್ರಿಗೆ ಸುಮಾರು ವರ್ಷಗಳಿಂದಾನೇ ಕೆಲವು ಸಂಶಯಗಳು ಇದ್ದವು. ಸಬ್ಬತ್ ದಿನದ ಬಗ್ಗೆ ಇದ್ದ ನಿಯಮಗಳನ್ನ ಅವರಿಗೆ ಒಪ್ಪಿಕೊಳ್ಳೋಕೆ ಆಗುತ್ತಿರಲಿಲ್ಲ. ಉದಾಹರಣೆಗೆ ಭಾನುವಾರ ಪ್ರಾಣಿಗಳಿಗೆ ನೀರು ಕೊಡಬಹುದು ಆದರೆ ಕಳೆಯನ್ನು ಕೀಳಬಾರದು ಅಂತ ನಮ್ಮ ಧಾರ್ಮಿಕ ಮುಖಂಡರು ಕಲಿಸುತ್ತಿದ್ದರು. ಆದರೆ ಇದಕ್ಕೆ ಬೈಬಲಿನಿಂದ ಯಾವ ಆಧಾರವನ್ನೂ ತೋರಿಸುತ್ತಿರಲಿಲ್ಲ. ಹಾಗಾಗಿ ಹೋಗ್ತಾ ಹೋಗ್ತಾ ನನಗೂ ಇಂಥ ಬೋಧನೆಗಳ ಬಗ್ಗೆ ಕೆಲವು ಸಂಶಯಗಳು ಹುಟ್ಟಿಕೊಳ್ಳುತ್ತಾ ಹೋಯಿತು.
ನಮ್ಮದೇ ಸತ್ಯಧರ್ಮ ಅಂತ ಓಲ್ಡ್ ಬ್ರೆದ್ರೆನ್ ಚರ್ಚಿನವರು ಕಲಿಸುತ್ತಿದ್ದರಿಂದ ಇದನ್ನ ಬಿಟ್ಟು ಬಂದರೆ ತುಂಬ ಸಮಸ್ಯೆಗಳು ಆಗುತ್ತೆ ಅಂತ ನನಗೆ ಗೊತ್ತಿತ್ತು. ಹಾಗಾಗಿ ತುಂಬ ಕಷ್ಟ ಆಯ್ತು. ಅಷ್ಟೇ ಅಲ್ಲ ಬೈಬಲಲ್ಲಿರೋ ಸತ್ಯಗಳನ್ನ ಸರಿಯಾಗಿ ಕಲಿಸದೇ ಇರೋ ಧರ್ಮದಲ್ಲಿ ಇರೋಕೆ ನಮ್ಮ ಮನಸ್ಸಾಕ್ಷಿನೂ ಒಪ್ಪಲಿಲ್ಲ. ಹಾಗಾಗಿ 1983ರಲ್ಲಿ ಈ ಧರ್ಮವನ್ನು ಬಿಡೋಕೆ ಕಾರಣ ಏನು ಅಂತ ಒಂದು ಪತ್ರವನ್ನು ಬರೆದು ಕೊಟ್ವಿ. ನಂತರ ಆ ಪತ್ರವನ್ನು ಚರ್ಚಿನಲ್ಲಿ ಓದೋಕೂ ಹೇಳಿದ್ವಿ. ಇದರ ಪರಿಣಾಮವಾಗಿ ಅವರು ನಮ್ಮನ್ನ ಚರ್ಚಿನಿಂದ ಬಹಿಷ್ಕಾರ ಮಾಡಿದ್ರು.
ಸತ್ಯ ಧರ್ಮಕ್ಕಾಗಿ ಹುಡುಕಾಟ
ಆಮೇಲೆ ನಾವು ಸತ್ಯ ಧರ್ಮವನ್ನು ಹುಡುಕೋಕೆ ಶುರುಮಾಡಿದ್ವಿ. ಯಾವ ಧರ್ಮ ಹೇಳಿದ ತರ ನಡೆಯುತ್ತೆ ಅಂತ ಹುಡುಕಿದ್ವಿ. ಯುದ್ಧಕ್ಕೆ ಬೆಂಬಲ ಕೊಡುವ ಧರ್ಮಗಳ ಸಹವಾಸಕ್ಕೆ ನಾವು ಹೋಗಲೇ ಇಲ್ಲ. ಈ ಲೋಕದವರ ತರ ನಡೆಯದೆ, ಸರಳ ಜೀವನ ಮಾಡುತ್ತಾ ಸಿಂಪಲ್ಲಾದ ಬಟ್ಟೆಯನ್ನು ಹಾಕುತ್ತಿದ್ದವರ ಕಡೆಗೆ ನಮಗೆ ವಿಶೇಷವಾದ ಒಲವಿತ್ತು. ಹಾಗಾಗಿ 1983ರಿಂದ 1985ವರೆಗೆ ನಾವು ಅಮೇರಿಕಾದ ಬೇರೆಬೇರೆ ಕಡೆ ಹೋಗಿ ಸತ್ಯ ಧರ್ಮಕ್ಕಾಗಿ ಹುಡುಕಾಡಿದ್ವಿ. ಅದರಲ್ಲಿ ಮೆನನೈಟ್ಸ್, ಕ್ವೇಕರ್ಸ್ ಮತ್ತು ಬೇರೆ ಗುಂಪುಗಳು ಇದ್ದವು.
ಅದೇ ಸಮಯದಲ್ಲಿ ಇಂಡಿಯಾನಾದ ಕ್ಯಾಮ್ಡೆನ್‌ನಲ್ಲಿರೋ ನಮ್ಮ ಹೊಲಕ್ಕೆ ಯೆಹೋವನ ಸಾಕ್ಷಿಗಳು ಬಂದರು. ನಾವು ಅವರ ಹತ್ತಿರ ‘ನೀವು ಕಿಂಗ್ ಜೇಮ್ಸ್ ವರ್ಷನ್ ಬೈಬಲನ್ನು ಉಪಯೋಗಿಸಿದರೆ ಮಾತ್ರ ನಿಮ್ಮ ಜೊತೆ ಮಾತಾಡ್ತೀವಿ’ ಅಂತ ಹೇಳಿದ್ವಿ. ನಾವು ಯೆಹೋವನ ಸಾಕ್ಷಿಗಳನ್ನು ಗೌರವಿಸುತ್ತಿದ್ವಿ. ಯಾಕಂದ್ರೆ ಅವರು ಯುದ್ಧಗಳನ್ನು ಮಾಡುತ್ತಿರಲಿಲ್ಲ. ಆದರೆ ಅದೇ ಸತ್ಯ ಧರ್ಮ ಅಂತ ನನಗೆ ಅನಿಸುತ್ತಿರಲಿಲ್ಲ. ಯಾಕಂದ್ರೆ ಅವರು ಒಳ್ಳೊಳ್ಳೇ ಬಟ್ಟೆಗಳನ್ನು ಹಾಕುತ್ತಿದ್ದರು, ನಮ್ಮ ತರ ಸರಳವಾದ ಬಟ್ಟೆಗಳನ್ನು ಹಾಕುತ್ತಿರಲಿಲ್ಲ. ಅಂಥ ಬಟ್ಟೆಗಳನ್ನು ಹಾಕಿಕೊಳ್ಳುವವರಿಗೆ, ದುಬಾರಿ ವಸ್ತುಗಳನ್ನು ಇಟ್ಟುಕೊಳ್ಳುವವರಿಗೆ ತುಂಬ ಸೊಕ್ಕು ಅಂತ ನಾನು ಅಂದುಕೊಳ್ಳುತ್ತಿದ್ದೆ.
ನನ್ನ ಯಜಮಾನ್ರು ಯೆಹೋವನ ಸಾಕ್ಷಿಗಳ ರಾಜ್ಯ ಸಭಾ ಗೃಹಕ್ಕೆ ಹೋಗೋಕೆ ಶುರುಮಾಡಿದರು. ಜೊತೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ಅದಕ್ಕೆ ನನಗೆ ತುಂಬ ಬೇಜಾರಾಯ್ತು. ಒಂದಿನ ನನ್ನ ಯಜಮಾನ್ರು ‘ನೀನೂ ಮೀಟಿಂಗಿಗೆ ಬಾ’ ಅಂತ ಕರೆದರು. ಆದರೆ ನನಗೆ ಹೋಗೋಕೆ ಇಷ್ಟ ಇರಲಿಲ್ಲ. ಆಗ ಅವರು ‘ಯೆಹೋವನ ಸಾಕ್ಷಿಗಳು ಕಲಿಸೋದನ್ನೆಲ್ಲ ನೀನು ಒಪ್ಪಿಕೊಳ್ಳದಿದ್ದರೂ ಅವರು ಒಬ್ಬರು ಇನ್ನೊಬ್ಬರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ ಅನ್ನೋದನ್ನಾದರೂ ನೋಡು’ ಅಂತ ಹೇಳಿದ್ರು. ನಿಜ ಹೇಳಬೇಕೆಂದರೆ ನನ್ನ ಯಜಮಾನರಿಗೆ ಯೆಹೋವನ ಸಾಕ್ಷಿಗಳು ನಡೆದುಕೊಳ್ಳುತ್ತಿದ್ದ ರೀತಿ ತುಂಬ ಇಷ್ಟ ಆಗುತ್ತಿತ್ತು.
ಕೊನೆಗೂ ನಾನು ಮೀಟಿಂಗಿಗೆ ಹೋಗೋಕೆ ಒಪ್ಪಿಕೊಂಡೆ. ಆದರೆ ತುಂಬ ಜಾಗ್ರತೆಯಿಂದನೂ ಇದ್ದೆ. ರಾಜ್ಯ ಸಭಾಗೃಹಕ್ಕೆ ಹೋದಾಗ ಸಿಂಪಲ್ಲಾಗಿರೋ ಬಟ್ಟೆ ಮತ್ತು ಟೋಪಿ ಹಾಕಿಕೊಂಡಿದ್ದೆ. ನಮ್ಮ ಕೆಲವು ಮಕ್ಕಳು ಬರಿಗಾಲಲ್ಲಿ ಇದ್ದರು. ಅವರ ಬಟ್ಟೆನೂ ತುಂಬ ಸರಳವಾಗಿತ್ತು. ಆದರೂ ಯೆಹೋವನ ಸಾಕ್ಷಿಗಳು ನಮ್ಮನ್ನ ಪ್ರೀತಿಯಿಂದ ಸ್ವಾಗತಿಸಿದರು. ‘ನಾವು ಅವರ ತರ ಬಟ್ಟೆ ಹಾಕಿಕೊಂಡಿಲ್ಲ ಅಂದರೂ ನಮ್ಮ ಹತ್ತಿರ ಚೆನ್ನಾಗಿ ಮಾತಾಡುತ್ತಾರಲ್ಲಾ’ ಅಂತ ನನಗೆ ಆಶ್ಚರ್ಯ ಆಯಿತು.
ಅವರು ನನ್ನ ಜೊತೆ ಪ್ರೀತಿಯಿಂದ ನಡೆದುಕೊಂಡಿದ್ದು ನನಗೆ ತುಂಬ ಇಷ್ಟ ಆಯ್ತು. ಆದರೆ ನಾನು ಮಾತ್ರ ಅಷ್ಟು ಬೇಗ ಬಿಟ್ಟು ಕೊಡೋಕೆ ರೆಡಿ ಇರಲಿಲ್ಲ. ಅವರು ರಾಜ್ಯ ಗೀತೆಗಳನ್ನು ಹಾಡುವಾಗ ನಾನು ಎದ್ದು ನಿಂತುಕೊಳ್ಳುತ್ತಾನೂ ಇರಲಿಲ್ಲ, ಹಾಡುತ್ತಾನೂ ಇರಲಿಲ್ಲ. ಮೀಟಿಂಗ್ ಮುಗಿದ ಮೇಲಂತೂ ನನಗೆ ಸರಿ ಅನಿಸದಿರುವ ವಿಷಯಗಳ ಬಗ್ಗೆ, ಬೈಬಲ್ ವಚನಗಳ ಬಗ್ಗೆ ಅವರ ಹತ್ತಿರ ಕೇಳ್ತಾ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದೆ. ಅವರು ತಾಳ್ಮೆ ಕಳೆದುಕೊಳ್ಳದೆ ನಾನು ಕೇಳುವ ಪ್ರತಿಯೊಂದು ಪ್ರಶ್ನೆಗೂ ಉತ್ತರ ಕೊಡುತ್ತಿದ್ದರು. ಒಂದೇ ಪ್ರಶ್ನೆಯನ್ನು ಸುಮಾರು ಜನರ ಹತ್ರ ಕೇಳಿದರೂ ಎಲ್ಲರೂ ಒಂದೇ ಉತ್ತರ ಕೊಡುವುದನ್ನು ನೋಡಿ ನನಗೆ ತುಂಬ ಆಶ್ಚರ್ಯ ಆಯ್ತು. ನನಗೆ ಸಹಾಯ ಆಗಲಿ ಅಂತ ಕೆಲವೊಮ್ಮೆ ಉತ್ತರಗಳನ್ನು ಬರೆದು ಕೊಡುತ್ತಿದ್ದರು.
1985ರಲ್ಲಿ ಟೆನ್ನೆಸ್ಸಿನಲ್ಲಿರೋ ಮೆಂಫಿಸ್‌ನಲ್ಲಿ ನಡೆದ ಅಧಿವೇಶನಕ್ಕೆ ನಾವೆಲ್ಲ ಹೋದ್ವಿ. ಅಲ್ಲಿ ಏನು ನಡೆಯುತ್ತೆ ಅನ್ನೋ ಕುತೂಹಲ ಇತ್ತು. ಜೇಮ್ಸ್ ಇನ್ನೂ ಗಡ್ಡ ತೆಗೆದಿರಲಿಲ್ಲ. ನಾವೆಲ್ಲ ಸರಳವಾಗಿರುವ ಬಟ್ಟೆ ಹಾಕಿಕೊಂಡಿದ್ವಿ. ಒಬ್ಬರಾದ ಮೇಲೆ ಒಬ್ಬರು ನಮ್ಮನ್ನು ಮಾತಾಡಿಸೋಕೆ ಬರ್ತಾನೆ ಇದ್ದರು. ಅವರು ನಮಗೆ ಪ್ರೀತಿ, ಕಾಳಜಿ ತೋರಿಸಿದರು. ನಮ್ಮನ್ನೂ ಅವರಲ್ಲೊಬ್ಬರು ಅಂತ ನೋಡುತ್ತಿದ್ದರು. ಅವರ ಮಧ್ಯೆ ಇದ್ದಂಥ ಒಗ್ಗಟ್ಟನ್ನು ನೋಡಿದಾಗ ಅದರಲ್ಲೂ ನಾವು ಯಾವುದೇ ಮೀಟಿಂಗ್ ಹೋದರೂ ಅವರು ಒಂದೇ ವಿಷಯವನ್ನು ಕಲಿಸುವುದನ್ನು ನೋಡಿದಾಗ ತುಂಬ ಇಷ್ಟ ಆಯ್ತು.
ಸಾಕ್ಷಿಗಳು ತೋರಿಸಿದಂಥ ಪ್ರೀತಿ, ಕಾಳಜಿ ನೋಡಿ ನನ್ನ ಯಜಮಾನರ ಮನಸ್ಸು ಕರಗಿಬಿಡ್ತು. ಅದಕ್ಕೆ ಅವರು ಬೈಬಲ್ ಸ್ಟಡಿಗೆ ಒಪ್ಪಿಕೊಂಡರು. ಅವರು ಕಲಿಯುತ್ತಿರೋ ವಿಷಯ ಸರಿಯಾಗಿದೆಯಾ ಅಂತ ಪರೀಕ್ಷಿಸುತ್ತಿದ್ದರು. (ಅಪೊಸ್ತಲರ ಕಾರ್ಯ 17:11; 1 ಥೆಸಲೊನೀಕ 5:21) ಹೀಗೆ ಮಾಡಿದ್ರಿಂದ ಸ್ವಲ್ಪದರಲ್ಲೇ ಇದೇ ಸತ್ಯ ಅಂತ ಅವರಿಗೆ ಗೊತ್ತಾಯ್ತು. ನನಗಾಗ ಸಿಕ್ಕಾಪಟ್ಟೆ ಬೇಜಾರ್ ಆಯ್ತು. ನನಗೂ ಸರಿಯಾಗಿರುವುದನ್ನು ಮಾಡಬೇಕು ಅಂತ ಆಸೆ ಇತ್ತು. ಆದರೆ ಹೊಸ ಫ್ಯಾಶನ್ ಬಟ್ಟೆಗಳನ್ನು ಹಾಕೋದು ನಂಗೆ ಇಷ್ಟ ಇರಲಿಲ್ಲ. ಕೊನೆಗೂ ಬೈಬಲ್ ಸ್ಟಡಿಗೆ ಒಪ್ಪಿಕೊಂಡೆ. ನಾನು ನೂತನ ಲೋಕ ಭಾಷಾಂತರ ಬೈಬಲಿನ ಜೊತೆ ಕಿಂಗ್ ಜೇಮ್ಸ್ ವರ್ಷನ್ ಬೈಬಲನ್ನೂ ಇಟ್ಟುಕೊಳ್ಳುತ್ತಿದ್ದೆ. ಸಾಕ್ಷಿಗಳು ಕಲಿಸುತ್ತಿರೋದು ಸರಿಯಾಗಿದೆಯಾ ಇಲ್ವಾ ಅಂತ ತಿಳಿದುಕೊಳ್ಳೋಕೆ ಮತ್ತು ಮೋಸ ಹೋಗದಿರೋಕೆ ಹೀಗೆ ಮಾಡುತ್ತಿದ್ದೆ.
ಸತ್ಯವನ್ನು ಒಪ್ಪಿಕೊಂಡೆ
ಯೆಹೋವನ ಸಾಕ್ಷಿಗಳ ಜೊತೆ ಬೈಬಲ್ ಸ್ಟಡಿ ಮಾಡುವಾಗ ತ್ರೈಯೇಕ ಬೋಧನೆ ಸುಳ್ಳು ಮತ್ತು ಒಬ್ಬನೇ ಸತ್ಯ ದೇವರು ಇರೋದು ಅಂತ ಕಲಿತುಕೊಂಡೆ. ಸತ್ತ ಮೇಲೆ ನಾವು ಆತ್ಮಗಳಾಗಿ ತಿರುಗಾಡಲ್ಲ. ಅದೆಲ್ಲ ಸುಳ್ಳು ಅಂತ ಅರ್ಥಮಾಡಿಕೊಂಡೆ. (ಆದಿಕಾಂಡ 2:7; ಧರ್ಮೋಪದೇಶಕಾಂಡ 6:4; ಯೆಹೆಜ್ಕೇಲ 18:4; 1 ಕೊರಿಂಥ 8:5, 6) ಸತ್ತ ಮೇಲೆ ನಮ್ಮನ್ನ ಬೆಂಕಿಯಲ್ಲಿ ಹಾಕಿ ಸುಡಲ್ಲ ಬದಲಿಗೆ ನಾವು ಮಣ್ಣಾಗಿ ಹೋಗ್ತೀವಿ ಅಂತ ಕಲಿತುಕೊಂಡೆ. (ಯೋಬ 14:13; ಕೀರ್ತನೆ 16:10; ಪ್ರಸಂಗಿ 9:5, 10; ಅಪೊಸ್ತಲರ ಕಾರ್ಯ 2:31) ಓಲ್ಡ್ ಬ್ರೆದ್ರೆನ್ ಚರ್ಚಿನವರು ನರಕ ಇದೆ ಅಂತ ಕಲಿಸುತ್ತಿದ್ದರು. ಆದರೆ ಈ ಬೋಧನೆ ಸುಳ್ಳು ಅಂತ ಬೈಬಲ್ ಹೇಳುತ್ತೆ. ಆಗ ಸಾಕ್ಷಿಗಳು ಕಲಿಸೋದೇ ಸತ್ಯ ಅಂತ ನಮಗೆ ಮನವರಿಕೆ ಆಯಿತು.
ಆದರೆ ಇವರು ‘ಸರಳವಾದ ಬಟ್ಟೆ ಹಾಕಿಕೊಳ್ಳುತ್ತಿಲ್ಲ, ಲೋಕದವರ ತರಾನೇ ಬಟ್ಟೆ ಹಾಕಿಕೊಳ್ಳುತ್ತಿದ್ದಾರಲ್ಲ’ ಅನ್ನೋ ಯೋಚನೆ ನನಗಿನ್ನೂ ಕಾಡುತಿತ್ತು. ಇಷ್ಟೆಲ್ಲ ಕಲಿತರೂ ‘ನಿಜವಾಗಲೂ ಇದೇನಾ ಸತ್ಯಧರ್ಮ’ ಅನ್ನೋ ಯೋಚನೆ ಬರುತ್ತಿತ್ತು. ಸಿಹಿಸುದ್ದಿಯನ್ನ ಎಲ್ಲ ಜನರಿಗೂ ಸಾರಬೇಕು ಅಂತ ಯೇಸು ಹೇಳಿದ್ದನ್ನ ಇವರು ಪಾಲಿಸುತ್ತಿದ್ದರು. ಹಾಗಾಗಿ ನಂಗೆ ಏನು ಮಾಡಬೇಕು ಅಂತಾನೇ ಗೊತ್ತಾಗಲಿಲ್ಲ.—ಮತ್ತಾಯ 24:14; 28:19, 20.
ಆಗಲೂ ಸಾಕ್ಷಿಗಳು ನನ್ನನ್ನ ಅರ್ಥ ಮಾಡಿಕೊಂಡು ನನ್ನ ಜೊತೆ ಪ್ರೀತಿಯಿಂದ ನಡೆದುಕೊಂಡರು. ಅವರು ಹಾಲು, ಮೊಟ್ಟೆ ತೆಗೆದುಕೊಳ್ಳೋಕೆ ಮನೆಗೆ ಬರುತ್ತಿದ್ದರು. ಹೋಗುತ್ತಾ ಹೋಗುತ್ತಾ ಅವರು ಒಳ್ಳೇ ಜನ ಅಂತ ಗೊತ್ತಾಯಿತು. ಸ್ಟಡಿ ಮಾಡುವವರಷ್ಟೇ ಅಲ್ಲ ಬೇರೆ ಸಹೋದರರು ಆಗಾಗ ಮನೆಗೆ ಬರುತ್ತಿದ್ದರು. ಅವರು ನಮ್ಮ ಮನೆ ಹತ್ತಿರ ಎಲ್ಲಾದರೂ ಬಂದರೆ ನಮ್ಮ ಮನೆಗೆ ಬರದೆ ಹೋಗುತ್ತಿರಲಿಲ್ಲ. ಆಗ ಅವರು ಎಂಥವರು, ಎಷ್ಟು ಪ್ರೀತಿ-ಕಾಳಜಿ ತೋರಿಸುತ್ತಾರೆ ಅಂತ ಅರ್ಥ ಮಾಡಿಕೊಳ್ಳೋಕೆ ಆಯ್ತು.
ನಮ್ಮ ಸಭೆಯಲ್ಲಿ ಇರುವವರಷ್ಟೇ ಅಲ್ಲ ಬೇರೆ ಸಭೆಯಲ್ಲಿ ಇರುವವರು ಕೂಡ ನಮ್ಮನ್ನ ತುಂಬ ಪ್ರೀತಿಸುತ್ತಿದ್ದರು. ಅವರಲ್ಲಿ ಒಬ್ಬರು ಕೇ ಬ್ರಿಗ್ಸ್. ಈ ಸಹೋದರಿನೂ ನನ್ನ ತರ ಸರಳವಾದ ಬಟ್ಟೆ ಹಾಕುತ್ತಿದ್ದರು, ಮೇಕಪ್ ಮಾಡಿಕೊಳ್ಳುತ್ತಿರಲಿಲ್ಲ. ಅವರ ಜೊತೆ ಮನಸ್ಸು ಬಿಚ್ಚಿ ಮಾತಾಡಿದಾಗ ನನಗೆ ತುಂಬ ಸಮಾಧಾನ ಆಯ್ತು. ಒಂದಿನ ಸಹೋದರ ಲೂಯಿಸ್ ಫ್ಲೋರಾ ನನ್ನನ್ನ ಮಾತಾಡಿಸೋಕೆ ಬಂದರು. ಅವರು ಮುಂಚೆ, ಸಿಂಪಲ್ ಬಟ್ಟೆ ಹಾಕಿಕೊಳ್ಳಬೇಕು ಅಂತ ಹೇಳ್ತಿದ್ದ ಧರ್ಮದಲ್ಲಿ ಇದ್ದರು. ನನ್ನ ಕಸಿವಿಸಿಯನ್ನು ಅವರು ಅರ್ಥ ಮಾಡಿಕೊಂಡು ನನಗೆ ಸಮಾಧಾನ ಮಾಡೋಕೆ ಒಂದು ಪತ್ರ ಬರೆದರು. ಅವರ ಪ್ರೀತಿ ನೋಡಿ ನನ್ನ ಕಣ್ಣಲ್ಲಿ ನೀರು ಬಂತು. ಆ ಪತ್ರ ಸುಮಾರು ಹತ್ತು ಪೇಜ್ ಇತ್ತು. ಪದೇಪದೇ ಅದನ್ನ ಓದುತ್ತಿದ್ದೆ.
ಒಂದು ಸಲ ಸಂಚರಣ ಮೇಲ್ವಿಚಾರಕನಾದ ಸಹೋದರ ಓಡೆಲ್ ಹತ್ತಿರ ನಾನು ಯೆಶಾಯ 3:18-23 ಮತ್ತು 1 ಪೇತ್ರ 3:3, 4 ವಚನವನ್ನು ವಿವರಿಸೋಕೆ ಹೇಳಿದೆ. ಈ ವಚನ ಹೇಳುವ ಪ್ರಕಾರ ‘ದೇವರನ್ನು ಮೆಚ್ಚಿಸಬೇಕು ಅಂದರೆ ನಾವು ಸರಳವಾಗಿರೋ ಬಟ್ಟೆಯನ್ನು ಹಾಕಿಕೊಳ್ಳಬೇಕು ಅಲ್ವಾ?’ ಅಂತ ಸಹೋದರನಿಗೆ ಕೇಳಿದೆ. ಅದಕ್ಕೆ ಅವರು ‘ಟೋಪಿ ಹಾಕೋದು ತಪ್ಪಾ? ಜಡೆ ಹಾಕೋದು ತಪ್ಪಾ?’ ಅಂತ ಕೇಳಿದರು. ಆಗ ನನಗೆ ಓಲ್ಡ್ ಬ್ರೆದ್ರೆನ್ ಚರ್ಚಿನಲ್ಲಿ ಕಲಿಸಿದ ವಿಷಯಗಳು ನೆನಪಾಯ್ತು. ಅಲ್ಲಿದ್ದಾಗ ನಾವು ಚಿಕ್ಕ ಮಕ್ಕಳಿಗೆ ಜಡೆ ಹಾಕುತ್ತಿದ್ವಿ, ದೊಡ್ಡವರೆಲ್ಲ ತಲೆಗೆ ಟೋಪಿ ಹಾಕುತ್ತಿದ್ದರು. ಆಗ ಸಾಕ್ಷಿಗಳಿಗೂ ಬ್ರೆದ್ರೆನ್ ಚರ್ಚಿನವರಿಗೂ ಇರೋ ವ್ಯತ್ಯಾಸ ನನಗೆ ಗೊತ್ತಾಯಿತು. ಆ ಸಹೋದರ ಕೇಳಿದ ಪ್ರಶ್ನೆ, ಸರಿಯಾಗಿ ಯೋಚನೆ ಮಾಡೋಕೆ ನನಗೆ ಸಹಾಯ ಮಾಡ್ತು. ಅವರು ಮಾತಾಡಿದ ರೀತಿ, ತೋರಿಸಿದ ತಾಳ್ಮೆ ನನ್ನ ಮನಮುಟ್ಟಿತು.
ಹೋಗ್ತಾ ಹೋಗ್ತಾ ಇದೇ ಸತ್ಯ ಅಂತ ನನಗೆ ಅರ್ಥ ಆಯಿತು. ಆದರೆ ಹೆಂಗಸರು ಕೂದಲನ್ನು ಕತ್ತರಿಸೋ ವಿಷಯ ಮಾತ್ರ ನಂಗೆ ಒಪ್ಪಿಕೊಳ್ಳೋಕೆ ಆಗುತ್ತಿರಲಿಲ್ಲ. ನಮ್ಮ ಸಭೆಯ ಹಿರಿಯರು, ‘ಕೆಲವರಿಗೆ ಉದ್ದ ಕೂದಲು ಇರುತ್ತೆ ಇನ್ನು ಕೆಲವರಿಗೆ ಗಿಡ್ಡ ಕೂದಲಿರುತ್ತೆ. ಹಾಗಂತ ಜಾಸ್ತಿ ಕೂದಲಿರುವವರು ಕಮ್ಮಿ ಕೂದಲು ಇರುವವರಿಗಿಂತ ಶ್ರೇಷ್ಠ ಅಂತ ಹೇಳಕ್ಕಾಗುತ್ತಾ?’ ಅಂತ ಕೇಳಿದರು. ಅಷ್ಟೇ ಅಲ್ಲ ಯಾವ ರೀತಿಯ ಬಟ್ಟೆ ಹಾಕಿಕೊಳ್ಳಬೇಕು ಮತ್ತು ಹೇರ್‌ಸ್ಟೈಲ್ ಮಾಡಿಕೊಳ್ಳಬೇಕು ಅನ್ನೋದು ಅವರವರ ಮನಸ್ಸಾಕ್ಷಿಗೆ ಬಿಟ್ಟ ವಿಷಯ ಅಂತ ಅರ್ಥ ಮಾಡಿಸಿದರು. ಅದಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಯನ್ನು ನನಗೆ ಓದೋಕೆ ಕೊಟ್ಟರು.
ಕೊನೆಗೂ ಮನವರಿಕೆ ಆಯಿತು
ಅಂತೂ ನಮ್ಮೆಲ್ಲ ಪ್ರಶ್ನೆಗೆ ಉತ್ತರ ಸಿಕ್ಕಿತು. ಯೇಸು ಹೀಗೆ ಹೇಳಿದ: “ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ.” (ಯೋಹಾನ 13:35) ಯೆಹೋವನ ಸಾಕ್ಷಿಗಳು ನಿಜ ಪ್ರೀತಿ ತೋರಿಸುವ ಜನ ಅಂತ ನಮಗೆ ಮನವರಿಕೆ ಆಯಿತು. ಆದರೆ ಈಗ ನಮ್ಮ ಇಬ್ಬರು ಮಕ್ಕಳಾದ ರೆಬೆಕ್ಕ ಮತ್ತು ನೇತನ್‌ಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಯಾಕಂದ್ರೆ ಅವರು ಓಲ್ಡ್ ಬ್ರೆದ್ರೆನ್ ಚರ್ಚ್ ಕಲಿಸುತ್ತಿದ್ದ ವಿಷಯಗಳನ್ನ ಇಷ್ಟಪಡುತ್ತಿದ್ದರು ಮತ್ತು ಅವರಿಗೆ ಅಲ್ಲೇ ದೀಕ್ಷಾಸ್ನಾನ ಕೂಡ ಆಗಿತ್ತು. ಆದರೆ ಆಮೇಲೆ ಅವರು ಬೈಬಲ್ ಸತ್ಯಗಳನ್ನು ಅರ್ಥ ಮಾಡಿಕೊಂಡರು. ಯೆಹೋವನ ಜನರು ತೋರಿಸುತ್ತಿದ್ದ ಪ್ರೀತಿ ಅವರೂ ಸಾಕ್ಷಿಗಳಾಗೋಕೆ ಸಹಾಯಮಾಡಿತು.
ರೆಬೆಕ್ಕಾಗೆ ದೇವರ ಬಗ್ಗೆ ಕಲಿಯೋಕೆ ತುಂಬ ಆಸೆ ಇತ್ತು. ನಮ್ಮ ಭವಿಷ್ಯದ ಬಗ್ಗೆ ದೇವರು ಮೊದಲೇ ತೀರ್ಮಾನ ಮಾಡಲ್ಲ ಅನ್ನೋ ವಿಷ್ಯ ಗೊತ್ತಾದಾಗ ಪ್ರಾರ್ಥಿಸೋಕೆ ಅವಳಿಗೆ ಸುಲಭವಾಯಿತು. ದೇವರು ತ್ರೈಯೇಕದ ಭಾಗವಲ್ಲ, ಆತನು ನಿಜವಾದ ವ್ಯಕ್ತಿ ಮತ್ತು ಆತನನ್ನು ಅನುಕರಿಸೋಕೆ ಆಗುತ್ತೆ ಅಂತ ಗೊತ್ತಾದಾಗ ಅವಳಿಗೆ ದೇವರ ಮೇಲಿದ್ದ ಪ್ರೀತಿ ಜಾಸ್ತಿ ಆಯಿತು. (ಎಫೆಸ 5:1) ಅಷ್ಟೇ ಅಲ್ಲ ಕಿಂಗ್ ಜೇಮ್ಸ್ ವರ್ಷನ್‌ನಲ್ಲಿ ಅರ್ಥ ಆಗದ ಹಳೇ ಪದಗಳಿದ್ದವು. ಅದೇ ಪದಗಳನ್ನ ಉಪಯೋಗಿಸಿ ಪ್ರಾರ್ಥನೆ ಮಾಡಬೇಕಾಗಿಲ್ಲ, ಬದಲಿಗೆ ಮನಬಿಚ್ಚಿ ದೇವರ ಹತ್ತಿರ ಮಾತಾಡಬಹುದು ಅಂತ ಅವಳಿಗೆ ಗೊತ್ತಾದಾಗ ಖುಷಿ ಆಯಿತು. ದೇವರು ಶಾಶ್ವತ ಜೀವನ ಕೊಡುತ್ತಾನೆ ಅಂತ ತಿಳ್ಕೊಂಡಾಗ ಆತನ ಜೊತೆ ಆಪ್ತ ಸಂಬಂಧ ಬೆಳೆಸಿಕೊಳ್ಳೋಕೆ ಅವಳಿಗೆ ಸಹಾಯ ಆಯಿತು.—ಕೀರ್ತನೆ 37:29; ಪ್ರಕಟನೆ 21:3, 4.
ನಾವೀಗ ಯೆಹೋವನ ಆರಾಧಕರು
1987ರಲ್ಲಿ ನಾನು, ನನ್ನ ಗಂಡ ಮತ್ತು ನಮ್ಮ ಐದು ಮಕ್ಕಳು ಅಂದರೆ ನೇತನ್, ರೆಬೆಕ್ಕ, ಜಾರ್ಜ್, ಡ್ಯಾನಿಯಲ್ ಮತ್ತು ಜಾನ್ ದೀಕ್ಷಾಸ್ನಾನ ತೆಗೆದುಕೊಂಡ್ವಿ. ಹಾರ್ಲಿ 1989ರಲ್ಲಿ ಮತ್ತು ಸೈಮನ್ 1994ರಲ್ಲಿ ದೀಕ್ಷಾಸ್ನಾನ ತೆಗೆದುಕೊಂಡರು. ಸಿಹಿಸುದ್ದಿ ಸಾರಬೇಕು ಅಂತ ಯೇಸು ಕೊಟ್ಟ ಆಜ್ಞೆಯನ್ನ ನಾವು ಪಾಲಿಸುತ್ತಿದ್ದೀವಿ.
ನೇತನ್, ಜಾರ್ಜ್, ಡ್ಯಾನಿಯಲ್, ಜಾನ್, ಹಾರ್ಲಿ ಮತ್ತು ರೆಬೆಕ್ಕ ಅಮೆರಿಕದ ಬೆತೆಲಿನಲ್ಲಿ ಸೇವೆ ಮಾಡುತ್ತಿದ್ದಾರೆ. ಜಾರ್ಜ್ 14 ವರ್ಷದಿಂದ ಸೇವೆ ಮಾಡುತ್ತಿದ್ದಾನೆ. 2001ರಲ್ಲಿ ವಿದ್ಯಾಭ್ಯಾಸ ಮುಗಿಸಿ ಸೈಮನ್ ಬೆತೆಲ್ ಸೇವೆ ಶುರು ಮಾಡಿದ. ನಮ್ಮ ಮಕ್ಕಳಲ್ಲಿ ಕೆಲವರು ಹಿರಿಯರು, ಇನ್ನು ಕೆಲವರು ಸಹಾಯಕ ಸೇವಕರಾಗಿದ್ದಾರೆ. ಮಿಸ್ಸೌರಿಯಾದ ಥೇಯರ್ ಸಭೆಯಲ್ಲಿ ನನ್ನ ಗಂಡ ಹಿರಿಯರಾಗಿದ್ದಾರೆ. ನನಗೀಗ ಜಾಸ್ತಿ ಸೇವೆ ಮಾಡೋಕೆ ಆಗುತ್ತಿದೆ.
ನಮಗೆ ಮೂರು ಮೊಮ್ಮಕ್ಕಳು. ಜೆಸ್ಸಿಕ, ಲತೀಶಾ ಮತ್ತು ಕೇಲಬ್. ನನ್ನ ಮಕ್ಕಳು ಯೆಹೋವನ ಬಗ್ಗೆ ಅವರ ಮಕ್ಕಳಿಗೆ ಕಲಿಸೋದನ್ನ ನೋಡುವಾಗ ನನಗೆ ತುಂಬ ಖುಷಿಯಾಗುತ್ತೆ. ಯೆಹೋವ ನಮ್ಮನ್ನು ಆರಿಸಿಕೊಂಡಿರುವುದಕ್ಕೆ ಮತ್ತು ಜನ ನಮ್ಮನ್ನ ಯೆಹೋವನ ಸಾಕ್ಷಿಗಳು ಅಂತ ಗುರುತಿಸುವ ಅವಕಾಶ ಕೊಟ್ಟಿದ್ದಕ್ಕೆ ಆತನಿಗೆ ಋಣಿಗಳಾಗಿದ್ದೀವಿ.
ಇವತ್ತು ದೇವರು ಹೇಳೋ ತರ ನಡೆದುಕೊಳ್ಳೋಕೆ ತುಂಬ ಜನ ಬಯಸುತ್ತಿದ್ದಾರೆ. ಆದರೆ ಅವರು ಧರ್ಮಗಳು ಕಲಿಸೋ ಸುಳ್ಳು ಬೋಧನೆಗಳಿಂದ ದಾರಿ ತಪ್ಪಿಹೋಗಿದ್ದಾರೆ. ಇಂಥವರಿಗೆ ಸಾರೋಕೆ ನನಗೆ ತುಂಬ ಇಷ್ಟ. ಈಗ ನಮಗಿರೋ ಖುಷಿ ಬೇರೆಯವರಿಗೂ ಸಿಗಬೇಕು ಅನ್ನೋದೇ ನಮ್ಮಾಸೆ. ಮುಂಚೆ ನಾವು ತರಕಾರಿ ಮಾರೋಕೆ ಮನೆ ಮನೆಗೆ ಹೋಗುತ್ತಿದ್ವಿ. ಆದರೆ ಈಗ ಸಿಹಿಸುದ್ದಿ ಸಾರೋಕೆ ಹೋಗುತ್ತಿದ್ದೀವಿ. ಯೆಹೋವನ ಜನರು ತೋರಿಸಿದ ಪ್ರೀತಿ, ತಾಳ್ಮೆ, ಕರುಣೆ ಬಗ್ಗೆ ನೆನಸಿಕೊಂಡಾಗೆಲ್ಲ ನನ್ನ ಕಣ್ಣಲ್ಲಿ ನೀರು ಉಕ್ಕಿ ಬರುತ್ತೆ!
[ಚಿತ್ರ]
ನಂಗೆ ಏಳು ವರ್ಷ ಇದ್ದಾಗ, ದೊಡ್ಡವಳಾದಾಗ
[ಚಿತ್ರ]
ಸಿಂಪಲ್ ಬಟ್ಟೆ ಹಾಕಿಕೊಂಡಿರೋ ಜೇಮ್ಸ್, ಜಾರ್ಜ್, ಹಾರ್ಲಿ ಮತ್ತು ಸೈಮನ್
[ಚಿತ್ರ]
ಮಾರ್ಕೆಟಿನಲ್ಲಿ ತರಕಾರಿ ಮಾರುತ್ತಿರುವ ಚಿತ್ರ ನ್ಯೂಸ್ ಪೇಪರಿನಲ್ಲಿ ಬಂದಿದ್ದು
[ಕೃಪೆ]
ಜರ್ನಲ್ ಆ್ಯಂಡ್ ಕೊರಿಯರ್, ಲಾಫಾಯೆಟ್, ಇಂಡಿಯಾನಾ
[ಚಿತ್ರ]
ನಮ್ಮ ಕುಟುಂಬದ ಜೊತೆ