ಮಾಹಿತಿ ಇರುವಲ್ಲಿ ಹೋಗಲು

ಎಲ್ಲ ಕಷ್ಟಸಂಕಟಗಳು ಬೇಗನೆ ಕೊನೆಗೊಳ್ಳಲಿವೆ!

ಎಲ್ಲ ಕಷ್ಟಸಂಕಟಗಳು ಬೇಗನೆ ಕೊನೆಗೊಳ್ಳಲಿವೆ!

ಎಲ್ಲ ಕಷ್ಟಸಂಕಟಗಳು ಬೇಗನೆ ಕೊನೆಗೊಳ್ಳಲಿವೆ!

‘ಇಷ್ಟೊಂದು ಕಷ್ಟಸಂಕಟಗಳು ಏಕಿವೆ?’ ಎಂದು ನಿಮ್ಮ ಜೀವನದಲ್ಲಿ ಒಂದಲ್ಲ ಒಂದು ಬಾರಿ ನೀವು ಯೋಚಿಸಿದ್ದಿರಬಹುದು. ಸಾವಿರಾರು ವರುಷಗಳಿಂದ ಮಾನವ ಕುಟುಂಬಗಳು ಯುದ್ಧ, ಬಡತನ, ವಿಪತ್ತು, ಅನ್ಯಾಯ, ಅನಾರೋಗ್ಯ ಮತ್ತು ಮರಣದಿಂದ ಬಹಳಷ್ಟು ಕಷ್ಟವನ್ನು ಅನುಭವಿಸಿವೆ. ಕಳೆದ ನೂರು ವರುಷಗಳಲ್ಲಿಯಾದರೋ ಮಾನವಕುಲವು ಹಿಂದೆಂದಿಗಿಂತಲೂ ಹೆಚ್ಚಾಗಿ ಕಷ್ಟಸಂಕಟಗಳನ್ನು ಅನುಭವಿಸಿದೆ. ಈ ಎಲ್ಲ ಕಷ್ಟಸಂಕಟಗಳು ಎಂದಾದರೂ ಕೊನೆಗೊಳ್ಳುವವೊ?

ಹೌದು, ಕೊನೆಗೊಳ್ಳಲಿವೆ ಮತ್ತು ಅತಿ ಬೇಗನೆ ಕೊನೆಗೊಳ್ಳಲಿವೆ! ಈ ಉತ್ತರವು ನಮಗೆ ನಿಜಕ್ಕೂ ಸಾಂತ್ವನವನ್ನು ನೀಡುತ್ತದೆ. ದೇವರ ವಾಕ್ಯವಾಗಿರುವ ಬೈಬಲ್‌ ಹೇಳುವುದು: “ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” ಎಷ್ಟು ಸಮಯದ ವರೆಗೆ? “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”​—⁠ಕೀರ್ತನೆ 37:​10, 11, 29.

ದೇವರು ದುಷ್ಟತನ ಮತ್ತು ಕಷ್ಟಸಂಕಟಗಳನ್ನು ತೆಗೆದುಬಿಟ್ಟ ಬಳಿಕ ಭೂಮಿಯು ಪರದೈಸಾಗಿ ಮಾರ್ಪಡುವುದು. ಅನಂತರ ಜನರು ಪರಿಪೂರ್ಣ ಆರೋಗ್ಯದಿಂದಲೂ ಆನಂದದಿಂದಲೂ ಸದಾಕಾಲ ಜೀವಿಸಬಲ್ಲರು. ದೇವರ ವಾಕ್ಯವು ಮುಂತಿಳಿಸುವುದು: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವುದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.”​—⁠ಪ್ರಕಟನೆ 21:⁠4.

ಆ ನೂತನ ಲೋಕದಲ್ಲಿ, ಮೃತರು ಸಹ ಪುನಃ ಜೀವಿತರಾಗಿ ಎಬ್ಬಿಸಲ್ಪಡುವರು ಮತ್ತು ಅವರೂ ಆ ಸಂತೋಷಕರ ಪರಿಸ್ಥಿತಿಯಲ್ಲಿ ಆನಂದಿಸುವರು: ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು.’ (ಅ. ಕೃತ್ಯಗಳು 24:15) ಆದುದರಿಂದಲೇ ತನ್ನ ಮೇಲೆ ನಂಬಿಕೆಯಿಟ್ಟ ಪಶ್ಚಾತ್ತಾಪಿ ದುಷ್ಕರ್ಮಿಗೆ ಯೇಸು ಹೀಗೆ ಹೇಳಶಕ್ತನಾದನು: “[ನೀನು] ನನ್ನ ಸಂಗಡ ಪರದೈಸಿನಲ್ಲಿರುವಿ.”​—⁠ಲೂಕ 23:43.

ಕಷ್ಟಸಂಕಟಗಳು ಆರಂಭಗೊಂಡದ್ದು ಹೇಗೆ?

ಮಾನವರಿಗೆ ಇಂಥ ಒಂದು ಅದ್ಭುತಕರ ಭವಿಷ್ಯತ್ತನ್ನು ಉದ್ದೇಶಿಸಿರುವ ದೇವರು, ಕಷ್ಟಸಂಕಟಗಳು ಆರಂಭಗೊಳ್ಳುವಂತೆ ಏಕೆ ಅನುಮತಿಸಿದನು? ಅವು ಇಷ್ಟು ದೀರ್ಘಕಾಲದ ವರೆಗೆ ಇರುವಂತೆ ಏಕೆ ಬಿಟ್ಟಿದ್ದಾನೆ?

ದೇವರು ಆದಾಮಹವ್ವರನ್ನು ಸೃಷ್ಟಿಸಿದಾಗ, ಪರಿಪೂರ್ಣ ಶರೀರ ಮತ್ತು ಮನಸ್ಸಿನೊಂದಿಗೆ ಅವರನ್ನು ಸೃಷ್ಟಿಸಿದನು. ಆತನು ಅವರನ್ನು ಒಂದು ಪರದೈಸವಾಗಿದ್ದ ತೋಟದಲ್ಲಿಟ್ಟನು ಮತ್ತು ಅವರಿಗೆ ಸಂತೃಪ್ತಿಕರವಾದ ಕೆಲಸವನ್ನು ನೀಡಿದನು. ಬೈಬಲ್‌ ಹೇಳುವುದು: “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.” (ಆದಿಕಾಂಡ 1:31) ಅವರು ಒಂದುವೇಳೆ ದೇವರಿಗೆ ವಿಧೇಯರಾಗಿ ಉಳಿಯುತ್ತಿದ್ದಲ್ಲಿ ಪರಿಪೂರ್ಣ ಮಕ್ಕಳನ್ನು ಪಡೆಯಲಿದ್ದರು ಮತ್ತು ಇಡೀ ಭೂಮಿಯು ಒಂದು ಪರದೈಸ್‌ ಆಗಲಿತ್ತು ಹಾಗೂ ಅಲ್ಲಿ ಜನರು ಶಾಂತಿ ಮತ್ತು ಸಂತೋಷದಿಂದ ಸದಾಕಾಲ ಜೀವಿಸಲಿದ್ದರು.

ದೇವರು ಆದಾಮಹವ್ವರಿಗೆ ಮೂಲಭೂತ ಮಾನವ ಗುಣಗಳಲ್ಲಿ ಒಂದಾಗಿರುವ ಇಚ್ಛಾ ಸ್ವಾತಂತ್ರ್ಯ ಎಂಬ ಅದ್ಭುತಕರ ಉಡುಗೊರೆಯನ್ನು ಕೊಟ್ಟನು. ಆದಾಮಹವ್ವರು ಬುದ್ಧಿಶಕ್ತಿಯಿಲ್ಲದ ಯಂತ್ರಮಾನವರಂತೆ ಸೃಷ್ಟಿಸಲ್ಪಡಲಿಲ್ಲ. ಹಾಗಿದ್ದರೂ, ದೇವರ ನಿಯಮಗಳಿಗೆ ವಿಧೇಯರಾಗಲು ತಮ್ಮ ಇಚ್ಛಾ ಸ್ವಾತಂತ್ರ್ಯವನ್ನು ಸರಿಯಾಗಿ ಉಪಯೋಗಿಸುವುದರ ಮೇಲೆ ಅವರ ನಿರಂತರ ಸಂತೋಷವು ಅವಲಂಬಿಸಿತ್ತು. ದೇವರು ಹೀಗೆ ಹೇಳುತ್ತಾನೆ: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.” (ಯೆಶಾಯ 48:17) ಇಚ್ಛಾ ಸ್ವಾತಂತ್ರ್ಯದ ದುರುಪಯೋಗವು ದುರಂತಮಯವಾಗಿರಲಿತ್ತು, ಏಕೆಂದರೆ ದೇವರಿಂದ ಸ್ವತಂತ್ರರಾಗಿದ್ದು ಯಶಸ್ಸನ್ನು ಪಡೆಯುವ ರೀತಿಯಲ್ಲಿ ಮನುಷ್ಯರು ಸೃಷ್ಟಿಸಲ್ಪಡಲಿಲ್ಲ. ಬೈಬಲ್‌ ತಿಳಿಸುವುದು: “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ . . . ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”​—⁠ಯೆರೆಮೀಯ 10:23.

ದುಃಖಕರವಾಗಿ, ದೇವರಿಂದ ಸ್ವತಂತ್ರವಾಗಿದ್ದು ಅದೇ ಸಮಯದಲ್ಲಿ ಯಶಸ್ಸನ್ನು ಸಹ ಪಡೆಯಬಲ್ಲೆವೆಂದು ನಮ್ಮ ಆದಿ ಹೆತ್ತವರು ಭಾವಿಸಿದರು. ಆದರೆ ಯಾವಾಗ ಅವರು ದೇವರ ಆಳ್ವಿಕೆಯಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡರೊ ಅಂದಿನಿಂದ ಆತನ ಬೆಂಬಲವನ್ನು ಮತ್ತು ತಮ್ಮ ಪರಿಪೂರ್ಣತೆಯನ್ನು ಕಳೆದುಕೊಂಡರು. ಹೀಗೆ ಅವರು ಕ್ಷೀಣಿಸುತ್ತಾ ಕೊನೆಗೆ ವೃದ್ಧರಾಗಿ ಸತ್ತರು. ಆನುವಂಶೀಯ ನಿಯಮಕ್ಕೆ ಅನುಗುಣವಾಗಿ, ನಾವೆಲ್ಲರೂ ಅಪರಿಪೂರ್ಣತೆ ಮತ್ತು ಮರಣವನ್ನು ಪಿತ್ರಾರ್ಜಿತವಾಗಿ ಹೊಂದಿದ್ದೇವೆ.​—⁠ರೋಮಾಪುರ 5:12.

ಪ್ರಾಮುಖ್ಯ ವಿವಾದಾಂಶ​—⁠ಪರಮಾಧಿಕಾರ

ದೇವರು ಆದಾಮಹವ್ವರನ್ನು ಆಗಲೇ ನಾಶಮಾಡಿ, ಇನ್ನೊಂದು ಮಾನವ ದಂಪತಿಯನ್ನು ಏಕೆ ಸೃಷ್ಟಿಸಲಿಲ್ಲ? ಏಕೆಂದರೆ ದೇವರ ವಿಶ್ವ ಪರಮಾಧಿಕಾರಕ್ಕೆ, ಅಂದರೆ ಆತನ ಆಳುವ ಹಕ್ಕಿಗೆ ಸವಾಲೊಡ್ಡಲ್ಪಟ್ಟಿತು. ಪ್ರಶ್ನೆಯೇನಂದರೆ, ಆಳುವ ಹಕ್ಕು ಯಾರಿಗಿದೆ ಮತ್ತು ಯಾರ ಆಳ್ವಿಕೆ ಸರಿಯಾಗಿದೆ? ವಿಸ್ತರಣಾರ್ಥದಲ್ಲಿ, ದೇವರಿಂದ ಸ್ವತಂತ್ರರಾಗಿ ಮಾನವರು ತಮ್ಮನ್ನು ತಾವೇ ಉತ್ತಮವಾಗಿ ಆಳಿಕೊಳ್ಳಬಲ್ಲರೊ? ಸಂಪೂರ್ಣ ಸ್ವಾತಂತ್ರ್ಯವನ್ನು ಪ್ರಯೋಗಿಸಿ ನೋಡುವಂತೆ ಮಾನವರಿಗೆ ಸಾಕಷ್ಟು ಸಮಯವನ್ನು ನೀಡುವ ಮೂಲಕ, ಮಾನವರು ದೇವರ ಆಳ್ವಿಕೆಯ ಕೆಳಗೆ ಯಶಸ್ಸನ್ನು ಪಡೆಯಬಲ್ಲರೊ ಅಥವಾ ತಮ್ಮ ಸ್ವಂತ ಆಳ್ವಿಕೆಯ ಕೆಳಗೆ ಯಶಸ್ಸನ್ನು ಪಡೆಯಬಲ್ಲರೊ ಎಂಬುದನ್ನು ದೇವರು ನಿತ್ಯನಿರಂತರಕ್ಕೆ ರುಜುಪಡಿಸಲಿದ್ದಾನೆ. ಮನುಷ್ಯರು ದೇವರ ಮಾರ್ಗದರ್ಶನವನ್ನು ಬಿಟ್ಟು ಬೇರೆ ಎಲ್ಲ ರೀತಿಯ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ಪ್ರಯೋಗಿಸಿ ನೋಡಶಕ್ತರಾಗುವಂತೆ ಸಾಕಷ್ಟು ಸಮಯವು ನೀಡಲ್ಪಡಬೇಕಿತ್ತು.

ಪರಿಣಾಮವು ಏನಾಗಿದೆ? ಕಷ್ಟಸಂಕಟಗಳೇ ಹೆಚ್ಚಾಗುತ್ತಿವೆ ಎಂಬುದನ್ನು ಸಾವಿರಾರು ವರುಷಗಳ ಮಾನವ ಇತಿಹಾಸವು ನಮಗೆ ತೋರಿಸಿಕೊಟ್ಟಿದೆ. ಕಳೆದ ಶತಮಾನದಲ್ಲಿ, ಮಾನವ ಕುಟುಂಬಗಳು ಹಿಂದೆಂದೂ ಕಂಡಿರದಂಥ ಭೀಕರ ಕಷ್ಟಸಂಕಟಗಳನ್ನು ಎದುರಿಸಿವೆ. ಎರಡನೇ ಲೋಕ ಯುದ್ಧದಲ್ಲಿ ಕೋಟ್ಯಂತರ ಜನರು ಹತಿಸಲ್ಪಟ್ಟರು. ಇತರ ಯುದ್ಧಗಳಲ್ಲಿ 10 ಕೋಟಿಗಿಂತಲೂ ಹೆಚ್ಚು ಜನರು ಕೊಲ್ಲಲ್ಪಟ್ಟರು. ಪಾತಕ ಮತ್ತು ಹಿಂಸಾಕೃತ್ಯಗಳು ಹೆಚ್ಚಾಗುತ್ತಿವೆ. ಅಮಲೌಷಧದ ದುರುಪಯೋಗವು ಲೋಕವ್ಯಾಪಕವಾಗಿ ಹಬ್ಬುತ್ತಿದೆ. ರತಿರವಾನಿತ ರೋಗಗಳು ಹೆಚ್ಚೆಚ್ಚು ಜನರನ್ನು ಬಾಧಿಸುತ್ತಿವೆ. ಆಹಾರದ ಕೊರತೆಯಿಂದ ಮತ್ತು ರೋಗಗಳಿಂದ ಕೋಟಿಗಟ್ಟಲೆ ಜನರು ಪ್ರತಿ ವರುಷ ಸಾಯುತ್ತಿದ್ದಾರೆ. ಎಲ್ಲೆಡೆಯೂ ಕುಟುಂಬ ಜೀವನ ಮತ್ತು ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಈ ಎಲ್ಲ ಸಮಸ್ಯೆಗಳಿಗೆ ಯಾವುದೇ ಮಾನವ ಸರಕಾರದಿಂದ ಪರಿಹಾರವಿಲ್ಲ. ಯಾವುದೇ ಸರಕಾರವು ವೃದ್ಧಾಪ್ಯ, ರೋಗ ಮತ್ತು ಮರಣವನ್ನು ತಡೆಯಶಕ್ತವಾಗಿಲ್ಲ.

ಇಂದು ಮಾನಕುಲದ ಪರಿಸ್ಥಿತಿಯು ಬೈಬಲ್‌ ನಮ್ಮ ದಿನಗಳ ಕುರಿತು ಏನನ್ನು ಮುಂತಿಳಿಸಿತ್ತೊ ಅದೇ ರೀತಿಯಲ್ಲಿ ಇದೆ. ದೇವರ ವಾಕ್ಯವು ನಮ್ಮ ಸಮಯವನ್ನು, ‘ಕಠಿನಕಾಲಗಳಿಂದ’ ತುಂಬಿರುವ ಈ ವಿಷಯಗಳ ವ್ಯವಸ್ಥೆಯ ‘ಕಡೇ ದಿವಸಗಳು’ ಎಂದು ಗುರುತಿಸುತ್ತದೆ. ಮತ್ತು ಬೈಬಲಿನಲ್ಲಿ ತಿಳಿಸಿರುವಂತೆ, ‘ದುಷ್ಟರೂ ವಂಚಕರೂ ಹೆಚ್ಚಾದ ಕೆಟ್ಟತನಕ್ಕೆ ಹೋಗಿದ್ದಾರೆ.’​—⁠2 ತಿಮೊಥೆಯ 3:1-5, 13.

ಕಷ್ಟಸಂಕಟಗಳ ಅಂತ್ಯವು ಸಮೀಪವಿದೆ

ದೇವರಿಂದ ಸ್ವತಂತ್ರವಾಗಿದ್ದು ಮನುಷ್ಯನು ಪ್ರಯತ್ನಿಸುವ ವಿವಿಧ ರೀತಿಯ ಆಳ್ವಿಕೆಯ ದುರಂತಮಯ ಪ್ರಯೋಗವು ಬೇಗನೆ ಕೊನೆಗೊಳ್ಳಲಿವೆ ಎಂಬುದನ್ನು ಎಲ್ಲ ಪುರಾವೆಗಳು ತೋರಿಸುತ್ತಿವೆ. ದೇವರನ್ನು ಬಿಟ್ಟು ನಡೆಸಲ್ಪಡುವ ಮಾನವ ಆಳ್ವಿಕೆಯು ಎಂದಿಗೂ ಯಶಸ್ಸನ್ನು ಹೊಂದಲಾರದೆಂದು ಸ್ಪಷ್ಟವಾಗಿ ರುಜುವಾಗಿದೆ. ಕೇವಲ ದೇವರ ಆಳ್ವಿಕೆ ಮಾತ್ರ ಶಾಂತಿ, ಸಂತೋಷ, ಪರಿಪೂರ್ಣ ಆರೋಗ್ಯ ಮತ್ತು ನಿತ್ಯ ಜೀವವನ್ನು ತರಬಲ್ಲದು. ಆದುದರಿಂದ, ದುಷ್ಟತನ ಮತ್ತು ಕಷ್ಟಸಂಕಟಗಳ ಕಡೆಗಿನ ದೇವರ ಸೈರಣೆಯು ಬೇಗನೆ ಅಂತ್ಯಗೊಳ್ಳಲಿದೆ. ಅಸಂತೃಪ್ತಿಕರವಾದ ಈ ವಿಷಯಗಳ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಮಾಡುವ ಮೂಲಕ ದೇವರು ಬೇಗನೆ ಮಾನವ ವಿಚಾರಗಳಲ್ಲಿ ಮಧ್ಯಪ್ರವೇಶಿಸಲಿದ್ದಾನೆ.

ಬೈಬಲ್‌ ಪ್ರವಾದನೆಯು ತಿಳಿಸುವುದು: “ಆ ರಾಜರ [ಈಗ ಇರುವ ಮಾನವ ಆಳ್ವಿಕೆ] ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು [ಪರಲೋಕದಲ್ಲಿ] ಸ್ಥಾಪಿಸುವನು; ಅದು ಎಂದಿಗೂ ಅಳಿಯದು, . . . ಆ ರಾಜ್ಯಗಳನ್ನೆಲ್ಲಾ [ಈಗಿರುವ ಆಳ್ವಿಕೆಯನ್ನು] ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ಯೆಹೋವನು ತನ್ನ ಸ್ವರ್ಗೀಯ ರಾಜ್ಯದ ಮೂಲಕ ತನ್ನ ಪರಮಾಧಿಕಾರ, ಅಂದರೆ ಆಳುವ ಹಕ್ಕನ್ನು ನಿರ್ದೋಷೀಕರಿಸುವನು ಎಂಬುದೇ ಬೈಬಲಿನ ಬೋಧನೆಯ ಮುಖ್ಯ ವಿಷಯವಾಗಿದೆ. “ಕಡೇ ದಿವಸಗಳ” ಸೂಚನೆಯ ಪ್ರಾಮುಖ್ಯ ವೈಶಿಷ್ಟ್ಯದ ಕುರಿತು ತಿಳಿಸುತ್ತಾ ಯೇಸು ಹೇಳಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”​—⁠ಮತ್ತಾಯ 24:14.

ಅಂತ್ಯ ಬರುವಾಗ ಯಾರು ಪಾರಾಗುವರು? ಬೈಬಲ್‌ ಇದಕ್ಕೆ ಉತ್ತರವನ್ನು ನೀಡುತ್ತದೆ: “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.” (ಜ್ಞಾನೋಕ್ತಿ 2:21, 22) ಯಥಾರ್ಥವಂತರು ಎಂಬುದಾಗಿ ಹೇಳುವಾಗ ಅದು ಯೆಹೋವನ ಚಿತ್ತವೇನೆಂದು ಕಲಿತು ಅದಕ್ಕನುಸಾರ ತಮ್ಮ ಜೀವಿತವನ್ನು ನಡೆಸುವವರಿಗೆ ಸೂಚಿಸುತ್ತದೆ. ಯೇಸು ಕ್ರಿಸ್ತನು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಹೌದು, ‘ಲೋಕವು ಗತಿಸಿಹೋಗುತ್ತದೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.’​—⁠1 ಯೋಹಾನ 2:⁠17.

ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉಪಯೋಗಿಸಲ್ಪಟ್ಟ ಬೈಬಲ್‌ ಭಾಷಾಂತರವು ‘ಸತ್ಯವೇದವು’ ಆಗಿದೆ.