ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಬದುಕು ಬದಲಾದ ವಿಧ

ಬದುಕು ಬದಲಾದ ವಿಧ

ಬಾಲ್ಯದಲ್ಲಿ ತುಂಬಾ ಕಷ್ಟ, ನೋವು ಅನುಭವಿಸಿದ ಒಬ್ಬ ಯುವ ಸ್ತ್ರೀ, ಜೀವನದಲ್ಲಿ ಹೇಗೆ ಸಂತೋಷನ ಕಂಡುಕೊಂಡಳು? ಯಾವಾಗಲೂ ಜಗಳ ಆಡ್ತಾ, ಅಧಿಕಾರಿಗಳ ವಿರುದ್ಧ ದಂಗೆ ಏಳುತ್ತಿದ್ದ ವ್ಯಕ್ತಿ ಹೇಗೆ ಒಳ್ಳೇ ಸುದ್ದಿಯನ್ನ ಸಾರುವ ವ್ಯಕ್ತಿಯಾದ? ಈ ಪ್ರಶ್ನೆಗೆ ಉತ್ತರ ಬೇಕಾ? ಮುಂದೆ ಏನಾಯ್ತು ಅಂತ ಓದಿ.

“ನನ್ನ ಜೀವನದಲ್ಲಿ ನಿಜವಾದ ಪ್ರೀತಿ, ಮಮತೆ ಯಾವಾಗ ಸಿಗುತ್ತೆ ಅಂತ ಕಾಯ್ತಿದ್ದೆ.”—ಈನಾ ಲೆಜ಼ನೀನ

ಜನನ: 1981

ದೇಶ: ರಷ್ಯಾ

ಹಿನ್ನೆಲೆ: ನೋವು ತುಂಬಿದ ಬಾಲ್ಯ

ಹಿಂದೆ: ನನಗೂ, ನನ್ನ ಅಪ್ಪ-ಅಮ್ಮ ಮೂವರಿಗೂ ಕಿವಿ ಕೇಳಿಸಲ್ಲ. ನನಗೆ ಆರು ವರ್ಷ ತುಂಬೊವರೆಗೂ ಜೀವನ ಚೆನ್ನಾಗಿತ್ತು. ಅದಾದ್ಮೇಲೆ ನಮ್ಮ ಅಪ್ಪ-ಅಮ್ಮ ಇಬ್ರೂ ಡೈವೋರ್ಸ್‌ ತಗೊಂಡು ಬೇರೆ ಆಗಿಬಿಟ್ರು. ನಾನು ಚಿಕ್ಕ ಹುಡುಗಿ ಆಗಿದ್ರೂ, ಡೈವೋರ್ಸ್‌ ಅಂದ್ರೆ ಏನು ಅಂತ ಗೊತ್ತಿತ್ತು. ಅಪ್ಪ-ಅಮ್ಮ ಬೇರೆ ಆದಾಗ ನನಗೆ ತುಂಬಾ ನೋವಾಯಿತು. ಡೈವೋರ್ಸ್‌ ಆದ್ಮೇಲೆ ನನ್ನ ಅಪ್ಪ ಮತ್ತು ಅಣ್ಣ ಇಬ್ರೂ ಅಲ್ಲೇ ಉಳ್ಕೊಂಡರು. ಆದರೆ ಅಮ್ಮ ನನ್ನ ಚಿಲಿಯಾ ಬಿನ್ಸ್ಕ ಊರಿಗೆ ಕರ್ಕೊಂಡು ಹೋದರು. ಸ್ವಲ್ಪ ಸಮಯ ಆದ್ಮೇಲೆ ನನ್ನ ಅಮ್ಮ ಇನ್ನೊಂದು ಮದುವೆ ಆದ್ರು. ನನ್ನ ಮಲತಂದೆ ತುಂಬಾ ಕುಡಿದು ನನನ್ನ, ಅಮ್ಮನಾ ತುಂಬಾ ಹೊಡಿತಿದ್ರು.

1993 ನೇ ಇಸವಿಯಲ್ಲಿ ನನ್ನ ಅಣ್ಣ ನದಿ ನೀರಲ್ಲಿ ಮುಳುಗಿ ಸತ್ತು ಹೋದ. ಈ ಘಟನೆ ನಡೆದಾಗ ನಮ್ಮೆಲ್ಲರಿಗೂ ಶಾಕ್‌ ಆಯ್ತು. ನನ್ನ ಅಮ್ಮ ಕೂಡ ಕುಡಿಯೋಕೆ ಶುರು ಮಾಡಿದ್ರು. ಆಮೇಲೆ ಅವರು ನನ್ನ ಮಲತಂದೆ ಜೊತೆ ಸೇರಿಕೊಂಡು ನನ್ನ ಹೊಡಿತಿದ್ರು. ಈ ಜೀವನ ನನಗೆ ಸಾಕಾಗಿ ಬಿಟ್ಟಿತ್ತು, ನನ್ನ ಜೀವನದಲ್ಲಿ ಪ್ರೀತಿ ಮಮತೆಗೋಸ್ಕರ ಹುಡುಕುತ್ತಾ ಇದ್ದೆ, ಅದಕ್ಕೋಸ್ಕರ ಹಂಬಲಿಸುತ್ತಾ ಇದ್ದೆ. ಸಮಾಧಾನಕ್ಕೋಸ್ಕರ ನಾನು ಬೇರೆ-ಬೇರೆ ಚರ್ಚುಗಳಿಗೆ ಹೋಗ್ತಿದ್ದೆ. ಆದ್ರೆ ಎಲ್ಲೂ ಸಮಾಧಾನ ಸಿಕ್ತಿರಲಿಲ್ಲ.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌: ನನ್‌ ವಯಸ್ಸು ಆಗ 13. ನನ್ನ ಕ್ಲಾಸ್ಮೇಟ್‌ ಒಬ್ಬ ಯೆಹೋವನ ಸಾಕ್ಷಿಯಾಗಿದ್ದಳು. ಅವಳು ನನಗೆ ಬೈಬಲ್‌ನಿಂದ ಒಳ್ಳೊಳ್ಳೆ ಕಥೆಗಳನ್ನ ಹೇಳ್ತಿದ್ದಳು. ಎಷ್ಟೇ ಕಷ್ಟ ಬಂದ್ರೂ ಬಿಡದೆ ದೇವರ ಸೇವೆ ಮಾಡಿದ ನೋಹ ಮತ್ತು ಯೋಬನ ಕಥೆಯನ್ನ ಬೈಬಲ್‌ನಿಂದ ಕೇಳಿದಾಗ ನನಗೆ ತುಂಬಾ ಖುಷಿ ಆಯ್ತು. ನಾನು ಬೈಬಲ್‌ ಸ್ಟಡಿ ತಗೊಳ್ಳೋಕೆ ಶುರು ಮಾಡಿದೆ ಮತ್ತು ಮೀಟಿಂಗ್‌ ಕೂಡ ಹೋಗುತ್ತಿದ್ದೆ.

ಬೈಬಲ್‌ ಸ್ಟಡಿ ಮಾಡ್ತಾ-ಮಾಡ್ತಾ ನಾನು ಎಷ್ಟೋ ಸತ್ಯಗಳನ್ನ ಕಲಿತೆ. ದೇವರಿಗೆ ಒಂದು ಹೆಸರಿದೆ ಅಂತ ಗೊತ್ತಾದಾಗ ನನ್ನ ಮೈ ಜುಮ್‌ ಅನಿಸಿತು. (ಕೀರ್ತನೆ 83:18) “ಕೊನೇ ದಿನಗಳಲ್ಲಿ” ಏನು ನಡೆಯುತ್ತೆ ಅಂತ ಬೈಬಲ್‌ನಲ್ಲಿ ಮೊದಲೇ ಬರೆದಿರೋದನ್ನ ಓದಿದಾಗ ನನಗೆ ತುಂಬಾ ಆಶ್ಚರ್ಯ ಆಯ್ತು. (2 ತಿಮೊತಿ 3:1-5) ಅದರಲ್ಲೂ ಸತ್ತವರು ಮತ್ತೆ ಎದ್ದು ಬರ್ತಾರೆ ಅಂತ ಕಲಿತಾಗ ನನಗೆ ಖುಷಿ ತಡಿಯೋಕೆ ಆಗಲಿಲ್ಲ, ಯಾಕಂದ್ರೆ ನನ್ನ ಅಣ್ಣನ ಮತ್ತೆ ನಾನು ನೋಡಬಹುದು ಅಂತ ನನಗೆ ಗೊತ್ತಾಯ್ತು.—ಯೋಹಾನ 5:28, 29.

ಆದರೆ ನಾನು ಕಲಿತ ವಿಷ್ಯಗಳು ಎಲ್ಲರಿಗೂ ಇಷ್ಟ ಆಗಿಲ್ಲ. ನನ್ನ ಅಮ್ಮನಿಗೆ, ಮಲತಂದೆಗೆ ಇಬ್ಬರಿಗೂ ಯೆಹೋವನ ಸಾಕ್ಷಿಗಳನ್ನ ಕಂಡ್ರೆ ಆಗ್ತಾನೆ ಇರಲಿಲ್ಲ. ನಾನು ಬೈಬಲ್‌ ಸ್ಟಡಿನ ನಿಲ್ಲಿಸಬೇಕು ಅಂತ ತುಂಬಾ ಒತ್ತಾಯ ಮಾಡಿದ್ರು. ಆದ್ರೆ ನಾನು ಬೈಬಲ್‌ ಸ್ಟಡಿ ಮಾಡೋದನ್ನ ಬಿಡಲಿಲ್ಲ. ಯಾಕೆಂದರೆ ನಾನು ಕಲಿಯುತ್ತಿದ್ದ ವಿಷ್ಯಗಳು ನನಗೆ ತುಂಬಾ ಇಷ್ಟ ಆಗ್ತಿತ್ತು.

ನನ್ನ ಕುಟುಂಬದವರಿಂದ ಬರುತ್ತಿದ್ದ ವಿರೋಧನ ಎದುರಿಸೋದು ಅಷ್ಟು ಸುಲಭ ಆಗಿರಲಿಲ್ಲ, ತುಂಬಾ ಕಷ್ಟ ಆಗ್ತಿತ್ತು. ನನಗೆ ತುಂಬಾ ದುಃಖ ತಂದಂಥ ಇನ್ನೊಂದು ವಿಷ್ಯ ಏನಂದರೆ, ನನ್ನ ಜೊತೆ ಮೀಟಿಂಗ್‌ಗೆ ಬರುತ್ತಿದ್ದ ನನ್ನ ತಮ್ಮ ಕೂಡ ನದಿಯಲ್ಲಿ ಮುಳುಗಿ ಸತ್ತುಹೋದ. ಇಂಥ ಸಮಯದಲ್ಲಿ, ಯೆಹೋವನ ಸಾಕ್ಷಿಗಳು ನನ್ನ ಜೊತೆನೇ ಇದ್ರು. ನನ್ನ ಜೀವನದಲ್ಲಿ ಯಾವ ಪ್ರೀತಿ ಮತ್ತು ನೆಮ್ಮದಿಗೋಸ್ಕರ ಹುಡುಕುತ್ತಿದ್ದನೋ, ಅದು ನನಗೆ ಅವರತ್ರ ಸಿಕ್ತು. ನಾನು ನಡೀತಿರೋದು ಸರಿಯಾದ ದಾರಿಯಲ್ಲಿ ಅಂತ ನನಗೆ ಗೊತ್ತಿತ್ತು. ಅದಕ್ಕೆ 1996 ರಲ್ಲಿ ದೀಕ್ಷಾಸ್ನಾನ ತಗೊಂಡು, ಯೆಹೋವನ ಸಾಕ್ಷಿಯಾದೆ.

ಸಿಕ್ಕಿದ ಪ್ರಯೋಜನಗಳು: ಯೆಹೋವ ದೇವರು ನನಗೆ ಒಂದು ಒಳ್ಳೇ ಜೀವನ ಸಂಗಾತಿಯನ್ನ ಕೊಟ್ಟಿದ್ದಾರೆ. ಇದನ್ನ ಆಶೀರ್ವಾದ ಅಂತನೇ ಹೇಳಬಹುದು. ಅವರ ಹೆಸರು ಡಿಮಿಟ್ರಿ. ಈಗ ನಾವಿಬ್ರೂ ಸೆಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಇರೋ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ನಲ್ಲಿ ಸೇವೆ ಮಾಡ್ತಿದ್ದೀವಿ. ಸಮಯ ಹೋಗ್ತಾ-ಹೋಗ್ತಾ ನನ್ನ ಹೆತ್ತವರಿಗೆ ನನ್ನ ನಂಬಿಕೆಗಳ ವಿರುದ್ಧ ಇದ್ದಂಥ ಕಲ್ಲಿನಂತ ಮನಸ್ಥಿತಿ ಕರಗ್ತಾ ಬಂತು.

ನಾನು ಯೆಹೋವನ ಬಗ್ಗೆ ತಿಳ್ಕೊಂಡಿದ್ದು ತುಂಬಾ ಒಳ್ಳೇದಾಯಿತು. ಆತನಿಗೆ ನಾನು ತುಂಬಾ ಥ್ಯಾಂಕ್ಸ್‌ ಹೇಳ್ತೀನಿ ಯಾಕೆಂದ್ರೆ ಆತನ ಸೇವೆ ಮಾಡುವುದರಿಂದ ನನ್ನ ಜೀವನಕ್ಕೆ ಒಂದು ಹೊಸ ಅರ್ಥ ಸಿಕ್ಕಿದೆ.

“ಜೀವನದ ಬಗ್ಗೆ ಇರುವ ಅನೇಕ ಪ್ರಶ್ನೆಗಳು ನನ್ನನ್ನ ಯಾವಾಗ್ಲೂ ಕಾಡ್ತಾ ಇತ್ತು.”—ರೋಡಲ್‌ ರಾಡ್ರಿಗಸ್‌ ರಾಡ್ರಿಗಸ್‌

ಜನನ: 1959

ದೇಶ: ಕ್ಯೂಬಾ

ಹಿನ್ನೆಲೆ: ಅಧಿಕಾರಿಗಳ ವಿರುದ್ಧ ದಂಗೆ ಏಳ್ತಿದ್ದ

ಹಿಂದೆ: ನಾನು ಹುಟ್ಟಿದ್ದು ಕ್ಯೂಬಾದ ಹವಾನ ಅನ್ನೊ ಪಟ್ಟಣದಲ್ಲಿ. ನಾನು ಬೆಳೆದಿದ್ದು ಒಂದು ಕೊಳಗೇರಿ ಪ್ರದೇಶದಲ್ಲಿ. ಅಲ್ಲಿ ಯಾವಾಗಲೂ ಚಿಕ್ಕ ಪುಟ್ಟ ವಿಷಯಕ್ಕೂ ಜನ ಜಗಳ ಆಡುತ್ತಿದ್ರು. ಬೆಳಿತಾ-ಬೆಳಿತಾ ಜಗಳ ಮಾಡೋದಂದ್ರೆ ನನಗೆ ತುಂಬಾ ಇಷ್ಟ ಆಗ್ತಿತ್ತು. ಜಗಳಕ್ಕೆ ಸಂಬಂಧಪಟ್ಟ ಕ್ರೀಡೆಗಳನ್ನಂತೂ ತುಂಬ ಇಷ್ಟಪಡ್ತಿದ್ದೆ. ಅದರಲ್ಲೂ ಜೂಡೋ ಅಂದ್ರೆ ನನಗೆ ಪಂಚಪ್ರಾಣವಾಗಿತ್ತು.

ನಾನು ಚೆನ್ನಾಗಿ ಓದುತ್ತಿದ್ದೆ. ಅಪ್ಪ-ಅಮ್ಮ ನಾನು ಇನ್ನೂ ಚೆನ್ನಾಗಿ ಓದಲಿ ಅಂತ ನನ್ನನ್ನ ವಿಶ್ವವಿದ್ಯಾಲಯಕ್ಕೆ ಸೇರಿಸಿದ್ರು. ಅಲ್ಲಿ ಇರುವಾಗ ನಾನು ದೇಶದ ರಾಜಕೀಯದ ಬಗ್ಗೆ ತಿಳ್ಕೊಂಡೆ. ರಾಜಕೀಯ ವಿಷ್ಯಗಳು ಬದಲಾಗಬೇಕು ಅಂತ ಅನಿಸ್ತು. ಅದನ್ನ ನಾನೇ ಬದಲಾಯಿಸಬೇಕು ಅಂತ ನಿರ್ಧಾರ ಮಾಡಿದೆ. ಆಗ ನಾನು ಸರ್ಕಾರಿ ಅಧಿಕಾರಿಗಳ ವಿರುದ್ಧ ದಂಗೆಯೆದ್ದೆ. ಒಂದು ದಿನ ನಾನು ಮತ್ತು ನನ್ನ ಫ್ರೆಂಡ್‌ ಒಬ್ಬ ಸರ್ಕಾರಿ ಪೊಲೀಸ್‌ ಅಧಿಕಾರಿ ಜೊತೆ ಹೊಡೆದಾಟ ಮಾಡಿ ಅವರ ಗನ್‌ ಕಿತ್ಕೊಳ್ಳೋಕೆ ಪ್ರಯತ್ನ ಮಾಡಿದ್ವಿ. ಆ ಜಗಳದಲ್ಲಿ ಆಫೀಸರ್‌ನ ತಲೆಗೆ ತುಂಬಾ ಏಟಾಯ್ತು. ಇದೇ ಕಾರಣಕ್ಕೆ ನಾನು, ನನ್ನ ಕ್ಲಾಸ್ಮೇಟ್‌ ಇಬ್ರೂ ಜೈಲ್‌ ಸೇರಿದ್ವಿ. ನಮ್ಮಿಬ್ಬರ ಮೇಲೆ ಗುಂಡಾರಿಸಿ ಸಾಯಿಸಬೇಕು ಅಂತ ತೀರ್ಪಾಗಿತ್ತು. ಆಗ ನನ್ನ ವಯಸ್ಸು 20. ಆ ವಯಸ್ಸಲ್ಲೇ ಸಾವು ನನ್ನನ್ನ ಹುಡುಕಿಕೊಂಡು ಬಂದಿತ್ತು!

ನನ್ನ ಮೇಲೆ ಗುಂಡಾರಿಸೋಕೆ ಅಧಿಕಾರಿಗಳು ಬಂದಾಗ ಅವರ ಮುಂದೆ ಧೈರ್ಯದಿಂದ ನಿಂತ್ಕೊಬೇಕು ಅಂತ ಒಬ್ಬನೇ ಇದ್ದಾಗ ಚೆನ್ನಾಗಿ ಪ್ರಾಕ್ಟೀಸ್‌ ಮಾಡ್ತಿದ್ದೆ. ‘ನನಗೆ ಒಂದು ಚೂರೂ ಭಯನೇ ಇಲ್ಲ’ ಅಂತ ತೋರಿಸಬೇಕು ಅಂತ ಅಂದ್ಕೊಂಡಿದ್ದೆ. ಅದೇ ಸಮಯದಲ್ಲಿ, ‘ಈ ಲೋಕದಲ್ಲಿ ಯಾಕೆ ಇಷ್ಟೊಂದು ಅನ್ಯಾಯ ನಡಿತಿದೆ? ಜೀವನ ಅಂದ್ರೆ ಇಷ್ಟೇನಾ?’ ಅನ್ನೋ ಪ್ರಶ್ನೆಗಳು ನನ್ನ ಮನಸ್ಸನ್ನ ಕಾಡ್ತಾ ಇತ್ತು.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌: ನಮ್ಮ ವಿರುದ್ಧ ಕೊಟ್ಟ ತೀರ್ಪು ಬದಲಾಯಿತು. ಮರಣ ಶಿಕ್ಷೆ ಬದಲು, 30 ವರ್ಷಗಳು ಜೈಲಲ್ಲೇ ಇರಬೇಕಾಯಿತು. ಆಗ ನಾನು ಕೆಲವು ಯೆಹೋವನ ಸಾಕ್ಷಿಗಳನ್ನ ಭೇಟಿಯಾದೆ. ಅವರ ನಂಬಿಕೆಯ ಕಾರಣಕ್ಕೋಸ್ಕರ ಅವರು ಜೈಲಲ್ಲಿ ಇದ್ರು. ಯೆಹೋವನ ಸಾಕ್ಷಿಗಳು ತೋರಿಸುತ್ತಿದ್ದ ಧೈರ್ಯ ಮತ್ತು ಸಮಾಧಾನದ ಗುಣ ನನಗೆ ತುಂಬಾ ಇಷ್ಟ ಆಯ್ತು. ಯಾವುದೇ ತಪ್ಪು ಮಾಡದೇ ಇದ್ರು ಕೂಡ ಅವರನ್ನ ಜೈಲಿಗೆ ಹಾಕಿದ್ರು. ಹೀಗಿದ್ದರೂ ಅವರ ಮುಖದಲ್ಲಿ ಕೋಪ ಆಗಲಿ, ದ್ವೇಷ ಆಗಲಿ ಕಾಣ್ತಾನೇ ಇರಲಿಲ್ಲ.

ಮನುಷ್ಯರಿಗೋಸ್ಕರ ದೇವರು ಒಂದು ಒಳ್ಳೇ ಉದ್ದೇಶ ಇಟ್ಟಿದ್ದಾನೆ ಅಂತ ಯೆಹೋವನ ಸಾಕ್ಷಿಗಳು ನನಗೆ ಹೇಳಿಕೊಟ್ರು. ದೇವರು ಅನ್ಯಾಯನ, ಹಿಂಸೆನ ತೆಗೆದುಹಾಕಿ ಭೂಮಿ ಮೇಲೆ ಪರದೈಸ್‌ ತರ್ತಾನೆ ಅಂತ ಬೈಬಲಿಂದ ತೋರಿಸಿದ್ರು. ಆಗ ಭೂಮಿ ಮೇಲೆ ಬರೀ ಒಳ್ಳೇ ಜನರು ಮಾತ್ರ ಇರ್ತಾರೆ, ಸಾವು ಇರಲ್ಲ. ಒಳ್ಳೇ ಆರೋಗ್ಯ ಕೂಡ ಇರುತ್ತೆ ಅಂತ ಕಲಿಸಿದ್ರು.—ಕೀರ್ತನೆ 37:29.

ಸಾಕ್ಷಿಗಳು ಕಲಿಸಿದ್ದೆಲ್ಲಾ ತುಂಬಾ ಇಷ್ಟ ಆಗ್ತಿತ್ತು. ಆದರೆ ಅವರ ತರ ನಾನು ಬದಲಾಗಿ, ಸಮಾಧಾನದಿಂದ ಇರಬೇಕು ಅನ್ನೋದು ಆಗದ ವಿಷ್ಯ. ರಾಜಕೀಯ ವಿಷ್ಯದಿಂದ ದೂರ ಇರೋದು, ಯಾರಾದ್ರೂ ಹೊಡೆದ್ರೆ ಇನ್ನೊಂದು ಕೆನ್ನೆ ತೋರಿಸಿ ಸುಮ್ಮನೆ ಇರೋದು ‘ಇದೆಲ್ಲ ನನ್ನ ಕೈಯಲ್ಲಿ ಮಾಡೋಕೆ ಆಗಲ್ಲ’ ಅಂತ ಅನಿಸ್ತು. ಅದಕ್ಕೆ ಬೈಬಲ್‌ನ ಯಾರ ಸಹಾಯ ಇಲ್ಲದೆ ನಾನೇ ಓದೋಕೆ ಶುರು ಮಾಡಿದೆ. ಬೈಬಲನ್ನ ಓದಿ ಮುಗಿಸಿದಾಗ ನನಗೆ, ಒಂದನೇ ಶತಮಾನದ ಕ್ರೈಸ್ತರ ತರ ಇವತ್ತು ಜೀವಿಸ್ತಿರೋದು ಯೆಹೋವನ ಸಾಕ್ಷಿಗಳು ಮಾತ್ರ ಅಂತ ನನಗೆ ಗೊತ್ತಾಯ್ತು.

ಬೈಬಲನ್ನ ಓದುವಾಗ ನಾನು ಜೀವನದಲ್ಲಿ ತುಂಬಾ ಬದಲಾವಣೆ ಮಾಡ್ಕೊಳ್ಳಬೇಕು ಅಂತ ನನಗೆ ಗೊತ್ತಿತ್ತು. ಉದಾಹರಣೆಗೆ, ಕೆಟ್ಟ ಮಾತನ್ನ, ಸಿಗರೇಟ್‌ ಸೇದೋದನ್ನ ಬಿಡಬೇಕಿತ್ತು. ರಾಜಕೀಯ ವಿಷಯದಲ್ಲಿ ತಲೆ ಹಾಕೋದನ್ನ ನಿಲ್ಲಿಸಬೇಕಿತ್ತು. ಈ ಎಲ್ಲಾ ಬದಲಾವಣೆಗಳನ್ನ ಮಾಡ್ಕೊಳ್ಳೋದು ಅಷ್ಟು ಸುಲಭ ಆಗಿರಲಿಲ್ಲ. ಆದರೂ ಯೆಹೋವನ ಸಹಾಯದಿಂದ ನಿಧಾನವಾಗಿ ಬದಲಾವಣೆ ಮಾಡ್ಕೊಂಡೆ.

ಆದ್ರೆ ಕೋಪನ ನಿಯಂತ್ರಿಸೋದು ತುಂಬಾ ಕಷ್ಟ ಆಗ್ತಿತ್ತು. ಈಗಲೂ ಅದು ಕಷ್ಟನೇ. ಅದಕ್ಕೆ ಅದರ ಬಗ್ಗೆ ನಾನು ಪ್ರಾರ್ಥನೆ ಮಾಡ್ತಾ ಇರ್ತೀನಿ. ನನಗೆ ತುಂಬಾ ಸಹಾಯ ಮಾಡಿದ ವಚನ ಜ್ಞಾನೋಕ್ತಿ 16:32. ಅಲ್ಲಿ ಹೀಗಿದೆ, “ತಟ್ಟನೇ ಕೋಪ ಮಾಡ್ಕೊಳ್ಳದೆ ಇರುವವನು ಶೂರ ಸೈನಿಕನಿಗಿಂತ ಶಕ್ತಿಶಾಲಿ, ಕೋಪಕ್ಕೆ ಕಡಿವಾಣ ಹಾಕುವವನು ಪಟ್ಟಣವನ್ನ ವಶ ಮಾಡ್ಕೊಳ್ಳೋ ವ್ಯಕ್ತಿಗಿಂತ ಬಲಶಾಲಿ.”

1991 ರಲ್ಲಿ ಜೈಲಲ್ಲಿದ್ದ ಒಂದು ಚಿಕ್ಕ ನೀರಿನ ತೊಟ್ಟಿಯಲ್ಲಿ ನನ್ನ ದೀಕ್ಷಾಸ್ನಾನ ಆಯ್ತು. ಇದಾದ ಮುಂದಿನ ವರ್ಷ, ನಮ್ಮಲ್ಲಿ ಕೆಲವರನ್ನ ಬಿಡುಗಡೆ ಮಾಡಿ ಸ್ಪೇನ್‌ಗೆ ಕಳಿಸಿದರು. ಯಾಕೆಂದರೆ ಅಲ್ಲಿ ನಮ್ಮ ಸಂಬಂಧಿಕರು ಇದ್ರು. ನಾನು ಸ್ಪೇನ್‌ಗೆ ಬಂದ ತಕ್ಷಣ, ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹೋಗಲು ಶುರುಮಾಡಿದೆ. ನಾನು ಕೂಟಗಳಿಗೆ ಹೋದಾಗ ಸಾಕ್ಷಿಗಳು ನನ್ನ ಪ್ರೀತಿಯಿಂದ ಸ್ವಾಗತಿಸಿದರು. ನಾನು ಅವರಿಗೆ ತುಂಬಾ ವರ್ಷಗಳಿಂದ ಪರಿಚಯ ಇರೋ ತರ ನನ್ನ ಹತ್ರ ನಡ್ಕೊಂಡರು. ಹೊಸ ಜೀವನ ಶುರು ಮಾಡೋಕೆ ನನಗೆ ಸಹಾಯ ಮಾಡಿದರು.

ಸಿಕ್ಕಿದ ಪ್ರಯೋಜನಗಳು: ನಾನೀಗ ಖುಷಿಖುಷಿಯಾಗಿ ನನ್ನ ಹೆಂಡತಿ ಮತ್ತು ಮಕ್ಕಳ ಜೊತೆ ದೇವರ ಸೇವೆ ಮಾಡ್ಕೊಂಡು ಸಂತೋಷವಾಗಿ ಇದೀನಿ. ಬೇರೆಯವರಿಗೆ ಬೈಬಲ್‌ನಲ್ಲಿರೋ ವಿಷಯಗಳನ್ನ ಕಲಿಸಲು ನನಗಿರೋ ಸಮಯನ ಬಳಸ್ತಾ ಇದ್ದೀನಿ. ಇದು ನನಗೆ ಸಿಕ್ಕಿರೋ ದೊಡ್ಡ ಸುಯೋಗ. ಒಂದೊಂದು ಸಲ ನನ್ನ ಹಿಂದಿನ ಜೀವನ ನೆನಪಾಗುತ್ತೆ. ಸಾಯಬೇಕಾದ ನನಗೆ ಬದಲಾಗುವ ಒಂದು ಅವಕಾಶ ಸಿಕ್ತು. ಯೆಹೋವನ ಬಗ್ಗೆ ಕಲಿತಾಗಿನಿಂದ ನಾನು ಏನೆಲ್ಲಾ ಪಡ್ಕೊಂಡಿದ್ದೀನೋ ಅದಕ್ಕೆಲ್ಲ ನಾನು ಥ್ಯಾಂಕ್ಸ್‌ ಹೇಳ್ತೀನಿ. ಈಗ ನಾನು ಬದುಕಿರೋದು ಮಾತ್ರ ಅಲ್ಲ, ನನಗೆ ಒಂದು ಒಳ್ಳೇ ನಿರೀಕ್ಷೆ ಕೂಡ ಇದೆ. ‘ಇನ್ಮುಂದೆ ಸಾವು,’ ಅನ್ಯಾಯ ಇಲ್ಲದ ಪರದೈಸ್‌ ಭೂಮಿಯಲ್ಲಿ ಜೀವನ ಮಾಡೋಕೆ ನಾನು ಕಾಯ್ತಾ ಇದೀನಿ.—ಪ್ರಕಟನೆ 21:3, 4.

[ಚಿತ್ರ]

“ದೇವರಿಗೆ ಒಂದು ಹೆಸರಿದೆ ಅಂತ ಗೊತ್ತಾದಾಗ ನನ್ನ ಮೈ ಜುಮ್‌ ಅನಿಸಿತು”

[ಚಿತ್ರ]

ನಾನು ಮತ್ತು ನನ್ನ ಪತಿ ಕಿವಿ ಕೇಳದವರಿಗೆ ಸನ್ನೆ ಭಾಷೆಯಲ್ಲಿರುವ ವಿಡಿಯೋ ತೋರಿಸಿ ಸುವಾರ್ತೆ ಸಾರುತ್ತೀವಿ. ಇದು ನಮಗೆ ತುಂಬಾ ಖುಷಿ ತಂದಿದೆ