ಮಾಹಿತಿ ಇರುವಲ್ಲಿ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಟೋಸ್ಟಿಂಗ್‌ ಬಗ್ಗೆ ಬೈಬಲಲ್ಲಿ ಇಲ್ಲಾಂದ್ರೂ ಯೆಹೋವನ ಸಾಕ್ಷಿಗಳು ಅದನ್ನ ಯಾಕೆ ಮಾಡಲ್ಲ?

ಟೋಸ್ಟಿಂಗ್‌ ಬಗ್ಗೆ ಬೈಬಲಲ್ಲಿ ಇಲ್ಲಾಂದ್ರೂ ಯೆಹೋವನ ಸಾಕ್ಷಿಗಳು ಅದನ್ನ ಯಾಕೆ ಮಾಡಲ್ಲ? ಒಂದು ಲೋಟದಲ್ಲಿ ದ್ರಾಕ್ಷಾಮದ್ಯ ಅಥವಾ ಬೇರೆ ಯಾವುದಾದರೂ ಡ್ರಿಂಕ್ಸ್‌ನ್ನು ಹಾಕೊಂಡು ಆಕಾಶಕ್ಕೆ ಎತ್ತೋದನ್ನ ಟೋಸ್ಟಿಂಗ್‌ ಅಂತ ಹೇಳ್ತಾರೆ. ಇದು ತುಂಬ ವರ್ಷಗಳಿಂದ ಅನೇಕರು ಮಾಡ್ತಾ ಬಂದಿರೋ ಪದ್ಧತಿ. ಇದನ್ನ ಒಬ್ಬೊಬ್ಬರು ಒಂದೊಂದು ತರ ಮಾಡ್ತಾರೆ. ಕೆಲವರು ತಾವು ಕುಡಿಯೋ ಗ್ಲಾಸನ್ನ ಮೇಲಕ್ಕೆ ಎತ್ತಿ ಮುಟ್ಟಿಸ್ತಾರೆ. ಒಬ್ಬ ವ್ಯಕ್ತಿಯನ್ನ ಹಾರೈಸೋಕೆ, ಖುಷಿಪಡಿಸೋಕೆ, ಒಳ್ಳೇ ಆರೋಗ್ಯಕ್ಕೆ, ದೀರ್ಘ ಆಯಸ್ಸಿಗೆ ಅಥವಾ ಬೇರೆ ಯಾವುದಾದರೂ ವಿಷಯಕ್ಕೆ ಟೋಸ್ಟಿಂಗ್‌ ಮಾಡ್ತಾರೆ. ಆಗ ಅವರ ಜೊತೆಯಲ್ಲಿ ಇರುವವರು ಕೂಡ ಈ ವಿಷಯವನ್ನು ಒಪ್ಪುತ್ತಾರೆ ಅಂತ ತೋರಿಸೋಕೆ ಕೈಯಲ್ಲಿರೋ ಗ್ಲಾಸನ್ನು ಮೇಲೆಕ್ಕೆ ಎತ್ತಿ ಹಿಡಿಯುತ್ತಾರೆ. ಟೋಸ್ಟಿಂಗ್‌ ಮಾಡ್ತಾ ಬೇರೆಯವರ ಖುಷಿಯಲ್ಲಿ ಭಾಗಿಯಾಗೋದು ತಪ್ಪಲ್ಲ ಅಂತ ಅನೇಕರು ನೆನಸ್ತಾರೆ. ಆದರೆ ಯೆಹೋವನ ಸಾಕ್ಷಿಗಳು ಟೋಸ್ಟಿಂಗ್‌ ಮಾಡದೇ ಇರೋದಕ್ಕೆ ಕಾರಣ ಇದೆ.

ಕ್ರೈಸ್ತರು ಟೋಸ್ಟಿಂಗ್‌ ಮಾಡದಿರೋಕೆ ಕಾರಣ ಬೇರೆಯವರು ಖುಷಿಯಾಗಿ ಇರೋದು ಅಥವಾ ಆರೋಗ್ಯವಾಗಿರೋದು ಇಷ್ಟ ಅಲ್ಲ ಅಂತ ತೋರಿಸಿಕೊಳ್ಳೋಕೆ ಅಲ್ಲ. ಒಂದನೇ ಶತಮಾನದ ಆಡಳಿತ ಮಂಡಲಿಯು ಸಭೆಗಳಿಗೆ ಪತ್ರದ ಕೊನೆಯಲ್ಲಿ “ನಿಮಗೆ ಒಳ್ಳೇ ಆರೋಗ್ಯ ಇರಲಿ” ಅಂತ ಬರೆಯುತ್ತಿದ್ದರು. (ಅಪೊಸ್ತಲರ ಕಾರ್ಯ 15:29) ಕೆಲವು ಯೆಹೋವನ ಆರಾಧಕರು ಕೂಡ ತಮ್ಮ ರಾಜರಿಗೆ ಹೀಗೆ ಹೇಳುತ್ತಿದ್ದರು, “ನನ್ನ ಒಡೆಯ ಚಿರಕಾಲ ಬದುಕಲಿ” ಮತ್ತು “ರಾಜ ಚಿರಂಜೀವಿ ಆಗಿರಲಿ.”—1 ಅರಸು 1:31; ನೆಹೆಮೀಯ 2:3.

ಆದರೆ ಈ ಟೋಸ್ಟಿಂಗ್‌ ಪದ್ಧತಿಯ ಆರಂಭ ಹೇಗಾಯ್ತು? 1968 ಜನವರಿ 1 ಕಾವಲಿನಬುರುಜು (ಇಂಗ್ಲಿಷ್‌) ಲೇಖನದಲ್ಲಿ, ದಿ ಎನ್‌ಸೈಕ್ಲಪೀಡಿಯ ಬ್ರಿಟಾನಿಕ (1910), 13ನೇ ವಾಲ್ಯುಂ, 121ನೇ ಪುಟದಲ್ಲಿದ್ದ ವಿಷಯ ಇತ್ತು. “ಹಳೇ ಕಾಲದಲ್ಲಿ ಸತ್ತವರಿಗೋಸ್ಕರ ಮತ್ತು ದೇವರುಗಳಿಗೋಸ್ಕರ ಬಲಿಯನ್ನ ಅರ್ಪಿಸಿ ಕುಡಿಯುತ್ತಿದ್ದ ಆಚಾರದಿಂದಾನೇ ಇವತ್ತು ಜೀವಂತ ಇರುವವರಿಗೂ ಒಳ್ಳೇ ಆರೋಗ್ಯವನ್ನು ಹಾರೈಸಿ ಟೋಸ್ಟ್‌ ಮಾಡೋ ಪದ್ಧತಿ ಬಂದಿರೋ ಸಾಧ್ಯತೆ ಇದೆ. ಗ್ರೀಕರು ಮತ್ತು ರೋಮನ್ನರು ಊಟ ಮಾಡೋ ಸಮಯದಲ್ಲಿ ತಮ್ಮ ದೇವರುಗಳಿಗೆ ಪಾನ ಅರ್ಪಣೆಗಳನ್ನು ಮಾಡ್ತಿದ್ರು. ತಮ್ಮ ದೇವರುಗಳಿಗೆ ಮತ್ತು ಸತ್ತವರಿಗೋಸ್ಕರ ಗೌರವವನ್ನು ತೋರಿಸೋಕೆ ಔತಣದ ಸಮಯದಲ್ಲಿ ಇವರು ಮಧ್ಯ ಕುಡಿಯುತ್ತಿದ್ದರು. ಅವರು ಈ ತರ ಬಲಿಗಳನ್ನ ಅರ್ಪಿಸೋ ಸಮಯದಲ್ಲಿ ದ್ರಾಕ್ಷಾಮದ್ಯ ಕುಡಿದು ಮನುಷ್ಯರಿಗೆ ಒಳ್ಳೇ ಆರೋಗ್ಯವನ್ನು ಹಾರೈಸುತ್ತಿದ್ದರು.”

ಈ ಪದ್ಧತಿಯನ್ನು ಇವತ್ತೂ ಪಾಲಿಸುತ್ತಿದ್ದಾರಾ? 1995 ಇಂಟರ್‌ನ್ಯಾಷನಲ್‌ ಹ್ಯಾಂಡ್‌ ಬುಕ್‌ ಆನ್‌ ಆಲ್ಕಹಾಲ್‌ ಆಂಡ್‌ ಕಲ್ಚರ್‌ ಹೇಳೋ ಪ್ರಕಾರ “ಜನ ಧಾರ್ಮಿಕ ಆಚರಣೆಗಳಿಗೋಸ್ಕರ ಇವತ್ತು ಟೋಸ್ಟಿಂಗನ್ನ ಮಾಡಲ್ಲ ನಿಜ. ಆದರೆ ಹಳೇ ಕಾಲದಲ್ಲಿ ದೇವರುಗಳಿಗೆ ಪವಿತ್ರ ನೀರನ್ನ ನೆಲದ ಮೇಲೆ ಸುರಿಯಲಾಗುತ್ತಿತ್ತು. ಅಂದ್ರೆ ತಮ್ಮ ಆಸೆಯನ್ನ ಈಡೇರಿಸೋ ವಿನಂತಿ ಜೊತೆ ರಕ್ತ ಅಥವಾ ದ್ರಾಕ್ಷಾಮದ್ಯವನ್ನ ಸುರಿಸುತ್ತಿದ್ದರು. ದೀರ್ಘ ಆಯಸ್ಸಿಗೆ ಅಥವಾ ಒಳ್ಳೇ ಆರೋಗ್ಯಕ್ಕೋಸ್ಕರ ಪ್ರಾರ್ಥನೆ ಮಾಡುತ್ತಿದ್ದರು.”

ಕೆಲವು ವಸ್ತುಗಳು ಮತ್ತು ಪದ್ಥತಿಗಳು ಸುಳ್ಳು ಆರಾಧನೆಗೆ ಸಂಬಂಧಪಟ್ಟಿದ್ರೂ ಅದನ್ನು ಸತ್ಯ ಆರಾಧನೆಯಲ್ಲಿ ಬಳಸೋದು ಅಥವಾ ಅದನ್ನು ಉಪಯೋಗಿಸೋದು ಯಾವಾಗಲೂ ತಪ್ಪಾಗಿರಬೇಕು ಅಂತೇನಿಲ್ಲ. ದಾಳಿಂಬೆಯ ಉದಾಹರಣೆಯನ್ನು ನೋಡಿ. ಒಂದು ಹೆಸರುವಾಸಿಯಾಗಿರೋ ಬೈಬಲ್‌ ಎನ್‌ಸೈಕ್ಲಪೀಡಿಯದಲ್ಲಿ ಹೀಗಿದೆ: “ವಿಧರ್ಮಿ ಜನರು ದಾಳಿಂಬೆ ಪವಿತ್ರವಾಗಿದೆ ಅಂತ ನೆನಸಿ ಅದನ್ನ ಆರಾಧನೆಗೆ ಬಳಸುತ್ತಿದ್ದರು.” ಆದರೆ ದೇವರು ಇಸ್ರಾಯೇಲ್ಯರಿಗೆ ಮಹಾ ಪುರೋಹಿತನ ಬಟ್ಟೆ ಮತ್ತು ದೇವಾಲಯದ ಕಂಬಗಳನ್ನ ಅಲಂಕರಿಸೋಕೆ ದಾಳಿಂಬೆಯನ್ನ ಉಪಯೋಗಿಸೋಕೆ ಹೇಳಿದನು. (ವಿಮೋಚನಕಾಂಡ 28:33; 2 ಅರಸು 25:17) ಮದುವೆ ಉಂಗುರವನ್ನು ಹಾಕಿಕೊಳ್ಳೋದು ಸುಳ್ಳು ಧರ್ಮದ ಒಂದು ಪದ್ಧತಿ ಆಗಿತ್ತು. ಆದರೆ ಇವತ್ತು ಮದುವೆ ಉಂಗುರ ಹಾಕೋದು ಯಾವುದೇ ಧಾರ್ಮಿಕ ವಿಷಯ ಅಲ್ಲ. ಯಾಕಂದ್ರೆ ಒಬ್ಬ ವ್ಯಕ್ತಿಗೆ ಮದುವೆಯಾಗಿದೆ ಅಂತ ಸೂಚಿಸೋಕೆ ಅದನ್ನ ಹಾಕ್ತಾರೆ.

ಸುಳ್ಳು ಆರಾಧನೆಗೆ ದ್ರಾಕ್ಷಾಮದ್ಯವನ್ನ ಉಪಯೋಗಿಸುವುದರ ಬಗ್ಗೆ ಬೈಬಲ್‌ ಏನು ಹೇಳುತ್ತೆ? ಉದಾಹರಣೆಗೆ ಬಾಳನ ಆರಾಧನೆ ಮಾಡುತ್ತಿದ್ದ ಶೆಕೆಮಿನ ಜನ “ದೇವರ ಆಲಯಕ್ಕೆ ಹೋಗಿ ತಿಂದು ಕುಡಿದು” ಗಿದ್ಯೋನನ ಮಗ ಅಬೀಮೆಲೆಕನಿಗೆ ಶಾಪ ಹಾಕಿದ್ರು. (ನ್ಯಾಯಸ್ಥಾಪಕರು 9:22-28) ಯೆಹೋವನ ನಿಷ್ಠಾವಂತ ಸೇವಕನೊಬ್ಬ ದ್ರಾಕ್ಷಾಮದ್ಯ ಕುಡಿದು ಅಬೀಮೆಲೆಕನಿಗೆ ಶಿಕ್ಷೆ ಕೊಡು ಅಂತ ಬಾಳನಿಗೆ ಕೇಳ್ತಾನಂತ ನಿಮಗನಿಸುತ್ತಾ? ಯೆಹೋವನ ವಿರುದ್ಧ ದಂಗೆ ಎದ್ದ ಇಸ್ರಾಯೇಲ್ಯರ ಬಗ್ಗೆ ಆಮೋಸ ಹೀಗೆ ಹೇಳ್ತಾನೆ: “ಅವರು ಸಾಲಕ್ಕೆ ಗಿರವಿ ಇಟ್ಕೊಂಡ ಬಟ್ಟೆಗಳನ್ನ ಒಂದೊಂದು ಯಜ್ಞವೇದಿಯ ಹತ್ರ ಹಾಸ್ಕೊಂಡು ಮೈಚಾಚಿ ಬಿದ್ಕೊಂಡಿರ್ತಾರೆ, ತಾವು ದಂಡಹಾಕಿ ತಗೊಂಡ ಹಣದಿಂದ ದ್ರಾಕ್ಷಾಮದ್ಯ ಖರೀದಿಸಿ ತಮ್ಮ ದೇವರುಗಳ ಆಲಯದಲ್ಲಿ ಕುಡಿತಾರೆ.” (ಆಮೋಸ 2:8) ಸತ್ಯ ಆರಾಧಕರು ದೇವರುಗಳನ್ನ ಗೌರವಿಸೋಕೆ ಪಾನ ಅರ್ಪಣೆ ಮಾಡೋದಾಗಲಿ ಅಥವಾ ಕುಡಿಯೋದಾಗಲಿ ಮಾಡ್ತಾರಂತ ನಿಮಗನಿಸುತ್ತಾ? (ಯೆರೆಮೀಯ 7:18) ಅಥವಾ ದೇವರನ್ನ ಆರಾಧಿಸೋ ಒಬ್ಬ ವ್ಯಕ್ತಿ ದ್ರಾಕ್ಷಾಮದ್ಯವನ್ನ ಮೇಲಕ್ಕೆತ್ತಿ ಇನ್ನೊಬ್ಬ ವ್ಯಕ್ತಿಯನ್ನ ಆಶೀರ್ವದಿಸು ಅಂತ ದೇವರ ಹತ್ತಿರ ಕೇಳಿಕೊಳ್ತಾನೆ ಅಂತ ನಿಮಗನಿಸುತ್ತಾ?

ಹಿಂದಿನ ಕಾಲದಲ್ಲಿ ಯೆಹೋವನ ಸೇವೆ ಮಾಡಿದವರು ಆಕಾಶದ ಕಡೆ ಕೈ ಎತ್ತಿ ಒಳ್ಳೇದಾಗಲಿ ಅಂತ ಬೇಡಿಕೊಂಡಿರುವುದು ನಿಜಾನೇ. ಅವರು ಸತ್ಯ ದೇವರಾದ ಯೆಹೋವನ ಕಡೆಗೆ ಕೈಯನ್ನು ಎತ್ತಿದ್ರು. ಸೊಲೊಮೋನನ ಬಗ್ಗೆ ನಾವು ಹೀಗೆ ಓದ್ತೀವಿ: ‘ಸೊಲೊಮೋನ ಯಜ್ಞವೇದಿ ಮುಂದೆ ನಿಂತು ಆಕಾಶದ ಕಡೆ ಕೈಗಳನ್ನ ಎತ್ತಿ . . . ಯೆಹೋವನೇ, ಇಸ್ರಾಯೇಲ್‌ ದೇವರೇ, ನಿನಗೆ ಸಮಾನನಾದ ದೇವರು ಯಾರೂ ಇಲ್ಲ. . . . ನಿನ್ನ ವಾಸಸ್ಥಳವಾದ ಆಕಾಶದಿಂದ ಅವ್ರ ಪ್ರಾರ್ಥನೆ ಕೇಳಿಸ್ಕೋ. ಅವ್ರನ್ನ ಕ್ಷಮಿಸು’ ಅಂದ. (1 ಅರಸು 8:22, 23, 30) ಅದೇ ತರ “ಎಜ್ರ . . . ಯೆಹೋವನನ್ನ ಹೊಗಳಿದ. ಆಗ ಎಲ್ಲ ಜನ ತಮ್ಮ ಕೈಗಳನ್ನ ಮೇಲಕ್ಕೆತ್ತಿ “ಆಮೆನ್‌! ಆಮೆನ್‌!” ಅಂದ್ರು. ನೆಲದ ತನಕ ಬಗ್ಗಿ ಯೆಹೋವನಿಗೆ ಅಡ್ಡಬಿದ್ದು ನಮಸ್ಕಾರ ಮಾಡಿದ್ರು.” (ನೆಹೆಮೀಯ 8:6; 1 ತಿಮೊತಿ 2:8) ಈ ನಿಷ್ಠಾವಂತ ಸೇವಕರು ಆಕಾಶದ ಕಡೆಗೆ ತಮ್ಮ ಕೈಯನ್ನ ಎತ್ತಿ ಆಶೀರ್ವಾದಕ್ಕಾಗಿ ಕೇಳಿಕೊಂಡಿದ್ದು ಯೆಹೋವನ ಹತ್ತಿರ, ಬೇರೆ ದೇವರ ಹತ್ತಿರ ಅಲ್ಲ ಅಂತ ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತೆ.—ಯೆಶಾಯ 65:11.

ಇವತ್ತು ಟೋಸ್ಟಿಂಗ್‌ ಮಾಡೋ ತುಂಬ ಜನರಿಗೆ ಅವರು ಆಶೀರ್ವಾದಕ್ಕಾಗಿ ಯಾವುದೋ ದೇವರ ಹತ್ತಿರ ಬೇಡಿಕೊಳ್ಳುತ್ತಿದ್ದಾರೆ ಅನ್ನೋ ವಿಷಯನೇ ಗೊತ್ತಿರಲ್ಲ. ಆದರೆ ಈ ತರ ಗ್ಲಾಸನ್ನ ಮೇಲಕ್ಕೆ ಎತ್ತಿ ಟೋಸ್ಟ್‌ ಯಾಕೆ ಮಾಡ್ತಾರೆ ಅಂತ ಕೇಳಿದ್ರೆ ಏನು ಉತ್ತರ ಕೊಡಬೇಕಂತನೇ ಅವರಿಗೆ ಗೊತ್ತಾಗಲ್ಲ. ಅವರಿಗೇನೊ ಗೊತ್ತಿಲ್ಲ ನಿಜ ಆದರೆ ಗೊತ್ತಿರೊ ನಾವೂ ಅವರ ಜೊತೆ ಸೇರಿಕೊಂಡು ಮಾಡ್ತೀವಿ ಅಂದ್ರೆ ಅದು ಮೂರ್ಖತನ.

ಈ ತರದ ಬೇರೆ ಎಷ್ಟೋ ವಿಷಯಗಳನ್ನ ಯೆಹೋವನ ಸಾಕ್ಷಿಗಳು ಮಾಡಲ್ಲ ಅನ್ನೋದು ನಿಮಗೆ ಈಗಾಗಲೇ ಗೊತ್ತಿದೆ. ಉದಾಹರಣೆಗೆ ಧ್ವಜ ವಂದನೆ ಮಾಡೋದು ಒಂದು ಆರಾಧನೆ ಆಗಿದೆ ಅಂತ ಎಷ್ಟೋ ಜನರಿಗೆ ಗೊತ್ತಿಲ್ಲ. ಈ ತರ ಘಟನೆಗಳು ನಡಿಯುತ್ತೆ ಅನ್ನೋ ಸೂಚನೆ ಯೆಹೋವನ ಸಾಕ್ಷಿಗಳಿಗೆ ಸಿಕ್ಕಿದರೆ ಅವರು ಆ ಜಾಗದಲ್ಲಿ ಇರಲ್ಲ. ಒಂದುವೇಳೆ ಅವರು ಅಲ್ಲಿದ್ದರೆ ಅದ್ಯಾವುದನ್ನೂ ಮಾಡಲ್ಲ ಮತ್ತು ಬೇರೆಯವರು ಮಾಡೋದಾದರೆ ಅವರನ್ನ ತಡಿಯೋದೂ ಇಲ್ಲ. ಇಂಥ ಸನ್ನಿವೇಶದಲ್ಲಿ ಬೇರೆಯವರಿಗೆ ನೋವಾಗದೆ ಇರೋ ರೀತಿಯಲ್ಲಿ ನಡ್ಕೊಳ್ತಾರೆ. ಒಂದುವೇಳೆ ಇಂಥ ಸನ್ನಿವೇಶದಿಂದ ಹೊರಗೆ ಬರೋಕೆ ಆಗದೆ ಇರೋ ಪರಿಸ್ಥಿತಿಯಲ್ಲಿ ಅವರು ಇರೋದಾದರೆ, ಖಂಡಿತವಾಗಿಯೂ ಬೈಬಲಿಗೆ ವಿರುದ್ಧವಾಗಿರೋ ಯಾವುದನ್ನೂ ಅವರು ಮಾಡಲ್ಲ. (ವಿಮೋಚನಕಾಂಡ 20:4, 5; 1 ಯೋಹಾನ 5:21) ಟೋಸ್ಟಿಂಗ್‌ ಒಂದು ಧಾರ್ಮಿಕ ಪದ್ಧತಿ ಅಂತ ಇವತ್ತು ಎಷ್ಟೋ ಜನರಿಗೆ ಗೊತ್ತಿಲ್ಲ. ಆದರೆ ಕ್ರೈಸ್ತರು ಟೋಸ್ಟಿಂಗ್‌ ಮಾಡದೆ ಇರೋದಕ್ಕೆ ಕಾರಣಗಳಿವೆ. ಯಾಕಂದ್ರೆ ಟೋಸ್ಟಿಂಗ್‌ ಒಂದು ವಿಧರ್ಮಿ ಪದ್ಧತಿಯಾಗಿದೆ. ಅಷ್ಟೇ ಅಲ್ಲ ಅದು ಆಕಾಶದ ಕಡೆ ಕೈಯನ್ನು ಎತ್ತಿ ಆಶೀರ್ವಾದಕ್ಕಾಗಿ ಬೇಡಿಕೊಳ್ಳುವುದನ್ನು ಸೂಚಿಸುತ್ತೆ.—ವಿಮೋಚನಕಾಂಡ 23:2.