ಅಧ್ಯಾಯ 13
ಸಿಹಿಸುದ್ದಿಯ ಪ್ರಚಾರಕರು ಕೋರ್ಟಿನ ಮೆಟ್ಟಿಲೇರಿದರು
1, 2. (ಎ) ಸಾರೋ ಕೆಲಸದ ಮೇಲೆ ನಿಷೇಧ ತರೋಕೆ ಧಾರ್ಮಿಕ ಮುಖಂಡರು ಏನು ಮಾಡಿದ್ರು? (ಬಿ) ಸಿಹಿಸುದ್ದಿ ಸಾರಬಾರದು ಅನ್ನೋ ನಿಯಮವನ್ನ ಅಪೊಸ್ತಲರು ಯಾಕೆ ಮುರಿದ್ರು?
ಪಂಚಾಶತ್ತಮ 33ರಲ್ಲಿ ಹೊಸ ಸಭೆ ಯೆರೂಸಲೇಮಿನಲ್ಲಿ ಆಗಷ್ಟೇ ಶುರುವಾಗಿತ್ತು. ಸಭೆನ ಆಕ್ರಮಣ ಮಾಡೋಕೆ ಇದೇ ಸರಿಯಾದ ಸಮಯ ಅಂತ ಸೈತಾನ ಅಂದ್ಕೊಳ್ತಾನೆ. ಅದಕ್ಕೆ ಅವನು ಸಾರೋ ಕೆಲಸದ ಮೇಲೆ ನಿಷೇಧ ತರೋಕೆ ಧಾರ್ಮಿಕ ಮುಖಂಡರನ್ನ ಉಪಯೋಗಿಸ್ತಾನೆ. ಆದ್ರೆ ಅಪೊಸ್ತಲರು ಧೈರ್ಯದಿಂದ ಸಾರಿದ್ರು. ಇದ್ರಿಂದಾಗಿ ತುಂಬ ಪುರುಷರು, ಸ್ತ್ರೀಯರು “ಪ್ರಭು ಮೇಲೆ ನಂಬಿಕೆ ಇಟ್ಟು ಶಿಷ್ಯರಾದ್ರು.”—ಅ. ಕಾ. 4:18, 33; 5:14.
2 ಇದನ್ನ ನೋಡಿ ವಿರೋಧಿಗಳಿಗೆ ತುಂಬ ಕೋಪ ಬಂತು. ಅವರು ಸುಮ್ಮನೆ ಕೂರಲಿಲ್ಲ, ಅಪೊಸ್ತಲರನ್ನೆಲ್ಲಾ ಜೈಲಿಗೆ ಹಾಕಿದ್ರು. ಆದ್ರೆ ರಾತ್ರಿಯಲ್ಲಿ ಯೆಹೋವನ ದೇವದೂತ ಜೈಲಿನ ಬಾಗಿಲುಗಳನ್ನ ತೆಗೆದು ಅವರನ್ನ ಹೊರಗೆ ಕರ್ಕೊಂಡು ಬರ್ತಾನೆ. ಬೆಳಗಾದಾಗ ಅಪೊಸ್ತಲರು ಮತ್ತೆ ಸೇವೆ ಮಾಡೋದನ್ನ ಶುರುಮಾಡ್ತಾರೆ. ಸಿಹಿಸುದ್ದಿ ಸಾರಬಾರದು ಅನ್ನೋ ನಿಯಮವನ್ನ ಮುರಿದಿದ್ದಕ್ಕೆ ಮತ್ತೆ ಅವರನ್ನ ಅಧಿಕಾರಿಗಳ ಮುಂದೆ ನಿಲ್ಲಿಸ್ತಾರೆ. ಆಗ ಅಪೊಸ್ತಲರು, “ನಾವು ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗಬೇಕು” ಅಂತ ಧೈರ್ಯದಿಂದ ಹೇಳ್ತಾರೆ. ಇದನ್ನ ಕೇಳಿದಾಗ ಅಧಿಕಾರಿಗಳಿಗೆ ಅಪೊಸ್ತಲರನ್ನ ‘ಸಾಯಿಸುವಷ್ಟು’ ಕೋಪ ಬರುತ್ತೆ. ಆಗ ನಿಯಮ ಪುಸ್ತಕದ ಬಗ್ಗೆ ಕಲಿಸ್ತಿದ್ದ ಗಮಲಿಯೇಲ ಅಧಿಕಾರಿಗಳನ್ನ ಎಚ್ಚರಿಸ್ತಾ: ಅದ್ರ ಬಗ್ಗೆ “ಚೆನ್ನಾಗಿ ಯೋಚನೆ ಮಾಡಿ . . . ಈಗ ಇವ್ರ ತಂಟೆಗೆ ಹೋಗಬೇಡಿ. ಅವ್ರನ್ನ ಹಾಗೇ ಬಿಟ್ಟುಬಿಡಿ” ಅಂದ. ಆಶ್ಚರ್ಯದ ವಿಷ್ಯ ಏನೆಂದ್ರೆ ಅವನು ಹೇಳಿದ್ದನ್ನ ಕೇಳಿದ ತಕ್ಷಣ ಅವರು ಅಪೊಸ್ತಲರನ್ನ ಬಿಟ್ಟುಬಿಟ್ರು. ಈಗ ಈ ನಂಬಿಗಸ್ತ ಸೇವಕರು ಏನು ಮಾಡಿದ್ರು? ಪ್ರತಿದಿನ ಮನೆಮನೆಗೆ ಹೋಗಿ ಜನ್ರಿಗೆ ಕಲಿಸ್ತಾ ಇದ್ರು. ಕ್ರಿಸ್ತನ ಬಗ್ಗೆ ಅಂದ್ರೆ ಯೇಸು ಬಗ್ಗೆ ಸಿಹಿಸುದ್ದಿಯನ್ನ ಹೇಳ್ತಾ ಇದ್ರು.—ಅ. ಕಾ. 5:17-21, 27-42; ಜ್ಞಾನೋ. 21:1, 30.
3, 4. (ಎ) ದೇವಜನರ ಮೇಲೆ ಆಕ್ರಮಣ ಮಾಡೋಕೆ ಸೈತಾನ ಯಾವ ಸಂಚನ್ನ ಉಪಯೋಗಿಸಿದ್ದಾನೆ? (ಬಿ) ಈ ಅಧ್ಯಾಯದಲ್ಲಿ ಮತ್ತು ಮುಂದಿನ ಎರಡು ಅಧ್ಯಾಯಗಳಲ್ಲಿ ನಾವು ಏನನ್ನ ಚರ್ಚಿಸ್ಲಿಕ್ಕಿದ್ದೀವಿ?
3 ಕ್ರಿಸ್ತ ಶಕ 33ರಲ್ಲಿ ಕ್ರೈಸ್ತ ಸಭೆಯ ವಿರುದ್ಧ ಮೊದಲನೇ ಕೇಸ್ ನಡಿತು, ಆದ್ರೆ ಇದೇ ಕೊನೇದಾಗಿರಲಿಲ್ಲ. (ಅ. ಕಾ. 4:5-8; 16:20; 17:6, 7) ಇವತ್ತು ಕೂಡ ಸತ್ಯ ಆರಾಧನೆಯನ್ನ ವಿರೋಧಿಸೋ ಅಧಿಕಾರಿಗಳನ್ನ ಉಪಯೋಗಿಸಿ ಸಾರೋ ಕೆಲಸದ ಮೇಲೆ ನಿಷೇಧ ಹಾಕಲಿಕ್ಕೆ ಸೈತಾನ ಪ್ರಯತ್ನಿಸ್ತಿದ್ದಾನೆ. ಈ ತರ, ವಿರೋಧಿಗಳು ದೇವಜನರ ಮೇಲೆ ತುಂಬ ಆರೋಪಗಳನ್ನ ಹಾಕಿದ್ದಾರೆ. ಅದ್ರಲ್ಲಿ ನಾವು ಜನ್ರ ಶಾಂತಿಯನ್ನ ಹಾಳು ಮಾಡ್ತೀವಿ, ಸರ್ಕಾರದ ವಿರುದ್ಧ ನಡ್ಕೊಳ್ತೀವಿ ಮತ್ತು ಸಾರೋ ಕೆಲಸ ಮಾಡೋದ್ರಿಂದ ದುಡ್ಡು ಮಾಡ್ಕೊಳ್ತೀವಿ ಅಂತೆಲ್ಲಾ ಆರೋಪ ಹಾಕ್ತಾರೆ. ಆದ್ರೆ ಈ ಆರೋಪಗಳೆಲ್ಲಾ ಸುಳ್ಳು ಅಂತ ಸಾಬೀತು ಮಾಡೋಕೆ ಕೆಲವೊಂದು ಸಲ ನಮ್ಮ ಸಹೋದರರು ಕೋರ್ಟ್ ಮೆಟ್ಟಿಲನ್ನ ಏರಿದ್ದಾರೆ. ಇದರ ಪರಿಣಾಮ ಏನಾಯ್ತು? ಎಷ್ಟೋ ವರ್ಷಗಳ ಹಿಂದೆ ನಡೆದ ಈ ಕೇಸ್‌ಗಳಿಂದ ನಮಗೆ ಏನು ಪ್ರಯೋಜನ? ‘ಅಧಿಕಾರಿಗಳ ಮುಂದೆ ಸಿಹಿಸುದ್ದಿ ಪರವಾಗಿ ಮಾತಾಡೋಕೆ, ಆ ಸುದ್ದಿ ಸಾರೋಕೆ ಕಾನೂನುಬದ್ಧ ಹಕ್ಕು ಪಡಿಯೋಕೆ’ ಸಹಾಯ ಮಾಡಿರೋ ಕೆಲವು ಕೇಸುಗಳ ಬಗ್ಗೆ ನಾವೀಗ ನೋಡೋಣ.—ಫಿಲಿ. 1:7.
4 ಸಾರೋದಕ್ಕೆ ನಮಗಿರೋ ಹಕ್ಕಿಗೋಸ್ಕರ ನಾವು ಹೇಗೆಲ್ಲಾ ಹೋರಾಡಿದ್ದೀವಿ ಅಂತ ಈ ಅಧ್ಯಾಯದಲ್ಲಿ ನೋಡೋಣ. ಮುಂದಿನ ಎರಡು ಅಧ್ಯಾಯಗಳಲ್ಲಿ ನಾವು ಲೋಕದವ್ರ ತರ ಇಲ್ಲದಿರೋಕೆ ಮತ್ತು ದೇವರ ಆಳ್ವಿಕೆಗೆ ತಕ್ಕಂತೆ ಜೀವನ ಮಾಡೋಕೆ ಕಾನೂನು ಪರವಾಗಿ ಹೇಗೆಲ್ಲಾ ಹೋರಾಡಿದ್ದೀವಿ ಅಂತನೂ ನೋಡೋಣ.
ಶಾಂತಿಯನ್ನ ಹಾಳು ಮಾಡೋರಾ ಅಥವಾ ದೇವರ ಆಳ್ವಿಕೆಗೆ ನಿಷ್ಠೆ ತೋರಿಸೋರಾ?
5. ಯೆಹೋವನ ಸಾಕ್ಷಿಗಳನ್ನ 1930ರಲ್ಲಿ ಯಾಕೆ ಅರೆಸ್ಟ್ ಮಾಡಿದ್ರು? ಮುಂದಾಳತ್ವ ವಹಿಸೋ ಸಹೋದರರು ಏನು ಮಾಡಿದ್ರು?
5 1930ರಲ್ಲಿ ಅಮೆರಿಕದಲ್ಲಿರೋ ಎಲ್ಲಾ ನಗರಗಳಲ್ಲಿ, ರಾಜ್ಯಗಳಲ್ಲಿ ಸಿಹಿಸುದ್ದಿ ಸಾರಬೇಕಂದ್ರೆ ಸಾಕ್ಷಿಗಳು ಲೀಗಲ್ ಪರ್ಮಿಟ್ ಅಥವಾ ಲೈಸೆನ್ಸ್ ತಗೋಬೇಕು ಅಂತ ಕೆಲವು ಅಧಿಕಾರಿಗಳು ಒತ್ತಾಯ ಮಾಡಿದ್ರು. ಆದ್ರೆ ನಮ್ಮ ಸಹೋದರರು ಅದನ್ನ ತಗೊಳ್ಳಿಲ್ಲ. ಯಾಕಂದ್ರೆ ಲೈಸೆನ್ಸ್ ತಗೊಂಡ್ರೆ ಅದು ರದ್ದಾಗೋ ಸಾಧ್ಯತೆ ಇತ್ತು. ಅದಕ್ಕೆ ನಮ್ಮ ಸಹೋದರರು, ಸಿಹಿಸುದ್ದಿ ಸಾರಿ ಅನ್ನೋ ಆಜ್ಞೆ ಕೊಟ್ಟಿದ್ದು ಯೇಸು. ಹಾಗಾಗಿ ಅಧಿಕಾರಿಗಳಿಗೆ ಈ ಕೆಲಸವನ್ನ ನಿಲ್ಲಿಸೋಕೆ ಯಾವುದೇ ಅಧಿಕಾರ ಇಲ್ಲ ಅಂತ ಅಂದ್ಕೊಂಡ್ರು. (ಮಾರ್ಕ 13:10) ಇದ್ರ ಪರಿಣಾಮವಾಗಿ ತುಂಬ ಸಹೋದರರನ್ನ ಅರೆಸ್ಟ್ ಮಾಡಿದ್ರು. ಅದಕ್ಕೆ ಸಂಘಟನೆಯಲ್ಲಿ ಮುಂದಾಳತ್ವ ವಹಿಸೋ ಸಹೋದರರು ಈ ವಿಷಯವನ್ನ ಕೋರ್ಟಿಗೆ ತಗೊಂಡು ಹೋಗೋಣ ಅಂತ ನಿರ್ಧರಿಸಿದ್ರು. ಅವರು ಕೋರ್ಟಲ್ಲಿ, ‘ಸಾಕ್ಷಿಗಳು ತಮ್ಮ ಧರ್ಮದ ಪ್ರಕಾರ ನಡೀಬಾರದು ಅಂತ ವಿರೋಧಿಗಳು ಒತ್ತಡ ಹಾಕಿದ್ದಾರೆ’ ಅಂತ ಆರೋಪ ಹಾಕಿದ್ರು.1938ರಲ್ಲಿ ಒಂದು ಘಟನೆ ನಡಿತು. ಅದನ್ನ ಕೋರ್ಟಿಗೆ ತಗೊಂಡು ಹೋದಾಗ ಒಂದು ಪ್ರಾಮುಖ್ಯ ನಿರ್ಧಾರ ಮಾಡಲಾಯ್ತು. ಅಲ್ಲಿ ಏನಾಯ್ತು?
6, 7. ಸಹೋದರ ಕಾಂಟ್‌ವೆಲ್ ಮತ್ತು ಅವರ ಕುಟುಂಬದವ್ರಿಗೆ ಏನಾಯ್ತು?
6 ಸಹೋದರ ನ್ಯೂಟನ್ ಕಾಂಟ್‌ವೆಲ್‌ರವರಿಗೆ 60 ವಯಸ್ಸಾಗಿತ್ತು. ಅವರ ಹೆಂಡತಿ ಎಸ್ತೆರ್. ಅವರ ಮಕ್ಕಳಾದ ಹೆನ್ರಿ, ರಸಲ್ ಮತ್ತು ಜೆಸ್ಸಿ ಇವರೆಲ್ಲಾ ವಿಶೇಷ ಪಯನೀಯರಾಗಿದ್ರು. ಏಪ್ರಿಲ್ 26, 1938 ಮಂಗಳವಾರ ಬೆಳಗ್ಗೆ ಅವರೆಲ್ಲ ನ್ಯೂ ಹೆವನ್ ನಗರಕ್ಕೆ ಹೋಗಿ ಇಡೀ ದಿನ ಸೇವೆ ಮಾಡಬೇಕು ಅಂತ ಅಂದ್ಕೊಂಡಿದ್ರು. ಅದ್ರ ಜೊತೆ ಅವರು ಸ್ವಲ್ಪ ದಿನ ಆದ್ಮೇಲೆ ಮನೆಗೆ ಬರಬಹುದು ಅಂತ ಅದಕ್ಕೂ ತಯಾರಿ ಮಾಡ್ಕೊಂಡು ಹೋಗಿದ್ರು. ಯಾಕೆ? ಇದರ ಮುಂಚೆನೂ ಅವರನ್ನ ಪೊಲೀಸರು ತುಂಬ ಸಾರಿ ಅರೆಸ್ಟ್ ಮಾಡಿದ್ರು. ಈ ಸಲನೂ ಪೊಲೀಸ್ರು ಅರೆಸ್ಟ್ ಮಾಡಬಹುದು ಅಂತ ಅವರಿಗೆ ಚೆನ್ನಾಗಿ ಗೊತ್ತಿತ್ತು. ಇಷ್ಟೆಲ್ಲಾ ಇದ್ರೂ ಸಿಹಿಸುದ್ದಿ ಸಾರೋ ಅವರ ಹುರುಪು ಒಂಚೂರು ಕಮ್ಮಿ ಆಗಿರಲಿಲ್ಲ. ಅವರು ಎರಡು ಕಾರಲ್ಲಿ ನ್ಯೂ ಹೆವನ್‌ಗೆ ಬಂದ್ರು. ಒಂದು ಕಾರನ್ನ ಸಹೋದರ ಕಾಂಟ್‌ವೆಲ್ ಓಡಿಸ್ತಾ ಇದ್ರು. ಅದ್ರಲ್ಲಿ ತುಂಬ ಪ್ರಕಾಶನಗಳು ಇದ್ವು, ಅದ್ರ ಜೊತೆಗೆ ಬೈಬಲ್ ಭಾಷಣಗಳನ್ನ ಕೇಳಿಸ್ಕೊಳ್ಳೋಕೆ ಫೋನೋಗ್ರಾಫ್ ಕೂಡ ಇತ್ತು. 22 ವರ್ಷದ ಹೆನ್ರಿ ಸೌಂಡ್ ಕಾರನ್ನ ಓಡಿಸ್ತಿದ್ದ. ಅವರು ಅಂದ್ಕೊಂಡಂಗೆ ಸ್ವಲ್ಪ ಹೊತ್ತಲ್ಲೇ ಪೊಲೀಸರು ಅವರ ಕಾರುಗಳನ್ನ ನಿಲ್ಲಿಸಿದ್ರು.
7 ಮೊದ್ಲು 18 ವರ್ಷದ ರಸಲ್‌ನ್ನ ಅರೆಸ್ಟ್ ಮಾಡಿದ್ರು. ಆಮೇಲೆ ಸಹೋದರ ಮತ್ತು ಸಹೋದರಿ ಕಾಂಟ್‌ವೆಲ್‌ನ್ನ ಅರೆಸ್ಟ್ ಮಾಡಿದ್ರು. 16 ವರ್ಷದ ಜೆಸ್ಸಿ ದೂರದಿಂದ ಅವರ ಅಪ್ಪ, ಅಮ್ಮ, ಅಣ್ಣನನ್ನ ಪೊಲೀಸರು ಹಿಡ್ಕೊಂಡು ಹೋಗೋದನ್ನ ನೋಡ್ತಾ ಇದ್ದ. ಅವನ ಅಣ್ಣನಾದ ಹೆನ್ರಿ ಬೇರೆ ಕಡೆ ಸೇವೆ ಮಾಡ್ತಿದ್ದ. ಜೆಸ್ಸಿ ಒಬ್ಬನೇ ಉಳ್ಕೊಂಡ. ಆದ್ರೂ ಅವನು ಇಬ್ಬರು ಕ್ಯಾಥೋಲಿಕ್ ಪುರುಷರಿಗೆ ಸಹೋದರ ರದರ್‌ಫರ್ಡ್ ಅವರ “ಎನಿಮೀಸ್” ಅನ್ನೋ ಭಾಷಣವನ್ನ ಪ್ಲೇ ಮಾಡ್ತಿದ್ದ. ಆ ಭಾಷಣವನ್ನ ಕೇಳಿಸ್ಕೊಂಡ ಮೇಲೆ ಆ ಪುರುಷರಿಗೆ ಜೆಸ್ಸಿಯನ್ನ ಹೊಡೆಯುವಷ್ಟು ಕೋಪ ಬಂತು. ಆದ್ರೆ ಜೆಸ್ಸಿ ಶಾಂತವಾಗಿ ಅಲ್ಲಿಂದ ತಪ್ಪಿಸಿಕೊಂಡು ಬರ್ತಾನೆ. ಆದ್ರೆ ಸ್ವಲ್ಪ ಹೊತ್ತಲ್ಲೇ ಪೊಲೀಸರ ಕೈಗೆ ಸಿಕ್ಕಿಹಾಕೊಳ್ತಾನೆ. ಪೊಲೀಸರು ಸಹೋದರಿ ಎಸ್ತೆರ್ ಮೇಲೆ ಯಾವುದೇ ಕೇಸ್ ಹಾಕ್ಲಿಲ್ಲ. ಆದ್ರೆ ಸಹೋದರ ಕಾಂಟ್‌ವೆಲ್ ಮತ್ತು ಅವರ ಮಕ್ಕಳ ಮೇಲೆ ಕೇಸ್ ಹಾಕಿದ್ರು. ಆದ್ರೆ ಅದೇ ದಿನ ಬೇಲ್ ಸಿಕ್ಕಿದ್ರಿಂದ ಅವರು ಹೊರಗೆ ಬಂದ್ರು.
8. ಜೆಸ್ಸಿ ಕಾಂಟ್‌ವೆಲ್ ಸಮಾಜದ ಶಾಂತಿ ಕೆಡಿಸ್ತಿದ್ದಾರೆ ಅಂತ ಕೋರ್ಟ್ ಯಾಕೆ ಹೇಳ್ತು?
8 ಕೆಲವು ತಿಂಗಳು ಆದ್ಮೇಲೆ ಅಂದ್ರೆ 1938ರ ಸೆಪ್ಟೆಂಬರ್ ತಿಂಗಳಲ್ಲಿ ನ್ಯೂ ಹೆವನ್‌ನಲ್ಲಿರೋ ಕೋರ್ಟಿನಲ್ಲಿ ಕಾಂಟ್‌ವೆಲ್ ಕುಟುಂಬದ ವಿಚಾರಣೆ ನಡಿತು. ನ್ಯೂಟನ್, ರಸಲ್ ಮತ್ತು ಜೆಸ್ಸಿ ಕಾನೂನಿನ ವಿರುದ್ಧವಾಗಿ ಹಣ ವಸೂಲಿ ಮಾಡ್ತಿದ್ದಾರೆ ಅಂತ ತೀರ್ಪಾಯ್ತು. ಹಾಗಾಗಿ ಅವರು ಕನೆಕ್ಟಿಕಟ್‌ನಲ್ಲಿರೋ ಸುಪ್ರೀಂ ಕೋರ್ಟಿಗೆ ಹೋಗ್ತಾರೆ. ಅಲ್ಲಿ ನ್ಯೂಟನ್ ಮತ್ತು ರಸಲ್‌ಗೆ ಬಿಡುಗಡೆ ಆಗುತ್ತೆ. ಆದ್ರೆ ಜೆಸ್ಸಿ ಸಮಾಜದ ಶಾಂತಿ ಕೆಡಿಸ್ತಿದ್ದಾನೆ ಅಂತ ಅವನ ಮೇಲೆ ತೀರ್ಪು ಆಗುತ್ತೆ. ಯಾಕಂದ್ರೆ ಆ ಕ್ಯಾಥೋಲಿಕ್ ಗಂಡಸರಿಬ್ಬರು ಇವರು ಧರ್ಮದ ವಿರುದ್ಧ ಮಾತಾಡಿದ್ದಾರೆ, ಅವಮಾನ ಮಾಡಿದ್ದಾರೆ ಅಂತ ಕೋರ್ಟಿನಲ್ಲಿ ಸಾಕ್ಷಿ ಹೇಳಿಬಿಟ್ರು. ಹಾಗಾಗಿ ನಮ್ಮ ಸಂಘಟನೆಯ ಜವಾಬ್ದಾರಿಯುತ ಸ್ಥಾನದಲ್ಲಿರೋರು ಅಮೆರಿಕದಲ್ಲಿರೋ ಸುಪ್ರೀಂ ಕೋರ್ಟಿಗೆ ಹೋಗೋಣ ಅಂತ ತೀರ್ಮಾನ ಮಾಡಿದ್ರು.
9, 10. (ಎ) ಕಾಂಟ್‌ವೆಲ್ ಕುಟುಂಬಕ್ಕೆ ಅಮೆರಿಕದ ಸುಪ್ರೀಂ ಕೋರ್ಟ್ ಏನಂತ ತೀರ್ಪು ಕೊಡ್ತು? (ಬಿ) ಆ ತೀರ್ಪಿಂದ ಇವತ್ತಿಗೂ ನಮಗೆ ಹೇಗೆ ಪ್ರಯೋಜನ ಆಗ್ತಿದೆ?
9 ಸುಪ್ರೀಂ ಕೋರ್ಟಿನಲ್ಲಿ 1940ರ ಮಾರ್ಚ್ 29ರಿಂದ ವಿಚಾರಣೆ ಶುರು ಆಯ್ತು. ಅಲ್ಲಿ ಮುಖ್ಯ ನ್ಯಾಯಾಧೀಶರಾದ ಚಾರ್ಲ್ಸ್ ಇ. ಹ್ಯೂಸ್ ಮತ್ತು ಅವರ ಜೊತೆ ಇನ್ನೂ 8 ಜನ ನ್ಯಾಯಾಧೀಶರು ಇದ್ರು. ಸಹೋದರ ಹೇಡನ್ ಕವಿಂಗ್‌ಟನ್ ನಮ್ಮ ಪರವಾಗಿ ವಾದಿಸ್ತಿದ್ರು. a ಕನೆಕ್ಟಿಕಟ್ ರಾಜ್ಯದ ವಕೀಲ ಯೆಹೋವನ ಸಾಕ್ಷಿಗಳು ತೊಂದ್ರೆ ಕೊಡೋರು ಅಂತ ವಾದಿಸ್ತಿದ್ದಾಗ ಒಬ್ಬ ನ್ಯಾಯಾಧೀಶ, “ಯೇಸು ಹೇಳಿದ್ದ ಸಂದೇಶ ಕೂಡ ಜನ್ರಿಗೆ ಇಷ್ಟ ಆಗ್ತಿರಲಿಲ್ಲವಲ್ಲಾ” ಅಂತ ಕೇಳಿದ್ರು. ಆಗ ನಮ್ಮ ವಿರುದ್ಧ ವಾದಿಸ್ತಿದ್ದ ವಕೀಲ ‘ನಾನು ಬೈಬಲಲ್ಲಿ ಓದಿದ್ದ ಪ್ರಕಾರ ಆ ಸಂದೇಶವನ್ನ ಸಾರಿದ್ದಕ್ಕೆ ಯೇಸುವಿಗೆ ಜನ್ರು ಏನು ಮಾಡಿದ್ರು ಅಂತನೂ ಬೈಬಲಿನಲ್ಲಿದೆ’ ಅಂತ ಹೇಳಿದ್ರು. ಆ ವಕೀಲ ಯೇಸುವನ್ನ ಯೆಹೋವನ ಸಾಕ್ಷಿಗಳಿಗೆ ಮತ್ತು ಆ ಕಾಲದ ಜನರನ್ನ ಕನೆಕ್ಟಿಕಟ್ ರಾಜ್ಯದ ಜನರಿಗೆ ಹೋಲಿಸಿ ಮಾತಾಡಿದ್ರು. ಹೀಗೆ ತನಗೇ ಗೊತ್ತಿಲ್ಲದೆ ಯೆಹೋವನ ಸಾಕ್ಷಿಗಳ ಪರವಾಗಿ ಮಾತಾಡಿದ್ರು. ಕೊನೆಗೆ 1940, ಮೇ 20ರಂದು ಎಲ್ಲಾ ನ್ಯಾಯಾಧೀಶರು ಸೇರಿ ಯೆಹೋವನ ಸಾಕ್ಷಿಗಳ ಪರವಾಗಿ ತೀರ್ಪು ಕೊಟ್ರು.
10 ಯೆಹೋವನ ಸಾಕ್ಷಿಗಳಿಗೆ ಈ ತೀರ್ಪು ತುಂಬ ಮುಖ್ಯವಾಗಿತ್ತು. ಯಾಕಂದ್ರೆ ಜನ್ರಿಗೆ ಅವರವರ ಹಕ್ಕನ್ನ ಪಾಲಿಸೋ ಅಧಿಕಾರ ಇದೆ. ಆ ಹಕ್ಕನ್ನ ಯಾವ ದೇಶ ಆಗಲಿ, ರಾಜ್ಯ ಆಗಲಿ, ಅಧಿಕಾರಿಯಾಲಿ ತಡಿಯೋಕಾಗಲ್ಲ ಅಂತ ಕೋರ್ಟ್ ತೀರ್ಪು ನೀಡ್ತು. ಅಷ್ಟೇ ಅಲ್ಲ ಸಹೋದರ ಜೆಸ್ಸಿ, ‘ಸಮಾಜಕ್ಕೆ ತೊಂದ್ರೆ ಕೊಡೋ ವ್ಯಕ್ತಿ ಅಲ್ಲ ಅಂತಾನೂ ತೀರ್ಪು ಕೊಡ್ತು. ಯೆಹೋವನ ಸಾಕ್ಷಿಗಳು ಸಮಾಜಕ್ಕೆ ತೊಂದ್ರೆ ಕೊಡೋ ವ್ಯಕ್ತಿಗಳಲ್ಲ ಅಂತ ಇದ್ರಿಂದ ಸಾಬೀತಾಯ್ತು. ಇದು ನಮಗೆ ಸಿಕ್ಕಿರೋ ದೊಡ್ಡ ಜಯ ಅಲ್ವಾ? ಇದ್ರಿಂದ ಈಗ್ಲೂ ಪ್ರಯೋಜನ ಆಗ್ತಿದೆ. ವಕೀಲ ಆಗಿರೋ ನಮ್ಮ ಒಬ್ಬ ಸಹೋದರ ಹೀಗೆ ಹೇಳ್ತಾರೆ: ‘ನಮಗೆ ಎಷ್ಟು ಸ್ಯಾತಂತ್ರ್ಯ ಸಿಕ್ಕಿದೆ ಅಂದ್ರೆ ನಮ್ಮ ಮೇಲೆ ಸುಳ್ಳಾರೋಪ ಹಾಕಿ ನಮ್ಮ ಬಾಯಿ ಮುಚ್ಚಿಸೋಕೆ ಸಾಧ್ಯನೇ ಇಲ್ಲ, ನಾವೆಲ್ಲೇ ಇದ್ರೂ ಜನ್ರಿಗೆ ಸಿಹಿಸುದ್ದಿ ಸಾರ್ತಾನೇ ಇರ್ತೀವಿ.’
ದೇಶದ್ರೋಹಿಗಳಾ ಅಥವಾ ಸತ್ಯದ ಬಗ್ಗೆ ಸಾರೋರಾ?
11. ಕೆನಡದ ಸಹೋದರರು ಯಾವ ಅಭಿಯಾನ ಮಾಡಿದ್ರು? ಯಾಕೆ?
11 ಕೆನಡದಲ್ಲಿ 1940ರಿಂದ 1946ರ ತನಕ ಯೆಹೋವನ ಸಾಕ್ಷಿಗಳಿಗೆ ತುಂಬ ವಿರೋಧ ಇತ್ತು. ನಮಗೆ ಸಿಹಿಸುದ್ದಿ ಸಾರೋಕೆ ಸ್ವಾತಂತ್ರ್ಯ ಇದ್ರೂ ಸರಕಾರದವ್ರು ಅನುಮತಿ ಕೊಡ್ತಿಲ್ಲ ಅಂತ ತಿಳಿಸೋಕೆ ಸಾಕ್ಷಿಗಳು 1946ರಲ್ಲಿ ಒಂದು ಅಭಿಯಾನ ಮಾಡಿದ್ರು. ಆ ಅಭಿಯಾನ 16 ದಿನಗಳ ತನಕ ನಡಿತು. ಆ ಅಭಿಯಾನಕ್ಕಾಗಿ ದೇವರು ಮತ್ತು ಕ್ರಿಸ್ತನಿಗಾಗಿ ಹಾಗೂ ಸ್ವಾತಂತ್ರ್ಯಕ್ಕಾಗಿ ಕ್ವಿಬೆಕ್‌ನ ಉತ್ಕಟ ದ್ವೇಷವು ಇಡೀ ಕೆನಡಕ್ಕೆ ನಾಚಿಕೆಗೇಡು (ಇಂಗ್ಲಿಷ್) ಅನ್ನೋ ಟ್ರಾಕ್ಟನ್ನ ಬಳಿಸಿದ್ರು. ಆ ಟ್ರಾಕ್ಟ್‌ನಲ್ಲಿ 4 ಪುಟಗಳಿತ್ತು. ಅದ್ರಲ್ಲಿ ಸಾಕ್ಷಿಗಳ ವಿರುದ್ಧ ಜನ್ರು ದಂಗೆ ಏಳೋ ತರ ಪಾದ್ರಿಗಳು ಏನು ಮಾಡಿದ್ರು, ಪೊಲೀಸ್ರು ಮತ್ತು ಕ್ವಿಬೆಕ್‌ನಲ್ಲಿ ಜನ್ರ ಗುಂಪು ಸೇರ್ಕೊಂಡು ಸಾಕ್ಷಿಗಳಿಗೆ ಸ್ವಲ್ಪನೂ ಕರುಣೆ ತೋರಿಸದೆ ಹೇಗೆ ಹೊಡೆದ್ರು ಅಂತ ಇತ್ತು. “ಯೆಹೋವನ ಸಾಕ್ಷಿಗಳು ಮಾಡದಿರೋ ತಪ್ಪಿಗೆ ಅವರನ್ನ ಅರೆಸ್ಟ್ ಮಾಡ್ತಿದ್ದಾರೆ” ಅಂತ ಅದ್ರಲ್ಲಿತ್ತು. “ಯೆಹೋವನ ಸಾಕ್ಷಿಗಳ ಮೇಲೆ ಗ್ರೇಟರ್ ಮಾಂಟ್ರಿಯಲ್‌ನಲ್ಲಿ ಈ ತರ 800 ಕೇಸ್ ಇದೆ” ಅಂತನೂ ಆ ಟ್ರಾಕ್ಟ್‌ನಲ್ಲಿ ಇತ್ತು.
12. (ಎ) ಅಭಿಯಾನ ಮಾಡಿದಾಗ ವಿರೋಧಿಗಳು ಹೇಗೆ ಪ್ರತಿಕ್ರಿಯಿಸಿದ್ರು? (ಬಿ) ನಮ್ಮ ಸಹೋದರರ ಮೇಲೆ ಯಾವ ಆರೋಪ ಹಾಕಿದ್ರು? (ಪಾದಟಿಪ್ಪಣಿ ನೋಡಿ.)
12 ಕ್ವಿಬೆಕ್‌ನ ಮುಖ್ಯಾಧಿಕಾರಿ ಮಾರಿಸ್ ಡ್ಯೂಪ್ಲೆಸಿ ರೋಮನ್ ಕ್ಯಾಥೋಲಿಕರ ಜೊತೆ ಕೈ ಮಿಲಾಯಿಸಿದ. ಅವನಿಗೆ ಸಾಕ್ಷಿಗಳ ಬಗ್ಗೆ ಆ ಟ್ರಾಕ್ಟಲ್ಲಿ ಇದ್ದ ವಿಷ್ಯ ಇಷ್ಟ ಆಗಲಿಲ್ಲ. ಅದಕ್ಕೆ ಅವನು ಸಾಕ್ಷಿಗಳ ಜೊತೆ ಯುದ್ದಕ್ಕೇ ಇಳಿದುಬಿಟ್ಟ. ಸಾಕ್ಷಿಗಳಿಗೆ ಸಾಸಿವೆ ಕಾಳಷ್ಟು ದಯೆ ತೋರಿಸಬಾರದು ಅಂತ ಹೇಳ್ದ. ಇದ್ರಿಂದಾಗಿ ಅವರ ಮೇಲಿನ ಕೇಸು 800ರಿಂದ ಒಂದೇ ಸಾರಿ 1,600ಕ್ಕೆ ಏರಿತು. ಇದ್ರ ಬಗ್ಗೆ ಒಬ್ಬ ಪಯನೀಯರ್ ಸಿಸ್ಟರ್, “ಪೊಲೀಸ್ರು ನಮ್ಮನ್ನ ಎಷ್ಟು ಸಾರಿ ಅರೆಸ್ಟ್ ಮಾಡಿದ್ರು ಅಂತ ಲೆಕ್ಕ ಮಾಡೋದನ್ನೇ ಬಿಟ್ಟುಬಿಟ್ವಿ” ಅಂತ ಹೇಳಿದ್ರು. ಈ ಟ್ರಾಕ್ಟನ್ನ ಹಂಚ್ತಾ ಇದ್ದ ಸಾಕ್ಷಿಗಳನ್ನ “ದೇಶದ್ರೋಹಿಗಳು” ಅಂತ ಹೇಳಿ ಅರೆಸ್ಟ್ ಮಾಡಿದ್ರು. b
13. ಮೊದಲು ಯಾರ ಮೇಲೆ ದೇಶದ್ರೋಹಿಗಳು ಅನ್ನೋ ಆರೋಪ ಹಾಕಿದ್ರು? ಕೋರ್ಟ್ ಯಾವ ತೀರ್ಪು ಕೊಡ್ತು?
13 ಸಹೋದರ ಎಮೀ ಬೂಶೆ ಮತ್ತು ಅವರ ಹೆಣ್ಣು ಮಕ್ಕಳ ಮೇಲೆ ಮೊದಲನೇ ಸಲ ದೇಶದ್ರೋಹದ ಆರೋಪ ಹಾಕಿದ್ರು. ಅವರ ಮೊದಲನೇ ಮಗಳ ಹೆಸರು ಗಿಜೆ಼ಲ್ ಅವಳಿಗೆ 18 ವರ್ಷ, ಎರಡನೇಯವಳ ಹೆಸರು ಲುಸೀಲ್ ಅವಳಿಗೆ 11 ವರ್ಷ. ಅವರು ಕ್ವಿಬೆಕ್‌ನ ಉತ್ಕಟ ದ್ವೇಷ ಅನ್ನೋ ಟ್ರಾಕ್ಟ್‌ನ್ನ ತಮ್ಮ ಹೊಲದ ಪಕ್ಕದಲ್ಲಿದ್ದ ಬೆಟ್ಟದ ಪ್ರದೇಶದಲ್ಲಿ ಹಂಚ್ತಾ ಇದ್ರು. ಈ ಬೆಟ್ಟಪ್ರದೇಶ ಕ್ವಿಬೆಕ್‌ನ ದಕ್ಷಿಣ ದಿಕ್ಕಲ್ಲಿತ್ತು. ಇವರು ಸಮಾಜಕ್ಕೆ ತೊಂದ್ರೆ ಕೊಡೋರು ಅಂತ ಯಾರೂ ಹೇಳಲ್ಲ. ಯಾಕಂದ್ರೆ ಸಹೋದರ ಬೂಶೆ ತುಂಬ ಒಳ್ಳೆಯವ್ರು. ಎಲ್ಲರ ಜೊತೆ ತಗ್ಗಿಬಗ್ಗಿ ನಡ್ಕೊಳ್ತಿದ್ರು, ತಮ್ಮ ಪಾಡಿಗೆ ತಾವು ಹೊಲದಲ್ಲಿ ಕೆಲಸ ಮಾಡ್ತಿದ್ರು. ಯಾವಾಗ್ಲೋ ಒಮ್ಮೆ, ತಮ್ಮ ಕುದುರೆ ಗಾಡಿಯಲ್ಲಿ ಪಟ್ಟಣಕ್ಕೆ ಹೋಗಿ ಬರ್ತಿದ್ರು. ಹೀಗಿದ್ರೂ ಆ ಟ್ರಾಕ್ಟ್‌ನಲ್ಲಿ ಹೇಳಿದ ತರಾನೇ ಅವರ ಕುಟುಂಬಕ್ಕೆ ಜನರು ತೊಂದ್ರೆ ಕೊಡ್ತಿದ್ರು. ಕೋರ್ಟಿನಲ್ಲಿ ಅವರನ್ನ ವಿಚಾರಣೆ ಮಾಡ್ತಿದ್ದ ನ್ಯಾಯಾಧೀಶನಿಗೆ ಯೆಹೋವನ ಸಾಕ್ಷಿಗಳನ್ನ ಕಂಡ್ರೆ ಆಗ್ತಿರ್ಲಿಲ್ಲ. ಹಾಗಾಗಿ ಬೂಶೆ ಮತ್ತು ಅವರ ಕುಟುಂಬದವ್ರು ತಪ್ಪು ಮಾಡಿಲ್ಲ ಅನ್ನೋದಕ್ಕೆ ಎಷ್ಟೇ ಆಧಾರ ಸಿಕ್ಕಿದ್ರೂ, ಅದ್ಯಾವುದಕ್ಕೂ ಆ ನ್ಯಾಯಾಧೀಶ ಗಮನ ಕೊಡ್ತಿರಲಿಲ್ಲ. ಅವರ ವಿರುದ್ಧ ವಾದಿಸ್ತಿದ್ದ ವಕೀಲ ಏನೇ ಹೇಳಿದ್ರೂ ಅದಕ್ಕೆಲ್ಲಾ ತಲೆ ಆಡಿಸ್ತಿದ್ರು. ಕೊನೆಗೆ ಆ ನ್ಯಾಯಾಧೀಶ ಬೂಶೆ ಮತ್ತು ಅವರ ಇಬ್ಬರು ಮಕ್ಕಳು ಈ ಟ್ರಾಕ್ಟ್‌ನ್ನ ಬಳಸಿ ಜನರಲ್ಲಿ ದ್ವೇಷ ಹುಟ್ಟಿಸ್ತಿದ್ದಾರೆ. ಹೀಗೆ ಅವರು ದೇಶದ್ರೋಹದ ಕೆಲಸ ಮಾಡ್ತಿದ್ದಾರೆ ಅಂತ ತೀರ್ಪು ಕೊಟ್ರು. ಇನ್ನೊಂದು ಮಾತಲ್ಲಿ ಸತ್ಯ ಹೇಳೋದೇ ದೊಡ್ಡ ತಪ್ಪು ಅಂತ ಹೇಳಿದಂಗಿತ್ತು. ಹೀಗೆ ಸಹೋದರ ಬೂಶೆ ಮತ್ತೆ ಗಿಜೆ಼ಲ್‌ಗೆ ದೇಶದ್ರೋಹಿಗಳು ಅನ್ನೋ ಪಟ್ಟ ಬಂತು. ಅವರ ಚಿಕ್ಕ ಮಗಳು ಎರಡು ದಿನ ಜೈಲಿನಲ್ಲಿ ಇರಬೇಕಾಯ್ತು. ಹಾಗಾಗಿ ಸಹೋದರರು ಅವರ ಕೇಸನ್ನ ಕೆನಡದ ಸುಪ್ರೀಂ ಕೋರ್ಟ್‌ಲ್ಲಿ ಅಪೀಲು ಮಾಡಿದ್ರು. ಕೋರ್ಟ್ ಆ ಕೇಸನ್ನ ವಿಚಾರಣೆ ಮಾಡೋಕೆ ಒಪ್ಪಿಕೊಳ್ತು.
14. ವಿರೋಧ, ಹಿಂಸೆ ಇದ್ದಾಗಲೂ ಕ್ವಿಬೆಕ್‌ನಲ್ಲಿರೋ ಸಹೋದರರು ಏನು ಮಾಡಿದ್ರು?
14 ಕ್ವಿಬೆಕ್‌ನಲ್ಲಿ ಈ ರೀತಿ ಯೆಹೋವನ ಸಾಕ್ಷಿಗಳ ಮೇಲೆ ಒಂದರ ಮೇಲೊಂದು ವಿರೋಧ ಹಿಂಸೆ ಬರ್ತಾ ಇತ್ತು. ಆದ್ರೂ ಅವರು ಹೆದರದೆ ಸಿಹಿಸುದ್ದಿ ಸಾರ್ತಾನೇ ಇದ್ರು. ಅದಕ್ಕೆ ಒಳ್ಳೇ ಪ್ರತಿಫಲನೂ ಸಿಗ್ತು. 1946ರಲ್ಲಿ 300 ಪ್ರಚಾರಕರಿದ್ರು. ನಾಲ್ಕು ವರ್ಷದಲ್ಲಿ ಅದು 1000ಕ್ಕೆ ಏರಿತು. c
15, 16. (ಎ) ಕೆನಡದ ಸುಪ್ರೀಂ ಕೋರ್ಟ್ ಬೂಶೆ ಕುಟುಂಬಕ್ಕೆ ಯಾವ ತೀರ್ಪು ಕೊಡ್ತು? (ಬಿ) ಅವರಿಗೆ ಸಿಕ್ಕ ಜಯ ಸಹೋದರರ ಮತ್ತು ಇನ್ನಿತರರ ಮೇಲೆ ಹೇಗೆ ಪ್ರಭಾವ ಬೀರಿತು?
15 ಕೆನಡದ ಸುಪ್ರೀಂ ಕೋರ್ಟ್‌ನಲ್ಲಿ 1950ರ ಜೂನ್ ತಿಂಗಳಲ್ಲಿ ಸಹೋದರ ಬೂಶೆಯವರ ಕೇಸ್ ವಿಚಾರಣೆ ನಡಿತು. ಅದನ್ನ 9 ನ್ಯಾಯಾಧೀಶರು ವಿಚಾರಣೆ ಮಾಡಿದ್ರು. ಆರು ತಿಂಗಳ ನಂತರ ಅಂದ್ರೆ 1950ರ ಡಿಸೆಂಬರ್ 18ಕ್ಕೆ ಕೋರ್ಟ್ ನಮ್ಮ ಪರವಾಗಿ ತೀರ್ಪು ಕೊಡ್ತು. ನಮ್ಮ ಪರವಾಗಿ ವಾದಿಸಿದ ವಕೀಲ ಗ್ಲೆನ್ ಹೌ, ‘ಸಹೋದರ ಬೂಶೆ ಸಾರಿದ್ದು ಅಪರಾಧ ಅಲ್ಲ. ಅವರು ಜನರನ್ನ ದಂಗೆ ಏಳಕ್ಕಾಗ್ಲಿ, ಹಿಂಸೆ ಮಾಡಕ್ಕಾಗ್ಲಿ ಪ್ರೇರಿಸಿಲ್ಲ ಅಂತ ಕೋರ್ಟ್ ಹೇಳ್ತು’ ಅಂದ್ರು. “ಆ ಟ್ರಾಕ್ಟ್‌ನಲ್ಲಿ ಕಾನೂನಿಗೆ ವಿರುದ್ಧವಾದ ಯಾವ ವಿಷ್ಯನೂ ಇರಲಿಲ್ಲ. ಅಷ್ಟೇ ಅಲ್ಲ ಅದ್ರಲ್ಲಿರೋ ವಿಷ್ಯ ಬೇರೆಯವ್ರಿಗೆ ಹೇಳೋ ಸ್ವಾತಂತ್ರ್ಯ ಯೆಹೋವನ ಸಾಕ್ಷಿಗಳಿಗೆ ಇದೆ. ಈ ಕೇಸಲ್ಲಿ ಯೆಹೋವ ಜಯ ಕೊಟ್ಟಿದ್ದನ್ನ ಕಣ್ಣಾರೆ ನೋಡಕ್ಕಾಯ್ತು” ಅಂತನೂ ಆ ಸಹೋದರ ಗ್ಲೆನ್ ಹೌ ಹೇಳಿದ್ರು. d
16 ಸುಪ್ರೀಂ ಕೋರ್ಟ್ ಕೊಟ್ಟ ಈ ತೀರ್ಪು ನಮಗೆ ಸಿಕ್ಕ ದೊಡ್ಡ ಜಯ ಅಂತನೇ ಹೇಳಬಹುದು. ಯಾಕಂದ್ರೆ ಇದ್ರಿಂದ ಯೆಹೋವನ ಸಾಕ್ಷಿಗಳು ದೇಶದ್ರೋಹಿಗಳು ಅಂತಿದ್ದ 122 ಕೇಸ್‌ಗಳು ಕೂಡ ರದ್ದಾಯಿತು. ಕ್ವಿಬೆಕ್‌ನ ಚರ್ಚ್ ಮತ್ತು ಅಲ್ಲಿನ ಸರ್ಕಾರ ಯೆಹೋವನ ಸಾಕ್ಷಿಗಳ ಮೇಲೆ ಮಾಡ್ತಿದ್ದ ವಿರೋಧ ಮತ್ತು ಹಿಂಸೆ ನಿಲ್ತು. ಅಷ್ಟೇ ಅಲ್ಲ ಕೆನಡದಲ್ಲಿ ಮತ್ತು ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿರೋ ಜನ್ರಿಗೆ ಸರ್ಕಾರ ಮಾಡೋ ಯಾವುದಾದ್ರೂ ವಿಷ್ಯ ಇಷ್ಟ ಆಗ್ಲಿಲ್ಲ ಅಂದ್ರೆ ಅದರ ಬಗ್ಗೆ ಮಾತಾಡೋ ಸ್ವಾತಂತ್ರ್ಯ ಸಿಕ್ತು. e
ಹಣ ಮಾಡೋರಾ? ಅಥವಾ ಸೇವೆ ಮಾಡೋರಾ?
17. ಸಾರೋದನ್ನ ತಡೆಯೋಕೆ ಕೆಲವು ಸರ್ಕಾರಗಳು ಹೇಗೆ ಪ್ರಯತ್ನ ಮಾಡ್ತಿವೆ?
17 ಒಂದನೇ ಶತಮಾನದ ಕ್ರೈಸ್ತರ ತರಾನೇ ಈಗಿರೋ ಯೆಹೋವನ ಸಾಕ್ಷಿಗಳು ಕೂಡ “ದೇವರ ಸಂದೇಶದ ವ್ಯಾಪಾರ ಮಾಡಲ್ಲ.” (2 ಕೊರಿಂಥ 2:17 ಓದಿ.) ಹಾಗಿದ್ರೂ ಕೆಲವು ಸರ್ಕಾರಗಳು ವ್ಯಾಪಾರಕ್ಕೆ ಅನ್ವಯಿಸೋ ಕಾನೂನನ್ನ ಬಳಸಿ ನಾವು ಮಾಡ್ತಿರೋ ಸೇವೆಯನ್ನ ತಡೆಯೋಕೆ ಪ್ರಯತ್ನಿಸ್ತಿವೆ. ಇಂಥ ಎರಡು ಕೇಸ್‌ಗಳ ಬಗ್ಗೆ ನಾವೀಗ ನೋಡೋಣ. “ಯೆಹೋವನ ಸಾಕ್ಷಿಗಳು ವ್ಯಾಪಾರ ಮಾಡೋರಲ್ಲ ಸೇವೆ ಮಾಡೋರು” ಅಂತ ಹೇಗೆ ಸಾಬೀತಾಯ್ತು ಅಂತ ನೋಡೋಣ.
18, 19. ಡೆನ್ಮಾರ್ಕ್‌ನಲ್ಲಿರೋ ಅಧಿಕಾರಿಗಳು ಸಾರೋ ಕೆಲಸ ನಿಲ್ಲಿಸೋಕೆ ಹೇಗೆ ಪ್ರಯತ್ನಿಸ್ತಿದ್ದಾರೆ?
18 ಡೆನ್ಮಾರ್ಕ್. ಅಕ್ಟೋಬರ್ 1, 1932ರಲ್ಲಿ ಆ ದೇಶದಲ್ಲಿ ಲೈಸೆನ್ಸ್ ಇಲ್ಲದೆ ಪುಸ್ತಕ ಮಾರಾಟ ಮಾಡಿದ್ರೆ ತಪ್ಪು ಅನ್ನೋ ಕಾನೂನನ್ನ ಜಾರಿಗೆ ತಂದ್ರು. ಆದ್ರೆ ನಮ್ಮ ಸಹೋದರರು ಲೈಸೆನ್ಸಿಗೆ ಅರ್ಜಿ ಹಾಕಿರಲಿಲ್ಲ. ಆ ಕಾನೂನು ಜಾರಿಗೆ ಬಂದ ಮಾರನೇ ದಿನ 5 ಪ್ರಚಾರಕರು ರಾಸ್ಕಿಲ್ಡೆ ಪಟ್ಟಣದಲ್ಲಿ ಸೇವೆ ಮಾಡ್ತಿದ್ರು. ಡೆನ್ಮಾರ್ಕ್ ದೇಶದ ರಾಜಧಾನಿಯಾಗಿದ್ದ ಕೋಪೆನ್‌ಹೇಗೆನ್‌ನ ಪಶ್ಚಿಮ ದಿಕ್ಕಲ್ಲಿ 30 ಕಿಲೋಮೀಟರ್ ದೂರದಲ್ಲಿ ಈ ಪಟ್ಟಣ ಇತ್ತು. ಪೂರ್ತಿ ದಿನ ಸೇವೆ ಮಾಡಿದ ಮೇಲೆ ಸಹೋದರ ಅಗಸ್ಟ್ ಲೇಮೆನ್ ಕಾಣಿಸ್ಲಿಲ್ಲ. ಲೈಸೆನ್ಸ್ ಇಲ್ಲದೆ ಪುಸ್ತಕ ಮಾರಿದ್ರು ಅಂತ ಪೊಲೀಸರು ಅವರನ್ನ ಅರೆಸ್ಟ್ ಮಾಡಿದ್ರು.
19 ಡಿಸೆಂಬರ್ 19, 1932ರಂದು ಅಗಸ್ಟ್ ಲೇಮೆನ್‌ರವರನ್ನ ಕೋರ್ಟಿಗೆ ಹಾಜರು ಮಾಡಿದ್ರು. ‘ನಾನು ಬೈಬಲ್ ಆಧಾರಿತ ಪ್ರಕಾಶನಗಳನ್ನ ಜನ್ರಿಗೆ ಕೊಡ್ತಿದ್ದೆ ನಿಜ. ಆದ್ರೆ ಅದನ್ನ ಮಾರಾಟ ಮಾಡ್ತಿರಲಿಲ್ಲ’ ಅಂತ ಸಹೋದರ ಲೇಮೆನ್ ಹೇಳಿದ್ರು. ಇದನ್ನ ಕೋರ್ಟ್ ಒಪ್ಪಿಕೊಂಡು ಹೀಗೆ ಹೇಳ್ತು, “ಪ್ರತಿವಾದಿ . . . ಪುಸ್ತಕಗಳನ್ನ ಜನ್ರಿಗೆ ಕೊಡ್ತಾ ಇದ್ದಿದ್ರಿಂದ ಯಾವುದೇ ಹಣ ಲಾಭ ಸಿಗ್ತಾ ಇರಲಿಲ್ಲ, ಅವರು ತಮ್ಮ ಕೈಯಿಂದ ದುಡ್ಡು ಹಾಕಿ ಈ ಕೆಲಸ ಮಾಡ್ತಿದ್ರು. ಅಷ್ಟೇ ಅಲ್ಲ ತಮ್ಮ ಹೊಟ್ಟೆಪಾಡಿಗಾಗಿ ಅವರು ಬೇರೆ ಕೆಲಸ ಮಾಡ್ತಿದ್ದಾರೆ.” ಕೋರ್ಟ್ ಯೆಹೋವನ ಸಾಕ್ಷಿಗಳ ಪರ ವಹಿಸ್ತು. ಸಹೋದರ ಲೇಮೆನ್ ಮಾಡ್ತಾ ಇದ್ದಿದ್ದು “ಮಾರಾಟ ಅಲ್ಲ” ಅಂತ ಹೇಳಿ ಅವರ ಪರವಾಗಿ ತೀರ್ಪು ಕೊಡ್ತು. ಆದರೆ ದೇವಜನ್ರ ವಿರೋಧಿಗಳು ಇಡೀ ದೇಶದಲ್ಲಿ ಸಾರೋದನ್ನ ನಿಲ್ಲಿಸಬೇಕು ಅಂತ ಹಠ ಹಿಡಿದ್ರು. (ಕೀರ್ತ. 94:20) ಹಾಗಾಗಿ ಸರ್ಕಾರಿ ವಕೀಲ ಆ ಕೇಸನ್ನ ಸುಪ್ರೀಂ ಕೋರ್ಟಿಗೆ ತಗೊಂಡು ಹೋದ್ರು. ಆಗ ಸಹೋದರರು ಏನು ಮಾಡಿದ್ರು?
20. ಡೆನ್ಮಾರ್ಕ್‌ನಲ್ಲಿರೋ ಸುಪ್ರೀಂ ಕೋರ್ಟ್ ಯಾವ ತೀರ್ಪು ಕೊಡ್ತು? ನಮ್ಮ ಸಹೋದರರು ಹೇಗೆ ಪ್ರತಿಕ್ರಿಯಿಸಿದ್ರು?
20 ಸುಪ್ರೀಂ ಕೋರ್ಟಿಂದ ತೀರ್ಪು ಬರೋಕೆ ಇನ್ನೇನು ಒಂದು ವಾರ ಇತ್ತು. ಡೆನ್ಮಾರ್ಕ್‌ನಲ್ಲಿ ಆ ವಾರ ಸಹೋದರರು ತುಂಬ ಹುರುಪಿಂದ, ಜಾಸ್ತಿ ಸಿಹಿಸುದ್ದಿ ಸಾರಿದ್ರು. 1933, ಅಕ್ಟೋಬರ್ 3ರಂದು ಸುಪ್ರೀಂ ಕೋರ್ಟ್ ತೀರ್ಪು ಕೊಡ್ತು. ಈ ಮುಂಚೆ ತೀರ್ಪು ಕೊಟ್ಟ ಪ್ರಕಾರನೇ ಅಗಸ್ಟ್ ಲೇಮೆನ್ ಕಾನೂನು ಮೀರಿಲ್ಲ ಅಂತ ತೀರ್ಪಾಯ್ತು. ಇದ್ರಿಂದಾಗಿ ಯೆಹೋವನ ಸಾಕ್ಷಿಗಳು ಯಾವುದೇ ಭಯ ಇಲ್ಲದೆ ಸಿಹಿಸುದ್ದಿ ಸಾರೋ ಕೆಲಸ ಮುಂದುವರಿಸೋಕಾಯ್ತು. ಈ ತೀರ್ಪಿಂದ ಸಹೋದರರಿಗೆ ತುಂಬ ಖುಷಿಯಾಯ್ತು. ಅವರು ಯೆಹೋವನಿಗೆ ಋಣಿಗಳಾಗಿದ್ದೀವಿ ಅಂತ ತೋರಿಸೋಕೆ ಇನ್ನೂ ಜಾಸ್ತಿ ಸೇವೆ ಮಾಡಿದ್ರು. ಈ ತೀರ್ಪು ಬಂದ ಮೇಲೆ ಡೆನ್ಮಾರ್ಕ್‌ನಲ್ಲಿ ಸಹೋದರರು ಸರ್ಕಾರದ ಅಡೆತಡೆ ಇಲ್ಲದೆ ಸೇವೆ ಮಾಡ್ತಿದ್ದಾರೆ.
21, 22. ಸಹೋದರ ಮಾರ್ಡಕ್‌ರವರಿಗೆ ಅಮೆರಿಕದ ಸುಪ್ರೀಂ ಕೋರ್ಟ್ ಯಾವ ತೀರ್ಪು ಕೊಡ್ತು?
21 ಅಮೆರಿಕ. 1940, ಫೆಬ್ರವರಿ 25 ಭಾನುವಾರದಂದು ರಾಬರ್ಟ್ ಮಾರ್ಡಕ್ ಅನ್ನೋ ಪಯನೀಯರ್ ಮತ್ತು ಅವರ ಜೊತೆ ಇನ್ನೂ 7 ಸಹೋದರರು ಸೇವೆ ಮಾಡ್ತಿದ್ರು. ಅವರು ಪೆನ್ಸಿಲ್ವೇನಿಯ ರಾಜ್ಯದ ಪಿಟ್ಸ್‌ಬರ್ಗ್ ಹತ್ರ ಇರೋ ಜನೆಟ್ ಅನ್ನೋ ನಗರದಲ್ಲಿ ಸಿಹಿಸುದ್ದಿ ಸಾರುತ್ತಿದ್ರು. ಆಗ ಲೈಸೆನ್ಸ್ ಇಲ್ಲದೆ ಪುಸ್ತಕ ಮಾರ್ತಿದ್ದಾರೆ ಅಂತ ಅರೆಸ್ಟ್ ಮಾಡಿ ಅವರ ಮೇಲೆ ಕೇಸ್ ಹಾಕಿದ್ರು. ಅದಕ್ಕೆ ಸಹೋದರರು ಸುಪ್ರೀಂ ಕೋರ್ಟಿಗೆ ಅಪೀಲು ಮಾಡಿದ್ರು. ಆ ಕೇಸಿನ ವಿಚಾರಣೆ ಮಾಡೋಕೆ ಕೋರ್ಟ್ ಒಪ್ಪಿಕೊಳ್ತು.
22 ಮೇ 3, 1943ರಲ್ಲಿ ಸುಪ್ರೀಂ ಕೋರ್ಟ್ ಯೆಹೋವನ ಸಾಕ್ಷಿಗಳ ಪರವಾಗಿ ತೀರ್ಪು ಕೊಡ್ತು. ಯೆಹೋವನ ಸಾಕ್ಷಿಗಳ ಹತ್ರ ಲೈಸೆನ್ಸ್ ತಗೊಬೇಕು ಅಂತ ಹೇಳೋದು ತಪ್ಪು. ಯಾಕಂದ್ರೆ “ಸಂವಿಧಾನದಲ್ಲಿ ಸ್ವಾತಂತ್ರ್ಯ ಕೊಟ್ಟಿರೋ ವಿಷ್ಯಕ್ಕೆ ನಾವು ದುಡ್ಡು ಕೇಳಿದ ಹಾಗಿರುತ್ತೆ” ಅಂತ ಕೋರ್ಟ್ ಹೇಳ್ತು. ಹಾಗಾಗಿ ಲೈಸೆನ್ಸ್ ತಗೊಳಿ ಅಂತ ನಗರದಲ್ಲಿ ಮಾಡಿದ ಕಾನೂನನ್ನ ಕೋರ್ಟ್ ರದ್ದು ಮಾಡ್ತು. ಯಾಕಂದ್ರೆ ಈ ಕಾನೂನು “ತಮ್ಮ ಪುಸ್ತಕಗಳನ್ನ ಪ್ರಿಂಟ್ ಮಾಡಕ್ಕೆ ಮತ್ತು ಧರ್ಮವನ್ನ ಪಾಲಿಸಕ್ಕೆ ತಡೀತಿದೆ” ಅಂತ ಕೋರ್ಟ್ ಹೇಳ್ತು. ಆ ಕೋರ್ಟಿನ ಹೆಚ್ಚಿನ ನ್ಯಾಯಾಧೀಶರ ಅಭಿಪ್ರಾಯ ತಿಳಿಸ್ತಾ ನ್ಯಾಯಾಧೀಶ ವಿಲ್ಯಮ್ ಒ. ಡಗ್ಲಸ್ ಹೀಗೆ ಹೇಳ್ತಾರೆ: “ಯೆಹೋವನ ಸಾಕ್ಷಿಗಳು ಪುಸ್ತಕಗಳನ್ನ ಜನರಿಗೆ ಹಂಚೋದಷ್ಟೇ ಅಲ್ಲ ಸಿಹಿಸುದ್ದಿನೂ ಸಾರ್ತಿದ್ದಾರೆ.” ‘ಚರ್ಚಲ್ಲಿ ನಡೆಯೋ ಆರಾಧನೆಗೆ, ಅಲ್ಲಿನ ವೇದಿಕೆಯಿಂದ ಕೊಡೋ ಭಾಷಣಕ್ಕೆ ನಾವೆಷ್ಟು ಗೌರವ ಕೊಡ್ತೀವೋ, ಅಷ್ಟೇ ಗೌರವವನ್ನ ಯೆಹೋವನ ಸಾಕ್ಷಿಗಳ ಕೆಲಸಕ್ಕೂ ಕೊಡಬೇಕು’ ಅಂತನೂ ಅವರು ಹೇಳಿದ್ರು.
23. 1943ರಲ್ಲಿ ನಮಗೆ ಸಿಕ್ಕಿರೋ ಜಯ ಇವತ್ತಿಗೂ ಹೇಗೆ ಸಹಾಯ ಮಾಡ್ತಿವೆ?
23 ಸುಪ್ರೀಂ ಕೋರ್ಟ್ ಕೊಟ್ಟಿರೋ ಈ ತೀರ್ಪು ದೇವಜನರಿಗೆ ಸಿಕ್ಕ ದೊಡ್ಡ ಜಯ. ಯಾಕಂದ್ರೆ ಇದ್ರಿಂದಾಗಿ ನಾವು ಹಣಕ್ಕಾಗಿ ಸಿಹಿಸುದ್ದಿ ಸಾರ್ತಿಲ್ಲ ಅಂತ ಸಾಬೀತಾಯ್ತು. 1943ರಲ್ಲಿ ಆ ತೀರ್ಪು ಬಂದ ದಿನ ಮರೆಯಲಾರದ ದಿನ. ಯಾಕಂದ್ರೆ ಅವತ್ತು 13 ಕೇಸುಗಳಲ್ಲಿ 12 ಕೇಸುಗಳನ್ನ ನಾವು ಸುಪ್ರೀಂ ಕೋರ್ಟಲ್ಲಿ ಗೆದ್ವಿ. ಅದರಲ್ಲಿ ಈ ಮಾರ್ಡಕ್ ಕೇಸ್ ಕೂಡ ಒಂದು. ಸಿಹಿಸುದ್ದಿ ಸಾರೋಕೆ ನಮಗೆ ಹಕ್ಕಿಲ್ಲ ಅಂತ ವಿರೋಧಿಗಳು ಹೇಳಿದ್ರೂ ಅವತ್ತು ಕೊಟ್ಟಿರೋ ತೀರ್ಪುಗಳು ನಮಗೆ ಇವತ್ತಿಗೂ ಸಹಾಯ ಮಾಡ್ತಿವೆ.
“ನಾವು ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗಬೇಕು”
24. ಸಿಹಿಸುದ್ದಿ ಸಾರೋಕೆ ಸರ್ಕಾರ ಅನುಮತಿ ಕೊಟ್ಟಿಲ್ಲಾಂದ್ರೆ ನಾವೇನು ಮಾಡ್ತೀವಿ?
24 ಸಿಹಿಸುದ್ದಿ ಸಾರೋಕೆ ಸರ್ಕಾರ ಅನುಮತಿ ನಮಗೆ ಕೊಟ್ರೆ ಖುಷಿಪಡ್ತೀವಿ. ಒಂದುವೇಳೆ ಕೊಟ್ಟಿಲ್ಲಾಂದ್ರೆ ಸಾರೋದನ್ನ ಮಾತ್ರ ನಿಲ್ಲಿಸಲ್ಲ. ಬೇರೆ ವಿಧಾನ ಬಳಸಿ ಸಾರ್ತೀವಿ. ಅಪೊಸ್ತಲರ ತರಾನೇ, “ನಾವು ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗಬೇಕು.” (ಅ. ಕಾ. 5:29; ಮತ್ತಾ. 28:19, 20) ಅದ್ರ ಜೊತೆಗೆ ಸರ್ಕಾರದವ್ರು ಸಾರೋ ಕೆಲಸಕ್ಕೆ ನಿಷೇಧ ಹಾಕಿದ್ರೆ ಅದನ್ನ ತೆಗಿಯಕ್ಕೂ ಕೋರ್ಟಿಗೆ ಹೋಗ್ತೀವಿ. ಅಂಥ ಎರಡು ಉದಾಹರಣೆಗಳನ್ನ ನಾವೀಗ ನೋಡೋಣ.
25, 26. ನಿಕರಾಗುವದಲ್ಲಿ ನಡೆದ ಯಾವ ಘಟನೆಗಳು ನಾವು ಕೋರ್ಟ್ ಮೆಟ್ಟಿಲು ಏರೋ ತರ ಮಾಡ್ತು? ಅದರ ಫಲಿತಾಂಶ ಏನು? ಆ ಕೇಸಿನ ತೀರ್ಪು ಏನಾಗಿತ್ತು?
25 ನಿಕರಾಗುವ. 1952, ನವೆಂಬರ್ 19ರಂದು ಸಹೋದರ ಡೋನವನ್ ಮನ್‌ಸ್ಟರ್‌ಮನ್ ಆ ದೇಶದ ರಾಜಧಾನಿ ಮನಾಗುವದಲ್ಲಿದ್ದ ಎಮಿಗ್ರೇಶನ್ ಆಫೀಸಿಗೆ ಹೋದ್ರು. ಅವರು ಮಿಷನರಿ ಮತ್ತು ಬ್ರಾಂಚ್ ಸೇವಕರಾಗಿದ್ರು. ಅವರು ಎಮಿಗ್ರೇಶನ್ ಆಫೀಸಿನ ಮುಖ್ಯಸ್ಥರಾದ ಕ್ಯಾಪ್ಟನ್ ಅರ್ನಾಲ್ಡೋ ಗಾರ್ಸಿಯಾರವರನ್ನ ಹೋಗಿ ನೋಡಬೇಕಿತ್ತು. ಆಗ ಆ ಕ್ಯಾಪ್ಟನ್ ನಮ್ಮ ಸಹೋದರ ಹತ್ರ, “ನಿಕರಾಗುವದಲ್ಲಿ ಯೆಹೋವನ ಸಾಕ್ಷಿಗಳ ಕೆಲಸಕ್ಕೆ ನಿಷೇಧ ಇದೆ. ಅವರು ತಮ್ಮ ಧರ್ಮದ ಪ್ರಚಾರ ಮಾಡಕ್ಕಾಗಲ್ಲ” ಅಂತ ಹೇಳಿದ್ರು. ಆಗ ಸಹೋದರ, “ಯಾಕೆ?” ಅಂತ ಕೇಳಿದ್ರು. ಅದಕ್ಕೆ ಆ ಕ್ಯಾಪ್ಟನ್, ಸರ್ಕಾರ ಸಾಕ್ಷಿಗಳಿಗೆ ಧರ್ಮದ ಬಗ್ಗೆ ಪ್ರಚಾರ ಮಾಡಕ್ಕೆ ಅನುಮತಿ ಕೊಟ್ಟಿಲ್ಲ, ಅವರು ಕಮ್ಯುನಿಸ್ಟರು ಅಂತ ಅವರ ಮೇಲೆ ಆರೋಪ ಇದೆ, ಅಂತ ಹೇಳಿದ್ರು. ಈ ಆರೋಪ ಹಾಕಿದ್ದು ಯಾರು? ರೋಮನ್ ಕ್ಯಾಥೋಲಿಕ್ ಪಾದ್ರಿಗಳು.
26 ತಕ್ಷಣ ಸಹೋದರ ಮನ್‌ಸ್ಟರ್‌ಮನ್ ಸರ್ಕಾರ ಮತ್ತು ಧರ್ಮದ ಇಲಾಖೆಗೆ ಮತ್ತು ಆ ದೇಶದ ಪ್ರೆಸಿಡೆಂಟ್ ಅನಾಸ್ಟಾಸಿಯೋ ಸೊಮೊಸಾ ಗಾರ್ಸಿಯಾಗೆ ಅಪೀಲು ಮಾಡಿದ್ರು. ಆದ್ರೆ ಇದ್ರಿಂದ ಏನೂ ಪ್ರಯೋಜನ ಆಗ್ಲಿಲ್ಲ. ಹಾಗಾಗಿ ಸಹೋದರರು ಕೆಲವು ಬದಲಾವಣೆ ಮಾಡ್ಕೊಂಡ್ರು. ಚಿಕ್ಕಚಿಕ್ಕ ಗುಂಪುಗಳಾಗಿ ಕೂಟಗಳಿಗೆ ಸೇರಿಬರೋಕೆ ಶುರು ಮಾಡಿದ್ರು. ಬೀದಿ ಸಾಕ್ಷಿಕಾರ್ಯ ನಿಲ್ಲಿಸಿ ಬೇರೆ ರೀತಿಯ ಸಾಕ್ಷಿಕಾರ್ಯ ಮಾಡೋಕೆ ಶುರು ಮಾಡಿದ್ರು. ಜೊತೆಗೆ ನಮ್ಮ ಕೆಲಸದ ಮೇಲಿರೋ ಬ್ಯಾನ್ ತೆಗೆಯೋಕೆ ಸುಪ್ರೀಂ ಕೋರ್ಟಿಗೆ ಅಪೀಲು ಮಾಡಿದ್ರು. ಯೆಹೋವನ ಸಾಕ್ಷಿಗಳ ಮೇಲೆ ಬ್ಯಾನ್ ಹಾಕಿದ್ರ ಬಗ್ಗೆ ಮತ್ತು ಅವರು ಕೋರ್ಟಿಗೆ ಅಪೀಲು ಮಾಡಿದ್ರ ಬಗ್ಗೆ ವಾರ್ತಾ ಪತ್ರಿಕೆ ಎಲ್ಲಾ ಕಡೆ ಸುದ್ದಿ ಹಬ್ಬಿಸ್ತು. ಸುಪ್ರೀಂ ಕೋರ್ಟಲ್ಲಿ ವಿಚಾರಣೆ ನಡೀತು. ಆಮೇಲೆ ಏನಾಯ್ತು? 1953, ಜೂನ್ 19ರಂದು ಕೋರ್ಟಿನ ಎಲ್ಲ ನ್ಯಾಯಾಧೀಶರು ಯೆಹೋವನ ಸಾಕ್ಷಿಗಳ ಪರವಾಗಿ ತೀರ್ಪು ಕೊಟ್ರು. ಸಂವಿಧಾನದಲ್ಲಿ ಮಾತಾಡೋಕೆ, ನಮ್ಮ ಮನಸ್ಸಾಕ್ಷಿ ಪ್ರಕಾರ ನಿರ್ಧಾರ ಮಾಡೋಕೆ, ಧರ್ಮದ ಬಗ್ಗೆ ಪ್ರಚಾರ ಮಾಡೋಕೆ ನಮಗೆ ಹಕ್ಕಿದೆ. ಹೀಗಿರೋದ್ರಿಂದ ಯೆಹೋವನ ಸಾಕ್ಷಿಗಳ ಮೇಲೆ ಸರ್ಕಾರ ಬ್ಯಾನ್ ಹಾಕಿರೋದ್ರಿಂದ ಅವರ ಈ ಹಕ್ಕನ್ನ ಕಿತ್ತುಕೊಂಡಿದೆ ಅಂತ ಕೋರ್ಟ್ ಹೇಳ್ತು. ಅಷ್ಟೇ ಅಲ್ಲ ಯೆಹೋವನ ಸಾಕ್ಷಿಗಳ ಜೊತೆ ಒಳ್ಳೇ ಸಂಬಂಧ ಇಟ್ಟುಕೊಳ್ಳೋಕೆ ನಿಕರಾಗುವದ ಸರ್ಕಾರಕ್ಕೆ ಕೋರ್ಟ್ ಹೇಳ್ತು.
27. ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ಕೊಟ್ಟಿದ್ದನ್ನ ನೋಡಿ ನಿಕರಾಗುವದ ಜನ್ರಿಗೆ ಯಾಕೆ ತುಂಬ ಆಶ್ಚರ್ಯ ಆಯ್ತು? ಈ ಜಯ ಯಾಕೆ ಸಿಕ್ತು ಅಂತ ಸಹೋದರರು ಅಂದ್ಕೊಂಡ್ರು?
27 ಸುಪ್ರೀಂ ಕೋರ್ಟ್ ಯೆಹೋವನ ಸಾಕ್ಷಿಗಳ ಪರವಾಗಿ ತೀರ್ಪು ಕೊಟ್ಟಿದ್ದನ್ನ ನೋಡಿ ನಿಕರಾಗುವದ ಜನ್ರಿಗೆ ತುಂಬ ಆಶ್ಚರ್ಯ ಆಯ್ತು. ಪಾದ್ರಿಗಳು ತುಂಬ ಒತ್ತಡ ಹಾಕ್ತಾರೆ ಅಂತ ಗೊತ್ತಿದ್ರಿಂದ ತೀರ್ಪು ಕೊಡೋ ತನಕ ಕೋರ್ಟ್ ಅವ್ರಿಂದ ಜಾರಿಕೊಳ್ತಿತ್ತು. ಅಷ್ಟೇ ಅಲ್ಲ ಸರ್ಕಾರಿ ಅಧಿಕಾರಿಗಳಿಗೆ ತುಂಬ ಅಧಿಕಾರ ಇದ್ದಿದ್ರಿಂದ ಕೋರ್ಟ್ ಹೆಚ್ಚಾಗಿ ಅವರ ಪರವಾಗಿಯೇ ತೀರ್ಪು ಕೊಡ್ತಿತ್ತು. ಆದ್ರೆ ಈ ಕೇಸಲ್ಲಿ ಹಾಗಾಗ್ಲಿಲ್ಲ. ಯೇಸು ತಮಗೆ ಸಹಾಯ ಮಾಡಿದ್ರಿಂದ ಮತ್ತು ಸಿಹಿಸುದ್ದಿಯನ್ನ ನಿಲ್ಲಿಸದೇ ಸಾರಿದ್ರಿಂದ ಕೇಸ್ ತಮ್ಮ ಪರವಾಗಾಯ್ತು ಅಂತ ಸಹೋದದರು ತಿಳ್ಕೊಂಡ್ರು.—ಅ. ಕಾ. 1:8.
28, 29. ಜಾಯಿರ್‌ನಲ್ಲಿ 1980ರಲ್ಲಿ ಯಾವ ಅನಿರೀಕ್ಷಿತ ಘಟನೆಗಳು ನಡಿತು?
28 ಜಾಯಿರ್. ಈಗ ಇದನ್ನ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ ಅಂತ ಕರೀತಾರೆ. 1985ರಲ್ಲಿ ಇಲ್ಲಿ 35,000 ಪ್ರಚಾರಕರಿದ್ರು. ಆಗ ದೇಶದಲ್ಲಿ ತುಂಬ ಪ್ರಗತಿಯಾಗ್ತಿತ್ತು. ಹಾಗಾಗಿ ಬ್ರಾಂಚ್ ಆಫೀಸ್ ಹೊಸ ಕಟ್ಟಡಗಳನ್ನ ಕಟ್ಟೋಕೆ ಶುರು ಮಾಡ್ತು. ಅದೇ ವರ್ಷ ಆ ದೇಶದ ರಾಜಧಾನಿಯಾದ ಕಿನ್ಶಾಸಾದಲ್ಲಿ ಒಂದು ಅಂತರಾಷ್ಟ್ರೀಯ ಅಧಿವೇಶನ ನಡೀತು. ಅದಕ್ಕೆ ಲೋಕದ ಬೇರೆಬೇರೆ ಕಡೆಗಳಿಂದ 32,000 ಯೆಹೋವನ ಸಾಕ್ಷಿಗಳು ಬಂದಿದ್ರು. ಆದ್ರೆ ಅಲ್ಲಿನ ಪರಿಸ್ಥಿತಿ ಬದಲಾಯ್ತು. ಹೇಗಂತ ಮುಂದೆ ನೋಡೋಣ.
29 ಸಹೋದರ ಮಾರ್ಸೆಲ್ ಫಿಲ್ಟೋ, ಜಾಯಿರ್‌ನಲ್ಲಿ ಮಿಷನರಿ ಸೇವೆ ಮಾಡ್ತಿದ್ರು. ಅವರು ಕೆನಡದ ಕ್ವಿಬೆಕ್‌ನವ್ರು. ಡ್ಯೂಪ್ಲೆಸಿ ಅಧಿಕಾರದಲ್ಲಿದ್ದಾಗ ಅಲ್ಲಿ ಹಿಂಸೆ ಅನುಭವಿಸಿದ್ರು. ಅವರು ಹೇಳಿದ್ದು: “1986 ಮಾರ್ಚ್ 12ರಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದ ಸಹೋದರರಿಗೆ ಒಂದು ಪತ್ರ ಬಂತು. ಆ ಪತ್ರದಲ್ಲಿ ಜಾಯಿರಿನಲ್ಲಿದ್ದ ಯೆಹೋವನ ಸಾಕ್ಷಿಗಳು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡ್ತಿದ್ದಾರೆ ಅಂತ ಇತ್ತು.” ಅಲ್ಲಿನ ಪ್ರೆಸಿಡೆಂಟ್ ಮೊಬುಟು ಸೆಸೆ ಸೆಕೋ ಈ ಪತ್ರದಲ್ಲಿ ಸೈನ್ ಮಾಡಿದ್ರು.
30. ಬ್ರಾಂಚ್ ಕಮಿಟಿ ಏನು ಯೋಚ್ನೆ ಮಾಡ್ತು? ಆಮೇಲೆ ಯಾವ ತೀರ್ಮಾನ ಮಾಡ್ತು?
30 ಇದಾದ ಮಾರನೇ ದಿನಾನೇ ಸರ್ಕಾರದ ರೇಡಿಯೊ ಸ್ಟೇಷನ್‌ಗಳಲ್ಲಿ “ಇನ್ಮುಂದೆ ಜಾಯಿರ್‌ನಲ್ಲಿ ಯೆಹೋವನ ಸಾಕ್ಷಿಗಳೇ ಇರಲ್ಲ” ಅಂತ ಪ್ರಕಟನೆ ಮಾಡಿದ್ರು. ಆ ದೇಶದಲ್ಲಿ ಯೆಹೋವನ ಸಾಕ್ಷಿಗಳಿಗೆ ತುಂಬ ಹಿಂಸೆ ಕೊಟ್ರು. ರಾಜ್ಯಸಭಾಗೃಹಗಳನ್ನ ಹಾಳುಮಾಡಿದ್ರು, ಸಹೋದರರ ವಸ್ತುಗಳನ್ನ ಕಳ್ಳತನ ಮಾಡಿದ್ರು. ಅವರನ್ನ ಅರೆಸ್ಟ್ ಮಾಡಿ ಜೈಲಿಗೆ ಹಾಕಿದ್ರು, ಹೊಡೆದ್ರು. ಮಕ್ಕಳನ್ನೂ ಬಿಡಲಿಲ್ಲ ಅವರನ್ನೂ ಜೈಲಿಗೆ ಹಾಕಿದ್ರು.1988 ಅಕ್ಟೋಬರ್ 12ರಂದು ನಮ್ಮ ಸಂಘಟನೆಗೆ ಸೇರಿದ ವಸ್ತುಗಳನ್ನ ಮತ್ತು ಆಸ್ತಿಗಳನ್ನ ಸರಕಾರ ವಶಮಾಡಿಕೊಳ್ತು. ಆ ಜಾಗವನ್ನ ಮಿಲಿಟರಿ ಜಪ್ತಿ ಮಾಡಿಕೊಳ್ತು. ಆಗ ಸಹೋದರರು ಪ್ರೆಸಿಡೆಂಟ್ ಮೊಬುಟು ಅವರಿಗೆ ಅಪೀಲ್ ಮಾಡ್ಕೊಂಡ್ರು. ಆದ್ರೆ ಅವ್ರಿಂದ ಯಾವ ಉತ್ತರನೂ ಬರ್ಲಿಲ್ಲ. ಆಗ ಬ್ರಾಂಚ್ ಕಮಿಟಿ ಉತ್ತರಕೋಸ್ಕರ ಕಾಯೋಣ್ವಾ ಅಥವಾ ಸುಪ್ರೀಂ ಕೋರ್ಟಿಗೆ ಅಪೀಲ್ ಮಾಡೋಣ್ವಾ ಅಂತ ಯೋಚನೆ ಮಾಡ್ತು. ಬ್ರಾಂಚ್ ಕಮಿಟಿಯ ಸಂಯೋಜಕ ಮತ್ತು ಮಿಷನರಿ ಆಗಿದ್ದ ಸಹೋದರ ತಿಮೊತಿ ಹೋಮ್ಸ್‌ರವರು ಹೇಳಿದ್ದು,“ನಮಗೆ ಏನು ಮಾಡಬೇಕು ಅಂತ ಗೊತ್ತಾಗ್ತಿಲ್ಲ. ಸರಿಯಾದ ತೀರ್ಮಾನ ಮಾಡೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನಿಗೆ ಬೇಡಿಕೊಂಡ್ವಿ.” ಬ್ರಾಂಚ್ ಕಮಿಟಿ ಚೆನ್ನಾಗಿ ಯೋಚನೆ ಮಾಡಿ, ಪ್ರಾರ್ಥನೆ ಮಾಡಿ ನಾವೀಗ ಕೋರ್ಟಿಗೆ ಹೋಗೋದು ಬೇಡ, ಸಹೋದರ ಸಹೋದರಿಯರನ್ನ ಚೆನ್ನಾಗಿ ನೋಡ್ಕೊಳ್ಳೋಕೆ ಮತ್ತು ಬೇರೆಬೇರೆ ರೀತಿಯಲ್ಲಿ ಸಿಹಿಸುದ್ದಿ ಸಾರೋಕೆ ಗಮನ ಕೊಡೋಣ ಅಂತ ತೀರ್ಮಾನ ಮಾಡ್ತು.
“ಈ ಕೇಸ್ ನಡಿತಿದ್ದಾಗ ಯೆಹೋವ ದೇವರು ನಮಗೆ ಹೇಗೆಲ್ಲಾ ಸಹಾಯ ಮಾಡಿದ್ರು ಅಂತ ನೋಡೋಕಾಯ್ತು”
31, 32. ಜಾಯಿರ್‌ನಲ್ಲಿರೋ ಸುಪ್ರೀಂ ಕೋರ್ಟ್ ಯಾವ ಪ್ರಾಮುಖ್ಯವಾದ ತೀರ್ಪು ಕೊಡ್ತು? ಅದ್ರಿಂದ ಸಹೋದರರಿಗೆ ಹೇಗನಿಸ್ತು?
31 ಹೀಗೆ ಸುಮಾರು ವರ್ಷ ಕಳೀತು. ಆ ದೇಶದಲ್ಲಿ ಯೆಹೋವನ ಸಾಕ್ಷಿಗಳ ಮೇಲೆ ನಡಿತಿದ್ದ ಹಿಂಸೆ ಕಮ್ಮಿಯಾಯ್ತು. ಮಾನವ ಹಕ್ಕುಗಳಿಗೆ ಜಾಸ್ತಿ ಗೌರವ ಕೊಡೋ ತರ ಆಯ್ತು. ಈಗ ನಮ್ಮ ಮೇಲೆ ಹಾಕಿದ್ದ ನಿಷೇಧ ತೆಗೆದು ಹಾಕೋಕೆ ಸುಪ್ರೀಂ ಕೋರ್ಟಿಗೆ ಅಪೀಲ್ ಮಾಡೋಣ ಅಂತ ಬ್ರಾಂಚ್ ಕಮಿಟಿ ತೀರ್ಮಾನ ಮಾಡ್ತು. ಆ ಕೇಸ್ ವಿಚಾರಣೆ ಮಾಡೋಕೆ ಕೋರ್ಟ್ ಒಪ್ಪಿಕೊಳ್ತು. 1993 ಜನವರಿ 8ಕ್ಕೆ ಕೋರ್ಟ್ ತೀರ್ಪು ಕೊಡ್ತು. ಪ್ರೆಸಿಡೆಂಟ್ ಯೆಹೋವನ ಸಾಕ್ಷಿಗಳ ಮೇಲೆ ನಿಷೇಧ ಹಾಕಿ 7 ವರ್ಷ ಆಗಿತ್ತು. ಆ ನಿಷೇಧ ಕಾನೂನಿಗೆ ವಿರುದ್ಧವಾಗಿದೆ ಅಂತ ಹೇಳಿ ಅದನ್ನ ಕೋರ್ಟ್ ತೆಗೆದುಬಿಡ್ತು. ನ್ಯಾಯಾಧೀಶರಿಗೆ ನಿಜವಾಗಿಯೂ ಧೈರ್ಯ ಬೇಕಿತ್ತು. ಯಾಕಂದ್ರೆ ತಮ್ಮ ಪ್ರಾಣಕ್ಕೆ ಅಪಾಯ ಇದ್ರೂ ಪ್ರೆಸಿಡೆಂಟ್ ಹಾಕಿದ್ದ ನಿಷೇಧನೇ ಅವರು ತೆಗೆದುಬಿಟ್ಟಿದ್ರು. ಇದರ ಬಗ್ಗೆ ಸಹೋದರ ಹೋಮ್ಸ್ “ಈ ಕೇಸ್ ನಡಿತಿದ್ದಾಗ ಯೆಹೋವ ದೇವರು ನಮಗೆ ಹೇಗೆಲ್ಲಾ ಸಹಾಯ ಮಾಡಿದ್ರು ಅಂತ ನೋಡೋಕಾಯ್ತು” ಅಂತ ಹೇಳಿದ್ರು. (ದಾನಿ. 2:21) ಈ ಕೇಸಲ್ಲಿ ನಮಗೆ ಜಯ ಸಿಕ್ಕಿದ್ರಿಂದ ಸಹೋದರರಿಗೆ ತುಂಬ ಬಲ ಸಿಕ್ತು, ಯಾವಾಗ ಮತ್ತು ಹೇಗೆ ಹೆಜ್ಜೆ ತಗೊಬೇಕು ಅಂತ ರಾಜನಾದ ಯೇಸು ನಮಗೆ ದಾರಿ ತೋರಿಸ್ತಾನೆ ಅಂತ ಅವರು ತಿಳ್ಕೊಂಡ್ರು.
32 ಕೋರ್ಟ್ ನಿಷೇಧನ ತೆಗೆದುಹಾಕಿದ್ರಿಂದ ಮಿಷನರಿಗಳನ್ನ ಕರೆಸಿಕೊಳ್ಳೋಕೆ, ಹೊಸ ಬ್ರಾಂಚ್ ಆಫೀಸ್‌ಗಳನ್ನ ಕಟ್ಟೋಕೆ, ಹೊರಗಿಂದ ಬೈಬಲ್ ಪ್ರಕಾಶನಗಳನ್ನ ತರಿಸ್ಕೊಳ್ಳೋಕೆ ಅನುಮತಿ ಸಿಕ್ತು. f ಹೀಗೆ ಯೆಹೋವ ದೇವರು ತನ್ನ ಜನರನ್ನ ಎಷ್ಟು ಚೆನ್ನಾಗಿ ನೋಡ್ಕೊಳ್ತಿದ್ದಾನೆ ಅನ್ನೋದನ್ನ ನೋಡುವಾಗ ಲೋಕದ ಎಲ್ಲ ಕಡೆ ಇರೋ ಸಹೋದರರಿಗೆ ತುಂಬ ಖುಷಿಯಾಗುತ್ತೆ.—ಯೆಶಾ. 52:10.
“ಯೆಹೋವ ನನಗೆ ಸಹಾಯ ಮಾಡ್ತಾನೆ”
33. ಈ ಕೋರ್ಟ್ ಕೇಸ್‌ಗಳಿಂದ ನಾವೇನು ಕಲಿತ್ವಿ?
33 ಯೆಹೋವನ ಸಾಕ್ಷಿಗಳಿಗೆ ಸಿಕ್ಕಿರೋ ಈ ಜಯಗಳಿಂದ ನಮಗೆ ಏನು ಗೊತ್ತಾಗುತ್ತೆ? ಯೇಸು ತಾನು ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾನೆ ಅಂತ ಗೊತ್ತಾಗುತ್ತೆ. ಅದೇನಂದ್ರೆ, “ನಿಮ್ಮ ಎಲ್ಲ ವಿರೋಧಿಗಳು ಒಟ್ಟಿಗೆ ಬಂದ್ರೂ ನಿಮ್ಮನ್ನ ಎದುರಿಸೋಕೆ, ಸೋಲಿಸೋಕೆ ಆಗದಷ್ಟು ಬುದ್ಧಿ ಮತ್ತು ಮಾತಾಡೋ ಶಕ್ತಿ ಕೊಡ್ತೀನಿ.” (ಲೂಕ 21:12-15 ಓದಿ.) ಕೆಲವೊಮ್ಮೆ ಗಮಲಿಯೇಲನ ತರ ಕೆಲವು ನ್ಯಾಯಾಧೀಶರು, ವಕೀಲರು ತನ್ನ ಸೇವಕರ ಪರವಾಗಿ ಮಾತಾಡೋ ತರ ಯೆಹೋವ ಮಾಡಿದ್ದಾನೆ. ನಮ್ಮ ವಿರೋಧಿಗಳು ಯಾವ ಆಯುಧ ಬಳಸಿದ್ರೂ ಅದ್ರಿಂದ ಜಯ ಸಾಧಿಸೋಕೆ ಆಗದಿರೋ ತರ ಯೆಹೋವ ಮಾಡಿದ್ದಾನೆ. (ಯೆಶಾಯ 54:17 ಓದಿ.) ವಿರೋಧಿಗಳು ತಲೆ ಕೆಳಗೆ ಮಾಡಿ ನಿಂತ್ರೂ ಅವ್ರಿಂದ ದೇವರ ಕೆಲಸ ನಿಲ್ಲಿಸಕ್ಕಾಗಲ್ಲ.
34. ನಮಗೆ ಸಿಕ್ಕ ಜಯ ಯಾಕೆ ಪ್ರಾಮುಖ್ಯವಾಗಿದೆ ಮತ್ತು ಅದ್ರಿಂದ ಏನು ಗೊತ್ತಾಗುತ್ತೆ? (“ ಸಾರೋ ಕೆಲಸಕ್ಕೆ ಸಹಾಯ ಮಾಡಿರೋ ಕೆಲವು ಪ್ರಾಮುಖ್ಯ ಕೋರ್ಟ್ ಕೇಸ್‌ಗಳು” ಚೌಕ ನೋಡಿ.)
34 ಯಹೋವನ ಸಾಕ್ಷಿಗಳಿಗೆ ಹಿಂದೆ ಜಯ ಸಿಕ್ಕಿದ್ರ ಬಗ್ಗೆ ಯಾಕೆ ನಾವೀಗ ಓದಬೇಕು? ಸ್ವಲ್ಪ ಯೋಚನೆ ಮಾಡಿ, ಯೆಹೋವನ ಸಾಕ್ಷಿಗಳು ಸಮಾಜದಲ್ಲಿ ತುಂಬ ಹೆಸ್ರು ಮಾಡಿರೋ ವ್ಯಕ್ತಿಗಳಲ್ಲ. ಅವರು ವೋಟ್ ಹಾಕಲ್ಲ, ರಾಜಕೀಯ ವಿಷ್ಯದಲ್ಲಿ ಯಾವುದೇ ರೀತಿ ತಲೆ ಹಾಕಲ್ಲ. ಅಷ್ಟೇ ಅಲ್ಲ ಯಾರ ಮೇಲೆ ಕೇಸ್ ಆಯ್ತೋ ಅವರಲ್ಲಿ ಹೆಚ್ಚಿನವರು “ಅಷ್ಟೇನೂ ಓದಿಲ್ಲದ ಸಾಮಾನ್ಯ ಜನ.” (ಅ. ಕಾ. 4:13) ಆದ್ರೆ ಇಂಥ ದೊಡ್ಡ ಧಾರ್ಮಿಕ ಮುಖಂಡರ ಅಥವಾ ಸರ್ಕಾರಿ ಅಧಿಕಾರಿಗಳ ವಿರುಧ್ಧ ಗೆಲ್ಲೋದು ಬರಿ ಕನಸು ಅಂತ ನಮ್ಮ ವಿರೋಧಿಗಳಿಗೆ ಅನಿಸಬಹುದು. ಆದ್ರೂ ಕೋರ್ಟ್ ಈ ವಿರೋಧಿಗಳ ಪರವಾಗಲ್ಲ ನಮ್ಮ ಪರವಾಗಿ ಮತ್ತೆಮತ್ತೆ ತೀರ್ಪು ಕೊಡ್ತಾ ಬಂತು. ನಾವು ಈ ಕೆಲಸವನ್ನ “ದೇವರ ಮುಂದೆ ಮತ್ತು ಕ್ರಿಸ್ತನ ಜೊತೆ” ಮಾಡ್ತಾ ಇರೋದ್ರಿಂದಾನೇ ನಮಗೆ ಜಯ ಸಿಕ್ತು. (2 ಕೊರಿಂ. 2:17) ಅದಕ್ಕೆ ನಾವು ಅಪೊಸ್ತಲ ಪೌಲನ ತರ “ಯೆಹೋವ ನನಗೆ ಸಹಾಯ ಮಾಡ್ತಾನೆ. ನಾನು ಹೆದ್ರಲ್ಲ” ಅಂತ ಧೈರ್ಯವಾಗಿ ಹೇಳ್ತೀವಿ.—ಇಬ್ರಿ. 13:6.
a ಕಾಂಟ್‌ವೆಲ್ v. ಕನೆಕ್ಟಿಕಟ್ ರಾಜ್ಯ. ಅಮೆರಿಕಾದಲ್ಲಿ ಯೆಹೋವನ ಸಾಕ್ಷಿಗಳ ಮೇಲೆ ಹಾಕಿದ್ದ 43 ಕೇಸ್‌ಗಳಲ್ಲಿ ಇದೇ ಮೊದಲನೇದು. ಈ ಕೇಸನ್ನ ಸಹೋದರ ಹೇಡನ್ ಕವಿಂಗ್‌ಟನ್ ಸಾಕ್ಷಿಗಳ ಪರವಾಗಿ ವಾದಿಸಿದ್ರು. ಅವರು 1978ರಲ್ಲಿ ತೀರಿಹೋದ್ರು. ಅವರ ಹೆಂಡತಿ ಡಾರ್ತಿ ಕೊನೆವರೆಗೆ ಯೆಹೋವನಿಗೆ ನಂಬಿಗಸ್ತರಾಗಿ ಸೇವೆ ಮಾಡಿದ್ದಾರೆ. ಅವರು 2015ರಲ್ಲಿ ತೀರಿಹೋದ್ರು. ಆಗ ಅವ್ರಿಗೆ 92 ವರ್ಷ.
b ಸಹೋದರರು 1606ರಲ್ಲಿ ಜಾರಿಗೆ ಬಂದ ಒಂದು ಕಾನೂನನ್ನ ಮುರಿದಿದ್ದಾರೆ ಅಂತ ಸರಕಾರ ಆರೋಪ ಹಾಕ್ತು. ಒಬ್ಬ ವ್ಯಕ್ತಿ ಜನರಲ್ಲಿ ದ್ವೇಷ ಹುಟ್ಟಿಸೋ ಮಾತುಗಳನ್ನ ಅಡಿದ್ರೆ, ಅವನು ಆಡಿದ ಮಾತು ಸತ್ಯ ಆಗಿದ್ರೂ ಅವನು ಅಪರಾಧಿ ಆಗ್ತಾನೆ ಅಂತ ಆ ಕಾನೂನು ಹೇಳ್ತು.
c 1950ರಲ್ಲಿ ಕ್ವಿಬೆಕ್‌ನಲ್ಲಿ 164 ಪೂರ್ಣ ಸಮಯದ ಸೇವಕರಿದ್ರು. ಅವರಲ್ಲಿ 63 ಜನ ಗಿಲ್ಯಡ್ ಶಾಲೆಯಿಂದ ಪದವಿ ಪಡೆದವ್ರು. ಕ್ವಿಬೆಕ್‌ನಲ್ಲಿ ತುಂಬ ವಿರೋಧ ಎದುರಿಸಬೇಕಾಗುತ್ತೆ ಅಂತ ಗೊತ್ತಿದ್ರೂ ಅವರನ್ನ ಅಲ್ಲಿ ಸೇವೆ ಮಾಡೋಕೆ ಕಳಿಸಿದಾಗ ಖುಷಿಯಿಂದ ಹೋದ್ರು.
d ಸಹೋದರ ಡಬ್ಲ್ಯೂ. ಗ್ಲೆನ್ ತುಂಬ ಧೈರ್ಯಶಾಲಿ ವಕೀಲ. ಅವರು 1943ರಿಂದ 2003ರ ತನಕ ಯೆಹೋವನ ಸಾಕ್ಷಿಗಳ ಪರವಾಗಿ ಕೆನಡದಲ್ಲಿ ಮತ್ತು ಇನ್ನೂ ಬೇರೆ ದೇಶಗಳಲ್ಲಿ ನೂರಾರು ಕೇಸ್‌ಗಳನ್ನ ವಾದಿಸಿ, ಗೆದ್ದಿದ್ದಾರೆ.
e ಈ ಕೇಸ್ ಬಗ್ಗೆ ಹೆಚ್ಚನ್ನ ತಿಳ್ಕೊಳೋಕೆ ಎಚ್ಚರ! ಏಪ್ರಿಲ್ 22, 2000 ಪುಟ 16-22 “ಯುದ್ಧವು ನಿಮ್ಮದಲ್ಲ, ದೇವರದೇ” ಲೇಖನ ನೋಡಿ.
f ಬ್ರಾಂಚಿಗೆ ಸೇರಿದ ಜಾಗದಲ್ಲಿದ್ದ ಮಿಲಿಟರಿಯವ್ರು ಜಾಗ ಖಾಲಿ ಮಾಡ್ಕೊಂಡು ಹೋದ್ರು. ಆದ್ರೆ ಸಹೋದರರು ಬೇರೆ ಜಾಗದಲ್ಲಿ ಹೊಸ ಬ್ರಾಂಚ್‌ಗಳನ್ನ ಕಟ್ಕೊಂಡ್ರು.