ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ?
ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ?
ಬೈಬಲನ್ನು ಏಕೆ ಓದಬೇಕು?
ಬೈಬಲ್ ಬೇರೆ ಯಾವುದೇ ಪುಸ್ತಕಕ್ಕಿಂತ ಭಿನ್ನವಾಗಿದೆ. ಯಾಕೆಂದರೆ ಅದರಲ್ಲಿ ದೇವರು ಒದಗಿಸಿರುವ ಪ್ರೀತಿಯ ಉಪದೇಶವು ಇದೆ. (1 ಥೆಸಲೊನೀಕ 2:13) ಬೈಬಲು ಏನನ್ನು ಕಲಿಸುತ್ತದೋ ಅದನ್ನು ನೀವು ಅನ್ವಯಿಸುವುದಾದರೆ, ಅತ್ಯಧಿಕವಾದ ಪ್ರಯೋಜನವನ್ನು ಪಡೆದುಕೊಳ್ಳುವಿರಿ. ‘ಎಲ್ಲಾ ಒಳ್ಳೇ ದಾನಗಳನ್ನೂ ಕುಂದಿಲ್ಲದ ಎಲ್ಲಾ ವರಗಳನ್ನೂ’ ಕೊಡುವಾತನಾದ ದೇವರಿಗಾಗಿ ನಿಮ್ಮ ಪ್ರೀತಿಯು ಹೆಚ್ಚುವುದು ಮತ್ತು ನೀವು ಆತನಿಗೆ ಹತ್ತಿರವಾಗುವಿರಿ. (ಯಾಕೋಬ 1:17) ಪ್ರಾರ್ಥನೆಯಲ್ಲಿ ಆತನನ್ನು ಹೇಗೆ ಸಮೀಪಿಸುವುದು ಎಂಬುದನ್ನು ತಿಳಿದುಕೊಳ್ಳುವಿರಿ. ತೊಂದರೆಗಳ ಸಮಯದಲ್ಲಿ, ನೀವು ದೇವರ ಸಹಾಯಹಸ್ತವನ್ನು ಗ್ರಹಿಸುವಿರಿ. ಬೈಬಲಿನಲ್ಲಿ ಕೊಡಲ್ಪಟ್ಟಿರುವ ಮಟ್ಟಗಳಿಗನುಗುಣವಾಗಿ ನಿಮ್ಮ ಜೀವನವನ್ನು ಹೊಂದಿಸಿಕೊಳ್ಳುವುದಾದರೆ, ದೇವರು ನಿಮಗೆ ನಿತ್ಯಜೀವವನ್ನು ಕೊಡುವನು.—ರೋಮಾಪುರ 6:23.
ಜ್ಞಾನೋದಯವನ್ನು ಉಂಟುಮಾಡುವಂಥ ಸತ್ಯಗಳು ಬೈಬಲಿನಲ್ಲಿ ಅಡಕವಾಗಿವೆ. ಬೈಬಲ್ ಜ್ಞಾನವನ್ನು ಪಡೆದುಕೊಳ್ಳುವವರು, ಲಕ್ಷಾಂತರ ಜನರ ಜೀವಿತಗಳನ್ನು ವಶದಲ್ಲಿಟ್ಟುಕೊಂಡಿರುವ ತಪ್ಪುಗ್ರಹಿಕೆಗಳಿಂದ ಬಿಡಿಸಲ್ಪಡುತ್ತಾರೆ. ಉದಾಹರಣೆಗಾಗಿ, ನಾವು ಸತ್ತ ನಂತರ ನಮಗೆ ಏನು ಸಂಭವಿಸುತ್ತದೆ ಎಂಬುದರ ಕುರಿತಾದ ಸತ್ಯವನ್ನು ತಿಳಿಯುವುದು, ಮೃತರು ನಮಗೆ ಹಾನಿಯನ್ನು ಉಂಟುಮಾಡಬಲ್ಲರು ಎಂಬ ಭಯದಿಂದ ಅಥವಾ ಸತ್ತಿರುವ ನಮ್ಮ ಸಂಬಂಧಿಕರು ಮತ್ತು ಸ್ನೇಹಿತರು ಎಲ್ಲೋ ಕಷ್ಟಾನುಭವಿಸುತ್ತಿದ್ದಾರೆ ಎಂಬ ಭಯದಿಂದ ನಮ್ಮನ್ನು ಬಿಡಿಸುತ್ತದೆ. (ಪ್ರಸಂಗಿ 9:5, 10) ಪುನರುತ್ಥಾನದ ಕುರಿತಾದ ಬೈಬಲಿನ ಬೋಧನೆಯು, ತಮ್ಮ ಪ್ರಿಯ ಜನರನ್ನು ಮರಣದಲ್ಲಿ ಕಳೆದುಕೊಂಡಿರುವವರಿಗೆ ಸಾಂತ್ವನವನ್ನು ನೀಡುತ್ತದೆ. (ಯೋಹಾನ 11:25) ದುಷ್ಟ ದೇವದೂತರ ಕುರಿತಾದ ಸತ್ಯವನ್ನು ಅರಿತಿರುವುದು, ಪ್ರೇತಾತ್ಮವಾದದ ಅಪಾಯಗಳ ಕುರಿತು ನಮ್ಮನ್ನು ಎಚ್ಚರಿಸುತ್ತದೆ ಮತ್ತು ಲೋಕದಲ್ಲಿ ಇಷ್ಟೊಂದು ತೊಂದರೆ ಏಕಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡುತ್ತದೆ.
ಬೈಬಲಿನಲ್ಲಿರುವ ದೈವಿಕ ಮೂಲತತ್ತ್ವಗಳು, ಶಾರೀರಿಕ ಪ್ರಯೋಜನಗಳನ್ನು ತರುವಂತಹ ರೀತಿಯಲ್ಲಿ ನಾವು ಹೇಗೆ ಜೀವಿಸಬಹುದು ಎಂಬುದನ್ನು ನಮಗೆ ತೋರಿಸುತ್ತವೆ. ಉದಾಹರಣೆಗಾಗಿ, ‘ಮಿತ ಹವ್ಯಾಸಗಳುಳ್ಳವರಾಗಿರುವುದು’ ಒಳ್ಳೆಯ ಆರೋಗ್ಯಕ್ಕೆ ಸಹಾಯಕರವಾಗಿದೆ. (1 ತಿಮೊಥೆಯ 3:2, NW) ‘ಶರೀರಾತ್ಮಗಳ ಕಲ್ಮಶವನ್ನು ತೊಲಗಿಸುವ’ ಮೂಲಕ, ನಾವು ನಮ್ಮ ಆರೋಗ್ಯವನ್ನು ಕೆಡಿಸುವುದರಿಂದ ದೂರವಿರುತ್ತೇವೆ. (2 ಕೊರಿಂಥ 7:1) ಬೈಬಲಿನಲ್ಲಿ ಕಂಡುಬರುವ ದೈವಿಕ ಬುದ್ಧಿವಾದವನ್ನು ಅನ್ವಯಿಸುವುದು ವಿವಾಹದಲ್ಲಿ ಸಂತೋಷವನ್ನು ಮತ್ತು ಸ್ವಗೌರವವನ್ನು ಕೂಡ ಹೆಚ್ಚಿಸುತ್ತದೆ.—1 ಕೊರಿಂಥ 6:18.
ನೀವು ದೇವರ ವಾಕ್ಯವನ್ನು ಅನ್ವಯಿಸುವಲ್ಲಿ, ಹೆಚ್ಚು ಸಂತೋಷವುಳ್ಳ ವ್ಯಕ್ತಿಯಾಗುವಿರಿ. ಬೈಬಲ್ ಜ್ಞಾನವು ಆಂತರಿಕ ಶಾಂತಿ ಮತ್ತು ಸಂತೃಪ್ತಿಯನ್ನು ಕಂಡುಕೊಳ್ಳಲು ಸಹಾಯಮಾಡುತ್ತದೆ ಮತ್ತು ನಿರೀಕ್ಷೆಯನ್ನು ನೀಡುತ್ತದೆ. ಅದು ಕರುಣೆ, ಪ್ರೀತಿ, ಸಂತೋಷ, ಸಮಾಧಾನ, ದಯೆ, ಮತ್ತು ನಂಬಿಕೆಯಂಥ ಮನಮೆಚ್ಚುವ ಗುಣಗಳನ್ನು ಬೆಳೆಸಿಕೊಳ್ಳಲು ನಮಗೆ ಸಹಾಯಮಾಡುತ್ತದೆ. (ಗಲಾತ್ಯ 5:22, 23; ಎಫೆಸ 4:24, 32) ಇಂತಹ ಗುಣಗಳು ನಮ್ಮನ್ನು ಹೆಚ್ಚು ಉತ್ತಮವಾದ ಪತಿ ಅಥವಾ ಪತ್ನಿ, ತಂದೆ ಅಥವಾ ತಾಯಿ, ಮಗ ಅಥವಾ ಮಗಳನ್ನಾಗಿ ಮಾಡಬಲ್ಲದು.
ನೀವು ಭವಿಷ್ಯತ್ತಿನ ಕುರಿತಾಗಿ ಎಂದಾದರೂ ಸೋಜಿಗಪಟ್ಟದ್ದುಂಟೋ? ಕಾಲಪ್ರವಾಹದಲ್ಲಿ ನಾವು ಎಲ್ಲಿದ್ದೇವೆ ಎಂಬುದನ್ನು ಬೈಬಲ್ ಪ್ರವಾದನೆಗಳು ನಮಗೆ ತೋರಿಸುತ್ತವೆ. ಇಂತಹ ಪ್ರವಾದನೆಗಳು ಇಂದಿನ ಲೋಕದ ಪರಿಸ್ಥಿತಿಯನ್ನು ವರ್ಣಿಸುವುದು ಮಾತ್ರವಲ್ಲದೆ, ದೇವರು ಶೀಘ್ರವೇ ಈ ಭೂಮಿಯನ್ನು ಒಂದು ಪರದೈಸನ್ನಾಗಿ ಮಾರ್ಪಡಿಸಲಿರುವನು ಎಂಬುದನ್ನೂ ತೋರಿಸುತ್ತವೆ.—ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯ
ಪ್ರಾಯಶಃ ನೀವು ಬೈಬಲನ್ನು ಓದಲು ಪ್ರಯತ್ನಿಸಿ, ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾದದ್ದಾಗಿದೆಯೆಂದು ಕಂಡುಕೊಂಡಿರಬಹುದು. ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಬೈಬಲಿನಲ್ಲಿ ಎಲ್ಲಿ ಕಂಡುಕೊಳ್ಳುವುದು ಎಂಬುದು ನಿಮಗೆ ಗೊತ್ತಿಲ್ಲದಿರಬಹುದು. ವಿಷಯವು ಹೀಗಿರುವುದಾದರೆ, ಇಂತಹ ಪರಿಸ್ಥಿತಿಯಲ್ಲಿರುವವರು ನೀವೊಬ್ಬರೇ ಅಲ್ಲ. ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಮ್ಮೆಲ್ಲರಿಗೂ ಸಹಾಯವು ಬೇಕಾಗಿದೆ. ಸುಮಾರು 235 ದೇಶಗಳಲ್ಲಿರುವ ಯೆಹೋವನ ಸಾಕ್ಷಿಗಳು, ಲಕ್ಷಾಂತರ ಜನರಿಗೆ ಬೈಬಲ್ ಉಪದೇಶವನ್ನು ಉಚಿತವಾಗಿ ನೀಡುತ್ತಿದ್ದಾರೆ. ನಿಮಗೂ ಸಹಾಯಮಾಡಲು ಅವರು ಸಂತೋಷಿಸುವರು.
ಸಾಮಾನ್ಯವಾಗಿ, ಬೈಬಲನ್ನು ಕ್ರಮಾನುಗತವಾಗಿ ಅಧ್ಯಯನಮಾಡುವುದು ಒಳ್ಳೇದು. ಅದಕ್ಕಾಗಿ ನೀವು ಮೂಲ ಬೋಧನೆಗಳಿಂದ ಆರಂಭಿಸಬಹುದು. (ಇಬ್ರಿಯ 6:1) ನೀವು ಇದನ್ನು ಮುಂದುವರಿಸುತ್ತಾ ಹೋಗುವಾಗ, “ಗಟ್ಟಿಯಾದ ಆಹಾರ”ವನ್ನು ಅಂದರೆ ಹೆಚ್ಚು ಗಹನವಾದ ಸತ್ಯಗಳನ್ನು ಅರಿತುಕೊಳ್ಳಲು ನೀವು ಹೆಚ್ಚು ಉತ್ತಮವಾಗಿ ಶಕ್ತರಾಗಿರುವಿರಿ. (ಇಬ್ರಿಯ 5:14) ಬೈಬಲು ಪ್ರಮಾಣಗ್ರಂಥವಾಗಿದೆ. ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬಂಥ ಬೈಬಲ್ ಆಧಾರಿತ ಪ್ರಕಾಶನಗಳು, ವಿವಿಧ ವಿಷಯಗಳ ಕುರಿತಾದ ಬೈಬಲ್ ಉಲ್ಲೇಖಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯಮಾಡುವವು.
ಬೈಬಲನ್ನು ಅರ್ಥಮಾಡಿಕೊಳ್ಳಲು ಪ್ರತಿವಾರ ಸಮಯವನ್ನು ಕೊಡಲು ಸಿದ್ಧರಿದ್ದೀರೋ?
ಸಾಮಾನ್ಯವಾಗಿ ನಿಮಗೆ ಅನುಕೂಲಕರವಾಗಿರುವಂಥ ಒಂದು ಸಮಯದಲ್ಲಿ ಮತ್ತು ಸ್ಥಳದಲ್ಲಿ ಬೈಬಲಿನ ಒಂದು ಅಧ್ಯಯನಕ್ಕಾಗಿ ಏರ್ಪಾಡು ಮಾಡಬಹುದು. ಅನೇಕರು ತಮ್ಮ ಸ್ವಂತ ಮನೆಯ ಏಕಾಂತತೆಯಲ್ಲಿ ಅಧ್ಯಯನಮಾಡುತ್ತಾರೆ. ಕೆಲವರು ಟೆಲಿಫೋನಿನ ಮೂಲಕವೂ ಅಧ್ಯಯನಮಾಡುತ್ತಾರೆ. ಈ ಅಧ್ಯಯನ ಕಾರ್ಯಕ್ರಮವು, ಅನೇಕ ಜನರಿರುವ ಒಂದು ತರಗತಿಯಾಗಿರುವ ಬದಲಿಗೆ, ನಿಮ್ಮ ಪರಿಸ್ಥಿತಿಗಳೊಂದಿಗೆ ಮಾತ್ರವಲ್ಲದೆ ನಿಮ್ಮ ಬುದ್ಧಿಶಕ್ತಿ ಮತ್ತು ಶಿಕ್ಷಣದ ಮಟ್ಟಕ್ಕೆ ಸರಿಹೊಂದಿಸಿ ಮಾಡಲ್ಪಡುವ ಖಾಸಗಿ ಏರ್ಪಾಡಾಗಿದೆ. ಯಾವುದೇ ಪರೀಕ್ಷೆಗಳು ಇರುವುದಿಲ್ಲ ಮತ್ತು ನಿಮ್ಮನ್ನು ಪೇಚಾಟಕ್ಕೆ ಗುರಿಮಾಡಲಾಗುವುದಿಲ್ಲ. ನಿಮ್ಮ ಬೈಬಲ್ ಪ್ರಶ್ನೆಗಳು ಉತ್ತರಿಸಲ್ಪಡುವವು, ಮತ್ತು ದೇವರ ಹತ್ತಿರಕ್ಕೆ ಹೇಗೆ ಬರುವುದು ಎಂಬುದನ್ನು ನೀವು ಕಲಿತುಕೊಳ್ಳುವಿರಿ.
ಇಂತಹ ಒಂದು ಅಧ್ಯಯನಕ್ಕಾಗಿ ನೀವು ಹಣವನ್ನು ಕೊಡಬೇಕಾಗಿಲ್ಲ. (ಮತ್ತಾಯ 10:8) ಅದು ಎಲ್ಲ ಧರ್ಮಗಳ ಜನರಿಗೆ ಮತ್ತು ಯಾವುದೇ ಧರ್ಮಕ್ಕೆ ಸೇರದಿದ್ದರೂ ದೇವರ ವಾಕ್ಯದ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಿಜವಾಗಿಯೂ ಆಸಕ್ತರಾಗಿರುವವರಿಗಾಗಿ ಉಚಿತವಾಗಿ ಯಾವುದೇ ವೆಚ್ಚವಿಲ್ಲದೆ ನೀಡಲ್ಪಡುತ್ತದೆ.
ಈ ಚರ್ಚೆಯಲ್ಲಿ ಯಾರೆಲ್ಲ ಭಾಗವಹಿಸಬಹುದು? ನಿಮ್ಮ ಇಡೀ ಕುಟುಂಬವು ಭಾಗವಹಿಸಬಹುದು. ನೀವು ಆಮಂತ್ರಿಸಲು ಬಯಸುವಂಥ ಯಾರೇ ಸ್ನೇಹಿತರು ಸಹ ಭಾಗವಹಿಸಬಹುದು. ಅಥವಾ ನೀವು ಇಷ್ಟಪಡುವಲ್ಲಿ, ಚರ್ಚೆಯು ನಿಮ್ಮೊಂದಿಗೆ ಮಾತ್ರ ನಡೆಸಲ್ಪಡಬಹುದು.
ಅನೇಕರು ಬೈಬಲಿನ ಅಧ್ಯಯನಮಾಡಲಿಕ್ಕಾಗಿ ಪ್ರತಿವಾರ ಒಂದು ತಾಸನ್ನು ಬದಿಗಿರಿಸುತ್ತಾರೆ. ನೀವು ಪ್ರತಿವಾರ ಹೆಚ್ಚಿನ ಸಮಯವನ್ನು ಕಳೆಯಲು ಶಕ್ತರಾಗಿರಲಿ ಅಥವಾ ಕೊಂಚವೇ ಸಮಯವನ್ನು ಕಳೆಯಲು ಶಕ್ತರಾಗಿರಲಿ, ನಿಮಗೆ ಸಹಾಯಮಾಡಲಿಕ್ಕಾಗಿ ಸಾಕ್ಷಿಗಳು ತಮ್ಮನ್ನೇ ನೀಡಿಕೊಳ್ಳುವರು.
ಕಲಿತುಕೊಳ್ಳಲಿಕ್ಕಾಗಿ ನಿಮಗೆ ಒಂದು ಆಮಂತ್ರಣ
ನೀವು ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಇದನ್ನು ಮಾಡಬಹುದಾದ ಒಂದು ವಿಧವು, ಕೆಳಗಡೆ ಕೊಡಲ್ಪಟ್ಟಿರುವ ಒಂದು ವಿಳಾಸಕ್ಕೆ ಬರೆಯುವುದೇ ಆಗಿದೆ. ತದನಂತರ ನಿಮ್ಮೊಂದಿಗೆ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನಮಾಡಲಿಕ್ಕಾಗಿ ಏರ್ಪಾಡುಗಳನ್ನು ಮಾಡಲಾಗುವುದು.
□ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್ನ ಕುರಿತು ನನಗೆ ಹೆಚ್ಚಿನ ಮಾಹಿತಿಯನ್ನು ಕಳುಹಿಸಿಕೊಡಿ.
□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.
ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉಪಯೋಗಿಸಲ್ಪಟ್ಟ ಬೈಬಲ್ ಭಾಷಾಂತರವು, ‘ಸತ್ಯವೇದವು’ ಆಗಿದೆ. NW ಎಂದು ಬರೆದಿರುವಲ್ಲಿ ಭಾಷಾಂತರವು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್—ವಿದ್ ರೆಫರೆನ್ಸಸ್ ನಿಂದ ತೆಗೆಯಲ್ಪಟ್ಟಿದೆ.