ಮಾಹಿತಿ ಇರುವಲ್ಲಿ ಹೋಗಲು

ಯೆಹೋವನು—ಯಾರು?

ಯೆಹೋವನು—ಯಾರು?

ಯೆಹೋವನುಯಾರು?

ಕಂಬೋಡಿಯದ ಕಾಡಿನಲ್ಲಿ ಹಾದಿ ಮಾಡಿಕೊಳ್ಳುತ್ತಾ, 19ನೇ ಶತಮಾನದ ಫ್ರೆಂಚ್‌ ಸಂಶೋಧಕ ಆನ್ರೀ ಮೂಓ, ಒಂದು ದೇವಸ್ಥಾನವನ್ನು ಸುತ್ತುವರಿದಿದ್ದ ಒಂದು ದೊಡ್ಡ ಕಂದಕವನ್ನು ಬಂದು ತಲುಪಿದನು. ಅದು ಭೂಮಿಯಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಸ್ಮಾರಕವಾಗಿರುವ ಆ್ಯಂಕಾರ್‌ ವಾಟ್‌ ಆಗಿತ್ತು. ಪಾಚಿಯಿಂದ ಆವೃತವಾದ ಆ ಸ್ಮಾರಕವು ಮಾನವನ ನಿರ್ಮಾಣವಾಗಿತ್ತೆಂದು ಅದನ್ನು ನೋಡಿದ ತಕ್ಷಣವೇ ಮೂಓ ಹೇಳಸಾಧ್ಯವಿತ್ತು. “ಯಾರೋ ಒಬ್ಬ ಪುರಾತನಕಾಲದ ಅಜ್ಞಾತ ಮೈಕಲ್‌ಆ್ಯಂಜಲೋವಿನಿಂದ ಕಟ್ಟಲ್ಪಟ್ಟು, ಗ್ರೀಸ್‌ ಅಥವಾ ರೋಮಿನ ಜನರಿಂದ ಕಟ್ಟಲ್ಪಟ್ಟ ಕಟ್ಟಡಕ್ಕಿಂತಲೂ ಹೆಚ್ಚು ವೈಭವಯುತವಾಗಿದೆ” ಎಂದು ಅವನು ಬರೆದನು. ಶತಮಾನಗಳಿಂದ ಆ ಕಟ್ಟಡವು ಪಾಳುಬಿದ್ದಿದ್ದು ಮತ್ತು ಕಡೆಗಣಿಸಲ್ಪಟ್ಟಿದ್ದರೂ ಆ ಕಟ್ಟಡದ ಹಿಂದೆ ಒಬ್ಬ ವಿನ್ಯಾಸಕನಿದ್ದನು ಎಂಬುದರಲ್ಲಿ ಅವನಿಗೆ ಸಂದೇಹವೇ ಇರಲಿಲ್ಲ.

ಆಸಕ್ತಿಕರವಾದ ವಿಷಯವೇನೆಂದರೆ, ಶತಮಾನಗಳ ಹಿಂದೆ ಬರೆಯಲ್ಪಟ್ಟ ವಿವೇಕಪೂರ್ಣವಾದ ಒಂದು ಗ್ರಂಥವು ಇದೇ ರೀತಿಯ ತರ್ಕವನ್ನು ಉಪಯೋಗಿಸಿತು. ಅದು ಹೇಳುವುದು: “ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಸಮಸ್ತವನ್ನು ಕಟ್ಟಿದಾತನು ದೇವರೇ.” (ಇಬ್ರಿಯ 3:4) ಹಾಗಾದರೆ, “ಸಮಸ್ತವನ್ನು” ಸೃಷ್ಟಿಸಿದ ದೇವರು ಯಾರಾಗಿದ್ದಾನೆ?

ವಿನ್ಯಾಸಕನು ಯಾರು?

ಈ ಹಿಂದೆ ತಿಳಿಸಲ್ಪಟ್ಟ ವಿವೇಕದ ಆ ಪುರಾತನ ಪುಸ್ತಕವಾದ ಬೈಬಲಿನಲ್ಲಿ ಉತ್ತರವು ಅಡಗಿದೆ. ಈ ಎಲ್ಲ ವಸ್ತುಗಳನ್ನು ಯಾರು ವಿನ್ಯಾಸಿಸಿದ್ದಾನೆ ಎಂಬ ಪ್ರಶ್ನೆಗೆ ತುಂಬ ಸರಳವಾದ ರೀತಿಯಲ್ಲಿ ಮತ್ತು ತೀರ ಸ್ಪಷ್ಟವಾಗಿ ಬೈಬಲು ಆರಂಭದ ಮಾತುಗಳಲ್ಲಿಯೇ ಉತ್ತರಿಸುತ್ತದೆ. ಅದು ಹೇಳುವುದು: “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.”—ಆದಿಕಾಂಡ 1:1.

ದೇವರೆಂದು ಹೇಳಿಕೊಂಡ ಇತರರಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳುತ್ತಾ, ಸೃಷ್ಟಿಕರ್ತನು ತನ್ನನ್ನು ಒಂದು ಅಪೂರ್ವವಾದ ಹೆಸರಿನಿಂದ ಗುರುತಿಸಿಕೊಳ್ಳುತ್ತಾನೆ: “ಭೂಮಂಡಲವನ್ನೂ ಅದರಲ್ಲಿನ ಉತ್ಪತ್ತಿಯನ್ನೂ ವಿಸ್ತರಿಸಿ ಲೋಕದ ಜನರಿಗೆ ಪ್ರಾಣವನ್ನು, ಹೌದು, ಭೂಚರರಿಗೆ ಜೀವಾತ್ಮವನ್ನೂ ದಯಪಾಲಿಸುವ ಯೆಹೋವನೆಂಬ ದೇವರು ಹೀಗನ್ನುತ್ತಾನೆ.” (ಯೆಶಾಯ 42:5, 8, ಓರೆ ಅಕ್ಷರಗಳು ನಮ್ಮವು.) ವಿಶ್ವವನ್ನು ರಚಿಸಿ, ಈ ಭೂಮಿಯಲ್ಲಿ ಸ್ತ್ರೀಪುರುಷರನ್ನು ಉಂಟುಮಾಡಿದ ದೇವರ ಹೆಸರೇ ಯೆಹೋವ ಎಂದಾಗಿದೆ. ಆದರೆ ಯೆಹೋವನು ಯಾರು? ಆತನು ಎಂತಹ ರೀತಿಯ ದೇವರಾಗಿದ್ದಾನೆ? ಮತ್ತು ನೀವು ಏಕೆ ಆತನ ಮಾತಿಗೆ ಕಿವಿಗೊಡಬೇಕು?

ಆತನ ಹೆಸರಿನ ಮಹತ್ವ

ಮೊದಲಾಗಿ, ಸೃಷ್ಟಿಕರ್ತನ ಹೆಸರಾದ ಯೆಹೋವ ಎಂಬುದರ ಅರ್ಥವೇನಾಗಿದೆ? ಈ ದೈವಿಕ ಹೆಸರು ನಾಲ್ಕು ಹಿಬ್ರೂ ಅಕ್ಷರಗಳಲ್ಲಿ (יהוה) ಬರೆಯಲ್ಪಟ್ಟಿದ್ದು, ಬೈಬಲಿನ ಹಿಬ್ರೂ ಭಾಗದಲ್ಲಿ ಸುಮಾರು 7,000 ಬಾರಿ ಕಂಡುಬರುತ್ತದೆ. ಈ ಹೆಸರು ಹಾವಾ (“ಆಗಲಿಕ್ಕೆ”) ಎಂಬ ಹಿಬ್ರೂ ಕ್ರಿಯಾಪದದ ಕಾರಣಾರ್ಥಕ ರೂಪದಿಂದ ಬಂದಿದೆ ಎಂದು ಎಣಿಸಲಾಗುತ್ತದೆ ಮತ್ತು ಇದು “ಆತನು ಆಗಿಸುತ್ತಾನೆ” ಎಂಬುದನ್ನು ಅರ್ಥೈಸುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ತನ್ನ ಉದ್ದೇಶಗಳನ್ನು ನೆರವೇರಿಸಲಿಕ್ಕಾಗಿ ತಾನು ಏನಾಗಿ ಪರಿಣಮಿಸಬೇಕೋ ಹಾಗೇ ಯೆಹೋವನು ತನ್ನನ್ನು ವಿವೇಕಯುತವಾಗಿ ಆಗಿಸಿಕೊಳ್ಳುತ್ತಾನೆ. ತನ್ನ ವಾಗ್ದಾನಗಳನ್ನು ನೆರವೇರಿಸಲಿಕ್ಕಾಗಿ ಆತನು ಸೃಷ್ಟಿಕರ್ತನು, ನ್ಯಾಯಾಧೀಶನು, ರಕ್ಷಕನು, ಜೀವದ ಪೋಷಕನು, ಇತ್ಯಾದಿಯಾಗಿ ಪರಿಣಮಿಸುತ್ತಾನೆ. ಅಷ್ಟುಮಾತ್ರವಲ್ಲದೆ, ಈ ಹಿಬ್ರೂ ಕ್ರಿಯಾಪದವು, ನೆರವೇರಲ್ಪಡುತ್ತಿರುವ ಕಾರ್ಯಗತಿಯನ್ನು ಸೂಚಿಸುವ ವ್ಯಾಕರಣಬದ್ಧವಾದ ರೂಪವನ್ನು ಪಡೆದುಕೊಳ್ಳುತ್ತದೆ. ಇದು ಯೆಹೋವನು ತನ್ನ ವಾಗ್ದಾನಗಳನ್ನು ನೆರವೇರಿಸುವವನಾಗಿ ತನ್ನನ್ನು ಇನ್ನೂ ಆಗಿಸಿಕೊಳ್ಳುತ್ತಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಹೌದು, ಆತನು ಜೀವಂತ ದೇವರಾಗಿದ್ದಾನೆ!

ಯೆಹೋವನ ಪ್ರಮುಖ ಗುಣಗಳು

ಈ ಸೃಷ್ಟಿಕರ್ತನು ಮತ್ತು ತನ್ನ ವಾಗ್ದಾನಗಳನ್ನು ನೆರವೇರಿಸುವವನು ತುಂಬ ಆಕರ್ಷಕ ವ್ಯಕ್ತಿಯಾಗಿದ್ದಾನೆ ಎಂಬುದನ್ನು ಬೈಬಲು ತೋರಿಸುತ್ತದೆ. ಯೆಹೋವನು ಸ್ವತಃ ತನ್ನ ವಿಶೇಷವಾದ ಗುಣಗಳನ್ನು ಹೀಗೆ ಹೇಳುವ ಮೂಲಕ ಪ್ರಕಟಪಡಿಸುತ್ತಾನೆ: “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು.” (ವಿಮೋಚನಕಾಂಡ 34:6, 7) ಯೆಹೋವನು ದಯೆತೋರಿಸುವ ದೇವರಾಗಿ ವರ್ಣಿಸಲ್ಪಡುತ್ತಾನೆ. ಇಲ್ಲಿ ಉಪಯೋಗಿಸಲ್ಪಟ್ಟಿರುವ ಹಿಬ್ರೂ ಪದವನ್ನು “ನಿಷ್ಠಾವಂತ ಪ್ರೀತಿ” ಎಂಬುದಾಗಿ ಸಹ ಭಾಷಾಂತರಿಸಸಾಧ್ಯವಿದೆ. ಯೆಹೋವನು ತನ್ನ ಅನಂತ ಉದ್ದೇಶವನ್ನು ಪೂರೈಸುವುದರಲ್ಲಿ, ತನ್ನ ಸೃಷ್ಟಿಜೀವಿಗಳಿಗೆ ನಿಷ್ಠೆಯಿಂದ ನಿರಂತರವಾಗಿ ಪ್ರೀತಿಯನ್ನು ತೋರಿಸುತ್ತಾನೆ. ಅಂಥ ಪ್ರೀತಿಯನ್ನು ನೀವು ಮಾನ್ಯಮಾಡುವುದಿಲ್ಲವೋ?

ಯೆಹೋವನು ಕೋಪಿಸಿಕೊಳ್ಳುವುದರಲ್ಲಿ ನಿಧಾನಿಯೂ ನಮ್ಮ ತಪ್ಪುಗಳನ್ನು ಕ್ಷಮಿಸುವುದರಲ್ಲಿ ಶೀಘ್ರಸ್ವಭಾವದವನೂ ಆಗಿದ್ದಾನೆ. ತಪ್ಪನ್ನು ಕಂಡುಹಿಡಿಯದ, ಆದರೆ ನಮ್ಮನ್ನು ಕ್ಷಮಿಸಲು ಸಿದ್ಧನಾಗಿರುವ ಒಬ್ಬ ವ್ಯಕ್ತಿಯ ಹತ್ತಿರವಿರುವುದು ನಿಜವಾಗಿಯೂ ಹೃದಯೋಲ್ಲಾಸದ ಸಂಗತಿಯಾಗಿದೆ. ಆದರೂ, ಯೆಹೋವನು ತಪ್ಪನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಇದು ಅರ್ಥೈಸುವುದಿಲ್ಲ. ಆತನು ಘೋಷಿಸಿದ್ದು: “ಯೆಹೋವನೆಂಬ ನಾನು ನ್ಯಾಯವನ್ನು ಪ್ರೀತಿಸುತ್ತೇನೆ, ಕೊಳ್ಳೆಯನ್ನೂ ಅನ್ಯಾಯವನ್ನೂ ದ್ವೇಷಿಸುತ್ತೇನೆ.” (ಯೆಶಾಯ 61:8) ಆತನು ನ್ಯಾಯವಂತ ದೇವರಾಗಿರುವುದರಿಂದ, ಭಂಡತನದಿಂದ ದುಷ್ಕೃತ್ಯವನ್ನು ಮುಂದುವರಿಸಿಕೊಂಡು ಹೋಗುವ ಪಾಪಿಗಳನ್ನು ಸದಾಕಾಲಕ್ಕೂ ಸಹಿಸಿಕೊಳ್ಳುವುದಿಲ್ಲ. ಹೀಗೆ, ಯೆಹೋವನು ತಕ್ಕ ಸಮಯದಲ್ಲಿ, ನಾವಿರುವ ಈ ಲೋಕದಲ್ಲಿನ ಅನ್ಯಾಯವನ್ನು ಸರಿಪಡಿಸುವನು ಎಂಬ ಖಾತ್ರಿ ನಮಗಿರಸಾಧ್ಯವಿದೆ.

ಪ್ರೀತಿ ಮತ್ತು ನ್ಯಾಯದ ಗುಣಗಳ ಮಧ್ಯೆ ಸಂಪೂರ್ಣ ಸಮತೋಲನವನ್ನು ಕಾಪಾಡಿಕೊಳ್ಳುವುದು ವಿವೇಕವನ್ನು ಕೇಳಿಕೊಳ್ಳುತ್ತದೆ. ಯೆಹೋವನು ನಮ್ಮೊಂದಿಗೆ ವ್ಯವಹರಿಸುವಾಗ ಈ ಎರಡು ಗುಣಗಳನ್ನು ಒಂದು ಅದ್ಭುತಕರವಾದ ರೀತಿಯಲ್ಲಿ ಸರಿದೂಗಿಸುತ್ತಾನೆ. (ರೋಮಾಪುರ 11:33-36) ಆತನ ವಿವೇಕವನ್ನು ಎಲ್ಲೆಡೆಯೂ ನೋಡಸಾಧ್ಯವಿದೆ ಎಂಬುದು ಖಂಡಿತ. ಪ್ರಕೃತಿಯ ಅದ್ಭುತಗಳು ಇದಕ್ಕೆ ಮೂಕಸಾಕ್ಷಿಯಾಗಿವೆ.—ಕೀರ್ತನೆ 104:24; ಜ್ಞಾನೋಕ್ತಿ 3:19.

ಆದರೂ, ವಿವೇಕವನ್ನು ಹೊಂದಿರುವುದು ಮಾತ್ರ ಸಾಲದು. ತನ್ನ ಮನಸ್ಸಿನಲ್ಲಿ ಮೂಡಿಬರುವ ವಿಷಯಗಳನ್ನು ಸಂಪೂರ್ಣವಾಗಿ ಕೈಗೂಡಿಸುವುದಕ್ಕಾಗಿ ಸೃಷ್ಟಿಕರ್ತನಿಗೆ ಶಕ್ತಿಯು ಸಹ ಇರಬೇಕು. ದೇವರು ಶಕ್ತಿಶಾಲಿಯಾಗಿದ್ದಾನೆಂದು ಬೈಬಲು ತೋರಿಸುತ್ತದೆ. ಅದು ಹೇಳುವುದು: “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? . . . ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.” (ಯೆಶಾಯ 40:26) ತನ್ನ ಚಿತ್ತವನ್ನು ಪೂರೈಸುವುದಕ್ಕಾಗಿ ಯೆಹೋವನ ಬಳಿ ‘ಬಲಾಢ್ಯ ಶಕ್ತಿ’ ಇದೆ. ಇಂತಹ ಗುಣಗಳು ನಿಮ್ಮನ್ನು ಯೆಹೋವನ ಕಡೆಗೆ ಆಕರ್ಷಿತರಾಗುವಂತೆ ಮಾಡುವುದಿಲ್ಲವೋ?

ಯೆಹೋವನನ್ನು ತಿಳಿದುಕೊಳ್ಳುವುದರಿಂದ ಸಿಗುವ ಪ್ರಯೋಜನಗಳು

ಯೆಹೋವನು “ಅದನ್ನು [ಭೂಮಿಯನ್ನು] ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ” ತನ್ನೊಂದಿಗೆ ಒಂದು ಅರ್ಥಪೂರ್ಣ ಸಂಬಂಧವನ್ನಿಟ್ಟುಕೊಂಡಿರುವ ಮಾನವರ “ನಿವಾಸಕ್ಕಾಗಿಯೇ ರೂಪಿಸಿದನು.” (ಯೆಶಾಯ 45:18; ಆದಿಕಾಂಡ 1:28) ಆತನು ತನ್ನ ಭೌಮಿಕ ಸೃಷ್ಟಿಜೀವಿಗಳ ಬಗ್ಗೆ ಕಾಳಜಿವಹಿಸುತ್ತಾನೆ. ಉದ್ಯಾನವನದಂತಹ ಗೃಹವಾದ ಪ್ರಮೋದವನದಲ್ಲಿ ಪರಿಪೂರ್ಣವಾದ ರೀತಿಯಲ್ಲಿ ಆತನು ಮಾನವಕುಲವನ್ನಿಟ್ಟನು. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಮಾನವರು ಯೆಹೋವನ ಹೃದಯಕ್ಕೆ ವೇದನೆಯನ್ನು ಉಂಟುಮಾಡುತ್ತಾ ಅದನ್ನು ಹಾಳುಗೆಡವುತ್ತಿದ್ದಾರೆ. ಆದರೂ ಯೆಹೋವನು ತನ್ನ ಹೆಸರಿಗನುಸಾರ, ಮಾನವಕುಲಕ್ಕಾಗಿ ಮತ್ತು ಈ ಭೂಮಿಗಾಗಿರುವ ತನ್ನ ಮೂಲ ಉದ್ದೇಶವನ್ನು ಖಂಡಿತವಾಗಿಯೂ ಪೂರೈಸುವನು. (ಕೀರ್ತನೆ 115:16; ಪ್ರಕಟನೆ 11:18) ತನ್ನ ಮಕ್ಕಳೋಪಾದಿ ತನಗೆ ವಿಧೇಯತೆಯನ್ನು ತೋರಿಸಲು ಸಿದ್ಧರಾಗಿರುವವರಿಗಾಗಿ ಆತನು ಈ ಭೂಮಿಯ ಮೇಲೆ ಪ್ರಮೋದವನವನ್ನು ಪುನಸ್ಸ್ಥಾಪಿಸುವನು.—ಜ್ಞಾನೋಕ್ತಿ 8:17; ಮತ್ತಾಯ 5:5.

ಬೈಬಲಿನ ಕಡೇ ಪುಸ್ತಕವು, ಆ ಪ್ರಮೋದವನದಲ್ಲಿ ನೀವು ಅನುಭವಿಸಸಾಧ್ಯವಿರುವ ಜೀವಿತದ ಗುಣಮಟ್ಟವನ್ನು ಈ ರೀತಿಯಲ್ಲಿ ವರ್ಣಿಸುತ್ತದೆ: “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:3, 4) ನೀವು ಅನುಭವಿಸಬೇಕೆಂದು ಯೆಹೋವನು ಬಯಸುವಂತಹ ರೀತಿಯ ನಿಜ ಜೀವನವು ಇದೇ ಆಗಿದೆ. ಆತನು ಎಂತಹ ಉಪಕಾರದೃಷ್ಟಿಯುಳ್ಳ ಒಬ್ಬ ತಂದೆಯಾಗಿದ್ದಾನೆ! ಆತನ ಬಗ್ಗೆ ಮತ್ತು ಆ ಪ್ರಮೋದವನದಲ್ಲಿ ಜೀವಿಸಲು ನಿಮ್ಮಿಂದ ಏನು ಕೇಳಿಕೊಳ್ಳಲ್ಪಡುತ್ತದೆ ಎಂಬುದರ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಲು ನೀವು ಇಷ್ಟಪಡುವಿರೋ?

ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉಪಯೋಗಿಸಲ್ಪಟ್ಟ ಬೈಬಲ್‌ ಭಾಷಾಂತರವು, ಇಂಡಿಯಾ ಸಿಲೋನ್‌ ದೇಶಗಳ ಸತ್ಯವೇದ ಸಂಘದ ಕನ್ನಡ ಬೈಬಲ್‌ ಆಗಿದೆ.