ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ?
ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ?
ಅನೇಕ ಜನರು ಮೇಲಿನ ಪ್ರಶ್ನೆಯನ್ನು ಒಂದೇ ಶಬ್ದದಲ್ಲಿ ಉತ್ತರಿಸುವರು—ದೇವರು. ಆದರೆ ಗಮನಾರ್ಹವಾಗಿ, ಬೈಬಲ್ ಎಲ್ಲಿಯೂ ಯೇಸು ಕ್ರಿಸ್ತನಾಗಲಿ ಅವನ ತಂದೆಯಾಗಲಿ ಈ ಲೋಕದ ನಿಜವಾದ ಪ್ರಭುಗಳು ಎಂದು ತಿಳಿಸುವದಿಲ್ಲ. ಇದಕ್ಕೆ ತದ್ವಿರುದ್ಧವಾಗಿ, ಯೇಸು ಹೇಳಿದ್ದು: “ಇಹಲೋಕಾಧಿಪತಿಯು ಹೊರಗೆ ನೂಕಲ್ಪಡುವನು.” ಮತ್ತು ಅವನು ಸೇರಿಸಿದ್ದು: “ಇಹಲೋಕಾಧಿಪತಿಯು ಬರುತ್ತಾನೆ. ಅವನಿಗೆ ಸಮ್ಮಂಧಪಟ್ಟದ್ದು ಯಾವದೊಂದೂ ನನ್ನಲ್ಲಿಲ್ಲ.”—ಯೋಹಾನ 12:31; 14:30; 16:11.
ಆದುದರಿಂದ ಈ ಲೋಕವನ್ನು ಆಳುವವನು ಯೇಸುವಿಗೆ ವಿರೋಧವಾಗಿ ಇದ್ದಾನೆ. ಇದು ಯಾರಾಗಿರಬಲ್ಲನು?
ಲೋಕದ ಪರಿಸ್ಥಿತಿಗಳಿಂದ ಒಂದು ಸುಳಿವು
ಸದುದ್ದೇಶದ ಮಾನವರ ಪ್ರಯತ್ನಗಳ ಎದುರಿನಲ್ಲಿಯೂ, ಲೋಕವು ಇತಿಹಾಸದ ಉದ್ದಕ್ಕೂ ಭಯಂಕರವಾಗಿ ಕಷ್ಟವನ್ನು ಅನುಭವಿಸಿದೆ. ಮಾಜಿ ಸಂಪಾದಕೀಯ ಲೇಖಕ ಡೇವಿಡ್ ಲಾರೆನ್ಸ್ ಎಂಬವರಂದಂತೆ, ಇದು ವಿವೇಚನೆಯುಳ್ಳ ವ್ಯಕ್ತಿಗಳನ್ನು ಬೆರಗು ಗೊಳಿಸುತ್ತದೆ. ಅವರು ಹೇಳಿದ್ದು: “‘ಭೂಮಿಯ ಮೇಲೆ ಶಾಂತಿ’—ಎಲ್ಲರೂ ಅದನ್ನು ಬಯಸುತ್ತಾರೆ. ‘ಮನುಷ್ಯರ ಕಡೆಗೆ ಒಳ್ಳೆಯ ಭಾವನೆ’—ಲೋಕದ ಬಹಳಷ್ಟು ಜನಾಂಗಗಳು ಒಬ್ಬರು ಇನ್ನೊಬ್ಬರ ಕಡೆಗೆ ಅದನ್ನು ತೋರಿಸುತ್ತಾರೆ. ಹಾಗಾದರೆ ತಪ್ಪು ಏನಾಗಿದೆ? ಜನರ ಸಹಜವಾದ ಆಶೆಗಳ ಎದುರಿನಲ್ಲಿಯೂ ಯುದ್ಧದ ಬೆದರಿಕೆಯು ಯಾಕೆ ಇದೆ?”
ಇದು ಅಸಮಂಜಸವೆಂದು ಭಾಸವಾಗುತ್ತದೆ, ಅಲ್ಲವೇ? ಜನರ ನೈಜವಾದ ಆಶೆಯು ಶಾಂತಿಯಿಂದ ಜೀವಿಸಬೇಕೆಂದಿರುವಾಗ, ಅವರು ಸಾಮಾನ್ಯವಾಗಿ ಒಬ್ಬರನ್ನೊಬ್ಬರು ದ್ವೇಷಿಸಿ ಕೊಲ್ಲುತ್ತಾರೆ—ಮತ್ತು ಭಯಂಕರ ದುಷ್ಟತನದಿಂದ. ವಿಕಾರವಾದ ಕ್ರೌರ್ಯದ ನಿರ್ದಯತೆಯ ಅತಿರೇಕವನ್ನು ಪರಿಗಣಿಸಿರಿ. ಮನುಷ್ಯರು ಒಬ್ಬರನ್ನೊಬ್ಬರು ಕರುಣೆಯಿಲ್ಲದೆ ಹಿಂಸಿಸಲು ಮತ್ತು ಕೊಲ್ಲಲು ಅನಿಲದ ಕೋಣೆಗಳನ್ನು, ಸೆರೆ ಶಿಬಿರಗಳನ್ನು, ಉರಿ ಕಾರುವ ಯಂತ್ರಗಳನ್ನು, ನೇಪಾಮ್ ಬಾಂಬುಗಳನ್ನು, ಮತ್ತು ಇನ್ನಿತರ ಘೋರವಾದ ವಿಧಾನಗಳನ್ನು ಉಪಯೋಗಿಸಿದ್ದಾರೆ.
ಶಾಂತಿ ಮತ್ತು ಸಂತೋಷವನ್ನು ಬಯಸುವ ಮಾನವರು, ತಮ್ಮಲ್ಲಿಯೇ, ಇತರರ ವಿರುದ್ಧ ಇಂತಹ ಅಸಂಸ್ಕೃತ ದುಷ್ಟತನಕ್ಕೆ ಸಮರ್ಥರೆಂದು ನೀವು ನಂಬುತ್ತೀರೋ? ಮನುಷ್ಯರನ್ನು ಇಂತಹ ಅಸಹ್ಯ ಕಾರ್ಯಗಳಿಗೆ ಚಲಾಯಿಸುವ ಅಥವಾ ಘೋರ ಕೃತ್ಯಗಳನ್ನು ಮಾಡುವಂತೆ ಅವರನ್ನು ಒತ್ತಾಯಿಸಲ್ಪಟ್ಟಿದ್ದೇವೆಂದು ಅವರಿಗೆ ಅನಿಸುವಂತಹ ಸನ್ನಿವೇಶದೊಳಗೆ
ಅವರನ್ನು ಚಾತುರ್ಯದಿಂದ ಯಾವ ಶಕ್ತಿಗಳು ನಡೆಸುತ್ತವೆ? ಹಿಂಸಾಚಾರದ ಇಂತಹ ಕಾರ್ಯಗಳನ್ನು ಮಾಡಲು ಯಾವುದೋ ದುಷ್ಟ, ಅದೃಶ್ಯ ಶಕ್ತಿಯು ಜನರನ್ನು ಪ್ರಭಾವಿಸುತ್ತಿದೆಯೇ ಎಂದು ನೀವು ಎಂದಾದರೂ ಕುತೂಹಲಪಟ್ಟದ್ದುಂಟೋ?ಲೋಕದ ಪ್ರಭುಗಳು ಗುರುತಿಸಲ್ಪಟ್ಟಿದ್ದಾರೆ
ಈ ವಿಷಯದಲ್ಲಿ ಊಹಿಸುವ ಅಗತ್ಯವಿಲ್ಲ, ಯಾಕಂದರೆ ಒಬ್ಬ ಬುದ್ಧಿವಂತ, ಕಣ್ಣಿಗೆ ಕಾಣದಿರುವ ವ್ಯಕ್ತಿಯು ಮನುಷ್ಯರನ್ನು ಮತ್ತು ರಾಷ್ಟ್ರಗಳನ್ನು ಹೀಗೆ ಉಭಯರನ್ನೂ ನಿಯಂತ್ರಿಸುತ್ತಿದ್ದಾನೆಂದು ಬೈಬಲ್ ಸ್ಪಷ್ಟವಾಗಿ ತೋರಿಸುತ್ತದೆ. ಅದು ಹೇಳುವುದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ.” ಮತ್ತು ಬೈಬಲ್ ಅವನನ್ನು ಗುರುತಿಸುತ್ತಾ, ಹೇಳುವುದು: “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ . . . ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ” ವನು.—1 ಯೋಹಾನ 5:19; ಪ್ರಕಟನೆ 12:9.
ಒಂದು ಸಂದರ್ಭದಲ್ಲಿ ಯೇಸು “ಸೈತಾನನಿಂದ ಶೋಧಿಸಲ್ಪಟ್ಟಾಗ,” ಈ ಲೋಕವನ್ನು ಆಳುವವನಾಗಿರುವ ಸೈತಾನನ ಪಾತ್ರವನ್ನು ಯೇಸು ಪ್ರಶ್ನಿಸಲಿಲ್ಲ. ಏನು ನಡೆಯಿತೆಂದು ಬೈಬಲ್ ವಿವರಿಸುತ್ತದೆ: “ಬಳಿಕ ಸೈತಾನನು ಆತನನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕರಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ—ನೀನು ನನಗೆ ಸಾಷ್ಟಾಂಗನಮಸ್ಕಾರ ಮಾಡಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು ಅಂದನು. ಯೇಸು ಅವನಿಗೆ—ಸೈತಾನನೇ, ನೀನು ತೊಲಗಿ ಹೋಗು” ಅಂದನು.—ಮತ್ತಾಯ 4:1, 8-10.
ಇದರ ಬಗ್ಗೆ ಯೋಚಿಸಿರಿ. ಸೈತಾನನು ಯೇಸುವಿಗೆ “ಲೋಕದ ಎಲ್ಲಾ ರಾಜ್ಯಗಳನ್ನು” ನೀಡುತ್ತಾ ಅವನನ್ನು ಶೋಧಿಸಿದನು. ಸೈತಾನನು ನಿಜವಾಗಿಯೂ ಈ ರಾಜ್ಯಗಳನ್ನು ಆಳುವವನಾಗಿಲ್ಲದಿರುತ್ತಿದ್ದರೆ, ಸೈತಾನನ ನೀಡಿಕೆ ಒಂದು ನಿಜವಾದ ಶೋಧನೆ ಆಗಿರುತ್ತಿತ್ತೋ? ಇಲ್ಲ, ಹಾಗಾಗುತ್ತಿರಲಿಲ್ಲ. ಮತ್ತು ಗಮನಿಸಿ, ಈ ಎಲ್ಲಾ ಲೌಕಿಕ ಸರಕಾರಗಳು ಸೈತಾನನದೆಂಬುದನ್ನು ಯೇಸು ಅಲ್ಲಗಳೆಯಲಿಲ್ಲ, ಅವುಗಳ ಮೇಲೆ ಸೈತಾನನಿಗೆ ಅಧಿಕಾರವಿಲ್ಲದಿರುತ್ತಿದ್ದರೆ ಅವನು ಹಾಗೆ ಮಾಡುತ್ತಿದ್ದನು. ಆದುದರಿಂದ, ಪಿಶಾಚನಾದ ಸೈತಾನನು ನಿಜವಾಗಿಯೂ ಈ ಲೋಕದ ಅಗೋಚರನಾದ ಪ್ರಭು! ಬೈಬಲ್, ವಾಸ್ತವದಲ್ಲಿ, ಅವನನ್ನು “ಈ ಪ್ರಪಂಚದ ದೇವರು” ಎಂದು ಕರೆಯುತ್ತದೆ. (2 ಕೊರಿಂಥ 4:4) ಆದರೆ, ಇಂತಹ ಒಬ್ಬ ದುಷ್ಟ ವ್ಯಕ್ತಿಯು ಈ ಶಕ್ತಿಯುತ ಸ್ಥಾನಕ್ಕೆ ಬಂದದ್ದಾದರೂ ಹೇಗೆ?
ಸೈತಾನನಾದವನು ದೇವರಿಂದ ಸೃಷ್ಟಿಸಲ್ಪಟ್ಟ ಒಬ್ಬ ದೇವದೂತನಾಗಿದ್ದನು, ಆದರೆ ಅವನು ದೇವರ ಸ್ಥಾನದ ಬಗ್ಗೆ ಅಸೂಯೆಪಟ್ಟನು. ಅವನು ದೇವರ ನ್ಯಾಯಯುಕ್ತ ಆಳಿಕೆಯನ್ನು ಪಣಕ್ಕೊಡ್ಡಿದನು. ಇದನ್ನು ಸಾಧಿಸಲು ಅವನು ಒಂದು ಸರ್ಪವನ್ನು, ಅದು ಮೊದಲನೆಯ ಸ್ತ್ರೀ ಹವ್ವಳನ್ನು ಮೋಸಗೊಳಿಸುವಂತೆ ವದನಕವಾಗಿ ಉಪಯೋಗಿಸಿದನು, ಮತ್ತು ಹೀಗೆ, ಆಕೆಯನ್ನು ಹಾಗೂ ಆಕೆಯ ಗಂಡನಾದ ಆದಾಮನನ್ನು, ದೇವರಿಗೆ ವಿಧೇಯರಾಗಿರುವ ಬದಲು ತನ್ನ ಆಜ್ಞಾಧಾರಕರಾಗಿರುವಂತೆ ಮಾಡಲು ಶಕ್ತನಾದನು. (ಆದಿಕಾಂಡ 3:1-6; 2 ಕೊರಿಂಥ 11:3) ಆದಾಮ ಮತ್ತು ಹವ್ವರ ಇನ್ನೂ ಜನಿಸದಿರುವ ಸಂತಾನವನ್ನೆಲ್ಲಾ ದೇವರ ಕಡೆಯಿಂದ ತಿರುಗಿಸ ಬಲ್ಲೆನೆಂದು ಸಹ ಅವನು ವಾದಿಸಿದನು. ಆದುದರಿಂದ, ಅವನ ವಾದವನ್ನು ರುಜುಪಡಿಸಲು ಪ್ರಯತ್ನಿಸುವುದಕ್ಕೆ ದೇವರು ಸೈತಾನನಿಗೆ ಸಮಯವನ್ನು ಕೊಟ್ಟನು, ಆದರೆ ಸೈತಾನನು ಸಫಲನಾಗಿಲ್ಲ.—ಯೋಬ 1:6-12; 2:1-10.
ಗಮನಾರ್ಹವಾಗಿ, ಸೈತಾನನು ಲೋಕದ ತನ್ನ ಆಳಿಕೆಯಲ್ಲಿ ಒಬ್ಬಂಟಿಗನಾಗಿಲ್ಲ. ದೇವರ ವಿರುದ್ಧ ದಂಗೆಯಲ್ಲಿ ಬೇರೆ ಕೆಲವು ದೂತರು ಅವನನ್ನು ಸೇರುವಂತೆ ಪ್ರೇರೇಪಿಸುವದರಲ್ಲಿ ಅವನು ಸಫಲನಾದನು. ಇವರು ದೆವ್ವಗಳು, ಅವನ ಆತ್ಮಿಕ ಸಹಾಯಕರು ಆದರು. ಕ್ರೈಸ್ತರನ್ನು ಪ್ರೋತ್ಸಾಹಿಸುವಾಗ ಬೈಬಲ್ ಅವುಗಳ ಬಗ್ಗೆ ಮಾತಾಡುತ್ತದೆ: “ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ . . . ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ಅಂಧಕಾರದ ಲೋಕಾಧಿಪತಿಗ ಮೇಲೆಯೂ ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.”—ಎಫೆಸ 6:11, 12.
ದುಷ್ಟ ಆತ್ಮಗಳನ್ನು ಎದುರಿಸಿರಿ
ಈ ಅಗೋಚರವಾದ, ದುಷ್ಟ ಲೋಕ ಪ್ರಭುಗಳು ಇಡೀ ಮಾನವ ಕುಲವನ್ನು ತಪ್ಪುದಾರಿಗೆ ಎಳೆಯಲು, ದೇವರ ಆರಾಧನೆಯಿಂದ ಅವರನ್ನು ದೂರ ತಿರುಗಿಸಲು ನಿಶ್ಚಯಿಸಿದ್ದಾರೆ. ಸತ್ತವರಿಗೆ ಯಾವ ಅರಿವೂ ಇಲ್ಲವೆಂದು ದೇವರ ವಾಕ್ಯವು ಸ್ಪಷ್ಟವಾಗಿ ತೋರಿಸಿದರೂ, ಮರಣಾನಂತರ ಬದುಕಿರುವ ವಿಚಾರವನ್ನು ಉತ್ತೇಜಿಸುವುದು, ದುಷ್ಟ ಆತ್ಮಗಳು ಬಳಸುವ ಒಂದು ಮಾರ್ಗ ಆಗಿದೆ. (ಆದಿಕಾಂಡ 2:17; 3:19; ಯೆಹೆಜ್ಕೇಲ 18:4; ಕೀರ್ತನೆ 146:3, 4; ಪ್ರಸಂಗಿ 9:5, 10) ಹೀಗೆ, ಒಂದು ದುಷ್ಟ ಆತ್ಮವು, ಸತ್ತ ವ್ಯಕ್ತಿಯ ಧ್ವನಿಯನ್ನು ನಕಲು ಮಾಡಿ, ಅವನ ಜೀವಂತ ಸಂಬಂಧಿಕರ ಯಾ ಗೆಳೆಯರೊಂದಿಗೆ, ಒಂದು ಆತ್ಮ ಮಾಧ್ಯಮ ಅಥವಾ ಅದೃಶ್ಯ ಲೋಕದ ಒಂದು “ಧ್ವನಿ”ಯ ಮೂಲಕ ಮಾತಾಡಬಹುದು. ಈ “ಧ್ವನಿ”ಯು ಅಗಲಿ ಹೋದವನ ಹಾಗೆ ನಟಿಸುತ್ತದೆ, ಆದರೆ ನಿಜವಾಗಿಯೂ ಅದೊಂದು ದೆವ್ವವಾಗಿದೆ!
ಆದುದರಿಂದ ನೀವು ಯಾವಾಗಲಾದರೂ ಇಂತಹ ಒಂದು “ಧ್ವನಿ”ಯನ್ನು ಕೇಳುವುದಾದರೆ, ಮೋಸ ಹೋಗಬೇಡಿ. ಅದು ಏನೇ ಹೇಳಿದರೂ, ತಿರಸ್ಕರಿಸಿರಿ, ಮತ್ತು “ಸೈತಾನನೇ, ತೊಲಗಿ ಹೋಗು!” ಎಂಬ ಯೇಸುವಿನ ಮಾತುಗಳನ್ನು ಪ್ರತಿಧ್ವನಿಸಿರಿ. (ಮತ್ತಾಯ 4:10; ಯಾಕೋಬ 4:7) ಆತ್ಮಿಕ ಲೋಕದ ಬಗ್ಗೆ ಕುತೂಹಲವು ದುಷ್ಟ ಆತ್ಮಗಳ ಸಂಗಡ ನಿಮ್ಮನ್ನು ಸಿಕ್ಕಿಸುವಂತೆ ಬಿಡಬೇಡಿ. ಇಂತಹ ಸಿಕ್ಕಿಹಾಕಿಕೊಳ್ಳುವಿಕೆಯನ್ನು ಪ್ರೇತವ್ಯವಹಾರವಾದವೆಂದು ಕರೆಯಲಾಗುತ್ತದೆ, ಮತ್ತು ದೇವರು ತನ್ನ ಆರಾಧಕರನ್ನು ಅದರ ಎಲ್ಲಾ ರೂಪಗಳ ವಿರುದ್ಧ ಎಚ್ಚರಿಸುತ್ತಾನೆ. ಬೈಬಲು “ಕಣಿಹೇಳುವವರು, . . . ಯಂತ್ರಮಂತ್ರಗಳನ್ನು ಮಾಡುವವರು, ಶಕುನ ನೋಡುವವರು, ಸತ್ತವರನ್ನು ವಿಚಾರಿಸುವವರು”—ಇವರನ್ನು ಖಂಡಿಸುತ್ತದೆ.—ಧರ್ಮೋಪದೇಶಕಾಂಡ 18:10-12; ಗಲಾತ್ಯ 5:19-21; ಪ್ರಕಟನೆ 21:8.
ಪ್ರೇತವ್ಯವಹಾರವಾದವು ಒಬ್ಬ ವ್ಯಕ್ತಿಯನ್ನು ದೆವ್ವಗಳ ಪ್ರಭಾವದ ಕೆಳಗೆ ತರುವದರಿಂದ, ಅವೆಷ್ಟೇ ವಿನೋದಕರ, ಉತ್ತೇಜಕವೆಂದು ಕಂಡುಬರಲಿ, ಅದರ ಎಲ್ಲ ಆಚಾರಗಳನ್ನು ಎದುರಿಸಿರಿ. ಈ ಆಚಾರಗಳಲ್ಲಿ ಮಣಿ ವೀಕ್ಷಣ, ವೀಜಾ ಹಲಗೆಗಳ ಉಪಯೋಗ, ಇಎಸ್ಪಿ (ಜ್ಞಾನಾತೀತ ಗ್ರಹಣ ಶಕ್ತಿ), ಒಬ್ಬನ ಹಸ್ತ ರೇಖೆಗಳನ್ನು ಪರೀಕ್ಷಿಸುವುದು (ಹಸ್ತಸಾಮುದ್ರಿಕ ಶಾಸ್ತ್ರ), ಮತ್ತು ಜ್ಯೋತಿಷ ಒಳಗೊಂಡಿವೆ. ತಮ್ಮ ಪ್ರದೇಶವನ್ನಾಗಿ ಮಾಡಿಕೊಂಡಿರುವ ಮನೆಗಳಲ್ಲಿ ದೆವ್ವಗಳು ಸದ್ದುಗಳನ್ನು ಮತ್ತು ಬೇರೆ ಭೌತಿಕ ಘಟನೆಗಳನ್ನೂ ಉಂಟುಮಾಡಿವೆ.
ಇದರ ಜೊತೆಗೆ, ದುರಾತ್ಮಗಳು ಮಾನವರ ಪಾಪಭರಿತ ಒಲವಿನ ಪ್ರವೃತ್ತಿಯನ್ನು ಅನೈತಿಕ ಹಾಗೂ ಅಸ್ವಾಭಾವಿಕವಾದ ಲೈಂಗಿಕ ವರ್ತನೆಯನ್ನು ಪ್ರವರ್ಧಿಸುವ ಸಾಹಿತ್ಯ, ಚಲನಚಿತ್ರಗಳು, ಮತ್ತು ಟೆಲಿವಿಷನ್ ಕಾರ್ಯಕ್ರಮಗಳನ್ನು ಉತ್ತೇಜಿಸುವ ಮೂಲಕ ಉಪಯೋಗಿಸಿಕೊಳ್ಳುತ್ತವೆ. ತಪ್ಪು ಯೋಚನೆಗಳನ್ನು ಮನಸ್ಸಿನಿಂದ ಹೊರದೂಡದಿದ್ದರೆ ಅವು ಅಳಿಸಲಾಗದ ಗುರುತುಗಳನ್ನು ಉಂಟುಮಾಡಿ, ಮನುಷ್ಯರು ಆ ದೆವ್ವಗಳು ಹಾಗೆ ಆದಿಕಾಂಡ 6:1, 2; 1 ಥೆಸಲೊನೀಕ 4:3-8; ಯೂದ 6.
ಅನೈತಿಕ ವರ್ತನೆಗೆ ನಡೆಸಲ್ಪಡುವರೆಂದು ದೆವ್ವಗಳಿಗೆ ಗೊತ್ತಿದೆ.—ನಿಜ, ಈ ಲೋಕವು ದುರಾತ್ಮಗಳಿಂದ ಆಳಲ್ಪಡುತ್ತಿರುವ ವಿಚಾರವನ್ನು ಅನೇಕರು ಅಪಹಾಸ್ಯ ಮಾಡಬಹುದು. ಆದರೆ ಅವರ ಅಪನಂಬಿಕೆ ಆಶ್ಚರ್ಯಕರವಾಗಿಲ್ಲ, ಯಾಕಂದರೆ ಬೈಬಲ್ ಹೇಳುವುದು: “ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುತ್ತಾನೆ.” (2 ಕೊರಿಂಥ 11:14) ತಾನು ಮತ್ತು ತನ್ನ ದೂತರು ನಿಜವಾಗಿಯೂ ಅಸ್ತಿತ್ವದಲ್ಲಿರುವ ನಿಜತ್ವಕ್ಕೆ ಅನೇಕರನ್ನು ಕುರುಡುಗೊಳಿಸಿರುವುದೇ ಅವನ ಅತ್ಯಂತ ಚತುರ ವಂಚನೆಯಾಗಿದೆ. ಆದರೆ ಮೋಸಹೋಗಬೇಡಿರಿ! ಸೈತಾನನು ಮತ್ತು ಅವನ ದೆವ್ವಗಳು ನೈಜ ವ್ಯಕ್ತಿಗಳು, ಮತ್ತು ನೀವು ಅವರನ್ನು ಸತತವಾಗಿ ಎದುರಿಸುವ ಆವಶ್ಯವಿದೆ.—1 ಪೇತ್ರ 5:8, 9.
ಸಂತೋಷಕರವಾಗಿ, ಸೈತಾನನು ಮತ್ತು ಅವನ ತಂಡವು ಇನ್ನು ಮುಂದೆ ಇಲ್ಲದೆ ಹೋಗುವ ಸಮಯವು ಹತ್ತಿರವಾಗಿದೆ! “ಈ ಲೋಕವು [ಅದರ ದೆವ್ವ ಪ್ರಭುಗಳ ಸಮೇತ] ಗತಿಸಿ ಹೋಗುತ್ತದೆ,” ಎಂದು ಬೈಬಲ್ ಭರವಸೆ ನೀಡುತ್ತದೆ, “ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:17) ಆ ದುಷ್ಟ ಪ್ರಭಾವದ ತೆಗೆದುಹಾಕುವಿಕೆ ಎಂತಹ ಒಂದು ಉಪಶಮನವಾಗಿರುವುದು! ಆದುದರಿಂದ, ನಾವು, ದೇವರ ಚಿತ್ತವನ್ನು ಮಾಡುವವರಲ್ಲಿ ಮತ್ತು ದೇವರ ನೀತಿಯ ಹೊಸ ಲೋಕದಲ್ಲಿ ಎಂದೆಂದಿಗೂ ಜೀವನದಲ್ಲಿ ಆನಂದಿಸುವವರಲ್ಲಿ ಒಬ್ಬರಾಗಿರುವಂತಾಗಲಿ.—ಕೀರ್ತನೆ 37:9-11, 29; 2 ಪೇತ್ರ 3:13; ಪ್ರಕಟನೆ 21:3, 4.
ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉಪಯೋಗಿಸಲ್ಪಟ್ಟ ಬೈಬಲ್ ಭಾಷಾಂತರವು ‘ಇಂಡಿಯಾ ಸಿಲೋನ್ ದೇಶಗಳ ಸತ್ಯವೇದ ಸಂಘದ ಕನ್ನಡ ಬೈಬಲ್’ ಆಗಿದೆ.
[ಪುಟ 5 ರಲ್ಲಿರುವ ಚಿತ್ರ]
ಈ ಎಲ್ಲಾ ಲೌಕಿಕ ಸರಕಾರಗಳು ಸೈತಾನನದ್ದಾಗಿರದಿದ್ದರೆ, ಅವನು ಅವುಗಳನ್ನು ಯೇಸುವಿಗೆ ನೀಡಬಹುದಿತ್ತೋ?