ಮಾಹಿತಿ ಇರುವಲ್ಲಿ ಹೋಗಲು

ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು?

ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು?

ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು?

“ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?” ಎಂದು ಬಹುಕಾಲದ ಹಿಂದೆ ಯೋಬನೆಂಬ ಮನುಷ್ಯನು ಕೇಳಿದ್ದನು. (ಯೋಬ 14:14) ಪ್ರಾಯಶಃ ನೀವು ಸಹ, ಅದರ ಕುರಿತಾಗಿ ಯೋಚಿಸಿರಬಹುದು. ಇಲ್ಲಿ ಇದೇ ಭೂಮಿಯಲ್ಲಿ ಅತ್ಯುತ್ತಮ ಪರಿಸ್ಥಿತಿಗಳ ಕೆಳಗೆ ನಿಮ್ಮ ಪ್ರಿಯ ಜನರೊಂದಿಗಿನ ಪುನರ್ಮಿಲನವು ಶಕ್ಯವು ಎಂಬದು ಒಂದು ವೇಳೆ ನಿಮಗೆ ತಿಳಿದರೆ ನಿಮಗೆ ಹೇಗೆನಿಸೀತು?

ಒಳ್ಳೇದು, ಬೈಬಲು ಆ ವಾಗ್ದಾನವನ್ನು ನಮಗಿತ್ತಿರುತ್ತದೆ: “ಮೃತರಾದ ನಿನ್ನ ಜನರು ಬದುಕುವರು . . . ಜೀವದಿಂದೇಳು”ವರು. ಬೈಬಲು ಮತ್ತೂ ಅನ್ನುವುದು: “ನೀತಿವಂತರೋ ಭೂಮಿಯನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಯೆಶಾಯ 26:19; ಕೀರ್ತನೆ 37:29, NW.

ಅಂಥ ವಾಗ್ದಾನಗಳಲ್ಲಿ ನಿಜ ಭರವಸವು ಹುಟ್ಟಬೇಕಾದರೆ ಕೆಲವು ಮೂಲಭೂತ ಪ್ರಶ್ನೆಗಳನ್ನುತ್ತರಿಸುವ ಅಗತ್ಯವು ನಮಗಿದೆ: ಜನರು ಸಾಯುವುದು ಏಕೆ? ಮೃತರು ಎಲ್ಲಿದ್ದಾರೆ? ಅವರು ಪುನಃ ಜೀವದಿಂದೇಳುವರೆಂಬ ನಿಶ್ಚಯತೆ ನಮಗಿರುವುದು ಹೇಗೆ?

ಮರಣ ಮತ್ತು ನಾವು ಸಾಯುವಾಗ ಸಂಭವಿಸುವ ವಿಷಯ

ಮನುಷ್ಯರು ಸಾಯುವುದು ದೇವರ ಮೂಲ ಉದ್ದೇಶವಾಗಿರಲಿಲ್ಲವೆಂದು ಬೈಬಲು ಸ್ಪಷ್ಟವಾಗಿ ತಿಳಿಸುತ್ತದೆ. ಮೊದಲ ಮಾನವ ಜತೆಯಾದ ಆದಾಮ ಮತ್ತು ಹವ್ವರನ್ನು ಆತನು ನಿರ್ಮಿಸಿ, ಏದೆನ್‌ ಎಂಬ ಭೂಪರದೈಸದಲ್ಲಿ ಅವರನ್ನಿಟ್ಟನು ಮತ್ತು ಅವರು ಮಕ್ಕಳನ್ನು ಪಡೆಯುವಂತೆ ಹಾಗೂ ತಮ್ಮ ಪರದೈಸ ಮನೆಯನ್ನು ಭೂಮಿಯಲ್ಲೆಲ್ಲೂ ಹಬ್ಬಿಸುವಂತೆ ಆದೇಶವನ್ನಿತ್ತನು. ಆತನ ಆದೇಶಗಳನ್ನು ಮುರಿದರೆ ಮಾತ್ರವೇ ಅವರು ಸಾಯಲಿಕ್ಕಿದ್ದರು.—ಆದಿಕಾಂಡ 1:28; 2:15-17.

ಆದಾಮ ಮತ್ತು ಹವ್ವರಾದರೋ ದೇವರ ದಯೆಗಾಗಿ ಗಣ್ಯತೆಯಿಲ್ಲದವರಾಗಿ ಅವಿಧೇಯರಾದರು ಮತ್ತು ವಿಧಿಸಲ್ಪಟ್ಟ ಈ ದಂಡನೆಗೆ ಗುರಿಯಾದರು. “ನೀನು ಮಣ್ಣಿಗೆ ಪುನಃ ಸೇರುವಿ” ಎಂದು ದೇವರು ಆದಾಮನಿಗಂದನು. “ಯಾಕಂದರೆ ನೀನು ಅದರೊಳಗಿಂದ ತೆಗೆಯಲ್ಪಟ್ಟವನು. ನೀನು ಮಣ್ಣೇ ಮತ್ತು ಮಣ್ಣಿಗೇ ಪುನಃ ಹಿಂತಿರುಗುವಿ.” (ಆದಿಕಾಂಡ 3:19, NW) ತನ್ನ ನಿರ್ಮಾಣಕ್ಕೆ ಮುಂಚೆ ಆದಾಮನು ಅಸ್ತಿತ್ವದಲ್ಲಿರಲಿಲ್ಲ; ಅವನು ಮಣ್ಣಾಗಿದ್ದನು, ಮತ್ತು ಅವನ ಅವಿಧೇಯತೆ ಅಥವಾ ಪಾಪದ ಕಾರಣ ಮಣ್ಣಿಗೆ ಹಿಂದಿರುಗುವ, ಅಸ್ತಿತ್ವವಿಲ್ಲದ ಸ್ಥಿತಿಗೆ ಹಿಂದಿರುಗುವ ಶಿಕ್ಷೆಯು ಆದಾಮನಿಗೆ ವಿಧಿಸಲ್ಪಟ್ಟಿತು.

ಹೀಗೆ, ಮರಣವು ಒಂದು ಜೀವರಹಿತವಾದ ಸ್ಥಿತಿಯು. ಪರಸ್ಪರ ವ್ಯತ್ಯಾಸವನ್ನು ಬೈಬಲು ಹೀಗೆ ತಿಳಿಸಿದೆ: “ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥ ವರವು . . . ನಿತ್ಯ ಜೀವ.” (ಓರೆಅಕ್ಷರಗಳು ನಮ್ಮವು.) (ರೋಮಾಪುರ 6:23) ಮರಣವು ಒಂದು ಪೂರ್ಣ ಪ್ರಜ್ಞಾರಹಿತ ಸ್ಥಿತಿಯೆಂಬದನ್ನು ತೋರಿಸುತ್ತಾ ಬೈಬಲಂದದ್ದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೇ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” (ಓರೆಅಕ್ಷರಗಳು ನಮ್ಮವು.) (ಪ್ರಸಂಗಿ 9:5) ಒಬ್ಬ ವ್ಯಕ್ತಿಯು ಸಾಯುವಾಗ ಏನಾಗುತ್ತದೆಂದು ಬೈಬಲು ವಿವರಿಸಿದ್ದು: “ಅವನ ಪ್ರಾಣ ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ನಶಿಸಿ ಹೋಗುವವು.” (ಓರೆಅಕ್ಷರಗಳು ನಮ್ಮವು.)—ಕೀರ್ತನೆ 146:3, 4, NW.

ಆದಾಗ್ಯೂ, ಏದೆನಿನಲ್ಲಿ ಕೊಡಲ್ಪಟ್ಟ ಆ ಆಜ್ಞೆಯನ್ನು ಮುರಿದವರು ಆದಾಮ ಮತ್ತು ಹವ್ವರು ಮಾತ್ರವೇ ಆಗಿರಲಾಗಿ, ನಾವೆಲ್ಲರೂ ಸಾಯುವುದಾದರೂ ಏತಕ್ಕೆ? ಏಕೆಂದರೆ, ನಾವೆಲ್ಲರೂ ಆದಾಮನ ಅವಿಧೇಯತೆಯ ಅನಂತರ ಹುಟ್ಟಿರುವುದರಿಂದಲೇ. ಹೀಗೆ ನಾವೆಲ್ಲರೂ ಆತನಿಂದಲೇ ಪಾಪ ಮತ್ತು ಮರಣವನ್ನು ಬಾಧ್ಯತೆಯಾಗಿ ಪಡೆದೆವು. ಬೈಬಲು ವಿವರಿಸಿದ್ದು: “ಒಬ್ಬ ಮನುಷ್ಯ (ಆದಾಮ)ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; . . . ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮಾಪುರ 5:12; ಯೋಬ 14:4.

ಕೆಲವರಾದರೂ ಹೀಗೆ ಕೇಳಬಹುದು: ‘ಮರಣವನ್ನು ಪಾರಾಗುವ ಒಂದು ಅಮರ ಪ್ರಾಣವು ಮನುಷ್ಯರಿಗಿಲ್ಲವೋ?’ ಇದು ಅನೇಕರಿಗೆ ಕಲಿಸಲ್ಪಟ್ಟಿದೆ, ಮರಣವು ಇನ್ನೊಂದು ಜೀವಿತಕ್ಕೆ ಬಾಗಿಲೆಂದೂ ಹೇಳಲ್ಪಡುತ್ತದೆ. ಆದರೆ ಆ ವಿಚಾರವು ಬೈಬಲಿನಿಂದ ಬಂದದ್ದಲ್ಲ. ದೇವರ ವಾಕ್ಯವಾದರೋ ನೀವು ಒಂದು ಪ್ರಾಣ ಆಗಿದ್ದೀರಿ ಎಂದು ಕಲಿಸುತ್ತದೆ, ನಿಮ್ಮೆಲ್ಲಾ ಶಾರೀರಿಕ ಮತ್ತು ಮಾನಸಿಕ ಗುಣಗಳೊಂದಿಗೆ ಕೂಡಿರುವ ನೀವೇ ನಿಮ್ಮ ಪ್ರಾಣವಾಗಿದ್ದೀರಿ. (ಆದಿಕಾಂಡ 2:7; ಯೆರೆಮೀಯ 2:34; ಜ್ಞಾನೋಕ್ತಿ 2:10) ಬೈಬಲು ಮತ್ತೂ ಅನ್ನುವುದು: “ಪಾಪ ಮಾಡುತ್ತಿರುವ ಪ್ರಾಣವೇ ಸಾಯುವುದು.” (ಯೆಹೆಜ್ಕೇಲ 18:4, NW) ದೇಹದ ಮರಣವನ್ನು ಪಾರಾಗಿ ಉಳಿಯುವ ಒಂದು ಅಮರವಾದ ಪ್ರಾಣವು ಮನುಷ್ಯನಿಗಿದೆಯೆಂದು ಬೈಬಲು ಎಲ್ಲಿಯೂ ಕಲಿಸುವುದಿಲ್ಲ.

ಮನುಷ್ಯರು ಪುನಃ ಜೀವಿತರಾಗುವ ವಿಧ

ಪಾಪ ಮತ್ತು ಮರಣವು ಲೋಕವನ್ನು ಪ್ರವೇಶಿಸಿದ ಅನಂತರ, ಪುನರುತ್ಥಾನದ ಮೂಲಕವಾಗಿ ಮೃತರು ಜೀವಕ್ಕೆ ಪುನಸ್ಥಾಪಿಸಲ್ಪಡುವುದು ತನ್ನ ಉದ್ದೇಶವೆಂದು ದೇವರು ಪ್ರಕಟಿಸಿದನು. ಹೀಗೆ ಬೈಬಲು ತಿಳಿಸುವುದು: “ಅಬ್ರಹಾಮನು . . . ತನ್ನ ಮಗನು [ಇಸಾಕನು] ಸತ್ತರೂ ದೇವರು ಅವನನ್ನು ಬದುಕಿಸ ಸಮರ್ಥನಾಗಿದ್ದಾನೆಂದು ತಿಳುಕೊಂಡನು.” (ಇಬ್ರಿಯ 11:17-19) ಅಬ್ರಹಾಮನ ಭರವಸವು ಅನುಚಿತವಾಗಿರಲಿಲ್ಲ. ಯಾಕಂದರೆ ಬೈಬಲು ಸರ್ವಶಕ್ತನ ಕುರಿತಾಗಿ ಅನ್ನುವುದು: “ದೇವರು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ. ಆತನಿಗೆ ಎಲ್ಲರೂ ಜೀವಿಸುವವರೇ.”—ಲೂಕ 20:37, 38.

ಹೌದು, ತಾನು ಆರಿಸುವ ವ್ಯಕ್ತಿಗಳನ್ನು ಪುನರುತ್ಥಾನಗೊಳಿಸುವ ಶಕ್ತಿಯು ಸರ್ವಶಕ್ತ ದೇವರಿಗಿದೆ ಮಾತ್ರವೇ ಅಲ್ಲ ಅಪೇಕ್ಷೆಯೂ ಇದೆ. ಯೇಸು ಕ್ರಿಸ್ತನು ತಾನೇ ಅಂದದ್ದು: “ಇದಕ್ಕೆ ಆಶ್ಚರ್ಯ ಪಡಬೇಡಿರಿ, ಜ್ಞಾಪಕದ ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”—ಯೋಹಾನ 5:28, 29, NW; ಅ. ಕೃತ್ಯಗಳು 24:15.

ಇದನ್ನು ಹೇಳಿದ ಸ್ವಲ್ಪ ಸಮಯದೊಳಗೇ, ಇಸ್ರೇಲಿನ ನಾಯಿನೆಂಬ ಶಹರದಿಂದ ಹೊರಬರುತ್ತಿದ್ದ ಸ್ಮಶಾನಯಾತ್ರೆಯೊಂದು ಯೇಸುವಿಗೆ ಎದುರಾಯಿತು. ಸತ್ತ ಯುವಕನು ಒಬ್ಬಾಕೆ ವಿಧವೆಯ ಒಬ್ಬನೇ ಮಗನಾಗಿದ್ದನು. ಆಕೆಯು ಅತಿ ದುಃಖದಲ್ಲಿರುವದನ್ನು ಕಂಡು ಯೇಸು ಕನಿಕರಪಟ್ಟನು. ಆದ್ದರಿಂದ ಸತ್ತವನನ್ನುದ್ದೇಶಿಸಿ ಯೇಸು ಆಜ್ಞಾಪಿಸಿದ್ದು: “ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ!” ಯೌವನಸ್ಥನು ಎದ್ದು ಕೂತನು ಮತ್ತು ಯೇಸು ಅವನನ್ನು ಅವನ ತಾಯಿಗೆ ಕೊಟ್ಟನು.—ಲೂಕ 7:11-17.

ಆ ವಿಧವೆಯ ವಿಷಯದಲ್ಲಿ ಹೇಗೋ ಹಾಗೆಯೇ ಯೆಹೂದಿ ಸಭಾ ಮಂದಿರದ ಅಧಿಕಾರಿ ಯಾಯೀರನ ಮನೆಯನ್ನು ಯೇಸು ಸಂದರ್ಶಿಸಿದಾಗಲೂ ಮಹಾ ಭಾವಾತಿರೇಕವು ಉಂಟಾಗಿತ್ತು. ಯಾಯೀರನ 12 ವರ್ಷ ಪ್ರಾಯದ ಹುಡುಗಿ ಸತ್ತಿದ್ದಳು. ಮತ್ತು ಯೇಸು ಅವರ ಮನೆಗೆ ಹೋಗಿ ಮೃತ ಮಗುವಿನ ಕೈ ಹಿಡಿದು “ಅಮ್ಮಣ್ಣೀ ಏಳು” ಎಂದು ಹೇಳಿದಾಗ ಆಕೆ ಎದ್ದು ಕೂತಳು!—ಲೂಕ 8:40-56.

ಸ್ವಲ್ಪ ಸಮಯದ ನಂತರ ಯೇಸುವಿನ ಮಿತ್ರ ಲಾಜರನು ತೀರಿಕೊಂಡನು. ಯೇಸು ಅವನ ಮನೆಗೆ ಹೋದಾಗ ಲಾಜರನು ಸತ್ತು ನಾಲ್ಕು ದಿನವಾಗಿತ್ತು. ಅವನ ಅಕ್ಕ ಮಾರ್ಥಳು ಬಹು ದುಃಖದಲ್ಲಿದ್ದರೂ, ಪುನರುತ್ಥಾನದಲ್ಲಿ ನಿರೀಕ್ಷೆ ವ್ಯಕ್ತಪಡಿಸುತ್ತಾ ಅಂದದ್ದು: “ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದುಬರುವನೆಂದು ನಾನು ಬಲ್ಲೆನು.” ಆದರೆ ಯೇಸು ನೇರವಾಗಿ ಸಮಾಧಿಗೆ ಹೋಗಿ ಅದರ ಮೇಲಿದ್ದ ಕಲ್ಲನ್ನು ತೆಗೆದುಹಾಕಲು ಅಪ್ಪಣೆಕೊಟ್ಟು “ಲಾಜರನೇ, ಹೊರಗೆ ಬಾ” ಎಂದು ಕೂಗಿ ಕರೆದನು. ಲಾಜರನು ಹೊರಗೆ ಬಂದನು!—ಯೋಹಾನ 11:11-44.

ಈಗ ಇದರ ಕುರಿತಾಗಿ ಯೋಚಿಸಿರಿ: ಸತ್ತ ಆ ನಾಲ್ಕು ದಿವಸಗಳಲ್ಲಿ ಲಾಜರನ ಸ್ಥಿತಿಯೇನಾಗಿತ್ತು? ಸ್ವರ್ಗ ಸುಖದಲ್ಲಾಗಲಿ, ನರಕ ಯಾತನೆಯಲ್ಲಾಗಲಿ ಇದ್ದದ್ದರ ಕುರಿತು ಲಾಜರನು ಏನನ್ನೂ ತಿಳಿಸಲಿಲ್ಲ; ಅವನಲ್ಲಿಗೆ ಹೋಗಿದ್ದರೆ ಅದನ್ನು ಖಂಡಿತವಾಗಿಯೂ ತಿಳಿಸುತ್ತಿದ್ದನು. ಇಲ್ಲ, ಲಾಜರನು ಮರಣದಲ್ಲಿ ಪೂರ್ಣ ಪ್ರಜ್ಞಾರಹಿತನಾಗಿದ್ದನು ಮತ್ತು ಯೇಸು ಅವನನ್ನು ಪುನರ್ಜೀವಿತಗೊಳಿಸದೇ ಹೋಗಿದ್ದರೆ, ‘ಕಡೇ ದಿನದಲ್ಲಾಗುವ ಪುನರುತ್ಥಾನದ’ ತನಕ ಹಾಗೆಯೇ ಉಳಿಯುತ್ತಿದ್ದನು.

ಯೇಸು ಮಾಡಿದ ಈ ಅದ್ಭುತಗಳು ಕೇವಲ ತಾತ್ಕಾಲಿಕ ಪ್ರಯೋಜನ ತಂದವೆಂಬದು ನಿಜ ಯಾಕಂದರೆ ಆತನು ಪುನರುತ್ಥಾನ ಮಾಡಿದ್ದ ಆ ಮನುಷ್ಯರು ಪುನಃ ಸತ್ತುಹೋದರು. ಆದರೂ, ದೇವರ ಶಕ್ತಿಯಿಂದಾಗಿ ಸತ್ತವರು ನಿಜವಾಗಿಯೂ ಪುನಃ ಜೀವಿಸುವರೆಂಬದಕ್ಕೆ ರುಜುವಾತನ್ನು 1,900 ವರ್ಷಗಳ ಹಿಂದೆ ಯೇಸು ಈ ರೀತಿಯಲ್ಲಿ ಕೊಟ್ಟನು! ದೇವರ ರಾಜ್ಯದ ಕೆಳಗಿನ ಭೂಮಿಯಲ್ಲಿ ಏನು ಸಂಭವಿಸಲಿದೆಂಬುದನ್ನು ಒಂದು ಚಿಕ್ಕ ಪ್ರಮಾಣದಲ್ಲಿ ಯೇಸುವಿನ ಅದ್ಭುತಗಳು ತೋರಿಸಿದವು.

ಪ್ರಿಯ ಜನರಲೊಬ್ಬರು ಸಾಯುವಾಗ

ಪುನರುತ್ಥಾನದಲ್ಲಿ ನೀವು ನಿರೀಕ್ಷೆಯಿಡುವುದಾದರೂ, ಮರಣವೆಂಬ ಶತ್ರುವು ಹೊಡೆಯುವಾಗ ನಿಮಗಾಗುವ ದುಃಖವು ಬಹಳ. ತನ್ನ ಪತ್ನಿಯು ಪುನಃ ಜೀವದಿಂದೇಳುವಳೆಂಬ ನಂಬಿಕೆಯು ಅಬ್ರಹಾಮನಿಗಿತ್ತು ಆದರೂ, “ಅಬ್ರಹಾಮನು ಬಂದು ಆಕೆಯ ನಿಮಿತ್ತ ಗೋಳಾಡಿ ಕಣ್ಣೀರು ಸುರಿಸಿದನು” ಎಂದು ನಾವು ಓದುತ್ತೇವೆ. (ಆದಿಕಾಂಡ 23:2) ಮತ್ತು ಯೇಸುವಿನ ವಿಷಯದಲ್ಲೇನು? ಲಾಜರನು ಸತ್ತಾಗ ಅವನು “ಆತ್ಮದಲ್ಲಿ ನೊಂದುಕೊಂಡು ತತ್ತರಿಸಿ”ದನು ಮತ್ತು ತುಸು ವೇಳೆಯೊಳಗೆ “ಕಣ್ಣೀರು ಬಿಟ್ಟನು.” (ಯೋಹಾನ 11:33, 35) ಹೀಗೆ, ನಿಮ್ಮ ಪ್ರಿಯರೊಬ್ಬರು ಸತ್ತಾಗ ನೀವು ಶೋಕಿಸುವುದು ನಿರ್ಬಲತೆಯಾಗಿ ಪರಿಗಣಿಸಲ್ಪಡದು.

ಮಗುವೊಂದು ಸತ್ತಾಗ ಅದರ ತಾಯಿಗಾಗುವ ದುಃಖವು ಅಪ್ಟಿಷ್ಟಲ್ಲ. ಒಬ್ಬ ತಾಯಿಯು ಅನುಭವಿಸಬಹುದಾದ ಕಡು ದುಃಖವನ್ನು ಬೈಬಲು ಅಂಗೀಕರಿಸಿಯದೆ. (2 ಅರಸುಗಳು 4:27) ವಿಯೋಗಗೊಂಡ ತಂದೆಗೂ ಅದು ಕಷ್ಟಕರವೆಂಬದಕ್ಕೆ ಸಂದೇಹವಿಲ್ಲ. ಮಗನಾದ ಅಬ್ಸಾಲೋಮನು ಸತ್ತಾಗ ದಾವೀದನು—“ನಿನಗೆ ಬದಲಾಗಿ ನಾನು ಸತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು” ಎಂದು ಶೋಕಿಸಿದ್ದನು.—2 ಸಮುವೇಲ 18:33.

ಆದರೂ, ಪುನರುತ್ಥಾನದಲ್ಲಿ ನಿಮಗಿರುವ ದೃಢ ಭರವಸದ ಕಾರಣ ನಿಮ್ಮ ದುಃಖವು ಶಮನವಾಗದೇ ಇರುವಂಥಾದ್ದಲ್ಲ. ಬೈಬಲು ಹೇಳುವ ಪ್ರಕಾರ “ನಿರೀಕ್ಷೆಯಿಲ್ಲದವರಾದ ಇತರರಂತೆ ದುಃಖಿಸುವದು” ನಿಮಗೆ ಉಚಿತವಲ್ಲ. (1 ಥೆಸಲೊನೀಕ 4:13) ಬದಲಾಗಿ, ಪ್ರಾರ್ಥನೆಯಲ್ಲಿ ದೇವರ ಸಾಮೀಪ್ಯಕ್ಕೆ ಹೋಗಿರಿ ಮತ್ತು “ಆತನು ತಾನೇ ನಿಮ್ಮನ್ನು ಬಲಪಡಿಸುವನು” ಎಂದು ಬೈಬಲು ವಚನವಿತ್ತಿದೆ.—ಕೀರ್ತನೆ 55:22, NW.

ಬೇರೆ ರೀತಿಯಲ್ಲಿ ಸೂಚಿಸಲ್ಪಡದೇ ಇರುವಲ್ಲಿ, ಇದರಲ್ಲಿರುವ ಬೈಬಲ್‌ ಉಲ್ಲೇಖಗಳೆಲ್ಲವೂ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌ನಿಂದ ತೆಗೆದವುಗಳು.