ಆದಿಕಾಂಡ 16:1-16

  • ಹಾಗರ ಮತ್ತು ಇಷ್ಮಾಯೇಲ್‌ (1-16)

16  ಅಬ್ರಾಮನ ಹೆಂಡತಿ ಸಾರಯಳಿಗೆ ಮಕ್ಕಳಿರಲಿಲ್ಲ.+ ಅವಳಿಗೆ ಈಜಿಪ್ಟ್‌ ದೇಶದ ಹಾಗರ್‌+ ಅನ್ನೋ ಸೇವಕಿ ಇದ್ದಳು.  ಸಾರಯ ಅಬ್ರಾಮನಿಗೆ “ದಯವಿಟ್ಟು ನಾನು ಹೇಳೋದನ್ನ ಕೇಳು. ನನಗೆ ಮಕ್ಕಳಾಗದ ಹಾಗೆ ಯೆಹೋವ ತಡಿದಿದ್ದಾನೆ. ಹಾಗಾಗಿ ದಯವಿಟ್ಟು ನನ್ನ ಸೇವಕಿ ಜೊತೆ ಮಲಗು. ಅವಳಿಂದಾದ್ರೂ ನಂಗೆ ಮಕ್ಕಳಾಗ್ಲಿ” ಅಂದಳು.+ ಅಬ್ರಾಮ ಸಾರಯ ಹೇಳಿದ ಹಾಗೆ ಮಾಡಿದ.  ಅಬ್ರಾಮ ಕಾನಾನ್‌ ದೇಶಕ್ಕೆ ಬಂದು ಆಗ ಹತ್ತು ವರ್ಷ ಆಗಿತ್ತು. ಸಾರಯ ಈಜಿಪ್ಟಿನ ತನ್ನ ಸೇವಕಿ ಹಾಗರಳನ್ನ ತನ್ನ ಗಂಡ ಅಬ್ರಾಮನಿಗೆ ಹೆಂಡತಿಯಾಗಿ ಕೊಟ್ಟಳು.  ಅಬ್ರಾಮ ಹಾಗರಳ ಜೊತೆ ಮಲಗಿದ, ಅವಳು ಗರ್ಭಿಣಿ ಆದಳು. ಗರ್ಭಿಣಿ ಆಗಿದ್ದೀನಿ ಅಂತ ಹಾಗರಳಿಗೆ ಗೊತ್ತಾದಾಗ ಅವಳು ಯಜಮಾನಿಯನ್ನ ಕೀಳಾಗಿ ನೋಡೋಕೆ ಶುರುಮಾಡಿದಳು.  ಆಗ ಸಾರಯ ಅಬ್ರಾಮನಿಗೆ “ನನಗೆ ಆಗ್ತಿರೋ ಈ ಅನ್ಯಾಯಕ್ಕೆ ನೀನೇ ಕಾರಣ. ನನ್ನ ಸೇವಕಿನ ನಾನೇ ನಿನಗೆ ಕೊಟ್ಟೆ. ಆದ್ರೆ ಗರ್ಭಿಣಿ ಅಂತ ಗೊತ್ತಾದಾಗಿಂದ ಅವಳು ನನ್ನನ್ನ ಕೀಳಾಗಿ ನೋಡ್ತಿದ್ದಾಳೆ. ತಪ್ಪು ನಂದಾ ನಿಂದಾ ಅಂತ ಯೆಹೋವನೇ ನ್ಯಾಯತೀರಿಸಲಿ” ಅಂದಳು.  ಅದಕ್ಕೆ ಅಬ್ರಾಮ ಸಾರಯಗೆ “ನೀನು ಅವಳ ಯಜಮಾನಿ ಅಲ್ವಾ? ನಿನಗೆ ಸರಿ ಅನಿಸಿದನ್ನ ಅವಳಿಗೆ ಮಾಡು” ಅಂದ. ಆಮೇಲೆ ಸಾರಯ ಹಾಗರಳಿಗೆ ಅವಮಾನ ಮಾಡಿದಳು. ಆಗ ಅವಳು ಅಲ್ಲಿಂದ ಓಡಿಹೋದಳು.  ಹಾಗರ ಶೂರಿಗೆ+ ಹೋಗೋ ದಾರಿಯಲ್ಲಿದ್ದ ಕಾಡಿಗೆ ಬಂದಳು. ಅವಳು ಒಂದು ಬಾವಿ ಹತ್ರ ಇದ್ದಾಗ ಯೆಹೋವನ ದೂತ ಅವಳ ಮುಂದೆ ಬಂದ.  ಅವನು ಅವಳಿಗೆ “ಸಾರಯಳ ಸೇವಕಿ ಹಾಗರ, ಎಲ್ಲಿಂದ ಬಂದೆ? ಎಲ್ಲಿ ಹೋಗ್ತಿದ್ಯಾ?” ಅಂತ ಕೇಳಿದ. ಅದಕ್ಕೆ ಅವಳು “ನಾನು ನನ್ನ ಯಜಮಾನಿ ಸಾರಯಳಿಂದ ಓಡಿಹೋಗ್ತಾ ಇದ್ದಿನಿ” ಅಂದಳು.  ಯೆಹೋವನ ದೂತ ಅವಳಿಗೆ “ನೀನು ನಿನ್ನ ಯಜಮಾನಿ ಹತ್ರ ವಾಪಸ್‌ ಹೋಗು. ಅವಳು ಏನೇ ಹೇಳಿದ್ರೂ ಅವಳಿಗೆ ಗೌರವ ಕೊಟ್ಟು ಹೇಳಿದ ಹಾಗೆ ಮಾಡು” ಅಂದನು. 10  ಆಮೇಲೆ ಯೆಹೋವನ ದೂತ “ನಿನ್ನ ವಂಶ ತುಂಬ ವೃದ್ಧಿಯಾಗೋ ತರ ದೇವರು ಮಾಡ್ತಾನೆ. ಅವರ ಸಂಖ್ಯೆ ಲೆಕ್ಕಮಾಡೋಕೆ ಆಗದಷ್ಟು ಹೆಚ್ಚಾಗುತ್ತೆ” ಅಂದನು.+ 11  ಅಷ್ಟೇ ಅಲ್ಲ ಯೆಹೋವನ ದೂತ ಅವಳಿಗೆ: “ಗರ್ಭಿಣಿಯಾಗಿರೋ ನಿಂಗೆ ಒಬ್ಬ ಮಗ ಹುಟ್ತಾನೆ. ನೀನು ಕಷ್ಟದಲ್ಲಿ ಇರೋವಾಗ ಯೆಹೋವ ನಿನ್ನ ಕೂಗನ್ನ ಕೇಳಿದ್ರಿಂದ ಆ ಮಗಗೆ ಇಷ್ಮಾಯೇಲ್‌* ಅಂತ ಹೆಸರಿಡಬೇಕು. 12  ಅವನು ಕಾಡು ಕತ್ತೆ* ತರ ಇರ್ತಾನೆ. ಅವನು ಎಲ್ರನ್ನ ವಿರೋಧಿಸ್ತಾನೆ, ಎಲ್ರೂ ಅವನನ್ನ ವಿರೋಧಿಸ್ತಾರೆ. ಆದ್ರೂ ಅವನು ತನ್ನೆಲ್ಲ ತಮ್ಮಂದಿರ ಮುಂದೆನೇ ವಾಸಿಸ್ತಾನೆ”* ಅಂದನು. 13  ಆಮೇಲೆ ಹಾಗರ ತನ್ನ ಜೊತೆ ಮಾತಾಡ್ತಿದ್ದ ಯೆಹೋವನ ಹೆಸರನ್ನ ಹೊಗಳಿ “ನೀನು ಎಲ್ಲವನ್ನೂ ನೋಡೋ ದೇವರು”+ ಅಂದಳು. ಅಲ್ಲದೆ “ನನ್ನನ್ನ ನೋಡೋ ವ್ಯಕ್ತಿನ ನಾನು ಇಲ್ಲಿ ನಿಜವಾಗ್ಲೂ ನೋಡ್ದೆ” ಅಂದಳು. 14  ಹಾಗಾಗಿ ಆ ಬುಗ್ಗೆಗೆ ಲಹೈರೋಯಿ ಬಾವಿ* ಅನ್ನೋ ಹೆಸ್ರು ಬಂತು. (ಇದು ಕಾದೇಶ್‌ ಮತ್ತು ಬೆರೆದಿನ ಮಧ್ಯದಲ್ಲಿದೆ.) 15  ಹಾಗರಳಿಂದ ಅಬ್ರಾಮನಿಗೆ ಒಬ್ಬ ಮಗ ಹುಟ್ಟಿದ. ಅಬ್ರಾಮ ತನ್ನ ಮಗನಿಗೆ ಇಷ್ಮಾಯೇಲ್‌ ಅಂತ ಹೆಸರಿಟ್ಟ.+ 16  ಇಷ್ಮಾಯೇಲ್‌ ಹುಟ್ಟಿದಾಗ ಅಬ್ರಾಮನಿಗೆ 86 ವರ್ಷ.

ಪಾದಟಿಪ್ಪಣಿ

ಅರ್ಥ “ದೇವರು ಕೇಳ್ತಾನೆ.”
ಇದು, ಇಷ್ಟ ಬಂದ ಹಾಗೆ ನಡಿಯೋ ಮನೋಭಾವನ ಸೂಚಿಸುತ್ತೆ.
ಬಹುಶಃ “ವಿರೋಧ ಕಟ್ಕೊಂಡೇ ಜೀವಿಸ್ತಾನೆ.”
ಅರ್ಥ “ನನ್ನನ್ನ ನೋಡೋ ಜೀವವುಳ್ಳ [ದೇವರ] ಬಾವಿ.”