ಆದಿಕಾಂಡ 39:1-23

  • ಪೋಟೀಫರನ ಮನೇಲಿ ಯೋಸೇಫ (1-6)

  • ಬಲೆಗೆ ಬೀಳದ ಯೋಸೇಫ (7-20)

  • ಯೋಸೇಫ ಜೈಲಲ್ಲಿ (21-23)

39  ಇಷ್ಮಾಯೇಲ್ಯರು+ ಯೋಸೇಫನನ್ನ ಈಜಿಪ್ಟಿಗೆ+ ಕರ್ಕೊಂಡು ಹೋದ ಮೇಲೆ ಅವನನ್ನ ಈಜಿಪ್ಟಿನ ಪೋಟೀಫರ+ ಖರೀದಿಸಿದ. ಪೋಟೀಫರ ಫರೋಹನ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದ, ಕಾವಲುಗಾರರ ಮುಖ್ಯಸ್ಥನಾಗಿದ್ದ.  ಯೆಹೋವ ಯೋಸೇಫನ+ ಜೊತೆಯಲ್ಲಿ ಇದ್ದದ್ರಿಂದ ಅವನು ಮಾಡಿದ ಎಲ್ಲ ಕೆಲಸಗಳಲ್ಲಿ ಅವನಿಗೆ ಯಶಸ್ಸು ಸಿಕ್ತು. ಅಷ್ಟೇ ಅಲ್ಲ, ಈಜಿಪ್ಟಿನ ಅವನ ಧಣಿ ಅವನಿಗೆ ತನ್ನ ಮನೆಯಲ್ಲಿ ಕೆಲವು ಜವಾಬ್ದಾರಿ ಕೊಟ್ಟ.  ಯೆಹೋವ ಅವನ ಜೊತೆ ಇರೋದನ್ನ, ಅವನ ಪ್ರತಿಯೊಂದು ಕೆಲಸವನ್ನ ಯೆಹೋವ ಆಶೀರ್ವದಿಸ್ತಾ ಇರೋದನ್ನ ಅವನ ಧಣಿ ಗಮನಿಸಿದ.  ಪೋಟೀಫರ ಯೋಸೇಫನನ್ನ ತುಂಬ ಮೆಚ್ಚಿದ. ಹಾಗಾಗಿ ಅವನನ್ನ ತನ್ನ ಮುಖ್ಯ ಸೇವಕನನ್ನಾಗಿ ನೇಮಿಸಿದ. ಮನೆಯ ಎಲ್ಲ ಕೆಲಸಕಾರ್ಯಗಳನ್ನ, ತನಗಿದ್ದ ಎಲ್ಲವನ್ನ ನೋಡ್ಕೊಳ್ಳೋಕೆ ಯೋಸೇಫನನ್ನ ನೇಮಿಸಿದ.  ಅವತ್ತಿಂದ ಯೆಹೋವ ಯೋಸೇಫನಿಂದಾಗಿ ಆ ಈಜಿಪ್ಟಿನವನ ಮನೆಯವರನ್ನ ಆಶೀರ್ವದಿಸ್ತಾ ಇದ್ದನು. ಪೋಟೀಫರನ ಮನೆ ಮತ್ತು ಜಮೀನಲ್ಲಿದ್ದ ಎಲ್ಲವನ್ನ ಯೆಹೋವ ಆಶೀರ್ವದಿಸಿದನು.+  ಸಮಯ ಕಳೆದ ಹಾಗೆ ಧಣಿ ತನ್ನೆಲ್ಲ ಆಸ್ತಿ ನೋಡ್ಕೊಳ್ಳೋ ಜವಾಬ್ದಾರಿ ಸಹ ಯೋಸೇಫನಿಗೆ ಕೊಟ್ಟ. ಹಾಗಾಗಿ ಆ ಧಣಿಗೆ ಯಾವುದರ ಬಗ್ಗೆನೂ ಚಿಂತೆ ಇರಲಿಲ್ಲ. ಊಟಕ್ಕೆ ಏನೇನು ಇರಬೇಕು ಅನ್ನೋದನ್ನ ಮಾತ್ರ ಹೇಳ್ತಿದ್ದ. ಯೋಸೇಫ ದೊಡ್ಡವನಾದಾಗ ನೋಡೋಕೆ ತುಂಬ ಸುಂದರನಾಗಿದ್ದ. ಅವನಿಗೆ ಗಟ್ಟಿಮುಟ್ಟಾದ ಮೈಕಟ್ಟಿತ್ತು.  ಸ್ವಲ್ಪ ಸಮಯ ಆದ್ಮೇಲೆ ಧಣಿಯ ಹೆಂಡತಿ ಯೋಸೇಫನ ಮೇಲೆ ಕಣ್ಣುಹಾಕೋಕೆ ಶುರುಮಾಡಿದಳು. ಅಲ್ಲದೆ ಅವನಿಗೆ “ಬಾ, ನನ್ನ ಜೊತೆ ಮಲಗು” ಅಂತ ಕರಿತಿದ್ದಳು.  ಆದ್ರೆ ಅವನು ಅದಕ್ಕೆ ಒಪ್ಪದೆ ಅವಳಿಗೆ “ನೋಡು, ನನ್ನ ಧಣಿ ತನಗಿರೋ ಎಲ್ಲವನ್ನ ನನ್ನ ಕೈಗೆ ಒಪ್ಪಿಸಿದ್ದಾನೆ. ಅವನು ಯಾವತ್ತೂ ಯಾವುದರ ಬಗ್ಗೆನೂ ನನ್ನಿಂದ ಲೆಕ್ಕ ಕೇಳಲ್ಲ. ನನ್ನ ಮೇಲೆ ಅವನಿಗೆ ಅಷ್ಟು ನಂಬಿಕೆ ಇದೆ.  ಈ ಮನೇಲಿ ನನಗೆ ಇರುವಷ್ಟು ಅಧಿಕಾರ ಬೇರೆ ಯಾರಿಗೂ ಇಲ್ಲ. ಧಣಿ ಎಲ್ಲವನ್ನ ನನ್ನ ಕೈಗೆ ಕೊಟ್ಟಿದ್ದಾನೆ. ಆದ್ರೆ ನೀನು ಅವನ ಹೆಂಡತಿ ಆಗಿರೋದ್ರಿಂದ ನಿನ್ನನ್ನ ಮಾತ್ರ ನನ್ನ ಕೈಗೆ ಒಪ್ಪಿಸಲಿಲ್ಲ. ಹೀಗಿದ್ದ ಮೇಲೆ ಈ ಮಹಾ ಕೆಟ್ಟ ಕೆಲಸ ಮಾಡಿ ದೇವರ ವಿರುದ್ಧ ಪಾಪ ಮಾಡೋಕೆ ನನ್ನಿಂದ ಸಾಧ್ಯನೇ ಇಲ್ಲ”+ ಅಂದ. 10  ಅವಳು ಪ್ರತಿದಿನ ಯೋಸೇಫನ ಹತ್ರ ಮಾತಾಡಿ ಒಪ್ಪಿಸೋಕೆ ಪ್ರಯತ್ನಿಸ್ತಾ ಇದ್ದಳು. ಆದ್ರೆ ಅವನು ಅವಳ ಜೊತೆ ಮಲಗೋದಕ್ಕಾಗಲಿ ಅವಳ ಜೊತೆ ಇರೋದಕ್ಕಾಗಲಿ ಒಪ್ಪಿಕೊಳ್ಳಲೇ ಇಲ್ಲ. 11  ಒಂದಿನ ಅವನು ಕೆಲಸ ಮಾಡೋಕೆ ಮನೆಯೊಳಗೆ ಹೋದಾಗ ಮನೆಯಲ್ಲಿ ಕೆಲಸದವರು ಯಾರೂ ಇರಲಿಲ್ಲ. 12  ಆಗ ಅವಳು ಅವನ ಬಟ್ಟೆ ಹಿಡಿದು ಎಳೆದು “ಬಾ, ನನ್ನ ಜೊತೆ ಮಲಗು” ಅಂದಳು. ಅವನು ತನ್ನ ಬಟ್ಟೆ ಅವಳ ಕೈಯಲ್ಲೇ ಬಿಟ್ಟು ಹೊರಗೆ ಓಡಿ ಹೋದ. 13  ಅವನು ಹೊರಗೆ ಓಡಿ ಹೋದದ್ದನ್ನ ಮತ್ತು ಅವನ ಬಟ್ಟೆ ತನ್ನ ಕೈಯಲ್ಲೇ ಇರೋದನ್ನ ಅವಳು ನೋಡಿದ ತಕ್ಷಣ 14  ಗಟ್ಟಿಯಾಗಿ ಕೂಗಿ ಮನೆಯ ಗಂಡಸರನ್ನ ಕರೆದು “ನೋಡಿ, ನನ್ನ ಗಂಡ ಈ ಇಬ್ರಿಯನನ್ನ ಕರ್ಕೊಂಡು ಬಂದು ನಮ್ಮನ್ನ ಅವಮಾನ ಮಾಡಿದ್ದಾನೆ.* ಆ ಇಬ್ರಿಯ ನನ್ನನ್ನ ಕೆಡಿಸೋಕೆ ಬಂದ. ಆಗ ನಾನು ಜೋರಾಗಿ ಕಿರಿಚಿದೆ. 15  ಕಿರಿಚಿದ ತಕ್ಷಣ ಅವನು ತನ್ನ ಬಟ್ಟೆನ ನನ್ನ ಹತ್ರ ಬಿಟ್ಟು ಓಡಿಹೋದ” ಅಂದಳು. 16  ಆಮೇಲೆ ಅವಳು ಯೋಸೇಫನ ಧಣಿ ಮನೆಗೆ ಬರೋ ತನಕ ಆ ಬಟ್ಟೆಯನ್ನ ತನ್ನ ಹತ್ರಾನೇ ಇಟ್ಟುಕೊಂಡಳು. 17  ಗಂಡ ಮನೆಗೆ ಬಂದಾಗ ಅವಳು ಅದನ್ನೇ ಹೇಳ್ತಾ “ನೀನು ನಮ್ಮ ಮನೆಗೆ ಕರ್ಕೊಂಡು ಬಂದ ಆ ಇಬ್ರಿಯ ಸೇವಕ ನನಗೆ ಅವಮಾನ ಮಾಡೋಕೆ ಪ್ರಯತ್ನಿಸಿದ. 18  ಆದ್ರೆ ನಾನು ಜೋರಾಗಿ ಕಿರಿಚಿದಾಗ ತಕ್ಷಣ ಅವನು ತನ್ನ ಬಟ್ಟೆಯನ್ನ ನನ್ನ ಹತ್ರ ಬಿಟ್ಟು ಓಡಿಹೋದ” ಅಂದಳು. 19  “ನಿನ್ನ ಸೇವಕ ನನಗೆ ಹೀಗೀಗೆ ಮಾಡಿದ” ಅಂತ ಹೆಂಡತಿ ಹೇಳಿದ್ದನ್ನ ಕೇಳಿ ಪೋಟೀಫರನ ಕೋಪ ನೆತ್ತಿಗೇರಿತು. 20  ಹಾಗಾಗಿ ಅವನು ಯೋಸೇಫನನ್ನ ಹಿಡಿದು ರಾಜನ ಕೈದಿಗಳನ್ನ ಇಡ್ತಿದ್ದ ಜೈಲಿಗೆ ಹಾಕಿಸಿದ. ಹೀಗೆ ಯೋಸೇಫ ಜೈಲಲ್ಲೇ ಇದ್ದ.+ 21  ಆದ್ರೆ ಯೆಹೋವ ಯಾವಾಗ್ಲೂ ಯೋಸೇಫನ ಜೊತೆ ಇದ್ದನು, ಅವನಿಗೆ ಶಾಶ್ವತ ಪ್ರೀತಿ ತೋರಿಸ್ತಾ ಇದ್ದನು. ಅಲ್ಲದೆ ಆತನು ಯೋಸೇಫನನ್ನ ಆಶೀರ್ವದಿಸಿ ಜೈಲಿನ ಮುಖ್ಯಾಧಿಕಾರಿ ಅವನಿಗೆ ದಯೆ ತೋರಿಸೋ ತರ ಮಾಡಿದನು.+ 22  ಹಾಗಾಗಿ ಜೈಲಿನ ಮುಖ್ಯಾಧಿಕಾರಿ ಎಲ್ಲ ಕೈದಿಗಳ ಮೇಲ್ವಿಚಾರಣೆ ಮಾಡೋಕೆ ಯೋಸೇಫನನ್ನ ನೇಮಿಸಿದ. ಏನೇನು ಕೆಲಸ ಮಾಡಬೇಕು ಅಂತ ಯೋಸೇಫನೇ ಕೈದಿಗಳಿಗೆ ಅಪ್ಪಣೆ ಕೊಡ್ತಿದ್ದ.+ 23  ಯೆಹೋವ ಯೋಸೇಫನ ಜೊತೆ ಇದ್ದನು. ಅವನು ಮಾಡ್ತಿದ್ದ ಎಲ್ಲ ಕೆಲಸವನ್ನ ಯೆಹೋವ ಯಶಸ್ವಿ ಮಾಡ್ತಿದ್ದನು. ಹಾಗಾಗಿ ಯೋಸೇಫನ ಕೈಕೆಳಗಿದ್ದ ಯಾವುದೇ ವಿಷ್ಯದ ಬಗ್ಗೆ ಜೈಲಿನ ಮುಖ್ಯಾಧಿಕಾರಿಗೆ ಸ್ವಲ್ಪನೂ ಚಿಂತೆ ಇರಲಿಲ್ಲ.+

ಪಾದಟಿಪ್ಪಣಿ

ಅಕ್ಷ. “ನಮ್ಮನ್ನ ನಗೆಗೀಡು ಮಾಡಿದ್ದಾನೆ.”