ಆದಿಕಾಂಡ 4:1-26

  • ಕಾಯಿನ ಮತ್ತು ಹೇಬೆಲ (1-16)

  • ಕಾಯಿನನ ವಂಶದವರು (17-24)

  • ಸೇತ, ಅವನ ಮಗ ಎನೋಷ (25, 26)

4  ಆದಾಮ ತನ್ನ ಹೆಂಡತಿ ಹವ್ವಳ ಜೊತೆ ಸಂಬಂಧ ಇಟ್ಟಿದ್ರಿಂದ ಅವಳು ಗರ್ಭಿಣಿಯಾದಳು.+ ಅವಳಿಗೆ ಕಾಯಿನ+ ಹುಟ್ಟಿದ. ಆಗ “ಯೆಹೋವನ ಆಶೀರ್ವಾದದಿಂದ ನನಗೆ ಗಂಡುಮಗು ಆಗಿದೆ” ಅಂದಳು.  ಆಮೇಲೆ ಅವಳಿಗೆ ಇನ್ನೊಂದು ಮಗು ಆಯ್ತು. ಅವನೇ ಕಾಯಿನನ ತಮ್ಮ ಹೇಬೆಲ.+ ಹೇಬೆಲ ದೊಡ್ಡವನಾದ ಮೇಲೆ ಕುರುಬನಾದ. ಕಾಯಿನ ವ್ಯವಸಾಯ ಮಾಡಿದ.  ಸ್ವಲ್ಪ ಸಮಯ ಆದ್ಮೇಲೆ ಕಾಯಿನ ಹೊಲದ ಬೆಳೆಯಲ್ಲಿ ಸ್ವಲ್ಪ ತಂದು ಯೆಹೋವನಿಗೆ ಅರ್ಪಿಸಿದ.  ಆದ್ರೆ ಹೇಬೆಲ ತನ್ನ ಕುರಿಗಳಿಗೆ ಹುಟ್ಟಿದ ಮೊದಲ ಮರಿಗಳಲ್ಲಿ+ ಕೆಲವನ್ನ ತಂದು ಕೊಬ್ಬಿನ ಸಮೇತ ಅರ್ಪಿಸಿದ. ಯೆಹೋವ ಹೇಬೆಲನನ್ನ ಅವನ ಅರ್ಪಣೆಯನ್ನ ಇಷ್ಟಪಟ್ಟನು.+  ಆದ್ರೆ ಕಾಯಿನನನ್ನ ಅವನ ಅರ್ಪಣೆಯನ್ನ ಸ್ವಲ್ಪನೂ ಇಷ್ಟಪಡಲಿಲ್ಲ. ಹಾಗಾಗಿ ಕಾಯಿನನ ಕೋಪ ನೆತ್ತಿಗೇರಿತು, ಅವನ ಮುಖ ಬಾಡಿಹೋಯ್ತು.  ಆಗ ಯೆಹೋವ ಕಾಯಿನನಿಗೆ “ಯಾಕಿಷ್ಟು ಕೋಪ? ಯಾಕೆ ನಿನ್ನ ಮುಖ ಬಾಡಿಹೋಗಿದೆ?  ಕೆಟ್ಟ ಯೋಚ್ನೆ ಬಿಟ್ಟು ಒಳ್ಳೇದು ಮಾಡಿದ್ರೆ ನಾನು ನಿನ್ನನ್ನ ಇಷ್ಟಪಡ್ತೀನಿ. ಇಲ್ಲದಿದ್ರೆ ಪಾಪ ನಿನ್ನನ್ನ ಹಿಡಿಯೋಕೆ* ಬಾಗಿಲಲ್ಲಿ ಹೊಂಚು ಹಾಕ್ತಾ ಇದೆ. ಅದು ನಿನ್ನನ್ನ ಸೋಲಿಸದ ಹಾಗೆ ನೀನು ಪಾಪದ ಮೇಲೆ ಜಯ ಸಾಧಿಸಬೇಕು” ಅಂದನು.  ಇದಾದ ಮೇಲೆ ಕಾಯಿನ ಹೇಬೆಲನಿಗೆ “ಕಾಡಿಗೆ ಹೋಗೋಣ ಬಾ” ಅಂತ ಕರೆದ. ಇಬ್ರೂ ಬಯಲಲ್ಲಿ ಇದ್ದಾಗ ಕಾಯಿನ ಹೇಬೆಲನ ಮೇಲೆ ಬಿದ್ದು ಅವನನ್ನ ಹೊಡೆದು ಕೊಂದ.+  ಆಮೇಲೆ ಯೆಹೋವ ಕಾಯಿನನಿಗೆ “ನಿನ್ನ ತಮ್ಮ ಹೇಬೆಲ ಎಲ್ಲಿ?” ಅಂತ ಕೇಳಿದನು. ಅದಕ್ಕವನು “ನಂಗೇನು ಗೊತ್ತು? ನಾನೇನು ನನ್ನ ತಮ್ಮನನ್ನ ಕಾಯೋನಾ?” ಅಂದ. 10  ಆಗ ಆತನು “ಎಂಥ ಕೆಲಸ ಮಾಡ್ದೆ? ಕೇಳಿಸ್ಕೊ, ನಿನ್ನ ತಮ್ಮನ ರಕ್ತ ನೆಲದಿಂದ ನ್ಯಾಯಕ್ಕಾಗಿ ನನ್ನನ್ನ ಕೂಗ್ತಿದೆ.+ 11  ಈ ನೆಲದಲ್ಲಿ ನೀನು ನಿನ್ನ ತಮ್ಮನ ರಕ್ತನ ಸುರಿಸಿದ್ರಿಂದ ನೀನು ಇಲ್ಲಿ ಇರಬಾರದು, ಇಲ್ಲಿಂದ ಹೋಗಿಬಿಡು. ಇದು ನಾನು ನಿನಗೆ ಕೊಡೋ ಶಾಪ.+ 12  ನೀನು ವ್ಯವಸಾಯ ಮಾಡೋವಾಗ ನೆಲ ನಿನಗೆ ಬೆಳೆ ಕೊಡಲ್ಲ. ನೀನು ಭೂಮೀಲಿ ಅಲೆಮಾರಿಯಾಗಿ ಇರ್ತಿಯ, ತಲೆತಪ್ಪಿಸ್ಕೊಂಡು ಅಲ್ಲಲ್ಲಿ ತಿರುಗಾಡ್ತಿಯ” ಅಂದನು. 13  ಅದಕ್ಕೆ ಕಾಯಿನ ಯೆಹೋವನಿಗೆ “ನನ್ನ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆ ಕೊಟ್ಟಿದ್ದಿಯಲ್ಲಾ. ನನಗೆ ಇದನ್ನ ಸಹಿಸೋಕೆ ಆಗಲ್ಲ. 14  ಇವತ್ತು ನೀನು ನನ್ನನ್ನ ಈ ಜಾಗದಿಂದ ಹೊರಗೆ ಹಾಕ್ತಾ ಇದ್ದೀಯ, ನಿನ್ನ ಕಣ್ಣೆದುರಿಂದ ನನ್ನನ್ನ ಓಡಿಸ್ತಾ ಇದ್ದೀಯ. ನಾನು ತಲೆತಪ್ಪಿಸ್ಕೊಂಡು ಭೂಮೀಲಿ ಅಲೆಮಾರಿಯಾಗಿ ಅಲ್ಲಲ್ಲಿ ತಿರುಗಾಡಬೇಕಾಗುತ್ತೆ. ಯಾರಾದ್ರೂ ನನ್ನನ್ನ ನೋಡಿದ್ರೆ ಖಂಡಿತ ಕೊಲ್ತಾರೆ” ಅಂದ. 15  ಅದಕ್ಕೆ ಯೆಹೋವ “ಹಾಗೆ ಆಗಲ್ಲ. ಕಾಯಿನನನ್ನ ಕೊಲ್ಲುವವನಿಗೆ ಏಳು ಪಟ್ಟು ಶಿಕ್ಷೆಯಾಗುತ್ತೆ” ಅಂದನು. ಹಾಗಾಗಿ ಯಾರೂ ಕಾಯಿನನನ್ನ ಕೊಲ್ಲದ ಹಾಗೆ ಯೆಹೋವ ಅವನಿಗಾಗಿ ಒಂದು ಗುರುತು ಕೊಟ್ಟನು.* 16  ಆಮೇಲೆ ಕಾಯಿನ ಯೆಹೋವನನ್ನ ಬಿಟ್ಟು ಏದೆನಿನ ಪೂರ್ವಕ್ಕಿದ್ದ+ ನೋದ್‌* ಅನ್ನೋ ಸ್ಥಳಕ್ಕೆ ಹೋಗಿ ಅಲ್ಲಿ ವಾಸಿಸಿದ. 17  ಆಮೇಲೆ ಕಾಯಿನ ತನ್ನ ಹೆಂಡತಿ ಜೊತೆ ಸಂಬಂಧ ಇಟ್ಟಾಗ+ ಅವಳು ಗರ್ಭಿಣಿ ಆದಳು. ಅವಳಿಗೆ ಹನೋಕ ಹುಟ್ಟಿದ. ಆಮೇಲೆ ಕಾಯಿನ ಒಂದು ಊರು ಕಟ್ಟೋಕೆ ಶುರುಮಾಡಿದ. ಆ ಊರಿಗೆ ಹನೋಕ ಅಂತ ತನ್ನ ಮಗನ ಹೆಸರನ್ನೇ ಇಟ್ಟ. 18  ಆಮೇಲೆ ಹನೋಕನಿಗೆ ಈರಾದ ಹುಟ್ಟಿದ. ಈರಾದನಿಗೆ ಮೆಹೂಯಾಯೇಲ ಹುಟ್ಟಿದ. ಮೆಹೂಯಾಯೇಲನಿಗೆ ಮೆತೂಷಾಯೇಲ ಹುಟ್ಟಿದ. ಮೆತೂಷಾಯೇಲನಿಗೆ ಲೆಮೆಕ ಹುಟ್ಟಿದ. 19  ಲೆಮೆಕ ಇಬ್ರನ್ನ ಮದುವೆಯಾದ. ಮೊದಲನೇ ಹೆಂಡ್ತಿ ಹೆಸರು ಆದಾ, ಎರಡನೇ ಹೆಂಡ್ತಿ ಹೆಸರು ಚಿಲ್ಲಾ. 20  ಆದಾಗೆ ಯಾಬಾಲ ಹುಟ್ಟಿದ. ಡೇರೆಗಳಲ್ಲಿ ವಾಸಮಾಡಿದ ಮತ್ತು ಪ್ರಾಣಿಗಳನ್ನ ಸಾಕೋ ಕೆಲಸ ಮಾಡಿದ ಮೊದಲ ವ್ಯಕ್ತಿ ಯಾಬಾಲ. 21  ಅವನ ಸಹೋದರನ ಹೆಸರು ಯೂಬಾಲ. ಅವನು ತಂತಿವಾದ್ಯ, ಕೊಳಲು ನುಡಿಸುವವರ ಮೂಲಪುರುಷ. 22  ಚಿಲ್ಲಾಗೆ ತೂಬಲ್‌-ಕಾಯಿನ ಹುಟ್ಟಿದ. ಅವನು ಕಬ್ಬಿಣ, ತಾಮ್ರದ ಎಲ್ಲ ರೀತಿಯ ಉಪಕರಣಗಳನ್ನ ತಯಾರಿಸಿದ. ತೂಬಲ್‌-ಕಾಯಿನನ ಸಹೋದರಿ ಹೆಸರು ನಯಮಾ. 23  ಲೆಮೆಕ ತನ್ನ ಹೆಂಡತಿಯರಾದ ಆದಾ ಮತ್ತು ಚಿಲ್ಲಾಳಿಗಾಗಿ ಈ ಕವಿತೆ ರಚಿಸಿದ: “ನನ್ನ ಹೆಂಡತಿಯರೇ, ನಾನು ಹೇಳೋದನ್ನ ಕೇಳಿ,ನನ್ನ ಮಾತಿಗೆ ಗಮನಕೊಡಿ, ನನಗೆ ಗಾಯಮಾಡಿದ ಒಬ್ಬನನ್ನ,ಹೌದು, ನನ್ನನ್ನ ಹೊಡೆದ ಆ ಯುವಕನನ್ನ ಕೊಂದೆ. 24  ಕಾಯಿನನನ್ನ ಕೊಲ್ಲುವವನಿಗೆ 7 ಪಟ್ಟು ಶಿಕ್ಷೆ ಆಗೋದಾದ್ರೆ+ಲೆಮೆಕನನ್ನ ಕೊಲ್ಲುವವನಿಗೆ 77 ಪಟ್ಟು ಶಿಕ್ಷೆ ಆಗಬೇಕು.” 25  ಆದಾಮ ಮತ್ತೆ ತನ್ನ ಹೆಂಡತಿ ಜೊತೆ ಸಂಬಂಧ ಇಟ್ಟಾಗ ಅವಳಿಗೆ ಮಗ ಹುಟ್ಟಿದ. ಆಗ ಹವ್ವ “ಕಾಯಿನ ಹೇಬೆಲನನ್ನ ಕೊಂದ ಕಾರಣ+ ಅವನ ಬದಲು ದೇವರು ನನಗೆ ಇನ್ನೊಂದು ಸಂತಾನ ಕೊಟ್ಟಿದ್ದಾನೆ” ಅಂತೇಳಿ ಆ ಮಗುಗೆ ಸೇತ*+ ಅಂತ ಹೆಸರಿಟ್ಟಳು. 26  ಸೇತನಿಗೆ ಸಹ ಒಬ್ಬ ಮಗ ಹುಟ್ಟಿದ. ಅವನು ಆ ಮಗುಗೆ ಎನೋಷ್‌+ ಅಂತ ಹೆಸರಿಟ್ಟ. ಆ ಕಾಲದಲ್ಲಿ ಜನ್ರು ಯೆಹೋವನ ಹೆಸರನ್ನ ಹೇಳೋಕೆ ಶುರುಮಾಡಿದ್ರು.

ಪಾದಟಿಪ್ಪಣಿ

ಅಕ್ಷ. “ನಿನ್ನ ಮೇಲೆ ಅಧಿಕಾರ ನಡಿಸೋಕೆ.”
ಅದು ಬೇರೆಯವರನ್ನ ಎಚ್ಚರಿಸೋಕೆ ಕೊಟ್ಟ ಒಂದು ಆಜ್ಞೆ ಇರಬಹುದು.
ಅರ್ಥ “ಅಲೆದಾಟ.”
ಅರ್ಥ “ನೇಮಿತ, ಇಟ್ಟ, ಸ್ಥಾಪಿಸಿದ.”