ಆದಿಕಾಂಡ 41:1-57

  • ಯೋಸೇಫ ಫರೋಹನ ಕನಸುಗಳ ಅರ್ಥ ಹೇಳಿದ (1-36)

  • ಯೋಸೇಫನಿಗೆ ದೊಡ್ಡ ಸ್ಥಾನ (37-46ಎ)

  • ಯೋಸೇಫ ದವಸಧಾನ್ಯ ಶೇಖರಿಸಿ ಹಂಚಿದ (46ಬಿ-57)

41  ಎರಡು ವರ್ಷ ಆದ್ಮೇಲೆ ಫರೋಹನಿಗೆ ಒಂದು ಕನಸು ಬಿತ್ತು.+ ಆ ಕನಸಲ್ಲಿ ಅವನು ನೈಲ್‌ ನದಿತೀರದಲ್ಲಿ ನಿಂತಿದ್ದ.  ಆಗ ನೋಡೋಕೆ ಚೆನ್ನಾಗಿದ್ದ ಮತ್ತು ಕೊಬ್ಬಿದ ಏಳು ಹಸು ನೈಲ್‌ ನದಿಯಿಂದ ಮೇಲೆ ಬಂದು ನದಿತೀರದಲ್ಲಿ ಹುಲ್ಲು ಮೇಯ್ತಾ ಇತ್ತು.+  ಆಮೇಲೆ ನೋಡೋಕೆ ಅಸಹ್ಯವಾದ ಮತ್ತು ಬಡಕಲಾದ ಬೇರೆ ಏಳು ಹಸು ನೈಲ್‌ ನದಿಯಿಂದ ಮೇಲೆ ಬಂತು. ನದಿತೀರದಲ್ಲಿದ್ದ ಕೊಬ್ಬಿದ ಹಸುಗಳ ಪಕ್ಕದಲ್ಲಿ ನಿಂತುಕೊಳ್ತು.  ಆ ಅಸಹ್ಯವಾದ, ಬಡಕಲಾದ ಹಸುಗಳು ನೋಡೋಕೆ ಚೆನ್ನಾಗಿದ್ದ ಮತ್ತು ಕೊಬ್ಬಿದ ಏಳು ಹಸುಗಳನ್ನ ತಿನ್ನೋಕೆ ಶುರುಮಾಡ್ತು. ಅಷ್ಟರಲ್ಲಿ ಫರೋಹನಿಗೆ ಎಚ್ಚರ ಆಯ್ತು.  ಫರೋಹ ಮತ್ತೆ ನಿದ್ದೆ ಮಾಡಿದಾಗ ಇನ್ನೊಂದು ಕನಸು ಬಿತ್ತು. ಒಂದೇ ದಂಟಿನಲ್ಲಿ ಏಳು ತುಂಬಿದ ತೆನೆ ಬೆಳೆಯೋದನ್ನ ನೋಡಿದ.+  ಆಮೇಲೆ ಟೊಳ್ಳಾದ ಏಳು ತೆನೆ ಬೆಳೀತು, ಅವು ಪೂರ್ವ ದಿಕ್ಕಿನ ಬಿಸಿ ಗಾಳಿಯಿಂದ ಒಣಗಿಹೋಯ್ತು.  ಆ ಟೊಳ್ಳಾದ ತೆನೆ ತುಂಬಿದ ಏಳು ತೆನೆಗಳನ್ನ ನುಂಗೋಕೆ ಶುರುಮಾಡ್ತು. ಅಷ್ಟರಲ್ಲಿ ಫರೋಹನಿಗೆ ಎಚ್ಚರ ಆಗಿ ಅದು ಕನಸು ಅಂತ ಗೊತ್ತಾಯ್ತು.  ಬೆಳಿಗ್ಗೆ ಫರೋಹ ಚಿಂತೆಯಿಂದ ಒದ್ದಾಡ್ತಿದ್ದ. ಅವನು ಈಜಿಪ್ಟ್‌ ದೇಶದಲ್ಲಿದ್ದ ಎಲ್ಲ ಮಂತ್ರವಾದಿಗಳನ್ನ, ಜ್ಞಾನಿಗಳನ್ನ ಕರೆಸಿದ. ಫರೋಹ ತನ್ನ ಕನಸುಗಳನ್ನ ಅವರಿಗೆ ಹೇಳಿದ. ಆದ್ರೆ ಯಾರಿಗೂ ಆ ಕನಸುಗಳ ಅರ್ಥ ಹೇಳೋಕೆ ಆಗಲಿಲ್ಲ.  ಆಗ ಮುಖ್ಯ ಪಾನದಾಯಕ ಫರೋಹನಿಗೆ “ನಾನು ಮಾಡಿದ ಪಾಪಗಳನ್ನ ಇವತ್ತು ನಿನ್ನ ಮುಂದೆ ಒಪ್ಕೊಳ್ತೀನಿ. 10  ಫರೋಹನಾದ ನೀನು ನಿನ್ನ ಸೇವಕನಾದ ನನ್ನ ಮೇಲೆ, ಮುಖ್ಯ ಅಡುಗೆಗಾರನ ಮೇಲೆ ಕೋಪ ಬಂದು ನಮ್ಮಿಬ್ಬರನ್ನೂ ಕಾವಲುಗಾರರ ಮುಖ್ಯಸ್ಥನ ಉಸ್ತುವಾರಿಯಲ್ಲಿದ್ದ ಜೈಲಿಗೆ ಹಾಕಿಸಿದ್ದಿ.+ 11  ಅಲ್ಲಿದ್ದಾಗ ಒಂದು ರಾತ್ರಿ ನನಗೂ ಮುಖ್ಯ ಅಡುಗೆಗಾರನಿಗೂ ಒಂದೊಂದು ಕನಸು ಬಿತ್ತು. ನಮ್ಮಿಬ್ರ ಕನಸಿನ ಅರ್ಥ ಬೇರೆಬೇರೆ ಆಗಿತ್ತು.+ 12  ಜೈಲಲ್ಲಿ ನಮ್ಮ ಜೊತೆ ಒಬ್ಬ ಇಬ್ರಿಯ ಯುವಕ ಇದ್ದ. ಅವನು ಕಾವಲುಗಾರರ ಮುಖ್ಯಸ್ಥನ ಸೇವಕ.+ ನಮ್ಮ ಕನಸನ್ನ ಅವನಿಗೆ ಹೇಳಿದಾಗ+ ಅವನು ಆ ಕನಸುಗಳ ಅರ್ಥ ಹೇಳಿದ. 13  ಅವನು ಹೇಳಿದ ಹಾಗೇ ನಡಿತು. ನನ್ನ ಕೆಲಸ ನನಗೆ ವಾಪಸ್‌ ಸಿಕ್ತು. ಆದ್ರೆ ಮುಖ್ಯ ಅಡುಗೆಗಾರನನ್ನ ಮರದ ಕಂಬಕ್ಕೆ ತೂಗುಹಾಕಿದ್ರು”+ ಅಂದ. 14  ಇದನ್ನ ಕೇಳಿ ಫರೋಹ ಯೋಸೇಫನನ್ನ ಕರ್ಕೊಂಡು ಬನ್ನಿ ಅಂತ ಸೇವಕರಿಗೆ ಅಪ್ಪಣೆಕೊಟ್ಟ.+ ಅವರು ಬೇಗ ಹೋಗಿ ಅವನನ್ನ ಜೈಲಿಂದ* ಕರ್ಕೊಂಡು ಬಂದ್ರು.+ ಯೋಸೇಫ ಕ್ಷೌರ ಮಾಡ್ಕೊಂಡು* ಬಟ್ಟೆ ಬದಲಾಯಿಸಿ ಫರೋಹನ ಹತ್ರ ಹೋದ. 15  ಆಗ ಫರೋಹ ಯೋಸೇಫನಿಗೆ “ನನಗೆ ಒಂದು ಕನಸು ಬಿತ್ತು. ಅದ್ರ ಅರ್ಥ ಹೇಳೋರು ಯಾರೂ ಇಲ್ಲ. ನಿನಗೆ ಕನಸಿನ ಅರ್ಥ ಹೇಳೋ ಸಾಮರ್ಥ್ಯ ಇದೆ ಅಂತ ಕೇಳಿದ್ದೀನಿ” ಅಂದ.+ 16  ಅದಕ್ಕೆ ಯೋಸೇಫ “ನನಗೆ ಅಂಥ ಸಾಮರ್ಥ್ಯ ಇಲ್ಲ! ದೇವರೇ ಫರೋಹನಿಗೆ ಒಳ್ಳೇ ಸುದ್ದಿ ತಿಳಿಸ್ತಾನೆ” ಅಂದ.+ 17  ಆಗ ಫರೋಹ ಯೋಸೇಫನಿಗೆ “ಕನಸಲ್ಲಿ ನಾನು ನೈಲ್‌ ನದಿತೀರದಲ್ಲಿ ನಿಂತಿದ್ದೆ. 18  ಆಗ ಕೊಬ್ಬಿದ ಮತ್ತು ನೋಡೋಕೆ ಚೆನ್ನಾಗಿದ್ದ ಏಳು ಹಸು ನೈಲ್‌ ನದಿಯಿಂದ ಮೇಲೆ ಬಂದು ನದಿತೀರದಲ್ಲಿ ಹುಲ್ಲು ಮೇಯ್ತಾ ಇತ್ತು.+ 19  ಆಮೇಲೆ ಬಡಕಲಾದ, ನೋಡೋಕೆ ತುಂಬ ಅಸಹ್ಯವಾದ ಬೇರೆ ಏಳು ಹಸು ನೈಲ್‌ ನದಿಯಿಂದ ಮೇಲೆ ಬಂತು. ಅಷ್ಟು ಅಸಹ್ಯವಾದ ಹಸುಗಳನ್ನ ನಾನು ಇಡೀ ಈಜಿಪ್ಟ್‌ ದೇಶದಲ್ಲಿ ಯಾವತ್ತೂ ನೋಡಿಲ್ಲ. 20  ಆ ಬಡಕಲಾದ ಮತ್ತು ಅಸಹ್ಯವಾದ ಹಸುಗಳು ಮೊದಲು ಬಂದ ಕೊಬ್ಬಿದ ಏಳು ಹಸುಗಳನ್ನ ತಿನ್ನೋಕೆ ಶುರುಮಾಡ್ತು. 21  ಆದ್ರೆ ಅವುಗಳನ್ನ ತಿಂದ ಮೇಲೂ ಆ ಹಸುಗಳು ಏನೂ ತಿನ್ನದ ಹಾಗೆ ಕಾಣ್ತಾ ಇತ್ತು. ಅವು ಮುಂಚಿನ ತರ ಬಡಕಲಾಗಿತ್ತು. ಅಷ್ಟರಲ್ಲಿ ನನಗೆ ಎಚ್ಚರ ಆಯ್ತು. 22  ಆಮೇಲೆ ನನಗೆ ಇನ್ನೊಂದು ಕನಸು ಬಿತ್ತು. ಒಂದೇ ದಂಟಿನಲ್ಲಿ ತುಂಬಿದ ಏಳು ತೆನೆ ಬೆಳೆಯೋದನ್ನ ನಾನು ನೋಡಿದೆ.+ 23  ಆಮೇಲೆ ಟೊಳ್ಳಾದ ಏಳು ತೆನೆ ಬೆಳಿತು, ಅವು ಪೂರ್ವ ದಿಕ್ಕಿನ ಬಿಸಿ ಗಾಳಿಯಿಂದ ಬಾಡಿ ಒಣಗಿಹೋಯ್ತು. 24  ಆ ಟೊಳ್ಳಾದ ತೆನೆಗಳು ತುಂಬಿದ ಏಳು ತೆನೆಗಳನ್ನ ನುಂಗೋಕೆ ಶುರುಮಾಡ್ತು. ನಾನು ಈ ಕನಸುಗಳನ್ನ ಮಂತ್ರವಾದಿಗಳಿಗೆ ಹೇಳ್ದೆ.+ ಆದ್ರೆ ಅವುಗಳ ಅರ್ಥ ವಿವರಿಸೋಕೆ ಯಾರಿಂದಲೂ ಆಗಲಿಲ್ಲ”+ ಅಂದ. 25  ಆಗ ಯೋಸೇಫ ಫರೋಹನಿಗೆ “ಫರೋಹ ಕಂಡ ಎರಡೂ ಕನಸುಗಳ ಅರ್ಥ ಒಂದೇ. ಸತ್ಯ ದೇವರು ತಾನು ಮುಂದೆ ಮಾಡೋ ವಿಷ್ಯಗಳನ್ನ ಫರೋಹನಿಗೆ ತಿಳಿಸಿದ್ದಾನೆ.+ 26  ಚೆನ್ನಾಗಿದ್ದ ಆ ಏಳು ಹಸುಗಳು ಏಳು ವರ್ಷಗಳು. ಆ ಏಳು ಒಳ್ಳೇ ತೆನೆಗಳು ಸಹ ಏಳು ವರ್ಷಗಳು. ಎರಡೂ ಕನಸುಗಳ ಅರ್ಥ ಒಂದೇ. 27  ಕೊಬ್ಬಿದ ಹಸುಗಳ ನಂತ್ರ ಬಂದ ಬಡಕಲಾದ ಅಸಹ್ಯವಾದ ಏಳು ಹಸುಗಳು ಏಳು ವರ್ಷಗಳ ಬರಗಾಲವನ್ನ ಸೂಚಿಸುತ್ತೆ. ಟೊಳ್ಳಾದ ಮತ್ತು ಪೂರ್ವ ದಿಕ್ಕಿನ ಬಿಸಿ ಗಾಳಿಯಿಂದ ಒಣಗಿಹೋದ ಏಳು ತೆನೆಗಳು ಸಹ ಏಳು ವರ್ಷಗಳ ಬರಗಾಲವನ್ನ ಸೂಚಿಸುತ್ತೆ. 28  ನಾನು ಈಗಾಗ್ಲೇ ಹೇಳಿದ ಹಾಗೆ ಸತ್ಯ ದೇವರು ಮುಂದೆ ತಾನು ಮಾಡೋ ವಿಷ್ಯಗಳನ್ನ ಫರೋಹನಿಗೆ ತೋರಿಸಿದ್ದಾನೆ. 29  ಏಳು ವರ್ಷ ಈಜಿಪ್ಟ್‌ ದೇಶದಲ್ಲೆಲ್ಲಾ ಬೆಳೆ ಚೆನ್ನಾಗಿ ಬೆಳೆಯುತ್ತೆ. 30  ಆದ್ರೆ ಅದಾದ ಮೇಲೆ ಏಳು ವರ್ಷ ಖಂಡಿತ ಬರಗಾಲ ಬರುತ್ತೆ. ಮೊದಲಿದ್ದ ಸಮೃದ್ಧಿ ಈಜಿಪ್ಟಿನ ಜನ್ರ ನೆನಪಿಗೂ ಬರಲ್ಲ. ಆ ಬರಗಾಲ ದೇಶವನ್ನ ಪೂರ್ತಿ ಹಾಳುಮಾಡಿ ಬಿಡುತ್ತೆ.+ 31  ಬರಗಾಲ ಎಷ್ಟು ಘೋರವಾಗಿರುತ್ತೆ ಅಂದ್ರೆ ಒಂದು ಕಾಲದಲ್ಲಿ ಅವರಿಗೆ ಬೇಕಾದಷ್ಟು ಆಹಾರ ಇತ್ತು ಅನ್ನೋದೇ ಜನ್ರಿಗೆ ಮರೆತುಹೋಗಿರುತ್ತೆ. 32  ಸತ್ಯ ದೇವರು ಫರೋಹನಿಗೆ ಎರಡು ಸಲ ಕನಸು ಬೀಳೋ ಹಾಗೆ ಮಾಡೋ ಮೂಲಕ ಈ ವಿಷ್ಯ ಖಂಡಿತ ಆಗುತ್ತೆ ಅಂತ ತೋರಿಸಿದ್ದಾನೆ. ಅಷ್ಟೇ ಅಲ್ಲ ಸತ್ಯ ದೇವರು ಇದನ್ನ ಬೇಗ ಮಾಡ್ತಾನೆ. 33  ಹಾಗಾಗಿ ಫರೋಹ ವಿವೇಚನೆ ಇರೋ, ಬುದ್ಧಿವಂತನಾದ ಒಬ್ಬನನ್ನು ಆರಿಸಿ ಇಡೀ ಈಜಿಪ್ಟ್‌ ದೇಶಕ್ಕೆ ಅಧಿಕಾರಿಯಾಗಿ ನೇಮಿಸಬೇಕು. 34  ದೇಶದ ಎಲ್ಲ ಭಾಗಕ್ಕೂ ಅಧಿಕಾರಿಗಳನ್ನ ನೇಮಿಸಬೇಕು. ಏಳು ವರ್ಷ ಈಜಿಪ್ಟಲ್ಲಿ ಬೆಳೆ ಹೇರಳವಾಗಿರುವಾಗ+ ಆ ಅಧಿಕಾರಿಗಳ ಮೂಲಕ ಫಸಲಿನ ಐದನೇ ಒಂದು ಭಾಗವನ್ನ ಕೂಡಿಸಿಡಬೇಕು. 35  ಅವರು ಕೂಡಿಟ್ಟ ಎಲ್ಲ ದವಸಧಾನ್ಯಗಳನ್ನ ಪ್ರತಿಯೊಂದು ಪಟ್ಟಣದಲ್ಲಿರೋ ಫರೋಹನ ಉಗ್ರಾಣಗಳಲ್ಲಿ ಶೇಖರಿಸಿ ಸುರಕ್ಷಿತವಾಗಿ ಇಡಬೇಕು.+ 36  ಹೀಗೆ ಶೇಖರಿಸಿ ಇಡೋದ್ರಿಂದ ಮುಂದೆ ಈಜಿಪ್ಟ್‌ ದೇಶದಲ್ಲಿ ಏಳು ವರ್ಷ ಬರಗಾಲ ಬಂದಾಗ ದೇಶದಲ್ಲಿರೋ ಎಲ್ರಿಗೆ ಆಹಾರ ಕೊಡೋಕೆ ಆಗುತ್ತೆ. ಹೀಗೆ ಮಾಡಿದ್ರೆ ಬರಗಾಲದಿಂದ ದೇಶ ನಾಶ ಆಗಲ್ಲ”+ ಅಂದ. 37  ಯೋಸೇಫ ಕೊಟ್ಟ ಈ ಸಲಹೆ ಫರೋಹನಿಗೆ ಅವನ ಎಲ್ಲ ಸೇವಕರಿಗೆ ಸರಿ ಅನಿಸ್ತು. 38  ಹಾಗಾಗಿ ಫರೋಹ ತನ್ನ ಸೇವಕರಿಗೆ “ಇವನಲ್ಲಿ ದೇವರ ಶಕ್ತಿ ಕೆಲಸಮಾಡ್ತಿದೆ. ಇವನಿಗಿಂತ ಒಳ್ಳೇ ವ್ಯಕ್ತಿ ಬೇರೆ ಯಾರಿದ್ದಾರೆ?” ಅಂದ. 39  ಆಮೇಲೆ ಫರೋಹ ಯೋಸೇಫನಿಗೆ “ದೇವರು ಇದನ್ನೆಲ್ಲ ನಿನಗೆ ತಿಳಿಸಿದ್ದಾನೆ. ಹಾಗಾಗಿ ನಿನ್ನಷ್ಟು ವಿವೇಚನೆ ಇರೋ ಬುದ್ಧಿವಂತ ವ್ಯಕ್ತಿ ಬೇರೆ ಯಾರೂ ಇಲ್ಲ. 40  ನಿನ್ನನ್ನ ಅರಮನೆಯಲ್ಲಿರೋ ಎಲ್ರ ಮೇಲೆ ಅಧಿಕಾರಿಯಾಗಿ ಮಾಡ್ತೀನಿ. ನೀನು ಹೇಳೋದನ್ನೆಲ್ಲ ನನ್ನ ಎಲ್ಲ ಪ್ರಜೆಗಳು ಮಾಡ್ತಾರೆ.+ ರಾಜನಾಗಿರೋ ನಾನು ಅಧಿಕಾರದ ವಿಷ್ಯದಲ್ಲಷ್ಟೆ ನಿನಗಿಂತ ದೊಡ್ಡವನಾಗಿ ಇರ್ತಿನಿ” ಅಂದ. 41  ಅಷ್ಟೇ ಅಲ್ಲ ಫರೋಹ “ನಾನು ನಿನ್ನನ್ನ ಇಡೀ ಈಜಿಪ್ಟ್‌ ದೇಶಕ್ಕೆ ಅಧಿಕಾರಿಯಾಗಿ ಮಾಡಿದ್ದೀನಿ”+ ಅಂದ. 42  ಆಮೇಲೆ ಫರೋಹ ತನ್ನ ಕೈಯಿಂದ ಮುದ್ರೆ ಉಂಗುರ ತೆಗೆದು ಯೋಸೇಫನ ಕೈಗೆ ಹಾಕಿ ಚೆನ್ನಾಗಿರೋ ನಾರಿನ ಬಟ್ಟೆ ಹೊದಿಸಿದ. ಅವನ ಕೊರಳಿಗೆ ಚಿನ್ನದ ಸರ ಕೂಡ ಹಾಕಿದ. 43  ಅಷ್ಟೇ ಅಲ್ಲ ಫರೋಹ ತನ್ನ ಎರಡನೇ ರಥದಲ್ಲಿ ಯೋಸೇಫನನ್ನ ಕೂರಿಸಿ ಸವಾರಿ ಮಾಡಿಸೋ ಮೂಲಕ ಸನ್ಮಾನಿಸಿದ. ಆಗ ಜನ್ರೆಲ್ಲ ಅವನ ಮುಂದೆ ಮುಂದೆ ಹೋಗ್ತಾ “ಅವ್ರೆಕ್‌! ಅವ್ರೆಕ್‌!”* ಅಂತ ಕೂಗಿದ್ರು. ಹೀಗೆ ಫರೋಹ ಯೋಸೇಫನನ್ನ ಇಡೀ ಈಜಿಪ್ಟ್‌ ದೇಶಕ್ಕೆ ಅಧಿಕಾರಿಯಾಗಿ ಮಾಡಿದ. 44  ಫರೋಹ ಯೋಸೇಫನಿಗೆ “ನಾನು ಫರೋಹನಾಗಿದ್ರೂ ನಿನ್ನ ಅಪ್ಪಣೆ ಇಲ್ಲದೆ ಇಡೀ ಈಜಿಪ್ಟ್‌ ದೇಶದಲ್ಲಿ ಯಾವನೂ ಒಂದೇ ಒಂದು ವಿಷ್ಯ ಕೂಡ ಮಾಡಬಾರದು”+ ಅಂತಾನೂ ಹೇಳಿದ. 45  ಆಮೇಲೆ ಫರೋಹ ಅವನಿಗೆ ಸಾಫ್ನತ್‌-ಪನ್ನೇಹ ಅಂತ ಹೆಸರಿಟ್ಟ. ಅಲ್ಲದೆ ಅವನಿಗೆ ಆಸನತ್‌+ ಅನ್ನುವವಳ ಜೊತೆ ಮದುವೆ ಮಾಡಿಸಿದ. ಇವಳು ಓನ್‌* ಪಟ್ಟಣದ ಪುರೋಹಿತನಾಗಿದ್ದ ಪೋಟೀಫರನ ಮಗಳು. ಯೋಸೇಫ ಈಜಿಪ್ಟ್‌ ದೇಶವನ್ನೆಲ್ಲ ಸಂಚರಿಸಿ ನೋಡೋಕೆ* ಶುರುಮಾಡಿದ.+ 46  ಈಜಿಪ್ಟಿನ ರಾಜ ಫರೋಹನ ಸನ್ನಿಧಿಯಲ್ಲಿ ಯೋಸೇಫ ನಿಂತಾಗ* ಅವನಿಗೆ 30 ವರ್ಷ.+ ಫರೋಹನ ಸನ್ನಿಧಿಯಿಂದ ಹೊರಗೆ ಬಂದ ಮೇಲೆ ಯೋಸೇಫ ಇಡೀ ಈಜಿಪ್ಟ್‌ ದೇಶದಲ್ಲಿ ಪ್ರಯಾಣಿಸಿದ. 47  ಸಮೃದ್ಧಿಯ ಏಳು ವರ್ಷಗಳಲ್ಲಿ ದೇಶದಲ್ಲಿ ದವಸಧಾನ್ಯ ಹೇರಳವಾಗಿ ಬೆಳಿತು. 48  ಆ ಏಳು ವರ್ಷದಲ್ಲಿ ಯೋಸೇಫ ಈಜಿಪ್ಟ್‌ ದೇಶದ ಎಲ್ಲ ಬೆಳೆ ಸಂಗ್ರಹಿಸ್ತಾ ಪಟ್ಟಣಗಳಲ್ಲಿ ಶೇಖರಿಸಿಡ್ತಾ ಇದ್ದ. ಪ್ರತಿಯೊಂದು ಪಟ್ಟಣದ ಸುತ್ತ ಇದ್ದ ಹೊಲಗದ್ದೆಗಳ ಬೆಳೆಯನ್ನ ಆ ಪಟ್ಟಣದಲ್ಲೇ ಶೇಖರಿಸಿಟ್ಟ. 49  ಅವನು ದವಸಧಾನ್ಯಗಳನ್ನು ಸಮುದ್ರದ ಮರಳಿನಷ್ಟು ಹೆಚ್ಚಾಗಿ ಕೂಡಿಸಿದ. ಅವು ಎಷ್ಟು ರಾಶಿ ರಾಶಿಯಾಗಿತ್ತಂದ್ರೆ ಲೆಕ್ಕ ಮಾಡೋಕೇ ಆಗಲಿಲ್ಲ. ಕೊನೆಗೆ ಅವರು ಲೆಕ್ಕ ಮಾಡೋದನ್ನೇ ಬಿಟ್ಟುಬಿಟ್ರು. 50  ಬರಗಾಲದ ವರ್ಷಗಳು ಶುರು ಆಗೋ ಮುಂಚೆ ಯೋಸೇಫನಿಗೆ ಅವನ ಹೆಂಡತಿಯಾದ ಆಸನತಳಿಂದ ಅಂದ್ರೆ ಓನ್‌* ಪಟ್ಟಣದ ಪುರೋಹಿತನಾದ ಪೋಟೀಫರನ ಮಗಳಿಂದ ಇಬ್ರು ಗಂಡುಮಕ್ಕಳು ಹುಟ್ಟಿದ್ರು.+ 51  ಮೊದಲನೇ ಮಗು ಹುಟ್ಟಿದಾಗ ಯೋಸೇಫ “ನಾನು ನನ್ನೆಲ್ಲ ಕಷ್ಟಗಳನ್ನ ಮರಿಯೋ ತರ, ನನ್ನ ತಂದೆ ಮನೆಯವರ ನೆನಪು ಬರದೇ ಇರೋ ತರ ದೇವರು ಮಾಡಿದ್ದಾನೆ” ಅಂತೇಳಿ ಆ ಮಗುಗೆ ಮನಸ್ಸೆ*+ ಅಂತ ಹೆಸರಿಟ್ಟ. 52  ಎರಡನೇ ಮಗು ಹುಟ್ಟಿದಾಗ ಯೋಸೇಫ “ನಾನು ತುಂಬ ಕಷ್ಟ ವೇದನೆಯನ್ನ ಅನುಭವಿಸಿದ ದೇಶದಲ್ಲಿ ದೇವರು ನನಗೆ ಮಕ್ಕಳನ್ನ* ಕೊಟ್ಟಿದ್ದಾನೆ”+ ಅಂತೇಳಿ ಆ ಮಗುಗೆ ಎಫ್ರಾಯೀಮ್‌*+ ಅಂತ ಹೆಸರಿಟ್ಟ. 53  ಈಜಿಪ್ಟ್‌ ದೇಶದಲ್ಲಿ ಸಮೃದ್ಧಿಯ ಏಳು ವರ್ಷ ಮುಗಿತು.+ 54  ಯೋಸೇಫ ಹೇಳಿದ ಹಾಗೆ ಏಳು ವರ್ಷಗಳ ಬರಗಾಲ ಶುರು ಆಯ್ತು.+ ಬರಗಾಲ ಎಲ್ಲ ದೇಶಗಳಿಗೂ ಹಬ್ಬಿತು, ಆದ್ರೆ ಈಜಿಪ್ಟ್‌ ದೇಶದಲ್ಲಿ ಮಾತ್ರ ಊಟ ಇತ್ತು.+ 55  ಕಾಲ ಕಳೆದ ಹಾಗೆ ಈಜಿಪ್ಟ್‌ ದೇಶಕ್ಕೂ ಬರದ ಬಿಸಿ ತಟ್ಟಿತು. ಜನ್ರು ಫರೋಹನ ಹತ್ರ ಬಂದು ಊಟಕ್ಕಾಗಿ ಬೇಡಿದ್ರು.+ ಆಗ ಫರೋಹ ಈಜಿಪ್ಟಿನ ಎಲ್ಲ ಜನ್ರಿಗೆ “ಯೋಸೇಫನ ಹತ್ರ ಹೋಗಿ. ಅವನು ಏನು ಹೇಳ್ತಾನೋ ಹಾಗೆ ಮಾಡಿ”+ ಅಂದ. 56  ಬರಗಾಲ ಇಡೀ ಭೂಮಿ ಮೇಲೆ ಬಂತು.+ ಈಜಿಪ್ಟ್‌ ದೇಶದಲ್ಲಿ ಬರಗಾಲ ಘೋರವಾಗಿದ್ದರಿಂದ ಯೋಸೇಫ ಆ ದೇಶದಲ್ಲಿದ್ದ ಎಲ್ಲ ಉಗ್ರಾಣ ತೆರೆದು ಅಲ್ಲಿನ ಜನ್ರಿಗೆ ದವಸಧಾನ್ಯ ಮಾರೋಕೆ ಶುರುಮಾಡಿದ.+ 57  ಅಷ್ಟೇ ಅಲ್ಲ ಇಡೀ ಭೂಮಿ ಮೇಲೆ ಬರಗಾಲ ಘೋರವಾಗಿದ್ದರಿಂದ ಭೂಮಿಯ ಎಲ್ಲ ಕಡೆಗಳಿಂದ ಜನ ಈಜಿಪ್ಟಿಗೆ ಬಂದು ಯೋಸೇಫನಿಂದ ದವಸಧಾನ್ಯ ಖರೀದಿಸ್ತಾ ಇದ್ರು.+

ಪಾದಟಿಪ್ಪಣಿ

ಅಕ್ಷ. “ಗುಂಡಿ.”
ಇದಕ್ಕಿರೋ ಹೀಬ್ರು ಪದ ಅವನು ತನ್ನ ಗಡ್ಡವನ್ನ, ತಲೆಯನ್ನ ಬೋಳಿಸಿದ ಅಂತ ಸೂಚಿಸಬಹುದು.
ಇದು, ಗೌರವಿಸಿ ಮತ್ತು ಸನ್ಮಾನಿಸಿ ಅನ್ನೋ ಅರ್ಥ ಕೊಡೋ ಪದ ಆಗಿರಬಹುದು.
ಅದು, ಹಿಲಿಯೋಪೊಲಿಸ್‌.
ಅಥವಾ “ಮೇಲ್ವಿಚಾರಣೆ ಮಾಡೋಕೆ.”
ಅಥವಾ “ಸೇವೆ ಮಾಡೋಕೆ ಶುರುಮಾಡಿದಾಗ.”
ಅದು, ಹಿಲಿಯೋಪೊಲಿಸ್‌.
ಅರ್ಥ “ಮರೆಯೋ ಹಾಗೆ ಮಾಡೋನು.”
ಬಹುಶಃ ಈ ಹೆಸರಿನ ಅರ್ಥ “ಎರಡುಪಟ್ಟು ಮಕ್ಕಳು.”
ಅಥವಾ “ಯಶಸ್ಸನ್ನ.”