ಆದಿಕಾಂಡ 43:1-34

  • ಬೆನ್ಯಾಮೀನನ ಜೊತೆ ಎರಡನೇ ಸಲ ಈಜಿಪ್ಟಿಗೆ (1-14)

  • ಯೋಸೇಫ ಮತ್ತು ಅಣ್ಣತಮ್ಮಂದಿರ ಭೇಟಿ (15-23)

  • ಅಣ್ಣತಮ್ಮಂದಿರ ಜೊತೆ ಊಟ (24-34)

43  ಕಾನಾನ್‌ ದೇಶದಲ್ಲಿ ಬರಗಾಲ ಭೀಕರವಾಗಿತ್ತು.+  ಅವರು ಈಜಿಪ್ಟಿಂದ ತಂದಿದ್ದ ದವಸಧಾನ್ಯ ಮುಗಿದುಹೋದ ಮೇಲೆ+ ಅವರ ತಂದೆ ಅವರಿಗೆ “ನೀವು ಹೋಗಿ ಇನ್ನೂ ಸ್ವಲ್ಪ ಆಹಾರ ತಗೊಂಡು ಬನ್ನಿ” ಅಂದ.  ಆಗ ಯೆಹೂದ “ಆ ಮನುಷ್ಯ ಕಟ್ಟುನಿಟ್ಟಾಗಿ ಆಜ್ಞೆಕೊಡ್ತಾ ‘ನಿಮ್ಮ ತಮ್ಮನನ್ನ ಕರ್ಕೊಂಡು ಬರದಿದ್ರೆ ನಿಮ್ಮ ಮುಖ ನನಗೆ ತೋರಿಸಲೇಬಾರದು’+ ಅಂದಿದ್ದಾನೆ.  ಹಾಗಾಗಿ ನೀನು ನಮ್ಮ ತಮ್ಮನನ್ನ ನಮ್ಮ ಜೊತೆ ಕಳಿಸಿದ್ರೆ ಮಾತ್ರ ಹೋಗಿ ಆಹಾರ ತಗೊಂಡು ಬರ್ತಿವಿ.  ಇಲ್ಲದಿದ್ರೆ ಹೋಗಲ್ಲ. ಯಾಕಂದ್ರೆ ಆ ಮನುಷ್ಯ ನಮಗೆ ‘ನಿಮ್ಮ ತಮ್ಮನನ್ನ ಕರ್ಕೊಂಡು ಬರದಿದ್ರೆ ನಿಮ್ಮ ಮುಖ ನನಗೆ ತೋರಿಸ್ಲೇಬಾರದು ಅಂದಿದ್ದಾನೆ’+ ಅಂದ.  ಅದಕ್ಕೆ ಇಸ್ರಾಯೇಲ+ “ನಿಮಗೆ ಇನ್ನೊಬ್ಬ ತಮ್ಮ ಇದ್ದಾನೆ ಅಂತ ನೀವ್ಯಾಕೆ ಹೇಳಬೇಕಿತ್ತು? ನೀವು ಹಾಗೆ ಹೇಳಿ ನನ್ನನ್ನ ಸಂಕಷ್ಟಕ್ಕೆ ಸಿಕ್ಕಿಸಿದ್ದೀರ” ಅಂದ.  ಆಗ ಅವರು “ಆ ಮನುಷ್ಯ ನೇರವಾಗಿ ನಮ್ಮ ಬಗ್ಗೆ ವಿಚಾರಿಸಿದ. ನಮ್ಮ ಕುಟುಂಬದಲ್ಲಿ ಬೇರೆ ಯಾರೆಲ್ಲ ಇದ್ದಾರಂತ ಕೇಳಿದ. ‘ನಿಮ್ಮ ತಂದೆ ಇನ್ನೂ ಇದ್ದಾನಾ? ನಿಮಗೆ ಇನ್ನೊಬ್ಬ ತಮ್ಮ ಇದ್ದಾನಾ?’ ಅಂತ ಕೇಳಿದ. ಆಗ ನಾವು ಇದ್ದ ವಿಷ್ಯ ಹೇಳಿಬಿಟ್ವಿ.+ ‘ತಮ್ಮನನ್ನ ಕರ್ಕೊಂಡು ಬನ್ನಿ’ ಅಂತ ಅವನು ಹೇಳ್ತಾನಂತ ನಮಗೆ ಹೇಗೆ ಗೊತ್ತು?”+ ಅಂದ್ರು.  ಆಮೇಲೆ ಯೆಹೂದ ತನ್ನ ತಂದೆಯಾದ ಇಸ್ರಾಯೇಲನನ್ನ ಒಪ್ಪಿಸೋಕೆ ಪ್ರಯತ್ನಿಸ್ತಾ “ಅಪ್ಪಾ, ಅವನನ್ನ ನನ್ನ ಜೊತೆ ಕಳಿಸು.+ ನಾವು ಹೋಗಿ ಆಹಾರ ತರ್ತಿವಿ. ಇಲ್ಲದಿದ್ರೆ ನೀನು, ನಾವು, ನಮ್ಮ ಮಕ್ಕಳು+ ಹಸಿವೆಯಿಂದ ಸಾಯಬೇಕಾಗುತ್ತೆ.+  ಅವನ ಜೀವಕ್ಕೆ ನಾನು ಹೊಣೆ.+ ಅವನನ್ನ ಭದ್ರವಾಗಿ ಕರ್ಕೊಂಡು ಬರೋದು ನನ್ನ ಜವಾಬ್ದಾರಿ. ಒಂದುವೇಳೆ ಅವನನ್ನ ನಾನು ಕರ್ಕೊಂಡು ಬಂದು ನಿನ್ನ ಕೈಗೆ ಒಪ್ಪಿಸದಿದ್ರೆ ಆ ಪಾಪ ಜೀವನಪೂರ್ತಿ ನನ್ನ ಮೇಲೆನೇ ಇರಲಿ. 10  ಮುಂಚೆನೇ ನೀನು ನಮ್ಮನ್ನ ಕಳಿಸಿದ್ರೆ ಇಷ್ಟರಲ್ಲಿ ನಾವು ಎರಡು ಸಲ ಹೋಗಿ ಬರ್ತಿದ್ವಿ” ಅಂದ. 11  ಆಗ ಅವರ ತಂದೆ ಇಸ್ರಾಯೇಲ ಅವರಿಗೆ ಹೀಗಂದ: “ಸರಿ, ಬೇರೆ ದಾರಿ ಇಲ್ಲದಿದ್ರೆ ಒಂದು ಕೆಲಸ ಮಾಡಿ. ಈ ದೇಶದ ಶ್ರೇಷ್ಠ ವಸ್ತುಗಳನ್ನ ಅಂದ್ರೆ ಸ್ವಲ್ಪ ಸುಗಂಧ ತೈಲ,+ ಸ್ವಲ್ಪ ಜೇನುತುಪ್ಪ, ಸುಗಂಧಭರಿತ ಅಂಟು, ಚಕ್ಕೆ,+ ಪಿಸ್ತಾ, ಬಾದಾಮಿ ತಗೊಂಡು ಹೋಗಿ ಆ ಮನುಷ್ಯನಿಗೆ ಉಡುಗೊರೆಯಾಗಿ+ ಕೊಡಿ. 12  ಅಲ್ಲದೆ ಈ ಸಲ ಎರಡರಷ್ಟು ಹಣ ತಗೊಂಡು ಹೋಗಿ. ಕಳೆದ ಸಲ ನಿಮ್ಮ ಚೀಲಗಳಲ್ಲಿ ಇಟ್ಟು ಕಳಿಸಿದ್ದ ಹಣ ಕೂಡ ತಗೊಳ್ಳಿ.+ ಅವರಿಗೆ ಗೊತ್ತಿಲ್ಲದೆ ನಿಮ್ಮ ಚೀಲದಲ್ಲಿ ಇಟ್ಟಿರಬಹುದು. 13  ನಿಮ್ಮ ತಮ್ಮನನ್ನ ಕರ್ಕೊಂಡು ಆ ಮನುಷ್ಯನ ಹತ್ರ ಹೋಗಿ. 14  ಅವನು ನಿಮಗೆ ಕನಿಕರ ತೋರಿಸಿ ಸಿಮೆಯೋನ ಮತ್ತು ಬೆನ್ಯಾಮೀನನನ್ನ ನಿಮ್ಮ ಜೊತೆ ಕಳಿಸೋ ತರ ಸರ್ವಶಕ್ತ ದೇವರು ಮಾಡ್ಲಿ. ಒಂದುವೇಳೆ ನಾನು ಮಕ್ಕಳನ್ನ ಕಳ್ಕೊಳ್ಳಲೇಬೇಕಾದ್ರೆ ನನ್ನಿಂದ ಏನು ಮಾಡಕ್ಕಾಗುತ್ತೆ?”+ 15  ಅವರು ಆ ಉಡುಗೊರೆ ಮತ್ತು ಎರಡರಷ್ಟು ಹಣ ತಗೊಂಡು ತಮ್ಮ ಜೊತೆ ಬೆನ್ಯಾಮೀನನನ್ನ ಕರ್ಕೊಂಡು ಹೊರಟ್ರು. ಈಜಿಪ್ಟ್‌ ದೇಶಕ್ಕೆ ಬಂದು ಮತ್ತೆ ಯೋಸೇಫನ ಮುಂದೆ ನಿಂತ್ರು.+ 16  ಅವರ ಜೊತೆ ಬೆನ್ಯಾಮೀನ ಇರೋದನ್ನ ಯೋಸೇಫ ನೋಡಿದ ತಕ್ಷಣ ತನ್ನ ಮನೆಯನ್ನ ನೋಡ್ಕೊಳ್ತಿದ್ದ ಸೇವಕನಿಗೆ “ಇವರನ್ನ ಮನೆಗೆ ಕರ್ಕೊಂಡು ಹೋಗು. ಇವರು ಇವತ್ತು ಮಧ್ಯಾಹ್ನ ನನ್ನ ಜೊತೆ ಊಟ ಮಾಡ್ತಾರೆ. ಹಾಗಾಗಿ ಪ್ರಾಣಿಗಳನ್ನ ಕೊಯ್ದು ಊಟಕ್ಕೆ ಸಿದ್ಧಮಾಡು” ಅಂದ. 17  ತಕ್ಷಣ ಆ ಸೇವಕ ಯೋಸೇಫ ಹೇಳಿದ ಹಾಗೆ ಮಾಡಿದ.+ ಅವನು ಅವರನ್ನ ಯೋಸೇಫನ ಮನೆಗೆ ಕರ್ಕೊಂಡು ಹೋದ. 18  ಆದ್ರೆ ಅಲ್ಲಿ ಹೋದಾಗ ಅವರಿಗೆ ಭಯ ಆಯ್ತು. ಅವರು “ಕಳೆದ ಸಲ ನಾವು ಕೊಟ್ಟ ಹಣ ನಮ್ಮ ಚೀಲದಲ್ಲೇ ಇತ್ತು. ಅದಕ್ಕೇ ಅವ್ರು ನಮ್ಮನ್ನ ಇಲ್ಲಿ ಕರ್ಕೊಂಡು ಬಂದಿದ್ದಾರೆ. ಈಗ ಅವರು ನಮ್ಮ ಮೇಲೆ ದಾಳಿ ಮಾಡಿ ನಮ್ಮನ್ನ ಗುಲಾಮರಾಗಿ ಮಾಡ್ಕೊಳ್ತಾರೆ. ನಮ್ಮ ಕತ್ತೆಗಳನ್ನೂ ಕಸ್ಕೊಳ್ತಾರೆ”+ ಅಂತ ಮಾತಾಡ್ಕೊಂಡ್ರು. 19  ಅವರು ಮನೆ ಬಾಗಿಲ ಹತ್ರ ಬಂದು ಯೋಸೇಫನ ಸೇವಕನಿಗೆ 20  “ಸ್ವಾಮಿ, ನಮ್ಮನ್ನ ಕ್ಷಮಿಸು. ಇದಕ್ಕಿಂತ ಮುಂಚೆ ಒಂದು ಸಲ ನಾವು ಧಾನ್ಯ ತಗೊಂಡು ಹೋಗೋಕೆ ಇಲ್ಲಿಗೆ ಬಂದಿದ್ವಿ.+ 21  ನಾವು ಇಲ್ಲಿಂದ ಹೋಗ್ತಾ ಒಂದು ಛತ್ರದಲ್ಲಿ ಇದ್ದಾಗ ನಮ್ಮ ಚೀಲ ಬಿಚ್ಚಿ ನೋಡಿದ್ವಿ. ನೋಡಿದ್ರೆ ಧಾನ್ಯಕ್ಕಂತ ಕೊಟ್ಟಿದ್ದ ಪೂರ್ತಿ ಹಣ ನಮ್ಮ ಚೀಲದಲ್ಲೇ ಇತ್ತು.+ ಅದನ್ನ ನಮ್ಮ ಕೈಯಾರೆ ನಿಮಗೆ ವಾಪಸ್‌ ಕೊಡೋಕೆ ತಂದಿದ್ದೀವಿ. 22  ಈಗ ಧಾನ್ಯ ತಗೊಳೋಕೆ ಇನ್ನೂ ಜಾಸ್ತಿ ಹಣ ತಂದಿದ್ದೀವಿ. ನಾವು ಕೊಟ್ಟಿದ್ದ ಹಣ ನಮ್ಮ ಚೀಲದಲ್ಲಿ ಯಾರು ಇಟ್ರು ಅಂತ ನಮಗೆ ಗೊತ್ತಿಲ್ಲ”+ ಅಂದ್ರು. 23  ಆಗ ಆ ಸೇವಕ “ಪರವಾಗಿಲ್ಲ. ಹೆದರಬೇಡಿ. ನೀವು ಮತ್ತು ನಿಮ್ಮ ತಂದೆ ಆರಾಧಿಸೋ ದೇವರೇ ನಿಮ್ಮ ಚೀಲದಲ್ಲಿ ಆ ಹಣ ಇಟ್ಟನು. ನೀವು ಕೊಟ್ಟ ಹಣ ನನಗೆ ಈಗಾಗ್ಲೇ ಸಿಕ್ಕಿದೆ” ಅಂದ. ಆಮೇಲೆ ಅವನು ಸಿಮೆಯೋನನನ್ನ ಅವರ ಹತ್ರ ಕರ್ಕೊಂಡು ಬಂದ.+ 24  ಆಗ ಆ ಸೇವಕ ಅವರನ್ನ ಯೋಸೇಫನ ಮನೆಯೊಳಗೆ ಕರ್ಕೊಂಡು ಬಂದು ಅವರಿಗೆ ಕಾಲು ತೊಳೆಯೋಕೆ ನೀರು ಕೊಟ್ಟ. ಅವರ ಕತ್ತೆಗಳಿಗೆ ಮೇವು ಇಟ್ಟ. 25  ಮಧ್ಯಾಹ್ನ ಯೋಸೇಫ ಮನೆಗೆ ಬಂದು ತಮ್ಮ ಜೊತೆ ಊಟ ಮಾಡೋ ವಿಷ್ಯ ಅವರಿಗೆ ಗೊತ್ತಾಯ್ತು.+ ಆಗ ಅವರು ತಾವು ತಂದಿದ್ದ ಉಡುಗೊರೆ+ ಕೊಡೋಕೆ ಸಿದ್ಧಮಾಡ್ಕೊಂಡ್ರು. 26  ಯೋಸೇಫ ಮನೆಗೆ ಬಂದಾಗ ಉಡುಗೊರೆ ಕೊಟ್ಟು ಅವನ ಮುಂದೆ ಅಡ್ಡಬಿದ್ದು ನಮಸ್ಕಾರ ಮಾಡಿದ್ರು.+ 27  ಆಮೇಲೆ ಅವನು ಅವರ ಕ್ಷೇಮ ವಿಚಾರಿಸಿ ಅವರಿಗೆ “ನಿಮಗೆ ವಯಸ್ಸಾದ ತಂದೆ ಇದ್ದಾನೆ ಅಂತ ಹೇಳಿದ್ರಲ್ಲಾ. ಅವನು ಹೇಗಿದ್ದಾನೆ? ಅವನು ಇನ್ನೂ ಇದ್ದಾನಾ?”+ ಅಂತ ಕೇಳಿದ. 28  ಅದಕ್ಕೆ “ನಿನ್ನ ಸೇವಕನಾದ ನಮ್ಮ ತಂದೆ ಇನ್ನೂ ಇದ್ದಾನೆ, ಚೆನ್ನಾಗಿದ್ದಾನೆ” ಅಂತೇಳಿ ಅವನಿಗೆ ಅಡ್ಡಬಿದ್ದು ನಮಸ್ಕಾರ ಮಾಡಿದ್ರು.+ 29  ಅವನು ತನ್ನ ಒಡಹುಟ್ಟಿದ+ ತಮ್ಮನಾದ ಬೆನ್ಯಾಮೀನನನ್ನ ನೋಡಿ “ನೀವು ಹೇಳಿದ ಕೊನೇ ತಮ್ಮ ಇವನೇನಾ?”+ ಅಂತ ಕೇಳಿದ. ಅವನು ಬೆನ್ಯಾಮೀನನಿಗೆ “ನನ್ನ ಮಗನೇ, ದೇವರು ನಿನ್ನನ್ನ ಆಶೀರ್ವದಿಸಲಿ” ಅಂದ. 30  ತಮ್ಮನನ್ನ ನೋಡಿ ಯೋಸೇಫನಿಗೆ ದುಃಖ ಉಕ್ಕಿ ಬಂತು. ಹಾಗಾಗಿ ಬೇಗ ಅಲ್ಲಿಂದ ಹೋಗಿ ಅಳೋದಕ್ಕೆ ಏಕಾಂತ ಜಾಗ ಹುಡುಕಿ ಒಂದು ಕೋಣೆಯಲ್ಲಿ ಅತ್ತ.+ 31  ಆಮೇಲೆ ಮುಖ ತೊಳೆದು ಅಳು ತಡ್ಕೊಂಡು ಅವರ ಹತ್ರ ಬಂದ. ತನ್ನ ಸೇವಕರಿಗೆ “ಊಟ ಬಡಿಸಿ” ಅಂದ. 32  ಸೇವಕರು ಒಂದು ಮೇಜಿನ ಮೇಲೆ ಯೋಸೇಫನಿಗೆ, ಇನ್ನೊಂದು ಮೇಜಿನ ಮೇಲೆ ಅವನ ಅಣ್ಮತಮ್ಮಂದಿರಿಗೆ ಊಟ ಬಡಿಸಿದ್ರು. ಅಲ್ಲಿದ್ದ ಈಜಿಪ್ಟಿನವರು ಪ್ರತ್ಯೇಕವಾಗಿ ಊಟ ಮಾಡ್ತಿದ್ರು. ಯಾಕಂದ್ರೆ ಈಜಿಪ್ಟಿನವರು ಇಬ್ರಿಯರ ಜೊತೆ ಊಟ ಮಾಡ್ತಿರಲಿಲ್ಲ. ಅದು ಅವರಿಗೆ ಅಸಹ್ಯವಾಗಿತ್ತು.+ 33  ಯೋಸೇಫ ತನ್ನ ಅಣ್ಣಂದಿರನ್ನ, ತಮ್ಮನನ್ನ ತನ್ನ ಮುಂದೆ ಕೂರಿಸಿದ. ಜ್ಯೇಷ್ಠಪುತ್ರನ ಹಕ್ಕಿರೋ+ ದೊಡ್ಡವನಿಂದ ಹಿಡಿದು ಕೊನೆಯವನ ತನಕ ಎಲ್ಲರನ್ನ ಅವನವನ ವಯಸ್ಸಿನ ಪ್ರಕಾರ ಕೂರಿಸಿದ. ಆಗ ಅವರು ಆಶ್ಚರ್ಯದಿಂದ ಒಬ್ರನ್ನೊಬ್ರು ನೋಡ್ತಿದ್ರು. 34  ಅವನು ತನ್ನ ಮೇಜಿಂದ ಅವರ ಮೇಜಿಗೆ ಆಹಾರ ಕಳಿಸ್ತಿದ್ದ. ಆದ್ರೆ ಎಲ್ಲ ಅಣ್ಣಂದಿರಿಗಿಂತ ಬೆನ್ಯಾಮೀನನಿಗೆ ಐದು ಪಟ್ಟು ಹೆಚ್ಚು ಆಹಾರ ಕಳಿಸಿದ.+ ಅವರು ಅವನ ಜೊತೆ ಹೊಟ್ಟೆ ತುಂಬ ತಿಂದು ಕುಡಿದ್ರು.

ಪಾದಟಿಪ್ಪಣಿ