ಯೋಹಾನ ಬರೆದ ಮೂರನೇ ಪತ್ರ 1:1-14

  • ವಂದನೆ ಮತ್ತು ಪ್ರಾರ್ಥನೆ (1-4)

  • ಗಾಯನಿಗೆ ಮೆಚ್ಚುಗೆ (5-8)

  • ಪ್ರಮುಖ ಸ್ಥಾನ ಬಯಸಿದ ದಿಯೊತ್ರೇಫ (9, 10)

  • ದೇಮೇತ್ರಿಯನ ಬಗ್ಗೆ ಬಂದ ಒಳ್ಳೇ ವರದಿ (11, 12)

  • ಭೇಟಿಮಾಡೋಕೆ ಯೋಜನೆ ಮತ್ತು ವಂದನೆಗಳು (13, 14)

 ಪ್ರೀತಿಯ ಗಾಯನಿಗೆ ಮುದುಕನಾಗಿರೋ ನಾನು ಬರಿತಾ ಇರೋ ಪತ್ರ. ನಾನು ನಿನ್ನನ್ನ ನಿಜವಾಗ್ಲೂ ಪ್ರೀತಿಸ್ತೀನಿ.  ಪ್ರೀತಿಯ ಗೆಳೆಯ, ಯಾವಾಗ್ಲೂ ನೀನು ಇರೋ ತರಾನೇ ಇನ್ಮುಂದೆನೂ ಚೆನ್ನಾಗಿ ಇರಬೇಕು, ಆರೋಗ್ಯವಾಗಿ ಇರಬೇಕು ಅಂತ ಪ್ರಾರ್ಥನೆ ಮಾಡ್ತೀನಿ.  ನಿನ್ನಲ್ಲಿರೋ ಸತ್ಯದ ಬಗ್ಗೆ ಸಹೋದರರು ಬಂದು ಹೇಳಿದಾಗ ನನಗೆ ತುಂಬ ಖುಷಿ ಆಯ್ತು. ನೀನು ಸತ್ಯಕ್ಕೆ ತಕ್ಕ ಹಾಗೆ ಜೀವನ ಮಾಡ್ತಾ ಇರೋದ್ರಿಂದ ನಾನು ಖುಷಿಪಡ್ತೀನಿ.+  ನನ್ನ ಮಕ್ಕಳು ಸತ್ಯಕ್ಕೆ ತಕ್ಕ ಹಾಗೆ ಜೀವನ ಮಾಡ್ತಾ ಇದ್ದಾರೆ ಅಂತ ಕೇಳಿಸ್ಕೊಳ್ಳೋದಕ್ಕಿಂತ ಸಂತೋಷದ ವಿಷ್ಯ ನನಗೆ ಬೇರೆ ಯಾವುದೂ ಇಲ್ಲ.+  ಪ್ರೀತಿಯ ಗೆಳೆಯ, ಸಹೋದರರು ನಿನಗೆ ಪರಿಚಯ ಇಲ್ಲದಿದ್ರೂ ನೀನು ಅವ್ರಿಗೋಸ್ಕರ ಮಾಡೋದನ್ನ ನಂಬಿಗಸ್ತಿಕೆಯಿಂದ ಮಾಡ್ತಾ ಇದ್ದೀಯ.+  ನಿನ್ನ ಪ್ರೀತಿ ಬಗ್ಗೆ ಅವರು ಸಭೆ ಮುಂದೆ ಮಾತಾಡಿದ್ರು. ದಯವಿಟ್ಟು ದೇವರಿಗೆ ಇಷ್ಟವಾಗೋ ತರ ಅವ್ರನ್ನ ಕಳಿಸ್ಕೊಡು.+  ಯಾಕಂದ್ರೆ ಬೇರೆ ಜನ್ರ ಹತ್ರ ಏನೂ ತಗೊಳ್ಳದೆ ದೇವರ ಹೆಸ್ರನ್ನ ಹೇಳೋಕೆ ಅವರು ಬಂದಿದ್ದಾರೆ.+  ಹಾಗಾಗಿ ಅಂಥವ್ರಿಗೆ ಅತಿಥಿಸತ್ಕಾರ ಮಾಡೋ ಜವಾಬ್ದಾರಿ ನಮ್ಮ ಮೇಲಿದೆ.+ ಹಾಗೆ ಮಾಡಿದಾಗ್ಲೇ ಸತ್ಯವನ್ನ ಹಬ್ಬಿಸೋ ವಿಷ್ಯದಲ್ಲಿ ನಾವು ಅವ್ರ ಜೊತೆ ಕೆಲಸಗಾರರು ಆಗ್ತೀವಿ.+  ನಾನು ಸಭೆಗೆ ಒಂದು ಪತ್ರ ಬರೆದಿದ್ದೀನಿ. ಆದ್ರೆ ಅವ್ರಲ್ಲಿರೋ ದಿಯೊತ್ರೇಫ ನಮ್ಮ ಮಾತಿಗೆ ಸ್ವಲ್ಪನೂ ಗೌರವ ಕೊಡಲ್ಲ.+ ಎಲ್ರಿಗಿಂತ ದೊಡ್ಡವನಾಗಿ ಇರಬೇಕು ಅನ್ನೋ ಆಸೆ ಅವನಿಗಿದೆ.+ 10  ಅದಕ್ಕೇ, ನಾನು ಅಲ್ಲಿಗೆ ಬಂದ್ರೆ ಅವನು ನಮ್ಮ ಬಗ್ಗೆ ಎಲ್ಲರ ಹತ್ರ ತಪ್ಪುತಪ್ಪಾಗಿ ಮಾತಾಡ್ತಾ ಏನೆಲ್ಲ ಮಾಡ್ತಿದ್ದಾನೆ ಅಂತ ನೋಡ್ತೀನಿ.+ ಅದಷ್ಟೇ ಅಲ್ಲ, ಅವನು ಸಹೋದರರನ್ನ ಗೌರವದಿಂದ ಸ್ವಾಗತಿಸ್ತಿಲ್ಲ.+ ಸ್ವಾಗತಿಸುವವ್ರಿಗೂ ಬಿಡ್ತಿಲ್ಲ ಮತ್ತು ಅವ್ರನ್ನ ಸಭೆಯಿಂದ ಹೊರಗೆ ಹಾಕೋಕೆ ನೋಡ್ತಾ ಇದ್ದಾನೆ. 11  ಪ್ರೀತಿಯ ಸಹೋದರ, ಕೆಟ್ಟವ್ರನ್ನ ಅನುಕರಿಸದೆ ಒಳ್ಳೆಯವ್ರನ್ನ ಅನುಕರಿಸು.+ ಒಳ್ಳೇದನ್ನ ಮಾಡುವವರು ದೇವರಿಂದ ಬಂದವರು.+ ಕೆಟ್ಟದನ್ನ ಮಾಡುವವರು ದೇವರನ್ನ ನೋಡಿಲ್ಲ.+ 12  ಸಹೋದರರೆಲ್ಲ ದೇಮೇತ್ರಿಯನ ಬಗ್ಗೆ ಚೆನ್ನಾಗಿ ಹೇಳಿದ್ರು. ಅಷ್ಟೇ ಅಲ್ಲ, ಅವನು ಸತ್ಯಕ್ಕೆ ತಕ್ಕ ಹಾಗೆ ಜೀವನ ಮಾಡ್ತಾ ಇರೋದು ಅವ್ರೆಲ್ಲ ಹೇಳಿದ್ದು ನಿಜ ಅಂತ ತೋರಿಸ್ಕೊಡುತ್ತೆ. ನಾವೂ ಅವನ ಬಗ್ಗೆ ಅದನ್ನೇ ಹೇಳ್ತಾ ಇದ್ದೀವಿ. ನಾವು ಹೇಳೋದು ನಿಜ ಅಂತ ನಿಂಗೊತ್ತು. 13  ನಿನಗೆ ಬರೆಯೋಕೆ ತುಂಬ ಇದೆ. ಆದ್ರೆ ಈ ರೀತಿ ಪೆನ್ನು-ಮಸಿಯಿಂದ ಬರೆಯೋಕೆ ನನಗಿಷ್ಟ ಇಲ್ಲ. 14  ಬೇಗ ನಿನ್ನನ್ನ ಭೇಟಿ ಮಾಡ್ತೀನಿ. ಆಗ ನಾವು ಮುಖಾಮುಖಿ ಮಾತಾಡೋಣ. ನಿನಗೆ ನೆಮ್ಮದಿ ಇರಲಿ. ನಮ್ಮ ಗೆಳೆಯರೆಲ್ಲ ನಿನ್ನನ್ನ ತುಂಬ ಕೇಳಿದ್ದಾರೆ. ಅಲ್ಲಿರೋ ನಮ್ಮ ಗೆಳೆಯರಲ್ಲಿ ಒಬ್ಬೊಬ್ರನ್ನೂ ನಾನು ಕೇಳಿದೆ ಅಂತ ಹೇಳು.

ಪಾದಟಿಪ್ಪಣಿ