ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗಿಡಮೂಲಿಕೆ ಔಷಧಿಗಳು ಅವು ನಿಮಗೆ ಸಹಾಯಮಾಡಬಲ್ಲವೋ?

ಗಿಡಮೂಲಿಕೆ ಔಷಧಿಗಳು ಅವು ನಿಮಗೆ ಸಹಾಯಮಾಡಬಲ್ಲವೋ?

ಗಿಡಮೂಲಿಕೆ ಔಷಧಿಗಳು ಅವು ನಿಮಗೆ ಸಹಾಯಮಾಡಬಲ್ಲವೋ?

ಆರಂಭದ ಸಮಯಗಳಿಂದ ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಾಗಿ ಗಿಡಮೂಲಿಕೆ ಔಷಧಿಗಳನ್ನು ಉಪಯೋಗಿಸಲಾಗುತ್ತಿತ್ತು. ಸಾ.ಶ.ಪೂ. 16ನೆಯ ಶತಮಾನದ ಸುಮಾರಿಗೆ ಐಗುಪ್ತದಲ್ಲಿ ತಯಾರಿಸಲಾದ ಏಬರ್ಸ್‌ ಪಪೈರಸ್‌, ವಿವಿಧ ರೋಗಗಳಿಗೆ ನೂರಾರು ಸಾಂಪ್ರದಾಯಿಕ ಔಷಧಿಗಳನ್ನು ಹೊಂದಿತ್ತು. ಹಾಗಿದ್ದರೂ, ಸಾಮಾನ್ಯವಾಗಿ ಗಿಡಮೂಲಿಕೆಯ ಔಷಧಿಗಳನ್ನು ತಯಾರಿಸುವ ವಿಧವನ್ನು ಮೌಖಿಕವಾಗಿ ಒಂದು ಸಂತತಿಯಿಂದ ಇನ್ನೊಂದು ಸಂತತಿಗೆ ದಾಟಿಸಲಾಗುತ್ತಿತ್ತು.

ಪಾಶ್ಚಾತ್ಯ ಗಿಡಮೂಲಿಕೆ ಚಿಕಿತ್ಸೆಯು, ಡೆ ಮಾಚೆರ್ಯಾ ಮೇಡಿಕಾ ಎಂಬ ಪುಸ್ತಕವನ್ನು ಬರೆದ ಪ್ರಥಮ ಶತಮಾನದ ಗ್ರೀಕ್‌ ವೈದ್ಯನಾದ ಡೈಅಸ್ಕೋರ್ಯಿಡೀಸ್‌ನ ಕೆಲಸದಿಂದ ಆರಂಭಗೊಂಡಿತೆಂದು ಕಂಡುಬರುತ್ತದೆ. ಈ ಪುಸ್ತಕವು, ಮುಂದಿನ 1,600 ವರ್ಷಗಳಿಗೆ ಔಷಧ ವಿಜ್ಞಾನದ ಪ್ರಖ್ಯಾತ ಪಠ್ಯಪುಸ್ತಕವಾಗಿ ಪರಿಣಮಿಸಿತು. ಲೋಕದ ಅನೇಕ ಭಾಗಗಳಲ್ಲಿ, ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳು ಇನ್ನೂ ಪ್ರಖ್ಯಾತಿಯಲ್ಲಿವೆ. ಅಷ್ಟುಮಾತ್ರವಲ್ಲದೆ ಜರ್ಮನಿಯಲ್ಲಿ, ಸರಕಾರಿ ಆರೋಗ್ಯ ಕಾರ್ಯಕ್ರಮಗಳು ಗಿಡಮೂಲಿಕೆ ಔಷಧಿಯ ವೆಚ್ಚವನ್ನು ಭರ್ತಿಮಾಡಿಕೊಡುವುದೂ ಉಂಟು.

ಔಷಧಿ ಅಂಗಡಿಯಲ್ಲಿ ದೊರಕುವ ಆಧುನಿಕ ಔಷಧಗಳಿಗಿಂತ ಗಿಡಮೂಲಿಕೆಯ ಔಷಧಿಗಳು ಹೆಚ್ಚು ಸುರಕ್ಷಿತ ಎಂದು ಕೆಲವೊಮ್ಮೆ ಪ್ರತಿಪಾದಿಸಲಾಗುವುದಾದರೂ, ಅವುಗಳು ಸಹ ಅಪಾಯರಹಿತವಾಗಿಲ್ಲ. ಆದುದರಿಂದ ಈ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ: ವ್ಯಕ್ತಿಯೊಬ್ಬನು ಗಿಡಮೂಲಿಕೆ ಔಷಧಿಗಳನ್ನು ಪರಿಗಣಿಸುವ ಮುನ್ನ ಯಾವ ಮುಂಜಾಗ್ರತೆ ಮತ್ತು ಪರಿಗಣನೆಯನ್ನು ಗಮನಕ್ಕೆ ತೆಗೆದುಕೊಳ್ಳಬೇಕು? ಒಂದು ರೀತಿಯ ಚಿಕಿತ್ಸೆಯು ಇನ್ನೊಂದಕ್ಕಿಂತ ಹೆಚ್ಚು ಪ್ರಯೋಜನದಾಯಕವಾಗಿರುವ ಯಾವುದೇ ಸಂದರ್ಭಗಳು ಇವೆಯೋ? *

ಗಿಡಮೂಲಿಕೆಗಳು ಸಹಾಯಮಾಡಬಹುದಾದ ವಿಧ

ಗಿಡಮೂಲಿಕೆಗಳು ಅನೇಕ ವಾಸಿಮಾಡುವ ಸಾಮರ್ಥ್ಯಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಕೆಲವು ಗಿಡಮೂಲಿಕೆಗಳು, ಶರೀರವು ಸೋಂಕಿನ ವಿರುದ್ಧ ಹೋರಾಡಲು ಸಹಾಯಮಾಡುತ್ತವೆ. ಇನ್ನಿತರ ಗಿಡಮೂಲಿಕೆಗಳು, ಪಚನಶಕ್ತಿಗೆ ಸಹಾಯಕವಾಗಿವೆ, ನರಗಳನ್ನು ಶಮನಗೊಳಿಸುತ್ತವೆ, ಭೇದಿಯೌಷಧಗಳಾಗಿವೆ, ಅಥವಾ ರಸಗ್ರಂಥಿಗಳನ್ನು ನಿಯಂತ್ರಿಸಲು ಸಹಾಯಮಾಡುತ್ತವೆ.

ಗಿಡಮೂಲಿಕೆಗಳಿಗೆ ಪೌಷ್ಟಿಕತೆಯ ಹಾಗೂ ಔಷಧೀಯ ಮೌಲ್ಯವಿರಬಹುದು. ಉದಾಹರಣೆಗೆ, ಪಾರ್ಸ್‌ಲಿ ಮುಂತಾದ ಮೂತ್ರವರ್ಧಕಗಳಾಗಿ ಕೆಲಸಮಾಡುವ ಕೆಲವು ಸಸ್ಯಗಳು ಬಹಳಷ್ಟು ಮೊತ್ತದಲ್ಲಿ ಪೊಟ್ಯಾಷಿಯಂ ಅನ್ನೂ ಹೊಂದಿರುತ್ತವೆ. ಈ ಸಸ್ಯಗಳಲ್ಲಿರುವ ಪೊಟ್ಯಾಷಿಯಂ, ಮೂತ್ರವಿಸರ್ಜನೆಯ ಮೂಲಕ ದೇಹದಿಂದ ನಷ್ಟಗೊಳ್ಳುವ ಅತಿ ಪ್ರಾಮುಖ್ಯ ಘಟಕಾಂಶವಾದ ಪೊಟ್ಯಾಷಿಯಂ ಅನ್ನು ಸರಿದೂಗಿಸುತ್ತದೆ. ಅಂತೆಯೇ, ದೀರ್ಘಕಾಲದಿಂದ ಶಾಮಕ ಔಷಧಿಯಾಗಿ ಉಪಯೋಗಿಸಲ್ಪಡುತ್ತಿರುವ ವಲೇರಿಯನ್‌ ಸಸ್ಯವು (ವಲೇರಿಯನ ಆಫೀಸಿನಲಿಸ್‌) ಬಹಳ ಮೊತ್ತದ ಕ್ಯಾಲ್ಸಿಯಂ ಅನ್ನು ಹೊಂದಿದೆ. ಕ್ಯಾಲ್ಸಿಯಂ, ನರವ್ಯೂಹ ವ್ಯವಸ್ಥೆಯ ಮೇಲೆ ಈ ಗಿಡಮೂಲಿಕೆಯ ಶಾಮಕ ಪ್ರಭಾವವನ್ನು ಹೆಚ್ಚಿಸಬಹುದು.

ಗಿಡಮೂಲಿಕೆಗಳನ್ನು ಉಪಯೋಗಿಸಸಾಧ್ಯವಿರುವ ವಿಧ

ಗಿಡಮೂಲಿಕೆಗಳನ್ನು ಅನೇಕ ವಿಧಗಳಲ್ಲಿ ಉಪಯೋಗಿಸಸಾಧ್ಯವಿದೆ. ಉದಾಹರಣೆಗೆ ಚಹ, ಕಷಾಯ, ಟಿಂಕ್ಚರ್‌, ಮತ್ತು ಪೋಲ್ಟೀಸುಗಳು (ಕುದಿಹಿಟ್ಟಿನ ಕಟ್ಟು) ಮುಂತಾದವುಗಳಲ್ಲಿ ಉಪಯೋಗಿಸಲಾಗುತ್ತವೆ. ಗಿಡಮೂಲಿಕೆಯ ಮೇಲೆ ಕುದಿಯುವ ನೀರನ್ನು ಸುರಿಯುವ ಮೂಲಕ ಚಹವನ್ನು ತಯಾರಿಸಲಾಗುತ್ತದೆ. ಆದರೆ, ಚಹಕ್ಕಾಗಿ ಉಪಯೋಗಿಸುವ ಗಿಡಮೂಲಿಕೆಯನ್ನು ಸಾಮಾನ್ಯವಾಗಿ ನೀರಿನಲ್ಲಿ ಕುದಿಸಬಾರದೆಂದು ಅಧಿಕಾರಿಗಳು ಎಚ್ಚರಿಸುತ್ತಾರೆ. ಗಿಡಮೂಲಿಕೆ ಬೇರುಗಳು ಮತ್ತು ತೊಗಟೆಗಳಂತಹ ವಸ್ತುಗಳಿಂದ ಮಾಡಿದ ಕಷಾಯಗಳನ್ನು, ಪ್ರಯೋಜನಕಾರಿ ಅಂಶಗಳನ್ನು ಬಿಡುಗಡೆಮಾಡುವಂತೆ ನೀರಿನಲ್ಲಿ ಕುದಿಸಲಾಗುತ್ತದೆ.

ಟಿಂಕ್ಚರ್‌ಗಳ ಕುರಿತಾಗಿ ಏನು? ಒಂದು ಪುಸ್ತಕ ತಿಳಿಸುವುದು, ಇವು “ಬ್ರಾಂಡಿ ಅಥವಾ ವಾಡ್ಕ ಮುಂತಾದ ಶುದ್ಧ ಅಥವಾ ತೆಳುಗೊಳಿಸಿದ ಮದ್ಯಸಾರದಲ್ಲಿ ಲೀನಮಾಡಿ ತಯಾರಿಸಲಾದ ಗಿಡಮೂಲಿಕೆಯ ಸಾರವಾಗಿದೆ.” ನಂತರ ವಿವಿಧ ರೀತಿಗಳಲ್ಲಿ ತಯಾರಿಸಸಾಧ್ಯವಿರುವ ಪೋಲ್ಟೀಸುಗಳಿವೆ. ಸಾಮಾನ್ಯವಾಗಿ ಇದನ್ನು ಹುಣ್ಣು ಅಥವಾ ಉರಿಯೂತದ ಮೇಲೆ ಕಟ್ಟಲಾಗುತ್ತದೆ.

ಅನೇಕ ವಿಟಮಿನ್‌ ಮಾತ್ರೆಗಳು ಮತ್ತು ಔಷಧಗಳಿಗೆ ವ್ಯತಿರಿಕ್ತವಾಗಿ, ಹೆಚ್ಚಿನ ಗಿಡಮೂಲಿಕೆಗಳನ್ನು ಆಹಾರವಾಗಿ ಪರಿಗಣಿಸಲಾಗುತ್ತದೆ ಮತ್ತು ಅನೇಕವೇಳೆ ಖಾಲಿ ಹೊಟ್ಟೆಯಲ್ಲಿ ಸೇವಿಸಲಾಗುತ್ತದೆ. ಇವನ್ನು ಕ್ಯಾಪ್‌ಸ್ಯೂಲ್‌ಗಳ ರೀತಿಯಲ್ಲಿಯೂ ಸೇವಿಸಸಾಧ್ಯವಿದೆ. ಇದನ್ನು ಹೆಚ್ಚು ಸುಲಭವಾಗಿಯೂ ಬಾಯಿಗೆ ರುಚಿಕರವಾದದ್ದಾಗಿಯೂ ಸೇವಿಸಸಾಧ್ಯವಿದೆ. ನೀವು ಒಂದುವೇಳೆ ಗಿಡಮೂಲಿಕೆಯ ಮದ್ದುಗಳನ್ನು ತೆಗೆದುಕೊಳ್ಳಲು ನಿರ್ಣಯಿಸುವುದಾದರೆ, ವೈದ್ಯರ ಮಾರ್ಗದರ್ಶನದ ಮೇರೆಗೆ ಅದನ್ನು ಸೇವಿಸುವುದು ವಿವೇಕಯುತವಾಗಿದೆ.

ಸಾಮಾನ್ಯ ನೆಗಡಿ, ಅಜೀರ್ಣ, ಮಲಬದ್ಧತೆ, ನಿದ್ರಾಹೀನತೆ, ಮತ್ತು ಪಿತ್ತೋದ್ರೇಕ ಮುಂತಾದ ಸಮಸ್ಯೆಗಳಿಗೆ ಸಾಂಪ್ರದಾಯಿಕವಾಗಿ ಗಿಡಮೂಲಿಕೆಯ ಮದ್ದುಗಳನ್ನು ಶಿಫಾರಸ್ಸುಮಾಡಲಾಗುತ್ತದೆ. ಹಾಗಿದ್ದರೂ, ಕೆಲವೊಮ್ಮೆ ಗಿಡಮೂಲಿಕೆಗಳು ಬಹಳ ಗಂಭೀರ ರೋಗಗಳಿಗೂ ಉಪಯೋಗಿಸಲ್ಪಡುತ್ತವೆ​—⁠ಕೇವಲ ರೋಗವನ್ನು ಗುಣಪಡಿಸಲು ಮಾತ್ರವಲ್ಲ ತಡೆಗಟ್ಟಲು ಸಹ ಉಪಯೋಗಿಸಲ್ಪಡುತ್ತವೆ. ಉದಾಹರಣೆಗೆ, ಜರ್ಮನಿ ಮತ್ತು ಆಸ್ಟ್ರಿಯದಲ್ಲಿ ಸಾ ಪಾಲ್‌ಮಿಟೋ (ಸಿರಿನೋಅ ರಿಪೆನ್ಸ್‌) ಎಂಬ ಗಿಡಮೂಲಿಕೆಯನ್ನು, ಕ್ಯಾನ್ಸರ್‌ಕಾರಕವಲ್ಲದ ಜನನೇಂದ್ರಿಯ ಗ್ರಂಥಿಯ ಊತಕ್ಕೆ ಪ್ರಥಮ ಚಿಕಿತ್ಸೆಯಾಗಿ ಉಪಯೋಗಿಸಲಾಗುತ್ತದೆ. ಕೆಲವು ದೇಶಗಳಲ್ಲಿ ಈ ಅಸ್ವಸ್ಥತೆಯು ಕ್ರಮೇಣವಾಗಿ 50ರಿಂದ 60 ಪ್ರತಿಶತ ಪುರುಷರನ್ನು ಬಾಧಿಸುತ್ತದೆ. ಹಾಗಿದ್ದರೂ, ಕ್ಯಾನ್ಸರ್‌ನ ಸಂಬಂಧದಲ್ಲಿ ಹೇಗೋ ಹಾಗೆ ಈ ಪರಿಸ್ಥಿತಿಗೂ ಹೆಚ್ಚು ತೀಕ್ಷ್ಣವಾದ ಚಿಕಿತ್ಸೆಯ ಅಗತ್ಯವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಊತದ ಕಾರಣವೇನೆಂದು ವೈದ್ಯರಿಂದ ರೋಗನಿರ್ಣಯಮಾಡಿಕೊಳ್ಳುವುದು ಪ್ರಾಮುಖ್ಯವಾಗಿದೆ.

ಕೆಲವು ಮುಂಜಾಗ್ರತೆಗಳು

ಒಂದು ಗಿಡಮೂಲಿಕೆಯು ಸುರಕ್ಷಿತವೆಂದು ಎಲ್ಲರಿಂದ ಪರಿಗಣಿಸಲ್ಪಡುವುದಾದರೂ, ಮುಂಜಾಗ್ರತೆಯು ಅಗತ್ಯವಾಗಿದೆ. ಒಂದು ವಸ್ತುವಿನ ಲೇಬಲ್‌ನಲ್ಲಿ “ನೈಸರ್ಗಿಕ” ಎಂದು ಬರೆಯಲ್ಪಟ್ಟಿದ್ದ ಮಾತ್ರಕ್ಕೆ ಮುಂಜಾಗ್ರತೆ ವಹಿಸುವುದನ್ನು ಅಲಕ್ಷಿಸಬೇಡಿ. ಗಿಡಮೂಲಿಕೆಗಳ ಕುರಿತು ತಿಳಿಸುವ ಒಂದು ಎನ್‌ಸೈಕ್ಲಪೀಡಿಯ ತಿಳಿಸುವುದು: “ಅಹಿತಕರ ವಾಸ್ತವಾಂಶವೇನೆಂದರೆ ಕೆಲವು ಗಿಡಮೂಲಿಕೆಗಳು ನೇರವಾಗಿ ಅಪಾಯಕಾರಿಗಳಾಗಿವೆ. ವಿಷಾದಕರವಾಗಿ ಕೆಲವರು ಯಾವುದೇ ಗಿಡಮೂಲಿಕೆಗಳು ಅಪಾಯಕಾರಿಯಾಗಿರಲಿ ಅಪಾಯರಹಿತವಾಗಿರಲಿ ಅವುಗಳಿಗೆ ಜಾಗರೂಕ ಪರಿಗಣನೆಯನ್ನು ನೀಡುವುದಿಲ್ಲ.” ಗಿಡಮೂಲಿಕೆಗಳಲ್ಲಿರುವ ರಾಸಾಯನಿಕ ಮಿಶ್ರಣಗಳು, ಹೃದಯಬಡಿತದ ಪ್ರಮಾಣವನ್ನು, ರಕ್ತದೊತ್ತಡವನ್ನು, ಮತ್ತು ಗ್ಲೂಕೋಸ್‌ ಪ್ರಮಾಣವನ್ನು ಹೆಚ್ಚಿಸಬಲ್ಲದು. ಆದುದರಿಂದ, ಹೃದಯದ ಸಮಸ್ಯೆಯಿರುವ, ಹೆಚ್ಚು ರಕ್ತದೊತ್ತಡವಿರುವ, ಅಥವಾ ಮಧುಮೇಹದಂಥ ರಕ್ತದಲ್ಲಿನ ಸಕ್ಕರೆ ಅಂಶದ ಸಮಸ್ಯೆಯಿರುವ ಜನರು ಪ್ರಾಮುಖ್ಯವಾಗಿ ಬಹಳ ಮುಂಜಾಗ್ರತೆಯನ್ನು ವಹಿಸಬೇಕು.

ಹಾಗಿದ್ದರೂ, ಸಾಮಾನ್ಯವಾಗಿ ಗಿಡಮೂಲಿಕೆಗಳಿಂದ ಉಂಟಾಗುವ ಸಮಸ್ಯೆಗಳು ಅಲರ್ಜಿಯಂತಹ ಪ್ರತಿಕ್ರಿಯೆಗಳೇ ಆಗಿರುತ್ತವೆ. ಇವುಗಳಲ್ಲಿ ತಲೆನೋವು, ತಲೆತಿರುಗುವಿಕೆ, ಪಿತ್ತೋದ್ರೇಕ, ಅಥವಾ ಚರ್ಮದ ಮೇಲೇಳುವ ಸಣ್ಣ ಸಣ್ಣ ಕೆಂಪು ಗುಳ್ಳೆಗಳು ಸೇರಿರುತ್ತವೆ. ಗಿಡಮೂಲಿಕೆಗಳು ಆರಂಭದಲ್ಲಿ ಫ್ಲೂವಿನಂಥ ಅಥವಾ ಇತರ ರೋಗಲಕ್ಷಣಗಳನ್ನು ಉಂಟುಮಾಡುತ್ತಾ, “ವಾಸಿಮಾಡುವಿಕೆಯ ಬಿಕ್ಕಟ್ಟನ್ನು” ಉಂಟುಮಾಡುತ್ತದೆ ಎಂಬುದಾಗಿಯೂ ಹೇಳಲಾಗುತ್ತದೆ. ಗಿಡಮೂಲಿಕೆಗಳನ್ನು ತೆಗೆದುಕೊಳ್ಳುವ ಒಬ್ಬ ವ್ಯಕ್ತಿಯು ವಾಸಿಯಾಗುವ ಮುನ್ನ ಇನ್ನೂ ಹಾನಿಕಾರಕ ಸ್ಥಿತಿಗೆ ತಲಪಿದಂತೆ ತೋರಬಹುದು. ಗಿಡಮೂಲಿಕೆಯ ಚಿಕಿತ್ಸೆಯ ಆರಂಭದ ಹಂತದಲ್ಲಿ ದೇಹದಿಂದ ವಿಷಭರಿತ ಹಿಪ್ಪೆಗಳು ಹೊರಹಾಕಲಾಗುವ ಕಾರಣ ಈ ಪ್ರತಿಕ್ರಿಯೆಯು ಉಂಟಾಗುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ.

ಆಗಿಂದಾಗ್ಗೆ, ನಿರ್ದಿಷ್ಟ ಗಿಡಮೂಲಿಕೆಯನ್ನು ತೆಗೆದುಕೊಂಡದ್ದರಿಂದ ಜನರು ಮೃತಪಡುವ ಕಾರಣ, ಅದರ ಸೇವನೆಯ ಕುರಿತು ಹೆಚ್ಚಿನ ಜಾಗರೂಕತೆ ಮತ್ತು ಸರಿಯಾದ ಮಾರ್ಗದರ್ಶನದ ಅಗತ್ಯವಿದೆ. ಉದಾಹರಣೆಗೆ, ದೇಹತೂಕವನ್ನು ಕಡಿಮೆಗೊಳಿಸಲಿಕ್ಕಾಗಿ ಸೇವಿಸುವ ಎಫಿಡ್ರಾ ಎಂಬ ಗಿಡಮೂಲಿಕೆ, ರಕ್ತದೊತ್ತಡವನ್ನು ಸಹ ಹೆಚ್ಚಿಸಸಾಧ್ಯವಿದೆ. “ನನಗೆ ಗೊತ್ತಿರುವ ಮಟ್ಟಿಗೆ ಎಫಿಡ್ರಾವನ್ನು ಸೇವಿಸಿ ಜನರು ಸತ್ತಿರುವುದಾದರೆ, ಒಂದೇ ಅವರಿಗೆ ಅಂತರ್ನಿಹಿತ ಪರಿಧಮನಿ ರೋಗವಿದ್ದಿರಬೇಕು ಇಲ್ಲವೆ ಅವರು ಗೊತ್ತಾದ ಪ್ರಮಾಣಕ್ಕಿಂತ ಹೆಚ್ಚು ಔಷಧಿಯನ್ನು ತೆಗೆದುಕೊಂಡಿರಬೇಕು” ಎಂಬುದಾಗಿ ಸ್ಯಾನ್‌ ಫ್ರಾನ್‌ಸಿಸ್ಕೋದ ರೋಗಶಾಸ್ತ್ರಜ್ಞ ಸ್ಟೀವನ್‌ ಕಾರ್ಚ್‌ ಹೇಳಿದ್ದ ಹೊರತಾಗಿಯೂ ಅಮೆರಿಕದಲ್ಲಿ ಸಂಭವಿಸಿದ 100ಕ್ಕಿಂತಲೂ ಹೆಚ್ಚಿನ ಮರಣಗಳಿಗೆ ಎಫಿಡ್ರಾ ಉತ್ಪನ್ನದ ಸೇವನೆಯೇ ಕಾರಣವೆಂದು ಅಭಿಪ್ರಾಯಿಸಲಾಗಿದೆ.

ಗಿಡಮೂಲಿಕೆಯ ಸಂಪೂರಕಗಳ ಮೇಲಾಧಾರಿತ ಪುಸ್ತಕಗಳ ಲೇಖಕನಾದ ಡಾ. ಲೋಗನ್‌ ಚೇಮ್‌ಬರ್ಲಿನ್‌ ಎಂಬವರು ತಿಳಿಸುವುದು: “ಗಿಡಮೂಲಿಕೆಗಳಿಂದ ಉಂಟಾದ ಹಾನಿಕಾರಕ ಪ್ರಭಾವಗಳ ಕುರಿತಾದ ಇತ್ತೀಚಿನ ಎಲ್ಲಾ ವರದಿಗಳು ತೋರಿಸುವುದೇನೆಂದರೆ ಜನರು ಅದರ ನಿರ್ದೇಶನಗಳನ್ನು ಅನುಸರಿಸದೆ ಇದ್ದದ್ದರಿಂದಲೇ ಅವು ಸಂಭವಿಸಿದವು. . . . ವಿಶ್ವಾಸಾರ್ಹ ಉತ್ಪನ್ನಗಳ ಮೇಲೆ ಶಿಫಾರಸ್ಸುಮಾಡಿರುವ ಪ್ರಮಾಣವು, ಸುರಕ್ಷಿತವಾದದ್ದಾಗಿಯೂ ಮಿತವಾದದ್ದಾಗಿಯೂ ಇರುತ್ತದೆ. ಆದುದರಿಂದ, ಗಿಡಮೂಲಿಕೆಯ ಒಬ್ಬ ನುರಿತ ವೈದ್ಯನಿಂದ ಶಿಫಾರಸ್ಸುಮಾಡಲ್ಪಟ್ಟ ಹೊರತಾಗಿ, ಉತ್ಪನ್ನಗಳ ಮೇಲೆ ಶಿಫಾರಸ್ಸುಮಾಡಿರುವ ಪ್ರಮಾಣವನ್ನು ಅಲಕ್ಷಿಸಿ ನಿಮಗೆ ಸೂಕ್ತವೆನಿಸಿದ ಪ್ರಮಾಣವನ್ನು ಸೇವಿಸಬಹುದೆಂದು ಎಣಿಸಬೇಡಿರಿ.”

ಗಿಡಮೂಲಿಕೆಗಳ ಔಷಧಿಶಾಸ್ತ್ರಜ್ಞೆ ಲಿಂಡ ಪೇಜ್‌ ಈ ಎಚ್ಚರಿಕೆಯ ಸಲಹೆಯನ್ನು ನೀಡುತ್ತಾಳೆ: “ಗಂಭೀರವಾದ ಸಮಸ್ಯೆಯಿದ್ದರೂ ಒಬ್ಬ ವ್ಯಕ್ತಿಯು ಮಿತವಾದ ಪ್ರಮಾಣವನ್ನು ಸೇವಿಸಬೇಕೇ ಹೊರತು ಹೆಚ್ಚಿನ ಪ್ರಮಾಣವನ್ನಲ್ಲ. ಚಿಕಿತ್ಸೆಗೆ ಹೆಚ್ಚು ಸಮಯವನ್ನು ನೀಡುವ ಮತ್ತು ಹೆಚ್ಚು ಸೌಮ್ಯವಾದ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಮೂಲಕ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಸಾಧ್ಯವಿದೆ. ಉತ್ತಮ ಆರೋಗ್ಯವನ್ನು ಪುನಃ ಹೊಂದಲು ಸಮಯ ಹಿಡಿಯುತ್ತದೆ.”

ಗಿಡಮೂಲಿಕೆಗಳ ಕುರಿತಾದ ಒಂದು ಪುಸ್ತಕವು ವಿವರಿಸುವುದು, ಕೆಲವು ಗಿಡಮೂಲಿಕೆಗಳಿಗೆ ಅಂತರ್ನಿರ್ಮಿತ ಹೆಚ್ಚು ಪ್ರಮಾಣವನ್ನು ತಡೆಗಟ್ಟುವ ಯಂತ್ರ ರಚನೆಯಿದೆ. ಉದಾಹರಣೆಗೆ, ದೇಹದ ಆಯಾಸವನ್ನು ನಿವಾರಿಸಲು ಉಪಯೋಗಿಸುವ ಗಿಡಮೂಲಿಕೆಯನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಿದರೆ ಅದು ವಾಂತಿಯನ್ನುಂಟುಮಾಡುತ್ತದೆ. ಹಾಗಿದ್ದರೂ, ಎಲ್ಲಾ ಗಿಡಮೂಲಿಕೆಗಳಿಗೆ ಅನ್ವಯಿಸದ ಈ ವೈಶಿಷ್ಯವು, ಸುರಕ್ಷಿತ ಪ್ರಮಾಣಕ್ಕೆ ಅಂಟಿಕೊಳ್ಳುವ ಅಗತ್ಯವನ್ನು ರದ್ದುಮಾಡುವುದಿಲ್ಲ.

ಗಿಡಮೂಲಿಕೆಯು ಪರಿಣಾಮಕಾರಿಯಾಗಿರಬೇಕಾದರೆ ಅದನ್ನು ಸೂಕ್ತ ಪರಿಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವಿಸಬೇಕೆಂದು ಅನೇಕರು ನಂಬುತ್ತಾರೆ. ಕೆಲವೊಮ್ಮೆ ಇದನ್ನು ಮಾಡುವ ಸೂಕ್ತವಾದ ವಿಧಾನವು, ಸಾರವನ್ನು ತೆಗೆಯುವ ಮೂಲಕವೇ ಆಗಿದೆ. ದೀರ್ಘಕಾಲದಿಂದ, ಜ್ಞಾಪಕಶಕ್ತಿ ಮತ್ತು ರಕ್ತಪರಿಚಲನೆಯನ್ನು ಉತ್ತಮಗೊಳಿಸಲು ಉಪಯೋಗಿಸಲಾಗುತ್ತಿರುವ ಜಿಂಕ್‌ಗೋ ಬಿಲೋಬ ಎಂಬ ಮರದ ವಿಷಯದಲ್ಲಿ ಇದು ಸತ್ಯವಾಗಿದೆ. ಒಂದು ಪರಿಣಾಮಕಾರಿ ಪ್ರಮಾಣಕ್ಕಾಗಿ, ಈ ಮರದ ಅನೇಕ ಕಿಲೊಗ್ರಾಮ್‌ಗಳಷ್ಟು ಎಲೆಗಳಿಂದ ಸಾರವನ್ನು ತೆಗೆಯಬೇಕಾಗುತ್ತದೆ.

ಬೆರಸುವಿಕೆಯ ಸಂಭವನೀಯ ಅಪಾಯ

ಗಿಡಮೂಲಿಕೆಗಳು ಅನೇಕ ವಿಧಗಳಲ್ಲಿ ಬೇರೆ ಔಷಧಗಳೊಂದಿಗೆ ಪರಸ್ಪರಕ್ರಿಯೆ ನಡಿಸಬಲ್ಲವು. ಉದಾಹರಣೆಗೆ, ಅವು ಬೇರೆ ಔಷಧಗಳ ಪ್ರಭಾವವನ್ನು ಹೆಚ್ಚಿಸಲು ಅಥವಾ ಕಡಿಮೆಗೊಳಿಸಲು ಸಾಧ್ಯವಿದೆ. ಅವುಗಳನ್ನು ದೇಹದಿಂದ ಬೇಗನೆ ವರ್ಜಿಸಸಾಧ್ಯವಿದೆ ಅಥವಾ ನಕಾರಾತ್ಮಕ ಪರಿಣಾಮಗಳ ಅಪಾಯವನ್ನು ಹೆಚ್ಚಿಸಸಾಧ್ಯವಿದೆ. ಜರ್ಮನಿಯಲ್ಲಿ ಸೌಮ್ಯವಾದ ಖಿನ್ನತೆಯಿಂದ ಮಿತವಾದ ಖಿನ್ನತೆಗೆ ಅನೇಕವೇಳೆ ವೈದ್ಯರಿಂದ ಶಿಫಾರಸ್ಸು ಮಾಡಲಾಗುವ ಸೈಂಟ್‌ ಜಾನ್ಸ್‌ ವರ್ಟ್‌ ಎಂಬ ಗಿಡಮೂಲಿಕೆಯು, ಇತರ ಅನೇಕ ಮದ್ದುಗಳನ್ನು ದೇಹದಿಂದ ಸಾಮಾನ್ಯಕ್ಕಿಂತ ಎರಡು ಪಟ್ಟು ವೇಗವಾಗಿ ವರ್ಜಿಸುತ್ತದೆ ಮತ್ತು ಈ ರೀತಿಯಲ್ಲಿ ಆ ಮದ್ದುಗಳ ಪ್ರಭಾವವನ್ನು ಬಹಳ ಕಡಿಮೆಗೊಳಿಸುತ್ತದೆ. ಆದುದರಿಂದ ಒಂದುವೇಳೆ ನೀವು ಗಿಡಮೂಲಿಕೆಯಲ್ಲದ ಇತರ ಮದ್ದುಗಳನ್ನು ತೆಗೆದುಕೊಳ್ಳುತ್ತಿರುವಲ್ಲಿ​—⁠ಗರ್ಭನಿರೋಧಕ ಮಾತ್ರೆಗಳನ್ನು ಸೇರಿಸಿ​—⁠ಗಿಡಮೂಲಿಕೆಗಳನ್ನು ತೆಗೆದುಕೊಳ್ಳುವ ಮುನ್ನ ನಿಮ್ಮ ವೈದ್ಯರಲ್ಲಿ ವಿಚಾರಿಸಿರಿ.

ಗಿಡಮೂಲಿಕೆಗಳ ವಾಸಿಮಾಡುವ ವಿಧಾನದ ಕುರಿತು ಒಂದು ಪುಸ್ತಕವು ತಿಳಿಸುವುದು: “ಮದ್ಯಸಾರ, ಗಾಂಜಾ, ಕೊಕೇನು, ಮನೋವೃತ್ತಿಯನ್ನು ಬದಲಾಯಿಸುವ ಇತರ ಮಾದಕ ಔಷಧಗಳು ಮತ್ತು ತಂಬಾಕು ಮುಂತಾದವುಗಳು ವೈದ್ಯಕೀಯ ಗಿಡಮೂಲಿಕೆಗಳೊಂದಿಗೆ ಮಿಶ್ರವಾದಾಗ ಜೀವಕ್ಕೆ ಗಂಡಾಂತರವನ್ನು ಒಡ್ಡಬಲ್ಲವು. . . . ಮುಖ್ಯವಾಗಿ ಅಸ್ವಸ್ಥತೆಯ ಸಮಯದಲ್ಲಿ [ಇಂಥ ಮಾದಕ ಔಷಧಗಳನ್ನು] ತ್ಯಜಿಸುವಂತೆ ಸಾಮಾನ್ಯ ಜ್ಞಾನವು ತಿಳಿಯಪಡಿಸಬೇಕು.” ಅಷ್ಟುಮಾತ್ರವಲ್ಲದೆ, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಸಹ ಈ ಸಲಹೆಯನ್ನು ಹೃದಯಕ್ಕೆ ತೆಗೆದುಕೊಳ್ಳಬೇಕು. “ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ [ನಿಮ್ಮನ್ನು] ಶುಚಿಮಾಡಿ”ಕೊಳ್ಳಿರಿ ಎಂಬ ಬೈಬಲ್‌ ಆಜ್ಞೆಗೆ ಕಿವಿಗೊಡುವ ಮೂಲಕ ಕ್ರೈಸ್ತರು ತಂಬಾಕು ಮತ್ತು ಮಾದಕ ಔಷಧಗಳ ಹಾನಿಯಿಂದ ಸಂರಕ್ಷಿಸಲ್ಪಟ್ಟಿದ್ದಾರೆ.​—⁠2 ಕೊರಿಂಥ 7:⁠1.

ಗಿಡಮೂಲಿಕೆಗಳ ವಿಷಯದಲ್ಲಿ ಒಂದು ಪುಸ್ತಕವು ಈ ಎಚ್ಚರಿಕೆಯನ್ನು ಒದಗಿಸುತ್ತದೆ: “ಗಿಡಮೂಲಿಕೆಗಳನ್ನು ನೀವು ಸೇವಿಸುತ್ತಿರುವ ಅವಧಿಯಲ್ಲಿ ಒಂದುವೇಳೆ ನೀವು ಗರ್ಭಿಣಿಯಾದರೆ, ನಿಮ್ಮ ವೈದ್ಯರಿಗೆ ಅದನ್ನು ತಿಳಿಸಿರಿ ಮತ್ತು ನೀವು ಅವನು ಅಥವಾ ಅವಳೊಂದಿಗೆ ಅದರ ಕುರಿತು ಚರ್ಚಿಸುವ ತನಕ ಸೇವಿಸುವುದನ್ನು ನಿಲ್ಲಿಸಿರಿ. ಆ ಗಿಡಮೂಲಿಕೆಯ ನಿರ್ದಿಷ್ಟ ಪ್ರಮಾಣ ಮತ್ತು ನೀವು ಅದನ್ನು ಎಷ್ಟು ಸಮಯದಿಂದ ಸೇವಿಸುತ್ತಿದ್ದೀರಿ ಎಂಬುದನ್ನು ಜ್ಞಾಪಕದಲ್ಲಿಡಲು ಪ್ರಯತ್ನಿಸಿರಿ.”

“[ಗಿಡಮೂಲಿಕೆಯ] ಸ್ವ-ಚಿಕಿತ್ಸೆಯನ್ನು ಮಾಡಿಕೊಳ್ಳುವುದರಿಂದ ಬರುವ ಅಪಾಯಗಳು ಹಲವಾರು,” ಎಂಬುದಾಗಿ ಗಿಡಮೂಲಿಕೆಯ ಕುರಿತಾದ ಒಂದು ಎನ್‌ಸೈಕ್ಲಪೀಡಿಯ ಹೇಳುತ್ತದೆ. ಗಿಡಮೂಲಿಕೆಗಳಿಗೆ ಸಂಬಂಧಿಸಿದ ಸಂಭವನೀಯ ಅಪಾಯಗಳ ಒಂದು ಪಟ್ಟಿಯನ್ನು ನೀವು ಈ ಲೇಖನದೊಂದಿಗಿರುವ “ಸ್ವ-ಚಿಕಿತ್ಸೆಯನ್ನು ಮಾಡಿಕೊಳ್ಳುವುದರ ಅಪಾಯಗಳು” ಎಂಬ ಚೌಕದಲ್ಲಿ ಕಂಡುಕೊಳ್ಳುತ್ತೀರಿ.

ಇತರ ಎಲ್ಲಾ ಆರೋಗ್ಯ ಉತ್ಪನ್ನಗಳಂತೆ, ಗಿಡಮೂಲಿಕೆಗಳನ್ನು ಸಹ ಜಾಗರೂಕತೆ, ತಿಳಿವಳಿಕೆ, ಮತ್ತು ಸಮತೂಕದಿಂದ ಉಪಯೋಗಿಸಬೇಕು​—⁠ಮತ್ತು ನೆನಪಿನಲ್ಲಿಡಿರಿ, ಕೆಲವು ರೋಗಗಳಿಗೆ ಈಗಿನ ವ್ಯವಸ್ಥೆಯಲ್ಲಿ ಯಾವುದೇ ವಾಸಿಯಿರುವುದಿಲ್ಲ. ದೇವರ ರಾಜ್ಯದ ಆಳ್ವಿಕೆಯ ಕೆಳಗೆ, ಅಸ್ವಸ್ಥತೆ ಮತ್ತು ಮರಣಕ್ಕೆ ಕಾರಣವಾಗಿರುವ ನಮ್ಮ ಪ್ರಥಮ ಹೆತ್ತವರಿಂದ ಬಾಧ್ಯತೆಯಾಗಿ ಪಡೆದ ಅಪರಿಪೂರ್ಣತೆಯು ಸಂಪೂರ್ಣವಾಗಿ ತೆಗೆದುಹಾಕಲ್ಪಡುವ ಸಮಯಕ್ಕಾಗಿ ಸತ್ಕೈಸ್ತರು ಮುನ್ನೋಡುತ್ತಾರೆ.​—⁠ರೋಮಾಪುರ 5:12; ಪ್ರಕಟನೆ 21:​3, 4. (g03 12/22)

[ಪಾದಟಿಪ್ಪಣಿ]

^ ಎಚ್ಚರ! ಪತ್ರಿಕೆಯು ಒಂದು ವೈದ್ಯಕೀಯ ಪತ್ರಿಕೆಯಾಗಿರುವುದಿಲ್ಲ ಮತ್ತು ಯಾವುದೇ​—⁠ಗಿಡಮೂಲಿಕೆಯಾಗಲಿ ಅಥವಾ ಇನ್ನಿತರ ಚಿಕಿತ್ಸೆಯಾಗಲಿ​—⁠ನಿರ್ದಿಷ್ಟ ಚಿಕಿತ್ಸೆ ಅಥವಾ ಆಹಾರಪಥ್ಯವನ್ನು ಶಿಫಾರಸ್ಸುಮಾಡುವುದಿಲ್ಲ. ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಕೇವಲ ಸಾಮಾನ್ಯ ಮಾಹಿತಿಯಾಗಿದೆ ಆರೋಗ್ಯ ಮತ್ತು ಔಷಧಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಓದುಗರು ಸ್ವತಃ ನಿರ್ಣಯಿಸಬೇಕು.

[ಪುಟ 18ರಲ್ಲಿರುವ ಚೌಕ]

ಸ್ವ-ಚಿಕಿತ್ಸೆಯನ್ನು ಮಾಡಿಕೊಳ್ಳುವುದರ ಅಪಾಯಗಳು

ಕೆಳಗೆ ಕೊಡಲ್ಪಟ್ಟಿರುವ ವಿಷಯಗಳು ಅರ್ಹರಾದ ವೈದ್ಯರ ಸಹಾಯವಿಲ್ಲದೆ ಗಿಡಮೂಲಿಕೆಗಳನ್ನು ಉಪಯೋಗಿಸುವುದರ ಅಪಾಯಗಳಾಗಿವೆ.

ನಿಮ್ಮ ಆರೋಗ್ಯದ ಸಮಸ್ಯೆಗೆ ನಿರ್ದಿಷ್ಟ ಕಾರಣವು ಯಾವುದಾಗಿದೆ ಎಂಬುದು ನಿಮಗೆ ನಿಜವಾಗಿಯೂ ತಿಳಿಯದೇ ಇರಬಹುದು.

ಒಂದುವೇಳೆ ನಿಮ್ಮ ಅಸ್ವಸ್ಥತೆಯನ್ನು ಸರಿಯಾಗಿ ಕಂಡುಹಿಡಿದಿದ್ದರೂ ಸ್ವ-ಚಿಕಿತ್ಸೆಯನ್ನು ಮಾಡಿಕೊಳ್ಳುವ ನಿಮ್ಮ ಜೀವನ ಕ್ರಮವು ನಿಮ್ಮ ಅಸ್ವಸ್ಥತೆಗೆ ಅಯುಕ್ತವಾಗಿರಬಹುದು.

ನಿಮ್ಮ ಸ್ವ-ಚಿಕಿತ್ಸಾ ಕಾರ್ಯಕ್ರಮವು ತೀವ್ರ ಕ್ರಮದ್ದಾಗಿದ್ದರೂ ಅದು ಅಗತ್ಯವೂ ಯೋಗ್ಯವೂ ಆಗಿರುವ ಚಿಕಿತ್ಸೆಯನ್ನು

ವಿಳಂಬಿಸಬಹುದು.

ನಿಮ್ಮ ಸ್ವ-ಚಿಕಿತ್ಸೆಯು ವೈದ್ಯರು ನಿಮಗೆ ಶಿಫಾರಸ್ಸು ಮಾಡಿರುವ ಮದ್ದುಗಳಿಗೆ ವಿರುದ್ಧವಾಗಿರಬಹುದು​—⁠ಉದಾಹರಣೆಗೆ, ಅಲರ್ಜಿ ಮದ್ದು ಅಥವಾ ರಕ್ತದೊತ್ತಡದ ಔಷಧ.

ನಿಮ್ಮ ಸ್ವ-ಚಿಕಿತ್ಸೆಯು ಸಣ್ಣಪುಟ್ಟ ರೋಗವನ್ನು ಗುಣಪಡಿಸಬಹುದು, ಆದರೆ ರಕ್ತದೊತ್ತಡ ಮುಂತಾದ ಇನ್ನಿತರ ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸಬಹುದು.

[ಕೃಪೆ]

ಮೂಲ: Rodale’s Illustrated Encyclopedia of Herbs