ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಮಾಟೀ ಮೆಕ್ಸಿಕೋದ ಪಪೈರಸ್‌

ಆಮಾಟೀ ಮೆಕ್ಸಿಕೋದ ಪಪೈರಸ್‌

ಆಮಾಟೀ ಮೆಕ್ಸಿಕೋದ ಪಪೈರಸ್‌

ಮೆಕ್ಸಿಕೋದಲ್ಲಿರುವ ಎಚ್ಚರ! ಲೇಖಕರಿಂದ

ಮೆಕ್ಸಿಕೋದ ಜನರು ತುಂಬ ಸ್ವಾರಸ್ಯಕರವಾದ ಹಾಗೂ ಮನೋಹರವಾದ ಇತಿಹಾಸವನ್ನು ಹೊಂದಿದ್ದಾರೆ. ಗತಕಾಲದಿಂದ ಜೋಪಾನವಾಗಿ ಸಂರಕ್ಷಿಸಲ್ಪಟ್ಟ ಅಮೂಲ್ಯವಾದ ಸಾಂಸ್ಕೃತಿಕ ನಿಧಿಗಳಲ್ಲಿ “ಸಾಕ್ಷ್ಯಗಳು” ಅಂದರೆ ಚಿತ್ರಲಿಪಿಯ ಹಸ್ತಪ್ರತಿಗಳು ಅಥವಾ ಹಸ್ತಾಕ್ಷರ ಗ್ರಂಥಗಳು (ಕೋಡಿಸೀಸ್‌) ಒಳಗೂಡಿವೆ. ಈ ಹಸ್ತಾಕ್ಷರ ಗ್ರಂಥಗಳ ಸಹಾಯದಿಂದ, ಇತಿಹಾಸ, ವಿಜ್ಞಾನ, ಧರ್ಮ, ಹಾಗೂ ಕಾಲಗಣನಶಾಸ್ತ್ರದಂತಹ ಜ್ಞಾನದ ಅನೇಕ ಕ್ಷೇತ್ರಗಳ ಕುರಿತು ಮತ್ತು ಆ್ಯಸ್‌ಟೆಕ್‌ ಹಾಗೂ ಮಾಯಾ ಜನಾಂಗಗಳನ್ನೂ ಒಳಗೊಂಡು ಮೆಸೊಅಮೆರಿಕದಲ್ಲಿನ ವಿಕಸಿತ ನಾಗರಿಕತೆಗಳ ದೈನಂದಿನ ಜೀವಿತಗಳ ಕುರಿತು ತಿಳಿದುಕೊಳ್ಳಲು ಸಾಧ್ಯವಾಗಿದೆ. ಗಮನಾರ್ಹ ಸಾಮರ್ಥ್ಯವಿದ್ದ ಟ್ಲಾಕ್ವೀಲೋಸ್‌, ಅಥವಾ ವಿದ್ವಾಂಸರು ತಮ್ಮ ಇತಿಹಾಸವನ್ನು ಬೇರೆ ಬೇರೆ ವಸ್ತುಗಳ ಮೇಲೆ ದಾಖಲಿಸಿದ್ದಾರೆ.

ಕೆಲವು ಹಸ್ತಪ್ರತಿಗಳು ಬಟ್ಟೆಗಳ ಉದ್ದವಾದ ತುಂಡುಗಳು, ಜಿಂಕೆಯ ಚರ್ಮ, ಅಥವಾ ಮ್ಯಾಗ್‌ವೆ ಗಿಡದ ಕಾಗದಗಳಿಂದ ಮಾಡಲ್ಪಡುತ್ತಿದ್ದವಾದರೂ, ಮುಖ್ಯವಾಗಿ ಉಪಯೋಗಿಸಲ್ಪಡುತ್ತಿದ್ದ ವಸ್ತು ಆಮಾಟೀಯಾಗಿತ್ತು. ಆಮಾಟೀ ಎಂಬ ಹೆಸರು ಆಮಾಟಲ್‌ ಎಂಬ ನಾವಾಟಲ್‌ ಪದದಿಂದ ತೆಗೆದುಕೊಳ್ಳಲ್ಪಟ್ಟದ್ದಾಗಿದ್ದು, ಇದರ ಅರ್ಥ ಕಾಗದ ಎಂದಾಗಿದೆ. ಆಮಾಟೀಯನ್ನು ಮೊರಾಸಿಯೆ ವರ್ಗಕ್ಕೆ ಸೇರಿರುವ ಫೈಕಸ್‌ ಅಥವಾ ಅಂಜೂರದ ಮರದ ತೊಗಟೆಯಿಂದ ಪಡೆಯಲಾಗುತ್ತಿತ್ತು. ಎನ್‌ಸೈಕ್ಲಪೀಡೀಯ ಡ ಮೇಕ್ಸಿಕೊಕ್ಕನುಸಾರ, “ಫೈಕಸ್‌ನ ಕಾಂಡ, ಎಲೆಗಳು, ಹೂವುಗಳು, ಮತ್ತು ಹಣ್ಣಿನ ವಿಸ್ತೃತ ಪರೀಕ್ಷೆಯನ್ನು ಮಾಡಿದರೆ ಮಾತ್ರ ಅದರ ಅನೇಕ ಜಾತಿಗಳ ನಡುವಣ ವ್ಯತ್ಯಾಸವನ್ನು ಕಂಡುಹಿಡಿಯಸಾಧ್ಯವಿದೆ.” ಫೈಕಸ್‌ ಮರವು ಬಿಳಿಯ ಆಮಾಟೀಯಾಗಿರಬಹುದು, ಬಿಳಿಯ ಕಾಡು ಆಮಾಟೀಯಾಗಿರಬಹುದು, ಅಥವಾ ಕಡುಗಂದು ಬಣ್ಣದ ಆಮಾಟೀಯಾಗಿರಬಹುದು.

ಇದರ ತಯಾರಿಕೆ

ಹದಿನಾರನೆಯ ಶತಮಾನದಲ್ಲಿ ಸ್ಪ್ಯಾನಿಷರು ಜಯವನ್ನು ಪಡೆದಾಗ, ಆಮಾಟೀಯನ್ನು ತಯಾರಿಸುವ ಚಟುವಟಿಕೆಗೆ ಭಂಗವನ್ನು ತರಲು ಪ್ರಯತ್ನಗಳನ್ನು ಮಾಡಲಾಯಿತು. ಏಕೆ? ವಿಜೇತರ ದೃಷ್ಟಿಯಲ್ಲಿ ಆಮಾಟೀ, ಹಿಸ್ಪ್ಯಾನಿಕ್‌ಗೆ ಮುಂಚಿನ ಧಾರ್ಮಿಕ ಮತಾಚರಣೆಗಳಿಗೆ ನಿಕಟವಾಗಿ ಸಂಬಂಧಿಸಿದ್ದಾಗಿತ್ತು; ಈ ಮತಾಚರಣೆಗಳನ್ನು ಕ್ಯಾಥೊಲಿಕ್‌ ಚರ್ಚು ಬಲವಾಗಿ ಖಂಡಿಸಿತ್ತು. ಈಸ್ಟೋರ್ಯಾ ಡ ಲಾಸ್‌ ಈನ್‌ಡ್ಯಾಸ್‌ ಡ ನ್ಯೂವಾ ಎಸ್ಪಾನ್ಯಾ ಇ ಈಸ್‌ಲಾಸ್‌ ಡ ಲಾ ಟ್ಯೇರಾ ಫಿರ್ಮಿ (ನ್ಯೂ ಸ್ಪೆಯ್ನ್‌ ಇಂಡಿಸ್‌ ಹಾಗೂ ಟೆರ ಫರ್ಮ ಐಲೆಂಡ್ಸ್‌ನ ಇತಿಹಾಸ) ಎಂಬ ತನ್ನ ಕೃತಿಯಲ್ಲಿ, ಸ್ಪ್ಯಾನಿಷ್‌ ಸಂನ್ಯಾಸಿಯಾಗಿದ್ದ ಡ್ಯೇಗೊ ಡೂರಾನ್‌ ಸೂಚಿಸಿ ಹೇಳಿದ್ದೇನೆಂದರೆ, ಸ್ಥಳೀಯರು “ತಮ್ಮ ಮೂಲಪಿತೃಗಳ ಗಮನಾರ್ಹ ಐತಿಹಾಸಿಕ ಘಟನೆಗಳನ್ನು ದಾಖಲಿಸಿದರು. ಒಂದುವೇಳೆ ಜನರು ಅಜ್ಞಾನದಿಂದಲೂ ಅತಿಯಾದ ಹುರುಪಿನಿಂದಲೂ ಇವುಗಳನ್ನು ನಾಶಮಾಡಿರದಿರುತ್ತಿದ್ದಲ್ಲಿ, ಇವುಗಳಿಂದ ನಮಗೆ ಸಾಕಷ್ಟು ಮಾಹಿತಿಯು ದೊರಕುತ್ತಿತ್ತು. ಏಕೆಂದರೆ ಈ ಐತಿಹಾಸಿಕ ದಾಖಲೆಗಳು ವಿಗ್ರಹಗಳಾಗಿವೆಯೆಂದು ನೆನಸಿ ಕೆಲವು ಅಜ್ಞಾನಿಗಳು ಇವುಗಳನ್ನು ಸುಟ್ಟುಬಿಟ್ಟರಾದರೂ, ವಾಸ್ತವದಲ್ಲಿ ಇವು ಸ್ಮರಣಾರ್ಹ ಇತಿಹಾಸಗಳಾಗಿದ್ದವು.”

ಆದರೂ, ಆಮಾಟೀ ಕಾಗದ ತಯಾರಿಕೆಯ ಪದ್ಧತಿಯನ್ನು ನಿರ್ಮೂಲನಮಾಡಲು ಮಾಡಲ್ಪಟ್ಟ ಪ್ರಯತ್ನಗಳು ಯಶಸ್ವಿಯಾಗಲಿಲ್ಲ, ಮತ್ತು ಸಂತೋಷಕರವಾಗಿಯೇ ಇವತ್ತಿಗೂ ಈ ತಯಾರಿಕೆಯ ರೂಢಿ ಜಾರಿಯಲ್ಲಿದೆ. ಪ್ಯೂಬ್ಲ ರಾಜ್ಯದ ಉತ್ತರ ಸೀಎರದ ಪರ್ವತ ಪ್ರದೇಶಗಳಲ್ಲಿ, ಸಾನ್‌ ಪಾಬ್ಲೀಟೋ, ಪಾವಾಟ್‌ಲಾನ್‌ ನಗರಸಭೆಗಳಂಥ ಸ್ಥಳಗಳಲ್ಲಿ ಇಂದಿಗೂ ಕಾಗದವನ್ನು ತಯಾರಿಸಲಾಗುತ್ತದೆ. ರಾಜ IIನೆಯ ಫಿಲಿಪ್ಪನ ಆಸ್ಥಾನ ವೈದ್ಯನಾಗಿದ್ದ ಫ್ರಾಂಥೀಸ್ಕೋ ಏರ್‌ನಾನ್‌ಡೇಥ್‌ನಿಂದ ದಾಖಲಿಸಲ್ಪಟ್ಟ ಮಾಹಿತಿಯನ್ನು ಉದಾಹರಣೆಯಾಗಿ ಕೊಡುತ್ತಾ, ಆರ್ಕೇಓಲೋಕೀಆ ಮೆಹೀಕೇನೇ (ಮೆಕ್ಸಿಕನ್‌ ಪ್ರಾಕ್ತನಶಾಸ್ತ್ರ) ಎಂಬ ಪತ್ರಿಕೆಯು ಹೇಳುವುದು: “ಕಾಗದ ತಯಾರಕರು ಮರಗಳ ದಪ್ಪ ಕೊಂಬೆಗಳನ್ನು ಮಾತ್ರ ಕತ್ತರಿಸುತ್ತಾರೆ ಮತ್ತು ಚಿಗುರುಗಳನ್ನು ಬಿಟ್ಟುಬಿಡುತ್ತಾರೆ. ತದನಂತರ ಕೊಂಬೆಗಳು ಸ್ವಲ್ಪ ಮೆತ್ತಗಾಗುವಂತೆ ಒಂದು ರಾತ್ರಿಯ ಮಟ್ಟಿಗೆ ಪಕ್ಕದ ನದಿಗಳು ಅಥವಾ ತೊರೆಗಳಲ್ಲಿ ಅವುಗಳನ್ನು ನೆನಸಿಡಲಾಗುತ್ತದೆ. ಮರುದಿನ ಈ ಕೊಂಬೆಗಳಿಂದ ತೊಗಟೆಯನ್ನು ಸಿಗಿದು, ಹೊರತೊಗಟೆಯನ್ನು ಒಳತೊಗಟೆಯಿಂದ ಬೇರ್ಪಡಿಸಲಾಗುತ್ತದೆ. ಬಳಿಕ ಒಳತೊಗಟೆಯನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ.” ಈ ತೊಗಟೆಯನ್ನು ಸ್ವಚ್ಛಗೊಳಿಸಿದ ನಂತರ, ನಾರಿನ ಎಳೆಗಳನ್ನು ಸಮತಟ್ಟಾದ ಮೇಲ್ಮೈಯ ಮೇಲೆ ಹರವಿ, ಒಂದು ಕಲ್ಲಿನ ಸುತ್ತಿಗೆಯಿಂದ ಇವುಗಳ ಮೇಲೆ ಕುಟ್ಟಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ, ನಾರುಗಳನ್ನು ಮೃದುಗೊಳಿಸಲಿಕ್ಕಾಗಿ ಮತ್ತು ಅದೇ ಸಮಯದಲ್ಲಿ ಇವುಗಳಿಂದ ಕೆಲವೊಂದು ಪದಾರ್ಥಗಳನ್ನು ಬೇರ್ಪಡಿಸಲಿಕ್ಕಾಗಿ, ಇವುಗಳನ್ನು ದೊಡ್ಡ ಪಾತ್ರೆಗಳಲ್ಲಿ ಕುದಿಸಲಾಗುತ್ತದೆ ಮತ್ತು ಇದಕ್ಕೆ ಬೂದಿ ಹಾಗೂ ಸುಣ್ಣವನ್ನು ಸೇರಿಸಲಾಗುತ್ತದೆ. ಸುಮಾರು ಆರು ತಾಸುಗಳ ವರೆಗೆ ಕುದಿಸುವ ಕೆಲಸವನ್ನು ಮಾಡಲಾಗುತ್ತದೆ. ನಂತರ ನಾರುಗಳನ್ನು ತೊಳೆದು, ನೀರಿನಲ್ಲೇ ಇಡಲಾಗುತ್ತದೆ. ಬಳಿಕ ಕರಕುಶಲಿಗಳು ಸಮತಟ್ಟಾದ ಮರದ ಮೇಲ್ಮೈಯ ಮೇಲೆ ಈ ನಾರಿನ ಎಳೆಗಳನ್ನು ಒಂದೊಂದಾಗಿ ಜೋಡಿಸುತ್ತಾರೆ; ಇದು ಚದುರಂಗದ ಮಣೆಯ ನಮೂನೆಯನ್ನು ಹೋಲುತ್ತದೆ. ಇಷ್ಟೆಲ್ಲಾ ಮಾಡಿದ ಬಳಿಕ, ಒಂದು ಕಲ್ಲಿನ ಸುತ್ತಿಗೆಯನ್ನು ತೆಗೆದುಕೊಂಡು, ಈ ನಾರುಗಳು ಪರಸ್ಪರ ಹೆಣೆದುಕೊಂಡು ಒಂದು ಕಾಗದದ ಹಾಳೆಯ ರೂಪಕ್ಕೆ ಬರುವ ತನಕ ಅವುಗಳ ಮೇಲೆ ಕ್ರಮಬದ್ಧ ರೀತಿಯಲ್ಲಿ ಕುಟ್ಟಲಾಗುತ್ತದೆ. ಕೊನೆಗೆ, ತುದಿಗಳ ಆಕಾರವನ್ನು ಪಡೆಯಲಿಕ್ಕಾಗಿ, ಕಾಗದದ ಅಂಚುಗಳನ್ನು ಒಳಮುಖವಾಗಿ ಮಡಚಲಾಗುತ್ತದೆ ಮತ್ತು ಒಣಗಲಿಕ್ಕಾಗಿ ಈ ಕಾಗದವನ್ನು ಬಿಸಿಲಿನಲ್ಲಿ ಇಡಲಾಗುತ್ತದೆ.

ಬೇರೆ ಬೇರೆ ಬಣ್ಣದ ಆಮಾಟೀ ಕಾಗದಗಳಿವೆ. ಕಂದುಬಣ್ಣವು ಮುಖ್ಯವಾದ ಬಣ್ಣವಾಗಿದೆಯಾದರೂ, ಬಿಳಿ ಅಥವಾ ದಂತಬಣ್ಣದಲ್ಲಿ, ಚುಕ್ಕೆಗಳ ವಿನ್ಯಾಸವುಳ್ಳ ಕಂದು ಅಥವಾ ಬಿಳಿಬಣ್ಣದಲ್ಲಿ, ಮತ್ತು ಹಳದಿ, ನೀಲಿ, ಗುಲಾಬಿ, ಹಾಗೂ ಹಸಿರು ಬಣ್ಣಗಳಲ್ಲೂ ಇದನ್ನು ತಯಾರಿಸಲಾಗುತ್ತದೆ.

ಇದರ ಆಧುನಿಕ ಉಪಯೋಗ

ಆಮಾಟೀಯಿಂದ ಸುಂದರವಾದ ಮೆಕ್ಸಿಕನ್‌ ಕರಕುಶಲ ಸಾಮಗ್ರಿಗಳನ್ನು ತಯಾರಿಸಲಾಗುತ್ತದೆ. ಈ ಕಾಗದದ ಮೇಲೆ ಮಾಡಲ್ಪಡುವ ಕೆಲವು ಪೈಂಟಿಂಗ್‌ಗಳಿಗೆ ಧಾರ್ಮಿಕ ವಿಶೇಷಾರ್ಥಗಳು ಇರುತ್ತವಾದರೂ, ಇತರ ಪೈಂಟಿಂಗ್‌ಗಳು ಬೇರೆ ಬೇರೆ ಶೈಲಿಯ ಪ್ರಾಣಿಗಳನ್ನು ಹಾಗೂ ಮೆಕ್ಸಿಕನ್‌ ಜನರ ಸಂತೋಷಭರಿತ ಜೀವನವನ್ನು ಪ್ರತಿಬಿಂಬಿಸುವಂಥ ಹಬ್ಬಗಳು ಮತ್ತು ದೃಶ್ಯಗಳನ್ನು ಪ್ರತಿನಿಧಿಸುತ್ತವೆ. ಸುಂದರವಾದ ವರ್ಣರಂಜಿತ ಚಿತ್ರಗಳ ಜೊತೆಗೆ, ಆಮಾಟೀಯನ್ನು ಉಪಯೋಗಿಸಿ ಗ್ರೀಟಿಂಗ್‌ ಕಾರ್ಡ್‌ಗಳು, ಬುಕ್‌ಮಾರ್ಕ್‌ಗಳು, ಹಾಗೂ ಇತರ ಕರಕುಶಲ ಸಾಮಗ್ರಿಗಳನ್ನು ಸಹ ತಯಾರಿಸಲಾಗುತ್ತದೆ. ಈ ರೀತಿಯ ಕಲಾವಸ್ತುಗಳು, ಸ್ವತಃ ಮೆಕ್ಸಿಕೋದ ಜನರ ಹಾಗೂ ಯಾರು ಇವುಗಳನ್ನು ಅಲಂಕಾರ ಸಾಮಗ್ರಿಗಳಾಗಿ ಖರೀದಿಸುತ್ತಾರೋ ಅಂಥ ವಿದೇಶೀಯರ ಮನಸ್ಸನ್ನು ರಂಜಿಸುತ್ತವೆ. ಈ ಕಲೆಯು ಮೆಕ್ಸಿಕೋದ ಗಡಿಗಳನ್ನೂ ದಾಟಿ ವ್ಯಾಪಕವಾಗಿ ಪ್ರಚಲಿತವಾಗಿದ್ದು, ಲೋಕದ ಅನೇಕ ಭಾಗಗಳಿಗೆ ರಫ್ತುಮಾಡಲ್ಪಡುತ್ತದೆ. ಪುರಾತನ ಹಸ್ತಪ್ರತಿಗಳ ನಕಲುಪ್ರತಿಗಳನ್ನು ಮಾಡಲಾಗಿದೆ. ಈ ಕಲೆಯನ್ನು ಪ್ರಪ್ರಥಮ ಬಾರಿಗೆ ಗಮನಿಸುವುದು ಸ್ಪ್ಯಾನಿಷ್‌ ಜನರಿಗೆ ಎಷ್ಟು ಆಸಕ್ತಿದಾಯಕವಾಗಿದ್ದಿರಬೇಕು! ವಾಸ್ತವದಲ್ಲಿ, ಈ ಮುಂಚೆ ಉಲ್ಲೇಖಿಸಲ್ಪಟ್ಟಿರುವ ಡೊಮಿನಿಕನ್‌ ಸಂನ್ಯಾಸಿ ಡ್ಯೇಗೊ ಡೂರಾನ್‌ ಹೇಳಿಕೆ ನೀಡಿದ್ದು: ಸ್ಥಳೀಯರು “ಎಲ್ಲವನ್ನೂ ಲಿಖಿತರೂಪದಲ್ಲಿ ನಮೂದಿಸಿದ್ದರು ಮತ್ತು ಪೆಯಿಂಟ್‌ಮಾಡಿದ್ದರು; ಯಾವ ವರ್ಷಗಳು, ತಿಂಗಳುಗಳು, ಹಾಗೂ ದಿನಗಳಲ್ಲಿ ಘಟನೆಗಳು ನಡೆದಿದ್ದವೋ ಅವುಗಳ ಲೆಕ್ಕಾಚಾರವನ್ನು ಪುಸ್ತಕಗಳಲ್ಲಿ ಹಾಗೂ ಉದ್ದವಾದ ಕಾಗದದ ತುಂಡುಗಳಲ್ಲಿ ಬರೆದಿಟ್ಟಿದ್ದರು. ಅವರ ಕಾನೂನುಗಳು ಹಾಗೂ ನಿರ್ದೇಶಗಳು, ಅವರ ಜನಗಣತಿ ಪಟ್ಟಿಗಳು ಇನ್ನು ಮುಂತಾದವನ್ನು ಈ ಪೈಂಟಿಂಗ್‌ಗಳಲ್ಲಿ ಕ್ರಮಬದ್ಧವಾಗಿಯೂ ಸಮರಸವಾಗಿಯೂ ನಮೂದಿಸಲಾಗಿತ್ತು.”

ಆಮಾಟೀಯನ್ನು ತಯಾರಿಸುವ ಪದ್ಧತಿ ಹಾಗೂ ಇದರೊಂದಿಗೆ ಮೆಕ್ಸಿಕನ್‌ ಪರಂಪರೆಯ ಸೊಬಗು ನಮ್ಮ ಕಾಲದ ತನಕವೂ ಉಳಿದಿರುವುದು ಎಷ್ಟು ಅದ್ಭುತಕರ ಸಂಗತಿಯಾಗಿದೆ! ಪ್ರಾಚೀನಕಾಲದ ಟ್ಲಾಕ್ವೀಲೋಸ್‌ ಅಥವಾ ವಿದ್ವಾಂಸರಂತೆಯೇ, ಆಧುನಿಕ ದಿನದ ಸರಳ ಕುಶಲಕರ್ಮಿಗಳು, ಮೆಕ್ಸಿಕೋದ ಪಪೈರಸ್‌ ಎಂದು ಸೂಕ್ತವಾಗಿಯೇ ಕರೆಯಬಹುದಾಗಿರುವ ಆಮಾಟೀಯ ವಿಸ್ಮಯತೆಯನ್ನು ನೋಡಿ ಆನಂದಿಸುತ್ತಾರೆ. (g04 3/8)

[ಪುಟ 24ರಲ್ಲಿರುವ ಚಿತ್ರ]

ನಾರುಗಳನ್ನು ಕುಟ್ಟುವುದು