ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಕಷ್ಟಾನುಭವಿಸುವಂತೆ ದೇವರು ಏಕೆ ಅನುಮತಿಸುತ್ತಾನೆ?

ನಾವು ಕಷ್ಟಾನುಭವಿಸುವಂತೆ ದೇವರು ಏಕೆ ಅನುಮತಿಸುತ್ತಾನೆ?

ಯುವ ಜನರು ಪ್ರಶ್ನಿಸುವುದು . . .

ನಾವು ಕಷ್ಟಾನುಭವಿಸುವಂತೆ ದೇವರು ಏಕೆ ಅನುಮತಿಸುತ್ತಾನೆ?

“ದೇವರು ಮೇಲಿದ್ದಾನೆ, ಅಂದರೆ ಸುಖದ ಸುಪ್ಪತ್ತಿಗೆಯಾಗಿರುವಂಥ ಸ್ವರ್ಗದಲ್ಲಿದ್ದಾನೆ. ಆದರೆ ನಾವಿಲ್ಲಿ ಕೆಳಗೆ ಕಷ್ಟಾನುಭವಿಸುತ್ತಿದ್ದೇವೆ.”​—⁠ಮೇರಿ. *

ಇಂದಿನ ಯುವಜನರು ಒಂದು ಕ್ರೂರವಾದ ಜಗತ್ತಿನಲ್ಲಿ ಜನಿಸಿರುತ್ತಾರೆ. ಸಾವಿರಾರು ಜನರ ಜೀವವನ್ನು ನಂದಿಸಿಬಿಡುವ ಭಯಂಕರ ಭೂಕಂಪಗಳು ಮತ್ತು ನೈಸರ್ಗಿಕ ವಿಪತ್ತುಗಳು ಇಂದು ಸರ್ವಸಾಮಾನ್ಯ. ಯುದ್ಧಗಳು ಮತ್ತು ಭಯೋತ್ಪಾದಕರ ಹಲ್ಲೆಗಳು ಇಂದಿನ ವಾರ್ತೆಗಳಲ್ಲಿ ಎದ್ದುಕಾಣುವ ವಿಚಾರಗಳಾಗಿವೆ. ಅನಾರೋಗ್ಯ, ಅಸ್ವಸ್ಥತೆ, ಪಾತಕ, ಮತ್ತು ಅಪಘಾತಗಳು ನಮ್ಮ ಪ್ರಿಯ ಜನರನ್ನು ನಮ್ಮಿಂದ ಕಸಿದುಕೊಳ್ಳುತ್ತವೆ. ಮೇಲೆ ತಿಳಿಸಲಾದ ಮೇರಿ ಎಂಬವಳು ವೈಯಕ್ತಿಕವಾಗಿ ಇದರಿಂದ ಬಾಧಿತಳಾದಳು. ಅವಳ ಆ ದುಃಖಕರ ಮಾತುಗಳು, ಅವಳ ತಂದೆ ತೀರಿಕೊಂಡ ನಂತರ ತಿಳಿಸಿದವುಗಳಾಗಿವೆ.

ಯಾವುದೇ ದುರಂತವು ವೈಯಕ್ತಿಕವಾಗಿ ನಮ್ಮನ್ನು ಬಾಧಿಸುವಾಗ, ಹತಾಶೆ, ನಷ್ಟ, ಅಥವಾ ಕೆರಳಿದ ಭಾವನೆಯುಳ್ಳವರಾಗುವುದು ಸಹಜ. ‘ಹೀಗೇಕೆ ಸಂಭವಿಸಿತು?’ ಎಂದು ನಿಮಗನಿಸಬಹುದು. ‘ಇದು ನನಗೇ ಏಕೆ ಸಂಭವಿಸಿತು?’ ಅಥವಾ ‘ಇದು ಈಗ ಏಕೆ ಸಂಭವಿಸಿತು?’ ಈ ಎಲ್ಲಾ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳ ಅಗತ್ಯವಿದೆ. ಆದರೆ ಸರಿಯಾದ ಉತ್ತರವನ್ನು ಪಡೆಯಲು, ನಾವು ಸರಿಯಾದ ಮೂಲಕ್ಕೆ ಹೋಗಬೇಕು. ಒಪ್ಪತಕ್ಕ ವಿಷಯವೇನೆಂದರೆ, ಟೆರ್ರೆಲ್‌ ಎಂಬ ಒಬ್ಬ ಯೌವನಸ್ಥನು ಹೇಳಿದಂತೆ ಕೆಲವೊಮ್ಮೆ ಜನರು “ಎಷ್ಟು ಘಾಸಿಗೊಂಡಿದ್ದಾರೆಂದರೆ ವಿಷಯವನ್ನು ಜಾಗರೂಕತೆಯಿಂದ ಪರಿಗಣಿಸಲು ಅವರಿಂದಾಗದು.” ಆದುದರಿಂದ ಮೊದಲಾಗಿ ನೀವು ಸ್ವಲ್ಪಮಟ್ಟಿಗಾದರೂ ನಿಮ್ಮ ಭಾವನೆಗಳನ್ನು ಶಾಂತಗೊಳಿಸುವ ವಿಧವನ್ನು ಕಂಡುಹಿಡಿಯುವುದು ಅಗತ್ಯ. ಹಾಗೆ ಮಾಡುವುದಾದರೆ ನೀವು ತರ್ಕಬದ್ಧವಾಗಿಯೂ ವಿವೇಚನೆಯಿಂದಲೂ ಆಲೋಚಿಸಲು ಸಾಧ್ಯವಾಗುವುದು.

ಅಹಿತಕರ ನಿಜತ್ವಗಳನ್ನು ಎದುರಿಸುವುದು

ಇದು ಪರಿಗಣಿಸಲು ಅಹಿತಕರ ವಿಷಯವಾಗಿರಬಹುದು, ಆದರೆ ಮರಣ ಮತ್ತು ಕಷ್ಟಾನುಭವವೆಂಬುದು ಜೀವನದ ವಾಸ್ತವಾಂಶಗಳಾಗಿವೆ. ಯೋಬನು ವಿಹಿತವಾಗಿಯೇ ಹೀಗೆ ಹೇಳಿದನು: “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು.”​—⁠ಯೋಬ 14:⁠1.

“ನೀತಿಯು ವಾಸವಾಗಿರುವ” ಒಂದು ಹೊಸ ಲೋಕದ ಕುರಿತಾಗಿ ಬೈಬಲ್‌ ವಾಗ್ದಾನಿಸುತ್ತದೆ. (2 ಪೇತ್ರ 3:13; ಪ್ರಕಟನೆ 21:​3, 4) ಹಾಗಿದ್ದರೂ, ಆ ಉತ್ತಮವಾದ ಪರಿಸ್ಥಿತಿಗಳು ಬರುವ ಮುನ್ನ, ಮಾನವಕುಲವು ಹಿಂದೆಂದೂ ಕಂಡಿರದ ದುಷ್ಟತನದ ಸಮಯವನ್ನು ಎದುರಿಸಲೇಬೇಕು. “ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ” ಎಂದು ಬೈಬಲ್‌ ಹೇಳುತ್ತದೆ.​—⁠2 ತಿಮೊಥೆಯ 3:⁠1.

ಈ ಕಷ್ಟಕರ ಕಾಲಗಳು ಎಷ್ಟು ಸಮಯದ ವರೆಗೆ ಇರುವವು? ಯೇಸುವಿನ ಶಿಷ್ಯರು ಹೆಚ್ಚುಕಡಿಮೆ ಈ ರೀತಿಯ ಪ್ರಶ್ನೆಯನ್ನೇ ಕೇಳಿದರು. ಆದರೆ ಯೇಸು ಅವರಿಗೆ, ಈ ಸಂಕಟಮಯ ವಿಷಯಗಳ ವ್ಯವಸ್ಥೆಯು ಯಾವಾಗ ಅಂತ್ಯಗೊಳ್ಳುವುದೆಂಬ ನಿರ್ದಿಷ್ಟ ದಿನ ಅಥವಾ ಗಳಿಗೆಯನ್ನು ತಿಳಿಸಲಿಲ್ಲ. ಬದಲಾಗಿ ಯೇಸು ಹೇಳಿದ್ದು: “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.” (ಮತ್ತಾಯ 24:​3, 13) ದೀರ್ಘಕಾಲಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವಂತೆ ಯೇಸುವಿನ ಮಾತುಗಳು ನಮ್ಮನ್ನು ಉತ್ತೇಜಿಸುತ್ತವೆ. ಅಂತ್ಯವು ಬರುವ ಮುಂಚೆ ಅನೇಕ ಅಹಿತಕರ ಪರಿಸ್ಥಿತಿಗಳನ್ನು ತಾಳಿಕೊಳ್ಳಲು ನಾವು ಸನ್ನದ್ಧರಾಗಿರಲೇಬೇಕು.

ದೇವರನ್ನು ದೂರಬೇಕೋ?

ಹಾಗಿರುವಲ್ಲಿ, ದೇವರು ಕಷ್ಟಾನುಭವಗಳನ್ನು ಅನುಮತಿಸುತ್ತಾನೆಂದು ಆತನ ಮೇಲೆ ಕ್ರೋಧಿತರಾಗುವುದು ನ್ಯಾಯಸಮ್ಮತವೋ? ಇಲ್ಲ. ಎಲ್ಲಾ ಕಷ್ಟಾನುಭವಗಳನ್ನು ಅಂತ್ಯಗೊಳಿಸುತ್ತೇನೆಂದು ದೇವರು ವಾಗ್ದಾನಿಸಿರುವ ವಿಷಯವನ್ನು ಪರಿಗಣಿಸುವಾಗ ಅದು ನ್ಯಾಯಸಮ್ಮತವಲ್ಲ. ಅಷ್ಟುಮಾತ್ರವಲ್ಲದೆ, ದೇವರು ಕೆಟ್ಟ ವಿಷಯಗಳನ್ನು ಸಂಭವಿಸುವಂತೆ ಮಾಡುತ್ತಾನೆಂದು ಭಾವಿಸುವುದೂ ಸಮಂಜಸವಲ್ಲ. ಅನೇಕ ದುರಂತಗಳು ಆಕಸ್ಮಿಕವಾಗಿ ಸಂಭವಿಸುವ ಘಟನೆಗಳ ಫಲಿತಾಂಶಗಳಾಗಿರುತ್ತವೆ. ಉದಾಹರಣೆಗೆ, ಜೋರಾಗಿ ಬೀಸಿದ ಗಾಳಿಯಿಂದ ಒಂದು ಮರವು ಮುರಿದುಬಿದ್ದು ಯಾರಿಗಾದರೂ ಹಾನಿಯಾಗಬಹುದು. ಜನರು ಒಂದುವೇಳೆ ಇದನ್ನು ದೈವೇಚ್ಛೆ ಎಂದು ಕರೆಯಬಹುದು. ಆದರೆ ಆ ಮರ ಬೀಳುವಂತೆ ದೇವರು ಮಾಡಲಿಲ್ಲ. ಅಂಥ ವಿಷಯಗಳು ಕೇವಲ ‘ಕಾಲ ಮತ್ತು ಪ್ರಾಪ್ತಿಯ’ ದುಃಖಕರ ಪರಿಣಾಮವೆಂದು ಗ್ರಹಿಸುವಂತೆ ಬೈಬಲ್‌ ನಮಗೆ ಸಹಾಯಮಾಡುತ್ತದೆ.​—⁠ಪ್ರಸಂಗಿ 9:​11.

ಕಷ್ಟಾನುಭವಗಳು ಅವಿವೇಕ ತೀರ್ಮಾನಗಳಿಂದಾಗಿಯೂ ಉಂಟಾಗಬಹುದು. ಒಂದುವೇಳೆ, ಯೌವನಸ್ಥರ ಒಂದು ಗುಂಪು ಮದ್ಯಪಾನೀಯಗಳನ್ನು ಕುಡಿದು ಅಮಲೇರಿದವರಾಗಿ ವಾಹನವನ್ನು ಚಲಾಯಿಸುವುದಾದರೆ, ಒಂದು ಘೋರ ಅಪಘಾತವು ಸಂಭವಿಸಬಹುದು. ಇದಕ್ಕಾಗಿ ಯಾರನ್ನು ದೂರಬೇಕು? ದೇವರನ್ನೋ? ಇಲ್ಲ, ಅವರ ಅವಿವೇಕ ತೀರ್ಮಾನದ ಪರಿಣಾಮಗಳನ್ನು ಅವರು ಕೊಯ್ದರು.​—⁠ಗಲಾತ್ಯ 6:⁠7.

‘ಆದರೆ ಈಗಲೇ ಕಷ್ಟಾನುಭವಗಳನ್ನು ಕೊನೆಗೊಳಿಸಲು ದೇವರು ಶಕ್ತನಲ್ಲವೇ?’ ಎಂದು ನೀವು ಕೇಳಬಹುದು. ಇದರ ಕುರಿತು ಬೈಬಲ್‌ ಸಮಯಗಳಲ್ಲಿನ ಕೆಲವು ನಂಬಿಗಸ್ತ ಪುರುಷರು ಸಹ ಚಿಂತಿಸಿದರು. ಪ್ರವಾದಿಯಾದ ಹಬಕ್ಕೂಕನು ದೇವರನ್ನು ಹೀಗೆ ಕೇಳಿದನು: “ಏಕೆ ಕೆಡುಕರನ್ನು ಕಟಾಕ್ಷಿಸುತ್ತೀ? ದುಷ್ಟನು ತನಗಿಂತ ಯೋಗ್ಯನನ್ನು ನುಂಗಿಬಿಡುವಾಗ ಏಕೆ ಸುಮ್ಮನಿದ್ದೀ?” ಆದರೆ ಹಬಕ್ಕೂಕನು ಆತುರದ ತೀರ್ಮಾನಕ್ಕೆ ಬರಲಿಲ್ಲ. ಅವನು ಹೇಳಿದ್ದು: “ಯೆಹೋವನು ನನಗೆ ಏನು ಹೇಳುವನೋ, . . . ಎದುರುನೋಡುವೆನು.” ನಂತರ, ಒಂದು “ಕ್ಲುಪ್ತಕಾಲದಲ್ಲಿ” ತಾನು ಕಷ್ಟಾನುಭವಗಳನ್ನು ಕೊನೆಗೊಳಿಸುವೆನೆಂದು ದೇವರು ಅವನಿಗೆ ಆಶ್ವಾಸನೆ ನೀಡಿದನು. (ಹಬಕ್ಕೂಕ 1:13; 2:​1-3) ಆದುದರಿಂದ ನಾವು ತಾಳ್ಮೆಯಿಂದಿದ್ದು, ಯೆಹೋವನು ತನ್ನ ಕ್ಲುಪ್ತಕಾಲದಲ್ಲಿ ದುಷ್ಟತ್ವಕ್ಕೆ ಅಂತ್ಯವನ್ನು ತರುವ ತನಕ ಕಾಯಬೇಕು.

ನಾವು ಕಷ್ಟಾನುಭವಿಸಬೇಕೆಂದು ದೇವರು ಬಯಸುತ್ತಾನೆ ಅಥವಾ ಆತನೇ ವೈಯಕ್ತಿಕವಾಗಿ ನಮ್ಮನ್ನು ಪರೀಕ್ಷಿಸುತ್ತಿದ್ದಾನೆ ಎಂದು ಆತುರದಿಂದ ತೀರ್ಮಾನಿಸುವುದರಿಂದ ದೂರವಿರಿ. ನಮ್ಮಲ್ಲಿರುವ ಉತ್ತಮ ಗುಣಗಳು ಎದ್ದುಕಾಣುವಂತೆ ಕಷ್ಟಾನುಭವಗಳು ಮಾಡಬಲ್ಲವು ಎಂಬುದು ನಿಜ ಮತ್ತು ಬೈಬಲು ಹೇಳುವಂತೆ, ದೇವರು ಅನುಮತಿಸುವ ಕಷ್ಟಗಳಿಂದಾಗಿ ನಮ್ಮ ನಂಬಿಕೆಯು ಶೋಧಿತವಾಗುತ್ತದೆ. (ಇಬ್ರಿಯ 5:8; 1 ಪೇತ್ರ 1:7) ವಾಸ್ತವದಲ್ಲಿ, ಕಷ್ಟಕರ ಅಥವಾ ದುಃಖಕರ ಅನುಭವಗಳಿಂದಾಗಿ ಅನೇಕರು ಹೆಚ್ಚು ತಾಳ್ಮೆ ಅಥವಾ ಕನಿಕರವುಳ್ಳವರಾಗುತ್ತಾರೆ. ಆದರೆ, ಅವರ ಕಷ್ಟಾನುಭವಗಳು ದೇವರಿಂದ ಬಂದವುಗಳಾಗಿವೆ ಎಂದು ನಾವು ತೀರ್ಮಾನಿಸಬಾರದು. ಅಂಥ ಆಲೋಚನೆಯು, ದೇವರ ಪ್ರೀತಿ ಮತ್ತು ವಿವೇಕವನ್ನು ಪರಿಗಣನೆಗೆ ತೆಗೆದುಕೊಳ್ಳುವಂಥದ್ದಾಗಿರುವುದಿಲ್ಲ. ಬೈಬಲ್‌ ಸ್ಪಷ್ಟವಾಗಿ ಹೇಳುವುದು: “ಯಾವನಾದರೂ ಪಾಪಮಾಡುವದಕ್ಕೆ ಪ್ರೇರೇಪಿಸಲ್ಪಡುವಾಗ [“ಕಷ್ಟಗಳನ್ನು ಎದುರಿಸುವಾಗ,” NW]​—⁠ಈ ಪ್ರೇರಣೆಯು [“ಕಷ್ಟವು,” NW] ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ [“ಕಷ್ಟಕ್ಕೆ ಒಳಪಡಿಸುವುದಿಲ್ಲ,” NW].” ಇದಕ್ಕೆ ವ್ಯತಿರಿಕ್ತವಾಗಿ, ದೇವರಿಂದ “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ” ಬರುತ್ತವೆ. (ಓರೆ ಅಕ್ಷರಗಳು ನಮ್ಮವು.)​—⁠ಯಾಕೋಬ 1:​13, 17.

ದೇವರು ಕೆಟ್ಟದ್ದನ್ನು ಅನುಮತಿಸಲು ಕಾರಣ

ಹಾಗಾದರೆ ಕೆಟ್ಟದ್ದರ ಮೂಲ ಯಾವುದು? ನೆನಪಿನಲ್ಲಿಡಿರಿ, ದೇವರಿಗೆ ವಿರೋಧಿಗಳಿದ್ದಾರೆ​—⁠ಮುಖ್ಯವಾಗಿ, ‘ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ’ ವೈರಿಯಿದ್ದಾನೆ. (ಪ್ರಕಟನೆ 12:⁠9) ನಮ್ಮ ಪ್ರಥಮ ಹೆತ್ತವರಾದ ಆದಾಮಹವ್ವರನ್ನು ದೇವರು ಒಂದು ಸಮಸ್ಯೆರಹಿತ ಲೋಕದಲ್ಲಿಟ್ಟನು. ಆದರೆ, ದೇವರ ಆಳ್ವಿಕೆಯಿಲ್ಲದೆ ಸಂತೋಷವಾಗಿ ಇರಸಾಧ್ಯವಿದೆ ಎಂದು ಹವ್ವಳು ನಂಬುವಂತೆ ಸೈತಾನನು ಮಾಡಿದನು. (ಆದಿಕಾಂಡ 3:​1-5) ದುಃಖಕರವಾಗಿ, ಹವ್ವಳು ಸೈತಾನನ ಸುಳ್ಳುಗಳನ್ನು ನಂಬಿ ದೇವರಿಗೆ ಅವಿಧೇಯಳಾದಳು. ಆದಾಮನೂ ಈ ದಂಗೆಯಲ್ಲಿ ಅವಳನ್ನು ಜೊತೆಗೂಡಿದನು. ಫಲಿತಾಂಶ? ‘ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು’ ಎಂದು ಬೈಬಲ್‌ ಹೇಳುತ್ತದೆ.​—⁠ರೋಮಾಪುರ 5:12.

ಸೈತಾನನನ್ನೂ ಅವನ ಹಿಂಬಾಲಕರನ್ನೂ ಕೂಡಲೇ ನಾಶಮಾಡಿ ಈ ದಂಗೆಯನ್ನು ಕೊನೆಗೊಳಿಸುವ ಬದಲಿಗೆ, ಸಮಯವನ್ನು ಅನುಮತಿಸುವುದು ಸೂಕ್ತವೆಂದು ದೇವರು ಭಾವಿಸಿದನು. ಅದು ಏನನ್ನು ಸಾಧಿಸಲಿಕ್ಕಿತ್ತು? ಮೊದಲಾಗಿ ಅದು, ಸೈತಾನನ್ನು ಸುಳ್ಳುಗಾರನೆಂದು ರುಜುಪಡಿಸಲು ಅವಕಾಶವನ್ನು ಒದಗಿಸಲಿಕ್ಕಿತ್ತು! ದೇವರಿಂದ ಸ್ವಾತಂತ್ರ್ಯವು ಕೇವಲ ನಾಶನವನ್ನಲ್ಲದೆ ಇನ್ನೇನನ್ನೂ ಸಾಧಿಸಲಾರದು ಎಂಬುದಕ್ಕೆ ಬೇಕಾಗಿರುವ ಸಾಕ್ಷ್ಯವನ್ನು ಸಹ ಅದು ಒದಗಿಸಲಿಕ್ಕಿತ್ತು. ನಿಜವಾಗಿಯೂ ಇದೇ ತಾನೆ ಸಂಭವಿಸಿರುವುದು? “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ಅಷ್ಟುಮಾತ್ರವಲ್ಲದೆ, “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನು” ಉಂಟುಮಾಡಿದ್ದಾನೆ. (ಪ್ರಸಂಗಿ 8:⁠9) ಮಾನವಕುಲದ ಧರ್ಮಗಳು ಗಲಿಬಿಲಿಗೊಳಿಸುವ ಬೋಧನೆಗಳಿಂದ ತುಂಬಿವೆ. ನೈತಿಕತೆಯು ಹಿಂದೆಂದಿಗಿಂತಲೂ ತೀರಾ ಕೆಳಮಟ್ಟಕ್ಕೆ ಇಳಿದಿದೆ. ಮಾನವ ಸರಕಾರಗಳು ಪ್ರತಿಯೊಂದು ವಿಧದ ಆಳ್ವಿಕೆಯನ್ನು ಪ್ರಯತ್ನಿಸಿ ನೋಡಿವೆ. ಅವು, ಒಪ್ಪಂದಗಳಿಗೆ ಸಹಿಹಾಕುತ್ತವೆ ಮತ್ತು ಅನೇಕ ಕಾನೂನುಗಳನ್ನು ಜಾರಿಗೆ ತರುತ್ತವೆ, ಆದರೆ ಸಾಮಾನ್ಯ ಜನರ ಆವಶ್ಯಕತೆಗಳು ಇನ್ನೂ ಪೂರೈಸಲ್ಪಡದೇ ಉಳಿದಿವೆ. ಯುದ್ಧವು ದಾರಿದ್ರ್ಯವನ್ನು ಇನ್ನಷ್ಟು ಹೆಚ್ಚು ತೀವ್ರಗೊಳಿಸುತ್ತದೆ.

ದೇವರೇ ಮಧ್ಯೆ ಪ್ರವೇಶಿಸಿ ದುಷ್ಟತನವನ್ನು ಕೊನೆಗೊಳಿಸುವುದು ಅತ್ಯಗತ್ಯ ಎಂಬುದು ಸ್ಪಷ್ಟ. ಆದರೆ ಇದು ದೇವರ ಕ್ಲುಪ್ತಕಾಲದಲ್ಲಿ ಮಾತ್ರವೇ ಆಗುವುದು. ಅಷ್ಟರ ತನಕ, ಬೈಬಲಿನಲ್ಲಿ ಕಂಡುಬರುವ ದೇವರ ನಿಯಮಗಳಿಗೆ ಮತ್ತು ಮೂಲತತ್ತ್ವಗಳಿಗೆ ವಿಧೇಯರಾಗುವ ಮೂಲಕ ಆತನ ಆಳ್ವಿಕೆಯನ್ನು ಬೆಂಬಲಿಸುವ ಸುಯೋಗವು ನಮ್ಮದ್ದಾಗಿದೆ. ಕೆಟ್ಟ ಸಂಗತಿಗಳು ಸಂಭವಿಸುವಾಗ, ಸಮಸ್ಯೆರಹಿತ ಲೋಕದಲ್ಲಿನ ಜೀವನದ ದೃಢ ನಿರೀಕ್ಷೆಯಿಂದ ನಾವು ಸಾಂತ್ವನವನ್ನು ಕಂಡುಕೊಳ್ಳಸಾಧ್ಯವಿದೆ.

ಒಂಟಿಗರಲ್ಲ

ಹಾಗಿದ್ದರೂ, ಕಷ್ಟವು ನಮ್ಮನ್ನು ವೈಯಕ್ತಿಕವಾಗಿ ಬಾಧಿಸುವಾಗ ನಾವು ಹೀಗೆ ಕೇಳಿಕೊಳ್ಳುತ್ತೇವೆ: ‘ಇದು ನನಗೇ ಏಕೆ ಸಂಭವಿಸಿತು?’ ಆದರೆ ಕಷ್ಟಾನುಭವಿಸುವುದು ನಾವು ಒಬ್ಬರೇ ಅಲ್ಲ ಎಂದು ಅಪೊಸ್ತಲ ಪೌಲನು ನಮಗೆ ಜ್ಞಾಪಕಹುಟ್ಟಿಸುತ್ತಾನೆ. ಅವನು ಹೇಳುವುದು, “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆ.” (ಓರೆ ಅಕ್ಷರಗಳು ನಮ್ಮವು.) (ರೋಮಾಪುರ 8:​22) ಈ ವಾಸ್ತವಾಂಶವನ್ನು ತಿಳಿದಿರುವುದು, ಕಷ್ಟವನ್ನು ನಿಭಾಯಿಸಲು ನಿಮಗೆ ಸಹಾಯವನ್ನು ನೀಡಬಲ್ಲದು. ಉದಾಹರಣೆಗೆ, ನ್ಯೂ ಯಾರ್ಕ್‌ ನಗರ ಮತ್ತು ವಾಷಿಂಗ್‌ಟನ್‌ ಡಿ.ಸಿ.ಯಲ್ಲಿ 2001ರ ಸೆಪ್ಟೆಂಬರ್‌ 11ರಂದು ಸಂಭವಿಸಿದ ಭಯೋತ್ಪಾದಕರ ದಾಳಿಗಳಿಂದಾಗಿ, ನೀಕೊಲ್‌ ಭಾವನಾತ್ಮಕವಾಗಿ ಬಹಳ ಬಾಧಿಸಲ್ಪಟ್ಟಳು. “ನಾನು ಕಂಗೆಟ್ಟು, ಹೆದರಿಹೋದೆ,” ಎಂದು ಅವಳು ಒಪ್ಪಿಕೊಳ್ಳುತ್ತಾಳೆ. ಆದರೆ, ತನ್ನ ಜೊತೆ ಕ್ರೈಸ್ತರು ಈ ದುರಂತವನ್ನು ಹೇಗೆ ನಿಭಾಯಿಸಿದರು ಎಂಬ ವೃತ್ತಾಂತವನ್ನು ಓದಿದಾಗ ಅವಳ ದೃಷ್ಟಿಕೋನವು ಬದಲಾಯಿತು. * ಅವಳು ಹೇಳುವುದು: “ನಾನು ಒಬ್ಬಂಟಿಗಳಲ್ಲ ಎಂಬುದನ್ನು ಗ್ರಹಿಸಿದೆ. ನಿಧಾನವಾಗಿ ನಾನು ನನ್ನ ನೋವು ಮತ್ತು ದುಃಖದಿಂದ ಹೊರಬರಲಾರಂಭಿಸಿದೆ.”

ಕೆಲವು ಸಂದರ್ಭಗಳಲ್ಲಿ, ನೀವು ಮುಕ್ತವಾಗಿ ಮಾತಾಡಬಲ್ಲ ಯಾರಾದರೊಬ್ಬರನ್ನು​—⁠ಹೆತ್ತವರಲ್ಲೊಬ್ಬರು, ಒಬ್ಬ ಪ್ರೌಢ ಮಿತ್ರ, ಅಥವಾ ಒಬ್ಬ ಕ್ರೈಸ್ತ ಹಿರಿಯರನ್ನು​—⁠ಹುಡುಕುವುದು ವಿವೇಕಯುತವಾಗಿದೆ. ನೀವು ಭರವಸೆಯಿಡುವ ಒಬ್ಬರಲ್ಲಿ ನಿಮ್ಮ ಭಾವನೆಗಳನ್ನು ತೋಡಿಕೊಳ್ಳುವ ಮೂಲಕ ಉತ್ತೇಜನದಾಯಕವಾದ ‘ಕನಿಕರದ ಮಾತನ್ನು’ ನೀವು ಹೊಂದಬಲ್ಲಿರಿ. (ಜ್ಞಾನೋಕ್ತಿ 12:25) ಬ್ರಸಿಲಿನ ಒಬ್ಬ ಯುವ ಕ್ರೈಸ್ತನು ಮರುಜ್ಞಾಪಿಸಿಕೊಳ್ಳುವುದು: “ಒಂಬತ್ತು ವರುಷಗಳ ಹಿಂದೆ ನಾನು ನನ್ನ ತಂದೆಯನ್ನು ಕಳೆದುಕೊಂಡೆ, ಮತ್ತು ಒಂದು ದಿನ ಯೆಹೋವನು ಅವರನ್ನು ಪುನರುತ್ಥಾನಗೊಳಿಸುವನು ಎಂಬುದು ನನಗೆ ತಿಳಿದಿದೆ. ಆದರೆ ನನ್ನ ಭಾವನೆಗಳನ್ನು ಪುಸ್ತಕದಲ್ಲಿ ಬರೆಯುವ ಮೂಲಕ ನನಗೆ ಬಹಳ ಸಹಾಯದೊರಕಿತು. ಮಾತ್ರವಲ್ಲದೆ, ನನ್ನ ಕ್ರೈಸ್ತ ಸ್ನೇಹಿತರೊಂದಿಗೆ ನಾನು ನನ್ನ ಭಾವನೆಗಳನ್ನು ತೋಡಿಕೊಂಡೆ.” ನಿಮ್ಮ ಭಾವನೆಗಳನ್ನು ತೋಡಿಕೊಳ್ಳಸಾಧ್ಯವಿರುವ ‘ನಿಜ ಮಿತ್ರರು’ ನಿಮಗೆ ಇದ್ದಾರೋ? (ಜ್ಞಾನೋಕ್ತಿ 17:17) ಇರುವುದಾದರೆ, ಅವರ ಪ್ರೀತಿಪರ ಸಹಾಯದ ಪ್ರಯೋಜನವನ್ನು ಪಡೆದುಕೊಳ್ಳಿರಿ! ಅಳಲು ಅಥವಾ ನಿಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಹೆದರಬೇಡಿ. ಒಮ್ಮೆ ಯೇಸು ಸಹ ತನ್ನ ಸ್ನೇಹಿತನೊಬ್ಬನನ್ನು ಮರಣದಲ್ಲಿ ಕಳೆದುಕೊಂಡದ್ದಕ್ಕಾಗಿ “ಕಣ್ಣೀರು ಬಿಟ್ಟನು.”​—⁠ಯೋಹಾನ 11:35.

ಭವಿಷ್ಯತ್ತಿನಲ್ಲಿ ಒಂದು ದಿನ ನಾವೆಲ್ಲರೂ “ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ” ಆನಂದಿಸುವೆವು ಎಂದು ಬೈಬಲ್‌ ನಮಗೆ ಆಶ್ವಾಸನೆ ನೀಡುತ್ತದೆ. (ರೋಮಾಪುರ 8:21) ಅಷ್ಟರ ವರೆಗೆ ಅನೇಕ ಒಳ್ಳೇ ಜನರು ಒಂದುವೇಳೆ ಕಷ್ಟಾನುಭವಿಸಬಹುದು. ಆದರೆ ಅಂಥ ಕಷ್ಟಾನುಭವಗಳು ಏಕೆ ಸಂಭವಿಸುತ್ತಿವೆ ಮತ್ತು ಅದು ಬಹಳ ಕಾಲದ ವರೆಗೆ ಮುಂದುವರಿಯುವುದಿಲ್ಲ ಎಂಬುದನ್ನು ತಿಳಿದು ಸಾಂತ್ವನವನ್ನು ಪಡೆದುಕೊಳ್ಳಿರಿ. (g04 3/22)

[ಪಾದಟಿಪ್ಪಣಿಗಳು]

^ ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

^ “ವಿಪತ್ತಿನ ಎದುರಿನಲ್ಲಿ ಧೈರ್ಯ” ಎಂಬ 2002, ಜನವರಿ 8ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಲೇಖನಮಾಲೆಯನ್ನು ನೋಡಿರಿ.

[ಪುಟ 16ರಲ್ಲಿರುವ ಚಿತ್ರ]

ನಿಮ್ಮ ದುಃಖವನ್ನು ಹೇಳಿಕೊಳ್ಳುವುದು ಸಹಾಯಕಾರಿಯಾಗಿರಬಹುದು