ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲ್ಯಾಕ್ಟೋಸ್‌ ಅಸಹಿಷ್ಣುತೆ ಏನೆಂಬುದನ್ನು ಅರ್ಥಮಾಡಿಕೊಳ್ಳುವುದು

ಲ್ಯಾಕ್ಟೋಸ್‌ ಅಸಹಿಷ್ಣುತೆ ಏನೆಂಬುದನ್ನು ಅರ್ಥಮಾಡಿಕೊಳ್ಳುವುದು

ಲ್ಯಾಕ್ಟೋಸ್‌ ಅಸಹಿಷ್ಣುತೆ ಏನೆಂಬುದನ್ನು ಅರ್ಥಮಾಡಿಕೊಳ್ಳುವುದು

ನಿಮ್ಮ ಅಚ್ಚುಮೆಚ್ಚಿನ ಐಸ್‌ ಕ್ರೀಮನ್ನು ಅಥವಾ ಚೀಸನ್ನು ಸವಿದು ಸುಮಾರು ಒಂದು ತಾಸು ಕಳೆದಿದೆಯಷ್ಟೆ. ನಿಮ್ಮ ಹೊಟ್ಟೆ ಉಬ್ಬಿದಂತೆ, ಮತ್ತು ಅದರಲ್ಲಿ ಗ್ಯಾಸ್‌ ತುಂಬಿದಂತಾಗಿ ನಿಮಗೆ ಸಂಕಟವಾಗುತ್ತದೆ. ಇತ್ತೀಚಿಗೆ ನೀವು ಯಾವಾಗಲೂ ನಿಮ್ಮ ಬಳಿ ಸಿದ್ಧವಾಗಿಟ್ಟುಕೊಂಡಿರುವಂಥ ಒಂದು ಔಷಧದ ಸಹಾಯದಿಂದ ಪುನಃ ಒಮ್ಮೆ ನೋವಿನಿಂದ ಉಪಶಮನವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತೀರಿ. ಈಗ ನಿಮ್ಮಷ್ಟಕ್ಕೇ ನೀವು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತೀರಿ: ‘ನನ್ನ ಹೊಟ್ಟೆ ಏಕೆ ಇಷ್ಟು ಸುಲಭವಾಗಿ ಕೆರಳುತ್ತದೆ?’

ಹಾಲನ್ನು ಕುಡಿದ ಬಳಿಕ ಅಥವಾ ಹೈನು ಪದಾರ್ಥಗಳನ್ನು ಸೇವಿಸಿದ ಬಳಿಕ ನೀವು ಓಕರಿಕೆ, ಸೆಡೆತ, ಹೊಟ್ಟೆ ಊದಿಕೊಳ್ಳುವಿಕೆ, ಗ್ಯಾಸ್‌, ಅಥವಾ ಅತಿಬೇಧಿಯಿಂದ ನರಳುವಲ್ಲಿ, ನೀವು ಲ್ಯಾಕ್ಟೋಸ್‌ ಅಸಹಿಷ್ಣುತೆಯುಳ್ಳವರು ಆಗಿರಬಹುದು. ಲ್ಯಾಕ್ಟೋಸ್‌ ಅಸಹಿಷ್ಣುತೆಯು ಹೈನು ಪದಾರ್ಥಗಳ ಕಡೆಗಿನ ಸರ್ವಸಾಮಾನ್ಯ ಪ್ರತಿಕ್ರಿಯೆಯಾಗಿದೆ. ಮಧುಮೇಹ ಮತ್ತು ಜೀರ್ಣಕಾರಿ ಹಾಗೂ ಮೂತ್ರಜನಕಾಂಗದ ರೋಗಗಳ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ವರದಿಸುವುದೇನೆಂದರೆ, “ಮೂರರಿಂದ ಐದು ಕೋಟಿ ಅಮೆರಿಕನ್ನರು ಲ್ಯಾಕ್ಟೋಸ್‌ ಅಸಹಿಷ್ಣುತೆಯುಳ್ಳವರಾಗಿದ್ದಾರೆ.” ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ನಿಂದ ಪ್ರಕಾಶಿಸಲ್ಪಟ್ಟ, ಸುಲಭವಾಗಿ ಕೆರಳುವ ಕರುಳು (ಇಂಗ್ಲಿಷ್‌) ಎಂಬ ಪುಸ್ತಕಕ್ಕನುಸಾರ, “ಲೋಕದ ಜನಸಂಖ್ಯೆಯ 70ರಷ್ಟು ಪ್ರತಿಶತವು ಲ್ಯಾಕ್ಟೋಸ್‌ನೊಂದಿಗೆ ಒಂದಲ್ಲ ಒಂದು ರೀತಿಯ ಸಮಸ್ಯೆಯನ್ನು ಹೊಂದಿದೆ” ಎಂದು ಅಂದಾಜುಮಾಡಲಾಗಿದೆ. ಹೀಗಿರುವಲ್ಲಿ, ಲ್ಯಾಕ್ಟೋಸ್‌ ಅಸಹಿಷ್ಣುತೆ ಎಂದರೇನು?

ಲ್ಯಾಕ್ಟೋಸ್‌ ಎಂಬುದು ಹಾಲಿನಲ್ಲಿ ಕಂಡುಬರುವ ಸಕ್ಕರೆಯಾಗಿದೆ. ಸಣ್ಣಕರುಳು ಲ್ಯಾಕ್ಟೇಸ್‌ ಎಂಬ ಕಿಣ್ವವನ್ನು ಉಂಟುಮಾಡುತ್ತದೆ. ಲ್ಯಾಕ್ಟೋಸನ್ನು ಗ್ಲೂಕೋಸ್‌ ಮತ್ತು ಗೆಲ್ಯಾಕ್ಟೋಸ್‌ ಎಂದು ಕರೆಯಲ್ಪಡುವ ಎರಡು ಸರಳ ಸಕ್ಕರೆಗಳಾಗಿ ವಿಭಜಿಸುವುದೇ ಲ್ಯಾಕ್ಟೇಸ್‌ನ ಕೆಲಸವಾಗಿದೆ. ಇದು ಗ್ಲೂಕೋಸು ರಕ್ತಪ್ರವಾಹದಲ್ಲಿ ಹೀರಿಕೊಳ್ಳಲ್ಪಡುವಂತೆ ಸಹಾಯಮಾಡುತ್ತದೆ. ಈ ಕೆಲಸವನ್ನು ಮಾಡಲಿಕ್ಕಾಗಿ ಸಾಕಷ್ಟು ಲ್ಯಾಕ್ಟೇಸ್‌ ಇಲ್ಲದಿರುವಲ್ಲಿ, ವಿಭಜಿಸಲ್ಪಟ್ಟಿರದಂಥ ಲ್ಯಾಕ್ಟೋಸ್‌ ದೊಡ್ಡಕರುಳಿಗೆ ಹೋಗುತ್ತದೆ ಮತ್ತು ಅಲ್ಲಿ ಅದು ಹುಳಿಹಿಡಿಯಲಾರಂಭಿಸುತ್ತದೆ ಹಾಗೂ ಆಮ್ಲಗಳನ್ನು ಮತ್ತು ಗ್ಯಾಸ್‌ಗಳನ್ನು ಉತ್ಪಾದಿಸುತ್ತದೆ.

ಲ್ಯಾಕ್ಟೋಸ್‌ ಅಸಹಿಷ್ಣುತೆ ಎಂದು ಕರೆಯಲ್ಪಡುವ ಈ ಸ್ಥಿತಿಯು, ಮೇಲೆ ತಿಳಿಸಲ್ಪಟ್ಟಿರುವ ಕೆಲವು ಅಥವಾ ಎಲ್ಲಾ ರೋಗಲಕ್ಷಣಗಳನ್ನು ಉತ್ಪಾದಿಸುತ್ತದೆ. ಜೀವಿತದ ಮೊದಲ ಎರಡು ವರ್ಷಗಳಲ್ಲಿ ಲ್ಯಾಕ್ಟೇಸ್‌ ಅತ್ಯಧಿಕ ಪ್ರಮಾಣಗಳಲ್ಲಿ ಉತ್ಪಾದಿಸಲ್ಪಡುತ್ತದೆ, ತದನಂತರ ಇದರ ಉತ್ಪಾದನೆಯಲ್ಲಿ ಏಕಪ್ರಕಾರವಾದ ಇಳಿತವುಂಟಾಗುತ್ತದೆ. ಆದುದರಿಂದ, ಕಾಲಕ್ರಮೇಣ ಅನೇಕರು ಈ ಸ್ಥಿತಿಯನ್ನು ತಲಪಬಹುದು ಮತ್ತು ಇದು ಅವರ ಅರಿವಿಗೆ ಬಾರದಿರಲೂಬಹುದು.

ಇದು ಒಂದು ಅಲರ್ಜಿಯೋ?

ಒಂದು ಹೈನು ಪದಾರ್ಥವನ್ನು ಸೇವಿಸಿದ ಬಳಿಕ ಅನುಭವಿಸುವ ರಾಸಾಯನಿಕ ಪ್ರತಿಕ್ರಿಯೆಗಳ ಕಾರಣದಿಂದ ತಮಗೆ ಹಾಲಿನ ಅಲರ್ಜಿಯಿದೆ ಎಂಬ ತೀರ್ಮಾನಕ್ಕೆ ಕೆಲವರು ಬರುತ್ತಾರೆ. ಹಾಗಾದರೆ ಈ ರಾಸಾಯನಿಕ ಪ್ರತಿಕ್ರಿಯೆಗಳಿಗೆ ಅಲರ್ಜಿಯು * ಕಾರಣವೋ ಅಥವಾ ಅಸಹಿಷ್ಣುತೆ ಕಾರಣವೋ? ಕೆಲವು ಅಲರ್ಜಿ ಪರಿಣತರಿಗನುಸಾರ, ನಿಜವಾದ ಆಹಾರದ ಅಲರ್ಜಿಗಳು ಸಂಭವಿಸುವುದು ತುಂಬ ಅಪರೂಪ ಮತ್ತು ಸಾಮಾನ್ಯ ಜನಸಂಖ್ಯೆಯಲ್ಲಿ 1ರಿಂದ 2 ಪ್ರತಿಶತದಷ್ಟು ಮಂದಿ ಮಾತ್ರ ಇದರಿಂದ ಬಾಧಿತರಾಗುತ್ತಾರೆ. ಮಕ್ಕಳಲ್ಲಿ ಈ ಸಂಖ್ಯೆಯು ಸ್ವಲ್ಪ ಹೆಚ್ಚಾಗಿರುವುದಾದರೂ, 8 ಪ್ರತಿಶತಕ್ಕಿಂತ ಕಡಿಮೆಯಾಗಿದೆ. ಅಲರ್ಜಿ ಹಾಗೂ ಲ್ಯಾಕ್ಟೋಸ್‌ ಅಸಹಿಷ್ಣುತೆಯ ರೋಗಲಕ್ಷಣಗಳು ಒಂದೇ ರೀತಿ ಇರಬಹುದಾದರೂ, ಭಿನ್ನತೆಗಳು ಇವೆ.

ಆಹಾರದ ಅಲರ್ಜಿಯ ರೋಗಲಕ್ಷಣಗಳು, ನೀವು ಏನನ್ನೋ ತಿನ್ನುತ್ತಿದ್ದದ್ದರ ಅಥವಾ ಕುಡಿಯುತ್ತಿದ್ದದ್ದರ ವಿರುದ್ಧ ದೇಹಕ್ಕೆ ರಕ್ಷಣೆಯನ್ನು​—⁠ಹಿಸ್ಟಮೀನ್‌​—⁠ಒದಗಿಸುವುದರಲ್ಲಿ ಸೋಂಕು ರಕ್ಷಣಾ ವ್ಯವಸ್ಥೆಯು ಕ್ರಿಯೆಗೈದದ್ದರ ಫಲಿತಾಂಶವಾಗಿವೆ. ಕೆಲವು ರೋಗಲಕ್ಷಣಗಳಲ್ಲಿ ತುಟಿಗಳು ಅಥವಾ ನಾಲಿಗೆಯು ಊದಿಕೊಳ್ಳುವುದು, ಗುಳ್ಳೆಗಳಾಗುವುದು, ಅಥವಾ ಆಸ್ತಮಾ ಉಂಟಾಗುವುದು ಸಹ ಒಳಗೂಡಿದೆ. ಲ್ಯಾಕ್ಟೋಸ್‌ ಅಸಹಿಷ್ಣುತೆಯು ಈ ರೀತಿಯ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ, ಏಕೆಂದರೆ ಇದರಲ್ಲಿ ಸೋಂಕು ರಕ್ಷಣಾ ವ್ಯವಸ್ಥೆಯು ಒಳಗೂಡಿಲ್ಲ. ಲ್ಯಾಕ್ಟೋಸ್‌ ಅಸಹಿಷ್ಣುತೆಯು, ಒಂದು ನಿರ್ದಿಷ್ಟ ಆಹಾರವನ್ನು ಸರಿಯಾಗಿ ಜೀರ್ಣಿಸುವ ವಿಷಯದಲ್ಲಿ ದೇಹಕ್ಕಿರುವ ಅಸಾಮರ್ಥ್ಯವನ್ನು ಒಳಗೂಡಿದ್ದು, ಇದರ ಫಲಿತಾಂಶವಾಗಿ ಒಂದು ರಾಸಾಯನಿಕ ಪ್ರತಿಕ್ರಿಯೆಯು ಉಂಟಾಗುತ್ತದೆ.

ಇದರಲ್ಲಿನ ವ್ಯತ್ಯಾಸವನ್ನು ಕಂಡುಕೊಳ್ಳಲು ಯಾವುದು ನಿಮಗೆ ಸಹಾಯಮಾಡಬಲ್ಲದು? ಸುಲಭವಾಗಿ ಕೆರಳುವ ಕರುಳು (ಇಂಗ್ಲಿಷ್‌) ಎಂಬ ಪುಸ್ತಕವು ಉತ್ತರಿಸುವುದು: “ನಿಜವಾದ ಅಲರ್ಜಿಗೆ ಸಂಬಂಧಿಸಿದ ರಾಸಾಯನಿಕ ಪ್ರತಿಕ್ರಿಯೆಗಳು . . . ದೇಹಕ್ಕೆ ಒಗ್ಗದ ಆಹಾರವನ್ನು ಸೇವಿಸಿದ ಕೆಲವೇ ನಿಮಿಷಗಳೊಳಗೆ ಕಂಡುಬರುತ್ತವೆ. ಸುಮಾರು ಒಂದು ತಾಸಿನ ಬಳಿಕ ಕಂಡುಬರುವ ರೋಗಲಕ್ಷಣಗಳು ಹೆಚ್ಚಾಗಿ ಅಸಹಿಷ್ಣುತೆಯನ್ನು ಸೂಚಿಸುವುದು ಸಂಭವನೀಯ.”

ಶಿಶುಗಳ ಮೇಲಿನ ಪರಿಣಾಮ

ಹಾಲನ್ನು ಕುಡಿದ ಬಳಿಕ ಒಂದು ಶಿಶುವು ಅಥವಾ ಚಿಕ್ಕ ಮಗುವು ರಾಸಾಯನಿಕ ಪ್ರತಿಕ್ರಿಯೆಯಿಂದ ಕಷ್ಟಾನುಭವಿಸುವಲ್ಲಿ, ಇದು ಆ ಮಗುವಿಗೆ ಹಾಗೂ ಹೆತ್ತವರಿಗೆ ತುಂಬ ಸಂಕಟಕರ ಅನುಭವವಾಗಿರಸಾಧ್ಯವಿದೆ. ಒಂದುವೇಳೆ ಮಗುವಿಗೆ ತುಂಬ ಬೇಧಿಯಾಗುವಲ್ಲಿ, ಇದರ ಫಲಿತಾಂಶವಾಗಿ ನಿರ್ಜಲೀಕರಣವು ಉಂಟಾಗಬಹುದು. ಆದುದರಿಂದ, ಹೆತ್ತವರು ಮಕ್ಕಳ ವೈದ್ಯರೊಬ್ಬರ ಸಲಹೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವುದು ವಿವೇಕಯುತವಾದದ್ದಾಗಿದೆ. ಮಗುವಿಗೆ ಲ್ಯಾಕ್ಟೋಸ್‌ ಅಸಹಿಷ್ಣುತೆಯಿದೆ ಎಂಬುದು ಗೊತ್ತಾದಾಗ, ಕೆಲವು ವೈದ್ಯರು ಹಾಲಿಗೆ ಬದಲಾಗಿ ಬದಲಿ ಪದಾರ್ಥವನ್ನು ಉಪಯೋಗಿಸುವಂತೆ ಶಿಫಾರಸ್ಸುಮಾಡಿದ್ದಾರೆ. ಇದರ ಫಲಿತಾಂಶವಾಗಿ ಅನೇಕರು ಸಂಕಟಕರ ರೋಗಲಕ್ಷಣಗಳಿಂದ ಉಪಶಮನವನ್ನು ಪಡೆದಿದ್ದಾರೆ.

ಅಲರ್ಜಿಯ ವಿಷಯದಲ್ಲಾದರೋ ಇನ್ನೂ ಹೆಚ್ಚಿನ ಚಿಂತೆಯು ತೋರಿಸಲ್ಪಡುತ್ತದೆ. ಕೆಲವು ವೈದ್ಯರು ಇದಕ್ಕೆ ಹಿಸ್ಟಮಿನ್‌ರೋಧಕಗಳನ್ನು ಕೊಡುತ್ತಾರೆ. ಆದರೂ, ಉಸಿರಾಟಕ್ಕೆ ತೊಂದರೆಯಾಗುವಲ್ಲಿ, ಸನ್ನಿವೇಶದ ತೀವ್ರತೆಯನ್ನು ತಗ್ಗಿಸಲಿಕ್ಕಾಗಿ ವೈದ್ಯನೊಬ್ಬನು ಇನ್ನೂ ಹೆಚ್ಚನ್ನು ಮಾಡುವ ಅಗತ್ಯವಿರುವುದು. ತೀರ ಅಪರೂಪವಾಗಿ, ಅತಿಸಂವೇದನಶೀಲತೆ ಎಂದು ಕರೆಯಲ್ಪಡುವ ಮಾರಕ ಪರಿಸ್ಥಿತಿಯು ಸಂಭವಿಸುವ ಸಾಧ್ಯತೆಯಿರುತ್ತದೆ.

ಒಂದು ಶಿಶುವು ವಾಂತಿಮಾಡಿಕೊಳ್ಳಲು ಆರಂಭಿಸುವಲ್ಲಿ, ಗ್ಯಾಲೆಕ್ಟೋಸೆಮಿಯ ಎಂದು ಕರೆಯಲ್ಪಡುವ ಅಪರೂಪದ ಅಸೌಖ್ಯವು ಚಿಂತೆಗೆ ಕಾರಣವಾಗಿರುವ ಇನ್ನೊಂದು ವಿಷಯವಾಗಿದೆ. ಈ ಮುಂಚೆ ತಿಳಿಸಲ್ಪಟ್ಟಿರುವಂತೆ, ಲ್ಯಾಕ್ಟೇಸ್‌ ಎಂಬ ಕಿಣ್ವವು ಲ್ಯಾಕ್ಟೋಸ್‌ನಿಂದ ಗ್ಯಾಲೆಕ್ಟೋಸನ್ನು ಪ್ರತ್ಯೇಕಿಸುತ್ತದೆ, ಆದರೆ ಈ ಗ್ಯಾಲೆಕ್ಟೋಸನ್ನು ಗ್ಲೂಕೋಸಾಗಿ ಪರಿವರ್ತಿಸುವ ಆವಶ್ಯಕತೆಯಿದೆ. ಗ್ಯಾಲೆಕ್ಟೋಸ್‌ನ ಶೇಖರಣೆಯಾಗುವಲ್ಲಿ, ಗುರುತರವಾದ ಪಿತ್ತಜನಕಾಂಗದ ಹಾನಿ, ಮೂತ್ರಜನಕಾಂಗದ ವಿಕೃತಿ, ಮಾನಸಿಕ ಬೆಳವಣಿಗೆಯಲ್ಲಿ ಕುಂಠಿತತೆ, ಹೈಪೊಗ್ಲೈಸಿಮಿಯ, ಮತ್ತು ಕ್ಯಾಟರ್ಯಾಕ್ಟ್‌ ಸಹ ಉಂಟಾಗಬಹುದು. ಆದುದರಿಂದ, ಶಿಶುವಿನ ಆಹಾರಪಥ್ಯದಿಂದ ಬೇಗನೆ ಮತ್ತು ಸಂಪೂರ್ಣವಾಗಿ ಲ್ಯಾಕ್ಟೋಸನ್ನು ನಿಲ್ಲಿಸಿಬಿಡುವುದು ಅತ್ಯಾವಶ್ಯಕವಾಗಿದೆ.

ಲ್ಯಾಕ್ಟೋಸ್‌ ಅಸಹಿಷ್ಣುತೆಯು ಎಷ್ಟು ಗಂಭೀರವಾದದ್ದಾಗಿದೆ?

ಒಬ್ಬ ಯುವತಿಯು ಯಾವಾಗಲೂ ಗ್ಯಾಸ್‌ ಹಾಗೂ ಹೊಟ್ಟೆಯ ಸೆಡೆತದಂಥ ರೋಗಲಕ್ಷಣಗಳಿಂದ ಕಷ್ಟಾನುಭವಿಸುತ್ತಿದ್ದಳು. ಅವಳ ಪರಿಸ್ಥಿತಿಯು ಎಷ್ಟು ಗಂಭೀರವಾಯಿತೆಂದರೆ, ಅವಳು ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿದಳು. ಅನೇಕ ಪರೀಕ್ಷೆಗಳ ಬಳಿಕ, ಅವಳಿಗೆ ಕರುಳಿನ ಉರಿಯೂತದ ರೋಗವಿದೆ (ಐಬಿಡಿ) ಎಂದು ನಿರ್ಣಯಿಸಲ್ಪಟ್ಟಿತು. * ಈ ರೋಗವನ್ನು ನಿಯಂತ್ರಿಸಲಿಕ್ಕಾಗಿ ಔಷಧವನ್ನು ಬರೆದುಕೊಡಲಾಯಿತು. ಆದರೂ, ದಿನಾಲೂ ಹೈನು ಪದಾರ್ಥಗಳನ್ನು ತಿನ್ನುವ ರೂಢಿಯನ್ನು ಮಾತ್ರ ಅವಳು ನಿಲ್ಲಿಸಲಿಲ್ಲ. ಆದುದರಿಂದ ಅವಳ ರೋಗಲಕ್ಷಣಗಳು ಸಹ ಕಡಿಮೆಯಾಗಲೇ ಇಲ್ಲ. ಸ್ವತಃ ಸಂಶೋಧನೆಯನ್ನು ನಡೆಸಿದ ಬಳಿಕ, ತನ್ನ ಆಹಾರಪಥ್ಯವೇ ತನ್ನ ಸಮಸ್ಯೆಗಳಿಗೆ ಕಾರಣವಾಗಿರಬಹುದು ಎಂಬುದು ಅವಳಿಗೆ ಮನವರಿಕೆಯಾಯಿತು. ಆಗ ಅವಳು ಕ್ರಮಬದ್ಧವಾಗಿ ಇಂಥ ಆಹಾರಗಳಿಂದ ದೂರವಿರಲು ಪ್ರಯತ್ನಿಸಿದಳು. ಕಾಲಕ್ರಮೇಣ ಅವಳು ಹೈನು ಪದಾರ್ಥಗಳನ್ನು ಬಿಟ್ಟುಬಿಟ್ಟಳು, ಮತ್ತು ಅವಳ ರೋಗಲಕ್ಷಣಗಳು ಕಾಣೆಯಾಗಲಾರಂಭಿಸಿದವು! ಒಂದೇ ವರ್ಷದೊಳಗೆ​—⁠ಮತ್ತು ಇನ್ನೂ ಹೆಚ್ಚಿನ ಪರೀಕ್ಷೆಗಳಿಗೆ ಒಳಗಾದ ಬಳಿಕ​—⁠ಅವಳಿಗೆ ಐಬಿಡಿ ರೋಗವಿಲ್ಲ ಎಂದು ವೈದ್ಯರು ಅವಳಿಗೆ ಹೇಳಿದರು. ವಾಸ್ತವದಲ್ಲಿ ಅವಳಿಗೆ ಲ್ಯಾಕ್ಟೋಸ್‌ ಅಸಹಿಷ್ಣುತೆ ಇತ್ತು. ಅವಳಿಗಾದ ಉಪಶಮನವನ್ನು ನೀವು ಊಹಿಸಿಕೊಳ್ಳಸಾಧ್ಯವಿದೆ!

ಈ ಸಮಯದಲ್ಲಿ, ಮಾನವ ದೇಹದಲ್ಲಿ ಲ್ಯಾಕ್ಟೇಸ್‌ನ ಉತ್ಪಾದನೆಯನ್ನು ಹೆಚ್ಚಿಸುವಂಥ ಯಾವುದೇ ಚಿಕಿತ್ಸೆಯೂ ಇಲ್ಲ. ಆದರೂ, ಲ್ಯಾಕ್ಟೋಸ್‌ ಅಸಹಿಷ್ಣುತೆಯು ಜೀವಕ್ಕೆ ಅಪಾಯವನ್ನು ತರುವಂಥ ರೋಗವೇನೂ ಅಲ್ಲ. ಆದುದರಿಂದ, ಲ್ಯಾಕ್ಟೋಸ್‌ ಅಸಹಿಷ್ಣುತೆಯ ರೋಗಲಕ್ಷಣಗಳನ್ನು ನಿಭಾಯಿಸಲು ಯಾವುದು ನಿಮಗೆ ಸಹಾಯಮಾಡಬಲ್ಲದು?

ತಾವು ಎಷ್ಟು ಹೈನು ಪದಾರ್ಥವನ್ನು ಜೀರ್ಣಿಸಿಕೊಳ್ಳಸಾಧ್ಯವಿದೆ ಎಂಬುದನ್ನು ಕೆಲವರು ಪರೀಕ್ಷಾ ಪ್ರಯೋಗದ ಮೂಲಕ ತಿಳಿದುಕೊಂಡಿದ್ದಾರೆ. ಸೇವಿಸಲ್ಪಡುವ ಹೈನು ಪದಾರ್ಥಗಳ ಪ್ರಮಾಣವನ್ನು ಹಾಗೂ ನಿಮ್ಮ ದೇಹದ ಪ್ರತಿಕ್ರಿಯೆಯನ್ನು ಗಮನಿಸುವವರಾಗಿರುವ ಮೂಲಕ, ನೀವು ಎಷ್ಟನ್ನು ಜೀರ್ಣಿಸಿಕೊಳ್ಳಬಲ್ಲಿರಿ ಮತ್ತು ಜೀರ್ಣಿಸಿಕೊಳ್ಳಲಾರಿರಿ ಎಂಬುದನ್ನು ನೀವು ನಿರ್ಧರಿಸಬಹುದು.

ಕೆಲವರಂತೂ ಎಲ್ಲಾ ಹೈನು ಪದಾರ್ಥಗಳಿಂದ ದೂರವಿರುವ ಆಯ್ಕೆಯನ್ನು ಮಾಡಿದ್ದಾರೆ. ಕೆಲವರು ವೈಯಕ್ತಿಕ ಸಂಶೋಧನೆಯನ್ನು ನಡೆಸುವ ಮೂಲಕ ಅಥವಾ ಒಬ್ಬ ಪಥ್ಯಶಾಸ್ತ್ರಜ್ಞನನ್ನು ಸಂಪರ್ಕಿಸುವ ಮೂಲಕ, ತಮ್ಮ ಕ್ಯಾಲ್ಸಿಯಂ ಆವಶ್ಯಕತೆಗಳನ್ನು ಪೂರೈಸಲು ಬದಲಿ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ನಿರ್ದಿಷ್ಟವಾದ ಹಸಿರು ತರಕಾರಿಗಳು ಮತ್ತು ಕೆಲವು ರೀತಿಯ ಮೀನುಗಳು ಹಾಗೂ ಕರಟಕಾಯಿಗಳಲ್ಲಿ ಕ್ಯಾಲ್ಸಿಯಂ ತುಂಬ ಇದೆ.

ಯಾರು ಹೈನು ಪದಾರ್ಥಗಳನ್ನು ಸೇವಿಸುವುದನ್ನು ಮುಂದುವರಿಸಲು ಬಯಸುತ್ತಾರೋ ಅವರಿಗಾಗಿ, ಮಾತ್ರೆಗಳು ಅಥವಾ ದ್ರವದ ರೂಪದಲ್ಲಿ ಕೆಲವು ಪದಾರ್ಥಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ ಮತ್ತು ಇವು ಸಹಾಯಮಾಡಸಾಧ್ಯವಿದೆ. ಈ ಉತ್ಪನ್ನಗಳಲ್ಲಿ ಲ್ಯಾಕ್ಟೇಸ್‌ ಇರುತ್ತದೆ, ಮತ್ತು ಇದು ಲ್ಯಾಕ್ಟೋಸನ್ನು ವಿಭಜಿಸುವುದರಲ್ಲಿ ಕರುಳುಗಳಿಗೆ ಸಹಾಯಮಾಡುತ್ತದೆ. ಈ ಉತ್ಪನ್ನಗಳನ್ನು ತೆಗೆದುಕೊಳ್ಳುವುದು, ಒಬ್ಬ ವ್ಯಕ್ತಿಯು ಲ್ಯಾಕ್ಟೋಸ್‌ ಅಸಹಿಷ್ಣುತೆಯ ರೋಗಲಕ್ಷಣಗಳಿಂದ ದೂರವಿರಲು ಸಹಾಯಮಾಡಬಲ್ಲದು.

ಇಂದಿನ ಲೋಕದಲ್ಲಿ ಒಬ್ಬನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬ ಕಷ್ಟಕರವಾಗಿದೆ. ಆದರೆ ವೈದ್ಯಕೀಯ ಸಂಶೋಧನೆ ಹಾಗೂ ನಮ್ಮ ದೇಹದ ಚೇತರಿಸಿಕೊಳ್ಳುವಿಕೆಯ ಫಲವಾಗಿ, ‘ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳದಿರುವಂಥ’ ಸಮಯವು ಬರುವ ತನಕ ನಾವು ಈ ಸಮಸ್ಯೆಗಳನ್ನು ನಿಭಾಯಿಸಲು ಶಕ್ತರಾಗಿದ್ದೇವೆ.​—⁠ಯೆಶಾಯ 33:24; ಕೀರ್ತನೆ 139:⁠14. (g04 3/22)

[ಪಾದಟಿಪ್ಪಣಿಗಳು]

^ ಇದನ್ನು ಅತಿಸೂಕ್ಷ್ಮ ಪ್ರತಿಕ್ರಿಯೆ (ಹೈಪರ್‌ಸೆನ್ಸಿಟಿವಿಟಿ) ಎಂದೂ ಕರೆಯಲಾಗುತ್ತದೆ.

^ ಐಬಿಡಿ ರೋಗದಲ್ಲಿ ಎರಡು ವಿಧಗಳಿವೆ​—⁠ಕ್ರೋನ್ಸ್‌ ರೋಗ ಮತ್ತು ಹುಣ್ಣುಗಳಿಂದ ಕೂಡಿದ ಕಲೈಟಿಸ್‌ ರೋಗ. ಈ ಗಂಭೀರ ರೋಗಗಳು, ಕರುಳುಗಳ ಒಂದು ಭಾಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವಂಥ ಸ್ಥಿತಿಗೆ ನಡಿಸಬಲ್ಲವು. ಐಬಿಡಿಯಿಂದ ಉಂಟಾಗುವ ತೊಡಕುಗಳು ಮರಣವನ್ನೂ ಉಂಟುಮಾಡಬಲ್ಲವು.

[ಪುಟ 28ರಲ್ಲಿರುವ ಚೌಕ/ಚಿತ್ರಗಳು]

ಈ ಪದಾರ್ಥಗಳಲ್ಲಿ ಸಹ ಲ್ಯಾಕ್ಟೋಸ್‌ ಇರಬಹುದು:

◼ ಬ್ರೆಡ್‌ ಮತ್ತು ಬ್ರೆಡ್‌ನ ಉತ್ಪನ್ನಗಳು

◼ ಕೇಕ್‌ಗಳು ಮತ್ತು ಬಿಸ್ಕತ್ತುಗಳು

◼ ಮಿಠಾಯಿಗಳು

◼ ಆ ಕೂಡಲೆ ಉಪಯೋಗಿಸಸಾಧ್ಯವಿರುವ ಆಲೂಗಡ್ಡೆ ಪುಡಿ

◼ ಮಾರ್ಜರೀನ್‌ (ಕೃತಕ ಬೆಣ್ಣೆ)

◼ ವೈದ್ಯರು ಕೊಡುವಂಥ ಅನೇಕ ಔಷಧಗಳು

◼ ವೈದ್ಯರ ಔಷಧ ಚೀಟಿ ಇಲ್ಲದೆ ನೇರವಾಗಿ ಮಾರಾಟಮಾಡಲ್ಪಡುವ ಔಷಧಗಳು

◼ ಪ್ಯಾನ್‌ಕೇಕ್‌ಗಳು, ಬಿಸ್ಕತ್ತುಗಳು, ಮತ್ತು ಸಣ್ಣ ಚಪ್ಪಟೆ ಕೇಕುಗಳಿಗಾಗಿ ಉಪಯೋಗಿಸಲ್ಪಡುವ ಮಿಶ್ರಣಗಳು

◼ ಸಂಸ್ಕರಿಸಲ್ಪಟ್ಟಿರುವ ಉಪಾಹಾರದ ಸೀರಿಯಲ್‌ಗಳು

◼ ಸ್ಯಾಲಡ್‌ಗೆ ಸೇರಿಸಲ್ಪಡುವ ಸಾಸ್‌ನಂಥ ಪದಾರ್ಥಗಳು

◼ ಬೇಯಿಸಿ ಆರಿಸಿದ ಮಾಂಸದ ಹೋಳುಗಳು

◼ ಸೂಪ್‌ಗಳು