ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಕ್ಕಳ ಕುರಿತು ದೇವರು ನಿಜವಾಗಿಯೂ ಚಿಂತಿಸುತ್ತಾನೋ?

ಮಕ್ಕಳ ಕುರಿತು ದೇವರು ನಿಜವಾಗಿಯೂ ಚಿಂತಿಸುತ್ತಾನೋ?

ಬೈಬಲಿನ ದೃಷ್ಟಿಕೋನ

ಮಕ್ಕಳ ಕುರಿತು ದೇವರು ನಿಜವಾಗಿಯೂ ಚಿಂತಿಸುತ್ತಾನೋ?

ಪ್ರತಿ ವರುಷ ಕೋಟ್ಯಂತರ ಮಕ್ಕಳು ಶೋಷಣೆ, ದುರಾಚಾರ, ಮತ್ತು ಹಿಂಸಾತ್ಮಕ ದಾಳಿಗಳಿಗೆ ಒಳಗಾಗುತ್ತಾರೆ. ಜೀವಾಪಾಯಕರ ಪರಿಸ್ಥಿತಿಗಳ ಕೆಳಗೆ ಗುಲಾಮರಂತೆ ಅನೇಕ ಮಕ್ಕಳು ದುಡಿಯುತ್ತಾರೆ. ಇನ್ನು ಕೆಲವರು ಅಪಹರಿಸಲ್ಪಡುತ್ತಾರೆ ಮತ್ತು ಸೈನಿಕರಾಗುವಂತೆ ಅಥವಾ ಬಾಲ ವೇಶ್ಯೆಯರಾಗುವಂತೆ ಬಲಾತ್ಕರಿಸಲ್ಪಡುತ್ತಾರೆ. ಅಷ್ಟುಮಾತ್ರವಲ್ಲದೆ, ಅಗಮ್ಯಗಮನ ಮತ್ತು ಮಕ್ಕಳ ಮೇಲಿನ ದುರಾಚಾರಕ್ಕೆ ಸಂಬಂಧಿಸಿದ ಇತರ ಭಯಂಕರ ಕೃತ್ಯಗಳ ಮೂಲಕ ಇನ್ನೂ ಅನೇಕ ಮಕ್ಕಳ ಭರವಸೆಯು ಛಿದ್ರಛಿದ್ರವಾಗಿದೆ.

ನಿಶ್ಚಯವಾಗಿಯೂ, ಯಥಾರ್ಥವಾದ ಕಾಳಜಿ ವಹಿಸುವ ವ್ಯಕ್ತಿಗಳು ಮಕ್ಕಳ ಈ ಸಂಕಷ್ಟವನ್ನು ನೋಡಿ ದುಃಖಿತರಾಗುತ್ತಾರೆ. ಇಂಥ ದುರಾಚಾರಕ್ಕೆ ಮಾನವರ ದುರಾಶೆ ಮತ್ತು ನೀಚತನವೇ ದೊಡ್ಡ ಕಾರಣವಾಗಿದೆಯೆಂದು ಕೆಲವರು ಒಪ್ಪಿಕೊಳ್ಳುತ್ತಾರಾದರೂ, ಒಬ್ಬ ಪ್ರೀತಿಯ ದೇವರು ಇಂಥ ಅನ್ಯಾಯವನ್ನು ಏಕೆ ಅನುಮತಿಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಕಷ್ಟವಾಗುತ್ತದೆ. ದೇವರು ಈ ಮಕ್ಕಳನ್ನು ತ್ಯಜಿಸಿದ್ದಾನೆ ಮತ್ತು ಬಹುಶಃ ಆತನಿಗೆ ನಿಜವಾಗಿಯೂ ಅವರ ಬಗ್ಗೆ ಚಿಂತೆಯೇ ಇಲ್ಲ ಎಂದು ಅವರು ಭಾವಿಸಬಹುದು. ಆದರೆ ಇದು ನಿಜವಾಗಿದೆಯೊ? ಮಕ್ಕಳು ಶೋಷಿತರಾಗುತ್ತಾರೆ ಮತ್ತು ಅನೇಕವೇಳೆ ದುರುಪಚರಿಸಲ್ಪಡುತ್ತಾರೆ ಎಂಬ ಭಯಾನಕ ನಿಜತ್ವವು, ದೇವರು ಅವರ ಕುರಿತು ಚಿಂತಿಸುವುದಿಲ್ಲ ಎಂಬುದನ್ನು ಸೂಚಿಸುತ್ತದೋ? ಬೈಬಲ್‌ ಏನನ್ನುತ್ತದೆ?

ದೇವರು ದುರಾಚಾರಿಗಳನ್ನು ದ್ವೇಷಿಸುತ್ತಾನೆ

ನಿರ್ದಯಿ ವಯಸ್ಕರಿಂದ ಮಕ್ಕಳು ದುರಾಚಾರಕ್ಕೆ ಒಳಗಾಗಬೇಕೆಂದು ಯೆಹೋವ ದೇವರು ಎಂದಿಗೂ ಉದ್ದೇಶಿಸಲಿಲ್ಲ. ಏದೆನ್‌ ತೋಟದಲ್ಲಿನ ಮಾನವರ ದಂಗೆಯ ಅತಿ ದುಃಖಕರ ಪರಿಣಾಮಗಳಲ್ಲಿ, ಮಕ್ಕಳ ದುರಾಚಾರವು ಒಂದಾಗಿದೆ. ದೇವರ ಪರಮಾಧಿಕಾರದ ಆ ತಳ್ಳಿಹಾಕುವಿಕೆಯು ಮಾನವರು ತಮ್ಮ ಜೊತೆಮಾನವರಿಂದ ಕ್ರೂರವಾಗಿ ದುರುಪಯೋಗಿಸಲ್ಪಡುವುದಕ್ಕೆ ನಡಿಸಿತು.​—⁠ಆದಿಕಾಂಡ 3:11-13, 16; ಪ್ರಸಂಗಿ 8:9.

ಬಲಹೀನರೂ ಅಭದ್ರರೂ ಆದ ಜನರನ್ನು ಶೋಷಣೆಮಾಡುವವರನ್ನು ದೇವರು ದ್ವೇಷಿಸುತ್ತಾನೆ. ಯೆಹೋವನನ್ನು ಸೇವಿಸದಿದ್ದ ಅನೇಕ ಪುರಾತನ ಜನಾಂಗಗಳು ಮಕ್ಕಳನ್ನು ಆಹುತಿಕೊಡುವ ಪದ್ಧತಿಯನ್ನು ಅನುಕರಿಸುತ್ತಿದ್ದವು. ಆದರೆ ಈ ಪದ್ಧತಿಯನ್ನು, ‘ತಾನು ವಿಧಿಸಲಿಲ್ಲ, ತನ್ನ ಮನಸ್ಸಿನಲ್ಲಿ ಹುಟ್ಟಲೂ ಇಲ್ಲ’ ಎಂದು ಯೆಹೋವನು ಹೇಳಿದನು. (ಯೆರೆಮೀಯ 7:31) ದೇವರು ತನ್ನ ಪುರಾತನ ಜನರಿಗೆ ಹೀಗೆ ಎಚ್ಚರಿಸಿದನು: “ನೀವು [ದಿಕ್ಕಿಲ್ಲದ ಮಕ್ಕಳನ್ನು] ಬಾಧಿಸಿದರೆ ಅವರು ನನಗೆ ಮೊರೆಯಿಡುವರು; ಆ ಮೊರೆಗೆ ನಾನು ಕಿವಿಗೊಡುವೆನೆಂದು ತಿಳಿದುಕೊಳ್ಳಿರಿ. ನಾನು ಕೋಪಿಸಿ”ಕೊಳ್ಳುವೆನು.​—⁠ವಿಮೋಚನಕಾಂಡ 22:​22-24.

ಯೆಹೋವನು ಮಕ್ಕಳನ್ನು ಪ್ರೀತಿಸುತ್ತಾನೆ

ದೇವರು ಮಕ್ಕಳ ಕುರಿತು ಚಿಂತಿಸುತ್ತಾನೆಂದು ಹೆತ್ತವರಿಗೆ ಆತನು ನೀಡಿದ ವಿವೇಕಯುತ ಸಲಹೆಗಳಲ್ಲಿ ರುಜುವಾಗುತ್ತದೆ. ಒಂದು ಭದ್ರ ಕುಟುಂಬದಲ್ಲಿ ಬೆಳೆಸಲ್ಪಡುವ ಮಕ್ಕಳು, ಪ್ರೌಢರೂ ಉತ್ತಮವಾಗಿ ಹೊಂದಿಕೊಳ್ಳಬಲ್ಲವರೂ ಆದ ವಯಸ್ಕರಾಗಿ ಪರಿಣಮಿಸುವುದು ಹೆಚ್ಚು ಸಂಭವನೀಯ. ಆದುದರಿಂದಲೇ ನಮ್ಮ ಸೃಷ್ಟಿಕರ್ತನು ವಿವಾಹವನ್ನು ಒಂದು ಜೀವನಪರ್ಯಂತ ಬಂಧವಾಗಿರುವಂತೆ ಏರ್ಪಡಿಸಿದನು ಮತ್ತು ವಿವಾಹದಲ್ಲಿ “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು.” (ಆದಿಕಾಂಡ 2:24) ಬೈಬಲಿಗನುಸಾರ, ಲೈಂಗಿಕ ಸಂಬಂಧವನ್ನು ಕೇವಲ ವಿವಾಹದೊಳಗೆ ಮಾತ್ರ ಅನುಮತಿಸಲಾಗಿದೆ ಏಕೆಂದರೆ ಆಗ ಮಾತ್ರ ಇದರ ಪರಿಣಾಮವಾಗಿ ಹುಟ್ಟಬಹುದಾದ ಮಕ್ಕಳನ್ನು ಒಂದು ಸ್ಥಿರವಾದ ಪರಿಸರದಲ್ಲಿ ಸಾಕಿಸಲಹಸಾಧ್ಯವಿದೆ.​—⁠ಇಬ್ರಿಯ 13:⁠4.

ಹೆತ್ತವರ ತರಬೇತಿಯ ಮಹತ್ವವನ್ನು ಸಹ ಶಾಸ್ತ್ರವಚನಗಳು ಒತ್ತಿತೋರಿಸುತ್ತವೆ. “ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು; ಗರ್ಭಫಲವು ಆತನ ಬಹುಮಾನವೇ. ಯೌವನದಲ್ಲಿ ಹುಟ್ಟಿದ ಮಕ್ಕಳು ಯುದ್ಧವೀರನ ಕೈಯಲ್ಲಿರುವ ಅಂಬುಗಳಂತಿದ್ದಾರೆ” ಎಂದು ಬೈಬಲ್‌ ಹೇಳುತ್ತದೆ. (ಕೀರ್ತನೆ 127:​3, 4) ಮಕ್ಕಳು ದೇವರಿಂದ ಬಂದ ಅಮೂಲ್ಯ ಉಡುಗೊರೆಯಾಗಿದ್ದಾರೆ, ಮತ್ತು ಅವರು ಸಾಫಲ್ಯವನ್ನು ಪಡೆಯಬೇಕೆಂದು ಆತನು ಬಯಸುತ್ತಾನೆ. ಬಿಲ್ಲುಗಾರನು ತನ್ನ ಅಂಬುಗಳನ್ನು ಇಲ್ಲವೆ ಬಾಣಗಳನ್ನು ಎಸೆಯುವ ಮುನ್ನ ಜಾಗರೂಕತೆಯಿಂದ ಗುರಿಯಿಡುವಂತೆಯೇ, ಹೆತ್ತವರು ಸಹ ತಮ್ಮ ಮಕ್ಕಳಿಗೆ ಜೀವನದಲ್ಲಿ ಉತ್ತಮ ನಿರ್ದೇಶನವನ್ನು ನೀಡಬೇಕೆಂದು ದೇವರು ಅವರನ್ನು ಪ್ರೇರೇಪಿಸುತ್ತಾನೆ. ದೇವರ ವಾಕ್ಯವು ಸಲಹೆನೀಡುವುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ [ಯೆಹೋವನಿಗೆ] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿ ಸಲಹಿರಿ.”​—⁠ಎಫೆಸ 6:⁠4.

ಯೆಹೋವನು, ಮಕ್ಕಳ ಕಡೆಗಿನ ತನ್ನ ಪ್ರೀತಿಯನ್ನು ತೋರಿಸಿರುವ ಇನ್ನೊಂದು ವಿಧವು, ಹೆತ್ತವರು ತಮ್ಮ ಮಕ್ಕಳನ್ನು ದುಷ್ಟ ವ್ಯಕ್ತಿಗಳ ಕೈಗೆ ಸಿಗದಂತೆ ರಕ್ಷಿಸಲು ಕಲಿಸುವ ಮೂಲಕವೇ. ಪುರಾತನ ಇಸ್ರಾಯೇಲಿನಲ್ಲಿ ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳುವಂತೆ ‘ಮಕ್ಕಳಿಗೂ’ ಆಜ್ಞಾಪಿಸಲಾಗಿತ್ತು. ಮತ್ತು ಈ ಧರ್ಮಶಾಸ್ತ್ರದಲ್ಲಿ, ಯೋಗ್ಯವಾದ ಮತ್ತು ಅಯೋಗ್ಯವಾದ ಲೈಂಗಿಕ ನಡತೆಯ ಕುರಿತಾದ ವಿಧಿಗಳು ಸಹ ಇದ್ದವು. (ಧರ್ಮೋಪದೇಶಕಾಂಡ 31:12; ಯಾಜಕಕಾಂಡ 18:6-24) ತಮ್ಮ ಮಕ್ಕಳನ್ನು ಶೋಷಿಸಬಹುದಾದ ಅಥವಾ ದುರಾಚಾರಕ್ಕೆ ಒಳಪಡಿಸಬಹುದಾದ ಯಾವುದೇ ವ್ಯಕ್ತಿಯಿಂದ ರಕ್ಷಿಸಲು ಹೆತ್ತವರು ತಮ್ಮಿಂದಾದದ್ದೆಲ್ಲವನ್ನೂ ಮಾಡಬೇಕೆಂದು ದೇವರು ಬಯಸುತ್ತಾನೆ.

ಮಕ್ಕಳಿಗಾಗಿ ಒಂದು ನಿರೀಕ್ಷೆ

ತನ್ನ ತಂದೆಯ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುವ ಯೇಸು ಕ್ರಿಸ್ತನಿಂದ ಮಕ್ಕಳ ಕೆಡಗಿನ ಯೆಹೋವನ ಪ್ರೀತಿಯು ಸುಂದರವಾಗಿ ಪ್ರದರ್ಶಿಸಲ್ಪಟ್ಟಿತ್ತು. (ಯೋಹಾನ 5:19) ಹೆತ್ತವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನ ಬಳಿಗೆ ತರುವುದನ್ನು ಅವನ ಅಪೊಸ್ತಲರು ತಡೆದರು. ಹೀಗೆ ಮಾಡುವ ಮೂಲಕ ತಾವು ಯೇಸುವಿಗೆ ಸಹಾಯಮಾಡುತ್ತಿದ್ದೇವೆ ಎಂದು ಅವರು ತಪ್ಪಾಗಿ ನೆನಸಿದರು. ಆದರೆ ಯೇಸು ಕೋಪದಿಂದ ಅವರನ್ನು ತಿದ್ದಿದನು. “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ” ಎಂದು ಅವನು ಹೇಳಿದನು. ಅನಂತರ ಅವನು “[ಮಕ್ಕಳನ್ನು] ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು.” (ಮಾರ್ಕ 10:13-16) ಯೆಹೋವ ದೇವರ ಅಥವಾ ಆತನ ಮಗನ ದೃಷ್ಟಿಯಲ್ಲಿ ಮಕ್ಕಳು ಅಲ್ಪರಲ್ಲ.

ವಾಸ್ತವದಲ್ಲಿ, ದುರುಪಚಾರಕ್ಕೆ ಒಳಗಾಗಿರುವ ಮಕ್ಕಳನ್ನು ದೇವರು ತನ್ನ ನೇಮಿತ ರಾಜನಾದ ಯೇಸು ಕ್ರಿಸ್ತನ ಮೂಲಕ ಬೇಗನೆ ಬಿಡುಗಡೆಮಾಡಲು ಕ್ರಿಯೆಗೈಯಲಿದ್ದಾನೆ. ಈ ಲೋಕದಲ್ಲಿರುವ ಲೋಭಿಗಳಾದ ಶೋಷಣೆಮಾಡುವವರು ಮತ್ತು ಕ್ರೂರ ದುರಾಚಾರಿಗಳು, ನಿತ್ಯಕ್ಕಾಗಿ ನಾಶಮಾಡಲ್ಪಡುವರು. (ಕೀರ್ತನೆ 37:​10, 11) ಯೆಹೋವನನ್ನು ಹುಡುಕುವ ದೀನರಿಗಾದರೋ, ಬೈಬಲ್‌ ತಿಳಿಸುವುದು: “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”​—⁠ಪ್ರಕಟನೆ 21:​3, 4.

ಅಷ್ಟರ ತನಕ, ಶೋಷಿತರಾದವರಿಗೂ ದುರಾಚಾರಕ್ಕೆ ಒಳಗಾದವರಿಗೂ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಸಹಾಯವನ್ನು ನೀಡುವ ಮೂಲಕ ದೇವರು ಈಗಲೂ ತನ್ನ ಪ್ರೀತಿಯನ್ನು ತೋರಿಸುತ್ತಿದ್ದಾನೆ. ಆತನು ವಾಗ್ದಾನಿಸುವುದು: “ತಪ್ಪಿಸಿಕೊಂಡದನ್ನು ಹುಡುಕುವೆನು, ಓಡಿಸಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದದ್ದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು.” (ಯೆಹೆಜ್ಕೇಲ 34:16) ತುಳಿಯಲ್ಪಟ್ಟಿರುವ ಮತ್ತು ದುರ್ಬಲಗೊಳಿಸಲ್ಪಟ್ಟಿರುವ ಮಕ್ಕಳನ್ನು ಯೆಹೋವನು ತನ್ನ ವಾಕ್ಯ, ತನ್ನ ಪವಿತ್ರಾತ್ಮ, ಮತ್ತು ಕ್ರೈಸ್ತ ಸಭೆಯ ಮೂಲಕ ಸಾಂತ್ವನಗೊಳಿಸುತ್ತಿದ್ದಾನೆ. ಭವಿಷ್ಯತ್ತಿನಲ್ಲಿ ಆತನು ಮಾಡಲಿರುವಂತೆ ಈಗಲೂ ‘ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ ಆಗಿರುವವನು ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ’ ಎಂದು ತಿಳಿಯುವುದು ಎಂಥ ಆನಂದವನ್ನು ತರುತ್ತದೆ!​—⁠2 ಕೊರಿಂಥ 1:​3, 4. (g04 8/8)

[ಪುಟ 12ರಲ್ಲಿರುವ ಚಿತ್ರ ಕೃಪೆ]

© Mikkel Ostergaard /Panos Pictures