ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೂರ್ವಗ್ರಹದ ವಿವಿಧ ಮುಖಗಳು

ಪೂರ್ವಗ್ರಹದ ವಿವಿಧ ಮುಖಗಳು

ಪೂರ್ವಗ್ರಹದ ವಿವಿಧ ಮುಖಗಳು

ಪೂರ್ವಗ್ರಹವನ್ನು ಬಾಗಿಲಿನಿಂದ ಹೊರಕ್ಕೆ ತಳ್ಳಿದರೆ ಅದು ಕಿಟಕಿಯಿಂದ ಪುನಃ ಒಳನುಗ್ಗುತ್ತದೆ.​—⁠ಪ್ರಷ್ಯದ ರಾಜ, ಮಹಾ ಫ್ರೆಡ್‌ರಿಕ್‌.

ರಾಜೇಶ್‌, ಭಾರತದ ಪಾಲೀಯಡ್‌ ಎಂಬ ಒಂದು ಹಳ್ಳಿಯಲ್ಲಿ ವಾಸಿಸುತ್ತಾನೆ. ಇತರ ಅಸ್ಪೃಶ್ಯರಂತೆ, ಅವನು ತನ್ನ ಮನೆಗೆ ನೀರನ್ನು ಹೊತ್ತು ತರಲು 15 ನಿಮಿಷ ನಡೆಯಬೇಕು. “ಹಳ್ಳಿಯಲ್ಲಿರುವ ಮೇಲ್ಜಾತಿಯ ಜನರು ಉಪಯೋಗಿಸುವ ನಲ್ಲಿಗಳನ್ನು ನಮಗೆ ಉಪಯೋಗಿಸಲು ಅನುಮತಿಯಿಲ್ಲ,” ಎಂದು ಅವನು ವಿವರಿಸುತ್ತಾನೆ. ರಾಜೇಶ ಶಾಲೆಯಲ್ಲಿದ್ದಾಗ, ಇತರ ಮಕ್ಕಳು ಆಡುವ ಕಾಲ್ಚೆಂಡನ್ನು ಮುಟ್ಟಲು ಸಹ ಅವನಿಗೆ ಮತ್ತು ಅವನ ಸ್ನೇಹಿತರಿಗೆ ಅನುಮತಿ ಇರಲಿಲ್ಲ. “ನಾವು ಚೆಂಡಿಗೆ ಬದಲಾಗಿ ಕಲ್ಲುಗಳಲ್ಲಿ ಆಟವಾಡುತ್ತಿದ್ದೆವು,” ಎಂದು ಅವನು ಹೇಳುತ್ತಾನೆ.

“ಜನರು ನನ್ನನ್ನು ಹಗೆಮಾಡುತ್ತಾರೆ ಎಂದು ನನಗೆ ಭಾಸವಾಗುತ್ತದೆ, ಆದರೆ ಯಾಕೆ ಎಂದು ನನಗೆ ಗೊತ್ತಿಲ್ಲ,” ಎಂದು ಯೂರೋಪಿನಲ್ಲಿ ವಾಸಿಸುವ ಏಷ್ಯಾದಿಂದ ಬಂದ ಹದಿಪ್ರಾಯದವಳಾದ ಕ್ರಿಸ್ಟೀನಾ ಹೇಳುತ್ತಾಳೆ. ಅವಳು ಕೂಡಿಸುವುದು: “ಇದು ಬಹಳ ನೋವನ್ನುಂಟುಮಾಡುತ್ತದೆ. ಜನರು ಈ ರೀತಿ ವರ್ತಿಸುವಾಗ ನಾನು ನನ್ನನ್ನು ಪ್ರತ್ಯೇಕಿಸಿಕೊಳ್ಳುವ ಮೂಲಕ ಅದಕ್ಕೆ ಪ್ರತಿಕ್ರಿಯಿಸುತ್ತೇನೆ, ಆದರೆ ಅದರಿಂದಲೂ ನನಗೆ ಯಾವುದೇ ಉಪಶಮನ ದೊರಕುವುದಿಲ್ಲ.”

ಪಶ್ಚಿಮ ಆಫ್ರಿಕದ ಸ್ಟ್ಯಾನ್ಲೀ ಹೇಳುವುದು: “ನಾನು 16 ವರುಷ ಪ್ರಾಯದವನಾಗಿದ್ದಾಗ ಪೂರ್ವಗ್ರಹ ಅಂದರೇನೆಂಬುದನ್ನು ತಿಳಿದುಕೊಂಡೆ. ನನಗೆ ಪರಿಚಯವೇ ಇಲ್ಲದ ಜನರು ನಾನು ಪಟ್ಟಣವನ್ನು ಬಿಟ್ಟುಹೋಗುವಂತೆ ಹೇಳಿದರು. ನನ್ನ ಕುಲಕ್ಕೆ ಸೇರಿದ ಕೆಲವು ಜನರ ಮನೆಗಳನ್ನು ಸುಟ್ಟುಹಾಕಲಾಯಿತು. ನನ್ನ ತಂದೆಯ ಬ್ಯಾಂಕ್‌ ಅಕೌಂಟನ್ನು ರದ್ದುಪಡಿಸಲಾಯಿತು. ಇದರ ಪರಿಣಾಮವಾಗಿ, ನಮ್ಮ ವಿರುದ್ಧ ಭೇದಭಾವವನ್ನು ತೋರಿಸುತ್ತಿದ್ದ ಕುಲವನ್ನು ನಾನು ಹಗೆಮಾಡಲಾರಂಭಿಸಿದೆ.”

ರಾಜೇಶ್‌, ಕ್ರಿಸ್ಟೀನಾ, ಮತ್ತು ಸ್ಟ್ಯಾನ್ಲೀ ಪೂರ್ವಗ್ರಹಕ್ಕೆ ಬಲಿಪಶುಗಳಾಗಿದ್ದಾರೆ. ಆದರೆ ಇದಕ್ಕೆ ಬಲಿಯಾದವರು ಇವರು ಮಾತ್ರವೇ ಅಲ್ಲ. “ಕೋಟ್ಯಂತರ ಮಾನವರು ಇಂದು ಜಾತೀಯತೆ, ಭೇದಭಾವ, ಪರದೇಶೀಯರ ಕಡೆಗಿನ ದ್ವೇಷ, ಮತ್ತು ಸಮಾಜದಿಂದ ಬಹಿಷ್ಕಾರ ಮುಂತಾದ ಸಮಸ್ಯೆಗಳಿಂದ ಕಷ್ಟಾನುಭವಿಸುತ್ತಿದ್ದಾರೆ,” ಎಂದು ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಮತ್ತು ಸಾಂಸ್ಕೃತಿಕ ಸಂಸ್ಥೆಯ (ಯೂನೆಸ್ಕೊ) ಡೈರೆಕ್ಟ್‌ರ್‌-ಜೆನೆರಲ್‌ ಆಗಿರುವ ಕೊಯೀಚೀರೊ ಮಾಟ್‌ಸೂವೂರಾ ವಿವರಿಸುತ್ತಾರೆ. ಅವರು ಕೂಡಿಸಿದ್ದು: “ಅಜ್ಞಾನ ಮತ್ತು ಪೂರ್ವಗ್ರಹದಿಂದ ಪೋಷಿಸಲ್ಪಡುವ ಇಂಥ ಅಮಾನವೀಯ ಪದ್ಧತಿಗಳು, ಅನೇಕ ದೇಶಗಳಲ್ಲಿ ಆಂತರಿಕ ಗಲಭೆಗಳನ್ನು ಉಂಟುಮಾಡಿ, ಅಪಾರ ಮಾನವ ಸಂಕಷ್ಟವನ್ನು ತಂದಿವೆ.”

ಒಂದುವೇಳೆ ನೀವು ಎಂದೂ ಪೂರ್ವಗ್ರಹಕ್ಕೆ ಬಲಿಪಶುಗಳಾಗಿರದಿದ್ದರೆ, ಅದು ಭಾವನಾತ್ಮಕವಾಗಿ ಎಷ್ಟು ಘಾಸಿಗೊಳಿಸುವಂಥದ್ದಾಗಿದೆ ಎಂಬುದನ್ನು ಗ್ರಹಿಸಲು ನಿಮಗೆ ಕಷ್ಟವಾಗಬಹುದು. “ಕೆಲವರು ಅದನ್ನು ಮೌನವಾಗಿ ಸಹಿಸಿಕೊಳ್ಳುತ್ತಾರೆ. ಇತರರು, ಪೂರ್ವಗ್ರಹಕ್ಕೆ ಪ್ರತಿಯಾಗಿ ಹೆಚ್ಚು ಪೂರ್ವಗ್ರಹವನ್ನು ತೋರಿಸುತ್ತಾರೆ” ಎಂಬುದಾಗಿ ಪೂರ್ವಗ್ರಹದೊಂದಿಗೆ ಮುಖಾಮುಖಿ (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುತ್ತದೆ. ಪೂರ್ವಗ್ರಹವು ಜೀವಿತಗಳನ್ನು ಯಾವ ವಿಧಗಳಲ್ಲಿ ಹಾನಿಗೊಳಿಸುತ್ತದೆ?

ಒಂದುವೇಳೆ ನೀವು ಒಂದು ಅಲ್ಪಸಂಖ್ಯಾತ ಗುಂಪಿನ ಭಾಗವಾಗಿರುವಲ್ಲಿ, ಜನರು ನಿಮ್ಮನ್ನು ದೂರವಿಡುವುದನ್ನು, ನಿಮ್ಮ ಕಡೆಗೆ ವೈರತ್ವದ ನೋಟ ಬೀರುವುದನ್ನು, ಅಥವಾ ನಿಮ್ಮ ಸಂಸ್ಕೃತಿಯ ಕುರಿತು ಅವಹೇಳನದ ಹೇಳಿಕೆಗಳನ್ನು ಮಾಡುವುದನ್ನು ನೀವು ಕೇಳಿಸಿಕೊಳ್ಳಬಹುದು. ಯಾರೂ ಮಾಡಲು ಬಯಸದ ಕೀಳಾದ ಕೆಲಸವನ್ನು ಮಾಡಬೇಕೇ ಹೊರತು ನಿಮಗೆ ಉದ್ಯೋಗವನ್ನು ಕಂಡುಕೊಳ್ಳುವ ಸಂದರ್ಭಗಳು ಸಹ ಕಡಿಮೆ ಇರಬಹುದು. ಸೂಕ್ತವಾದ ಮನೆಯನ್ನು ಕಂಡುಕೊಳ್ಳುವುದು ಸಹ ಪ್ರಾಯಶಃ ಕಷ್ಟಕರ. ನಿಮ್ಮ ಮಕ್ಕಳಿಗೆ ಸಹ ಶಾಲೆಯಲ್ಲಿ ಇತರ ಸಹಪಾಠಿಗಳಿಂದ ಪ್ರತ್ಯೇಕಿಸಲ್ಪಟ್ಟ ಮತ್ತು ತ್ಯಜಿಸಲ್ಪಟ್ಟ ಅನಿಸಿಕೆಯಾಗಬಹುದು.

ಇದಕ್ಕಿಂತಲೂ ಹೆಚ್ಚು ಮೋಸಕರ ಸಂಗತಿಯೇನೆಂದರೆ, ಪೂರ್ವಗ್ರಹವು ಜನರನ್ನು ಹಿಂಸಾಚಾರ ಅಥವಾ ಕೊಲೆಯಂಥ ಕೆಲಸಕ್ಕೆ ಸಹ ಪ್ರೇರೇಪಿಸಬಲ್ಲದು. ವಾಸ್ತವದಲ್ಲಿ, ಪೂರ್ವಗ್ರಹದಿಂದಾಗಿ ಉಂಟಾಗಬಲ್ಲ ಹಿಂಸಾಚಾರದ ಭಯಪ್ರೇರಕ ಉದಾಹರಣೆಗಳು ಇತಿಹಾಸದ ಪುಟಗಳಲ್ಲಿ ತುಂಬಿಕೊಂಡಿವೆ​—⁠ಇವುಗಳಲ್ಲಿ ಹತ್ಯಾಕಾಂಡಗಳು, ಜಾತಿಸಂಹಾರಗಳು, ಮತ್ತು ಕುಲಸಂಬಂಧಿತ ಶುದ್ಧೀಕರಣ ಎಂಬುದಾಗಿ ಕರೆಯಲ್ಪಡುವ ಜನಾಂಗೀಯ ಹಲ್ಲೆಗಳು ಸೇರಿವೆ.

ಶತಮಾನಗಳಿಂದ ಬಂದಿರುವ ಪೂರ್ವಗ್ರಹ

ಒಂದು ಸಮಯದಲ್ಲಿ ಕ್ರೈಸ್ತರು ಪೂರ್ವಗ್ರಹಕ್ಕೆ ಪ್ರಧಾನ ಬಲಿಪಶುಗಳಾಗಿದ್ದರು. ಉದಾಹರಣೆಗೆ, ಯೇಸು ಕ್ರಿಸ್ತನು ಸತ್ತ ಸ್ವಲ್ಪ ಸಮಯದಲ್ಲಿಯೇ, ಅವರ ವಿರುದ್ಧ ಕ್ರೂರವಾದ ಹಿಂಸೆಯ ಅಲೆ ಎದ್ದಿತು. (ಅ. ಕೃತ್ಯಗಳು 8:3; 9:​1, 2; 26:​10, 11) ಎರಡು ಶತಮಾನಗಳ ಅನಂತರ, ಕ್ರೈಸ್ತರು ಕ್ರೂರವಾದ ದೌರ್ಜನ್ಯಕ್ಕೆ ಗುರಿಯಾದರು. ಮೂರನೇ ಶತಮಾನದ ಲೇಖಕ ಟೆರ್ಟುಲ್ಯನ್‌ ಬರೆದದ್ದು: “ಒಂದು ಮಾರಕ ವ್ಯಾಧಿ ಉಂಟಾಗುವುದಾದರೂ ಕೂಡಲೆ ‘ಆ ಕ್ರೈಸ್ತರನ್ನು ಸಿಂಹಗಳ ಬಾಯಿಗೆ ಬಿಸಾಡಿರಿ’ ಎಂಬ ಕೂಗು ಕೇಳಿಬರುತ್ತದೆ.”

ಆದರೆ, 11ನೇ ಶತಮಾನದಲ್ಲಿನ ಧಾರ್ಮಿಕ ಯುದ್ಧಗಳಿಂದಾರಂಭಿಸಿ ಯೂರೋಪಿನಲ್ಲಿ ಯೆಹೂದ್ಯರು ಜನಪ್ರಿಯವಲ್ಲದ ಅಲ್ಪಸಂಖ್ಯಾತರಾಗಿ ಪರಿಣಮಿಸಿದರು. ಗೆಡ್ಡೆ ಪ್ಲೇಗು ಆ ಭೂಖಂಡದಾದ್ಯಂತ ದಾಳಿಮಾಡಿ ಜನಸಂಖ್ಯೆಯಲ್ಲಿ ಸುಮಾರು ಕಾಲುಭಾಗವನ್ನು ಕೆಲವೇ ವರುಷಗಳಲ್ಲಿ ಧ್ವಂಸಮಾಡಿದಾಗ, ಅದಕ್ಕಾಗಿ ಯೆಹೂದ್ಯರ ಕಡೆಗೆ ಬೆರಳು ತೋರಿಸಲಾಯಿತು. ಏಕೆಂದರೆ ಈಗಾಗಲೇ ಯೆಹೂದ್ಯರನ್ನು ಅನೇಕ ಜನರು ಹಗೆಮಾಡುತ್ತಿದ್ದರು. “ಈ ಹಗೆಗೆ ಪ್ಲೇಗು ಒಂದು ನೆವವನ್ನು ಕೊಟ್ಟಿತು, ಮತ್ತು ಈ ಹಗೆಯು ಪ್ಲೇಗ್‌ನ ಭಯದಲ್ಲಿದ್ದ ಜನರಿಗೆ, ಯೆಹೂದ್ಯರೇ ಇದಕ್ಕೆ ಕಾರಣರೆಂದು ಅವರ ಮೇಲೆ ಕೇಂದ್ರೀಕರಿಸುವಂತೆ ಮಾಡಿತು,” ಎಂಬುದಾಗಿ ಜ್ಯಾನೆಟ್‌ ಫ್ಯಾರೆಲ್‌ ಅಗೋಚರ ವೈರಿಗಳು (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಬರೆದಳು.

ಕೊನೆಗೆ, ಬಾವಿಯ ನೀರನ್ನು ಕೆಡಿಸುವ ಮೂಲಕ ಯೆಹೂದ್ಯರೇ ಈ ಸೋಂಕುರೋಗವನ್ನು ಉಂಟುಮಾಡಿದ್ದರು ಎಂದು ದಕ್ಷಿಣ ಫ್ರಾನ್ಸ್‌ನಲ್ಲಿದ್ದ ಒಬ್ಬ ಯೆಹೂದಿ ಮನುಷ್ಯನು ಚಿತ್ರಹಿಂಸೆಯ ಕೆಳಗೆ “ತಪ್ಪೊಪ್ಪಿಕೆ” ಮಾಡಿದನು. ನಿಶ್ಚಯವಾಗಿಯೂ ಅವನು ಮಾಡಿದ ತಪ್ಪೊಪ್ಪಿಕೆಯು ಸತ್ಯಸಂಗತಿಯಾಗಿರಲಿಲ್ಲ, ಆದರೆ ಇದನ್ನು ಸತ್ಯ ಮಾಹಿತಿಯೆಂದು ಪ್ರಚಾರಪಡಿಸಲಾಯಿತು. ಸ್ವಲ್ಪ ಸಮಯದಲ್ಲೇ ಸ್ಪೆಯಿನ್‌, ಫ್ರಾನ್ಸ್‌, ಮತ್ತು ಜರ್ಮನಿಯಲ್ಲಿದ್ದ ಇಡೀ ಯೆಹೂದಿ ಸಮುದಾಯಗಳನ್ನು ಹತಿಸಲಾಯಿತು. ಆದರೆ ನಿಜವಾದ ಅಪರಾಧಿಗಳಾಗಿದ್ದ ಇಲಿಗಳತ್ತ ಯಾರೂ ಗಮನಕೊಡಲಿಲ್ಲ ಎಂದು ತೋರುತ್ತದೆ. ಅಷ್ಟುಮಾತ್ರವಲ್ಲದೆ, ಇತರರಂತೆಯೇ ಯೆಹೂದ್ಯರು ಕೂಡ ಈ ಫ್ಲೇಗ್‌ನಿಂದ ಸಾವನ್ನಪ್ಪಿದರು ಎಂಬುದನ್ನು ಕೇವಲ ಕೊಂಚವೇ ಜನರು ಗಮನಕ್ಕೆ ತೆಗೆದುಕೊಂಡರು.

ಪೂರ್ವಗ್ರಹದ ಕಿಡಿ ಒಮ್ಮೆ ಉರಿಯಲಾರಂಭಿಸಿದರೆ, ಅದು ಶತಮಾನಗಳ ವರೆಗೆ ಒಳಗೊಳಗೇ ಹೊಗೆಯಾಡುತ್ತಿರಬಲ್ಲದು. ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ ಅಡಾಲ್ಫ್‌ ಹಿಟ್ಲರನು, ಒಂದನೇ ಲೋಕ ಯುದ್ಧದಲ್ಲಿನ ಜರ್ಮನಿಯ ಸೋಲಿಗೆ ಯೆಹೂದ್ಯರೇ ಕಾರಣರೆಂದು ಹೇಳುವ ಮೂಲಕ ಷೇಮ್‌-ವಂಶ ವಿರೋಧ ಎಂಬ ಉರಿಯುತ್ತಿರುವ ಬೆಂಕಿಗೆ ಎಣ್ಣೆ ಸುರಿಸಿದನು. ಔಷ್ವಿಟ್ಸ್‌ ಕೂಟಶಿಬಿರದ ನಾಸಿ ಕಮಾಂಡರ್‌ ರುಡಾಲ್ಫ್‌ ಹೋಸ್‌ರವರು ಎರಡನೇ ಲೋಕ ಯುದ್ಧದ ಕೊನೆಯಲ್ಲಿ ಒಪ್ಪಿಕೊಂಡದ್ದು: “ನಮ್ಮ ಮಿಲಿಟರಿ ಮತ್ತು ವಿಚಾರಶಾಸ್ತ್ರ ತರಬೇತಿಯು, ನಾವು ಜರ್ಮನಿಯನ್ನು ಯೆಹೂದ್ಯರಿಂದ ರಕ್ಷಿಸಬೇಕೆಂಬ ವಿಚಾರವನ್ನು ಸತ್ಯವೆಂದು ಅಂಗೀಕರಿಸುವಂತೆ ಮಾಡಿತು.” ‘ಜರ್ಮನಿಯನ್ನು ರಕ್ಷಿಸುವ’ ಸಲುವಾಗಿ, ಹೋಸ್‌ರವರ ನೇತ್ರತ್ವದ ಕೆಳಗೆ ಸುಮಾರು 20,00,000 ಜನರನ್ನು ನಿರ್ಮೂಲನ ಮಾಡಲಾಯಿತು, ಅವರಲ್ಲಿ ಹೆಚ್ಚಿನವರು ಯೆಹೂದ್ಯರಾಗಿದ್ದರು.

ದುಃಖಕರವಾಗಿ, ಕೆಲವು ದಶಕಗಳು ಗತಿಸಿದರೂ ಇಂಥ ಘೋರ ಕೃತ್ಯಗಳು ಕೊನೆಗೊಳ್ಳಲಿಲ್ಲ. ಉದಾಹರಣೆಗೆ, 1994ರಲ್ಲಿ, ಪೂರ್ವ ಆಫ್ರಿಕದಲ್ಲಿ ಟೂಟ್ಸೀ ಮತ್ತು ಹೂಟೂ ಜನರ ಮಧ್ಯೆ ಕುಲಸಂಬಂಧಿತ ಹಗೆಯು ಸ್ಫೋಟಗೊಂಡು ಕಡಿಮೆಪಕ್ಷ ಐದು ಲಕ್ಷ ಜನರು ತಮ್ಮ ಜೀವಗಳನ್ನು ಕಳೆದುಕೊಂಡರು. ಟೈಮ್‌ ವಾರ್ತಾಪತ್ರಿಕೆಯು ವರದಿಮಾಡಿದ್ದು: “ಜನರಿಗೆ ಯಾವುದೇ ಆಶ್ರಯತಾಣಗಳಿರಲಿಲ್ಲ. ಎಲ್ಲಿ ಅನೇಕ ಜನರು ರಕ್ಷಣೆಗಾಗಿ ಅವಿತುಕೊಂಡರೋ ಆ ಚರ್ಚುಗಳಲ್ಲಿನ ಆಸನಗಳ ಅಡಿಯಿಂದ ರಕ್ತ ಹರಿದುಬರುತ್ತಿತ್ತು. . . . ಅದೊಂದು ನೇರವಾದ, ಮುಖಾಮುಖಿಯಾದ ಮತ್ತು ಭಯಾನಕವಾದ ಕದನವಾಗಿತ್ತು. ಕೊಲ್ಲಲಿಕ್ಕಾಗಿ ಜನರಿಗಿದ್ದಂಥ ದಾಹ, ಅದರಿಂದ ಪಾರಾಗಿ ಉಳಿದ ಜನರನ್ನು ಭಾವಶೂನ್ಯರನ್ನಾಗಿಯೂ ಮೂಕರನ್ನಾಗಿಯೂ ಮಾಡಿತು.” ಈ ಭಯಂಕರ ಹಿಂಸಾಕೃತ್ಯದಿಂದ ಮಕ್ಕಳು ಸಹ ಪಾರಾಗಲಿಲ್ಲ. “ರುಆಂಡವು ಒಂದು ಪುಟ್ಟ ಸ್ಥಳವಾಗಿದೆ, ಆದರೆ ಲೋಕದಲ್ಲಿರುವ ಎಲ್ಲಾ ಹಗೆಯು ಇಲ್ಲಿದೆ,” ಎಂದು ಅಲ್ಲಿನ ಒಬ್ಬ ಪ್ರಜೆಯು ಹೇಳಿದನು.

ಹಿಂದಿನ ಯುಗೊಸ್ಲಾವಿಯದ ವಿಭಜನೆಯೊಂದಿಗೆ ಸಂಬಂಧಪಟ್ಟ ಸಂಘರ್ಷಗಳು, 2,00,000ಕ್ಕಿಂತಲೂ ಹೆಚ್ಚಿನ ಜನಸಾಮಾನ್ಯರ ಹತ್ಯೆಗೆ ನಡಿಸಿದವು. ಅನೇಕ ವರ್ಷಗಳಿಂದ ಶಾಂತಿಯಿಂದ ಒಟ್ಟಾಗಿ ವಾಸಿಸುತ್ತಿದ್ದ ನೆರೆಹೊರೆಯವರು ಪರಸ್ಪರರನ್ನು ಕೊಂದುಹಾಕಿದರು. ಸಾವಿರಾರು ಸ್ತ್ರೀಯರ ಮೇಲೆ ಅತ್ಯಾಚಾರಗೈಯಲಾಯಿತು, ಮತ್ತು ‘ಕುಲಸಂಬಂಧಿತ ಶುದ್ಧೀಕರಣ’ ಎಂಬ ಕ್ರೂರವಾದ ಕಾರ್ಯನೀತಿಯಡಿಯಲ್ಲಿ ಲಕ್ಷಾಂತರ ಜನರನ್ನು ಅವರ ಮನೆಯಿಂದ ಬಲಾತ್ಕಾರವಾಗಿ ಹೊರದೂಡಲಾಯಿತು.

ಹೆಚ್ಚಿನ ಪೂರ್ವಗ್ರಹವು ಕೊಲೆಗೆ ನಡೆಸುವುದಿಲ್ಲವಾದರೂ, ಇದು ಅನಿವಾರ್ಯವಾಗಿ ಜನರ ಮಧ್ಯೆ ವಿಭಜನೆಯನ್ನು ಉಂಟುಮಾಡುತ್ತದೆ ಮತ್ತು ಹಗೆತನವನ್ನು ಬೆಳೆಸುತ್ತದೆ. ಭೌಗೋಳೀಕರಣದ ಹೊರತಾಗಿಯೂ, ಜಾತೀಯತೆ ಮತ್ತು ಜಾತೀಯ ತಾರತಮ್ಯವು “ಲೋಕದ ಹೆಚ್ಚಿನ ಭಾಗಗಳಲ್ಲಿ ವೃದ್ಧಿಯಾಗುತ್ತಿರುವಂತೆ ತೋರುತ್ತದೆ,” ಎಂದು ಇತ್ತೀಚಿನ ‘ಯೂನೆಸ್ಕೊ’ ವರದಿಯು ತಿಳಿಸುತ್ತದೆ.

ಪೂರ್ವಗ್ರಹವನ್ನು ತೆಗೆದುಹಾಕಲು ಏನನ್ನಾದರೂ ಮಾಡಸಾಧ್ಯವಿದೆಯೆ? ಈ ಪ್ರಶ್ನೆಯನ್ನು ಉತ್ತರಿಸಲು, ಜನರ ಮನಸ್ಸು ಮತ್ತು ಹೃದಯದಲ್ಲಿ ಈ ಪೂರ್ವಗ್ರಹವು ಹೇಗೆ ಬೇರೂರುತ್ತದೆ ಎಂಬುದನ್ನು ನಾವು ಕಂಡುಹಿಡಿಯಬೇಕು. (g04 9/8)

[ಪುಟ 5ರಲ್ಲಿರುವ ಚೌಕ]

ಪೂರ್ವಗ್ರಹದ ಗುಣಲಕ್ಷಣಗಳು

ಗೊರ್ಡನ್‌ ಡಬ್ಲ್ಯೂ. ಆಲ್‌ಪೋರ್ಟ್‌ ಅವರು ಪೂರ್ವಗ್ರಹದ ಸ್ವಭಾವ ಲಕ್ಷಣ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ, ಪೂರ್ವಗ್ರಹದಿಂದ ಉಗಮವಾಗುವ ಐದು ರೀತಿಯ ವರ್ತನೆಯನ್ನು ಎತ್ತಿತೋರಿಸುತ್ತಾರೆ. ಪೂರ್ವಗ್ರಹವುಳ್ಳ ಒಬ್ಬ ವ್ಯಕ್ತಿಯು ಇವುಗಳಲ್ಲಿ ಸಾಮಾನ್ಯವಾಗಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ವರ್ತನೆಯನ್ನು ಪ್ರದರ್ಶಿಸುತ್ತಾನೆ.

1. ನಕಾರಾತ್ಮಕ ಹೇಳಿಕೆಗಳು. ಅವನು ತಾನು ಇಷ್ಟಪಡದ ಗುಂಪಿನ ಕುರಿತು ಹೀನೈಸಿ ಮಾತಾಡುತ್ತಾನೆ.

2. ದೂರವಿರುವುದು. ಆ ಗುಂಪಿಗೆ ಸೇರಿರುವ ಯಾವುದೇ ವ್ಯಕ್ತಿಯಿಂದ ದೂರವಿರುತ್ತಾನೆ.

3. ತಾರತಮ್ಯ. ಕೆಲವು ರೀತಿಯ ಉದ್ಯೋಗ, ವಾಸಸ್ಥಳ, ಅಥವಾ ಸಾಮಾಜಿಕ ಸುಯೋಗಗಳಿಂದ ಆ ಗುಂಪಿನ ಸದಸ್ಯರನ್ನು ಪ್ರತ್ಯೇಕಿಸುತ್ತಾನೆ.

4. ಶಾರೀರಿಕ ಹಲ್ಲೆ. ತಾನು ಹಗೆಮಾಡುವ ಜನರಲ್ಲಿ ಭೀತಿತುಂಬಿಸುವ ಉದ್ದೇಶದಿಂದ ರಚಿಸಲಾಗಿರುವ ಹಿಂಸಾಕೃತ್ಯದಲ್ಲಿ ಭಾಗವಹಿಸುತ್ತಾನೆ.

5. ನಿರ್ಮೂಲನ ಮಾಡುವುದು. ಕೊಲೆಪಾತಕಗಳು, ಹತ್ಯಾಕಾಂಡಗಳು, ಅಥವಾ ನಿರ್ಮೂಲನ ಕಾರ್ಯಕ್ರಮಗಳಲ್ಲಿ ಅವನು ಭಾಗವಹಿಸುತ್ತಾನೆ.

[ಪುಟ 4ರಲ್ಲಿರುವ ಚಿತ್ರ]

ಟಾನ್ಸೇನಿಯದ ಬೆನಾಕೋ ನಿರಾಶ್ರಿತರ ಶಿಬಿರ, ಮೇ 11, 1994

ನೀರಿನ ಕ್ಯಾನ್‌ಗಳ ಬಳಿ ಒಬ್ಬಾಕೆ ಸ್ತ್ರೀ ಕೂತುಕೊಂಡಿದ್ದಾಳೆ. ಸುಮಾರು 3,00,000ಕ್ಕಿಂತಲೂ ಹೆಚ್ಚಿನ ನಿರಾಶ್ರಿತರು ಟಾನ್ಸೇನಿಯವನ್ನು ಪ್ರವೇಶಿಸಿದರು, ಅವರಲ್ಲಿ ಹೆಚ್ಚಿನವರು ರುಆಂಡದ ಹೂಟೂ ಜನರಾಗಿದ್ದರು

[ಕೃಪೆ]

Photo by Paula Bronstein/Liaison