ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಕ್ಕಳು ತೀರ ಚಿಕ್ಕವರಿರುವಾಗಲೇ ತರಬೇತಿನೀಡುವುದು ಎಷ್ಟು ಪ್ರಾಮುಖ್ಯವಾಗಿದೆ?

ಮಕ್ಕಳು ತೀರ ಚಿಕ್ಕವರಿರುವಾಗಲೇ ತರಬೇತಿನೀಡುವುದು ಎಷ್ಟು ಪ್ರಾಮುಖ್ಯವಾಗಿದೆ?

ಮಕ್ಕಳು ತೀರ ಚಿಕ್ಕವರಿರುವಾಗಲೇ ತರಬೇತಿನೀಡುವುದು ಎಷ್ಟು ಪ್ರಾಮುಖ್ಯವಾಗಿದೆ?

ನಲ್ವತ್ತು ವರುಷದವಳಾದ ಫ್ಲಾರೆನ್ಸ್‌, ಒಂದು ಮಗುವಿಗಾಗಿ ತುಂಬ ಹಂಬಲಿಸುತ್ತಿದ್ದಳು. ಆದರೆ ಅವಳು ಗರ್ಭಿಣಿಯಾದಾಗ, ಅವಳಿಗೆ ಹುಟ್ಟಲಿರುವ ಮಗುವು ಕಲಿಕೆಯ ವಿಕಲತೆಯೊಂದಿಗೆ ಹುಟ್ಟುವ ಸಾಧ್ಯತೆಯಿದೆ ಎಂದು ಒಬ್ಬ ವೈದ್ಯನು ಎಚ್ಚರಿಸಿದನು. ಆದರೂ, ಆರೋಗ್ಯವಂತ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯನ್ನು ಅವಳು ಕಳೆದುಕೊಳ್ಳಲಿಲ್ಲ. ಮುಂದಕ್ಕೆ ಆಕೆಯು ತನ್ನ ನಿರೀಕ್ಷೆಯಂತೆ ಒಂದು ಆರೋಗ್ಯವಂತ ಮಗುವಿಗೆ ಜನ್ಮಕೊಟ್ಟಳು.

ಫ್ಲಾರೆನ್ಸ್‌ ತನ್ನ ಮಗನಾದ ಸ್ಟೀವನ್‌ ಜನಿಸಿದ ಸ್ವಲ್ಪ ಸಮಯದಲ್ಲಿಯೇ ಅವನಿಗೆ ಓದಿಹೇಳಲು ಮತ್ತು ಪ್ರತಿಯೊಂದು ಸಂದರ್ಭದಲ್ಲಿ ಅವನೊಂದಿಗೆ ಮಾತಾಡಲು ಆರಂಭಿಸಿದಳು. ಅವನು ದೊಡ್ಡವನಾಗುತ್ತಾ ಬಂದಂತೆ ಅವರು ಒಟ್ಟಾಗಿ ಆಟವಾಡುವುದು, ತಿರುಗಾಡಲು ಹೋಗುವುದು, ಎಣಿಕೆ ಮಾಡಲು ಅಭ್ಯಾಸಿಸುವುದು ಮತ್ತು ಹಾಡುವುದರಂಥ ವಿಷಯಗಳನ್ನು ಮಾಡುತ್ತಿದ್ದರು. “ಅವನಿಗೆ ಸ್ನಾನಮಾಡಿಸುವ ಸಮಯದಲ್ಲಿಯೂ ನಾವು ಯಾವುದಾದರೊಂದು ಆಟವನ್ನು ಆಡುತ್ತಿದ್ದೆವು” ಎಂಬುದಾಗಿ ಅವಳು ಜ್ಞಾಪಿಸಿಕೊಳ್ಳುತ್ತಾಳೆ. ಈ ಎಲ್ಲಾ ಪ್ರಯತ್ನಗಳು ಸಾರ್ಥಕವಾದವು.

ಸ್ಟೀವನ್‌ ಇನ್ನೂ ಹದಿನಾಲ್ಕು ವರುಷದವನಾಗಿದ್ದಾಗಲೇ ಮಿಅಮೀ ವಿಶ್ವವಿದ್ಯಾನಿಲಯದಿಂದ ವಿಶೇಷ ಅಂಕೆಯನ್ನು ಗಳಿಸಿ ಪದವೀಧರನಾದನು. ಎರಡು ವರುಷಗಳ ಅನಂತರ, ಅಂದರೆ 16 ವರುಷ ಪ್ರಾಯದಲ್ಲಿ ಅವನು ಕಾನೂನು ಶಾಲೆಯಲ್ಲಿ ಓದಿ ಮುಗಿಸಿದನು ಮತ್ತು ಅವನ ಜೀವನ ಚರಿತ್ರೆಗನುಸಾರ ತದನಂತರ ಅವನು ಅಮೆರಿಕದಲ್ಲಿಯೇ ಅತಿ ಚಿಕ್ಕ ಪ್ರಾಯದ ವಕೀಲನಾದನು. ಅವನ ತಾಯಿ ಡಾ. ಫ್ಲಾರೆನ್ಸ್‌ ಬ್ಯಾಕ್ಕಸ್‌​—⁠ಮಾಜಿ ಶಿಕ್ಷಕಿ ಮತ್ತು ನಿವೃತ್ತ ಮಾರ್ಗದರ್ಶನಾ ಸಲಹೆಗಾರ್ತಿ​—⁠ಮಕ್ಕಳಿಗೆ ಅವರ ಆರಂಭದ ವರುಷಗಳಲ್ಲಿಯೇ ಕಲಿಸುವುದರ ಕುರಿತಾಗಿ ಅಧ್ಯಯನಮಾಡಲು ಬಹಳಷ್ಟು ಸಮಯವನ್ನು ವ್ಯಯಿಸಿದ್ದಳು. ಈ ಅಧ್ಯಯನದ ಮೂಲಕ ಅವಳಿಗೆ ಒಂದು ವಿಷಯವು ಖಚಿತವಾಯಿತು: ತನ್ನ ಮಗನು ತೀರ ಚಿಕ್ಕವನಿರುವಾಗಲೇ ತಾನು ಅವನಿಗೆ ನೀಡಿದ ಗಮನ ಮತ್ತು ಪ್ರಚೋದನೆಯು ಅವನ ಭವಿಷ್ಯವನ್ನು ಬದಲಾಯಿಸಿತು.

ಆನುವಂಶೀಯವೋ ಅಥವಾ ಪೋಷಣೆಯೋ?

ಮಗುವಿನ ಬೆಳವಣಿಗೆಯಲ್ಲಿ “ಆನುವಂಶೀಯ” ವಿಷಯಗಳು ಅಂದರೆ ಮಗುವು ಹುಟ್ಟುವಾಗಲೇ ಪಡೆದುಕೊಂಡು ಬಂದಿರುವ ವಿಷಯಗಳು ಪ್ರಭಾವವನ್ನು ಬೀರುತ್ತವೋ ಅಥವಾ “ಪೋಷಣೆ” ಅಂದರೆ ಮಗುವನ್ನು ಬೆಳೆಸುವ ಮತ್ತು ಅದಕ್ಕೆ ತರಬೇತಿನೀಡುವ ವಿಷಯಗಳು ಪ್ರಭಾವವನ್ನು ಬೀರುತ್ತವೋ ಎಂಬುದು ಮಕ್ಕಳ ಮನಶ್ಶಾಸ್ತ್ರಜ್ಞರ ಮಧ್ಯದಲ್ಲಿ ಒಂದು ಪ್ರಾಮುಖ್ಯವಾದ ವಿವಾದದ ಸಂಗತಿಯಾಗಿದೆ. ಮಗುವಿನ ಬೆಳವಣಿಗೆಯು ಈ ಎರಡೂ ಅಂಶಗಳಿಂದ ಪ್ರಭಾವಿಸಲ್ಪಡುತ್ತದೆ ಎಂಬುದು ಹೆಚ್ಚಿನ ಸಂಶೋಧಕರಿಗೆ ಮನವರಿಕೆಯಾಗಿದೆ.

ಮಕ್ಕಳ ಬೆಳವಣಿಗೆ ತಜ್ಞರಾದ ಡಾ. ಜೆ. ಫ್ರೇಜರ್‌ ಮಸ್ಟರ್ಡ್‌ ವಿವರಿಸುವುದು: “ಮಗು ತನ್ನ ಜೀವನದ ಆರಂಭದ ವರುಷಗಳಲ್ಲಿ ಅನುಭವಿಸಿರುವ ವಿಷಯಗಳೇ ಅದರ ಮಿದುಳಿನ ಬೆಳವಣಿಗೆಯನ್ನು ಪ್ರಭಾವಿಸುತ್ತವೆ ಎಂಬುದನ್ನು ನಾವೀಗ ಕಂಡುಕೊಂಡಿದ್ದೇವೆ.” ಅಂತೆಯೇ ಪ್ರೊಫೆಸರ್‌ ಸೂಸನ್‌ ಗ್ರೀನ್‌ಫೀಲ್ಡ್‌ ತಿಳಿಸುವುದು: “ಉದಾಹರಣೆಗೆ ನಮಗೆ ತಿಳಿದಿರುವಂತೆ, ಪಿಟೀಲು ವಾದಕರ ಎಡ ಕೈಯ ಬೆರಳುಗಳ ಚಲನೆಗೆ ಬೇಕಾಗಿರುವ ಮಿದುಳಿನ ಕ್ಷೇತ್ರವು ಇತರರದ್ದಕ್ಕಿಂತ ಹೆಚ್ಚು ವಿಸ್ತಾರವಾಗಿದೆ.”

ಯಾವ ತರಬೇತಿಯನ್ನು ನೀಡಬೇಕು?

ಈ ಸಂಶೋಧನೆಯ ಫಲಿತಾಂಶಕ್ಕೆ ಪ್ರತಿಕ್ರಿಯೆಯಲ್ಲಿ, ಅನೇಕ ಹೆತ್ತವರು ತಮ್ಮ ಮಕ್ಕಳನ್ನು ಅತ್ಯುತ್ತಮವಾದ ಶಿಶುವಿಹಾರಗಳಿಗೆ ಕಳುಹಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡುವುದು ಮಾತ್ರವಲ್ಲ ಸಂಗೀತ ಮತ್ತು ಚಿತ್ರಕಲೆಯನ್ನು ಕಲಿಸಲು ಸಹ ಬಹಳಷ್ಟು ಹಣವನ್ನು ವ್ಯಯಿಸುತ್ತಾರೆ. ಮಗು ಎಲ್ಲಾ ವಿಷಯಗಳನ್ನು ಅಭ್ಯಾಸಮಾಡುವುದಾದರೆ, ದೊಡ್ಡವನಾದ ಮೇಲೆ ಎಲ್ಲಾ ವಿಷಯಗಳನ್ನು ಮಾಡಲು ಅವನು ಶಕ್ತನಾಗಿರುತ್ತಾನೆ ಎಂದು ಕೆಲವರು ನಂಬುತ್ತಾರೆ. ವಿಶೇಷ ವ್ಯಾಸಂಗ ಕಾರ್ಯಕ್ರಮಗಳು ಮತ್ತು ಶಿಶುವಿಹಾರಗಳು ಹೆಚ್ಚಾಗುತ್ತಿವೆ. ಕೆಲವು ಹೆತ್ತವರು ತಮ್ಮ ಮಕ್ಕಳನ್ನು ಇತರರಿಗಿಂತ ಉತ್ತಮಸ್ಥಿತಿಯಲ್ಲಿಡಲು ತಮ್ಮಿಂದ ಸಾಧ್ಯವಾದದ್ದೆಲ್ಲವನ್ನು ಮಾಡಲು ಮುಂಬರುತ್ತಾರೆ.

ಈ ರೀತಿಯ ಪ್ರಯತ್ನಗಳು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿ ಪರಿಣಮಿಸುತ್ತವೋ? ಈ ರೀತಿಯ ಪೋಷಣೆಯು ಮಕ್ಕಳಿಗೆ ಅಮಿತವಾದ ಸದವಕಾಶಗಳನ್ನು ನೀಡಬಹುದಾದರೂ, ಹೆಚ್ಚಿನ ಸಂದರ್ಭಗಳಲ್ಲಿ ಇಂಥ ಮಕ್ಕಳು, ಅನಿರ್ಬಂಧಿತ ರೀತಿಯಲ್ಲಿ ಆಟವಾಡುವ ಮೂಲಕ ದೊರಕುವ ಕಲಿಯುವ ಅನುಭವದ ಪ್ರಾಮುಖ್ಯ ಅಂಶವನ್ನು ಕಳೆದುಕೊಳ್ಳುತ್ತಾರೆ. ಮಕ್ಕಳು ಸಹಜವಾಗಿ ಆಡುವ ಆಟವು ಅವರ ಸೃಜನಶೀಲತೆಯನ್ನು ಪ್ರಚೋದಿಸುತ್ತದೆ ಮತ್ತು ಮಗುವಿನ ಸಾಮಾಜಿಕ, ಮಾನಸಿಕ ಹಾಗೂ ಭಾವನಾತ್ಮಕ ಕೌಶಲಗಳನ್ನು ವಿಕಸಿಸುತ್ತದೆ ಎಂದು ಶಿಕ್ಷಕರು ತಿಳಿಸುತ್ತಾರೆ.

ಮಕ್ಕಳ ಬೆಳವಣಿಗೆಗೆ ಸಂಬಂಧಿಸಿದ ಕೆಲವು ತಜ್ಞರು ನಂಬುವುದೇನೆಂದರೆ, ಹೆತ್ತವರಿಂದ ವ್ಯವಸ್ಥಾಪಿಸಲ್ಪಟ್ಟ ಆಟಗಳು ಹೊಸ ರೀತಿಯ ಸಮಸ್ಯೆಯನ್ನು ಮಕ್ಕಳಲ್ಲಿ ಉಂಟುಮಾಡುತ್ತವೆ. ಒತ್ತಡಭರಿತರೂ ಭಾವನಾತ್ಮಕವಾಗಿ ಅಸ್ಥಿರರೂ ಆಗಿರುವ, ನಿದ್ರಿಸಲು ಅಶಕ್ತರಾಗಿರುವ ಮತ್ತು ಯಾವಾಗಲೂ ಅಲ್ಲಿ ನೋವು ಇಲ್ಲಿ ನೋವು ಎಂದು ಹೇಳುತ್ತಿರುವ ಮೈಕ್ರೋಮ್ಯಾನೇಜ್ಡ್‌ ಮಕ್ಕಳನ್ನು, ಅಂದರೆ ಪ್ರತಿಯೊಂದು ಚಲನವಲನವು ಹೆತ್ತವರಿಂದ ವ್ಯವಸ್ಥಾಪಿಸಲ್ಪಡುವಂಥ ಮಕ್ಕಳನ್ನು ಇದು ಉಂಟುಮಾಡುತ್ತದೆ. ಇಂಥ ಮಕ್ಕಳಲ್ಲಿ ಅನೇಕರು ತಮ್ಮ ಹದಿವಯಸ್ಸನ್ನು ಮುಟ್ಟುವಷ್ಟರಲ್ಲಿ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯಗಳನ್ನು ವಿಕಸಿಸಿಕೊಂಡಿರುವುದಿಲ್ಲ ಮತ್ತು “ಶಾರೀರಿಕವಾಗಿಯೂ ಭಾವನಾತ್ಮಕವಾಗಿಯೂ ಸೋತಿರುತ್ತಾರೆ, ಸಮಾಜವಿರೋಧಿಗಳೂ ದಂಗೆಕೋರರೂ ಆಗಿರುತ್ತಾರೆ” ಎಂದು ಒಬ್ಬ ಮನಶ್ಶಾಸ್ತ್ರಜ್ಞರು ತಿಳಿಸುತ್ತಾರೆ.

ಹೀಗಿರಲಾಗಿ ಅನೇಕ ಹೆತ್ತವರು ಒಂದು ವಿಷಮ ಸ್ಥಿತಿಯಲ್ಲಿದ್ದಾರೆ. ತಮ್ಮ ಮಕ್ಕಳು ಪರಿಪೂರ್ಣ ಮಟ್ಟವನ್ನು ತಲಪಬೇಕೆಂದು ಅವರು ಬಯಸುತ್ತಾರೆ. ಹಾಗಿದ್ದರೂ, ಚಿಕ್ಕ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಮುಂದೂಡುವುದರಿಂದ ಆಗುವ ತಪ್ಪನ್ನು ಅವರು ಮನಗಾಣುತ್ತಾರೆ. ಸೂಕ್ತವಾದ ಸಮತೂಕವನ್ನು ಕಂಡುಕೊಳ್ಳುವ ವಿಧವೇನಾದರೂ ಇದೆಯೋ? ಬೆಳವಣಿಗೆಗಾಗಿ ಚಿಕ್ಕ ಮಕ್ಕಳಲ್ಲಿ ಯಾವ ಸಾಮರ್ಥ್ಯವಿರುತ್ತದೆ ಮತ್ತು ಅದನ್ನು ಹೇಗೆ ಬೆಳೆಸಸಾಧ್ಯವಿದೆ? ತಮ್ಮ ಮಕ್ಕಳು ಮುಂದಕ್ಕೆ ಯಶಸ್ವಿಯನ್ನು ಪಡೆದುಕೊಳ್ಳುವಂತೆ ಹೆತ್ತವರು ಏನು ಮಾಡಸಾಧ್ಯವಿದೆ? ಈ ಪ್ರಶ್ನೆಗಳನ್ನು ಮುಂದಿನ ಲೇಖನಗಳು ಪರಿಗಣಿಸುತ್ತವೆ. (g04 10/22)

[ಪುಟ 3ರಲ್ಲಿರುವ ಚಿತ್ರ]

ಆರಂಭದ ವರುಷಗಳಲ್ಲಾಗುವ ಅನುಭವಗಳು ಮಗುವಿನ ಮಿದುಳಿನ ಬೆಳವಣಿಗೆಯನ್ನು ಪ್ರಭಾವಿಸುತ್ತವೆ

[ಪುಟ 4ರಲ್ಲಿರುವ ಚಿತ್ರ]

ಆಟವು ಸೃಜನಶೀಲತೆಯನ್ನು ಪ್ರಚೋದಿಸುತ್ತದೆ ಮತ್ತು ಮಗುವಿನ ಕೌಶಲಗಳನ್ನು ವಿಕಸಿಸುತ್ತದೆ