ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆತ್ತವರಾದ ನಿಮ್ಮ ಪಾತ್ರ

ಹೆತ್ತವರಾದ ನಿಮ್ಮ ಪಾತ್ರ

ಹೆತ್ತವರಾದ ನಿಮ್ಮ ಪಾತ್ರ

“ತನ್ನನ್ನು ಪ್ರೀತಿಸಲಾಗುತ್ತದೆ, ತಾನೂ ಕುಟುಂಬದ ಭಾಗವಾಗಿದ್ದೇನೆ ಎಂಬ ಭಾವನೆಯನ್ನು ಮತ್ತು ಉದ್ದೇಶ ಹಾಗೂ ಕುತೂಹಲವನ್ನು ನೀವು ಮಗುವಿನ ಮನಸ್ಸಿನಲ್ಲಿ ಮೂಡಿಸಿದರೆ ಆಗ ಅದರ ಮಿದುಳಿನ ಬೆಳವಣಿಗೆಯಾಗುತ್ತದೆ,” ಎಂದು ಹಾರ್ವಡ್‌ ಮೆಡಿಕಲ್‌ ಸ್ಕೂಲ್‌ನ ಪೀಟರ್‌ ಗಾರ್‌ಸ್ಕೀ ತಿಳಿಸುತ್ತಾರೆ. ಅವರು ಮುಂದುವರಿಸುವುದು: “ಹೆತ್ತವರಾದ ನಮ್ಮ ಪಾತ್ರವು, ಮಿದುಳು ಪೂರ್ಣವಾಗಿ ಕ್ರಿಯೆಗೈಯುವಂತೆ ಮಾಡುವುದು ಮಾತ್ರವಲ್ಲ ಮಗುವನ್ನು ಆರೋಗ್ಯಕರ, ಸ್ವಸ್ಥಬುದ್ಧಿಯ ಹಾಗೂ ಪರಿಗಣನೆಯುಳ್ಳ ಒಬ್ಬ ವ್ಯಕ್ತಿಯನ್ನಾಗಿ ಬೆಳೆಸುವುದೇ ಆಗಿದೆ.”

ಒಬ್ಬ ಹೆತ್ತವರಾಗಿರುವ ನಿಮಗೆ, ನಿಮ್ಮ ಮಗು ಇತರರ ಕಡೆಗೆ ಪರಿಗಣನೆಯನ್ನು ತೋರಿಸುವಂಥ ನೈತಿಕವಾದ ಉತ್ತಮ ವ್ಯಕ್ತಿಯಾಗಿ ಬೆಳೆಯುವುದನ್ನು ನೋಡುವುದು ಎಷ್ಟು ಸಂತೃಪ್ತಿಕರ ಸಂಗತಿಯಾಗಿದೆ! ಇಂತಹ ಫಲಿತಾಂಶವನ್ನು ನೀವು ಪಡೆಯಬೇಕಾದರೆ, ನಿಮ್ಮ ಮಗುವಿಗೆ ನೀವು ಒಂದು ಮಾದರಿಯಾಗಿ, ಒಬ್ಬ ಒಡನಾಡಿಯಾಗಿ, ಸಂವಾದಕರಾಗಿ ಮತ್ತು ಶಿಕ್ಷಕರಾಗಿ ತೆಗೆದುಕೊಳ್ಳುವ ಪ್ರಥಮ ಹೆಜ್ಜೆಯ ಮೇಲೆ ಹೆಚ್ಚಿನದ್ದು ಅವಲಂಬಿಸಿದೆ. ನೈತಿಕವಾಗಿ ಸರಿಯಾಗಿ ಕ್ರಿಯೆಗೈಯುವ ಸಾಮರ್ಥ್ಯದೊಂದಿಗೆ ಎಲ್ಲಾ ಮಕ್ಕಳು ಹುಟ್ಟಿರುತ್ತಾರಾದರೂ, ಅವರು ಬೆಳೆಯುತ್ತಾ ಇರುವಾಗ ಹೆತ್ತವರು ಅವರಿಗೆ ನೈತಿಕ ಮಟ್ಟಗಳನ್ನು ಹಂತಹಂತವಾಗಿ ತಿಳಿಸುತ್ತಾ ಬರಬೇಕು.

ಮಕ್ಕಳನ್ನು ಯಾರು ರೂಪಿಸುತ್ತಾರೆ?

ಮಕ್ಕಳನ್ನು ರೂಪಿಸುವುದರಲ್ಲಿ ಯಾರು ಹೆಚ್ಚಿನ ಪ್ರಭಾವವನ್ನು ಬೀರುತ್ತಾರೆ ಎಂಬ ವಿಷಯದಲ್ಲಿ ಸಂಶೋಧಕರು ವಿವಿಧ ಅಭಿಪ್ರಾಯವುಳ್ಳವರಾಗಿದ್ದಾರೆ. ಕೆಲವರು, ಮಕ್ಕಳು ಮುಖ್ಯವಾಗಿ ತಮ್ಮ ಸಮವಯಸ್ಕರಿಂದ ರೂಪಿಸಲ್ಪಡುತ್ತಾರೆ ಎಂದು ನಂಬುತ್ತಾರೆ. ಹಾಗಿದ್ದರೂ, ಮಗುವಿನ ಆರಂಭದ ವರುಷಗಳಲ್ಲಿ ಹೆತ್ತವರು ನೀಡುವ ಅನುಭೂತಿಭರಿತ ಪೋಷಣೆಯನ್ನು ಕಡೆಗಣಿಸಲಾಗುವುದಿಲ್ಲ ಎಂಬುದಾಗಿ ಮಕ್ಕಳ ಬೆಳವಣಿಗೆಯ ಕ್ಷೇತ್ರದಲ್ಲಿ ವಿಶೇಷಜ್ಞರಾಗಿರುವ ಡಾ. ಟಿ. ಬೆರೀ ಬ್ರೇಜಿಲ್ಟನ್‌ ಮತ್ತು ಡಾ. ಸ್ಟ್ಯಾನ್ಲೀ ಗ್ರೀನ್‌ಸ್ಪ್ಯಾನ್‌ ತಿಳಿಸುತ್ತಾರೆ.

ಮುಂದೆ ಜೀವಿತದಲ್ಲಿ ಸಿಗಲಿರುವ ಅನುಭವಗಳು ಮತ್ತು ಸಮವಯಸ್ಕರ ಪ್ರಭಾವವು ಒಂದು ಮಗುವಿನ ಆರಂಭದ ಬೆಳವಣಿಗೆಗೆ ಕೂಡಿಕೆಯಾಗಿದೆ. ಕುಟುಂಬ ವೃತ್ತದಲ್ಲಿಯೇ ಮಕ್ಕಳಿಗೆ ಕನಿಕರವನ್ನು ತೋರಿಸುವುದು ಮತ್ತು ಅದನ್ನು ಅರ್ಥಮಾಡಿಕೊಳ್ಳುವುದು ಪ್ರಾಮುಖ್ಯವಾಗಿದೆ. ಅಷ್ಟುಮಾತ್ರವಲ್ಲದೆ, ತಮ್ಮ ಭಾವನೆಗಳನ್ನು ಪ್ರೌಢ ರೀತಿಯಲ್ಲಿ ಹೇಗೆ ನಿಭಾಯಿಸುವುದು ಎಂಬುದನ್ನು ಮಕ್ಕಳಿಗೆ ಕಲಿಸುವುದೂ ಅಗತ್ಯವಾಗಿದೆ. ಈ ರೀತಿಯ ನೆರವನ್ನು ಪಡೆದುಕೊಂಡಿರುವ ಮಕ್ಕಳು ಇತರರೊಂದಿಗೆ ಸಹಕರಿಸುವ ಮನೋಭಾವದಿಂದ, ಕನಿಕರದಿಂದ ಮತ್ತು ಅನುಭೂತಿಯಿಂದ ಕೆಲಸಮಾಡಲು ಉತ್ತಮವಾಗಿ ಸಿದ್ಧರಿರುತ್ತಾರೆ.

ಶಿಶುಗಳಾಗಿದ್ದಾಗಲೇ ಮಕ್ಕಳಿಗೆ ತರಬೇತಿನೀಡುವುದು ಒಂದು ಕಠಿನ ಕೆಲಸವಾಗಿದೆ. ಈ ಕೆಲಸದಲ್ಲಿ ನೀವು ಯಶಸ್ವಿಯಾಗಬೇಕಾದರೆ​—⁠ಅದರಲ್ಲೂ ಮುಖ್ಯವಾಗಿ ನೀವೊಬ್ಬ ಹೊಸ ಹೆತ್ತವರಾಗಿರುವಲ್ಲಿ​—⁠ಹೆಚ್ಚು ಅನುಭವವಿರುವ ಇತರರಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಮತ್ತು ಅನಂತರ ಒಂದು ನಿರ್ದಿಷ್ಟ ಮಾರ್ಗಕ್ರಮವನ್ನು ಅನುಕರಿಸುವುದು ವಿವೇಕದ ಮಾರ್ಗವಾಗಿದೆ. ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಪ್ರವೀಣರು ಅಸಂಖ್ಯಾತ ಪುಸ್ತಕಗಳನ್ನು ಬರೆದಿದ್ದಾರೆ. ಅನೇಕವೇಳೆ ಅವರು ಏನನ್ನು ಹೇಳುತ್ತಾರೋ ಅದು ಬೈಬಲಿನಲ್ಲಿ ಅಡಕವಾಗಿರುವ ನಂಬಲರ್ಹವಾದ ಸಲಹೆಗೆ ಹೊಂದಿಕೆಯಲ್ಲಿದೆ. ದೇವರ ವಾಕ್ಯದಲ್ಲಿರುವ ನಂಬಲರ್ಹವಾದ ಮೂಲತತ್ತ್ವಗಳನ್ನು ಅನ್ವಯಿಸುವುದು ಹೆತ್ತವರು ತಮ್ಮ ಮಕ್ಕಳನ್ನು ಪರಿಣಾಮಕಾರಿಯಾಗಿ ಪೋಷಿಸುವಂತೆ ಸಹಾಯಮಾಡಿದೆ. ಮುಂದಿರುವ ಪ್ರಾಯೋಗಿಕ ನಿರ್ದೇಶನವನ್ನು ಪರಿಗಣಿಸಿರಿ.

ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಉದಾರಿಗಳಾಗಿರಿ

ಮಕ್ಕಳು, ಕ್ರಮವಾದ ಪ್ರೀತಿಪರ ಗಮನವನ್ನು ಕೊಟ್ಟು ಪೋಷಿಸುವಾಗ ಹುಲುಸಾಗಿ ಬೆಳೆಯುವ ಎಳೆಯ ಸಸಿಯಂತಿದ್ದಾರೆ. ನೀರು ಮತ್ತು ಸೂರ್ಯನ ಕಿರಣವು ಎಳೆಯ ಸಸಿಯನ್ನು ಪೋಷಿಸುತ್ತದೆ ಹಾಗೂ ಆರೋಗ್ಯಕರವಾಗಿ ಬೆಳೆಯುವಂತೆ ಮತ್ತು ಸ್ಥಿರವಾಗಿರುವಂತೆ ಮಾಡುತ್ತದೆ. ಅಂತೆಯೇ, ಪ್ರೀತಿಯ ಮಾತುಗಳ ಮತ್ತು ಕ್ರಿಯೆಗಳ ಮೂಲಕ ತಮ್ಮ ಮಕ್ಕಳಿಗೆ ಮಮತೆಯನ್ನು ಸುರಿಸುವ ಹೆತ್ತವರು ಅವರನ್ನು ಪೋಷಿಸುತ್ತಾರೆ, ಮಾತ್ರವಲ್ಲ ಅವರ ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಯನ್ನೂ ಸ್ಥಿರತೆಯನ್ನೂ ಪ್ರಚೋದಿಸುತ್ತಾರೆ.

ಬೈಬಲ್‌ ಸರಳವಾಗಿ ಹೇಳುವುದು: “ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.” (1 ಕೊರಿಂಥ 8:⁠1) ತಮ್ಮ ಮಕ್ಕಳಿಗೆ ಪ್ರೀತಿಯನ್ನು ತೋರಿಸುವುದರಲ್ಲಿ ಉದಾರಿಗಳಾಗಿರುವ ಹೆತ್ತವರು ತಮ್ಮ ಸೃಷ್ಟಿಕರ್ತನಾದ ಯೆಹೋವ ದೇವರನ್ನು ಅನುಕರಿಸುತ್ತಾರೆ. ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ಅವನಿಗೆ ತನ್ನ ತಂದೆಯ ವಾಣಿಯು ಕೇಳಿಸಿತೆಂದು ಬೈಬಲ್‌ ತಿಳಿಸುತ್ತದೆ. ಆ ವಾಣಿಯ ಮೂಲಕ ಅವನ ತಂದೆಯು, ತನ್ನ ಮೆಚ್ಚಿಗೆಯನ್ನು ಮತ್ತು ಮಗನ ಕಡೆಗಿರುವ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದನು. ಯೇಸು ಒಬ್ಬ ವಯಸ್ಕನಾಗಿದ್ದರೂ ಅದು ಅವನಿಗೆ ಎಷ್ಟೊಂದು ಪುನರಾಶ್ವಾಸನೆಯನ್ನು ನೀಡಿದ್ದಿರಬೇಕು!​—⁠ಲೂಕ 3:22.

ನೀವು ತೋರಿಸುವ ಪ್ರೀತಿ, ನಿದ್ರಿಸುವ ಮುನ್ನ ನೀವು ಓದಿಹೇಳುವ ಕಥೆಗಳು ಮತ್ತು ಅವರೊಂದಿಗೆ ನೀವು ಆಡುವ ಆಟಗಳು ನಿಮ್ಮ ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಪ್ರಾಮುಖ್ಯ ಅಂಶಗಳಾಗಿವೆ. ‘ಮಗುವು ಮಾಡುವ ಪ್ರತಿಯೊಂದು ಕೆಲಸವು ಅದು ಬೆಳೆಸಿಕೊಳ್ಳುವ ಅನುಭವವಾಗಿರುತ್ತದೆ. ಒಂದುವೇಳೆ ಒಂದು ಮಗುವು ಅಂಬೆಗಾಲಿಡಲು ಕಲಿಯುತ್ತಿರುವುದಾದರೆ, ನೀವು ಹೇಗೆ ಉತ್ತೇಜನನೀಡುತ್ತೀರಿ ಮತ್ತು ಪ್ರತಿಕ್ರಿಯಿಸುತ್ತೀರಿ ಎಂಬುದು ಪ್ರಾಮುಖ್ಯವಾಗಿದೆ’ ಎಂದು ಡಾ. ಜೆ. ಫ್ರೇಜರ್‌ ಮಸ್ಟರ್ಡ್‌ ತಿಳಿಸುತ್ತಾರೆ. ಹೆತ್ತವರಾದ ನಿಮ್ಮ ಪ್ರೀತಿ ಮತ್ತು ಗಮನವು ನಿಮ್ಮ ಮಗುವು ಉತ್ತಮವಾಗಿ ಬೆಳೆಯಲಿಕ್ಕಾಗಿಯೂ ಒಬ್ಬ ಜವಾಬ್ದಾರಿಯುತ ಹಾಗೂ ಪ್ರೌಢ ವಯಸ್ಕನಾಗಲಿಕ್ಕಾಗಿಯೂ ಒಂದು ಸ್ಥಿರವಾದ ಅಸ್ತಿವಾರವನ್ನು ಹಾಕುತ್ತದೆ.

ಒಡನಾಡಿ ಮತ್ತು ಸಂವಾದಕ

ನಿಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯುವುದು ಒಂದು ಬಂಧವನ್ನು ಬೆಸೆಯುತ್ತದೆ. ಅಷ್ಟುಮಾತ್ರವಲ್ಲದೆ, ಅದು ಸಂವಾದನಾತ್ಮಕ ಕೌಶಲವನ್ನು ಹೆಚ್ಚಿಸುತ್ತದೆ. ಮನೆಯಲ್ಲಿ, ಇತರ ಸ್ಥಳಗಳಲ್ಲಿ ಮತ್ತು ಪ್ರತಿಯೊಂದು ಸೂಕ್ತ ಸಮಯದಲ್ಲಿಯೂ ಈ ಆಪ್ತತೆಯನ್ನು ಬೆಸೆಯಬೇಕೆಂದು ಶಾಸ್ತ್ರವಚನಗಳು ಉತ್ತೇಜಿಸುತ್ತವೆ.​—⁠ಧರ್ಮೋಪದೇಶಕಾಂಡ 6:​6, 7; 11:​18-21.

ಹೆತ್ತವರು ತಮ್ಮ ಮಕ್ಕಳೊಂದಿಗೆ ಕಳೆಯುವ ಸಮಯವು, ಬೆಲೆಬಾಳುವ ಆಟದ ಸಾಮಾನುಗಳಿಗಿಂತಲೂ ಅಥವಾ ಯಾವುದೇ ನಿರ್ದಿಷ್ಟ ಚಟುವಟಿಕೆಗಿಂತಲೂ ಎಷ್ಟೋ ಹೆಚ್ಚು ಪ್ರಾಮುಖ್ಯವಾಗಿದೆ. ದುಬಾರಿಯಲ್ಲದ ಮತ್ತು ಪ್ರತಿದಿನದ ಚಟುವಟಿಕೆಗಳು ನಿಮ್ಮ ಮಕ್ಕಳೊಂದಿಗೆ ಸಂವಾದಿಸಲು ಸಂದರ್ಭಗಳನ್ನು ಒದಗಿಸಬಲ್ಲವು. ಉದಾಹರಣೆಗೆ, ನಿಸರ್ಗವನ್ನು ವೀಕ್ಷಿಸಲು ಅವರೊಂದಿಗೆ ಪಾರ್ಕಿಗೆ ಹೋಗುವುದು ತಾನೇ ಅರ್ಥಪೂರ್ಣವಾದ ಪ್ರಶ್ನೆಗಳನ್ನು ಕೇಳಲು ಮತ್ತು ಸಂವಾದವನ್ನು ಹೆಚ್ಚಿಸಲು ಹೆತ್ತವರಿಗೆ ಒಂದು ಸೂಕ್ತ ಸಂದರ್ಭವನ್ನು ಒದಗಿಸಬಲ್ಲದು.

“ಕುಣಿದಾಡುವ ಸಮಯ”ವಿದೆ ಎಂಬುದಾಗಿ ಶಾಸ್ತ್ರವಚನಗಳು ತಿಳಿಸುತ್ತವೆ. (ಪ್ರಸಂಗಿ 3:​1, 4) ಹೌದು, ಮಗುವು ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಕೌಶಲಗಳನ್ನು ಬೆಳೆಸಿಕೊಳ್ಳಲು, ನಿಶ್ಚಿಂತೆಯಿಂದ ಆಡುವ ಆಟಗಳು ಬಹಳ ಆವಶ್ಯಕ. ಡಾ. ಮಸ್ಟರ್ಡ್‌ಗನುಸಾರ, ಆಟವು ಕೇವಲ ಬೆಲೆಯುಳ್ಳದ್ದು ಮಾತ್ರವಲ್ಲ ಅತ್ಯಾವಶ್ಯಕವಾದದ್ದೂ ಆಗಿದೆ. ಅವರು ಹೇಳುವುದು: “ಮಕ್ಕಳು ತಮ್ಮ ಮಿದುಳಿನಲ್ಲಿ, ಎಲ್ಲಾ ರೀತಿಯ ಕ್ರಿಯೆಗಳಿಗೆ ಸಹಾಯಕವಾಗಿರುವ ನರತಂತು ಸಂಬಂಧಿ ಕ್ರಿಯೆಯನ್ನು ಬೆಳೆಸಿಕೊಳ್ಳುವುದು ಮುಖ್ಯವಾಗಿ ಆಟದ ಮೂಲಕವಾಗಿಯೇ.” ಮಗುವು ಸ್ವತಃ ಆಡುವ ಆಟದಲ್ಲಿ ಉಪಯೋಗಿಸುವ ಖಾಲಿ ಡಬ್ಬದಂಥ ಆಟದ ಸಾಮಾನುಗಳು ತೀರ ಸರಳವಾದದ್ದಾಗಿರಬಲ್ಲದು. ಆದರೂ, ಮನೆಯಲ್ಲಿರುವ ಇಂತಹ ಸಾಮಾನ್ಯ ಆಟದ ಸಾಮಾನುಗಳು, ಉಚ್ಚ ತಂತ್ರಜ್ಞಾನದ ಬೆಲೆಬಾಳುವ ಆಟದ ಸಾಮಾನುಗಳು ನೀಡುವಷ್ಟೇ ಸಂತೋಷವನ್ನು ನೀಡುತ್ತವೆ. *

ವಯಸ್ಕರಿಂದ ನಿರ್ದೇಶಿಸಲ್ಪಟ್ಟ ಅಸಂಖ್ಯಾತ ಚಟುವಟಿಕೆಗಳಿಂದ ಮಕ್ಕಳನ್ನು ಕಾರ್ಯಮಗ್ನರನ್ನಾಗಿಡುವುದು ಅವರ ಕಲ್ಪನಾಶಕ್ತಿ ಮತ್ತು ಸೃಜನಶೀಲತೆಯನ್ನು ಕುಂಠಿತಗೊಳಿಸುತ್ತದೆ. ಆದುದರಿಂದ, ಸಮತೂಕವು ಅತ್ಯಾವಶ್ಯಕ. ನಿಮ್ಮ ಮಗುವು ತನ್ನ ಸ್ವಂತ ಪುಟ್ಟ ಜಗತ್ತನ್ನು ಪರಿಶೋಧಿಸುವಂತೆ ಮತ್ತು ತನ್ನ ಸ್ವಂತ ಸಾಮರ್ಥ್ಯವನ್ನು ಪರೀಕ್ಷಿಸುವಂತೆ ಅನುಮತಿಸಿರಿ. ಅನೇಕಬಾರಿ ಮಕ್ಕಳು ತಮ್ಮ ಮನರಂಜಿಸಿಕೊಳ್ಳಲು ತಾವಾಗಿಯೇ ಏನನ್ನಾದರೂ ಕಂಡುಕೊಳ್ಳುತ್ತಾರೆ. ಆದರೆ ಇದು, ನಿಮ್ಮ ಮಗುವು ಸ್ವತಃ ಹಾನಿಮಾಡಿಕೊಳ್ಳದಂತೆ ನೋಡಿಕೊಳ್ಳಲಿಕ್ಕಾಗಿ ಅವನು ಏನು ಮಾಡುತ್ತಿದ್ದಾನೆ ಮತ್ತು ಎಲ್ಲಿ ಆಟವಾಡುತ್ತಿದ್ದಾನೆ ಎಂಬುದನ್ನು ತಿಳಿದುಕೊಳ್ಳುವ ನಿಮ್ಮ ಜವಾಬ್ದಾರಿಯಿಂದ ನಿಮ್ಮನ್ನು ಮುಕ್ತಗೊಳಿಸುವುದಿಲ್ಲ.

ಸಮಯವನ್ನು ಬದಿಗಿಡಿರಿ

ಮಕ್ಕಳನ್ನು ಪೋಷಿಸುವದರಲ್ಲಿ ಮತ್ತು ಉತ್ತಮವಾಗಿ ಹೊಂದಿಕೊಳ್ಳುವಂತೆ ಬೆಳೆಸುವದರಲ್ಲಿ ಬೋಧಿಸುವುದು ಮುಖ್ಯ ಪಾತ್ರವನ್ನು ವಹಿಸುತ್ತದೆ. ಅನೇಕ ಹೆತ್ತವರು ತಮ್ಮ ಮಕ್ಕಳಿಗೆ ಗಟ್ಟಿಯಾಗಿ ಓದಿಹೇಳಲು ಸಮಯವನ್ನು ಬದಿಗಿರಿಸುತ್ತಾರೆ. ಇದು, ಸ್ವೀಕಾರಾರ್ಹ ನಡತೆಯ ಕುರಿತು ಮತ್ತು ನಮ್ಮ ಸೃಷ್ಟಿಕರ್ತನು ಹೇಳಿದ ನೈತಿಕ ಮೌಲ್ಯಗಳ ಕುರಿತು ಮಕ್ಕಳಿಗೆ ಕಲಿಸಲು ಒಂದು ಸಂದರ್ಭವನ್ನು ಒದಗಿಸುತ್ತದೆ. ನಂಬಿಗಸ್ತನಾದ ಬೋಧಕನೂ ಮಿಷನೆರಿಯೂ ಆಗಿದ್ದ ತಿಮೊಥೆಯನಿಗೆ ‘ಚಿಕ್ಕಂದಿನಿಂದಲೂ [ಶೈಶವಾವಸ್ಥೆಯಿಂದಲೂ] ಪರಿಶುದ್ಧಗ್ರಂಥಗಳ ಪರಿಚಯವಿತ್ತು’ ಎಂಬುದಾಗಿ ಬೈಬಲ್‌ ತಿಳಿಸುತ್ತದೆ.​—⁠2 ತಿಮೊಥೆಯ 3:14.

ನಿಮ್ಮ ಮಗುವಿಗೆ ಓದಿಹೇಳುವುದು ಅವನ ನರತಂತು ಸಂಬಂಧಿ ಕ್ರಿಯೆಗಳನ್ನು ಪ್ರಚೋದಿಸಬಲ್ಲದು. ಪ್ರಾಮುಖ್ಯ ಅಂಶವೆಂದರೆ, ಓದುವುದನ್ನು ಒಬ್ಬ ಆಸಕ್ತಿಯುಳ್ಳ, ಕಾಳಜಿವಹಿಸುವ ವ್ಯಕ್ತಿಯು ನಿರ್ವಹಿಸಬೇಕು. ನಾವು ಮಕ್ಕಳಿಗೆ ಏನನ್ನು ಓದಿಹೇಳುತ್ತೇವೋ ಅದು, “ಮಕ್ಕಳು ಆನಂದಿಸಸಾಧ್ಯವಿರುವ ಮಟ್ಟದಲ್ಲಿರಬೇಕು” ಎಂಬುದಾಗಿ ಶಿಕ್ಷಣ ಸಂಸ್ಥೆಯ ಪ್ರೊಫೆಸರರಾದ ಲಿಂಡ ಸೀಗಲ್‌ ಎಚ್ಚರಿಸುತ್ತಾರೆ. ಅಷ್ಟುಮಾತ್ರವಲ್ಲದೆ ಓದುವುದನ್ನು ಕ್ರಮವಾಗಿರಿಸಿರಿ ಮತ್ತು ಪ್ರತಿದಿನವು ಒಂದೇ ಸಮಯದಲ್ಲಿ ಏರ್ಪಡಿಸಿರಿ. ಈ ರೀತಿ ಮಾಡುವಲ್ಲಿ ಮಗುವು ಅದನ್ನು ಎದುರುನೋಡಲಾರಂಭಿಸುತ್ತದೆ.

ಕಲಿಸುವುದರಲ್ಲಿ ಶಿಸ್ತು ಸಹ ಒಳಗೂಡಿದೆ. ಪ್ರೀತಿಪರ ಶಿಸ್ತಿನಿಂದ ಎಳೆಯರು ಪ್ರಯೋಜನವನ್ನು ಪಡೆದುಕೊಳ್ಳಬಲ್ಲರು. “ಜ್ಞಾನಿಯಾದ ಮಗನು ತಂದೆಯ ಶಿಕ್ಷೆಯನ್ನು [“ಶಿಸ್ತನ್ನು,” NW] ಕೇಳುವನು,” ಎಂಬುದಾಗಿ ಜ್ಞಾನೋಕ್ತಿ 13:⁠1 ತಿಳಿಸುತ್ತದೆ. ಹಾಗಿದ್ದರೂ, ಶಿಸ್ತಿನಲ್ಲಿ ಅನೇಕ ವಿಷಯಗಳು ಒಳಗೂಡಿವೆ ಎಂಬುದನ್ನು ನೆನಪಿನಲ್ಲಿಡಿರಿ. ಉದಾಹರಣೆಗೆ, ಅದು ಮಾತಿನ ಮೂಲಕ ಅಥವಾ ಸುಯೋಗಗಳನ್ನು ಕೊಡದೇ ಇರುವ ಮೂಲಕ ಅಥವಾ ಇತರ ರೀತಿಯ ಶಿಕ್ಷೆಯನ್ನು ಕೊಡುವ ಮೂಲಕ ನೀಡಲ್ಪಡುವ ತಿದ್ದುಪಾಟೂ ಆಗಿರಬಲ್ಲದು. “ಭಾವನೆಗಳನ್ನು ಹೇಗೆ ನಿಭಾಯಿಸುವುದು ಮತ್ತು ಹತೋಟಿಗೆ ಮೀರಿದ ವರ್ತನೆಗಳನ್ನು ಹೇಗೆ ತಡೆಯುವುದು ಎಂಬುದನ್ನು ಮಗುವಿಗೆ ಕಲಿಸುವುದೇ ಶಿಸ್ತು ಆಗಿದೆ. ಪ್ರತಿಯೊಂದು ಮಗುವೂ ತನಗೆ ಇತಿಮಿತಿಗಳನ್ನು ಯಾರಾದರೊಬ್ಬರು ತಿಳಿಸಬೇಕೆಂದು ಎದುರುನೋಡುತ್ತದೆ. ಪ್ರೀತಿಯ ಅನಂತರ ಶಿಸ್ತು ಎಂಬುದು ನೀವು ನೀಡಬೇಕಾದ ಅತಿ ಪ್ರಾಮುಖ್ಯ ವಿಷಯವಾಗಿದೆ,” ಎಂಬುದಾಗಿ ಈ ಮುಂಚೆ ಉಲ್ಲೇಖಿಸಲಾದ ಡಾ. ಬ್ರೇಜಿಲ್ಟನ್‌ ತಿಳಿಸುತ್ತಾರೆ.

ನೀವು ನೀಡುವ ಶಿಸ್ತು ಪರಿಣಾಮಕಾರಿಯಾಗಿದೆಯೋ ಎಂಬುದನ್ನು ಹೆತ್ತವರಾದ ನೀವು ಹೇಗೆ ನಿರ್ಧರಿಸಬಲ್ಲಿರಿ? ಮೊದಲಾಗಿ, ಶಿಸ್ತು ಏಕೆ ನೀಡಲ್ಪಡುತ್ತಿದೆ ಎಂಬುದನ್ನು ನಿಮ್ಮ ಮಗುವು ಅರ್ಥಮಾಡಿಕೊಳ್ಳಬೇಕಾಗಿದೆ. ನೀವು ತಿದ್ದುಪಾಟನ್ನು ನೀಡುವಾಗ, ನಿಮ್ಮ ಮಕ್ಕಳು ನೀವೊಬ್ಬ ಕೋಮಲ ಮತ್ತು ಪ್ರೀತಿಪರ ಹೆತ್ತವರಾಗಿದ್ದೀರಿ ಎಂಬುದನ್ನು ಗ್ರಹಿಸಿಕೊಳ್ಳುವಂಥ ರೀತಿಯಲ್ಲಿ ನೀಡಿರಿ.

ಯಶಸ್ವಿಯಾಗಿ ಪರಿಣಮಿಸುವ ಪ್ರಯತ್ನಗಳು

ಫ್ರೆಡ್‌, ತನ್ನ ಮಗಳು ಚಿಕ್ಕ ಮಗುವಾಗಿರುವಾಗಿಂದಲೇ ಪ್ರತಿದಿನ ಮಲಗುವ ಮುನ್ನ ಅವಳಿಗೆ ಓದಿಹೇಳುವುದನ್ನು ರೂಢಿಯಾಗಿ ಮಾಡಿರುವ ಒಬ್ಬ ತಂದೆಯಾಗಿದ್ದಾನೆ. ಸ್ವಲ್ಪ ಸಮಯಗಳಲ್ಲಿಯೇ ಅವಳು ಅನೇಕ ಕಥೆಗಳನ್ನು ಬಾಯಿಪಾಠಮಾಡಿರುವುದನ್ನು ಮತ್ತು ಪುಸ್ತಕದಲ್ಲಿ ಅದು ಎಲ್ಲಿದೆ ಎಂಬುದನ್ನು ಗುರುತಿಸುವುದನ್ನು, ಪದಗಳನ್ನು ಗುರುತಿಸುವುದನ್ನು ಹಾಗೂ ಅವುಗಳ ಉಚ್ಚರಣೆಯನ್ನು ತಿಳಿದುಕೊಂಡಿರುವುದನ್ನೂ ಅವನು ಗಮನಿಸಿದನು. ಕ್ರಿಸ್‌ ಎಂಬ ಇನ್ನೊಬ್ಬ ಹೆತ್ತವನು ಸಹ ತನ್ನ ಮಕ್ಕಳಿಗೆ ಓದಿಹೇಳುವ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವವರಲ್ಲಿ ಒಬ್ಬನಾಗಿದ್ದಾನೆ. ವಿಧ ವಿಧವಾದ ವಿಷಯಗಳನ್ನು ಓದಲು ಅವನು ಪ್ರಯತ್ನಿಸಿದನು. ಮಕ್ಕಳು ತೀರ ಚಿಕ್ಕವರಿದ್ದಾಗ, ಬೈಬಲ್‌ ಕಥೆಗಳ ನನ್ನ ಪುಸ್ತಕ *ದಲ್ಲಿರುವ ಚಿತ್ರಗಳನ್ನು ಉಪಯೋಗಿಸಿ ಅವರಿಗೆ ನೈತಿಕ ಮತ್ತು ಆಧ್ಯಾತ್ಮಿಕ ಪಾಠಗಳನ್ನು ಅವನು ಕಲಿಸುತ್ತಿದ್ದನು.

ಇನ್ನು ಕೆಲವು ಹೆತ್ತವರು ಓದುವುದರೊಂದಿಗೆ ಚಿತ್ರ ಬಿಡಿಸುವುದು, ಪೆಯಿಂಟಿಗ್‌, ಸಂಗೀತ ಉಪಕರಣವನ್ನು ನುಡಿಸುವುದು, ಪ್ರಾಣಿ ಸಂಗ್ರಹಾಲಯ ಮುಂತಾದ ಸ್ಥಳಕ್ಕೆ ಕುಟುಂಬವಾಗಿ ಹೋಗಿ ಬೀಡುಹೂಡುವುದು ಅಥವಾ ಅಂಥ ಸ್ಥಳಗಳಿಗೆ ಪ್ರವಾಸ ಹೋಗುವುದು ಈ ಮುಂತಾದ ವಿಭಿನ್ನ ಚಟುವಟಿಕೆಗಳನ್ನೂ ಸೇರಿಸುತ್ತಾರೆ. ಈ ಸಂದರ್ಭಗಳನ್ನು, ಪಾಠಗಳನ್ನು ಕಲಿಸಲು ಮತ್ತು ಸುಲಭವಾಗಿ ಪ್ರೇರಿಸಲಾಗುವ ಮಗುವಿನ ಹೃದಮನದಲ್ಲಿ ಉತ್ತಮ ನೈತಿಕ ಮೌಲ್ಯಗಳನ್ನು ಹಾಗೂ ವರ್ತನೆಯನ್ನು ಬೇರೂರಿಸಲಿಕ್ಕಾಗಿರುವ ಸದವಕಾಶಗಳಾಗಿ ಉಪಯೋಗಿಸಸಾಧ್ಯವಿದೆ.

ಈ ಎಲ್ಲಾ ಕೆಲಸ ಮತ್ತು ಪ್ರಯತ್ನವು ಬೆಲೆಯುಳ್ಳದ್ದಾಗಿದೆಯೋ? ಒಂದು ಶಾಂತಿಯುತ ಮತ್ತು ಭದ್ರ ಪರಿಸರದಲ್ಲಿ ಈ ಮೊದಲೇ ಹೇಳಿದ ಪ್ರಾಯೋಗಿಕ ಮಾರ್ಗದರ್ಶನಗಳನ್ನು ಅನ್ವಯಿಸಲು ತಮ್ಮಿಂದಾದದ್ದೆಲ್ಲವನ್ನು ಮಾಡುವ ಹೆತ್ತವರು, ತಮ್ಮ ಮಕ್ಕಳು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವುದನ್ನು ನೋಡುವ ಸಂಭವನೀಯತೆಯು ಹೆಚ್ಚು. ಆರಂಭದ ವರುಷಗಳಲ್ಲೇ ನಿಮ್ಮ ಮಕ್ಕಳಲ್ಲಿ ಬುದ್ಧಿಶಕ್ತಿಯ ಮತ್ತು ಸಂವಾದದ ಕೌಶಲಗಳನ್ನು ನೀವು ಪೋಷಿಸುವುದಾದರೆ, ನೀವು ಅವರ ನೈತಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿತ್ವದ ಮೇಲೆ ಬಹಳಷ್ಟು ಪ್ರಭಾವವನ್ನು ಬೀರುತ್ತೀರಿ.

ಶತಮಾನಗಳ ಹಿಂದೆ ಜ್ಞಾನೋಕ್ತಿ 22:6ರಲ್ಲಿ ಬೈಬಲ್‌ ಸ್ಪಷ್ಟವಾಗಿ ಹೇಳಿದ್ದು: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” ಮಗುವಿನ ತರಬೇತಿಯಲ್ಲಿ ಹೆತ್ತವರು ಖಂಡಿತವಾಗಿಯೂ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಮಕ್ಕಳಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಉದಾರಿಗಳಾಗಿರ್ರಿ. ಅವರೊಂದಿಗೆ ಸಮಯವನ್ನು ಕಳೆಯಿರಿ, ಅವರನ್ನು ಪೋಷಿಸಿರಿ ಮತ್ತು ಅವರಿಗೆ ಕಲಿಸಿರಿ. ಹೀಗೆ ಮಾಡುವುದು ಅವರಿಗೂ ನಿಮಗೂ ಸಂತೋಷವನ್ನು ತರುತ್ತದೆ.​—⁠ಜ್ಞಾನೋಕ್ತಿ 15:20. (g04 10/22)

[ಪಾದಟಿಪ್ಪಣಿಗಳು]

^ ಈ ಪತ್ರಿಕೆಯ ಇಸವಿ 1993, ಮಾರ್ಚ್‌ 22ರ ಸಂಚಿಕೆಯಲ್ಲಿ ಬಂದಿರುವ, “ಉಚಿತವಾಗಿ ದೊರಕುವ ಆಫ್ರಿಕದ ಆಟದ ಸಾಮಾನುಗಳು” (ಇಂಗ್ಲಿಷ್‌) ಎಂಬ ಲೇಖನವನ್ನು ನೋಡಿರಿ.

^ ಯೆಹೋವನ ಸಾಕ್ಷಿಗಳ ಪ್ರಕಾಶನ. ಮಹಾ ಬೋಧಕನಿಂದ ಕಲಿಯಿರಿ (ಇಂಗ್ಲಿಷ್‌) ಎಂಬ ಇನ್ನೊಂದು ಪುಸ್ತಕವು ಸಹ ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟು, ಚಿಕ್ಕ ಮಕ್ಕಳಿಗೆ ಕಲಿಸುವುದರಲ್ಲಿ ಅತಿ ಪರಿಣಾಮಕಾರಿಯಾಗಿ ಉಪಯೋಗಿಸಲಾಗುತ್ತಿದೆ.

[ಪುಟ 7ರಲ್ಲಿರುವ ಚೌಕ]

ನಿಮ್ಮ ಮಗುವಿನೊಂದಿಗೆ ಆಟವಾಡುವುದು

◼ ಮಕ್ಕಳು ದೀರ್ಘ ಸಮಯದ ವರೆಗೆ ಒಂದೇ ವಿಷಯದಲ್ಲಿ ಗಮನವನ್ನು ಕೇಂದ್ರೀಕರಿಸಲು ಅಸಮರ್ಥರಾಗಿರುವುದರಿಂದ, ಒಂದು ಆಟವನ್ನು ಅವರು ಆನಂದಿಸುತ್ತಿದ್ದಾರೆ ಎಂದು ತೋರುವ ತನಕ ಮಾತ್ರ ಅವರೊಂದಿಗೆ ಆಟವಾಡಿರಿ.

◼ ಒಂದುವೇಳೆ ಆಟದ ಸಾಮಾನುಗಳನ್ನು ಉಪಯೋಗಿಸಲಾಗುವಲ್ಲಿ, ಮಕ್ಕಳಿಗೆ ಅವುಗಳಿಂದ ಯಾವುದೇ ಅಪಾಯವಿಲ್ಲ ಮತ್ತು ಅವು ಮಕ್ಕಳನ್ನು ಪ್ರಚೋದಿಸುವಂಥದ್ದಾಗಿವೆ ಎಂದು ಖಾತ್ರಿಪಡಿಸಿಕೊಳ್ಳಿರಿ.

◼ ಮಕ್ಕಳನ್ನು ಚುರುಕಾಗಿರಿಸುವ ಆಟಗಳನ್ನು ಆಡಿರಿ. ಒಂದೇ ವಿಷಯವನ್ನು ನಿಮ್ಮಿಂದ ಪುನಃ ಪುನಃ ಮಾಡಿಸುವುದರಲ್ಲಿ ಮಕ್ಕಳು ಆನಂದಿಸುತ್ತಾರೆ. ಉದಾಹರಣೆಗೆ, ಅವರು ಪುನಃ ಪುನಃ ಕೆಳಗೆ ಹಾಕಿದ ಆಟದ ಸಾಮಾನನ್ನು ನಿಮ್ಮಿಂದ ಹೆಕ್ಕಿಸುವುದರಲ್ಲಿ ಆನಂದಿಸುತ್ತಾರೆ.

[ಕೃಪೆ]

ಮೂಲ: Clinical Reference Systems

[ಪುಟ 10ರಲ್ಲಿರುವ ಚೌಕ/ಚಿತ್ರ]

ನಿಮ್ಮ ಮಗುವಿಗೆ ಓದಿಹೇಳುವುದರ ಬಗ್ಗೆ ಸಲಹೆಗಳು

◼ ಸ್ಪಷ್ಟವಾಗಿ ಮಾತಾಡಿರಿ ಮತ್ತು ಸರಿಯಾದ ಉಚ್ಚಾರಣೆಯನ್ನು ಉಪಯೋಗಿಸಿರಿ. ಮಗುವು ತನ್ನ ಹೆತ್ತವರು ಮಾತಾಡುವುದನ್ನು ಕೇಳಿಸಿಕೊಂಡು ಭಾಷೆಯನ್ನು ಕಲಿಯುತ್ತದೆ.

◼ ತೀರ ಚಿಕ್ಕಮಕ್ಕಳಿಗೆ, ಕಥೆ ಪುಸ್ತಕದ ಚಿತ್ರಗಳಲ್ಲಿರುವ ವ್ಯಕ್ತಿಗಳಿಗೂ ವಸ್ತುಗಳಿಗೂ ಬೆರಳು ತೋರಿಸಿ ಅದರ ಹೆಸರನ್ನು ಹೇಳಿರಿ.

◼ ಮಗುವು ಬೆಳೆಯುವಾಗ, ಅವನ ಸದ್ಯದ ಮೆಚ್ಚಿಗೆಯ ವಿಷಯದ ಕುರಿತು ತಿಳಿಸುವ ಪುಸ್ತಕವನ್ನು ಆಯ್ಕೆಮಾಡಿರಿ.

[ಕೃಪೆ]

ಮೂಲ: Pediatrics for Parents

[ಪುಟ 8, 9ರಲ್ಲಿರುವ ಚಿತ್ರಗಳು]

ನಿಮ್ಮ ಮಕ್ಕಳೊಂದಿಗೆ ಆನಂದಕರವಾದ ಮನೋರಂಜನೆಯಲ್ಲಿ ಸಮಯವನ್ನು ಕಳೆಯಿರಿ