ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಶಿಸ್ತಿನಲ್ಲಿ ಮಕ್ಕಳನ್ನು ಬೆಳೆಸುವುದು

ದೇವರ ಶಿಸ್ತಿನಲ್ಲಿ ಮಕ್ಕಳನ್ನು ಬೆಳೆಸುವುದು

ಬೈಬಲಿನ ದೃಷ್ಟಿಕೋನ

ದೇವರ ಶಿಸ್ತಿನಲ್ಲಿ ಮಕ್ಕಳನ್ನು ಬೆಳೆಸುವುದು

“ನಿಮ್ಮ ಮಕ್ಕಳು ಮುರಿಯದಂಥ ನಿಯಮಗಳನ್ನು ಸ್ಥಾಪಿಸುವ ವಿಧ”

“ನಿಮ್ಮ ಮಗುವಿಗೆ ಐದು ವರುಷವಾಗುವುದರೊಳಗಾಗಿ ನೀವು ಕಲಿಸಬೇಕಾದ ಐದು ಮೌಲ್ಯಗಳು”

“ಪ್ರತಿಯೊಂದು ಮಗು ಹೊಂದಿರಬೇಕಾದ ಐದು ಮಾನಸಿಕ ಕೌಶಲಗಳು”

“ಹೆತ್ತವರು ತೀರ ಕಟ್ಟುನಿಟ್ಟಿನವರಾಗಿಲ್ಲ ಎಂಬುದನ್ನು ತೋರಿಸುವ ಐದು ಸೂಚನೆಗಳು”

“ಒಂದು ನಿಮಿಷದ ಶಿಸ್ತಿನ ಚಮತ್ಕಾರ”

ಮಕ್ಕಳನ್ನು ಶಿಸ್ತುಗೊಳಿಸುವುದು ಸುಲಭದ ವಿಷಯವಾಗಿದ್ದರೆ, ಮೇಲೆ ತಿಳಿಸಲಾದ ಇಷ್ಟೊಂದು ಲೇಖನಗಳು ಪತ್ರಿಕೆಗಳಲ್ಲಿ ಬರುವ ಅಗತ್ಯವಿರಲಿಲ್ಲ. ಅಷ್ಟುಮಾತ್ರವಲ್ಲ, ಮಕ್ಕಳನ್ನು ಸಾಕಿಸಲಹುವುದರ ಕುರಿತು ತಿಳಿಸುವ ಇಂಥ ಪುಸ್ತಕಗಳು ಕ್ರಮೇಣ ಇಲ್ಲವಾಗುತ್ತಿದ್ದವು. ಆದರೆ, ಮಕ್ಕಳನ್ನು ಬೆಳೆಸುವುದು ಎಂದೂ ಒಂದು ಸುಲಭದ ಕೆಲಸವಾಗಿಲ್ಲ. ಸಾವಿರಾರು ವರುಷಗಳ ಹಿಂದೆಯೂ, “ಜ್ಞಾನಹೀನನಾದ ಮಗನು ತಂದೆಗೆ ಕಿರಿಕಿರಿ, ತಾಯಿಗೆ ಕರಕರೆ” ಎಂಬುದಾಗಿ ಹೇಳಲಾಗಿದೆ.​—⁠ಜಾನೋಕ್ತಿ 17:25.

ಇಂದು, ಈ ವಿಷಯದ ಕುರಿತು ಹೇರಳವಾದ ಸಲಹೆಯು ಸಿಗುವುದಾದರೂ ತಮ್ಮ ಮಕ್ಕಳನ್ನು ಹೇಗೆ ಶಿಸ್ತುಗೊಳಿಸಬೇಕೆಂಬದರ ಕುರಿತು ಅನೇಕ ಹೆತ್ತವರು ಅನಿಶ್ಚಿತರಾಗಿದ್ದಾರೆ. ಬೈಬಲ್‌ ಯಾವ ನೆರವನ್ನು ನೀಡುತ್ತದೆ?

ಶಿಸ್ತಿನ ಸರಿಯಾದ ಅರ್ಥ

ಶಿಸ್ತುಗೊಳಿಸುವ ವಿಷಯದಲ್ಲಿ ಹೆತ್ತವರಿಗಿರುವ ಪಾತ್ರವನ್ನು ಬೈಬಲ್‌ ಸ್ಪಷ್ಟವಾಗಿ ವಿವರಿಸುತ್ತದೆ. ಉದಾಹರಣೆಗೆ, ಎಫೆಸ 6:4 (NW) ತಿಳಿಸುವುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ ಅವರನ್ನು ಬೆಳೆಸುತ್ತಾ ಹೋಗಿರಿ.” ಈ ಶಾಸ್ತ್ರವಚನವು ಮುಖ್ಯವಾಗಿ ತಂದೆಯು ತನ್ನ ಮಕ್ಕಳನ್ನು ಸಾಕಿಸಲಹುವುದರಲ್ಲಿ ಮುಂದಾಳುತ್ವವನ್ನು ವಹಿಸಬೇಕೆಂದು ತಿಳಿಸುತ್ತದೆ. ಅದೇ ಸಮಯದಲ್ಲಿ, ತಾಯಿಯು ತನ್ನ ಗಂಡನೊಂದಿಗೆ ಸಹಕರಿಸುವ ಮೂಲಕ ತನ್ನ ಭಾಗವನ್ನು ಪೂರೈಸಬೇಕೆಂಬುದು ನಿಶ್ಚಯ.

ಈ ವಿಷಯದಲ್ಲಿ ದ ಇಂಟರ್‌ಪ್ರಿಟರ್ಸ್‌ ಡಿಕ್ಷನೆರಿ ಆಫ್‌ ದ ಬೈಬಲ್‌ ಹೇಳುವುದು: “ಬೈಬಲಿನಲ್ಲಿ ಶಿಸ್ತು ಎಂಬ ಪದವು ಒಂದು ಬದಿಯಲ್ಲಿ ತರಬೇತಿ, ಬೋಧನೆ ಮತ್ತು ಜ್ಞಾನಕ್ಕೆ ಅನ್ವಯಿಸುತ್ತದೆ ಹಾಗೂ ಇನ್ನೊಂದು ಬದಿಯಲ್ಲಿ ಖಂಡನೆ, ತಿದ್ದುಪಾಟು ಮತ್ತು ಶಿಕ್ಷೆಗೆ ಅನ್ವಯಿಸುತ್ತದೆ. ಸಾಮಾನ್ಯವಾಗಿ ಈ ಪದವನ್ನು ಮಗುವಿನ ತರಬೇತಿಯ ಕುರಿತು ತಿಳಿಸುವಾಗ ಉಪಯೋಗಿಸಲಾಗುತ್ತದೆ.” ಆದುದರಿಂದ, ಶಿಸ್ತುಗೊಳಿಸುವುದು ಎಂಬುದಾಗಿ ಹೇಳುವಾಗ ಖಂಡಿಸುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ; ಇದರಲ್ಲಿ, ಮಕ್ಕಳು ಯಶಸ್ವಿಯಾಗಲು ಬೇಕಾಗಿರುವ ಎಲ್ಲಾ ತರಬೇತಿಯೂ ಒಳಗೂಡಿದೆ. ಆದರೆ ಮಕ್ಕಳಿಗೆ ಕೋಪವನ್ನೆಬ್ಬಿಸದಂತೆ ಹೆತ್ತವರು ಹೇಗೆ ನೋಡಿಕೊಳ್ಳಬಲ್ಲರು?

ಅನುಕಂಪವುಳ್ಳವರಾಗಿರ್ರಿ

ಮಗುವಿಗೆ ಯಾವುದು ಕೋಪವನ್ನೆಬ್ಬಿಸುತ್ತದೆ? ಈ ಪರಿಸ್ಥಿತಿಯನ್ನು ತುಸು ಕಲ್ಪಿಸಿಕೊಳ್ಳಿ. ನಿಮಗೆ, ಯಾವಾಗಲೂ ಕಿರಿಕಿರಿಮಾಡುವ ತಾಳ್ಮೆಯಿಲ್ಲದ ಒಬ್ಬ ಜೊತೆಕೆಲಸಗಾರನಿದ್ದಾನೆ. ನೀವು ಮಾಡುವ ಯಾವ ಕೆಲಸವೂ ಅವನಿಗೆ ಇಷ್ಟವಾಗುವುದಿಲ್ಲ. ನೀವು ಹೇಳುವ ಮತ್ತು ಮಾಡುವ ಪ್ರತಿಯೊಂದು ವಿಷಯದಲ್ಲಿಯೂ ಅವನು ತಪ್ಪು ಹುಡುಕುತ್ತಾನೆ. ಅನೇಕ ಬಾರಿ ಅವನು ನಿಮ್ಮ ಕೆಲಸವನ್ನು ಅಂಗೀಕರಿಸದಿದ್ದು, ನೀವು ಯಾವುದಕ್ಕೂ ಅರ್ಹರಲ್ಲ ಎಂಬ ಭಾವನೆಯನ್ನು ನಿಮ್ಮಲ್ಲಿ ಮೂಡಿಸುತ್ತಾನೆ. ಇದು ನಿಮಗೆ ಕೋಪವನ್ನೆಬ್ಬಿಸಿ ನಿಮ್ಮನ್ನು ಮನಗುಂದಿಸದೋ?

ಹೆತ್ತವರು ಯಾವಾಗಲೂ ಕೋಪದಿಂದ ಮಗುವನ್ನು ಕಾಡುತ್ತಾ ತಿದ್ದುತ್ತಾ ಇರುವುದಾದರೆ ಮಗುವಿಗೂ ಇದೇ ರೀತಿಯಾಗಸಾಧ್ಯವಿದೆ. ಮಕ್ಕಳಿಗೆ ಆಗಿಂದಾಗ್ಗೆ ತಿದ್ದುಪಾಟಿನ ಅಗತ್ಯವಿದೆ ಎಂಬುದು ನಿಜ ಮತ್ತು ಅಂಥ ತಿದ್ದುಪಾಟನ್ನು ನೀಡುವಂತೆ ಬೈಬಲ್‌ ಹೆತ್ತವರಿಗೆ ಅಧಿಕಾರವನ್ನು ನೀಡಿದೆ. ಆದರೆ, ಕಟುವಾದ ಮತ್ತು ಪ್ರೀತಿರಹಿತವಾದ ರೀತಿಯಲ್ಲಿ ವ್ಯವಹರಿಸಿ ಮಗುವಿಗೆ ಕೋಪವನ್ನೆಬ್ಬಿಸಿದರೆ, ಅದು ಭಾವನಾತ್ಮಕವಾಗಿಯೂ ಆಧ್ಯಾತ್ಮಿಕವಾಗಿಯೂ ಹಾಗೂ ಶಾರೀರಿಕವಾಗಿಯೂ ತೊಡಕನ್ನುಂಟುಮಾಡಬಲ್ಲದು.

ನಿಮ್ಮ ಮಕ್ಕಳು ನಿಮ್ಮ ಗಮನಕ್ಕೆ ಅರ್ಹರಾಗಿದ್ದಾರೆ

ಹೆತ್ತವರು ತಮ್ಮ ಮಕ್ಕಳಿಗಾಗಿ ಸಮಯವನ್ನು ಬದಿಗಿರಿಸಬೇಕು. ದೇವರ ಕಟ್ಟಳೆಗಳ ವಿಷಯದಲ್ಲಿ ಧರ್ಮೋಪದೇಶಕಾಂಡ 6:7 ತಂದೆಗಳಿಗೆ ತಿಳಿಸುವುದು: “ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” ತಮ್ಮ ಹೆತ್ತವರ ಆಳವಾದ ಕಾಳಜಿಯನ್ನು ಅನುಭವಿಸಬೇಕಾದ ಅಗತ್ಯದೊಂದಿಗೆ ಮಕ್ಕಳು ಹುಟ್ಟಿದ್ದಾರೆ. ಪ್ರತಿನಿತ್ಯವೂ ನಿಮ್ಮ ಮಕ್ಕಳೊಂದಿಗೆ ಸೌಮ್ಯ ರೀತಿಯಲ್ಲಿ ಸಂವಾದಮಾಡುವುದು ಅವರ ಭಾವನೆಗಳನ್ನು ಅರಿತುಕೊಳ್ಳಲು ನಿಮಗೆ ಸಹಾಯಮಾಡಬಲ್ಲದು. ಇದು ಬೈಬಲಾಧಾರಿತ ಮೂಲತತ್ತ್ವಗಳೊಂದಿಗೆ ಅವರ ಹೃದಯವನ್ನು ತಲಪಿ, “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು”ವಂತೆ ಅವರನ್ನು ಪ್ರಚೋದಿಸುವುದನ್ನು ಸಲಭವನ್ನಾಗಿ ಮಾಡಬಲ್ಲದು. (ಪ್ರಸಂಗಿ 12:13) ಇದು ದೈವಿಕ ಶಿಸ್ತಿನ ಭಾಗವಾಗಿದೆ.

ಮಕ್ಕಳನ್ನು ಬೆಳೆಸುವುದನ್ನು ಮನೆ ಕಟ್ಟುವುದಕ್ಕೆ ಹೋಲಿಸಿದರೆ, ಶಿಸ್ತು ಎಂಬುದು ಕಟ್ಟುವಕೆಲಸದಲ್ಲಿ ಉಪಯೋಗಿಸಲಾಗುವ ಒಂದು ಉಪಕರಣವಾಗಿದೆ. ಹೆತ್ತವರು ಈ ಉಪಕರಣವನ್ನು ಸರಿಯಾಗಿ ಉಪಯೋಗಿಸುವಾಗ, ಅವರು ತಮ್ಮ ಮಕ್ಕಳ ವ್ಯಕ್ತಿತ್ವದಲ್ಲಿ ಮನಮೋಹಕ ಗುಣಗಳನ್ನು ಕಟ್ಟಸಾಧ್ಯವಿದೆ ಮತ್ತು ಜೀವನದಲ್ಲಿ ಬರಬಹುದಾದ ಸಂಕಟವನ್ನು ಎದುರಿಸಲು ಅವರನ್ನು ಸಜ್ಜುಗೊಳಿಸಸಾಧ್ಯವಿದೆ. ಇದರ ಫಲಿತಾಂಶವನ್ನು ಜ್ಞಾನೋಕ್ತಿ 23:​24, 25 ಹೀಗೆ ವರ್ಣಿಸುತ್ತದೆ: “ಧರ್ಮಿಯ ತಂದೆಯು ಅತಿ ಸಂತೋಷಪಡುವನು; ಜ್ಞಾನಿಯನ್ನು ಹೆತ್ತವನು ಅವನಲ್ಲಿ ಆನಂದಿಸುವನು. ನಿನ್ನ ತಂದೆತಾಯಿಗಳು ಉಲ್ಲಾಸಗೊಳ್ಳಲಿ, ನಿನ್ನನ್ನು ಹೆತ್ತವಳು ಆನಂದಪಡಲಿ.” (g04 11/8)

[ಪುಟ 21ರಲ್ಲಿರುವ ಚೌಕ/ಚಿತ್ರ]

‘ಯೆಹೋವನ ಮಾನಸಿಕ ಕ್ರಮಪಡಿಸುವಿಕೆ’

ಎಫೆಸ 6:4 (NW) ‘ಯೆಹೋವನ ಮಾನಸಿಕ ಕ್ರಮಪಡಿಸುವಿಕೆಯ’ ಕುರಿತು ತಿಳಿಸುತ್ತದೆ. ‘ಮಾನಸಿಕ ಕ್ರಮಪಡಿಸುವಿಕೆ’ ಎಂಬುದಕ್ಕಾಗಿನ ಮೂಲ ಗ್ರೀಕ್‌ ಪದವನ್ನು ಕೆಲವು ಬೈಬಲುಗಳಲ್ಲಿ, “ಗಮನಕೊಡುವಿಕೆ” “ಬುದ್ಧಿವಾದ” ಮತ್ತು “ಸಲಹೆ” ಎಂಬುದಾಗಿ ಭಾಷಾಂತರಿಸಲಾಗಿದೆ. ಈ ಎಲ್ಲಾ ಪದಗಳು, ಹೆತ್ತವರು ಮಕ್ಕಳೊಂದಿಗೆ ಬೈಬಲನ್ನು ಓದುವುದು ಅಥವಾ ಬೈಬಲ್‌ ಅಧ್ಯಯನ ಸಹಾಯಕದಲ್ಲಿರುವ ವಿಷಯವನ್ನು ಆವರಿಸುವುದು ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಲೇಬೇಕೆಂಬುದನ್ನು ಸೂಚಿಸುತ್ತವೆ. ತಮ್ಮ ಮಕ್ಕಳು ದೇವರ ವಾಕ್ಯವನ್ನು, ವಿಧೇಯತೆಯ ಮಹತ್ವವನ್ನು, ಅವರಿಗಾಗಿ ಯೆಹೋವನು ತೋರಿಸಿದ ಪ್ರೀತಿಯನ್ನು, ಮತ್ತು ಆತನು ಅವರಿಗೆ ಒದಗಿಸುವ ರಕ್ಷಣೆಯನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಹೆತ್ತವರು ಖಚಿತಪಡಿಸಿಕೊಳ್ಳುವ ಅಗತ್ಯವಿದೆ.

ಇದನ್ನು ಹೇಗೆ ಸಾಧಿಸಸಾಧ್ಯವಿದೆ? ಮೂರು ಮಕ್ಕಳ ತಾಯಿಯಾದ ಜೂಡೀ, ದೈವಿಕ ಮೂಲತತ್ತ್ವಗಳನ್ನು ತನ್ನ ಮಕ್ಕಳಿಗೆ ಕ್ರಮವಾಗಿ ಜ್ಞಾಪಕಹುಟ್ಟಿಸುವುದಕ್ಕಿಂತಲೂ ಹೆಚ್ಚಿನದ್ದು ಅಗತ್ಯವಿದೆ ಎಂಬುದನ್ನು ಗ್ರಹಿಸಿದಳು. “ಆಗಿಂದಾಗ್ಗೆ ಅದೇ ವಿಷಯಗಳನ್ನು ಒಂದೇ ರೀತಿಯಲ್ಲಿ ಹೇಳುತ್ತಾ ಇರುವುದನ್ನು ಮಕ್ಕಳು ಇಷ್ಟಪಡುವುದಿಲ್ಲವೆಂದು ನಾನು ಅರಿತುಕೊಂಡೆ. ಅವರಿಗೆ ಕಲಿಸಲು ವಿವಿಧ ವಿಧಾನಗಳನ್ನು ನಾನು ಕಂಡುಹಿಡಿಯಲಾರಂಭಿಸಿದೆ. ಇದಕ್ಕಾಗಿ ನಾನು ಉಪಯೋಗಿಸಿದ ಒಂದು ವಿಧ, ಒಂದೇ ವಿಷಯವನ್ನು ಬೇರೆ ಬೇರೆ ರೀತಿಯಲ್ಲಿ ತಿಳಿಯಪಡಿಸುವ ಎಚ್ಚರ! ಪತ್ರಿಕೆಯ ಲೇಖನಗಳನ್ನು ನೋಡುವ ಮೂಲಕವೇ. ಈ ರೀತಿಯಾಗಿ ಮಕ್ಕಳಿಗೆ ಬೇಕಾಗಿರುವ ಜ್ಞಾಪಕವನ್ನು ಅವರಿಗೆ ಕೋಪವನ್ನೆಬ್ಬಿಸದೆ ಹೇಗೆ ನೀಡಬಹುದೆಂಬುದನ್ನು ನಾನು ಕಲಿತುಕೊಂಡೆ.”

ಯಾರ ಕುಟುಂಬವು ಕಷ್ಟಕರ ಪರಿಸ್ಥಿತಿಗಳನ್ನು ದಾಟಿಬಂದಿತ್ತೋ ಆ ಆನ್‌ಜೀಲೋ ತನ್ನ ಹೆಣ್ಣುಮಕ್ಕಳಿಗೆ ದೇವರ ವಾಕ್ಯದ ಕುರಿತು ಧ್ಯಾನಿಸುವುದನ್ನು ಹೇಗೆ ಕಲಿಸಿಕೊಟ್ಟನೆಂದು ತಿಳಿಸುತ್ತಾನೆ: “ನಾವು ಬೈಬಲ್‌ ವಚನವನ್ನು ಒಟ್ಟಿಗೆ ಓದುತ್ತಿದ್ದೆವು, ಅನಂತರ ನಾನು ನಿರ್ದಿಷ್ಟವಾದ ಕೆಲವು ವಾಕ್ಸರಣಿಗಳನ್ನು ಆಯ್ಕೆಮಾಡಿ ಅದು ಹೇಗೆ ನನ್ನ ಮಕ್ಕಳ ಸನ್ನಿವೇಶಕ್ಕೆ ಅನ್ವಯಿಸುತ್ತದೆ ಎಂಬುದನ್ನು ವಿವರಿಸುತ್ತಿದ್ದೆ. ಕಾಲಾನಂತರ, ಅವರು ವೈಯಕ್ತಿಕವಾಗಿ ಬೈಬಲನ್ನು ಓದುವಾಗ, ಅದು ಹೇಗೆ ತಮಗೆ ಅನ್ವಯಿಸುತ್ತದೆ ಎಂಬುದರ ಕುರಿತು ಸ್ವತಃ ಆಳವಾಗಿ ಆಲೋಚಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ.”