ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಹತ್ವಾಕಾಂಕ್ಷೆ ಇರುವುದು ತಪ್ಪೊ?

ಮಹತ್ವಾಕಾಂಕ್ಷೆ ಇರುವುದು ತಪ್ಪೊ?

ಬೈಬಲಿನ ದೃಷ್ಟಿಕೋನ

ಮಹತ್ವಾಕಾಂಕ್ಷೆ ಇರುವುದು ತಪ್ಪೊ?

“ಕೀರ್ತಿ, ಏಳಿಗೆ ಮತ್ತು ಅಧಿಕಾರವನ್ನು ಹೊಂದಿರುವುದರಲ್ಲಿ ತಪ್ಪೇನಿದೆ?” ಈ ಪ್ರಶ್ನೆಯು, ಒಂದು ಧಾರ್ಮಿಕ ಸಂಘದಿಂದ ಬಂದ ವರದಿಯಲ್ಲಿ “ನೈತಿಕ ಬಿಕ್ಕಟ್ಟುಗಳು” ಎಂಬ ಶಿರೋನಾಮದ ಕೆಳಗೆ ಕಂಡುಬಂತು. ಆ ವರದಿಯು ದೇವರು ಅಬ್ರಹಾಮನಿಗೆ, “ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು” ಎಂದು ನುಡಿದ ಮಾತನ್ನು ಸೂಚಿಸಿತು.​—⁠ಆದಿಕಾಂಡ 12:⁠2.

“ಇತರರಿಗೆ ಹಾನಿಯನ್ನು ಉಂಟುಮಾಡುವಷ್ಟರ ಮಟ್ಟಿಗೆ ಮಹತ್ವಾಕಾಂಕ್ಷೆಯನ್ನು ಬೆನ್ನಟ್ಟಬಾರದು” ಎಂಬುದಾಗಿ ಆ ವರದಿಯು ತಿಳಿಸಿತಾದರೂ, ಪ್ರಥಮ ಶತಮಾನದ ಒಬ್ಬ ಪ್ರಖ್ಯಾತ ರಬ್ಬಿಯ ಹೇಳಿಕೆಯನ್ನು ಅದು ಉಲ್ಲೇಖಿಸಿತು. ಅವನು ಹೇಳಿದ್ದು: “ನನ್ನ ಗುರಿಗಳನ್ನು ನಾನೇ ಎತ್ತಿಹಿಡಿಯದಿದ್ದರೆ ಮತ್ತೆ ಇನ್ನಾರು ಎತ್ತಿಹಿಡಿಯುತ್ತಾರೆ?” ಅವನು ಮುಂದುವರಿಸಿದ್ದು: “ನಮ್ಮ ಸಾಮರ್ಥ್ಯವನ್ನು ನಾವೇ ಗುರುತಿಸದಿದ್ದರೆ ಬೇರೆ ಯಾರೂ ಗುರುತಿಸುವುದಿಲ್ಲ.” ದೇವರನ್ನು ಸೇವಿಸಲು ಇಚ್ಛಿಸುವವರಿಗೆ ಮಹತ್ವಾಕಾಂಕ್ಷೆಯು ಒಂದು ಅಡ್ಡಿಯಂತಿದೆಯೇ? ನಮ್ಮ ಸಾಮರ್ಥ್ಯವನ್ನು ಗುರುತಿಸುವುದರಲ್ಲಿ ಏನು ಒಳಗೂಡಿದೆ? ಮಹತ್ವಾಕಾಂಕ್ಷೆ ಇರುವುದು ತಪ್ಪೊ? ಇದರ ಕುರಿತು ಬೈಬಲಿನ ದೃಷ್ಟಿಕೋನ ಏನಾಗಿದೆ?

ಅಬ್ರಹಾಮನು ಮಹತ್ವಾಕಾಂಕ್ಷೆ ಉಳ್ಳವನಾಗಿದ್ದನೊ?

ಬೈಬಲಿನಲ್ಲಿ ಅಬ್ರಹಾಮನನ್ನು ಎದ್ದುಕಾಣುವ ನಂಬಿಕೆಯಿದ್ದ ವ್ಯಕ್ತಿ ಎಂದು ವರದಿಸಲಾಗಿದೆ. (ಇಬ್ರಿಯ 11:​8, 17) ಅಬ್ರಹಾಮನನ್ನು ಒಂದು ದೊಡ್ಡ ಜನಾಂಗವಾಗುವಂತೆ ಮಾಡುವೆನು ಮತ್ತು ಅವನ ಹೆಸರನ್ನು ಪ್ರಖ್ಯಾತಿಗೆ ತರುವೆನು ಎಂದು ಹೇಳುವ ಮೂಲಕ ದೇವರು ಅವನನ್ನು ಮಹತ್ವಾಕಾಂಕ್ಷೆ ಉಳ್ಳವನಾಗುವಂತೆ ಉತ್ತೇಜಿಸಲಿಲ್ಲ. ಅಬ್ರಹಾಮನ ಮೂಲಕ ಮಾನವಕುಲವನ್ನು ಆಶೀರ್ವದಿಸುವ ತನ್ನ ಉದ್ದೇಶವನ್ನು ದೇವರು ಹೇಳಿದನಷ್ಟೇ. ಈ ಉದ್ದೇಶವು ಮಾನವ ಮಹತ್ವಾಕಾಂಕ್ಷೆಗಿಂತ ಎಷ್ಟೊ ಹೆಚ್ಚು ಪ್ರಾಮುಖ್ಯವಾಗಿತ್ತು.​—⁠ಗಲಾತ್ಯ 3:​13, 14.

ದೈವಭಕ್ತಿಯ ಜೀವನವನ್ನು ಬೆನ್ನಟ್ಟುತ್ತಾ ಅಬ್ರಹಾಮನು ಊರ್‌ ದೇಶದಲ್ಲಿ ತನಗಿದ್ದ ಆರಾಮೈಶ್ವರ್ಯದ ಜೀವನ ರೀತಿಯನ್ನು ಬಿಟ್ಟುಹೋದನು. (ಆದಿಕಾಂಡ 11:31) ಅನಂತರ, ಶಾಂತಿಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಅಬ್ರಹಾಮನು ದೇಶದ ಅತ್ಯುತ್ತಮ ಭಾಗವನ್ನು ತನ್ನ ಸೋದರಳಿಯನಾದ ಲೋಟನಿಗೆ ಬಿಟ್ಟುಕೊಟ್ಟಾಗ, ತನ್ನ ಶಕ್ತಿ ಮತ್ತು ಅಧಿಕಾರವನ್ನು ಇಚ್ಛಾಪೂರ್ವಕವಾಗಿ ತ್ಯಾಗಮಾಡಿದನು. (ಆದಿಕಾಂಡ 13:​8, 9) ಬೈಬಲಿನಲ್ಲಿರುವ ಯಾವ ದಾಖಲೆಯೂ ಅಬ್ರಹಾಮನನ್ನು ಮಹತ್ವಾಕಾಂಕ್ಷೆಯುಳ್ಳ ಒಬ್ಬ ವ್ಯಕ್ತಿಯಾಗಿ ಚಿತ್ರಿಸುವುದಿಲ್ಲ. ಬದಲಾಗಿ ನಂಬಿಕೆ, ವಿಧೇಯತೆ ಮತ್ತು ದೀನತೆ ಎಂಬ ಅವನ ಗುಣಗಳೇ ಅವನನ್ನು ದೇವರ ಒಬ್ಬ ನಿಜ “ಸ್ನೇಹಿತ”ನನ್ನಾಗಿ ಮಾಡಿದವು.​—⁠ಯೆಶಾಯ 41:⁠8.

ಪದವಿ, ಕೀರ್ತಿ ಮತ್ತು ಅಧಿಕಾರದ ಕಡೆಗೆ ಭಿನ್ನವಾದ ದೃಷ್ಟಿಕೋನ

ಮಹತ್ವಾಕಾಂಕ್ಷೆ ಎಂದರೆ, “ಪದವಿ, ಕೀರ್ತಿ ಅಥವಾ ಅಧಿಕಾರಕ್ಕಾಗಿನ ಅತಿಯಾದ ಆಸೆ” ಎಂದು ವಿವರಿಸಲಾಗಿದೆ. ಪುರಾತನ ಕಾಲದಲ್ಲಿದ್ದ ರಾಜ ಸೊಲೊಮೋನನಿಗೆ ಪದವಿ, ಕೀರ್ತಿ ಮತ್ತು ಅಧಿಕಾರವಿತ್ತು. ಮಾತ್ರವಲ್ಲದೆ ಅವನ ಬಳಿ ಬಹಳಷ್ಟು ಸಿರಿಸಂಪತ್ತು ಸಹ ಇತ್ತು. (ಪ್ರಸಂಗಿ 2:​3-9) ಆದರೆ ಆಸಕ್ತಿಕರವಾದ ವಿಷಯವೇನೆಂದರೆ, ಆರಂಭದಲ್ಲಿ ಅವನಿಗೆ ಅವುಗಳ ಮೇಲೆ ಯಾವುದೇ ಆಸೆಯಿರಲಿಲ್ಲ. ಸೊಲೊಮೋನನು ರಾಜತ್ವವನ್ನು ಪಡೆದುಕೊಂಡಾಗ, ಅವನಿಗೆ ಯಾವ ವರ ಬೇಕೊ ಅದನ್ನು ಕೇಳುವಂತೆ ದೇವರು ಅವನನ್ನು ಆಮಂತ್ರಿಸಿದನು. ಸೊಲೊಮೋನನು ದೀನತೆಯಿಂದ, ವಿಧೇಯ ಹೃದಯ ಮತ್ತು ಆತನ ಸ್ವಕೀಯ ಜನರನ್ನು ಆಳಲು ವಿವೇಕವನ್ನು ದಯಪಾಲಿಸುವಂತೆ ಬೇಡಿಕೊಂಡನು. (1 ಅರಸುಗಳು 3:5-9) ಅನಂತರ, ತನ್ನಲ್ಲಿದ್ದ ಎಲ್ಲ ಐಶ್ವರ್ಯ ಮತ್ತು ಅಧಿಕಾರವನ್ನು ವರ್ಣಿಸುತ್ತಾ ಸೊಲೊಮೋನನು ಹೇಳಿದ್ದು, “ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥ.”​—⁠ಪ್ರಸಂಗಿ 2:11.

ಮನುಷ್ಯರು ತಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸುವುದರ ಕುರಿತು ಸೊಲೊಮೋನನು ಏನನ್ನಾದರೂ ಹೇಳಿದ್ದನೊ? ಒಂದರ್ಥದಲ್ಲಿ ಅವನು ಹೇಳಿದನು. ತನ್ನ ಜೀವನದ ಅನೇಕ ಅನುಭವಗಳನ್ನು ಪರೀಕ್ಷಿಸುತ್ತಾ ಕೊನೆಯಲ್ಲಿ ಅವನು ಹೇಳಿದ್ದು: “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.” (ಪ್ರಸಂಗಿ 12:13) ಮನುಷ್ಯರು ಪದವಿ, ಐಶ್ವರ್ಯ, ಕೀರ್ತಿ ಅಥವಾ ಅಧಿಕಾರವನ್ನು ಗಳಿಸುವ ಮೂಲಕವಲ್ಲ ಬದಲಾಗಿ ದೇವರ ಚಿತ್ತವನ್ನು ನೆರವೇರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಉಪಯೋಗಿಸಬೇಕು.

ದೀನತೆಯನ್ನು ತೋರಿಸುವಲ್ಲಿ ಮೇಲಕ್ಕೆತ್ತಲ್ಪಡುವೆವು

ತಕ್ಕಮಟ್ಟಿಗಿನ ಸ್ವಪ್ರೀತಿಯು ತಪ್ಪಲ್ಲ. ನಮ್ಮ ನೆರೆಯವರನ್ನು ನಮ್ಮಂತೆಯೇ ಪ್ರೀತಿಸಬೇಕು ಎಂಬುದಾಗಿ ಬೈಬಲ್‌ ಹೇಳುತ್ತದೆ. (ಮತ್ತಾಯ 22:39) ಆರಾಮ ಮತ್ತು ಸಂತೋಷದ ಜೀವನವನ್ನು ಆಶಿಸುವುದು ಸ್ವಾಭಾವಿಕ. ಆದರೆ ಅದೇ ಸಮಯದಲ್ಲಿ ಶಾಸ್ತ್ರವಚನಗಳು ಕಠಿನ ಪರಿಶ್ರಮ, ದೀನತೆ ಮತ್ತು ನಮ್ರತೆಯನ್ನು ಸಹ ಉತ್ತೇಜಿಸುತ್ತವೆ. (ಜ್ಞಾನೋಕ್ತಿ 15:33; ಪ್ರಸಂಗಿ 3:13; ಮೀಕ 6:8) ಪ್ರಾಮಾಣಿಕರೂ ಭರವಸಾರ್ಹರೂ ಮತ್ತು ಕಠಿಣ ಪರಿಶ್ರಮಪಡುವವರೂ ಆಗಿರುವ ಜನರು ಹೆಚ್ಚಾಗಿ ಬೇಗನೆ ಇತರರ ಗಮನಕ್ಕೆ ಬರುತ್ತಾರೆ, ಉತ್ತಮ ಉದ್ಯೋಗವನ್ನು ಕಂಡುಕೊಳ್ಳುತ್ತಾರೆ ಮತ್ತು ಗೌರವವನ್ನು ಗಳಿಸುತ್ತಾರೆ. ಸ್ವಪ್ರಯೋಜನಕ್ಕಾಗಿ ಇತರರನ್ನು ದುರುಪಯೋಗಿಸುವ ಅಥವಾ ಸ್ಥಾನಮಾನವನ್ನು ಗಿಟ್ಟಿಸಿಕೊಳ್ಳಲಿಕ್ಕಾಗಿ ಇತರರೊಂದಿಗೆ ಸ್ಪರ್ಧಿಸುವ ಬದಲಿಗೆ, ಖಂಡಿತವಾಗಿಯೂ ಇದು ಅನುಕರಿಸಲು ಅತ್ಯುತ್ತಮವಾದ ಮಾರ್ಗವಾಗಿದೆ.

ಯೇಸು, ಮದುವೇ ಊಟದಲ್ಲಿ ತಮಗಾಗಿ ಮೊದಲನೆಯ ಸ್ಥಾನವನ್ನು ಆರಿಸಿಕೊಳ್ಳುವುದರ ವಿರುದ್ಧ ತನ್ನ ಕೇಳುಗರನ್ನು ಎಚ್ಚರಿಸಿದನು. ಅವರು ಕಡೆಯ ಸ್ಥಾನದಲ್ಲಿ ಕೂತುಕೊಂಡು, ಆತಿಥೇಯನು ಮೇಲಿನ ಸ್ಥಾನದಲ್ಲಿ ಕೂತುಕೊಳ್ಳುವಂತೆ ಅವರನ್ನು ಕರೆಯುವ ತನಕ ಕಾಯುವಂತೆ ಯೇಸು ಅವರಿಗೆ ಸಲಹೆನೀಡಿದನು. ಇದರಲ್ಲಿ ಒಳಗೂಡಿರುವ ಮೂಲತತ್ತ್ವವನ್ನು ಸ್ಪಷ್ಟವಾಗಿ ತಿಳಿಸುತ್ತಾ ಯೇಸು ಹೇಳಿದ್ದು: “ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.”​—⁠ಲೂಕ 14:​7-11.

ಸತ್ಯ ಕ್ರೈಸ್ತರು ಮಹತ್ವಾಕಾಂಕ್ಷೆಯನ್ನು ತ್ಯಜಿಸಬೇಕು

ಅಹಂಕಾರದಿಂದ ತುಂಬಿದ ಮಹತ್ವಾಕಾಂಕ್ಷೆಯು ಮಾನವ ಅಪರಿಪೂರ್ಣತೆಗೆ ಸಂಬಂಧಿಸಿದ್ದಾಗಿದೆ ಎಂದು ಬೈಬಲ್‌ ಸ್ಪಷ್ಟಪಡಿಸುತ್ತದೆ. (ಯಾಕೋಬ 4:⁠5, 6) ಅಪೊಸ್ತಲ ಯೋಹಾನನು ಒಂದು ಸಮಯದಲ್ಲಿ ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಯಾಗಿದ್ದನು. ಮಹಾಪದವಿಗಾಗಿ ಅವನಲ್ಲಿ ಎಷ್ಟು ಆಸೆಯಿತ್ತೆಂದರೆ, ಅವನು ತನ್ನ ಸಹೋದರನೊಂದಿಗೆ ಹೋಗಿ, ರಾಜ್ಯದಲ್ಲಿ ತಮಗೆ ಅತ್ಯುನ್ನತ ಸ್ಥಾನವನ್ನು ಅನುಗ್ರಹಿಸಬೇಕೆಂದು ಧೈರ್ಯದಿಂದ ಯೇಸುವನ್ನು ಕೇಳಿದನು. (ಮಾರ್ಕ 10:37) ಅನಂತರ ಯೋಹಾನನು ತನ್ನ ಮನೋಭಾವವನ್ನು ಬದಲಾಯಿಸಿಕೊಂಡನು. ವಾಸ್ತವದಲ್ಲಿ, ಅವನು ತನ್ನ ಮೂರನೇ ಪತ್ರದಲ್ಲಿ, “ಪ್ರಮುಖನಾಗಬೇಕೆಂದಿರುವ” ದಿಯೊತ್ರೇಫನನ್ನು ಬಲವಾಗಿ ಖಂಡಿಸಿದನು. (3 ಯೋಹಾನ 9, 10) ಇಂದು ಕ್ರೈಸ್ತರು ಯೇಸುವಿನ ಮಾತುಗಳನ್ನು ಹೃದಯಕ್ಕೆ ತೆಗೆದುಕೊಂಡು ತಮ್ಮನ್ನು ತಗ್ಗಿಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ, ಮಹತ್ವಾಕಾಂಕ್ಷೆ ಎಂಬ ಕೆಟ್ಟ ಗುಣವನ್ನು ತ್ಯಜಿಸಲು ಕಲಿತುಕೊಂಡ ಯೋಹಾನನ ಮಾದರಿಯನ್ನು ಅವರು ಅನುಸರಿಸುತ್ತಾರೆ.

ಒಪ್ಪತಕ್ಕ ಸಂಗತಿಯೇನೆಂದರೆ, ಒಬ್ಬ ವ್ಯಕ್ತಿಯ ಪ್ರತಿಭೆಗಳು, ಸಾಮರ್ಥ್ಯಗಳು, ಉತ್ತಮ ಕೆಲಸಗಳು ಮತ್ತು ಕಠಿನ ಪರಿಶ್ರಮ ಯಾವಾಗಲೂ ಅವನಿಗೆ ಮಾನ್ಯತೆಯನ್ನು ಖಚಿತಪಡಿಸುವುದಿಲ್ಲ. ಕೆಲವೊಮ್ಮೆ ಇವುಗಳಿಗಾಗಿ ಅವನು ತನ್ನ ಜೊತೆ ಮಾನವರಿಂದ ಮೆಚ್ಚಿಗೆಯನ್ನು ಪಡೆದುಕೊಳ್ಳಬಹುದು ಮತ್ತು ಕೆಲವೊಮ್ಮೆ ಪಡೆದುಕೊಳ್ಳದೆ ಇರಬಹುದು. (ಜ್ಞಾನೋಕ್ತಿ 22:29; ಪ್ರಸಂಗಿ 10:7) ಕೆಲವು ಸಮಯಗಳಲ್ಲಿ, ಕಡಿಮೆ ಅರ್ಹತೆಯುಳ್ಳ ಜನರು ಅಧಿಕಾರದ ಸ್ಥಾನದಲ್ಲಿರುತ್ತಾರೆ ಮತ್ತು ನಿಜವಾದ ಅರ್ಹತೆಯುಳ್ಳ ಜನರು ಗುರುತಿಸಲ್ಪಡುವುದಿಲ್ಲ. ಈ ಅಪರಿಪೂರ್ಣ ಲೋಕದಲ್ಲಿ, ಪದವಿ ಮತ್ತು ಅಧಿಕಾರವನ್ನು ಪಡೆದುಕೊಳ್ಳುವವರು ಅದಕ್ಕೆ ಯಾವಾಗಲೂ ಪೂರ್ಣ ಅರ್ಹತೆಯನ್ನು ಹೊಂದಿರುವವರು ಎಂದೇನಲ್ಲ.

ಸತ್ಕ್ರೈಸ್ತರಿಗೆ ಮಹತ್ವಾಕಾಂಕ್ಷೆ ಎಂಬ ವಿಚಾರವು ಒಂದು ನೈತಿಕ ಬಿಕ್ಕಟ್ಟನ್ನು ಉಂಟುಮಾಡುವುದಿಲ್ಲ. ಅವರ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯು ಮಹತ್ವಾಕಾಂಕ್ಷೆಯನ್ನು ತ್ಯಜಿಸುವಂತೆ ಅವರಿಗೆ ಸಹಾಯಮಾಡುತ್ತದೆ. ಎಲ್ಲ ಸನ್ನಿವೇಶಗಳಲ್ಲಿ ತಮ್ಮಿಂದಾದ ಉತ್ತಮ ಕೆಲಸವನ್ನು ಮಾಡಲು ಅವರು ಪ್ರಯತ್ನಿಸುತ್ತಾರೆ ಅಷ್ಟೆ. ಅದನ್ನು ಅವರು ದೇವರ ಘನತೆಗಾಗಿ ಮಾಡುತ್ತಾರೆ ಮತ್ತು ಫಲಿತಾಂಶವನ್ನು ದೇವರ ಕೈಯಲ್ಲಿ ಬಿಟ್ಟುಬಿಡುತ್ತಾರೆ. (1 ಕೊರಿಂಥ 10:31) ಕ್ರೈಸ್ತರು ದೇವರಿಗೆ ಭಯಪಡುವ ಮತ್ತು ಆತನ ಆಜ್ಞೆಗಳನ್ನು ಕೈಗೊಳ್ಳುವ ಮೂಲಕ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಲು ಹೆಣಗಾಡುತ್ತಾರೆ. (g05 6/8)

[ಪುಟ 16, 17ರಲ್ಲಿರುವ ಚಿತ್ರಗಳು]

ಅಬ್ರಹಾಮನು ಮಹತ್ವಾಕಾಂಕ್ಷೆ ಉಳ್ಳವನಾಗುವಂತೆ ದೇವರು ಉತ್ತೇಜಿಸಿದನೊ?