ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನಲ್ಲಿ ಆಸಕ್ತಿ ತೋರಿಸುವ ಹುಡುಗಿಯೊಂದಿಗೆ ನಾನು ಹೇಗೆ ವರ್ತಿಸಬೇಕು?

ನನ್ನಲ್ಲಿ ಆಸಕ್ತಿ ತೋರಿಸುವ ಹುಡುಗಿಯೊಂದಿಗೆ ನಾನು ಹೇಗೆ ವರ್ತಿಸಬೇಕು?

ಯುವ ಜನರು ಪ್ರಶ್ನಿಸುವುದು . . .

ನನ್ನಲ್ಲಿ ಆಸಕ್ತಿ ತೋರಿಸುವ ಹುಡುಗಿಯೊಂದಿಗೆ ನಾನು ಹೇಗೆ ವರ್ತಿಸಬೇಕು?

“ಸೂಸನ್‌ ಮೊದಲ ಹೆಜ್ಜೆಯನ್ನು ತೆಗೆದುಕೊಂಡಳು, ಮತ್ತು ಅದರಿಂದ ನನಗೆ ಯಾವುದೇ ಬೇಸರ ಆಗಲಿಲ್ಲ. ಅದು ನನಗೆ ಒಳ್ಳೆಯದೆಂದು ಕಾಣಿಸಿತು.”​—⁠ಜೇಮ್ಸ್‌. *

ಒಬ್ಬ ವ್ಯಕ್ತಿ ಸ್ತ್ರೀಯರೊಂದಿಗೆ ವ್ಯವಹರಿಸುವ ರೀತಿಯಲ್ಲಿ ಪ್ರಾಮಾಣಿಕನಾಗಿ ಇಲ್ಲದಿರುವಲ್ಲಿ, ಅದು ದುರಂತಮಯ ಪರಿಣಾಮಗಳನ್ನು ತಂದೊಡ್ಡಸಾಧ್ಯವಿದೆ.”​—⁠ರೊಬೆರ್‌ಟೊ.

ಒಬ್ಬ ಯುವತಿಯು ನಿಮ್ಮೊಂದಿಗೆ ಏನೋ ಮಾತಾಡಬೇಕು ಎಂದು ಇತ್ತೀಚೆಗೆ ಹೇಳಿದ್ದಾಳೆ ಎಂದು ನೆನಸಿ. ಸ್ನೇಹಿತರ ಗುಂಪಿನಲ್ಲಿ ನೀವು ಅವಳನ್ನು ಅನೇಕ ಬಾರಿ ನೋಡಿದ್ದೀರಿ, ಮತ್ತು ಅವಳೊಂದಿಗೆ ಮಾತಾಡುವುದೂ ಸಮಯ ಕಳೆಯುವುದೂ ಆಹ್ಲಾದಕರವಾಗಿರುತ್ತದೆ. ಆದರೆ ಅವಳು ನಿಮ್ಮೊಂದಿಗೆ ಏನೋ ಮಾತಾಡಬೇಕು ಎಂದು ಹೇಳಿದ್ದು ನಿಮ್ಮನ್ನು ಚಕಿತಗೊಳಿಸಿದೆ. ಅವಳು ನಿಮ್ಮೊಂದಿಗೆ ಪ್ರಣಯಾತ್ಮಕ ಸಂಬಂಧವನ್ನು ಹೊಂದಲು ಬಯಸುತ್ತಾಳೆ ಮತ್ತು ನಿಮಗೆ ಕೂಡ ಇದರಲ್ಲಿ ಆಸಕ್ತಿಯಿದೆಯೋ ಎಂದು ತಿಳಿದುಕೊಳ್ಳಲು ಬಯಸುತ್ತಾಳೆ.

ಈ ವಿಷಯವು, ಪ್ರಣಯಾಚರಣೆಯ ಪ್ರಸ್ತಾಪವನ್ನು ಪುರುಷನು ಆರಂಭಿಸಬೇಕು ಎಂಬ ಅಭಿಪ್ರಾಯ ನಿಮಗಿರುವಲ್ಲಿ ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಹೆಚ್ಚಿನ ವಿದ್ಯಮಾನಗಳಲ್ಲಿ ಇದು ಸತ್ಯವಾಗಿರುವುದಾದರೂ, ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವುದರಿಂದ ಅವಳು ಯಾವ ಬೈಬಲ್‌ ಮೂಲತತ್ತ್ವವನ್ನೂ ಉಲ್ಲಂಘಿಸಲಿಲ್ಲ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. * ಈ ವಾಸ್ತವಾಂಶವನ್ನು ತಿಳಿದುಕೊಳ್ಳುವುದು ಯೋಗ್ಯ ರೀತಿಯಲ್ಲಿ ಪ್ರತಿಕ್ರಿಯಿಸುವಂತೆ ನಿಮಗೆ ಸಹಾಯಮಾಡಬಹುದು.

ಈ ಪ್ರಸ್ತಾಪದ ಕುರಿತು ಆಲೋಚಿಸಿದ ಮೇಲೆ, ನನಗೆ ಇದು ಡೇಟಿಂಗ್‌ ಮಾಡುವ ವಯಸ್ಸಲ್ಲ ಎಂಬ ತೀರ್ಮಾನಕ್ಕೆ ನೀವು ಬರಬಹುದು ಅಥವಾ ಸದ್ಯಕ್ಕೆ ಆ ಹುಡುಗಿಯು ನಿಮ್ಮ ಕಣ್ಣಿಗೆ ಆಕರ್ಷಣೀಯವಾಗಿ ತೋರದೆ ಇರಬಹುದು. ನಾನು ಯಾವಾಗಲಾದರೂ ಅವಳಲ್ಲಿ ತಪ್ಪಾದ ಅಭಿಪ್ರಾಯವನ್ನು ಮೂಡಿಸಿಬಿಟ್ಟೆನೋ ಎಂಬ ದೋಷಿಭಾವನೆಯೂ ನಿಮಗಾಗಬಹುದು. ನೀವೇನು ಮಾಡಬೇಕು? ಮೊದಲು, ನೀವು ಅವಳ ಭಾವನೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.

ಅವಳ ಭಾವನೆಗಳನ್ನು ಪರಿಗಣಿಸಿರಿ

ಈ ಸನ್ನಿವೇಶದಲ್ಲಿರುವ ಒಬ್ಬ ಹುಡುಗಿಯು ಏನನ್ನು ಅನುಭವಿಸುತ್ತಾಳೆ ಎಂಬುದರ ಕುರಿತು ತುಸು ಆಲೋಚಿಸಿ. ಒಳ್ಳೆಯ ಪ್ರಭಾವವನ್ನು ಬೀರುವ ಹಂಬಲಿಕೆಯಲ್ಲಿ, ಅವಳು ಏನು ಹೇಳಬೇಕು ಎಂಬುದನ್ನು ಹಲವಾರು ದಿನಗಳಿಂದ ಪುನಃ ಪುನಃ ರಿಹರ್ಸ್‌ ಮಾಡಿರಬಹುದು. ಸರಿಯಾದ ಪದಗಳನ್ನು ಸರಿಯಾದ ಮುಗುಳ್ನಗೆಯೊಂದಿಗೆ ಸೇರಿಸಿದ ತರುವಾಯ, ನೀವು ಆಸಕ್ತಿಯಿಲ್ಲವೆಂದು ಹೇಳಿಬಿಡುವ ಸಾಧ್ಯತೆಯ ಕುರಿತು ಅವಳು ಆಲೋಚಿಸುತ್ತಾ ಅವಳ ಮನಸ್ಸಿನಲ್ಲಿ ಒಂದು ಆಂದೋಲನವೇ ಆಗಿರಬಹುದು. ಕೊನೆಯದಾಗಿ, ಸಾಕಷ್ಟು ಧೈರ್ಯವನ್ನು ತಂದುಕೊಂಡು, ತನ್ನ ಪುಕ್ಕಲುತನವನ್ನು ಬದಿಗೊತ್ತಿ, ತನ್ನ ಮನಸ್ಸಿನಲ್ಲಿರುವ ವಿಷಯವನ್ನು ನಿಮಗೆ ತಿಳಿಸುತ್ತಾಳೆ.

ಅವಳು ಈ ಎಲ್ಲಾ ಸಾಹಸಕ್ಕೆ ಕೈಹಾಕಿದ್ದು ಯಾಕೆ? ಪ್ರಾಯಶಃ ಅವಳಿಗೆ ನಿಮ್ಮ ಮೇಲೆ ಅಲ್ಪಕಾಲದ ವ್ಯಾಮೋಹವಿರಬಹುದು. ಮತ್ತೊಂದು ಬದಿಯಲ್ಲಿ, ಹೆಚ್ಚಿನ ಜನರು ಗಮನಿಸದೇ ಇರುವ ರೀತಿಯಲ್ಲಿ ಅವಳು ನಿಮ್ಮ ಒಳ್ಳೆಯ ಗುಣಗಳನ್ನು ಮೆಚ್ಚಿರಬಹುದು. ಆದುದರಿಂದ, ಅವಳ ಮಾತುಗಳಲ್ಲಿ ನೀವು ಪ್ರತಿ ದಿನ ಕೇಳಿಸಿಕೊಳ್ಳದ ಒಂದು ಮೆಚ್ಚುಗೆಯ ಮಾತು ಹುದುಗಿದ್ದದ್ದು ಸಂಭವನೀಯ.

ಈ ಅಂಶಗಳು ನಿಮ್ಮ ನಿರ್ಣಯದ ಮೇಲೆ ಪ್ರಭಾವ ಬೀರಲಿಕ್ಕಾಗಿ ಕೊಡಲ್ಪಟ್ಟಿಲ್ಲ. ಬದಲಿಗೆ, ಕೋಮಲವಾಗಿ ವರ್ತಿಸುವಂತೆ ನಿಮಗೆ ಜ್ಞಾಪಿಸಲಿಕ್ಕಾಗಿ ಕೊಡಲ್ಪಟ್ಟಿವೆ. ಜೂಲೀ ಎಂಬ ಒಬ್ಬ ಯುವ ಸ್ತ್ರೀ ಹೇಳುವುದು: “ಅವನಿಗೆ ಅವಳ ಕಡೆಗೆ ಆ ರೀತಿಯ ಭಾವನೆಗಳಿಲ್ಲದಿದ್ದರೂ, ಅವನು ಯಾರೋ ತನ್ನನ್ನು ಗಮನಿಸಿದರು ಎಂಬ ವಿಷಯದಿಂದ ಖುಷಿಪಡಬೇಕು. ಆದುದರಿಂದ, ನನಗೆ ಆಸಕ್ತಿಯಿಲ್ಲ ಎಂದು ನೇರವಾಗಿ ಹೇಳಿಬಿಡುವ ಬದಲಿಗೆ, ಕಡಿಮೆಪಕ್ಷ ಒಳ್ಳೆಯ ಮಾತುಗಳಲ್ಲಿ ಕೋಮಲಭಾವದಿಂದ ನನಗೆ ಆಸಕ್ತಿಯಿಲ್ಲ ಎಂದು ಹೇಳುವುದು ಲೇಸು.” ನೀವು ಅದನ್ನೇ ಮಾಡಲು, ಅಂದರೆ “ಕೋಮಲಭಾವದಿಂದ ನನಗೆ ಆಸಕ್ತಿಯಿಲ್ಲ” ಎಂದು ಹೇಳಲು ಬಯಸುತ್ತೀರಿ ಎಂದಿಟ್ಟುಕೊಳ್ಳೋಣ.

ಒಂದುವೇಳೆ, ನೀವು ಈಗಾಗಲೇ ಒಂದು ಸಲ ಅವಳ ಪ್ರಸ್ತಾಪವನ್ನು ನಿರಾಕರಿಸಿರುವಲ್ಲಿ ಆಗೇನು? ಈಗಂತೂ ಅವಳಿಗೆ ಅರ್ಥಮಾಡಿಸಲೇಬೇಕು ಎಂಬ ಪ್ರೇರಣೆ ನಿಮ್ಮಲ್ಲಾಗಬಹುದು. ಆ ಪ್ರಲೋಭನೆಯನ್ನು ಎದುರಿಸಿರಿ. ಜ್ಞಾನೋಕ್ತಿ 12:18 ಹೇಳುವುದು: “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿವಂತರ ಮಾತೇ ಮದ್ದು.” ನೀವು ಮತಿವಂತರ ಅಥವಾ ವಿವೇಕಿಗಳ ಹಾಗೆ ಮಾತಾಡುವುದು ಹೇಗೆ?

ಅವಳ ಭಾವನೆಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಮತ್ತು ನಿಮ್ಮನ್ನು ಇಷ್ಟು ಗೌರವಪೂರ್ವಕವಾಗಿ ನೋಡುವುದಕ್ಕಾಗಿ ನೀವು ಮೊದಲು ಅವಳಿಗೆ ಉಪಕಾರವನ್ನು ಹೇಳಬಹುದು. ನಿಮಗರಿವಿಲ್ಲದೆ ಸಹ ನೀವು ಅವಳಲ್ಲಿ ತಪ್ಪಾದ ಅನಿಸಿಕೆ ಮೂಡಲು ಕಾರಣರಾಗಿದ್ದರೆ, ಅದಕ್ಕಾಗಿ ನೀವು ಕ್ಷಮೆಯಾಚಿಸುತ್ತೀರಿ ಎಂದು ಹೇಳಿರಿ. ಸ್ಪಷ್ಟವಾಗಿ ಆದರೆ ಕೋಮಲಭಾವದಿಂದ ನನಗೆ ಆ ರೀತಿಯ ಭಾವನೆಗಳಿಲ್ಲ ಎಂದು ಅವಳಿಗೆ ತಿಳಿಸಿರಿ. ಅವಳು ನಿಮ್ಮ ಉತ್ತರವನ್ನು ಅರ್ಥಮಾಡಿಕೊಳ್ಳಲಿಲ್ಲವಾದರೆ ಮತ್ತು ನೀವು ಹೆಚ್ಚು ದೃಢತೆಯಿಂದ ಮಾತಾಡಲಿಕ್ಕಿರುವುದಾದರೂ, ಒರಟಾದ ಧ್ವನಿ ಮತ್ತು ಮನಸ್ಸನ್ನು ನೋಯಿಸುವಂಥ ಶಬ್ದಗಳನ್ನು ಉಪಯೋಗಿಸಬೇಡಿ. ನೀವು ಅವಳ ಕೋಮಲ ಭಾವನೆಗಳೊಂದಿಗೆ ವ್ಯವಹರಿಸುತ್ತಿದ್ದೀರಿ, ಆದುದರಿಂದ ಸ್ವಲ್ಪ ತಾಳ್ಮೆಯಿಂದ ಮಾತಾಡಿ. ಒಂದುವೇಳೆ ನೀವು ಅವಳ ಸ್ಥಾನದಲ್ಲಿರುವುದಾದರೆ, ಅವಳು ನಿಮಗೆ ಕೋಮಲಭಾವದಿಂದ ತನಗೆ ಆಸಕ್ತಿಯಿಲ್ಲ ಎಂದು ಹೇಳುವುದನ್ನು ಹೆಚ್ಚು ಗಣ್ಯಮಾಡುವಿರಲ್ಲವೇ?

ಆದರೆ, ನೀವು ಉದ್ದೇಶಪೂರ್ವಕವಾಗಿ ತನ್ನನ್ನು ವಂಚಿಸಿದ್ದಾಗಿ ಅವಳು ಒಂದುವೇಳೆ ಪಟ್ಟುಹಿಡಿದು ಮಾತಾಡಬಹುದು. ತನ್ನಲ್ಲಿ ಇಂಥ ಭಾವನೆಗಳು ಮೂಡುವಂತೆ ಮಾಡಿದವು ಎಂದು ಸೂಚಿಸುತ್ತಾ ಅವಳು ನಿಮ್ಮ ಕೆಲವು ವರ್ತನೆಗಳನ್ನು ಉಲ್ಲೇಖಿಸಬಹುದು. ‘ನೀವು ನನಗೆ ಆ ಹೂವನ್ನು ಕೊಟ್ರಿ ಜ್ಞಾಪಕವಿದೆಯಾ?,’ ಅಥವಾ ‘ಕಳೆದ ತಿಂಗಳು ನಾವು ಒಟ್ಟಿಗೆ ನಡೆಯುತ್ತಿದ್ದಾಗ ನೀವು ಹಾಗೆ ಹೇಳಿದ್ದು ನೆನಪಿದೆಯಾ?’ ಎಂದು ಅವಳು ಹೇಳಬಹುದು. ಈಗ ನೀವು ಗಂಭೀರವಾದ ಸ್ವಪರಿಶೀಲನೆಯನ್ನು ಮಾಡಬೇಕು.

ನಿಜಾಂಶವನ್ನು ಒಪ್ಪಿಕೊಳ್ಳಿರಿ

ಹಿಂದಿನ ಕಾಲದ ಭೂಅನ್ವೇಷಕರು, ತಾವು ಕಂಡುಹಿಡಿದ ದೇಶಗಳನ್ನು ವಶಪಡಿಸಿಕೊಳ್ಳುವ ಮತ್ತು ಶೋಷಿಸುವ ಸಾಧನಗಳಾಗಿ ವೀಕ್ಷಿಸಿದರು​—⁠ಇಂದು ಕೆಲವು ಪುರುಷರು ಸ್ತ್ರೀಯರನ್ನು ಹಾಗೆ ವೀಕ್ಷಿಸುತ್ತಾರೆ. ಅವರು ಪ್ರಣಯಾತ್ಮಕ ಸಂಬಂಧಗಳಲ್ಲಿ ಆನಂದಿಸುತ್ತಾರೆ, ಆದರೆ ಮದುವೆಯ ಜವಾಬ್ದಾರಿಯಂತೂ ಅವರಿಗೆ ಬೇಡ. ಯಾವುದೇ ಒಪ್ಪಂದಕ್ಕೊಳಗಾಗದೆ, ಅವರು ಸ್ತ್ರೀಯರನ್ನು ಮೋಹಕ್ಕೊಳಪಡಿಸುವ ಮೂಲಕ ಅವರ ಭಾವನೆಗಳೊಂದಿಗೆ ಆಟವಾಡುತ್ತಾರೆ. ಇಂತಹ ಒಬ್ಬ ವ್ಯಕ್ತಿ ಒಬ್ಬ ಸ್ತ್ರೀಯ ಪ್ರೇಮವನ್ನು ವಂಚನೆಯ ಮೂಲಕ ಪಡೆದುಕೊಳ್ಳುತ್ತಾನೆ. ಒಬ್ಬ ಕ್ರೈಸ್ತ ಹಿರಿಯನು ಹೇಳುವುದು: “ಕೆಲವು ಯುವ ಪುರುಷರು ಒಬ್ಬ ಹುಡುಗಿಯಿಂದ ಮತ್ತೊಬ್ಬ ಹುಡುಗಿಯ ಬಳಿ ಹೋಗುವಂತೆ ತೋರುತ್ತದೆ. ಒಬ್ಬ ಸ್ತ್ರೀಯ ಭಾವನೆಗಳೊಂದಿಗೆ ಈ ರೀತಿಯಲ್ಲಿ ಆಟವಾಡುವುದು ಒಳ್ಳೆಯದಲ್ಲ.” ಇಂತಹ ಸ್ವಾರ್ಥತೆಯು ಎಲ್ಲಿಗೆ ನಡೆಸುತ್ತದೆ?

“ನೆರೆಯವನನ್ನು ಮೋಸಗೊಳಿಸಿ ತಮಾಷೆಗೋಸ್ಕರ ಮಾಡಿದೆನಲ್ಲಾ ಎನ್ನುವವನು ಕೊಳ್ಳಿಗಳನ್ನೂ ಅಂಬುಗಳನ್ನೂ ಸಾವನ್ನೂ ಬೀರುವ ದೊಡ್ಡ ಹುಚ್ಚನ ಹಾಗೆ.” (ಜ್ಞಾನೋಕ್ತಿ 26:18, 19) ಒಬ್ಬ ವ್ಯಕ್ತಿ ಒಬ್ಬ ಸ್ತ್ರೀಯೊಂದಿಗೆ ಸ್ವಾರ್ಥ ಕಾರಣಗಳಿಗಾಗಿ ಒಂದು ಸಂಬಂಧವನ್ನು ಇಟ್ಟುಕೊಂಡಿರುವುದಾದರೆ, ಅವಳು ಅವನ ನಿಜ ಹೇತುಗಳನ್ನು ಕಾಲಕ್ರಮೇಣ ತಿಳಿದುಕೊಳ್ಳುವಳು. ಆಗ ಅವನ ವಂಚನೆಯು ಅವಳ ಹೃದಯವನ್ನೇ ಕತ್ತಿಯಿಂದ ತಿವಿದಂತಿರುವುದು. ಇದನ್ನೇ ಮುಂದಿನ ಉದಾಹರಣೆಯು ತೋರಿಸುತ್ತದೆ.

ಯುವ ಪುರುಷನೊಬ್ಬನು ಒಬ್ಬ ಸ್ತ್ರೀಯೊಂದಿಗೆ ಪ್ರಣಯಾತ್ಮಕ ಸಂಬಂಧವನ್ನು ಹೊಂದಿರಲು ಯಾಚಿಸಿದನು. ಆದರೆ ಅವನಿಗೆ ವಿವಾಹವಾಗುವ ಯಾವುದೇ ಆಸೆ ಇರಲಿಲ್ಲ. ಅವನು ಅವಳನ್ನು ಒಳ್ಳೊಳ್ಳೇ ರೆಸ್ಟಾರಂಟ್‌ಗಳಿಗೆ ಕರೆದೊಯ್ದನು, ಮತ್ತು ಅವರು ಒಟ್ಟಿಗೆ ಪಾರ್ಟಿಗಳಿಗೆ ಹೋಗುತ್ತಿದ್ದರು. ಅವನು ಅವಳ ಸಹವಾಸದಲ್ಲಿ ಆನಂದಿಸುತ್ತಿದ್ದನು ಮತ್ತು ಅವಳು ಸಹ, ಅವನು ತನ್ನನ್ನು ವಿವಾಹವಾಗುವ ಯೋಚನೆಯಲ್ಲಿದ್ದಾನೆ ಎಂದು ನೆನಸಿ ಅವನಿಂದ ಪಡೆದುಕೊಳ್ಳುತ್ತಿದ್ದ ಗಮನದಲ್ಲಿ ಆನಂದಿಸುತ್ತಿದ್ದಳು. ಆದರೆ ಅವನಿಗೆ ಒಟ್ಟಿಗೆ ಸುತ್ತಾಡುವುದರಲ್ಲಿ ಮಾತ್ರ ಆಸಕ್ತಿಯಿದೆ ಎಂಬುದನ್ನು ಅವಳು ತಿಳಿದುಕೊಂಡಾಗ, ಅವಳ ಮನಸ್ಸಿಗೆ ತುಂಬ ಘಾಸಿಯಾಯಿತು.

ನಿಮಗೆ ಗೊತ್ತಿಲ್ಲದೆಯೇ ನೀವು ನಿಮ್ಮನ್ನು ಸಮೀಪಿಸಿರುವ ಯುವ ಸ್ತ್ರೀಗೆ ತಪ್ಪಾದ ಅನಿಸಿಕೆ ಬರುವಂತೆ ಮಾಡಿರುವಲ್ಲಿ, ನೀವೇನು ಮಾಡಬೇಕು? ನಿಮ್ಮನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾ ನಿಮ್ಮ ವರ್ತನೆಗಳಿಗೆ ಕಾರಣವನ್ನು ಕೊಡಲು ಹೋಗುವುದಾದರೆ, ಅದು ಅವಳಲ್ಲಿ ಕೇವಲ ಕಹಿಭಾವವನ್ನು ಮೂಡಿಸುವುದು. ಬೈಬಲಿನ ಈ ಮೂಲತತ್ತ್ವವನ್ನು ಪರಿಗಣಿಸಿರಿ: “ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು.” (ಜ್ಞಾನೋಕ್ತಿ 28:13) ಆದುದರಿಂದ ಸತ್ಯವನ್ನಾಡಿರಿ. ಯಾವುದೇ ತಪ್ಪಭಿಪ್ರಾಯಗಳು ಮೂಡಿರುವಲ್ಲಿ ಅದಕ್ಕೆ ನೀವೂ ಜವಾಬ್ದಾರರು ಎಂಬುದನ್ನು ಒಪ್ಪಿಕೊಳ್ಳಿ. ನೀವು ಬೇಕುಬೇಕೆಂದೇ ಅವಳ ಭಾವನೆಗಳೊಂದಿಗೆ ಆಟವಾಡಿರುವುದಾದರೆ, ದೊಡ್ಡ ತಪ್ಪನ್ನು ಮಾಡಿದಿರಿ ಎಂಬುದನ್ನು ಒಪ್ಪಿಕೊಳ್ಳಿ. ಪ್ರಾಮಾಣಿಕವಾಗಿ ಕ್ಷಮೆಯಾಚಿಸಿ.

ಆದರೆ, ನೀವು ಕ್ಷಮೆಯಾಚಿಸಿದ ಕೂಡಲೇ ಎಲ್ಲವೂ ಮುಗಿಯಿತು ಎಂದು ತಿಳಿದುಕೊಳ್ಳಬೇಡಿ. ಆ ಯುವ ಸ್ತ್ರೀಗೆ ನಿಮ್ಮ ಮೇಲೆ ಸ್ವಲ್ಪ ಕಾಲ ಕೋಪವಿರಬಹುದು. ನಿಮ್ಮ ವರ್ತನೆಗಳ ಕುರಿತು ನೀವು ಅವಳ ಹೆತ್ತವರೊಂದಿಗೆ ಮಾತಾಡಬೇಕಾಗಿ ಬರಬಹುದು. ಮತ್ತು ನೀವು ಬೇರೆ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಗಲಾತ್ಯ 6:7 ತಿಳಿಸುವದು: “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.” ಆದರೆ ಕ್ಷಮೆಯಾಚಿಸಿ ತಪ್ಪನ್ನು ಸರಿಮಾಡುವುದರಲ್ಲಿ ನಿಮ್ಮಿಂದಾದದ್ದನ್ನು ನೀವು ಮಾಡುವಾಗ, ಅವಳು ತನ್ನ ಜೀವನವನ್ನು ಮುಂದೆ ನಡೆಸುತ್ತಾ ಹೋಗುವಂತೆ ನೀವು ಅವಳಿಗೆ ಸಹಾಯಮಾಡುತ್ತಿದ್ದೀರಿ. ಮತ್ತು ಈ ಅನುಭವವು, ಜೀವನದ ಎಲ್ಲಾ ವಿಚಾರಗಳಲ್ಲಿ ‘ವಂಚನೆಯ ಮಾತುಗಳನ್ನಾಡದೆ ತುಟಿಗಳನ್ನು’ ಕಾಪಾಡಿಕೊಳ್ಳುವ ಪಾಠವನ್ನು ನಿಮಗೆ ಕಲಿಸುವುದು. ಇದು ವಿರುದ್ಧ ಲಿಂಗದ ವ್ಯಕ್ತಿಗಳನ್ನು ಒಳಗೊಂಡ ವಿಚಾರಗಳಿಗೂ ಅನ್ವಯಿಸುತ್ತದೆ.​—⁠ಕೀರ್ತನೆ 34:⁠13.

ಉತ್ತರ ಕೊಡುವ ಮುಂಚೆ ಗಂಭೀರವಾಗಿ ಆಲೋಚಿಸಿರಿ

ಒಂದುವೇಳೆ ಆ ಹುಡುಗಿಯ ಕುರಿತು ನೀವು ಹೆಚ್ಚನ್ನು ತಿಳಿದುಕೊಳ್ಳಲು ಬಯಸುವುದಾದರೆ ಆಗೇನು? ವಿಷಯವು ಹೀಗಿರುವುದಾದರೆ, ಡೇಟಿಂಗ್‌ ಮತ್ತು ಪ್ರಣಯಾತ್ಮಕ ಅಭಿವ್ಯಕ್ತಿಗಳು ಕೇವಲ ಸಂತೋಷವಾಗಿ ಸಮಯವನ್ನು ಕಳೆಯಲಿಕ್ಕಾಗಿರುವ ವಿಧಾನಗಳು ಅಲ್ಲ ಎಂಬುದನ್ನು ನೀವು ಗ್ರಹಿಸಿಕೊಳ್ಳಬೇಕು. ಡೇಟಿಂಗ್‌ ಮಾಡುತ್ತಿರುವ ಯುವಕ ಮತ್ತು ಯುವತಿ ಪರಸ್ಪರ ಬೆಳೆಸಿಕೊಳ್ಳುವ ಬಲವಾದ ಭಾವನೆಗಳು, ವಿವಾಹದಲ್ಲಿನ ಒಂದು ಒಪ್ಪಂದಕ್ಕೆ ಕೈತೋರಿಸುವಂಥ ಚಿಹ್ನೆಗಳಾಗಿರುತ್ತವೆ. ಅವರು ವಿವಾಹವಾದ ಮೇಲೆ, ಗಂಡ ಮತ್ತು ಹೆಂಡತಿ ಎಂಬ ಬಂಧವನ್ನು ಬೆಸೆಯಲು ಆ ಭಾವನೆಗಳು ಸಹಾಯಮಾಡುತ್ತವೆ. ಈ ವಿಚಾರವನ್ನು ತಿಳಿದುಕೊಳ್ಳುವುದು ನಿಮ್ಮ ಮೇಲೆ ಈಗ ಯಾವ ಪ್ರಭಾವವನ್ನು ಬೀರುತ್ತದೆ?

ನಿಮಗೆ ಪ್ರಸ್ತಾವನ್ನು ಮಾಡಿರುವ ಯುವತಿಯ ಕುರಿತು ಆಲೋಚಿಸಿದ ಮೇಲೆ, ಅವಳು ಅನೇಕ ವಿಧಗಳಲ್ಲಿ ಆಕರ್ಷಣೀಯವಾಗಿದ್ದಾಳೆ ಎಂದು ನಿಮಗನಿಸಬಹುದು. ಅವಳು ಪ್ರಸ್ತಾಪವನ್ನು ಮಾಡಿದ್ದಾಳೆ, ಮತ್ತು ನೀವು ಅದನ್ನು ತಳ್ಳಿಹಾಕಲು ಬಯಸುವುದಿಲ್ಲ. ಆದರೆ ಪ್ರೀತಿಪ್ರೇಮದಲ್ಲಿ ಕಣ್ಮುಚ್ಚಿಕೊಂಡು ಒಮ್ಮೆಲೆ ಧುಮುಕಿಬಿಡುವ ಬದಲಿಗೆ, ಮುಂದೆ ಆಗಬಹುದಾದ ತೀವ್ರ ನೋವಿನಿಂದ ನಿಮ್ಮಿಬ್ಬರನ್ನೂ ರಕ್ಷಿಸಿಕೊಳ್ಳಲು ಈಗ ಹೆಜ್ಜೆಗಳನ್ನು ತೆಗೆದುಕೊಳ್ಳಿ.

ಒಂದು ಹಂತದಲ್ಲಿ, ಅವಳ ಕುರಿತು ತಿಳಿದಿರುವ ಕೆಲವು ಪ್ರೌಢ ವ್ಯಕ್ತಿಗಳನ್ನು ವಿಚಾರಿಸಲು ನೀವು ಮನಸ್ಸು ಮಾಡಬಹುದು. ನಿಮ್ಮ ಕುರಿತು ತಿಳಿದಿರುವ ಕೆಲವರೊಂದಿಗೆ ಇದನ್ನೇ ಮಾಡುವಂತೆ ಅವಳಿಗೂ ತಿಳಿಸಿರಿ. ನೀವಿಬ್ಬರೂ ಆ ಪ್ರೌಢ ವ್ಯಕ್ತಿಗಳ ಬಳಿ, ಅವರು ನಿಮ್ಮಲ್ಲಿ ಯಾವ ಒಳ್ಳೆಯ ಗುಣಗಳನ್ನು ಮತ್ತು ಬಲಹೀನತೆಗಳನ್ನು ಕಂಡುಕೊಳ್ಳುತ್ತಾರೆ ಎಂದು ಕೇಳಬೇಕು. ಮಾತ್ರವಲ್ಲದೆ, ಕ್ರೈಸ್ತ ಹಿರಿಯರ ಅಭಿಪ್ರಾಯವನ್ನು ಸಹ ನೀವು ಕೇಳಬಹುದು. ನೀವು ಯಾರಲ್ಲಿ ಪ್ರಣಯಾತ್ಮಕ ಆಸಕ್ತಿಯನ್ನು ಹೊಂದಿದ್ದೀರೋ ಆ ವ್ಯಕ್ತಿಗೆ ಕ್ರೈಸ್ತ ಸಭೆಯಲ್ಲಿ ಒಳ್ಳೆಯ ಹೆಸರಿದೆಯೋ ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೇದು.

ಆದರೆ, ‘ಇತರರು ನನ್ನ ವೈಯಕ್ತಿಕ ಜೀವನದ ವಿಷಯದಲ್ಲಿ ಏಕೆ ಇಷ್ಟು ತಲೆಹಾಕಬೇಕು?’ ಎಂದು ನೀವು ಹೇಳಬಹುದು. ಆದರೆ ನಿಜ ಸಂಗತಿ ಏನೆಂದರೆ, ಪ್ರಣಯಾಚರಣೆ ಎಂಬಂಥ ವೈಯಕ್ತಿಕ ವಿಚಾರಗಳಲ್ಲೂ ಇತರರ ಅಭಿಪ್ರಾಯವನ್ನು ಪಡೆದುಕೊಳ್ಳುವುದು ವಿವೇಕಯುತವಾಗಿದೆ. ವಾಸ್ತವದಲ್ಲಿ, ಅದು ಶಾಸ್ತ್ರೀಯವಾಗಿದೆ ಕೂಡ. ಏಕೆಂದರೆ ಜ್ಞಾನೋಕ್ತಿ 15:22 ಹೇಳುವುದು: “ಬಹು ಮಂದಿ ಆಲೋಚನಾಪರರಿರುವಲ್ಲಿ [ಉದ್ದೇಶಗಳು] ಈಡೇರುವವು.” ನೀವು ಯಾರೊಂದಿಗೆ ಮಾತಾಡುತ್ತೀರೋ ಆ ವಯಸ್ಕರು ನಿಮಗಾಗಿ ಒಂದು ತೀರ್ಮಾನವನ್ನು ಮಾಡುವುದಿಲ್ಲ. ಆದರೆ ಅವರು ನೀಡುವ “ಆದರಣೆಯ ಸಲಹೆಯು,” ನಿಮ್ಮಲ್ಲಿರುವ ಮತ್ತು ನೀವು ಆ ವ್ಯಕ್ತಿಯಲ್ಲಿ ಕಾಣದ ಅಂಶಗಳನ್ನು ಬಯಲುಪಡಿಸಬಹುದು.​—⁠ಜ್ಞಾನೋಕ್ತಿ 27:​9, NIBV.

ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟ ಜೇಮ್ಸ್‌ ಇದನ್ನು ಮಾಡಿದನು. ಅವನು ಮನೆಯಿಂದ ದೂರ ವಾಸಿಸುತ್ತಿದ್ದನಾದರೂ, ಸೂಸನ್‌ಳ ಬಗ್ಗೆ ತನ್ನ ಹೆತ್ತವರೊಂದಿಗೆ ಮಾತಾಡಿದನು. ಅನಂತರ, ತಮ್ಮ ಜೋಡಿ ಹೇಗಿರಬಹುದು ಎಂಬುದರ ಕುರಿತು ತಿಳಿಸಲು ಸಾಧ್ಯವಿದ್ದ ಇತರ ಪ್ರೌಢ ವ್ಯಕ್ತಿಗಳ ಅಭಿಪ್ರಾಯವನ್ನು ಅವರು ಕೇಳಿ ಪಡೆದರು. ಪರಸ್ಪರರ ಬಗ್ಗೆ ಒಳ್ಳೆಯ ವರದಿಗಳನ್ನು ಪಡೆದುಕೊಂಡಾನಂತರ, ತಾವು ವಿವಾಹವಾಗಬಹುದೋ ಎಂಬುದನ್ನು ನೋಡಲಿಕ್ಕಾಗಿ ಜೇಮ್ಸ್‌ ಮತ್ತು ಸೂಸನ್‌ ಡೇಟಿಂಗ್‌ ಮಾಡಲಾರಂಭಿಸಿದರು. ನೀವು ಭಾವನಾತ್ಮಕವಾಗಿ ಹೆಚ್ಚು ಆಪ್ತರಾಗುವ ಮುಂಚೆ ಈ ಕ್ರಿಯಾಕ್ರಮವನ್ನು ಅನುಸರಿಸುವುದಾದರೆ, ನೀವು ಅಂತಿಮವಾಗಿ ನಿಮ್ಮ ನಿರ್ಧಾರವನ್ನು ಹೆಚ್ಚು ಭದ್ರವಾದ ಅನಿಸಿಕೆಯೊಂದಿಗೆ ಮಾಡಬಲ್ಲಿರಿ.

ಎಲ್ಲಕ್ಕಿಂತಲೂ ಮಿಗಿಲಾಗಿ, ಯೆಹೋವನಿಗೆ ಪ್ರಾರ್ಥಿಸಿರಿ. ಡೇಟಿಂಗ್‌ ವಿವಾಹಕ್ಕೆ ನಡೆಸುವ ಒಂದು ಹೆಜ್ಜೆಯಾಗಿರುವುದರಿಂದ, ಆ ಯುವ ಸ್ತ್ರೀಯೊಂದಿಗಿನ ನಿಮ್ಮ ಸಂಬಂಧವು ವಿವಾಹವೆಂಬ ಗುರಿಯತ್ತ ನಡೆಸುವುದೋ ಎಂಬುದನ್ನು ನೋಡಲು ನಿಮಗೆ ಸಹಾಯಮಾಡುವಂತೆ ದೇವರನ್ನು ಕೇಳಿಕೊಳ್ಳಿ. ಅದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿ, ನಿಮ್ಮನ್ನು ದೇವರ ಸಮೀಪಕ್ಕೆ ತರುವಂಥ ನಿರ್ಧಾರಗಳನ್ನು ಮಾಡಲು ನಿಮಗಿಬ್ಬರಿಗೂ ಸಹಾಯವನ್ನು ನೀಡುವಂತೆ ಆತನನ್ನು ಕೇಳಿಕೊಳ್ಳಿ. ನಿಮ್ಮಿಬ್ಬರ ನಿಜವಾದ ಸಂತೋಷವು ಅದರಲ್ಲೇ ಅಡಕವಾಗಿದೆ. (g05 6/22)

[ಪಾದಟಿಪ್ಪಣಿಗಳು]

^ ಈ ಲೇಖನದಲ್ಲಿ ಕೊಡಲ್ಪಟ್ಟಿರುವ ಹೆಸರುಗಳು ಬದಲಾಯಿಸಲ್ಪಟ್ಟಿವೆ.

^ ಇಸವಿ 2004ರ ಅಕ್ಟೊಬರ್‌ 22 ಮತ್ತು ಡಿಸೆಂಬರ್‌ 22ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಗಳಲ್ಲಿರುವ “ಯುವ ಜನರು ಪ್ರಶ್ನಿಸುವುದು” ಎಂಬ ಲೇಖನಗಳು, ಒಬ್ಬ ಸ್ತ್ರೀ ಹೇಗೆ ಒಂದು ಪ್ರಣಯಾತ್ಮಕ ಸಂಬಂಧದ ಪ್ರಸ್ತಾಪವನ್ನು ಮಾಡಬಹುದು ಎಂಬುದರ ಕುರಿತು ಮಾತಾಡುತ್ತವೆ.

[ಪುಟ 19ರಲ್ಲಿರುವ ಚಿತ್ರಗಳು]

ನಿಮಗೆ ನಿಜವಾಗಿಯೂ ಆಸಕ್ತಿ ಇಲ್ಲದಿರುವುದಾದರೆ, ನೀವು ತಪ್ಪಾದ ಅಭಿಪ್ರಾಯಗಳು ಮೂಡಿಸುತ್ತಿಲ್ಲ ಎಂಬ ವಿಷಯವನ್ನು ಖಾತ್ರಿಪಡಿಸಿಕೊಳ್ಳಿ