ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೇನು ಮಾನವನಿಗೆ ಜೇನುನೊಣದ ಕೊಡುಗೆ

ಜೇನು ಮಾನವನಿಗೆ ಜೇನುನೊಣದ ಕೊಡುಗೆ

ಜೇನು ಮಾನವನಿಗೆ ಜೇನುನೊಣದ ಕೊಡುಗೆ

ಮೆಕ್ಸಿಕೋದ ಎಚ್ಚರ! ಲೇಖಕರಿಂದ

ಕಾಡಿನಲ್ಲಿ ಜೇನುತುಪ್ಪ ತುಂಬಿ ಹರಿಯುತ್ತಿದ್ದ ಜೇನುಗೂಡನ್ನು ಆಕಸ್ಮಿಕವಾಗಿ ಕಂಡುಕೊಂಡಾಗ, ಬಳಲಿ ಬೆಂಡಾಗಿದ್ದ ಒಬ್ಬ ಇಸ್ರಾಯೇಲ್ಯ ಸೈನಿಕನು ತನ್ನ ಕೋಲನ್ನು ಅದರಲ್ಲಿ ಅದ್ದಿ ಸ್ವಲ್ಪ ಜೇನುತುಪ್ಪವನ್ನು ತಿಂದನು. ಆ ಕೂಡಲೆ “ಅವನ ಕಣ್ಣುಗಳು ಕಳೆಗೊಂಡವು” ಮತ್ತು ಅವನ ಶಕ್ತಿಯು ನವೀಕರಿಸಲ್ಪಟ್ಟಿತು. (1 ಸಮುವೇಲ 14:25-30) ಈ ಬೈಬಲ್‌ ವೃತ್ತಾಂತವು, ಮಾನವನಿಗೆ ಪ್ರಯೋಜನದಾಯಕವಾಗಿರುವ ಜೇನುತುಪ್ಪದ ಒಂದು ಗುಣಲಕ್ಷಣವನ್ನು ದೃಷ್ಟಾಂತಿಸುತ್ತದೆ. ಇದು ತ್ವರಿತಗತಿಯ ಶಕ್ತಿಯ ಮೂಲವಾಗಿದ್ದು, ಮುಖ್ಯವಾಗಿ ಸುಮಾರು 82 ಪ್ರತಿಶತ ಕಾರ್ಬೊಹೈಡ್ರೇಟು (ಶರ್ಕರಪಿಷ್ಟ)ಗಳಿಂದ ಕೂಡಿದ್ದಾಗಿದೆ. ಆಸಕ್ತಿಕರವಾಗಿಯೇ, ಕೇವಲ 30 ಗ್ರಾಮ್‌ಗಳಷ್ಟು ಜೇನುತುಪ್ಪದಲ್ಲಿ ಒದಗಿಸಲ್ಪಡುವ ಶಕ್ತಿಯ ಸಹಾಯದಿಂದ ಒಂದು ಜೇನುನೊಣವು ಇಡೀ ಲೋಕವನ್ನೇ ಸುತ್ತಿ ಬರಬಲ್ಲದು ಎಂದು ಊಹಿಸಲಾಗುತ್ತದೆ!

ಜೇನುನೊಣಗಳು ಕೇವಲ ಮಾನವನ ಪ್ರಯೋಜನಕ್ಕಾಗಿಯೇ ಜೇನುತುಪ್ಪವನ್ನು ತಯಾರಿಸುತ್ತವೋ? ಇಲ್ಲ, ಅವು ಆಹಾರಕ್ಕಾಗಿ ಜೇನುತುಪ್ಪದ ಮೇಲೆ ಹೊಂದಿಕೊಂಡಿವೆ. ಸಾಧಾರಣ ಗಾತ್ರದ ಒಂದು ಜೇನುಗೂಡಿನಲ್ಲಿರುವ ಜೇನುನೊಣಗಳಿಗೆ, ಚಳಿಗಾಲವನ್ನು ಪಾರಾಗಿ ಉಳಿಯಲಿಕ್ಕಾಗಿ 10ರಿಂದ 15 ಕಿಲೊಗ್ರಾಮ್‌ಗಳಷ್ಟು ಜೇನುತುಪ್ಪದ ಅಗತ್ಯವಿರುತ್ತದೆ. ಆದರೆ, ಅನುಕೂಲಕರವಾದ ಋತುವಿನಲ್ಲಿ ಒಂದು ಜೇನುಗೂಡು ಸುಮಾರು 25 ಕಿಲೊಗ್ರಾಮ್‌ಗಳಷ್ಟು ಜೇನುತುಪ್ಪವನ್ನು ಉತ್ಪಾದಿಸಸಾಧ್ಯವಿದೆ. ಇದು ಹೆಚ್ಚಿನ ಜೇನುತುಪ್ಪವನ್ನು ಮಾನವರು ಸಂಗ್ರಹಿಸಿ ಆಸ್ವಾದಿಸುವಂತೆ ಹಾಗೂ ಕರಡಿಗಳು ಮತ್ತು ರಕೂನ್‌ಗಳಂಥ ಪ್ರಾಣಿಗಳು ತಿಂದು ಸವಿಯುವಂತೆ ಅನುಮತಿಸುತ್ತದೆ.

ಜೇನುನೊಣಗಳು ಹೇಗೆ ಜೇನುತುಪ್ಪವನ್ನು ತಯಾರಿಸುತ್ತವೆ? ಆಹಾರವನ್ನು ಹುಡುಕುತ್ತಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹಾರುವ ಜೇನುನೊಣಗಳು, ಹೂವುಗಳಿಂದ ಮಕರಂದವನ್ನು ಟ್ಯೂಬ್‌ನಂತಿರುವ ತಮ್ಮ ನಾಲಗೆಗಳಿಂದ ಹೀರಿಕೊಂಡು ಸಂಗ್ರಹಿಸುತ್ತವೆ. ಅವು ಅದನ್ನು ತಮ್ಮ ಉದರಗಳಲ್ಲೊಂದರಲ್ಲಿ ತುಂಬಿಕೊಂಡು ಜೇನುಗೂಡಿಗೆ ಒಯ್ಯುತ್ತವೆ. ಆ ಮಕರಂದವು ಇತರ ಜೇನುನೊಣಗಳಿಗೆ ರವಾನಿಸಲ್ಪಡುತ್ತವೆ. ಈ ಜೇನುನೊಣಗಳು ಅದನ್ನು ಸುಮಾರು ಅರ್ಧ ತಾಸಿನ ವರೆಗೆ “ಜಗಿಯುತ್ತವೆ” ಮತ್ತು ಅವುಗಳ ಬಾಯಿಯಲ್ಲಿರುವ ಗ್ರಂಥಿಗಳಿಂದ ಬರುವ ಕಿಣ್ವಗಳೊಂದಿಗೆ ಮಿಶ್ರಗೊಳಿಸುತ್ತವೆ. ತದನಂತರ ಅವು ಅದನ್ನು ಮೇಣದಿಂದ ಮಾಡಲ್ಪಟ್ಟಿರುವ ಷಡ್ಭುಜಾಕೃತಿಯ ಕೋಶಗಳಲ್ಲಿ ತುಂಬಿಸಿ, ಒಣಗಿಸಲಿಕ್ಕಾಗಿ ತಮ್ಮ ರೆಕ್ಕೆಗಳಿಂದ ಗಾಳಿಬೀಸುತ್ತವೆ. * ಅದರಲ್ಲಿರುವ ನೀರಿನ ಅಂಶವು 18 ಪ್ರತಿಶತಕ್ಕಿಂತಲೂ ಕಡಿಮೆಯಾದಾಗ, ಆ ಕೋಶಗಳ ಬಾಯನ್ನು ಮೇಣದ ತೆಳು ಪದರದಿಂದ ಮುಚ್ಚುತ್ತವೆ. ಹೀಗೆ ಮುಚ್ಚಲ್ಪಟ್ಟ ಜೇನುತುಪ್ಪವನ್ನು ಅನಿಶ್ಚಿತ ಕಾಲಾವಧಿಯ ವರೆಗೆ ಹಾಗೆಯೇ ಇಡಸಾಧ್ಯವಿದೆ. ವರದಿಯಾಗಿರುವಂತೆ, ತಿನ್ನಲು ತುಂಬ ಯೋಗ್ಯವಾದ ಜೇನುತುಪ್ಪವನ್ನು, ಸುಮಾರು 3,000 ವರ್ಷಗಳಷ್ಟು ಹಿಂದಿನ ಕಾಲದ ಫರೋಹರ ಸಮಾಧಿಗಳಲ್ಲಿ ಕಂಡುಹಿಡಿಯಲಾಗಿದೆ.

ಜೇನುತುಪ್ಪದ ಔಷಧೀಯ ಗುಣಲಕ್ಷಣಗಳು

ಬಿ ವಿಟಮಿನ್‌ಗಳು, ಬೇರೆ ಬೇರೆ ಖನಿಜಪದಾರ್ಥಗಳು ಮತ್ತು ಆಕ್ಸಿಡೀನಿರೋಧಕಗಳ ನಿಜವಾದ ಭಂಡಾರವಾಗಿರುವ ಜೇನುತುಪ್ಪವು ಅಪೂರ್ವವಾದ ಆಹಾರಪದಾರ್ಥವಾಗಿದೆ ಮಾತ್ರವಲ್ಲ, ಈಗಲೂ ಉಪಯೋಗಿಸಲ್ಪಡುತ್ತಿರುವ ತುಂಬ ಪ್ರಸಿದ್ಧವಾದ ಅತಿ ಪುರಾತನ ಔಷಧಗಳಲ್ಲಿ ಒಂದಾಗಿದೆ. * ಯು.ಎಸ್‌.ಎ.ಯ ಇಲಿನೊಯಿ ವಿಶ್ವವಿದ್ಯಾನಿಲಯದಲ್ಲಿ ಕೀಟಶಾಸ್ತ್ರಜ್ಞರಾಗಿರುವ ಡಾ. ಮೇ ಬರನ್‌ಬೌಮ್‌ ಹೇಳಿಕೆ ನೀಡುವುದು: “ಗಾಯಗಳು, ಸುಡುಗಾಯಗಳು, ಕ್ಯಾಟರ್ಯಾಕ್ಟ್‌, ಚರ್ಮದ ಹುಣ್ಣುಗಳು ಮತ್ತು ಕೆರೆತದ ಗಾಯಗಳಂಥ ಬೇರೆ ಬೇರೆ ರೀತಿಯ ವೈದ್ಯಕೀಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿಕ್ಕಾಗಿ ಜೇನುತುಪ್ಪವನ್ನು ಶತಮಾನಗಳಿಂದಲೂ ಉಪಯೋಗಿಸಲಾಗುತ್ತಿದೆ.”

ಜೇನುತುಪ್ಪದ ಔಷಧೀಯ ಮೌಲ್ಯದಲ್ಲಿನ ಇತ್ತೀಚಿನ ಆಸಕ್ತಿಯ ಕುರಿತಾಗಿ ಹೇಳಿಕೆ ನೀಡುತ್ತಾ ಸಿ.ಎನ್‌.ಎನ್‌. ನ್ಯೂಸ್‌ ನೆಟ್‌ವರ್ಕ್‌ ಹೀಗೆ ವರದಿಸುತ್ತದೆ: “IIನೇ ಲೋಕ ಯುದ್ಧದ ಸಮಯದಲ್ಲಿ ಆ್ಯಂಟಿಬಯಾಟಿಕ್‌ ಬ್ಯಾಂಡೇಜುಗಳು ಮತ್ತು ಮುಲಾಮುಗಳು ವಿಕಸಿಸಲ್ಪಟ್ಟಾಗ, ಜೇನುತುಪ್ಪವು ಗಾಯಕ್ಕೆ ಮುಲಾಮಿನಂತೆ ಉಪಯೋಗಿಸಲ್ಪಡುವುದು ನಿಂತುಹೋಯಿತು. ಆದರೆ ಹೊಸ ಸಂಶೋಧನೆ ಮತ್ತು ಆ್ಯಂಟಿಬಯಾಟಿಕ್‌ ಪ್ರತಿರೋಧಕ ಬ್ಯಾಕ್ಟೀರಿಯಗಳ ಹೆಚ್ಚಳದ ಪರಿಣಾಮವಾಗಿ, ಅಸ್ವಸ್ಥತೆಗೆ ಅಥವಾ ಗಾಯಗಳಿಗೆ ಚಿಕಿತ್ಸೆ ನೀಡುವುದರಲ್ಲಿ ದೀರ್ಘಕಾಲದಿಂದಲೂ ಅಸ್ತಿತ್ವದಲ್ಲಿದ್ದ ಈ ಸಾಂಪ್ರದಾಯಿಕ ಚಿಕಿತ್ಸೆಯು ಈಗ ಪುನಃ ಉಪಯೋಗಿಸಲ್ಪಡುತ್ತಿದೆ.” ಉದಾಹರಣೆಗೆ, ಈ ಸಂಶೋಧನೆಯ ಒಂದು ಕ್ಷೇತ್ರವು ಸುಡುಗಾಯಗಳ ಚಿಕಿತ್ಸೆಯನ್ನು ಒಳಗೂಡಿದೆ. ಜೇನುತುಪ್ಪವನ್ನು ಮುಲಾಮಾಗಿ ಬಳಸಿದಾಗ ಸುಡುಗಾಯಗಳು ಬೇಗನೆ ಗುಣವಾದವು ಮತ್ತು ನೋವು ಹಾಗೂ ಕಲೆಗಳು ಸಹ ಕಡಿಮೆಯಾಗಿದ್ದವು ಎಂಬುದನ್ನು ಗಮನಿಸಲಾಗಿದೆ.

ಜೇನುನೊಣಗಳು ಮಕರಂದಕ್ಕೆ ಕೂಡಿಸುವಂಥ ಒಂದು ಕಿಣ್ವದಿಂದಾಗಿ ಜೇನುತುಪ್ಪದಲ್ಲಿ ಸ್ವಲ್ಪಮಟ್ಟಿಗೆ ಬ್ಯಾಕ್ಟೀರಿಯನಿರೋಧಕ ಹಾಗೂ ಆ್ಯಂಟಿಬಯಾಟಿಕ್‌ ಗುಣಲಕ್ಷಣಗಳು ಇರುತ್ತವೆ ಎಂದು ಅಧ್ಯಯನಗಳು ತೋರಿಸುತ್ತವೆ. ಈ ಕಿಣ್ವವು, ಹಾನಿಕಾರಕ ಬ್ಯಾಕ್ಟೀರಿಯಗಳನ್ನು ಕೊಲ್ಲುವಂಥ ಹೈಡ್ರೊಜನ್‌ ಪರಾಕ್ಸೈಡನ್ನು ಉತ್ಪಾದಿಸುತ್ತದೆ. * ಅಷ್ಟುಮಾತ್ರವಲ್ಲ, ಚಿಕಿತ್ಸೆ ನೀಡಲ್ಪಡುತ್ತಿರುವಂಥ ದೇಹಭಾಗದ ಮೇಲೆ ಜೇನುತುಪ್ಪವನ್ನು ಹಚ್ಚಿದರೆ ಅದು ಉರಿಯೂತವನ್ನು ಕಡಿಮೆಮಾಡುತ್ತದೆ ಮತ್ತು ಆರೋಗ್ಯಕರ ಅಂಗಾಂಶಗಳ ಬೆಳವಣಿಗೆಯನ್ನು ಪ್ರವರ್ಧಿಸುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಹೀಗೆ, ನ್ಯೂ ಸೀಲೆಂಡ್‌ನ ಜೀವರಸಾಯನ ವಿಜ್ಞಾನಿ ಡಾ. ಪೀಟರ್‌ ಮೋಲನ್‌ ಹೇಳುವುದು: “ಜೇನುತುಪ್ಪವು ಈಗ, ಸಾಂಪ್ರದಾಯಿಕ ಔಷಧ ಚಿಕಿತ್ಸಕರಿಂದ ಹೆಸರುವಾಸಿಯಾದ ಮತ್ತು ಪರಿಣಾಮಕಾರಿಯಾದ ಚಿಕಿತ್ಸಕ ಪದಾರ್ಥವಾಗಿ ಅಂಗೀಕರಿಸಲ್ಪಡುತ್ತಿದೆ.” ವಾಸ್ತವದಲ್ಲಿ, ಆಸ್ಟ್ರೇಲಿಯದ ಚಿಕಿತ್ಸೆಯ ಸಾಮಾನನ್ನು ಒದಗಿಸುವ ಕಾರ್ಯಾಂಗವು ಜೇನುತುಪ್ಪವನ್ನು ಔಷಧವಾಗಿ ಅಂಗೀಕರಿಸಿದೆ, ಮತ್ತು ಆ ದೇಶದಲ್ಲಿ ಔಷಧೀಯ ಜೇನುತುಪ್ಪವು ಗಾಯದ ಮುಲಾಮಾಗಿ ಮಾರುಕಟ್ಟೆಯಲ್ಲಿ ಲಭ್ಯಗೊಳಿಸಲ್ಪಟ್ಟಿದೆ.

ಇಷ್ಟೊಂದು ಪೌಷ್ಟಿಕಾಂಶಗಳನ್ನು ಒಳಗೂಡಿರುವ ಮತ್ತು ರುಚಿಕರವಾಗಿರುವ ಅದೇ ಸಮಯದಲ್ಲಿ ಔಷಧಕ್ಕಾಗಿಯೂ ಉಪಯೋಗಿಸಲ್ಪಡುವ ಇತರ ಯಾವ ಆಹಾರಪದಾರ್ಥಗಳು ನಿಮಗೆ ಗೊತ್ತಿವೆ? ಆದುದರಿಂದ, ಗತ ಸಮಯಗಳಲ್ಲಿ ಜೇನುನೊಣಗಳನ್ನು ಮತ್ತು ಜೇನುಸಾಕುವವರನ್ನು ಸಂರಕ್ಷಿಸಲಿಕ್ಕಾಗಿ ವಿಶೇಷ ನಿಯಮಗಳು ಏಕೆ ಜಾರಿಗೆ ತರಲ್ಪಟ್ಟವು ಎಂಬುದನ್ನು ನಾವು ಅರ್ಥಮಾಡಿಕೊಳ್ಳಸಾಧ್ಯವಿದೆ! ಜೇನುನೊಣಗಳು ವಾಸಿಸುತ್ತಿರುವಂಥ ಮರಗಳಿಗೆ ಅಥವಾ ಜೇನುಗೂಡುಗಳಿಗೆ ಹಾನಿಮಾಡುವುದನ್ನು ಒಂದು ಅಪರಾಧವಾಗಿ ಪರಿಗಣಿಸಲಾಗುತ್ತಿತ್ತು ಮತ್ತು ಇದಕ್ಕೆ ಶಿಕ್ಷೆಯಾಗಿ ಭಾರೀ ದಂಡಗಳನ್ನು ತೆರಬೇಕಾಗುತ್ತಿತ್ತು ಅಥವಾ ಮರಣದಂಡನೆಯನ್ನು ಸಹ ಅನುಭವಿಸಬೇಕಾಗುತ್ತಿತ್ತು. ನಿಜವಾಗಿಯೂ, ಜೇನುತುಪ್ಪವು ಮಾನವನಿಗೆ ಒಂದು ಅಮೂಲ್ಯ ಕೊಡುಗೆಯಾಗಿದೆ ಮತ್ತು ಸೃಷ್ಟಿಕರ್ತನಿಗೆ ಒಂದು ಕೀರ್ತಿಯಾಗಿದೆ. (g05 8/8)

[ಪಾದಟಿಪ್ಪಣಿಗಳು]

^ ಯಾವುದರಿಂದ ಜೇನುನೊಣಗಳು ಜೇನುಗೂಡನ್ನು ಕಟ್ಟುತ್ತವೋ ಆ ಮೇಣವು, ಜೇನುನೊಣದ ದೇಹದಲ್ಲಿರುವ ವಿಶೇಷ ಗ್ರಂಥಿಗಳಿಂದ ಉಂಟುಮಾಡಲ್ಪಡುತ್ತದೆ. ಜೇನುಗೂಡಿನ ಕೋಶಗಳ ಷಡ್ಭುಜಾಕೃತಿಯು, ಕೋಶದ ತೆಳು ಗೋಡೆಗಳು​—⁠ಒಂದು ಮಿಲಿಮೀಟರಿನ ಮೂರನೇ ಒಂದು ಭಾಗದಷ್ಟು ದಪ್ಪ​—⁠ತಮ್ಮ ತೂಕಕ್ಕಿಂತ 30 ಪಟ್ಟು ಹೆಚ್ಚು ತೂಕವನ್ನು ಹಿಡಿದಿಟ್ಟುಕೊಳ್ಳಲು ಅನುಕೂಲಕರವಾಗಿದೆ. ಹೀಗೆ ಜೇನುಗೂಡು ಅದ್ಭುತಕರವಾದ ತಾಂತ್ರಿಕತೆಯಾಗಿದೆ.

^ ಜೇನುತುಪ್ಪವು ಶಿಶುಗಳಿಗೆ ಶಿಫಾರಸ್ಸುಮಾಡಲ್ಪಟ್ಟಿರುವ ಆಹಾರವಾಗಿರುವುದಿಲ್ಲ, ಏಕೆಂದರೆ ಇದರಿಂದ ಶಿಶು ಆಹಾರವಿಷದ ಸಂಭವನೀಯ ಅಪಾಯವಿದೆ.

^ ಜೇನುತುಪ್ಪವನ್ನು ಬಿಸಿಮಾಡಿದರೆ ಅಥವಾ ಅದನ್ನು ಹೆಚ್ಚಾಗಿ ಬೆಳಕಿಗೆ ಒಡ್ಡಿದರೆ ಅದರಲ್ಲಿರುವ ಕಿಣ್ವವು ನಾಶವಾಗುವುದರಿಂದ, ಪಾಶ್ಚರೀಕರಣಕ್ಕೆ ಗುರಿಪಡಿಸಲ್ಪಟ್ಟಿರದ ಜೇನುತುಪ್ಪವು ವೈದ್ಯಕೀಯ ಉದ್ದೇಶಗಳಿಗಾಗಿ ಉಪಯೋಗಿಸಲ್ಪಡುತ್ತದೆ.

[ಪುಟ 16ರಲ್ಲಿರುವ ಚೌಕ/ಚಿತ್ರ]

ಜೇನುತುಪ್ಪದ ಉಪಯೋಗ

ಜೇನುತುಪ್ಪವು ಸಕ್ಕರೆಗಿಂತ ಸಿಹಿಯಾಗಿದೆ. ಆದುದರಿಂದ, ಸಕ್ಕರೆಗೆ ಬದಲಿಯಾಗಿ, ನೀವು ಎಷ್ಟು ಸಕ್ಕರೆಯನ್ನು ಉಪಯೋಗಿಸುತ್ತೀರೋ ಅದರಲ್ಲಿ ಅರ್ಧ ಅಥವಾ ಮುಕ್ಕಾಲು ಭಾಗದಷ್ಟು ಜೇನುತುಪ್ಪವನ್ನು ಮಾತ್ರ ಉಪಯೋಗಿಸಿರಿ. ಇದಲ್ಲದೆ, ಜೇನುತುಪ್ಪದಲ್ಲಿ ಸುಮಾರು 18 ಪ್ರತಿಶತ ನೀರು ಇರುವುದರಿಂದ, ನಿಮ್ಮ ಪಾಕವಿಧಾನದಲ್ಲಿರುವ ದ್ರವಪದಾರ್ಥಗಳನ್ನು ಅದಕ್ಕನುಸಾರ ಕಡಿಮೆಮಾಡಿರಿ. ಒಂದುವೇಳೆ ಯಾವುದೇ ದ್ರವಪದಾರ್ಥಗಳು ಇಲ್ಲದಿರುವಲ್ಲಿ, ಒಂದು ಕಪ್‌ ಜೇನುತುಪ್ಪಕ್ಕೆ ಎರಡು ಟೇಬಲ್‌ಚಮಚ ಹಿಟ್ಟನ್ನು ಸೇರಿಸಿರಿ. ಬೇಕ್‌ಮಾಡಲ್ಪಡುವ ಪದಾರ್ಥಗಳಿಗಾಗಿ, ಒಂದು ಕಪ್‌ ಜೇನುತುಪ್ಪಕ್ಕೆ ಒಂದೂವರೆ ಟೀಚಮಚದಷ್ಟು ಬೇಕಿಂಗ್‌ ಸೋಡವನ್ನು ಸಹ ಸೇರಿಸಿರಿ ಮತ್ತು ನಿಮ್ಮ ಅವನ್‌ನ ತಾಪಮಾನವನ್ನು 15 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಗೊಳಿಸಿರಿ.

[ಕೃಪೆ]

National Honey Board

[ಪುಟ 22ರಲ್ಲಿರುವ ಚಿತ್ರ]

ಮಕರಂದವನ್ನು ಹೀರುತ್ತಿರುವ ಜೇನುನೊಣ

[ಪುಟ 22, 23ರಲ್ಲಿರುವ ಚಿತ್ರ]

ಜೇನುಗೂಡು

[ಪುಟ 23ರಲ್ಲಿರುವ ಚಿತ್ರ]

ಜೇನುನೊಣಗಳ ಜೇನುಹಟ್ಟಿ

[ಪುಟ 23ರಲ್ಲಿರುವ ಚಿತ್ರ]

ಜೇನುಸಾಕುವವನೊಬ್ಬನು ಜೇನುಗೂಡಿನಿಂದ ತೆಗೆದ ಒಂದು ಚೌಕಟ್ಟನ್ನು ಪರೀಕ್ಷಿಸುತ್ತಿರುವುದು