ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಮ್ಮಿಂದೊಮ್ಮೆಲೇ ನೈತಿಕ ಮೌಲ್ಯಗಳು ಅಧೋಗತಿಗಿಳಿದಾಗ

ಒಮ್ಮಿಂದೊಮ್ಮೆಲೇ ನೈತಿಕ ಮೌಲ್ಯಗಳು ಅಧೋಗತಿಗಿಳಿದಾಗ

ಒಮ್ಮಿಂದೊಮ್ಮೆಲೇ ನೈತಿಕ ಮೌಲ್ಯಗಳು ಅಧೋಗತಿಗಿಳಿದಾಗ

ನೈತಿಕ ಮೌಲ್ಯಗಳು ಒಮ್ಮಿಂದೊಮ್ಮೆಲೇ ಅಧೋಗತಿಗಿಳಿಯಲು ಪ್ರಾರಂಭವಾದದ್ದು ಯಾವಾಗ ಎಂದು ನಿಮಗನಿಸುತ್ತದೆ? ಅದು ನಿಮ್ಮ ಕಾಲದಲ್ಲೇ ನಡೆಯಿತೋ ಅಥವಾ ವಯಸ್ಸಿನಲ್ಲಿ ನಿಮಗಿಂತ ದೊಡ್ಡವರಾದ ನಿಮ್ಮ ಸಂಬಂಧಿಕರ ಅಥವಾ ಸ್ನೇಹಿತರ ಕಾಲದಲ್ಲೋ? ಕೆಲವರಿಗನುಸಾರ 1914ರಲ್ಲಿ ಪ್ರಾರಂಭವಾದ ಲೋಕಯುದ್ಧವು ಹಿಂದೆಂದೂ ಕೇಳಿರದ ನೈತಿಕ ಮೌಲ್ಯಗಳ ಪತನದ ನಮ್ಮ ಈ ಯುಗವನ್ನು ಶುರುಮಾಡಿತು. ರಾಬರ್ಟ್‌ ವೋಲ್‌, 1914ರ ಪೀಳಿಗೆ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಬರೆದದು: “ಯಾರು ಆ ಲೋಕ ಯುದ್ಧದ ಸಮಯದಲ್ಲಿ ಜೀವಿಸಿದ್ದರೋ ಅವರು, 1914ರ ಆಗಸ್ಟ್‌ ತಿಂಗಳಿನಲ್ಲಿ ಒಂದು ಲೋಕವು ಅಂತ್ಯಗೊಂಡು ಇನ್ನೊಂದು ಆರಂಭವಾಯಿತು ಎಂಬ ಅಭಿಪ್ರಾಯವನ್ನು ತಮ್ಮ ಮನಸ್ಸಿನಿಂದ ಎಂದೂ ತೆಗೆದುಹಾಕಲಾರರು.”

“ಈಗಾಗಲೇ ಅಧೋಗತಿಗಿಳಿಯುತ್ತಿದ್ದ ಸಾಮಾಜಿಕ ವರ್ತನೆಯ ಮಟ್ಟಗಳು, ಎಲ್ಲೆಡೆಯೂ ಸಂಪೂರ್ಣವಾಗಿ ಬಿದ್ದುಹೋದವು” ಎಂದು ಇತಿಹಾಸಕಾರ ನಾರ್‌ಮನ್‌ ಕ್ಯಾನ್‌ಟರ್‌ ಹೇಳುತ್ತಾರೆ. “ರಾಜಕಾರಣಿಗಳು ಮತ್ತು ಅಧಿಕಾರಿಗಳೇ ಜನರನ್ನು ಕಸಾಯಿಖಾನೆಗೆ ಕೊಂಡೊಯ್ಯುವ ಪ್ರಾಣಿಗಳಂತೆ ಉಪಚರಿಸಿದ್ದರಿಂದ, ಧರ್ಮದ ಅಥವಾ ನೀತಿಶಾಸ್ತ್ರದ ಯಾವುದೇ ತತ್ತ್ವಗಳು, ನಿಯಮಗಳು ಅಥವಾ ಮಟ್ಟಗಳು, ಮಾನವರು ಕಾಡು ಮೃಗಗಳಂತೆ ಒಬ್ಬರನ್ನೊಬ್ಬರು ಕ್ರೂರವಾಗಿ ಉಪಚರಿಸುವುದನ್ನು ಹೇಗೆ ತಾನೇ ತಡೆಯಬಲ್ಲವು? . . . ಮೊದಲನೇ ಲೋಕ ಯುದ್ಧದಲ್ಲಿ [1914-18] ಅತಿ ಹೆಚ್ಚಿನ ಸಂಖ್ಯೆಗಳಲ್ಲಿ ನಡೆದ ನರಮೇಧವು ಮಾನವ ಜೀವದ ಮೌಲ್ಯವನ್ನು ಸಂಪೂರ್ಣವಾಗಿ ಕೆಳಮಟ್ಟಕ್ಕೆ ಇಳಿಸಿತು.”

ಆಂಗ್ಲ ಇತಿಹಾಸಕಾರರಾದ ಹೆಚ್‌. ಜಿ. ವೆಲ್ಸ್‌ರವರು ಇತಿಹಾಸದ ಕರಡುಪ್ರತಿ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಹೇಳಿದ್ದೇನೆಂದರೆ, ವಿಕಾಸವಾದವನ್ನು ಅಂಗೀಕರಿಸಿದ ನಂತರವೇ “ನಿಜ ನೈತಿಕ ಪತನವು ಪ್ರಾರಂಭವಾಯಿತು.” ಇದೇಕೆ? ಏಕೆಂದರೆ, ಮಾನವನು ಪ್ರಾಣಿಗಳಲ್ಲಿ, ಕೇವಲ ಉತ್ತಮ ದರ್ಜೆಯ ಪ್ರಾಣಿಯಾಗಿದ್ದಾನೆಂದು ಕೆಲವರು ಎಣಿಸಿದರು. ಸ್ವತಃ ಒಬ್ಬ ವಿಕಾಸವಾದಿಯಾಗಿದ್ದ ವೆಲ್ಸ್‌ರವರು 1920ರಲ್ಲಿ ಬರೆದದ್ದು: “ಮಾನವನು, ಗುಂಪಿನಲ್ಲಿ ಜೀವಿಸುವ ಭಾರತದ ಬೇಟೆ ನಾಯಿಯಂತೆ ಒಂದು ಸಾಮಾಜಿಕ ಪ್ರಾಣಿಯಾಗಿದ್ದಾನೆಂದು ಅವರು ನಿರ್ಧರಿಸಿದರು . . . ಈ ಕಾರಣದಿಂದ ಮಾನವ ಹಿಂಡಿನಲ್ಲಿ ದೊಡ್ಡವರು ಹಾಗೂ ಶಕ್ತಿಶಾಲಿಯಾಗಿರುವವರು ಇತರರನ್ನು ಹಿಂಸಿಸಿ, ಬೆದರಿಸಿ ತಮ್ಮ ಸ್ವಾಧೀನತೆಯಲ್ಲಿ ಇಟ್ಟುಕೊಳ್ಳುವುದು ಅನೇಕರಿಗೆ ಸರಿಯೆನಿಸಿತು.”

ಕ್ಯಾನ್‌ಟರ್‌ರವರು ಹೇಳಿದಂತೆ, ಮೊದಲನೆಯ ಲೋಕಯುದ್ಧವು ಜನರಲ್ಲಿದ್ದ ನೈತಿಕ ಮಟ್ಟಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿತೆಂಬುದು ನಿಜ. ಅವರು ವಿವರಿಸಿದ್ದು: “ಹಿರಿಯ ಪೀಳಿಗೆಯವರು ಅನುಸರಿಸಿದ ಪ್ರತಿಯೊಂದು ವಿಷಯವು​—⁠ರಾಜಕೀಯ, ಬಟ್ಟೆಬರೆ ಮತ್ತು ಲೈಂಗಿಕತೆಯ ವಿಷಯಗಳು​—⁠ಸಂಪೂರ್ಣವಾಗಿ ತಪ್ಪಾಗಿತ್ತೆಂದು ತೋರುವಂತೆ ಮಾಡಲಾಯಿತು.” ಚರ್ಚುಗಳು ವಿಕಾಸವಾದವನ್ನು ಸಮ್ಮತಿಸುವ ಮೂಲಕ ಮತ್ತು ಯುದ್ಧ ಮಾಡುತ್ತಿರುವ ರಾಷ್ಟ್ರಗಳಿಗೆ ಕುಮ್ಮಕ್ಕು ನೀಡುವ ಮೂಲಕ ಕ್ರೈಸ್ತ ಬೋಧನೆಗಳನ್ನು ಮಲಿನಗೊಳಿಸಿದ್ದು ನೈತಿಕ ಮೌಲ್ಯಗಳ ಅಧೋಗತಿಗೆ ಮುಖ್ಯಕಾರಣವಾಯಿತು. ಬ್ರಿಟಿಷ್‌ ಬ್ರಿಗೇಡಿಯರ್‌ ಜನರಲ್‌ ಫ್ರಾಂಕ್‌ ಕ್ರೊಜಿಯರ್‌ ಬರೆದದ್ದು: “ಕೊಲ್ಲುವ ಮತ್ತು ಹಿಂಸಿಸುವ ಆಸೆಯನ್ನು ಹುಟ್ಟಿಸುವುದರಲ್ಲಿ ನಮ್ಮ ಬಳಿ ಇರುವ ಸಾಧನಗಳಲ್ಲಿ ಕ್ರೈಸ್ತ ಚರ್ಚುಗಳದ್ದು ಎತ್ತಿದ ಕೈ. ಈ ವಿಷಯದಲ್ಲಿ ನಾವು ಅವುಗಳನ್ನು ಚೆನ್ನಾಗಿ ಬಳಸಿಕೊಂಡಿದ್ದೇವೆ.”

ನೈತಿಕ ನಿಯಮಗಳ ತಿರಸ್ಕಾರ

‘ಅಬ್ಬರಿಸುವ ಇಪ್ಪತ್ತರ ದಶಕ’ ಎಂದು ಕರೆಯಲಾಗುವ ಮೊದಲನೆಯ ಲೋಕಯುದ್ಧದ ನಂತರದ ದಶಕದಲ್ಲಿ ನೈತಿಕ ನಿರ್ಬಂಧಗಳನ್ನು ಹಾಗೂ ಹಳೇ ಮೌಲ್ಯಗಳನ್ನು ಕಸದ ಬುಟ್ಟಿಗೆ ಎಸೆಯಲಾಯಿತು ಮತ್ತು ಅವುಗಳ ಸ್ಥಾನದಲ್ಲಿ, ನಡವಳಿಕೆಯು ಹೇಗಿದ್ದರೂ ಆಗುತ್ತದೆ ಎಂಬ ಮನೋಭಾವ ಬಂತು. ಇತಿಹಾಸಕಾರರಾದ ಫ್ರೆಡ್‌ರಿಕ್‌ ಲೂಯಿಸ್‌ ಆ್ಯಲೆನ್‌ ಹೇಳುವುದು: “ಯುದ್ಧ ನಂತರದ ಹತ್ತು ವರುಷಗಳನ್ನು ತಕ್ಕದಾಗಿಯೇ ‘ಅಸಭ್ಯ ನಡವಳಿಕೆಯ ದಶಕ’ವೆಂದು ಕರೆಯಬಹುದು. . . . ಜೀವನವನ್ನು ಸಂಪದ್ಯುಕ್ತಗೊಳಿಸಿದ ಮತ್ತು ಜೀವನಕ್ಕೆ ಅರ್ಥವನ್ನು ನೀಡಿದ ಹಳೇ ವಿಷಯ ವ್ಯವಸ್ಥೆಯಲ್ಲಿನ ಮೌಲ್ಯಗಳು ಗತಿಸಿಹೋಗಿದ್ದವು, ಆದರೆ ಅವುಗಳ ಸ್ಥಾನಭರ್ತಿ ಮಾಡಲು ಬೇಕಾಗಿದ್ದ ಹೊಸ ಮೌಲ್ಯಗಳನ್ನು ಕಂಡುಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ.”

ಜಗತ್ತಿನ, 1930ರ ಮಹಾ ಆರ್ಥಿಕ ಕುಸಿತವು ಅನೇಕರನ್ನು ಸಂಕಟಕರ ಬಡತನಕ್ಕೆ ತಳ್ಳುವ ಮೂಲಕ ಅವರು ಇತಿಮಿತಿಯಲ್ಲಿರುವಂತೆ ಮತ್ತು ಗಂಭೀರಸ್ವಭಾವದವರಾಗಿರುವಂತೆ ಮಾಡಿತು. ಆ ದಶಕದ ಅಂತ್ಯದಷ್ಟಕ್ಕೆ, ಲೋಕವು ಇನ್ನೊಂದು ಮತ್ತು ಹಿಂದಿನದಕ್ಕಿಂತ ಧ್ವಂಸಕಾರಿ ಯುದ್ಧವಾದ ಎರಡನೆಯ ಲೋಕಯುದ್ಧಕ್ಕೆ ಇಳಿದಿತ್ತು. ಬೇಗನೆ ರಾಷ್ಟ್ರಗಳು ಭಯಂಕರವಾದ ವಿನಾಶಕಾರಕ ಆಯುಧಗಳನ್ನು ತಯಾರಿಸಲು ತೊಡಗಿದವು. ಈ ಉದ್ಯಮದ ಮೂಲಕ ಲೋಕವು ಆರ್ಥಿಕ ಕುಸಿತದಿಂದ ಹೊರಬಂತು ನಿಜ, ಆದರೆ ಆ ಆಯುಧಗಳು ಮಾನವನು ಊಹಿಸಲೂ ಸಾಧ್ಯವಿಲ್ಲದಷ್ಟು ನರಳಾಟ ಮತ್ತು ಆತಂಕದ ಪರಿಸ್ಥಿತಿಗೆ ಲೋಕವನ್ನು ದೊಬ್ಬಿದವು. ಯುದ್ಧದ ಅಂತ್ಯದಷ್ಟಕ್ಕೆ ನೂರಾರು ನಗರಗಳ ಅವಶೇಷಗಳು ಮಾತ್ರ ಉಳಿದಿದ್ದವು; ಜಪಾನಿನ ಎರಡು ನಗರಗಳ ಮೇಲೆ ಅಣು ಬಾಂಬ್‌ಗಳನ್ನು ಹಾಕಿ ಅವುಗಳನ್ನು ಧ್ವಂಸಗೊಳಿಸಲಾಯಿತು! ಲಕ್ಷಾಂತರ ಜನರು ಬೀಭತ್ಸವಾದ ಸೆರೆಶಿಬಿರಗಳಲ್ಲಿ ಹತರಾದರು. ಒಟ್ಟಿನಲ್ಲಿ, ಈ ಯುದ್ಧವು ಸುಮಾರು 5 ಕೋಟಿ ಗಂಡಸರ, ಹೆಂಗಸರ ಮತ್ತು ಮಕ್ಕಳ ಜೀವವನ್ನು ಆಹುತಿತೆಗೆದುಕೊಂಡಿತು.

ಎರಡನೇ ಲೋಕಯುದ್ಧದ ಆ ಘೋರ ಸಮಯಗಳಲ್ಲಿ, ಪರಂಪರಾಗತವಾಗಿ ಬಂದ ಔಚಿತ್ಯದ ವರ್ತನೆಯ ಮಟ್ಟಗಳನ್ನು ಅನುಸರಿಸುವುದರ ಬದಲಿಗೆ ಜನರು ತಮ್ಮದೇ ಆದ ನಡವಳಿಕೆಯ ನಿಯಮಗಳನ್ನು ಅನುಸರಿಸಲಾರಂಭಿಸಿದರು. ಪ್ರೀತಿ, ಕಾಮ ಮತ್ತು ಯುದ್ಧ​—⁠ಬದಲಾಗುತ್ತಿರುವ ಮೌಲ್ಯಗಳು, 1939-45 (ಇಂಗ್ಲಿಷ್‌) ಎಂಬ ಪುಸ್ತಕವು ಹೇಳಿದ್ದು: “ಯುದ್ಧಭೂಮಿಯಲ್ಲಿ ಅನುಮತಿಸಲಾಗುತ್ತಿದ್ದ ನಿರ್ಬಂಧವಿಲ್ಲದ ವರ್ತನೆಯು ಮನೆಗಳೊಳಗೂ ನುಸುಳಿದ್ದರಿಂದ ಯುದ್ಧದ ಅವಧಿಯಾದ್ಯಂತ ಲೈಂಗಿಕ ವಿಷಯದಲ್ಲಿ ನಿಗ್ರಹವು ಇಲ್ಲದಂತೆ ತೋರಿತು. . . . ಯುದ್ಧಸಮಯದ ತ್ವರಿತತೆ ಮತ್ತು ಉದ್ರೇಕವು ಬೇಗನೆ ನೈತಿಕ ನಿರ್ಬಂಧಗಳನ್ನು ಅಳಿಸಿಹಾಕಿತು ಮತ್ತು ಯುದ್ಧಭೂಮಿಯಲ್ಲಿ ಹೇಗೋ ಹಾಗೆಯೇ ಕುಟುಂಬ ಜೀವನವು ಯಾವುದೇ ಬೆಲೆಯಿಲ್ಲದ್ದು ಮತ್ತು ಅಲ್ಪಾವಧಿಯದ್ದಾಗಿರುವಂತೆ ತೋರಿತು.”

ಯಾವುದೇ ಕ್ಷಣದಲ್ಲಿ ಸಾಯುವೆವು ಎಂದು ಜನರಿಗಿದ್ದ ಭಯವು ಅವರು ಭಾವನಾತ್ಮಕ ಅದರಲ್ಲೂ ಅಲ್ಪಕಾಲಿಕ ಸಂಬಂಧಗಳಿಗೆ ಹಂಬಲಿಸುವಂತೆ ಮಾಡಿತು. ಆ ವರ್ಷಗಳಲ್ಲಿದ್ದ ಲೈಂಗಿಕ ಸ್ವೇಚ್ಛಾಚಾರವನ್ನು ಸಮರ್ಥಿಸುತ್ತಾ ಒಬ್ಬ ಬ್ರಿಟಿಷ್‌ ಗೃಹಿಣಿ ಹೇಳಿದ್ದು: “ನಾವೇನು ನಿಜವಾಗಿ ಅನೈತಿಕರಾಗಿರಲ್ಲಿಲ್ಲ, ಆಗ ಯುದ್ಧ ನಡೆಯುತ್ತಾ ಇದ್ದುದರಿಂದ ಪರಿಸ್ಥಿತಿ ಹೀಗಿತ್ತು.” ಒಬ್ಬ ಅಮೆರಿಕನ್‌ ಸೈನಿಕನು ಒಪ್ಪಿಕೊಂಡದ್ದು: “ಹೆಚ್ಚಿನ ಜನರಿಗನುಸಾರ ನಾವು ಅನೈತಿಕರಾಗಿದ್ದೆವು. ಆದರೆ ನಾವು ಹಾಗಿರಲು ಕಾರಣ ನಾವಿನ್ನೂ ಕೇವಲ ಯುವಪ್ರಾಯದವರಾಗಿದ್ದೆವು ಮತ್ತು ಯಾವುದೇ ಗಳಿಗೆಯಲ್ಲೂ ಸಾಯುವ ಸಾಧ್ಯತೆಯಿತ್ತು.”

ಯುದ್ಧದಿಂದ ಪಾರಾದಂತಹ ಅನೇಕರು ತಾವು ಕಣ್ಣಾರೆ ನೋಡಿದ ಭೀಕರ ವಿಷಯಗಳಿಂದ ಸಂಕಟವನ್ನು ಅನುಭವಿಸಬೇಕಾಯಿತು. ಇಂದಿಗೂ ಕೆಲವರಿಗೆ, ಅದರಲ್ಲೂ ಆಗ ಮಕ್ಕಳಾಗಿದ್ದವರಿಗೆ ಅಂದಿನ ದೃಶ್ಯಗಳು ಮರುಕಳಿಸುತ್ತವೆ ಮತ್ತು ಅವರಿಗೆ ಮಾನಸಿಕ ಆಘಾತವನ್ನುಂಟುಮಾಡಿದ ಆ ವಿಷಯಗಳು ಈಗಲೂ ಕಣ್ಣ ಮುಂದೆ ಸಂಭವಿಸುತ್ತಿರುವಂತೆ ಅನಿಸುತ್ತದೆ. ಅನೇಕರು ದೇವರಲ್ಲಿ ನಂಬಿಕೆಯನ್ನು ಕಳಕೊಂಡರು ಮತ್ತು ಅದರೊಂದಿಗೆಯೇ ಅವರ ನೈತಿಕ ಪ್ರಜ್ಞೆಯನ್ನೂ ಕಳೆದುಕೊಂಡರು. ಸರಿ ಮತ್ತು ತಪ್ಪಿನ ಮಟ್ಟಗಳನ್ನು ಸ್ಥಾಪಿಸುತ್ತಿದ್ದ ಅಧಿಕಾರಕ್ಕೆ ಅವರು ಗೌರವ ತೋರಿಸುವುದನ್ನೇ ನಿಲ್ಲಿಸಿದರು ಮತ್ತು ಸರಿ-ತಪ್ಪು ಎಂಬುದು ಪರಿಸ್ಥಿತಿಗಳ ಮೇಲೆ ಹೊಂದಿಕೊಂಡಿದೆ ಎಂದು ನೆನಸಲಾರಂಭಿಸಿದರು.

ಹೊಸ ಸಾಮಾಜಿಕ ಮಟ್ಟಗಳು

ಎರಡನೇ ಲೋಕಯುದ್ಧದ ತರುವಾಯ ಮಾನವನ ಲೈಂಗಿಕ ನಡವಳಿಕೆ ಮೇಲೆ ನಡೆಸಲಾದ ಅಧ್ಯಯನಗಳನ್ನು ಮುದ್ರಿಸಲಾಯಿತು. 800 ಪುಟಗಳ ಕಿನ್ಸ್‌ಲಿ ವರದಿಯು, 1940ರುಗಳಲ್ಲಿ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಮಾಡಲಾದ ಅಧ್ಯಯನಗಳಲ್ಲಿ ಒಂದಾಗಿತ್ತು. ಅದರ ಪರಿಣಾಮವಾಗಿ, ಈ ಹಿಂದೆ ಯಾವುದನ್ನು ಸಾಮಾನ್ಯವಾಗಿ ಚರ್ಚಿಸಲಾಗುತ್ತಿರಲ್ಲಿಲ್ಲವೋ ಆ ಲೈಂಗಿಕ ವಿಷಯಗಳ ಕುರಿತು ಅನೇಕರು ಮುಚ್ಚುಮರೆಯಿಲ್ಲದೆ ಮಾತಾಡಲು ಪ್ರಾರಂಭಿಸಿದರು. ಸಲಿಂಗಕಾಮ ಮತ್ತು ಇತರ ವಿಕೃತ ಕಾಮದ ವರ್ತನೆಯಲ್ಲಿ ಒಳಗೂಡಿದವರ ಕುರಿತು ಆ ವರದಿಯು ತೋರಿಸಿದ ಅಂಕೆಸಂಖ್ಯೆಗಳು ಅತಿಶಯಮಾಡಲ್ಪಟ್ಟಿದ್ದವು ಎಂದು ನಂತರ ತಿಳಿದು ಬಂದಿತ್ತಾದರೂ, ಆ ಅಧ್ಯಯನವು ಯುದ್ಧ ನಂತರದ ನೈತಿಕ ಅಧೋಗತಿಯನ್ನು ಎತ್ತಿತೋರಿಸಿತು.

ಸ್ವಲ್ಪ ಕಾಲದ ವರೆಗೆ ಸಭ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನವು ಮಾಡಲ್ಪಟ್ಟಿತು. ಉದಾಹರಣೆಗೆ, ರೇಡಿಯೋ, ಚಲನಚಿತ್ರಗಳು ಮತ್ತು ದೂರದರ್ಶನದಲ್ಲಿ ಅನೈತಿಕ ವಿಷಯಗಳನ್ನು ಪ್ರಸಾರಮಾಡಲಾಗುತ್ತಿರಲಿಲ್ಲ. ಆದರೆ ಇದು ಬಹು ಕಾಲ ನಡೆಯಲಿಲ್ಲ. ಯು.ಎಸ್‌. ಶಿಕ್ಷಣ ವಿಭಾಗದ ಮಾಜಿ ಕಾರ್ಯದರ್ಶಿ ವಿಲಿಯಮ್‌ ಬೆನೆಟ್‌ ವಿವರಿಸಿದ್ದು: “ಆದರೆ, 1960ರುಗಳಲ್ಲಿ ಅಮೆರಿಕವು ಕ್ಷಿಪ್ರವಾಗಿ ಮತ್ತು ನಿರಂತರವಾಗಿ, ಅನಾಗರಿಕತೆ ಎಂದು ಯಾವುದನ್ನು ಕರೆಯಬಹುದೋ ಆ ಅಧೋಗತಿಗಿಳಿಯುತ್ತಾ ಹೋಯಿತು.” ಮತ್ತು ಇದನ್ನು ಇತರ ಅನೇಕ ರಾಷ್ಟ್ರಗಳು ಅನುಸರಿಸಿದವು. ಆದರೆ 60ರ ದಶಕಗಳಲ್ಲಿ ನೈತಿಕ ಮೌಲ್ಯಗಳ ಅಧೋಗತಿಯು ತ್ವರಿತಗೊಳ್ಳಲು ಕಾರಣವೇನು?

ಆ ದಶಕದಲ್ಲಿ ಮಹಿಳಾ ವಿಮೋಚನೆಯ ಆಂದೋಲನ ಮತ್ತು ನೈತಿಕ ಕ್ರಾಂತಿಯಿಂದಾಗಿ ಹೊಸ ನೈತಿಕತೆಯು ಬಹುಮಟ್ಟಿಗೆ ಏಕಕಾಲದಲ್ಲಿ ಹುಟ್ಟಿಕೊಂಡಿತು. ಅದರೊಂದಿಗೆ, ಪರಿಣಾಮಕಾರಿಯಾದ ಗರ್ಭನಿರೋಧಕ ಗುಳಿಗೆಗಳನ್ನು ತಯಾರಿಸಲಾಯಿತು. ಗರ್ಭಧರಿಸುವ ಭಯವಿಲ್ಲದೆ ಲೈಂಗಿಕತೆಯನ್ನು ಅನುಭವಿಸಲು ಸಾಧ್ಯವಾದಾಗ ಮದುವೆಯಾಗದೆ ಕೂಡಿ ಜೀವಿಸುವುದು ಅಥವಾ ಸ್ತ್ರೀಪುರುಷರು ಪರಸ್ಪರ ಯಾವುದೇ ನೈತಿಕ ನಿರ್ಬಂಧವಿಲ್ಲದೆ ಅನುಭೋಗಿಸುವ ಲೈಂಗಿಕ ಸಂಬಂಧಗಳು ಸಾಮಾನ್ಯವಾಗಿಬಿಟ್ಟವು.

ಅದೇ ಸಮಯದಲ್ಲಿ, ವಾರ್ತಾಮಾಧ್ಯಮ, ಟಿ.ವಿ. ಮತ್ತು ಚಲನಚಿತ್ರಗಳು ತಮ್ಮ ನೈತಿಕ ನಿಯಮಗಳನ್ನು ಸಡಿಲಗೊಳಿಸಿದವು. ನ್ಯಾಷ್‌ನಲ್‌ ಸೆಕ್ಯೂರಿಟಿ ಕೌನ್ಸಿಲ್‌ನ ಮಾಜೀ ಮುಖ್ಯಸ್ಥರಾದ ಜ್ಬಿಗ್‌ನೀವ್‌ ಬ್ರಜಿನ್ಸ್‌ಕೆ ಟಿ.ವಿ. ಕಾರ್ಯಕ್ರಮಗಳಲ್ಲಿ ಪ್ರಸ್ತುತಪಡಿಸಲಾಗುತ್ತಿದ್ದ ಮೌಲ್ಯಗಳ ಕುರಿತು ಹೇಳಿದ್ದು: “ಜನರು ತಮ್ಮ ಆಶೆಗಳನ್ನು ಸ್ವಚ್ಛಂದವಾಗಿ ತಣಿಸುವುದನ್ನು ಅವು ಉತ್ತೇಜಿಸುತ್ತವೆ, ತೀವ್ರವಾದ ಹಿಂಸಾಚಾರ ಹಾಗೂ ಪಾಶವೀಯತೆಯನ್ನು ಸಾಮಾನ್ಯವೆಂಬಂತೆ ತೋರಿಸುತ್ತವೆ ಮತ್ತು ಲೈಂಗಿಕ ಸ್ವೇಚ್ಛಾಚಾರವನ್ನು ಹುರಿದುಂಬಿಸುತ್ತವೆ.”

ವಿ.ಸಿ.ಆರ್‌.ಗಳು 1970ರಷ್ಟಕ್ಕೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದವು. ಇವುಗಳಿಂದಾಗಿ ಜನರು ಈಗ, ಇತರರು ತಮ್ಮನ್ನು ನೋಡಸಾಧ್ಯವಿದ್ದಂತಹ ಚಲನಚಿತ್ರ ಮಂದಿರಗಳಲ್ಲಿ ವೀಕ್ಷಿಸಲು ಧೈರ್ಯಮಾಡದಂತಹ ಅನೈತಿಕ ಹಾಗೂ ಲೈಂಗಿಕ ವಿಷಯಗಳನ್ನು ತಮ್ಮ ಮನೆಯ ಏಕಾಂತದಲ್ಲಿ ನೋಡಸಾಧ್ಯವಿತ್ತು. ಈಗಲಂತೂ, ಒಂದು ಕಂಪ್ಯೂಟರ್‌ ಹೊಂದಿರುವ ಯಾವುದೇ ವ್ಯಕ್ತಿಗೆ ಇಂಟರ್‌ನೆಟ್‌ ಮೂಲಕ ಹೇಯವಾದ ಮತ್ತು ತುಚ್ಛವಾದ ಅಶ್ಲೀಲ ಸಾಹಿತ್ಯವು ಪ್ರಪಂಚದ ಯಾವುದೇ ಮೂಲೆಯಲ್ಲೂ ಲಭ್ಯವಿದೆ.

ಇವೆಲ್ಲದ್ದರ ಪರಿಣಾಮಗಳು ಅನೇಕ ವಿಧಗಳಲ್ಲಿ ಭಯಂಕರವಾಗಿವೆ. ಯು.ಎಸ್‌.ನ ಒಂದು ಕಾರಾಗೃಹದ ಮುಖ್ಯಾಧಿಕಾರಿ ಇತ್ತೀಚೆಗೆ ಹೇಳಿದ್ದು: “ಹತ್ತು ವರ್ಷಗಳ ಹಿಂದೆ, ಯುವಜನರು ಕಾರಾಗೃಹವನ್ನು ಸೇರಿದಾಗ ನಾನು ಅವರೊಂದಿಗೆ ಸರಿ ಮತ್ತು ತಪ್ಪಿನ ಕುರಿತು ಚರ್ಚಿಸಬಹುದಿತ್ತು. ಆದರೆ ಈಗೀಗ ಕಾರಾಗೃಹಕ್ಕೆ ಬರುತ್ತಿರುವ ಯುವಜನರಿಗೆ ಸರಿ ಮತ್ತು ತಪ್ಪುಗಳ ಅರ್ಥವೇ ಗೊತ್ತಿಲ್ಲ.”

ಮಾರ್ಗದರ್ಶನೆಗಾಗಿ ನಾವು ಯಾರ ಕಡೆಗೆ ನೋಡಬಲ್ಲೆವು?

ನೈತಿಕ ಮಾರ್ಗದರ್ಶನೆಗಾಗಿ ನಾವು ಈ ಲೋಕದ ಚರ್ಚುಗಳನ್ನು ಅವಲಂಬಿಸಲಾರೆವು. ಈಗಿನ ಚರ್ಚುಗಳು, ಯೇಸುವಿನಂತೆ ಮತ್ತು ಮೊದಲನೆಯ ಶತಮಾನದ ಆತನ ಹಿಂಬಾಲಕರಂತೆ ನೀತಿಯುತ ಮೂಲತತ್ತ್ವಗಳನ್ನು ಎತ್ತಿಹಿಡಿಯುವ ಬದಲಿಗೆ, ಈ ಲೋಕದ ಮತ್ತು ಅದರ ದುಷ್ಕೃತ್ಯಗಳ ಭಾಗವಾಗಿ ಬಿಟ್ಟಿವೆ. ಒಬ್ಬ ಲೇಖಕನು ಕೇಳಿದ್ದು: “ನಡೆದಿರುವ ಎಲ್ಲಾ ಯುದ್ಧಗಳಲ್ಲಿ ಎರಡೂ ಪಕ್ಷದವರು, ದೇವರು ತಮ್ಮ ಕಡೆಯಲ್ಲಿದ್ದಾನೆಂದು ನೆನಸಿರದ ಯಾವುದಾದರೊಂದು ಯುದ್ಧವಿದೆಯೋ?” ದೇವರ ನೈತಿಕ ಮಟ್ಟಗಳನ್ನು ಎತ್ತಿಹಿಡಿಯುವ ವಿಷಯದಲ್ಲಿ ನ್ಯೂ ಯಾರ್ಕ್‌ ಸಿಟಿಯ ಒಬ್ಬ ಪಾದ್ರಿಯು ಕೆಲವು ವರ್ಷಗಳ ಹಿಂದೆ ಹೇಳಿದ್ದು: “ಒಂದು ಬಸ್ಸಿಗೆ ಹತ್ತಬೇಕಾದರೂ ನಮ್ಮಿಂದ ಕೆಲವು ವಿಷಯಗಳನ್ನು ಅಪೇಕ್ಷಿಸಲಾಗುತ್ತದೆ; ಆದರೆ ಚರ್ಚಿನ ಒಬ್ಬ ಸದಸ್ಯರಾಗಬೇಕಾದರೆ ಹೇಗಿದ್ದರೂ ನಡೆಯುತ್ತದೆ.”

ಸ್ಪಷ್ಟವಾಗಿಯೇ, ಒಮ್ಮಿಂದೊಮ್ಮೆಲೇ ಅಧೋಗತಿಗೆ ಇಳಿಯುತ್ತಿರುವ ಈ ಲೋಕದ ನೈತಿಕ ಮಟ್ಟಗಳು, ಕೂಡಲೇ ಅವುಗಳ ಕುರಿತು ಏನಾದರೂ ಮಾಡಬೇಕೆಂಬುದನ್ನು ಸೂಚಿಸುತ್ತದೆ. ಆದರೆ ಏನು ಮಾಡಬೇಕು? ಯಾವ ಬದಲಾವಣೆಯು ಅಗತ್ಯವಾಗಿದೆ? ಯಾರು ಆ ಬದಲಾವಣೆಯನ್ನು ಮಾಡಬಲ್ಲರು, ಮತ್ತು ಅದನ್ನು ಹೇಗೆ ಸಾಧಿಸಲಾಗುವುದು? (g 4/07)

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ಮೊದಲನೆಯ ಲೋಕ ಯುದ್ಧದಲ್ಲಿ [1914-18] ನಡೆದ ನರಮೇಧವು ಮಾನವ ಜೀವದ ಮೌಲ್ಯವನ್ನು ಸಂಪೂರ್ಣವಾಗಿ ಕೆಳಮಟ್ಟಕ್ಕೆ ಇಳಿಸಿತು

[ಪುಟ 6ರಲ್ಲಿರುವ ಚೌಕ]

ಸದ್ಗುಣಗಳು ಮತ್ತು ಮೌಲ್ಯಗಳು

ಹಿಂದೆ ಸದ್ಗುಣಗಳು ಅಥವಾ ಉಚ್ಚ ನೈತಿಕ ಮಟ್ಟಗಳು ಅಂದರೇನು ಎಂಬ ವಿಷಯದಲ್ಲಿ ಯಾವುದೇ ಸಂದೇಹಗಳಿರುತ್ತಿರಲಿಲ್ಲ. ಒಬ್ಬ ವ್ಯಕ್ತಿ ಪ್ರಾಮಾಣಿಕ, ನಿಷ್ಠಾವಂತ, ಶುದ್ಧ ಮತ್ತು ಗೌರವಾರ್ಹನು ಆಗಿದ್ದಾನೋ ಇಲ್ಲವೋ ಎಂಬುದರ ಮಧ್ಯೆ ಸ್ಪಷ್ಟವಾದ ವ್ಯತ್ಯಾಸವಿರುತ್ತಿತ್ತು. ಈಗಲಾದರೋ, “ಸದ್ಗುಣಗಳು” ಎಂಬ ಪದದ ಸ್ಥಾನದಲ್ಲಿ “ಮೌಲ್ಯಗಳು” ಎಂಬ ಪದವು ಬಂದಿದೆ. ಆದರೆ ಇತಿಹಾಸಗಾರ್ತಿ ಗೆಟ್ರೂಡ್‌ ಹಿಮ್ಮೆಲ್‌ಪಾಭ್ರ್‌ರವರು, ಸಮಾಜದ ನೀತಿಗೆಡಿಸುವಿಕೆ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಹೇಳುವಂತೆ ಇದರಲ್ಲೊಂದು ಸಮಸ್ಯೆಯಿದೆ. ಅವರು ಹೇಳುವುದೇನೆಂದರೆ: “ಮೌಲ್ಯಗಳಿಗೆ ಅನ್ವಯವಾಗುವ ಮಾತು ಸದ್ಗುಣಗಳಿಗೆ ಅನ್ವಯವಾಗುವುದಿಲ್ಲ . . . ಅಂದರೆ ಪ್ರತಿಯೊಬ್ಬರಿಗೂ ತಮಗೆ ಬೇಕಾದ ಮೌಲ್ಯಗಳನ್ನು ಆರಿಸಿಕೊಳ್ಳುವ ಹಕ್ಕಿದೆ ಆದರೆ ಪ್ರತಿಯೊಬ್ಬರಿಗೂ ತಮಗೆ ಬೇಕಾದ ಸದ್ಗುಣಗಳನ್ನು ಆರಿಸಿಕೊಳ್ಳುವ ಹಕ್ಕಿರುವುದಿಲ್ಲ.”

ಅವರು ಮತ್ತೂ ಕೂಡಿಸಿ ಹೇಳಿದ್ದೇನೆಂದರೆ ಮೌಲ್ಯಗಳು ಎಂದು ಹೇಳುವಾಗ ಅದು, “ಯಾವುದೇ ವ್ಯಕ್ತಿ, ಗುಂಪು ಅಥವಾ ಸಮಾಜವು ಯಾವುದೇ ಸಮಯದಲ್ಲಿ ಯಾವುದೇ ಕಾರಣಕ್ಕಾಗಿ ಮಹತ್ವಕೊಡುವಂಥ ನಂಬಿಕೆಗಳು, ಅಭಿಪ್ರಾಯಗಳು, ಮನೋಭಾವಗಳು, ಅನಿಸಿಕೆಗಳು, ರೂಢಿಗಳು, ಆಚಾರಗಳು, ಇಷ್ಟಗಳು, ಪೂರ್ವಾಗ್ರಹಗಳು ಮತ್ತು ವೈಲಕ್ಷಣಗಳೂ ಆಗಿರುತ್ತವೆ.” ಒಂದು ಸೂಪರ್‌ ಮಾರ್ಕೆಟ್‌ನಲ್ಲಿ ತಮಗೆ ಇಷ್ಟ ಬಂದಂತಹ ದಿನಸಿ ವಸ್ತುಗಳನ್ನು ಖರೀದಿಸಿದಂತೆಯೇ ಯಾವುದೇ ಕಟ್ಟುನಿಟ್ಟಿಲ್ಲದ ಇಂದಿನ ಸಮಾಜದಲ್ಲಿ ಜನರು ತಮ್ಮದೇ ಆದ ಮೌಲ್ಯಗಳನ್ನು ಆರಿಸುವುದು ಸರಿಯೆಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ ವಿಷಯವು ಹೀಗಿರುವುದಾದರೆ, ನಿಜವಾದ ಸದ್ಗುಣಗಳಿಗೆ ಮತ್ತು ನೈತಿಕತೆಗೆ ಏನು ಸಂಭವಿಸಲಿದೆ?

[ಪುಟ 6, 7ರಲ್ಲಿರುವ ಚಿತ್ರ]

ಕೀಳ್ಮಟ್ಟದ ಮನೋರಂಜನೆಯು ಹೆಚ್ಚೆಚ್ಚು ಸುಲಭವಾಗಿ ದೊರೆಯುತ್ತಿದೆ