ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೌರವಸೂಚಕ ಬಿರುದುಗಳನ್ನು ಬಳಸುವುದು ಯೋಗ್ಯವೊ?

ಗೌರವಸೂಚಕ ಬಿರುದುಗಳನ್ನು ಬಳಸುವುದು ಯೋಗ್ಯವೊ?

ಬೈಬಲಿನ ದೃಷ್ಟಿಕೋನ

ಗೌರವಸೂಚಕ ಬಿರುದುಗಳನ್ನು ಬಳಸುವುದು ಯೋಗ್ಯವೊ?

ಪ್ರಥಮ ಶತಮಾನದ ಕ್ರೈಸ್ತರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹಾಗೂ ದೇವರ ರಾಜ್ಯದ ಸುಸಂದೇಶವನ್ನು ಸಾರುವಾಗ ಉನ್ನತ ಹಾಗೂ ಕೆಳದರ್ಜೆಯ ಹಲವಾರು ಸರಕಾರೀ ಅಧಿಕಾರಿಗಳ ಸಂಪರ್ಕಕ್ಕೆ ಬರುತ್ತಿದ್ದರು. ಯೇಸುವಿನ ಹಿಂಬಾಲಕರು ತಮ್ಮ ನಡುವೆ ತಮ್ಮ ಹುದ್ದೆ ಅಥವಾ ಸ್ಥಾನಮಾನವನ್ನು ಎತ್ತಿತೋರಿಸುವ ಯಾವುದೇ ಬಿರುದುಗಳನ್ನು ಬಳಸುತ್ತಿರಲಿಲ್ಲ. ಆದರೂ ಆ ಕಾಲದಲ್ಲಿ ಜನರ ಮೇಲೆ ಅಧಿಕಾರ ನಡೆಸುವವರನ್ನು ಬಿರುದುಗಳಿಂದ ಸಂಬೋಧಿಸುವುದು ಸಾಮಾನ್ಯವಾಗಿತ್ತು. ರೋಮನ್‌ ಚಕ್ರವರ್ತಿಯನ್ನು “ಗೌರವಾನ್ವಿತ” ಎಂದು ಕರೆಯಲಾಗುತ್ತಿತ್ತು.​—⁠ಅ. ಕೃತ್ಯಗಳು 25:⁠21.

ಹೀಗಿರುವಾಗ ಸರಕಾರೀ ಅಧಿಕಾರಿಗಳ ಮುಂದೆ ತರಲ್ಪಟ್ಟಾಗ ಯೇಸುವಿನ ಶಿಷ್ಯರು ಈ ಗೌರವಸೂಚಕ ಬಿರುದುಗಳ ಉಪಯೋಗವನ್ನು ಹೇಗೆ ವೀಕ್ಷಿಸಿದರು? ನಾವು ಇದನ್ನು ಹೇಗೆ ವೀಕ್ಷಿಸಬೇಕು?

ಗೌರವ ತೋರಿಸುವಿಕೆ ಮತ್ತು ಅಂಗೀಕಾರ ಒಂದೇ ಅಲ್ಲ

“ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ, . . . ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು ಸಲ್ಲಿಸಿರಿ” ಎಂದು ಅಪೊಸ್ತಲ ಪೌಲನು ಜೊತೆವಿಶ್ವಾಸಿಗಳಿಗೆ ಸಲಹೆ ಕೊಟ್ಟನು. (ರೋಮಾಪುರ 13:⁠7) ಇದರಲ್ಲಿ ಅಧಿಕಾರಿಗಳನ್ನು ಅವರ ಬಿರುದುಗಳಿಂದ ಸಂಬೋಧಿಸುವುದು ಸಹ ಸೇರಿತ್ತು. ಇಂದು ಸಹ, ‘ಗೌರವಾನ್ವಿತವರೇ’ ಮತ್ತು ‘ಮಾನ್ಯರೇ’ ಎಂಬಂಥ ಬಿರುದುಗಳನ್ನು ಸಾರ್ವಜನಿಕ ಅಧಿಕಾರಿಗಳನ್ನು ಸಂಬೋಧಿಸುವಾಗ ವಾಡಿಕೆಯಾಗಿ ಉಪಯೋಗಿಸಲಾಗುತ್ತದೆ. ಆದರೆ ಕೆಲವರು ಹೀಗೆ ಕೇಳಬಹುದು: ‘ಅವರ ನಡತೆ ಮಾನ್ಯವೂ ಅಲ್ಲ, ಗೌರವಾನ್ವಿತವೂ ಅಲ್ಲ ಎಂಬ ಸಂಶಯ ನನಗಿರುವಾಗ ನಾನು ಅವರನ್ನು ಹಾಗೇಕೆ ಸಂಬೋಧಿಸಬೇಕು?’

ಅನೇಕ ಮಂದಿ ಸಾರ್ವಜನಿಕ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಯೋಗ್ಯವಾಗಿ ನಿರ್ವಹಿಸುತ್ತಾರಾದರೂ ಅವರಲ್ಲಿ ಎಲ್ಲರೂ ಭರವಸೆಗೆ ಅರ್ಹರಲ್ಲ. ಹೀಗಿದ್ದರೂ, ನಾವು ರಾಜರಿಗೂ ರಾಜ್ಯಪಾಲರಿಗೂ “ಕರ್ತನ ನಿಮಿತ್ತ” ಅಧೀನರಾಗಬೇಕೆಂದು ಬೈಬಲ್‌ ಪ್ರೋತ್ಸಾಹಿಸುತ್ತದೆ. (1 ಪೇತ್ರ 2:​13, 14) ಆದಕಾರಣ, ಒಬ್ಬ ಅಧಿಕಾರಿ ದೇವರ ಅನುಮತಿಯಿಂದ ಅಧಿಕಾರ ಸ್ಥಾನದಲ್ಲಿದ್ದಾನೆಂದು ಒಪ್ಪಿಕೊಳ್ಳುವುದು, ನಾವು ಮಾನ ತೋರಿಸುವಂತೆಯೂ ತಕ್ಕದಾದ ಗೌರವ ಕೊಡುವಂತೆಯೂ ನಮ್ಮನ್ನು ಪ್ರಚೋದಿಸುವುದು.​—⁠ರೋಮಾಪುರ 13:⁠1.

ಈ ಸಂದರ್ಭದಲ್ಲಿ ಒಬ್ಬ ಅಧಿಕಾರಿಯ ವೈಯಕ್ತಿಕ ನಡತೆಯು ಹೇಗೆಯೇ ಇರಲಿ ಗೌರವ ಕೊಡುವಿಕೆಯನ್ನು ಅದು ತಡೆಯಬಾರದು. ಒಬ್ಬ ಅಧಿಕಾರಿಯನ್ನು ಅವನ ಗೌರವಸೂಚಕ ಬಿರುದಿನಿಂದ ಸಂಬೋಧಿಸುವುದು ಅವನ ನಡತೆಯನ್ನು ನಾವು ಅಂಗೀಕರಿಸುತ್ತೇವೆಂದು ಆಗುವುದಿಲ್ಲ. ಅಪೊಸ್ತಲ ಪೌಲನ ಜೀವನದಲ್ಲಿ ನಡೆದ ಒಂದು ಅನುಭವ ಇದನ್ನು ತೋರಿಸುತ್ತದೆ.

ಪೌಲನು ಬಿರುದುಗಳನ್ನು ಉಪಯೋಗಿಸಿದ್ದು

ಒಮ್ಮೆ ಯೆರೂಸಲೇಮಿನಲ್ಲಿ ಅಪೊಸ್ತಲ ಪೌಲನು ಸುಳ್ಳು ಅಪವಾದಗಳ ಕಾರಣ ಬಂಧಿಸಲ್ಪಟ್ಟು ಯೂದಾಯದ ರಾಜ್ಯಪಾಲ ಫೆಲಿಕ್ಸನ ಬಳಿಗೆ ತರಲ್ಪಟ್ಟನು. ಈ ಫೆಲಿಕ್ಸನು ಆದರ್ಶಪ್ರಾಯ ಸಾರ್ವಜನಿಕ ಅಧಿಕಾರಿಯಾಗಿರಲಿಲ್ಲ. ರೋಮನ್‌ ಇತಿಹಾಸಗಾರ ಟ್ಯಾಸಿಟಸ್‌ ಈ ಫೆಲಿಕ್ಸನ ವಿಷಯ ಬರೆದುದು: “ ‘ತಾನು ಏನೇ ಕೆಟ್ಟದ್ದು ಮಾಡಿದರೂ ತನ್ನನ್ನು ದಂಡಿಸಲು ಯಾರಿಗೂ ಧೈರ್ಯವಿಲ್ಲವೆಂದು ಅವನು ನೆನಸಿದನು.’ ನ್ಯಾಯವಾಗಿ ತೀರ್ಪು ಕೊಡುವುದಕ್ಕಿಂತಲೂ ಲಂಚ ತಕ್ಕೊಳ್ಳುವುದರಲ್ಲಿ ಅವನಿಗೆ ಆಸಕ್ತಿ ಹೆಚ್ಚಿತ್ತು.” ಹೀಗಿದ್ದರೂ, ಪೌಲನು ಎರಡು ವರ್ಷ ಬಂದಿಯಾಗಿದ್ದಾಗ ಆ ರಾಜ್ಯಪಾಲನಿಗೆ ಮರ್ಯಾದೆ ತೋರಿಸಿದನು. ಅವರಿಬ್ಬರೂ ಅನೇಕ ಬಾರಿ ಮಾತುಕತೆ ನಡಿಸಿದರು. ಫೆಲಿಕ್ಸನು ಲಂಚದ ಹಣಕ್ಕಾಗಿ ಮುನ್ನೋಡುತ್ತಿದ್ದರೂ ಅದು ದೊರೆಯಲಿಲ್ಲ. ಪೌಲನಾದರೊ ಆ ಸಂದರ್ಭವನ್ನು ಸಾರುವುದಕ್ಕೆ ಉಪಯೋಗಿಸಿದನು.​—⁠ಅ. ಕೃತ್ಯಗಳು 24:⁠26.

ಫೆಲಿಕ್ಸನ ನಂತರ ಫೆಸ್ತನು ಹೊಸ ರಾಜ್ಯಪಾಲನಾದನು. ಅವನು ಕೈಸರೈಯದಲ್ಲಿ ಪೌಲನ ಮೊಕದ್ದಮೆಯನ್ನು ಪರೀಕ್ಷಿಸಿದನು. ಯೆಹೂದಿ ಮುಖಂಡರ ಮೆಚ್ಚುಗೆಯನ್ನು ಪಡೆಯಲಿಕ್ಕಾಗಿ ಪೌಲನ ವಿಚಾರಣೆ ಯೆರೂಸಲೇಮಿನಲ್ಲಿ ನಡೆಯಬೇಕೆಂದು ಫೆಸ್ತನು ಸೂಚಿಸಿದನು. ಆದರೆ ಅಲ್ಲಿ ತನಗೆ ಪಕ್ಷಪಾತವಿಲ್ಲದ ನ್ಯಾಯ ದೊರೆಯದೆಂದು ಪೌಲನಿಗೆ ತಿಳಿದಿತ್ತು. ಆದಕಾರಣ, ಅವನು ತನ್ನ ರೋಮನ್‌ ಪೌರತ್ವದ ಪ್ರಯೋಜನವನ್ನು ತಕ್ಕೊಂಡು, ‘ನಾನು ನೇರವಾಗಿ ಚಕ್ರವರ್ತಿಗೇ ಮನವಿ ಮಾಡುತ್ತೇನೆ!’ ಎಂದು ಹೇಳಿದನು.​—⁠ಅ. ಕೃತ್ಯಗಳು 25:​11, NIBV.

ಪೌಲನ ಮೇಲೆ ಹೊರಿಸಲಾಗಿದ್ದ ಆರೋಪಗಳನ್ನು ಕೈಸರನಿಗೆ ಹೇಗೆ ವಿವರಿಸುವುದೆಂದು ಫೆಸ್ತನು ಗೊಂದಲದಲ್ಲಿದ್ದಾಗ ಅವನಿಗೆ ಸಹಾಯವು ದೊರೆಯಿತು. ಹೇಗೆಂದರೆ, IIನೆಯ ರಾಜ ಅಗ್ರಿಪ್ಪನು ಫೆಸ್ತನಿಗೆ ಸೌಜನ್ಯದ ಭೇಟಿ ನೀಡಿದಾಗ ಈ ಮೊಕದ್ದಮೆಯ ಬಗ್ಗೆ ತಿಳಿಯ​ಬಯಸಿದನು. ಮರುದಿನ, ಬಹಳ ಆಡಂಬರದಿಂದ ಸೇನಾಧಿಕಾರಿಗಳೂ ಸ್ಥಳಿಕ ಗೌರವಾನ್ವಿತರೂ ಈ ರಾಜನ ಜೊತೆಯಾಗಿ ಸಭಾಂಗಣಕ್ಕೆ ಹೋದರು.​—⁠ಅ. ಕೃತ್ಯಗಳು 25:​13-23.

ಪೌಲನನ್ನು ಮಾತಾಡುವಂತೆ ಅಗ್ರಿಪ್ಪನು ಹೇಳಿದಾಗ, ಪೌಲನು ತನ್ನ ಆರಂಭದ ಮಾತುಗಳಲ್ಲಿ ಅವನನ್ನು “ರಾಜನೇ,” ಎಂಬ ಬಿರುದಿನಿಂದ ಸಂಬೋಧಿಸಿದನು. ಮಾತ್ರವಲ್ಲ ಅಗ್ರಿಪ್ಪನು ಯೆಹೂದ್ಯರ ಆಚಾರಗಳನ್ನೂ ವಿವಾದಗಳನ್ನೂ ಚೆನ್ನಾಗಿ ಬಲ್ಲ ಪರಿಣತನೆಂದು ಸಹ ಒಪ್ಪಿಕೊಂಡನು. (ಅ. ಕೃತ್ಯಗಳು 26:​2, 3) ಆ ಸಮಯದಲ್ಲಿ, ಅಗ್ರಿಪ್ಪನು ತನ್ನ ತಂಗಿಯೊಂದಿಗೆ ಲಜ್ಜಾಸ್ಪದ ಅಗಮ್ಯಗಮನ ಸಂಬಂಧ ಇಟ್ಟುಕೊಂಡಿದ್ದನೆಂಬುದು ಎಲ್ಲರಿಗೆ ತಿಳಿದ ವಿಷಯವಾಗಿತ್ತು. ಹಾಗಾಗಿ ಅಗ್ರಿಪ್ಪನು ಅನೈತಿಕ ಜೀವನಕ್ಕೆ ಕುಪ್ರಸಿದ್ಧನಾಗಿದ್ದನೆಂಬುದು ಪೌಲನಿಗೂ ನಿಶ್ಚಯವಾಗಿ ತಿಳಿದಿತ್ತು. ಹೀಗಿದ್ದರೂ, ಪೌಲನು ಅವನಿಗೆ ರಾಜನಿಗೆ ಸಲ್ಲತಕ್ಕ ಗೌರವವನ್ನು ಕೊಟ್ಟನು.

ಪೌಲನು ಪ್ರತಿವಾದ ಮಾಡುತ್ತಿದ್ದಾಗ ಫೆಸ್ತನು, “ಪೌಲನೇ,​—⁠ನೀನು ಮರುಳಾಗಿದ್ದೀ” ಎಂದು ಹೇಳಿದಾಗ ಪೌಲನು ಸಿಟ್ಟಿಗೇಳದೆ ಶಾಂತಭಾವದಿಂದ ಆ ರಾಜ್ಯಪಾಲನನ್ನು ಸಂಬೋಧಿಸಿ ‘ಶ್ರೀಮಾನ್‌’ ಎಂದು ಕರೆದನು. (ಅ. ಕೃತ್ಯಗಳು 26:​24, 25) ಪೌಲನು ಅವನ ಸ್ಥಾನಕ್ಕೆ ತಕ್ಕದಾದ ಗೌರವವನ್ನು ತೋರಿಸಿದನು. ಆದರೂ, ಈ ಉದಾಹರಣೆಗಳು, ‘ನಾವು ಅಧಿಕಾರಿಗಳಿಗೆ ತೋರಿಸಬೇಕಾದ ಗೌರವಕ್ಕೆ ಮಿತಿ ಇದೆಯೇ?’ ಎಂಬ ಪ್ರಶ್ನೆಯನ್ನು ಎಬ್ಬಿಸುತ್ತವೆ.

ಸಂಬಂಧಸೂಚಕ ಗೌರವ

ಸರಕಾರಕ್ಕಿರುವ ಅಧಿಕಾರ ಸಂಬಂಧಸೂಚಕವೆಂದು ತಿಳಿಸುತ್ತ ರೋಮಾಪುರ 13:1 (NW) ಹೇಳುವುದು: “ಅಸ್ತಿತ್ವದಲ್ಲಿರುವ ಅಧಿಕಾರಿಗಳು ದೇವರಿಂದ ತಮ್ಮ ಸಂಬಂಧಸೂಚಕ ಸ್ಥಾನಗಳಲ್ಲಿ ಇಡಲ್ಪಟ್ಟಿದ್ದಾರೆ.” ಹೀಗೆ, ಸರಕಾರಗಳ ಪ್ರತಿನಿಧಿಗಳಿಗೆ ತೋರಿಸಬೇಕಾದ ಗೌರವವೂ ಸಂಬಂಧಸೂಚಕವಾಗಿದೆ. ಇತರರಿಗೆ ಸಲ್ಲಿಸಲೇಬೇಕಾದ ಗೌರವದ ಮಿತಿಯನ್ನು ಯೇಸು ಸ್ಥಾಪಿಸುತ್ತ ತನ್ನ ಶಿಷ್ಯರಿಗೆ ಹೇಳಿದ್ದು: “ಆದರೆ ನೀವು ಬೋಧಕರನ್ನಿಸಿಕೊಳ್ಳಬೇಡಿರಿ; ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರು ಸಹೋದರರು. ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಮ್ಮ ತಂದೆ ಎಂದು ಕರೆಯಬೇಡಿರಿ; ಪರಲೋಕದಲ್ಲಿರುವಾತನೊಬ್ಬನೇ ನಿಮಗೆ ತಂದೆ. ಮತ್ತು ಗುರುಗಳು ಅನ್ನಿಸಿಕೊಳ್ಳಬೇಡಿರಿ; ಕ್ರಿಸ್ತನೊಬ್ಬನೇ ನಿಮಗೆ ಗುರುವು.”​—⁠ಮತ್ತಾಯ 23:​8-10.

ಹೀಗೆ, ಧಾರ್ಮಿಕ ಹಾಗೂ ಲೌಕಿಕ ಬಿರುದುಗಳ ಮಧ್ಯೆ ಇರುವ ವ್ಯತ್ಯಾಸವು ತಕ್ಕ ಗೌರವವನ್ನು ಕೊಡುವ ವಿಷಯದಲ್ಲಿ ಮಿತಿಯನ್ನಿಡುತ್ತದೆ. ಆದರೆ ಐಹಿಕ ಅಧಿಕಾರಿಗಳು ಧಾರ್ಮಿಕ ಬಿರುದುಗಳನ್ನು ಆಯ್ದುಕೊಳ್ಳುವಲ್ಲಿ, ಮರ್ಯಾದೆ ತೋರಿಸುವಂತೆ ಪೌಲನು ಕೊಟ್ಟ ಸಲಹೆಯು ಅಂಥ ಬಿರುದುಗಳಿಗೆ ಅನ್ವಯಿಸುವುದಿಲ್ಲ. ಶಾಸ್ತ್ರೀಯ ಸಲಹೆಯನ್ನು ಅನುಸರಿಸುವ ವ್ಯಕ್ತಿಯೊಬ್ಬನು ಅಂಥ ಅಧಿಕಾರಿಗಳನ್ನು ಗೌರವದಿಂದ ಕಾಣುತ್ತಾನೆ. ಆದರೂ “ದೇವರದನ್ನು ದೇವರಿಗೆ ಕೊಡಿರಿ” ಎಂಬ ಹೊಣೆಗಾರಿಕೆ ಅವನಿಗಿರುವುದರಿಂದ ಅವನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿ ಯಾವುದೇ ಅಂಥ ಧಾರ್ಮಿಕ ಬಿರುದುಗಳನ್ನು ಉಪಯೋಗಿಸದಂತೆ ತಡೆಯುವುದು.​—⁠ಮತ್ತಾಯ 22:21. (g 9/08)

ಇದರ ಬಗ್ಗೆ ನೀವು ಯೋಚಿಸಿದ್ದುಂಟೋ?

ಯೇಸುವಿನ ಹಿಂಬಾಲಕರು ಲೌಕಿಕ ಅಧಿಕಾರಿಗಳನ್ನು ಹೇಗೆ ವೀಕ್ಷಿಸಿದರು?​ರೋಮಾಪುರ 13:⁠7.

ಅಪೊಸ್ತಲ ಪೌಲನು ಸರಕಾರೀ ಅಧಿಕಾರಿಗಳನ್ನು ಸಂಬೋಧಿಸುವಾಗ ಗೌರವ ಸೂಚಕ ಬಿರುದುಗಳನ್ನು ಉಪಯೋಗಿಸಿದನೊ?​ಅ. ಕೃತ್ಯಗಳು 25:11; 26:​2, 25.

ಯೇಸು ಯಾವ ವಿಧದ ಬಿರುದುಗಳನ್ನು ಅನುಮೋದಿಸಲಿಲ್ಲ?​ಮತ್ತಾಯ 23:​8-10.

[ಪುಟ 22, 23ರಲ್ಲಿರುವ ಚಿತ್ರ]

ಪೌಲನು ಅಗ್ರಿಪ್ಪನನ್ನು ಹೇಗೆ ಸಂಬೋಧಿಸಿದನು?