ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಕ್ಕಳು ಆನ್‌ಲೈನ್‌ನಲ್ಲಿ . . . ಹೆತ್ತವರು ಏನು ಮಾಡಬೇಕು?

ಮಕ್ಕಳು ಆನ್‌ಲೈನ್‌ನಲ್ಲಿ . . . ಹೆತ್ತವರು ಏನು ಮಾಡಬೇಕು?

ಮಕ್ಕಳು ಆನ್‌ಲೈನ್‌ನಲ್ಲಿ . . . ಹೆತ್ತವರು ಏನು ಮಾಡಬೇಕು?

ಹೆತ್ತವರೇ, ನಿಮ್ಮನ್ನು ಹೆಚ್ಚು ಗಾಬರಿಗೊಳಿಸುವಂಥದ್ದು ಯಾವುದು? ನಿಮ್ಮ ಮಗ/ಮಗಳ ಹತ್ತಿರ ನಿಮ್ಮ ಕಾರಿನ ಕೀ ಇದೆಯೆಂದು ತಿಳಿದಿರುವ ವಿಷಯವೋ ಅಥವಾ ಇಂಟರ್‌ನೆಟ್‌ಗೆ ಅನಿರ್ಬಂಧಿತ ಪ್ರವೇಶವಿದೆಂದು ತಿಳಿದಿರುವ ವಿಷಯವೋ? ಈ ಎರಡೂ ಚಟುವಟಿಕೆಗಳಲ್ಲಿ ಸ್ವಲ್ಪಮಟ್ಟಿನ ಅಪಾಯವಿದೆ. ಎರಡರಲ್ಲೂ ತುಸು ಮಟ್ಟಿನ ಹೊಣೆಗಾರಿಕೆ ಸಹ ಇದೆ. ಹೆತ್ತವರು ತಮ್ಮ ಮಕ್ಕಳನ್ನು ವಾಹನ ಚಲಾಯಿಸುವುದರಿಂದ ಸದಾ ನಿಷೇಧಿಸಸಾಧ್ಯವಿಲ್ಲ. ಆದರೆ ಅದನ್ನು ಸುರಕ್ಷಿತವಾಗಿ ಚಲಾಯಿಸಲು ಮಕ್ಕಳಿಗೆ ಕಲಿಸಬಲ್ಲರು. ಇಂಟರ್‌ನೆಟ್‌ ಬಳಕೆಯ ವಿಷಯದಲ್ಲೂ ಅನೇಕ ಹೆತ್ತವರು ತದ್ರೀತಿಯ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾರೆ.

“ಪ್ರತಿಯೊಬ್ಬ ಜಾಣನು ತನ್ನ ಕೆಲಸವನ್ನು ತಿಳುವಳಿಕೆಯಿಂದ ನಡಿಸುವನು.” (ಜ್ಞಾನೋಕ್ತಿ 13:16) ಇಂಟರ್‌ನೆಟ್‌ ಬಳಸುವ ಮಕ್ಕಳ ಹೆತ್ತವರಿಗೆ ಸ್ವಲ್ಪವಾದರೂ ಇಂಟರ್‌ನೆಟ್‌ನ ಜ್ಞಾನ ಇರಬೇಕು. ಇನ್‌ಸ್ಟಂಟ್‌ ಮೆಸೇಜನ್ನು ಕಳುಹಿಸುತ್ತಿರುವಾಗ, ಬ್ರೌಸ್‌ ಮಾಡುತ್ತಿರುವಾಗ, ವೆಬ್‌ ಪೇಜ್‌ ಅಥವಾ ಇತರ ಯಾವುದೇ ಕಾರಣಕ್ಕಾಗಿ ಆನ್‌ಲೈನ್‌ನಲ್ಲಿರುವಾಗ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ಅವರು ತಿಳಿದಿರಬೇಕು. “ಈ ವಯಸ್ಸಲ್ಲಿ ಕಲಿತು ಏನಾಗ್ಬೇಕು? ನಾವೇನು ಅಷ್ಟು ಓದಲೂ ಇಲ್ಲ ಎನ್ನಬೇಡಿ. ಕಂಪ್ಯೂಟರ್‌ ತಂತ್ರಜ್ಞಾನವನ್ನು ಹೇಗಾದರೂ ಕಲಿಯಿರಿ” ಎನ್ನುತ್ತಾಳೆ ಮಾರ್ಷೆ, ಇಬ್ಬರು ಮಕ್ಕಳ ತಾಯಿ.

‘ಯಾವನಾದರೂ ಮಾಳಿಗೆಯಿಂದ ಬೀಳದಂತೆ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಗೋಡೆಯನ್ನು ಕಟ್ಟಿಸಬೇಕು.’ (ಧರ್ಮೋಪದೇಶಕಾಂಡ 22:8) ಇಂಟರ್‌ನೆಟ್‌ ಸೌಲಭ್ಯ ಒದಗಿಸುವವರು ಮತ್ತು ಸಾಫ್ಟ್‌ವೇರ್‌ ಪ್ರೊಗ್ರ್ಯಾಮ್‌ಗಳು ಅಯೋಗ್ಯ ಚಿತ್ರಗಳನ್ನು ಮತ್ತು ಅಪಾಯಕರ ಸೈಟ್ಸ್‌ ಅನ್ನು ಮಕ್ಕಳು ತೆರೆಯದಂತೆ ತಡೆ “ಗೋಡೆ”ಯಂತಿರುವ ಪ್ರೊಗ್ರ್ಯಾಮ್‌ಗಳನ್ನು ಒದಗಿಸಬಹುದು. ಮಕ್ಕಳು ತಮ್ಮ ವೈಯಕ್ತಿಕ ಮಾಹಿತಿ ಅಂದರೆ ಹೆಸರು ಮತ್ತು ವಿಳಾಸವನ್ನು ಪ್ರಕಟಪಡಿಸದಂತೆ ತಡೆಯುವ ಪ್ರೊಗ್ರ್ಯಾಮ್‌ಗಳು ಕೂಡ ಇವೆ. ಹೆತ್ತವರು ಇಷ್ಟೆಲ್ಲಾ ಕ್ರಮ ಕೈಗೊಂಡರೂ ಅವು ಯಾವಾಗಲೂ ಎಲ್ಲ ಹಾನಿಕರ ಮಾಹಿತಿಗಳನ್ನು ತಡೆದುಹಿಡಿಯುವುದಿಲ್ಲ ಎಂದು ಗಮನದಲ್ಲಿಡಿ. ಅಲ್ಲದೆ, ಕಂಪ್ಯೂಟರ್‌ ಶಿಕ್ಷಿತರಾದ ಅನೇಕ ದೊಡ್ಡ ಮಕ್ಕಳಿಗೆ ಈ ತಡೆಗಟ್ಟುಗಳನ್ನು ಹೇಗೆ ದಾಟಿಹೋಗಬೇಕೆಂಬುದು ತಿಳಿದಿದೆ.

“ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.” (ಜ್ಞಾನೋಕ್ತಿ 18:1) 9 ರಿಂದ 19 ವಯಸ್ಸಿನ ಮಕ್ಕಳಲ್ಲಿ ಸುಮಾರು ಐವರಲ್ಲಿ ಒಬ್ಬರು ತಮ್ಮ ಬೆಡ್‌ರೂಮ್‌ಗಳಲ್ಲಿ ಇಂಟರ್‌ನೆಟ್‌ ಸೌಲಭ್ಯ ಹೊಂದಿದ್ದರೆಂದು ಬ್ರಿಟನ್‌ನ ಒಂದು ಅಧ್ಯಯನವು ಪ್ರಕಟಪಡಿಸಿತು. ಆದರೆ ಎಲ್ಲರು ನಡೆದಾಡುವ ಕೋಣೆಯಲ್ಲಿ ಕಂಪ್ಯೂಟರನ್ನು ಇಡುವುದರಿಂದ ಮಕ್ಕಳು ಆನ್‌ಲೈನ್‌ನಲ್ಲಿ ಏನು ಮಾಡುತ್ತಿದ್ದಾರೆಂಬುದರ ಮೇಲೆ ಹೆತ್ತವರಿಗೆ ಕಣ್ಣಿಡಲು ಸಹಾಯವಾಗುವುದು. ಅಲ್ಲದೆ ಅಯೋಗ್ಯವಾದ ಸೈಟ್‌ಗಳನ್ನು ತೆರೆಯದಂತೆಯೂ ಮಕ್ಕಳನ್ನು ತಡೆಯುವುದು.

“ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ.” (ಎಫೆಸ 5:15, 16) ಮಕ್ಕಳು ಇಂಟರ್‌ನೆಟ್‌ ಅನ್ನು ಯಾವಾಗ, ಎಷ್ಟು ಸಮಯ ಉಪಯೋಗಿಸಬೇಕು ಮತ್ತು ಯಾವ ಸೈಟ್‌ಗಳನ್ನು ಅವರು ತೆರೆಯಬಹುದು, ಬಾರದು ಎಂಬುದನ್ನು ಮೊದಲೇ ನಿರ್ಧರಿಸಿ. ಅದನ್ನು ಮಕ್ಕಳೊಂದಿಗೆ ಚರ್ಚಿಸಿ. ಅದು ಅವರಿಗೆ ಚೆನ್ನಾಗಿ ಅರ್ಥವಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮಕ್ಕಳು ಮನೆಯಿಂದ ಹೊರಗಿರುವಾಗ ನೀವು ಅವರ ಕುರಿತು ಮೇಲ್ವಿಚಾರ ನಡೆಸಲು ಸಾಧ್ಯವಿಲ್ಲ ಎಂಬುದು ನಿಜ. ಆದುದರಿಂದ ಅವರು ನಿಮ್ಮೆದುರು ಇಲ್ಲದಿರುವಾಗಲೂ ವಿವೇಕಯುತ ನಿರ್ಣಯಗಳನ್ನು ಮಾಡಲಾಗುವಂತೆ ಯೋಗ್ಯ ಮೌಲ್ಯಗಳನ್ನು ಅವರಲ್ಲಿ ಬೇರೂರಿಸಿರಿ. * (ಫಿಲಿಪ್ಪಿ 2:12) ಇಂಟರ್‌ನೆಟ್‌ ಬಳಕೆಯ ಕುರಿತು ನೀವಿಟ್ಟಿರುವ ನಿಯಮಗಳನ್ನು ಅವರು ಮುರಿಯುವಲ್ಲಿ ಪರಿಣಾಮ ಏನಾಗುವುದೆಂದು ಸ್ಪಷ್ಟವಾಗಿ ವಿವರಿಸಿರಿ. ಬಳಿಕ ಆ ನಿಯಮಗಳನ್ನು ಜಾರಿಗೆ ತನ್ನಿ.

“[ಒಳ್ಳೇ ತಾಯಿ] ಗೃಹಕೃತ್ಯಗಳನ್ನೆಲ್ಲಾ ನೋಡಿಕೊಳ್ಳುವಳು.” (ಜ್ಞಾನೋಕ್ತಿ 31:27) ನಿಮ್ಮ ಮಕ್ಕಳು ಇಂಟರ್‌ನೆಟ್‌ ಬಳಸುತ್ತಿರುವ ಬಗ್ಗೆ ನಿಗಾಯಿಡಿ ಮತ್ತು ನೀವು ಅವರನ್ನು ಗಮನಿಸುತ್ತೀರೆಂದು ಅವರಿಗೆ ತಿಳಿದಿರಲಿ. ಅವರ ಖಾಸಗಿತನವನ್ನು ಭಂಗಪಡಿಸುತ್ತೀರೆಂದು ನೆನಸಬೇಡಿ. ಇಂಟರ್‌ನೆಟ್‌ ಒಂದು ಸಾರ್ವಜನಿಕ ವೇದಿಕೆ ಎಂದು ನೆನಪಿನಲ್ಲಿಡಿ. ಅಮೆರಿಕದ ಫೆಡರಲ್‌ ಬ್ಯೂರೋ ಆಫ್‌ ಇನ್‌ವೆಸ್ಟಿಗೇಷನ್‌ ಶಿಫಾರಸ್ಸು ಮಾಡುತ್ತದೆ ಏನಂದರೆ ಹೆತ್ತವರು ತಮ್ಮ ಮಕ್ಕಳ ಆನ್‌ಲೈನ್‌ ಅಕೌಂಟ್ಸ್‌ಗಳನ್ನು ತೆರೆದುನೋಡಬೇಕು ಮತ್ತು ಅವರ ಇ-ಮೇಲ್‌ ಮತ್ತು ವೆಬ್‌ಸೈಟ್‌ಗಳನ್ನು ಆಗಿಂದಾಗ್ಗೆ ಪರೀಕ್ಷಿಸಬೇಕು.

“ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು ನಿನ್ನನ್ನು ಕಾಪಾಡುವದು; ಇದರಿಂದ ನೀನು ದುರ್ಮಾರ್ಗದಿಂದಲೂ ಕೆಟ್ಟ ಮಾತನಾಡುವವರಿಂದಲೂ ತಪ್ಪಿಸಿಕೊಳ್ಳುವಿ.” (ಜ್ಞಾನೋಕ್ತಿ 2:11, 12) ಮೇಲ್ವಿಚಾರ ಮತ್ತು ನಿಗಾವಹಿಸುವ ವಿಷಯದಲ್ಲಿ ಇಷ್ಟನ್ನೇ ಮಾಡಬಹುದು. ಆದರೆ ನೀವು ಕಲಿಸುವ ಮೌಲ್ಯಗಳು ಮತ್ತು ನೀವಿಡುವ ಮಾದರಿಯು ನಿಮ್ಮ ಮಕ್ಕಳನ್ನು ಸಂರಕ್ಷಿಸುವುದರಲ್ಲಿ ಹೆಚ್ಚನ್ನು ಮಾಡಬಲ್ಲದು. ಆದುದರಿಂದ ಇಂಟರ್‌ನೆಟ್‌ ಬಳಸುತ್ತಿರುವಾಗ ಏನೆಲ್ಲಾ ಸಂಭವಿಸಸಾಧ್ಯವಿದೆ ಎಂಬುದರ ಕುರಿತು ಮಕ್ಕಳೊಂದಿಗೆ ಚರ್ಚಿಸಿರಿ. ನಿಮ್ಮ ಮಕ್ಕಳೊಂದಿಗಿನ ಮುಕ್ತ ಸಂಭಾಷಣೆಯೇ ಆನ್‌ಲೈನ್‌ ಅಪಾಯಗಳಿಂದ ಸಂರಕ್ಷಿಸಬಲ್ಲ ಅತ್ಯುತ್ತಮ ಅಸ್ತ್ರ. ಟಾಮ್‌ ಎಂಬ ಒಬ್ಬ ಕ್ರೈಸ್ತ ತಂದೆಯು ತಿಳಿಸುವುದು: “ಇಂಟರ್‌ನೆಟ್‌ನಲ್ಲಿ ಸಂಪರ್ಕಿಸಬಲ್ಲ ‘ಕೆಟ್ಟ’ ಜನರ ಬಗ್ಗೆ ನಾವು ನಮ್ಮ ಇಬ್ಬರು ಗಂಡುಮಕ್ಕಳೊಂದಿಗೆ ಮಾತಾಡಿದೆವು. ಅಶ್ಲೀಲ ಸಾಹಿತ್ಯವೆಂದರೇನು, ಅದನ್ನೇಕೆ ನೋಡಬಾರದು ಮತ್ತು ಅಪರಿಚಿತರೊಂದಿಗೆ ಅವರು ಏಕೆ ಮಾತನಾಡಲೇಬಾರದು ಎಂಬದರ ಕುರಿತೂ ನಾವು ವಿವರಿಸಿ ಹೇಳಿದೆವು.”

ನಿಮ್ಮ ಮಕ್ಕಳನ್ನು ಸಂರಕ್ಷಿಸಸಾಧ್ಯ!

ಆನ್‌ಲೈನ್‌ ಅಪಾಯಗಳಿಂದ ನಿಮ್ಮ ಮಕ್ಕಳನ್ನು ಸಂರಕ್ಷಿಸಲು ಹೆಚ್ಚು ಪ್ರಯತ್ನ ಅವಶ್ಯ. ಎಲೆಕ್ಟ್ರಾನಿಕ್‌ ಮಾಧ್ಯಮಗಳು ದಿನೇದಿನೇ ಬದಲಾಗುತ್ತಾ ಬರುತ್ತವೆ. ನವೀನ ತಂತ್ರಜ್ಞಾನಗಳು ಅಪೂರ್ವ ಪ್ರಯೋಜನಗಳನ್ನು ತರುತ್ತವೆ ನಿಜ. ಆದರೆ ನಿಮ್ಮ ಮಕ್ಕಳಿಗೆ ಅದರಿಂದ ಮುಂಗಾಣದ ಅಪಾಯಗಳು ಎದುರಾಗುವುದರಲ್ಲಿ ಎರಡು ಮಾತಿಲ್ಲ. ಹೀಗಿರುವಾಗ ಭವಿಷ್ಯತ್ತಿನಲ್ಲಿ ಎದುರಾಗುವ ಅಪಾಯಗಳಿಂದ ಸಂರಕ್ಷಿಸಲು ನಿಮ್ಮ ಮಕ್ಕಳನ್ನು ಹೇಗೆ ಸಿದ್ಧಗೊಳಿಸಬಲ್ಲಿರಿ? “ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ” ಎನ್ನುತ್ತದೆ ಬೈಬಲ್‌.—ಪ್ರಸಂಗಿ 7:12.

ನಿಮ್ಮ ಮಕ್ಕಳು ವಿವೇಕಿಗಳಾಗುವಂತೆ ಸಹಾಯಮಾಡಿರಿ. ಇಂಟರ್‌ನೆಟ್‌ ಅಪಾಯಗಳನ್ನು ತಡೆಯಲು ಮತ್ತು ಹೊಣೆಗಾರಿಕೆಯಿಂದ ಅದನ್ನು ಬಳಸಲು ಸಹ ಸಹಾಯ ನೀಡಿರಿ. ಹೀಗೆ, ಇಂಟರ್‌ನೆಟ್‌ ನಿಮ್ಮ ಮಕ್ಕಳ ಸುರಕ್ಷೆಗೆ ಬೆದರಿಕೆಯನ್ನೊಡ್ಡದ ಒಂದು ಸಾಧನವಾಗಬಲ್ಲದು. (g 10/08)

[ಪಾದಟಿಪ್ಪಣಿ]

^ ಸೆಲ್‌ಫೋನ್‌, ಇತರ ಕೈಆಸರೆಯ ಸಾಧನಗಳು ಮತ್ತು ವಿಡಿಯೊ ಗೇಮ್‌ಗಳ ಮೂಲಕವೂ ಯುವಜನರು ಇಂಟರ್‌ನೆಟ್‌ ಅನ್ನು ತೆರೆಯಬಲ್ಲರು ಎಂಬುದನ್ನು ಹೆತ್ತವರು ಜ್ಞಾಪಕದಲ್ಲಿಡಬೇಕು.

[ಪುಟ 16ರಲ್ಲಿರುವ ಸಂಕ್ಷಿಪ್ತ ವಿವರಣೆ]

ಬ್ರಿಟನ್‌ನಲ್ಲಿ ಪ್ರತಿವಾರ ಇಂಟರ್‌ನೆಟ್‌ ಬಳಸುವ 9-19 ವಯಸ್ಸಿನ ಯುವಜನರಲ್ಲಿ 57 ಪ್ರತಿಶತ ಮಂದಿ ಅಶ್ಲೀಲ ಚಿತ್ರಗಳ ಸಂಪರ್ಕಕ್ಕೆ ಬರುತ್ತಾರೆ. ಆದರೂ ಕೇವಲ 16 ಪ್ರತಿಶತ ಹೆತ್ತವರು ಮಾತ್ರ ತಮ್ಮ ಮಕ್ಕಳು ಇಂಟರ್‌ನೆಟ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಿದ್ದರೆಂದು ಒಪ್ಪುತ್ತಾರೆ.”

[ಪುಟ 17ರಲ್ಲಿರುವ ಸಂಕ್ಷಿಪ್ತ ವಿವರಣೆ]

ಪರಿಣತರ ಪ್ರಕಾರ ಪ್ರತಿ ದಿನವೂ 7,50,000 ದಗಾಕೋರರು ಇಂಟರ್‌ನೆಟ್‌ ಚ್ಯಾಟ್‌ ರೂಮ್‌ಗಳಲ್ಲಿ ಮತ್ತು ಡೇಟಿಂಗ್‌ ಸರ್ವಿಸ್‌ಗಳಲ್ಲಿ ತಮ್ಮ ಬೇಟೆಗಾಗಿ ಹುಡುಕುತ್ತಾ ಇರುತ್ತಾರೆ

[ಪುಟ 17ರಲ್ಲಿರುವ ಸಂಕ್ಷಿಪ್ತ ವಿವರಣೆ]

ಅಮೆರಿಕದಲ್ಲಿ 12-17 ವಯಸ್ಸಿನ 93 ಪ್ರತಿಶತದಷ್ಟು ಹೆಚ್ಚು ಯುವಜನರು ಇಂಟರ್‌ನೆಟ್‌ ಬಳಸುತ್ತಾರೆ

[ಪುಟ 16, 17ರಲ್ಲಿರುವ ಚಿತ್ರ]

ಇಂಟರ್‌ನೆಟ್‌ ಅನ್ನು ಹೊಣೆಗಾರಿಕೆಯಿಂದ ಬಳಸುವಂತೆ ನಿಮ್ಮ ಮಕ್ಕಳಿಗೆ ಕಲಿಸಬಲ್ಲಿರೋ?