ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ಹುಟ್ಟಿದ್ದು ಯಾವಾಗ?

ಯೇಸು ಹುಟ್ಟಿದ್ದು ಯಾವಾಗ?

ಬೈಬಲಿನ ದೃಷ್ಟಿಕೋನ

ಯೇಸು ಹುಟ್ಟಿದ್ದು ಯಾವಾಗ?

“ಯೇಸುವಿನ ಜನನದ ನಿಖರ ತಾರೀಖು ನಿಜವಾಗಿಯೂ ತಿಳಿದಿಲ್ಲ” ಎನ್ನುತ್ತದೆ ಎನ್‌ಸೈಕ್ಲೊಪೀಡಿಯ ಆಫ್‌ ಅರ್ಲಿ ಕ್ರಿಶ್ಚಿಯಾನಿಟಿ. ಆದರೂ ಭೂಸುತ್ತಲೂ ಕ್ರೈಸ್ತರೆನಿಸಿಕೊಳ್ಳುತ್ತಿರುವ ಲಕ್ಷಾಂತರ ಜನರು ಯೇಸುವಿನ ಜನನವನ್ನು ಡಿಸೆಂಬರ್‌ 25ರಂದು ಆಚರಿಸುತ್ತಾರೆ. ಆದರೆ ಬೈಬಲಿನಲ್ಲಿ ಈ ತಾರೀಖು ಎಲ್ಲಿಯೂ ಕಂಡುಬರುವುದಿಲ್ಲ. ಹಾಗಿರುವಲ್ಲಿ ಯೇಸು ನಿಜವಾಗಿಯೂ ಡಿಸೆಂಬರ್‌ನಲ್ಲಿ ಹುಟ್ಟಿದನೋ?

ಯೇಸುವಿನ ಜನನದ ನಿರ್ದಿಷ್ಟ ತಾರೀಖನ್ನು ಬೈಬಲ್‌ ತಿಳಿಸುವುದಿಲ್ಲವಾದರೂ ಆತನು ಡಿಸೆಂಬರ್‌ನಲ್ಲಿ ಹುಟ್ಟಲಿಲ್ಲವೆಂಬುದಕ್ಕೆ ಅದು ಪುರಾವೆಯನ್ನು ಒದಗಿಸುತ್ತದೆ. ಅಲ್ಲದೆ, ಡಿಸೆಂಬರ್‌ 25 ಯೇಸುವಿನ ಜನನ ದಿನವಾಗಿ ಏಕೆ ಆರಿಸಲಾಯಿತೆಂಬುದನ್ನೂ ಐಹಿಕ ಪುರಾವೆಯಿಂದ ನಾವು ಕಲಿಯಬಲ್ಲೆವು.

ಯೇಸು ಡಿಸೆಂಬರ್‌ನಲ್ಲಿ ಜನಿಸಲಿಲ್ಲ ಏಕೆ?

ಯೇಸು ಯೂದಾಯ ಪಟ್ಟಣದ ಬೇತ್ಲೆಹೇಮ್‌ನಲ್ಲಿ ಜನಿಸಿದನು. ಲೂಕನ ಸುವಾರ್ತೆಯು ವರದಿಸುವುದು: ‘ಆ ಸೀಮೆಯಲ್ಲಿ ಕುರುಬರು ಹೊಲದಲ್ಲಿದ್ದುಕೊಂಡು ರಾತ್ರಿಯಲ್ಲಿ ತಮ್ಮ ಕುರೀಹಿಂಡನ್ನು ಕಾಯುತ್ತಿದ್ದರು.’ (ಲೂಕ 2:4-8) ಇದು ಅಪರೂಪದ ಸಂಗತಿಯಲ್ಲ. “ಕುರಿಹಿಂಡು ವರ್ಷದ ಅಧಿಕ ಭಾಗವನ್ನು ಹೊರಗೆ ಬಯಲಿನಲ್ಲಿ ಕಳೆಯಬೇಕಾಗಿತ್ತು” ಎಂದು ಹೇಳುತ್ತದೆ ಯೇಸುವಿನ ಕಾಲದಲ್ಲಿ ದೈನಂದಿನ ಜೀವನ (ಇಂಗ್ಲಿಷ್‌) ಎಂಬ ಪುಸ್ತಕ. ಆದರೆ ಮೈಕೊರೆಯುವಷ್ಟು ಚಳಿಯಿರುವ ಡಿಸೆಂಬರ್‌ನ ಒಂದು ರಾತ್ರಿಯಲ್ಲಿ ಕುರುಬರು ತಮ್ಮ ಹಿಂಡಿನೊಂದಿಗೆ ಹೊರಗೆ ಬಯಲಿನಲ್ಲಿರುತ್ತಿದ್ದರೋ? ಆ ಪುಸ್ತಕ ಹೇಳುವುದು: “ಅವರು ಚಳಿಗಾಲದಲ್ಲಿ ಮನೆಯೊಳಗೇ ಇರುತ್ತಿದ್ದರು. ಹೊರಗೆ ಬರುತ್ತಿರಲಿಲ್ಲ. ಇದು ತಾನೇ, ಚಳಿಗಾಲದಲ್ಲಿನ ಕ್ರಿಸ್‌ಮಸ್‌ ತಾರೀಖು ಸಾಂಪ್ರದಾಯಿಕ ಹಾಗೂ ಸರಿಯಾಗಿದ್ದಿರಸಾಧ್ಯವಿಲ್ಲ ಎಂದು ತೋರಿಸುತ್ತದೆ. ಯಾಕೆಂದರೆ ಕುರುಬರು ಹೊರಗೆ ಹೊಲಗಳಲ್ಲಿದ್ದರು ಎಂದು ಸುವಾರ್ತೆಯು ತಿಳಿಸುತ್ತದೆ.”

ಈ ತೀರ್ಮಾನಕ್ಕೆ ಲೂಕನ ಸುವಾರ್ತಾ ವೃತ್ತಾಂತದ ಇನ್ನೊಂದು ವಿವರಣೆಯೂ ಬೆಂಬಲ ಕೊಡುತ್ತದೆ. “ಆ ಕಾಲದಲ್ಲಿ ರಾಜ್ಯವೆಲ್ಲಾ ಖಾನೆಷುಮಾರಿ ಬರಸಿಕೊಳ್ಳಬೇಕೆಂಬ ಆಜ್ಞೆಯು ಚಕ್ರವರ್ತಿಯಾದ ಔಗುಸ್ತನಿಂದ ಹೊರಟಿತು. ಕುರೇನ್ಯನು ಸುರಿಯಕ್ಕೆ ಅಧಿಪತಿಯಾಗಿದ್ದಾಗ ಈ ಮೊದಲನೆಯ ಖಾನೆಷುಮಾರಿ ನಡೆಯಿತು. ಆಗ ಎಲ್ಲರೂ ಖಾನೆಷುಮಾರಿ ಬರಸಿಕೊಳ್ಳುವದಕ್ಕಾಗಿ ತಮ್ಮತಮ್ಮ ಊರುಗಳಿಗೆ ಹೊರಟರು.”​—⁠ಲೂಕ 2:1-3.

ಚಕ್ರವರ್ತಿ ಔಗುಸ್ತನು ತೆರಿಗೆ ಮತ್ತು ಕಡ್ಡಾಯ ಸೈನ್ಯಸೇವೆಯ ಸಂಬಂಧದಲ್ಲಿ ಮಾಹಿತಿಯನ್ನು ಗಳಿಸುವುದಕ್ಕಾಗಿ ಈ ಜನಗಣತಿಯ ಆಜ್ಞೆಯನ್ನು ಹೊರಡಿಸಿರಬೇಕು. ಈ ಆಜ್ಞೆಯನ್ನು ಪಾಲಿಸಲಿಕ್ಕಾಗಿ ಮರಿಯಳು ತುಂಬು ಗರ್ಭಿಣಿಯಾಗಿದ್ದರೂ ತನ್ನ ಗಂಡನಾದ ಯೋಸೇಫನೊಂದಿಗೆ ನಜರೇತಿನಿಂದ 90 ಮೈಲು ದೂರದ ಬೇತ್ಲೆಹೇಮಿಗೆ ಹೊರಟಳು. ಈಗ ಯೋಚಿಸಿರಿ. ಸ್ಥಳಿಕ ಸರಕಾರದ ವ್ಯವಹಾರದಲ್ಲಿ ಸಾಮಾನ್ಯವಾಗಿ ಕೈಹಾಕದೇ ಇದ್ದ ಅಧಿಪತಿ ಔಗುಸ್ತನು, ಆವಾಗಲೇ ದಂಗೆಯೇಳಲು ಸಿದ್ಧರಾಗಿದ್ದ ಜನತೆಗೆ ಚಳಿಗಾಲದಲ್ಲಿ ಅಷ್ಟುದೂರದ ಪ್ರಯಾಣವೊಂದನ್ನು ಕೈಗೊಳ್ಳುವಂತೆ ಹೇಳುತ್ತಿದ್ದನೋ?

ಹೆಚ್ಚಿನ ಇತಿಹಾಸಕಾರರು ಹಾಗೂ ಬೈಬಲ್‌ ವಿದ್ವಾಂಸರು ಡಿಸೆಂಬರ್‌ 25ನ್ನು ಯೇಸುವಿನ ಜನನ ದಿನವಾಗಿ ಅಂಗೀಕರಿಸದಿರುವುದು ಗಮನಾರ್ಹವಾಗಿದೆ. ನಿಮಗೆ ಲಭ್ಯವಿರುವ ಎನ್‌ಸೈಕ್ಲಪೀಡಿಯದಲ್ಲಿ ಅಂತಹ ಮಾಹಿತಿಯು ದೊರೆಯುವುದು ಎಂಬುದಕ್ಕೆ ಸಂಶಯವಿಲ್ಲ. ಔಅರ್‌ ಸನ್‌ಡೇ ವಿಸಿಟರ್ಸ್‌ ಕ್ಯಾಥಲಿಕ್‌ ಎನ್‌ಸೈಕ್ಲಪೀಡಿಯ ಹೇಳುವುದು: “ಯೇಸು ಡಿಸೆಂಬರ್‌ 25ರಂದು ಹುಟ್ಟಲಿಲ್ಲವೆಂಬದಕ್ಕೆ ಸಾಮಾನ್ಯ ಒಮ್ಮತವಿದೆ.”

ಡಿಸೆಂಬರ್‌ 25ನ್ನು ಆರಿಸಿದ್ದೇಕೆ?

ಯೇಸುವಿನ ಮರಣದ ನೂರಾರು ವರ್ಷಗಳ ಬಳಿಕವೇ ಡಿಸೆಂಬರ್‌ 25ನ್ನು ಅವನ ಜನನ ತಾರೀಖಾಗಿ ಆರಿಸಲಾಯಿತು. ಏಕೆ? ಕ್ರಿಸ್‌ಮಸ್‌ ಕಾಲಾವಧಿಯಾಗಿ ಪರಿಣಮಿಸಿದ ಆ ವಾರ್ಷಿಕ ಸಮಯವು ನಿಜವಾಗಿ ವಿಧರ್ಮಿ ಹಬ್ಬಉತ್ಸವಗಳು ಆಚರಿಸಲ್ಪಟ್ಟಿದ್ದ ಒಂದು ಕಾಲಾವಧಿಯಾಗಿತ್ತು ಎಂದು ಹಲವಾರು ಇತಿಹಾಸಕಾರರು ನಂಬುತ್ತಾರೆ.

ಉದಾಹರಣೆಗಾಗಿ, ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕ ಹೇಳುವುದು: “ಈ ತಾರೀಖಿನ ಮೂಲದ ಕುರಿತು ಒಂದು ಪ್ರಖ್ಯಾತ ವರದಿಯು ಹೇಳುವುದೇನೆಂದರೆ, ಡಿಸೆಂಬರ್‌ 25 ನಿಜವಾಗಿಯೂ ಡೀಎಸ್‌ ಸೋಲೀಸ್‌ ಇನ್‌ವಿಂಕ್ಟೀ ನಾಟೀ ಹಬ್ಬದ (‘ಅಜೇಯ ಸೂರ್ಯದೇವನ ಜನ್ಮದಿನದ’) ‘ಕ್ರೈಸ್ತೀಕರಣ’ ಆಗಿತ್ತು. ರೋಮನ್‌ ಸಾಮ್ರಾಜ್ಯದಲ್ಲಿ ಸೂರ್ಯನ ಪುನರುದಯದ ಸೂಚಕವಾದ ಮಕರ ಸಂಕ್ರಾಂತಿಯನ್ನು ಒಂದು ಜನಪ್ರಿಯ ಹಬ್ಬದ ದಿನವಾಗಿ ಆಚರಿಸುತ್ತಿದ್ದರು. ಅದು ಚಳಿಗಾಲದ ಕೊನೆಯೂ ಬೇಸಗೆ ಮತ್ತು ವಸಂತಕಾಲದ ಆರಂಭವೂ ಆಗಿತ್ತು.”

ದ ಎನ್‌ಸೈಕ್ಲಪೀಡಿಯ ಅಮೆರಿಕಾನ ತಿಳಿಸುವುದು: “ಕ್ರಿಸ್‌ಮಸ್‌ ಹಬ್ಬ ಡಿಸೆಂಬರ್‌ 25ಕ್ಕೆ ಸ್ಥಾಪಿಸಲ್ಪಟ್ಟದ್ದರ ಕಾರಣವು ತುಸು ಅಸ್ಪಷ್ಟವಾಗಿದ್ದರೂ, ಹಗಲು ಉದ್ದವಾಗಲು ತೊಡಗುತ್ತಿದ್ದ ಮಕರ ಸಂಕ್ರಾಂತಿಯ ದಿನದ ಸಮಯದಲ್ಲಿ ಸೂರ್ಯನ ಪುನರುದಯವನ್ನು ಆಚರಿಸಲಿಕ್ಕಾಗಿ ನಡೆಯುತ್ತಿದ್ದ ವಿಧರ್ಮಿ ಹಬ್ಬಗಳಿಗೆ ಅನುರೂಪವಾಗಿ ಆ ತಾರೀಖನ್ನು ಆರಿಸಲಾಗಿತ್ತೆಂದು ಎಣಿಸಲಾಗಿದೆ. ಆಗ ‘ಸೂರ್ಯನ ಪುನರುದಯ’ವನ್ನು ಆಚರಿಸಲಿಕ್ಕಾಗಿ ಹಗಲು ಉದ್ದವಾಗಲು ತೊಡಗುತ್ತಿತ್ತು. . . . ರೋಮನ್‌ ಸ್ಯಾಟರ್ನೇಲಿಯ (ವ್ಯವಸಾಯ ದೇವನಾದ ಸ್ಯಾಟರ್ನ್‌ನಿಗೆ ಮತ್ತು ಸೂರ್ಯನ ನವೀಕೃತ ಶಕ್ತಿಗೆ ಅರ್ಪಿತವಾದ ಹಬ್ಬ) ಕೂಡ ಅದೇ ಸಮಯದಲ್ಲಿ ಆಚರಿಸಲ್ಪಡುತ್ತಿತ್ತು.” ಅಂಥ ಹಬ್ಬಗಳಲ್ಲಿ ಭಾಗವಹಿಸುವವರು ಲೈಂಗಿಕ ಅನೈತಿಕತೆ, ಸ್ವೇಚ್ಛಾಚಾರ ಮತ್ತು ಅಂಕೆಮೀರಿದ ಗೌಜುಗದ್ದಲದಿಂದ ಮಜಾಮಾಡುತ್ತಿದ್ದರು. ಅಂಥ ವರ್ತನೆಗಳು ಅನೇಕ ಕ್ರಿಸ್‌ಮಸ್‌ ಆಚರಣೆಗಳಲ್ಲಿ ಇಂದು ಸಹ ತೋರಿಬರುವುದು ಗಮನಾರ್ಹ.

ಕ್ರಿಸ್ತನನ್ನು ಗೌರವಿಸುವ ವಿಧ

ಯೇಸುವಿನ ಜನನದ ನಿಖರವಾದ ತಾರೀಖು ಯಾವುದೇ ಆಗಿರಲಿ ಕ್ರೈಸ್ತರು ಅದನ್ನು ಆಚರಿಸಲೇಬೇಕೆಂದು ಅನೇಕರು ನೆನಸುತ್ತಾರೆ. ಅಂಥ ಆಚರಣೆಯು ಗೌರವಪೂರ್ವಕವಾಗಿ ಆಚರಿಸಲ್ಪಟ್ಟಲ್ಲಿ ಕ್ರಿಸ್ತನನ್ನು ಸೂಕ್ತವಾಗಿ ಗೌರವಿಸುವಂಥ ವಿಧ ಅದು ಎಂದು ಅವರ ಅನಿಸಿಕೆ.

ಬೈಬಲ್‌ ವೃತ್ತಾಂತದಲ್ಲಿ ಕ್ರಿಸ್ತ ಜನನವು ಒಂದು ಮಹತ್ತಾದ ಘಟನೆ. ಯೇಸು ಹುಟ್ಟಿದಾಗ ದೇವದೂತರ ಗಣವು ಫಕ್ಕನೆ ಗೋಚರಿಸುತ್ತಾ “ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ” ಎಂದು ಸಂತಸದ ಸ್ತುತಿಗಾನ ಹಾಡಿದರು. (ಲೂಕ 2:13, 14) ಆದರೂ ಬೈಬಲ್‌ನಲ್ಲಿ ಎಲ್ಲಿಯೂ ಯೇಸುವಿನ ಜನನವನ್ನು ಆಚರಿಸಬೇಕೆಂಬದಕ್ಕೆ ಯಾವ ಸುಳಿವೂ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಯೇಸುವಿನ ಮರಣದ ದಿನವನ್ನು ಆಚರಿಸಬೇಕೆಂಬ ನಿರ್ದಿಷ್ಟ ಆಜ್ಞೆ ಬೈಬಲಿನಲ್ಲಿದೆ. ಅದನ್ನು ಯೆಹೋವನ ಸಾಕ್ಷಿಗಳು ವರ್ಷಕ್ಕೊಮ್ಮೆ ಆಚರಿಸುತ್ತಾರೆ. (ಲೂಕ 22:19) ಯೇಸುವನ್ನು ಗೌರವಿಸುವ ಒಂದು ವಿಧ ಇದೇ ಆಗಿದೆ.

ತನ್ನ ಮಾನವ ಜೀವನದ ಕೊನೆರಾತ್ರಿಯಂದು ಯೇಸು ಹೇಳಿದ್ದು: “ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು.” (ಯೋಹಾನ 15:14) ಅವನು ಹೀಗೂ ಅಂದನು: “ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ.” (ಯೋಹಾನ 14:15) ನಿಶ್ಚಯವಾಗಿಯೂ ಯೇಸು ಕ್ರಿಸ್ತನ ಕುರಿತು ಕಲಿತು ಅವನ ಬೋಧನೆಗಳನ್ನು ಪಾಲಿಸುವ ಮೂಲಕ ಆತನನ್ನು ಗೌರವಿಸುವುದಕ್ಕಿಂತ ಉತ್ತಮವಾದ ವಿಧ ಬೇರೊಂದಿಲ್ಲ. (g 12/08)

ನೀವೇನು ಹೇಳುತ್ತೀರಿ?

◼ ಯೇಸು ಡಿಸೆಂಬರ್‌ನಲ್ಲಿ ಹುಟ್ಚಿರಲಿಲ್ಲವೇಕೆ?​—⁠ಲೂಕ 2:1-8.

◼ ಜನನ ದಿನಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ದಿನ ಯಾವುದು?​—⁠ಪ್ರಸಂಗಿ 7:1.

◼ ಯೇಸುವನ್ನು ಗೌರವಿಸುವ ಅತ್ಯುತ್ತಮ ವಿಧ ಯಾವುದು?​—⁠ಯೋಹಾನ 14:15.

[ಪುಟ 20ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೇಸು ಡಿಸೆಂಬರ್‌ನಲ್ಲಿ ಹುಟ್ಟಲಿಲ್ಲ ಎಂಬುದಕ್ಕೆ ಬೈಬಲ್‌ ಪುರಾವೆಯನ್ನು ಒದಗಿಸುತ್ತದೆ