ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಟ್ಟಡಕ್ಕೆ ಹಕ್ಕಿ ಡಿಕ್ಕಿಹೊಡೆಯುವಾಗ

ಕಟ್ಟಡಕ್ಕೆ ಹಕ್ಕಿ ಡಿಕ್ಕಿಹೊಡೆಯುವಾಗ

ಕಟ್ಟಡಕ್ಕೆ ಹಕ್ಕಿ ಡಿಕ್ಕಿಹೊಡೆಯುವಾಗ

ಹಗಲು ಹೊತ್ತಿನ ಸಮಯವದು. ಮರಕುಟಿಗ ಪಕ್ಷಿಯೊಂದು ರಭಸದಿಂದ ಬಿರ್ರನೆ ಹಾರಿಬಂದು ಗಗನಚುಂಬಿ ಕಟ್ಟಡಕ್ಕೆ ಡಿಕ್ಕಿಹೊಡೆದು ಏಕಾಏಕಿ ನೆಲಕ್ಕೆ ಕುಸಿದುಬಿತ್ತು. ಪಕ್ಷಿಗೆ ಆ ಕಟ್ಟಡದ ಥಳಥಳ ಹೊಳೆಯುವ ಗಾಜಿನ ಗೋಡೆ ಕಾಣಿಸಿರಲಿಲ್ಲ. ಆಘಾತದಿಂದ ಕಕ್ಕಾಬಿಕ್ಕಿಯಾದ ಪಕ್ಷಿ ಚೇತರಿಸುತ್ತದೋ ಎಂದು ದಯಾಮಯಿ ಪಾದಚಾರಿಯೊಬ್ಬನು ನೋಡುತ್ತಾ ನಿಂತ. ಅವನೆಣಿಸಿದಂತೆಯೇ ಆ ಮರಕುಟಿಗ ಪಕ್ಷಿ ಥಟ್ಟನೆ ಎದ್ದು ಕಿಚ್‌ ಕಿಚ್‌ ಎಂದು ಕಿರುಚುತ್ತಾ ಗರಿಕೂದಲನ್ನು ಕೆದರಿಕೊಂಡು ಹಾರಿಹೋಯಿತು. *

ಅಂಥ ಅಪ್ಪಳಿಸುವಿಕೆಗಳ ಆಘಾತದಿಂದ ಬದುಕಿ ಉಳಿಯುವ ಪಕ್ಷಿಗಳ ಸಂಖ್ಯೆ ಕಡಿಮೆ ಎಂಬುದು ವಿಷಾದಕರ. ವಾಸ್ತವದಲ್ಲಿ ಮನೆಗಳಿಗೆ ನೇರವಾಗಿ ಡಿಕ್ಕಿಹೊಡೆಯುವ ಪಕ್ಷಿಗಳಲ್ಲಿ ಅರ್ಧಕರ್ಧ ಸತ್ತುಹೋಗುತ್ತವೆ. ಅಧ್ಯಯನಗಳು ಸೂಚಿಸುವಂತೆ, ಅಮೆರಿಕ ಒಂದರಲ್ಲಿಯೇ ವರ್ಷಕ್ಕೆ 1 ಕೋಟಿಗಿಂತಲೂ ಹೆಚ್ಚು ಪಕ್ಷಿಗಳು ವಿವಿಧ ರೀತಿಯ ಕಟ್ಟಡಗಳಿಗೆ ಅಪ್ಪಳಿಸಿ ಸಾಯುತ್ತವೆಂದು ಆ್ಯಡ್ಯುಬನ್‌ ಸೊಸೈಟಿ ತಿಳಿಸುತ್ತದೆ. ಆ ಸಂಖ್ಯೆಯು 100 ಕೋಟಿಯನ್ನು ತಲಪಬಹುದೆಂದು ಇನ್ನು ಕೆಲವು ಸಂಶೋಧಕರ ನಂಬಿಕೆ! ಹೀಗಿರಲಾಗಿ ಪಕ್ಷಿಗಳು ಕಟ್ಟಡಗಳಿಗೆ ನೇರವಾಗಿ ಹಾರುವುದಾದರೂ ಯಾಕೆ? ಅಂಥ ಪಕ್ಷಿಗಳ ಸುರಕ್ಷೆಗಾಗಿ ನಾವೇನಾದರೂ ಮಾಡಸಾಧ್ಯವೊ?

ಹಂತಕ ಗಾಜು ಮತ್ತು ಬೆಳಕು

ಪಕ್ಷಿಗಳಿಗೆ ಗಾಜು ಅಪಾಯಕರ. ಕಿಟಕಿಗಳು ಸ್ವಚ್ಛವಾಗಿ ಪಳಪಳನೆ ಹೊಳೆಯುತ್ತಿರುವಾಗ ಪಕ್ಷಿಗಳ ಕಣ್ಣಿಗೆ ಬೀಳುವುದು ಅದರೊಳಗಿಂದ ಕಾಣುವ ಇನ್ನೊಂದು ಬದಿಯ ಆಕಾಶ ಮತ್ತು ಮರಗಿಡಗಳು ಮಾತ್ರ. ಆಗ ಹಿಂದೆಮುಂದೆ ಯೋಚಿಸದೆ ಪಕ್ಷಿಗಳು ರಭಸದಿಂದ ನೇರವಾಗಿ ಗಾಜಿಗೆದುರಾಗಿ ಹಾರುತ್ತವೆ. ಅಲ್ಲದೆ, ಗಾಜಿನ ಮೊಗಸಾಲೆ ಅಥವಾ ಮನೆಯ ಒಳಗೆ ಇರುವ ಅಲಂಕಾರಿಕ ಸಸ್ಯಗಳನ್ನು ಕಂಡು ಅವುಗಳ ಮೇಲೆ ಎರಗಲು ಪ್ರಯತ್ನಿಸಬಹುದು.

ಲೇಪಿತ ಪ್ರತಿಫಲಕ ಗಾಜು ಸಹ ಅಪಾಯಕರ. ಕೆಲವು ಸಂದರ್ಭಗಳಲ್ಲಿ ಪಕ್ಷಿಗಳು ಗಾಜನ್ನು ನೋಡುವುದಿಲ್ಲ. ಅದರಲ್ಲಿ ಪ್ರತಿಬಿಂಬಿಸುವ ಸುತ್ತಣ ಕ್ಷೇತ್ರ ಅಥವಾ ಆಕಾಶವನ್ನು ಕಾಣುತ್ತವೆ. ಇಲ್ಲಿ ಪುನಃ ಆಘಾತಕ್ಕೆ ಆಸ್ಪದವಿದೆ. ಪಕ್ಷಿಧಾಮ ಮತ್ತು ಅಭಯಾರಣ್ಯದಲ್ಲಿರುವ ಸಂದರ್ಶಕರ ಕೇಂದ್ರಗಳ ಹಾಗೂ ವೀಕ್ಷಣಾಲಯಗಳ ಗಾಜುಗಳಿಂದಲೂ ಪಕ್ಷಿಗಳು ಸಾವಿಗೆ ತುತ್ತಾಗುತ್ತವೆ! ಪಕ್ಷಿವಿಜ್ಞಾನಿಯೂ ಜೀವಶಾಸ್ತ್ರದ ಪ್ರಾಧ್ಯಾಪಕರೂ ಆಗಿರುವ ಡಾ. ಡ್ಯಾನಿಯೆಲ್‌ ಕ್ಲೆಮ್‌ ಜೂನಿಯರ್‌ ನೆನಸುವುದೇನೆಂದರೆ ಮನುಷ್ಯನ ಚಟುವಟಿಕೆಗೆ ಸಂಬಂಧಿಸಿದ ಬೇರೆ ಯಾವುದೇ ಕಾರಣಕ್ಕಿಂತ ಪಕ್ಷಿಗಳು ಹೆಚ್ಚು ಸಾಯುವುದು ಕಿಟಕಿಗಳಿಗೆ ನೇರವಾಗಿ ಡಿಕ್ಕಿಹೊಡೆಯುವ ಮೂಲಕವೇ. ಇರುನೆಲೆಯ ನಾಶನದಿಂದಲೂ ಹೆಚ್ಚು ಪಕ್ಷಿಗಳು ಸಾಯುವ ಸಂದರ್ಭಗಳಿರಬಹುದು.

ಕೆಲವು ಪಕ್ಷಿಗಳು ಸುಲಭವಾಗಿ ಅಪ್ಪಳಿಕೆಗೆ ಗುರಿಯಾಗುತ್ತವೆ. ಉದಾಹರಣೆಗೆ, ಹೆಚ್ಚಿನ ವಲಸೆಗಾರ ಹಾಡುಹಕ್ಕಿಗಳು ತಮ್ಮ ನಿವಾಸಸ್ಥಾನಕ್ಕೆ ರಾತ್ರಿವೇಳೆ ಸಂಚರಿಸುತ್ತವೆ. ಅವು ತಮ್ಮ ದಿಕ್ಕನ್ನು ಕಂಡುಹಿಡಿಯಲು ಸ್ವಲ್ಪಮಟ್ಟಿಗೆ ನಕ್ಷತ್ರಗಳ ಮೇಲೆ ಅವಲಂಬಿಸಿರುವ ಕಾರಣ ಎತ್ತರವಾದ ಕಟ್ಟಡಗಳ ಕಣ್ಣು ಕೋರೈಸುವ ಬೆಳಕಿನಿಂದಾಗಿ ಗಲಿಬಿಲಿಗೊಂಡು ದಾರಿತಪ್ಪಬಹುದು. ಕೆಲವು ಪಕ್ಷಿಗಳಾದರೋ ಎಷ್ಟು ಕಕ್ಕಾಬಿಕ್ಕಿಯಾಗುತ್ತವೆಂದರೆ ಆಯಾಸದಿಂದ ಕುಸಿದುಬೀಳುವ ತನಕ ಗೊತ್ತುಗುರಿಯಿಲ್ಲದೆ ಸುತ್ತುಸುತ್ತಾಗಿ ಹಾರಾಡುತ್ತಿರುತ್ತವೆ. ಇನ್ನೊಂದು ಅಪಾಯಕರ ಸಂದರ್ಭ ಯಾವುದೆಂದರೆ ಮಳೆಸುರಿಯುವ ರಾತ್ರಿಯಲ್ಲಿ ಅಥವಾ ಕಾರ್ಮೋಡಗಳು ತುಂಬಿರುವಾಗ. ಆಗ ಪಕ್ಷಿಗಳು ಕಡಿಮೆ ಎತ್ತರದಲ್ಲಿ ಹಾರುವುದರಿಂದ ಎತ್ತರವಾದ ಕಟ್ಟಡಗಳಿಗೆ ಅಪ್ಪಳಿಸುವ ಹೆಚ್ಚಿನ ಸಂಭಾವ್ಯತೆಗಳಿವೆ.

ಪಕ್ಷಿವರ್ಗದ ಮೇಲೆ ಪರಿಣಾಮ

ಒಂದು ವರದಿಗನುಸಾರ, ಪಕ್ಷಿಗಳು ವಲಸೆ ಹೋಗುವ ಕಾಲದಲ್ಲಿ ಅಮೆರಿಕದ ಇಲ್ಲಿನೋಯ್‌ನ ಶಿಕಾಗೊದ ಕೇವಲ ಒಂದು ಗಗನಚುಂಬಿ ಕಟ್ಟಡವು ಸುಮಾರು 1,480 ಹಕ್ಕಿಗಳ ಜ್ಞಾತ ಸಾವಿಗೆ ಕಾರಣವಾಯಿತು. ಆ ಕಟ್ಟಡವು 14 ಅನುಕ್ರಮ ವರ್ಷಗಳ ಕಾಲಾವಧಿಯಲ್ಲಿ ಸುಮಾರು 20,700 ಪಕ್ಷಿಗಳ ಹತ್ಯೆಗೆ ಕಾರಣವಾಯಿತು. ಹೀಗೆ ಅನೇಕ ಕಟ್ಟಡಗಳಿಗೆ ಡಿಕ್ಕಿಹೊಡೆದು ಸಾವಿಗೀಡಾದ ಪಕ್ಷಿಗಳ ಒಟ್ಟು ಸಂಖ್ಯೆ ಅದಕ್ಕಿಂತಲೂ ಹೆಚ್ಚು ಎಂಬುದು ನಿಸ್ಸಂಶಯ. ಅದಲ್ಲದೆ ಸತ್ತ ಈ ಪಕ್ಷಿಗಳು “ಪಾರಿವಾಳ, ಕಡಲಹಕ್ಕಿ, ಹೆಬ್ಬಾತುಗಳಾಗಲಿ ಅಲ್ಲ, ಅಳಿವಿನ ಅಂಚಿನಲ್ಲಿರುವ ಹಕ್ಕಿಗಳೇ” ಎನ್ನುತ್ತಾರೆ ಕೆನಡದಲ್ಲಿನ ಟೊರಂಟೊದ ‘ಫೇಟಲ್‌ ಲೈಟ್‌ ಅವೇರ್‌ನಿಸ್‌ ಪ್ರೋಗ್ರ್ಯಾಮ್‌’ನ ನಿರ್ದೇಶಕರಾದ ಮೈಕಲ್‌ ಮಶ್ಶೂರ್‌.

ಉದಾಹರಣೆಗೆ, ಇತ್ತೀಚಿನ ವರ್ಷವೊಂದರಲ್ಲಿ ಆಸ್ಟ್ರೇಲಿಯದ ಗಾಜಿನ ಕಟ್ಟಡಗಳು ಅಳಿವಂಚಿನಲ್ಲಿರುವ ಕೇವಲ 2,000 ಸ್ವಿಫ್ಟ್‌ ಗಿಳಿಗಳಲ್ಲಿ ಸುಮಾರು 30ನ್ನು ಕೊಂದುಹಾಕಿವೆ. ಅಮೆರಿಕದಲ್ಲಿ, ಈಗ ಅಳಿದಿರುವ ಬೆಕ್‌ಮನ್‌ ಬೆಳವಕ್ಕಿಯ ಅನೇಕ ಮ್ಯೂಸಿಯಂ ನಮೂನೆಗಳು, ಫ್ಲೋರಿಡದ ಒಂದು ನಿರ್ದಿಷ್ಟ ಲೈಟ್‌ಹೌಸ್‌ಗೆ ಡಿಕ್ಕಿಹೊಡೆದು ಸತ್ತ ಪಕ್ಷಿಗಳದ್ದಾಗಿವೆ.

ಕಟ್ಟಡಗಳಿಗೆ ಅಪ್ಪಳಿಸಿ ಬದುಕುಳಿಯುವ ಪಕ್ಷಿಗಳಲ್ಲಿ ಹೆಚ್ಚಿನವು ಒಂದೇ ಗಾಯಗೊಂಡಿರುತ್ತವೆ ಇಲ್ಲವೆ ದುರ್ಬಲಗೊಂಡಿರುತ್ತವೆ. ಇದು ವಲಸೆಹೋಗುವ ಪಕ್ಷಿಗಳಿಗೆ ವಿಶೇಷವಾಗಿ ಅಪಾಯಕರ. ಅವುಗಳು ಗಾಯಗೊಂಡು ಕಟ್ಟಡಗಳ ಆವರಣದಲ್ಲಿ ಬಿದ್ದುಬಿಟ್ಟಲ್ಲಿ ಹೊಟ್ಟೆಗಿಲ್ಲದೆ ಸಾಯಬಹುದು ಇಲ್ಲವೆ ಬೇರೆ ಪ್ರಾಣಿಗಳ ಬಾಯಿಗೆ ತುತ್ತಾಗಬಹುದು. ಇಂಥ ಅಪರೂಪದ ಬೇಟೆಯನ್ನು ಕಬಳಿಸುವುದು ಹೇಗೆಂದು ಕೆಲವು ಪ್ರಾಣಿಗಳಿಗೆ ಗೊತ್ತು.

ಕಟ್ಟಡಗಳನ್ನು ಸುರಕ್ಷಿತಮಾಡುವ ವಿಧ

ಪಕ್ಷಿಗಳು ನೇರವಾಗಿ ಗಾಜಿನೆಡೆಗೆ ಹಾರದಂತೆ ತಪ್ಪಿಸಲು ಗಾಜು ಅವುಗಳ ಕಣ್ಣಿಗೆ ಬೀಳಬೇಕು ಮತ್ತು ಅದೊಂದು ಗಟ್ಟಿ ಮೈಯುಳ್ಳ ವಸ್ತು ಎಂದು ಅವುಗಳಿಗೆ ತಿಳಿಯಬೇಕು. ಆದುದರಿಂದ ಕೆಲವು ಮಾಲೀಕರು ಪಕ್ಷಿಹೊಡೆತಕ್ಕೆ ಗುರಿಯಾಗುವ ಕಿಟಕಿಗಳ ಹೊರಗೆ ಅಥವಾ ಗಾಜಿಗೆ ಚಿತ್ರಗಳನ್ನು, ಸ್ಟಿಕರ್ಸ್‌ ಅಥವಾ ಸುಲಭ ಗೋಚರ ವಸ್ತುಗಳನ್ನು ಅಂಟಿಸಿದ್ದಾರೆ. ಈ ಮೂಲಕ ತಾವು ನಿಸರ್ಗದ ಸೌಂದರ್ಯವನ್ನು ನೋಡಿ ಸವಿಯುವ ಸಂದರ್ಭವನ್ನು ಬಿಟ್ಟುಕೊಟ್ಟಿದ್ದಾರೆ. ಕ್ಲೆಮ್‌ರವರಿಗನುಸಾರ, ಚಿತ್ರಗಳು ಅಥವಾ ಸ್ಟಿಕರ್ಸ್‌ ಅಂಟಿಸುವುದಷ್ಟೇ ಅಲ್ಲ ಅವುಗಳನ್ನು ನಿರ್ದಿಷ್ಟ ಅಂತರದಲ್ಲಿ ಅಂಟಿಸುವುದೂ ಪ್ರಾಮುಖ್ಯ. ದೃಷ್ಟಿಗೋಚರ ಚಿತ್ರಗಳ ನಡುವಿನ ಅಂತರ, ಅಡ್ಡಲಾಗಿ 5 ಸೆಂ.ಮೀ. ಮತ್ತು ಲಂಬವಾಗಿ 10 ಸೆಂ.ಮೀ.ಗಿಂತ ಹೆಚ್ಚಿರಬಾರದು.

ರಾತ್ರಿಯಲ್ಲಿ ವಲಸೆಹೋಗುವ ಪಕ್ಷಿಗಳ ಸುರಕ್ಷೆಗಾಗಿ ಏನು ಮಾಡಸಾಧ್ಯವಿದೆ? “ರಾತ್ರಿಯಲ್ಲಿ ಪಕ್ಷಿಗಳು ಕಟ್ಟಡಗಳಿಗೆ ಅಪ್ಪಳಿಸುವುದನ್ನು ಬಹಳ ಮಟ್ಟಿಗೆ ತಡೆಯುವ ವಿಧಾನ ಲೈಟ್‌ಗಳನ್ನು ಆಫ್‌ ಮಾಡಿಡುವ ಮೂಲಕವೇ” ಎಂದು ಪಕ್ಷಿವಿಜ್ಞಾನ ಸಂಶೋಧನೆಯ ಸಮಾಲೋಚಕರಾದ ಲೆಸ್ಲೀ ಜೆ. ಇವಾನ್ಸ್‌ ಆಗ್‌ಡನ್‌ ಹೇಳುತ್ತಾರೆ. ಕೆಲವು ನಗರಗಳಲ್ಲಿ ಗಗನಚುಂಬಿಗಳ ಮೇಲಿರುವ ಅಲಂಕಾರಿಕ ವಿದ್ಯುತ್‌ ದೀಪಗಳನ್ನು ವಿಶೇಷವಾಗಿ ಪಕ್ಷಿಗಳು ವಲಸೆಹೋಗುವ ರಾತ್ರಿಯ ನಿರ್ದಿಷ್ಟ ತಾಸುಗಳಲ್ಲಿ ಮಂದವಾಗಿಸುತ್ತಾರೆ ಇಲ್ಲವೆ ಆರಿಸುತ್ತಾರೆ. ಬೇರೆ ಸಂದರ್ಭಗಳಲ್ಲಿ ಎತ್ತರವಾದ ಕಟ್ಟಡಗಳ ಕಿಟಕಿಗಳ ಮೇಲೆ ಪರದೆಗಳನ್ನು ಎಳೆದಿರುತ್ತಾರೆ. ಈ ಮೂಲಕ ಪ್ರತಿಬಿಂಬಗಳನ್ನು ಪಕ್ಷಿಗಳು ತಪ್ಪರ್ಥಮಾಡಿಕೊಳ್ಳವು.

ಇಂಥ ಮುಂಜಾಗ್ರತೆಗಳು ಪಕ್ಷಿಗಳ ಸಾವನ್ನು 80 ಪ್ರತಿಶತದಷ್ಟು ಕಡಿಮೆಗೊಳಿಸಿ ವಾರ್ಷಿಕವಾಗಿ ಲಕ್ಷಾಂತರ ಪಕ್ಷಿಗಳನ್ನು ರಕ್ಷಿಸುತ್ತವೆ. ಆದರೆ ಮೂಲ ಸಮಸ್ಯೆಯನ್ನು ಹೋಗಲಾಡಿಸುವುದು ಕಷ್ಟ. ಏಕೆಂದರೆ ಜನರಿಗೆ ವಿದ್ಯುತ್‌ ದೀಪ, ಗಾಜುಗಳೆಂದರೆ ಬಲು ಇಷ್ಟ. ಆದ್ದರಿಂದ ಪಕ್ಷಿ ಸುರಕ್ಷೆಗೆ ಮೀಸಲಾದ ಆ್ಯಡ್ಯುಬನ್‌ನಂಥ ನಿಗಮಗಳು ಕಟ್ಟಡದ ವಿನ್ಯಾಸಕರಿಗೆ ಮತ್ತು ಕಟ್ಟುವವರಿಗೆ ನಿಸರ್ಗದ ಅಗತ್ಯಗಳಿಗೆ ಹೆಚ್ಚು ಸೂಕ್ಷ್ಮಗ್ರಾಹಿಗಳಾಗುವಂತೆ ಪ್ರೇರೇಪಣೆ ನೀಡುತ್ತಿವೆ. (g 2/09)

[ಪಾದಟಿಪ್ಪಣಿ]

^ ಗಾಯಗೊಂಡ ಪಕ್ಷಿಗಳ ನಿರ್ವಹಣೆ ಬಲುಕಷ್ಟ. ಯಾಕೆಂದರೆ ನೀವು ಅವಕ್ಕೆ ನೆರವಾಗ ಬಯಸುತ್ತೀರೆಂದು ಅವುಗಳಿಗೆ ತಿಳಿಯದು. ಅಲ್ಲದೆ, ಕೆಲವು ಪಕ್ಷಿಗಳು ಮನುಷ್ಯರಿಗೆ ರೋಗಗಳನ್ನು ಹರಡಿಸಬಲ್ಲವು. ಆದ್ದರಿಂದ ಗಾಯಗೊಂಡ ಪಕ್ಷಿಯನ್ನು ನೀವು ಉಪಚರಿಸ ಬಯಸುವುದಾದರೆ ಕೈಗವಸನ್ನು ಧರಿಸಿರಿ, ಕೊನೆಗೆ ಕೈತೊಳೆದುಕೊಳ್ಳಿ. ನಿಮ್ಮ ಆರೋಗ್ಯ ಮತ್ತು ಸುರಕ್ಷೆಯ ಕುರಿತು ನೀವು ಚಿಂತಿಸುವಲ್ಲಿ ಆ ಪಕ್ಷಿಯ ಸಮೀಪ ಹೋಗಬೇಡಿ. ಸಂದರ್ಭ ಅಗತ್ಯಪಡಿಸಿದಲ್ಲಿ ಪಕ್ಷಿವೈದ್ಯರ ಸಹಾಯವನ್ನು ಕೋರಿ.

[ಪುಟ 30ರಲ್ಲಿರುವ ಚೌಕ]

ಪಕ್ಷಿಗಳೆಲ್ಲಾ ಹೋಗಿವೆ ಎಲ್ಲಿ?

ಅಮೆರಿಕದಲ್ಲಿ ವರ್ಷಕ್ಕೆ ಎಷ್ಟು ಪಕ್ಷಿಗಳು ಮನುಷ್ಯನಿಂದಾಗಿ ಸಾಯುತ್ತಿವೆ ಎಂದು ಸೂಚಿಸುವ ಅಂದಾಜು ಪಟ್ಟಿ:

◼ ಸಂಪರ್ಕ ಮಾಧ್ಯಮದ ಎತ್ತರ ಗೋಪುರಗಳಿಂದಾಗಿ—4 ಕೋಟಿ

◼ ಕೀಟನಾಶಕಗಳಿಂದ—7 ಕೋಟಿ 40 ಲಕ್ಷ

◼ ಬೆಕ್ಕುಗಳಿಗೆ ತುತ್ತಾಗಿ—36 ಕೋಟಿ 50 ಲಕ್ಷ

◼ ಗಾಜಿನ ಕಿಟಕಿಗಳಿಗೆ ಅಪ್ಪಳಿಸಿ—10 ಕೋಟಿ-100 ಕೋಟಿ

◼ ಇರುನೆಲೆಯ ನಾಶನ—ಸಂಖ್ಯೆ ತಿಳಿದಿಲ್ಲ, ಆದರೂ ಇದೇ ದೊಡ್ಡ ಕಾರಣ.

[ಪುಟ 30ರಲ್ಲಿರುವ ಚಿತ್ರ]

ಅಮೆರಿಕದಲ್ಲಿ ಪ್ರತಿವರ್ಷ ಕನಿಷ್ಠಪಕ್ಷ ಒಂದು ಕೋಟಿ ಹಕ್ಕಿಗಳು ಕಿಟಕಿಗಳಿಗೆ ಅಪ್ಪಳಿಸಿ ಸಾವನ್ನಪ್ಪುತ್ತವೆ

[ಕೃಪೆ]

© Reimar Gaertner/age fotostock