ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಡಿಸ್‌ಲೆಕ್ಸಿಯಾ ನನ್ನನ್ನು ಹಿಮ್ಮೆಟ್ಟಿಸಲಿಲ್ಲ

ಡಿಸ್‌ಲೆಕ್ಸಿಯಾ ನನ್ನನ್ನು ಹಿಮ್ಮೆಟ್ಟಿಸಲಿಲ್ಲ

ಡಿಸ್‌ಲೆಕ್ಸಿಯಾ ನನ್ನನ್ನು ಹಿಮ್ಮೆಟ್ಟಿಸಲಿಲ್ಲ

ಮೈಕಲ್‌ ಹೆನ್‌ಬಾಗ್‌ ಅವರು ಹೇಳಿದಂತೆ

ಕಲಿಕೆಯ ವಿಕಲತೆಯಾದ ಡಿಸ್‌ಲೆಕ್ಸಿಯಾ ನನಗಿದೆ. ಇದು ನನ್ನ ತಂದೆತಾಯಿ ಮತ್ತು ಮೂವರು ತಮ್ಮಂದಿರಿಗೂ ಇದೆ. ಇದರಿಂದ ನನ್ನ ಮಾತೃಭಾಷೆ ಡ್ಯಾನಿಷ್‌ ಓದಲು ಕಷ್ಟ. ಶಾಲೆಯಲ್ಲಿ ಕೂಡ ತುಂಬಾ ಹೆಣಗಾಡಬೇಕಾಯಿತು. ಆದರೂ ನನಗೆ ಹೆಚ್ಚಿನ ಸಹಾಯ ಮತ್ತು ಪ್ರೋತ್ಸಾಹ ದೊರಕಿದೆ. ವಿಶೇಷವಾಗಿ ನನ್ನ ಕುಟುಂಬದವರಿಂದ.

ನಾವು ನಾಲ್ಕು ತಲೆಮಾರುಗಳಿಂದ ಯೆಹೋವನ ಸಾಕ್ಷಿಗಳು. ಓದುವುದು, ವಿಶೇಷವಾಗಿ ಬೈಬಲ್‌ ಮತ್ತು ಬೈಬಲ್‌ ಅಧ್ಯಯನದ ಸಹಾಯಕ ಪುಸ್ತಕಗಳನ್ನು ಓದುವುದು ನಮ್ಮ ಜೀವನದ ಮಹತ್ವದ ಭಾಗ. ನಾನು ಮತ್ತು ನನ್ನ ತಮ್ಮ ಫ್ಲೆಮ್ಮಿಂಗ್‌ ತಂದೆಯೊಂದಿಗೆ ಕ್ರಮವಾಗಿ ಕ್ರೈಸ್ತ ಶುಶ್ರೂಷೆಗೆ ಸಹ ಹೋಗುತ್ತಿದ್ದೆವು. ಇದು ನಮ್ಮಲ್ಲಿ ಬೈಬಲ್‌ ವಾಚನ ಮತ್ತು ಬರವಣಿಗೆಯ ಮಹತ್ವವನ್ನು ಇನ್ನೂ ಹೆಚ್ಚಾಗಿ ಅಚ್ಚೊತ್ತಿತು.

ಕಾವಲಿನಬುರುಜು ಮತ್ತು ಎಚ್ಚರ!ದ ಪ್ರತಿ ಸಂಚಿಕೆಗಳನ್ನು ನಾನು ಬಾಲ್ಯದಿಂದಲೇ ಓದುತ್ತಿದ್ದೆ. ಒಂದು ಪತ್ರಿಕೆಯನ್ನು ಓದಲು ನನಗೆ 15 ತಾಸು ಹಿಡಿಯುತ್ತಿತ್ತು! ಅದಲ್ಲದೆ ಇಡೀ ಬೈಬಲನ್ನೂ ಓದಲು ಪ್ರಾರಂಭಿಸಿದೆ. ಭೂಸುತ್ತಲೂ ಇರುವ ಯೆಹೋವನ ಸಾಕ್ಷಿಗಳ ಸಭೆಯಲ್ಲಿ ನಡೆಸಲಾಗುವ ದೇವಪ್ರಭುತ್ವಾತ್ಮಕ ಶಾಲೆಗೆ ಸೇರಿದೆ. ಚೆನ್ನಾಗಿ ಓದಲು, ಮಾತಾಡಲು ಮತ್ತು ಸಭಿಕರ ಮುಂದೆ ಭಾಷಣ ಕೊಡಲು ಈ ಶಾಲೆಯು ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತದೆ. ಡಿಸ್‌ಲೆಕ್ಸಿಯಾದೊಂದಿಗೆ ನನ್ನ ಹೋರಾಟದಲ್ಲಿ ಇವೆಲ್ಲವೂ ನನಗೆ ಅಪಾರ ಸಹಾಯವನ್ನು ಮಾಡಿವೆ. ಆದರೂ ಮುಂದಕ್ಕೆ ಇನ್ನೂ ಹೆಚ್ಚು ಸವಾಲುಗಳನ್ನು ಎದುರಿಸಲಿಕ್ಕಿತ್ತು ಎಂದು ನನಗೆ ಗೊತ್ತಿರಲಿಲ್ಲ. ನಾನದನ್ನು ವಿವರಿಸುತ್ತೇನೆ ಕೇಳಿ.

ಇಂಗ್ಲಿಷ್‌ ಕಲಿಕೆ

1988ರಲ್ಲಿ ಪಯನೀಯರ್‌ ಸೇವೆ ಎಂದರೆ ಸುವಾರ್ತೆಯ ಪೂರ್ಣಸಮಯದ ಶುಶ್ರೂಷಕ ಸೇವೆಯನ್ನು ಆರಂಭಿಸಿದೆ. ನನಗಾಗ 24 ವರ್ಷ. ಡೆನ್ಮಾರ್ಕ್‌ನಲ್ಲಿ ಅನೇಕ ವಲಸೆಗಾರರು ಇರುವುದರಿಂದ ಬೈಬಲ್‌ ಸತ್ಯವನ್ನು ಅವರೊಂದಿಗೆ ಹಂಚಿಕೊಳ್ಳಲು ಬಯಸಿದೆ. ಅದನ್ನು ಪರಿಣಾಮಕಾರಿಯಾಗಿ ಮಾಡಲು ನನಗೆ ಇಂಗ್ಲಿಷ್‌ ಕಲಿಯಬೇಕಾಯಿತು. ಈ ಕೆಲಸವು ನನಗೆ ಅತೀ ಕಷ್ಟಕರವಾಗಿತ್ತು. ಆದರೂ ಎಡೆಬಿಡದ ಪ್ರಯತ್ನ ಮತ್ತು ಟ್ಯೂಷನ್ಸ್‌ ಮೂಲಕ ನಾನು ನಿಧಾನವಾಗಿ ಪ್ರಗತಿಮಾಡಿದೆ. ಸ್ವಲ್ಪ ಸಮಯದೊಳಗೆ ಇಂಗ್ಲಿಷ್‌ ಭಾಷೆಯ ವಿದೇಶಿಯರೊಂದಿಗೆ ನನ್ನ ಸ್ವದೇಶವಾದ ಕೂಪನ್‌ಹೇಗನ್‌ನಲ್ಲಿ ದೇವರ ರಾಜ್ಯದ ಸುವಾರ್ತೆಯನ್ನು ಹಂಚಲು ಶಕ್ತನಾದೆ. ನಾನು ಆ ಭಾಷೆ ಮಾತಾಡುವಾಗ ಅನೇಕ ತಪ್ಪುಗಳನ್ನು ಮಾಡುತ್ತಿದ್ದೆ ನಿಜ. ಆದರೆ ನಾನು ಹಿಮ್ಮೆಟ್ಟಲಿಲ್ಲ.

ಇಂಗ್ಲಿಷ್‌ ಭಾಷಾ ಜ್ಞಾನವು ಹಲವಾರು ದೇಶಗಳಲ್ಲಿ ಯೆಹೋವನ ಸಾಕ್ಷಿಗಳ ಕಟ್ಟಡ ನಿರ್ಮಾಣ ಯೋಜನೆಯಲ್ಲಿ ಸ್ವಯಂ ಸೇವಕನಾಗಿ ಕೆಲಸಮಾಡಲು ಸಹ ನನ್ನನ್ನು ಸಾಧ್ಯಗೊಳಿಸಿತು. ಮೊದಲು ನನ್ನನ್ನು ಗ್ರೀಸ್‌ ದೇಶಕ್ಕೆ ಕಳುಹಿಸಲಾಯಿತು. ತದನಂತರ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಬ್ರಾಂಚ್‌ ಕಟ್ಟಡ ಕಟ್ಟಲು ನಾನು ಸಹಾಯಮಾಡಿದೆ.

ಸಾರುವ ಕೆಲಸದಲ್ಲಿ ಹೆಚ್ಚಾಗಿ ಪಾಲ್ಗೊಳ್ಳಲು ಬಯಸಿದ್ದರಿಂದ ನಾನು ಯೆಹೋವನ ಸಾಕ್ಷಿಗಳಿಂದ ಪ್ರಾಯೋಜಿಸಲ್ಪಟ್ಟ ಶುಶ್ರೂಷಾ ತರಬೇತಿ ಶಾಲೆಗೆ ಸೇರಲು ಅರ್ಜಿಹಾಕಿದೆ. ಈ ಶಾಲೆಯು ಅವಿವಾಹಿತ ಕ್ರೈಸ್ತ ಪುರುಷರಿಗೆ ಎಂಟು ವಾರಗಳ ವಿಶೇಷ ತರಬೇತಿಯನ್ನು ಒದಗಿಸುತ್ತದೆ. ಇವರು ಸುವಾರ್ತಾ ಸೇವಕರ ಹೆಚ್ಚಿನ ಅಗತ್ಯವಿರುವ ಸ್ಥಳಕ್ಕೆ ಹೋಗಿ ಸೇವೆಮಾಡಲು ಸಿದ್ಧರಾಗಿರುತ್ತಾರೆ. (ಮಾರ್ಕ 13:10) ಸ್ವೀಡನ್‌ನಲ್ಲಿ ನಡೆಯಲಿಕ್ಕಿದ್ದ ಇಂಗ್ಲಿಷ್‌ ಭಾಷೆಯ ಕ್ಲಾಸಿಗೆ ಹಾಜರಾಗಲು ನನ್ನನ್ನು ಆಮಂತ್ರಿಸಲಾಯಿತು.

ಆ ಕ್ಲಾಸು ಸೆಪ್ಟೆಂಬರ್‌ 1, 1994ರಲ್ಲಿ ಆರಂಭವಾಯಿತು. ನಾನು ಚೆನ್ನಾಗಿ ತಯಾರಾಗಿರಲು ಬಯಸಿದೆ. ಆದ್ದರಿಂದ ನಾನು ಸುಮಾರು ಎಂಟು ತಿಂಗಳುಗಳ ತನಕ ದಿನಕ್ಕೆ ನಾಲ್ಕು ತಾಸು ಇಂಗ್ಲಿಷ್‌ ಕಲಿತೆ ಮತ್ತು ಇಂಗ್ಲಿಷ್‌ ಭಾಷೆಯನ್ನಾಡುವ ಸಭೆಯೊಂದಿಗೆ ಸಹವಾಸಿಸಿದೆ. ಅನಂತರ ಶಾಲೆ ಆರಂಭಗೊಂಡಾಗ ನನ್ನ ಭಾಷಾ ಅಸಾಮರ್ಥ್ಯವು ನನ್ನ ಪ್ರಗತಿಯನ್ನು ತಡೆಯುವಂತೆ ನಾನು ಬಿಡಲಿಲ್ಲ. ಉದಾಹರಣೆಗೆ ಉಪದೇಶಕರು ಪ್ರಶ್ನೆಗಳನ್ನು ಕೇಳಿದಾಗ ನನಗೆ ಸರಿಯಾದ ಶಬ್ದಗಳು ದೊರೆಯದಿದ್ದರೂ ನಾನು ಯಾವಾಗಲೂ ಉತ್ತರ ಹೇಳಲು ಕೈ ಎತ್ತುತ್ತಿದ್ದೆ. ಪದವೀಧರನಾದ ಬಳಿಕ ನಾನು ಕೂಪನ್‌ಹೇಗನ್‌ನಲ್ಲಿ ಪಯನೀಯರನಾಗಿ ನೇಮಿಸಲ್ಪಟ್ಟೆ. ಇಂಗ್ಲಿಷ್‌ ಕಲಿಯುವುದು ದೊಡ್ಡ ಸವಾಲಾಗಿತ್ತು. ಆದರೆ ನನ್ನ ಮುಂದೆ ಅದಕ್ಕಿಂತ ದೊಡ್ಡ ಸವಾಲು ಕಾದಿತ್ತು.

ತಮಿಳು ಕಲಿಯುವ ಸವಾಲು

ಇಸವಿ 1995ರ ಡಿಸೆಂಬರ್‌ನಲ್ಲಿ ನಾನು ಹರ್ನಿಂಗ್‌ನ ಡ್ಯಾನಿಷ್‌ ಪಟ್ಟಣದಲ್ಲಿರುವ ತಮಿಳು ಭಾಷಾ ಸಭೆಗೆ ನೇಮಿಸಲ್ಪಟ್ಟೆ. ಜಗತ್ತಿನ ಅತಿ ಕಷ್ಟಕರ ಭಾಷೆಗಳಲ್ಲಿ ತಮಿಳು ಒಂದು ಎಂದು ನನಗನಿಸಿತು. ಅದರಲ್ಲಿ 31 ಅಕ್ಷರಗಳೂ ಮಾತ್ರವಲ್ಲ ಅಕ್ಷರಗಳನ್ನು ಕೂಡಿಸುವ ಸ್ವರಾಕ್ಷರ, ವ್ಯಂಜನಗಳೂ ಇವೆ. ಒಟ್ಟಿಗೆ ಸುಮಾರು 250 ಅಕ್ಷರಗಳಿವೆ!

ಮೊದಲು ನಾನು ಸಭೆಗೆ ಡ್ಯಾನಿಷ್‌ನಲ್ಲಿ ಭಾಷಣ ಕೊಡುತ್ತಿದ್ದೆ. ಅದನ್ನು ತಮಿಳಿಗೆ ಭಾಷಾಂತರಿಸಲಾಗುತ್ತಿತ್ತು. ಕಟ್ಟಕಡೆಗೆ ನಾನು ತಮಿಳಿನಲ್ಲಿ ಭಾಷಣ ಕೊಡಲು ತೊಡಗಿದಾಗ ಯಾರಿಗೂ ಅರ್ಥವಾಗಲಿಲ್ಲವೇನೋ ಎಂದೆಣಿಸಿದೆ. ಅದನ್ನು ಕೇಳಿ ಕೆಲವರ ಮುಖದಲ್ಲಿ ನಗೆ ಬರುವಂತಿದ್ದರೂ ಸಭಿಕರು ನನಗೆ ಗೌರವದಿಂದ ಕಿವಿಗೊಟ್ಟರು. ಭಾಷೆಯನ್ನು ವೇಗವಾಗಿ ಕಲಿಯಲು ನಾನು ತಮಿಳು ಭಾಷೆಯನ್ನಾಡುವ ಲಕ್ಷಾಂತರ ಜನರಿರುವ ದೇಶಕ್ಕೆ ಹೋಗಲು ನಿರ್ಣಯಿಸಿದೆ. ಹೋದೆ ನಾನು ಶ್ರೀಲಂಕಕ್ಕೆ.

ನಾನು 1996ರ ಅಕ್ಟೋಬರ್‌ನಲ್ಲಿ ಶ್ರೀಲಂಕಕ್ಕೆ ಹೋದಾಗ ದೇಶವು ಆಂತರಿಕ ಯುದ್ಧದಲ್ಲಿ ಮುಳುಗಿತ್ತು. ಕಾದಾಡುವ ಎರಡೂ ಪಕ್ಷಗಳ ನಡುವಣ ಗಡಿಯಾದ ವವುನಿಯ ಊರಲ್ಲಿ ಸ್ವಲ್ಪ ಸಮಯ ಜೀವಿಸಿದೆ. ಸ್ಥಳಿಕ ಸಾಕ್ಷಿಗಳು ಬಡವರಾಗಿದ್ದರೂ ಅವರು ಪ್ರೀತಿ ಮತ್ತು ಅತಿಥಿಸತ್ಕಾರದಲ್ಲಿ ಧನಿಕರಾಗಿದ್ದರು. ಅಲ್ಲದೆ ನನಗೆ ತಮಿಳು ಕಲಿಸುವುದರಲ್ಲಿ ತುಂಬ ಪ್ರಯಾಸಪಟ್ಟರು. ಆ ಕ್ಷೇತ್ರದಲ್ಲಿ ನಾನೊಬ್ಬನೇ ವಿದೇಶಿಯಾಗಿದ್ದರೂ ಅವರ ಸ್ಥಳಿಕ ಭಾಷೆಯನ್ನಾಡುವುದನ್ನು ನೋಡಿ ಸಾಕ್ಷಿಯಲ್ಲದವರು ಕೂಡ ಅಚ್ಚರಿಗೊಂಡರು. ಅವರ ಮೆಚ್ಚಿಗೆ, ದೀನಭಾವವು ಬೈಬಲಿನ ಕುರಿತು ಮಾತಾಡುವುದನ್ನು ನನಗೆ ಸುಲಭಮಾಡಿತು.

1997ರ ಜನವರಿಯಲ್ಲಿ ನಾನು ಡೆನ್ಮಾರ್ಕ್‌ಗೆ ಹಿಂತಿರುಗಬೇಕಾಯಿತು. ಮುಂದಿನ ವರ್ಷದಲ್ಲಿ ನಾನು ಕ್ಯಮಿಲಾ ಎಂಬ ಪಯನೀಯರಳನ್ನು ವಿವಾಹವಾದೆ. ಶ್ರೀಲಂಕ ಪುನಃ ನನ್ನನ್ನು ಕೈಬೀಸಿ ಕರೆಯಿತು. ಆದ್ದರಿಂದ 1999ರ ಡಿಸೆಂಬರ್‌ನಲ್ಲಿ ನಾನು ನನ್ನ ಪತ್ನಿಯೊಂದಿಗೆ ಶ್ರೀಲಂಕಕ್ಕೆ ಮರಳಿ ಬಂದೆ. ತುಸು ಸಮಯದಲ್ಲೇ ನಾವು ಹಲವಾರು ಕುಟುಂಬ ಮತ್ತು ಜನರೊಂದಿಗೆ ಬೈಬಲ್‌ ಅಧ್ಯಯನಗಳನ್ನು ನಡೆಸತೊಡಗಿದೆವು. ಸ್ಥಳಿಕ ಸಾಕ್ಷಿಗಳೊಂದಿಗೆ ಅವರ ಬೈಬಲ್‌ ಅಧ್ಯಯನಗಳಿಗೂ ನಾವು ಹೋದೆವು. ಶುಶ್ರೂಷೆಯಲ್ಲಿಯೂ ಭಾಷೆ ಕಲಿಯುವುದರಲ್ಲಿಯೂ ನಾವು ಪೂರ್ಣವಾಗಿ ತಲ್ಲೀನರಾದೆವು.

ಇಸವಿ 2000ದ ಮಾರ್ಚ್‌ನಲ್ಲಿ ನಾವು ಡೆನ್ಮಾರ್ಕ್‌ಗೆ ಹಿಂತಿರುಗಬೇಕಾಯಿತು. ಜೊತೆ ಸಾಕ್ಷಿಗಳನ್ನು ಮತ್ತು ನಮ್ಮ ಬೈಬಲ್‌ ವಿದ್ಯಾರ್ಥಿಗಳನ್ನು ಅಗಲುವುದು ತೀರಾ ಕಷ್ಟಕರವಾಗಿತ್ತು. ಏಕೆಂದರೆ ನಾವು ಅವರನ್ನು ತುಂಬಾ ಪ್ರೀತಿಸಿದೆವು. ಆದರೆ ನಮ್ಮ ಮುಂದೆ ಇನ್ನೂ ಹೆಚ್ಚಿನ ಕೆಲಸ ಕಾದಿತ್ತು. ಇದರಲ್ಲಿ ಇನ್ನೊಂದು ಭಾಷೆ ಕಲಿಯುವ ಸವಾಲು ಸೇರಿತ್ತು! ಅದ್ಯಾವ ಭಾಷೆ?

ತಮಿಳಿನಿಂದ ಲಾಟ್ವೀಯನ್‌ಗೆ ನೆಗೆತ

2002ರ ಮೇ ತಿಂಗಳಲ್ಲಿ ನಾನು ಮತ್ತು ಕ್ಯಮಿಲಾ ಲಾಟ್ವೀಯದಲ್ಲಿ ಮಿಷನೆರಿಗಳಾಗಿ ಸೇವೆಮಾಡಲು ಆಮಂತ್ರಿಸಲ್ಪಟ್ಟೆವು. ಇದು ಡೆನ್ಮಾರ್ಕ್‌ನ ಪೂರ್ವದಲ್ಲಿರುವ ಒಂದು ಯುರೋಪಿಯನ್‌ ದೇಶ. ಕ್ಯಮಿಲಾ ಬೇಗನೆ ಲಾಟ್ವೀಯನ್‌ ಕಲಿತಳು. ಕೇವಲ ಆರೇ ವಾರಗಳಲ್ಲಿ ಅವಳು ಸಂಭಾಷಣೆ ಮಾಡಲಾಂಭಿಸಿದಳು! ಆದರೆ ನಾನು ಅಷ್ಟು ಪ್ರಗತಿ ಮಾಡಲಿಲ್ಲ. ನನಗೆ ತುಂಬ ಸಹಾಯ ದೊರೆತರೂ ಈ ದಿನಗಳ ತನಕವೂ ನನ್ನ ಪ್ರಗತಿ ಕೊಂಚವೇ. ಆದರೂ ಭಾಷಾ ಕಲಿಕೆಯನ್ನು ಬಿಡದೆ ಮುಂದುವರಿಸಲು ನಾನು ನಿಶ್ಚಯಿಸಿದೆ. *

ಕ್ಯಮಿಲಾ ನನಗೆ ಅತ್ಯಂತ ಬೆಂಬಲಿಗಳಾದಳು. ನಮ್ಮ ಮಿಷನೆರಿ ಸೇವೆಯನ್ನು ನಾವಿಬ್ಬರೂ ಆನಂದಿಸುತ್ತಿದ್ದೇವೆ. ಅನೇಕ ಆಸಕ್ತ ಜನರೊಂದಿಗೆ ನಾವು ಬೈಬಲನ್ನು ಅಧ್ಯಯನಿಸಿದ್ದೇವೆ. ಅವರ ಭಾಷಾ ಶಬ್ದಗಳನ್ನು ನಾನು ಮರೆತಾಗ ಅಥವಾ ವ್ಯಾಕರಣದಲ್ಲಿ ತಪ್ಪು ಮಾಡಿದಾಗ ಸ್ಥಳಿಕ ಸಾಕ್ಷಿಗಳು ಮತ್ತು ಬೈಬಲ್‌ ವಿದ್ಯಾರ್ಥಿಗಳು ತಾಳ್ಮೆಯಿಂದ ತಿಳುಕೊಳ್ಳಲು ಪ್ರಯತ್ನಿಸಿ ತಿದ್ದುತ್ತಾರೆ. ಇದು ಕ್ರೈಸ್ತ ಕೂಟಗಳಲ್ಲಿ ಭಾಷಣಗಳನ್ನು ಕೊಡುವಾಗ ಹಾಗೂ ಶುಶ್ರೂಷೆಯಲ್ಲಿ ನನ್ನ ಭರವಸೆಯನ್ನು ಹೆಚ್ಚಿಸುತ್ತದೆ.

ಅದು ಅಷ್ಟೊಂದು ಕಷ್ಟದ ಕೆಲಸವಾಗಿರುವಾಗ ಒಂದು ಹೊಸ ಭಾಷೆಯನ್ನು ಕಲಿಯುವ ಸವಾಲನ್ನು ನಾನು ಸ್ವೀಕರಿಸಿದ್ದೇಕೆ? ಭಾಷಾಪ್ರೇಮವಲ್ಲ ಜನರ ಮೇಲಿನ ಪ್ರೀತಿಯೇ ಅದಕ್ಕೆ ಕಾರಣ. ಸತ್ಯದೇವರಾದ ಯೆಹೋವನನ್ನು ತಿಳಿಯಲು ಮತ್ತು ಆತನ ಹತ್ತಿರಕ್ಕೆ ಬರಲು ಯಾರಿಗಾದರೂ ಸಹಾಯಮಾಡುವುದು ಒಂದು ಆಶ್ಚರ್ಯಕರ ಸುಯೋಗವೇ ಸರಿ. ಮತ್ತು ಈ ಕಷ್ಟದ ಕೆಲಸವು ಎಷ್ಟೋ ಹೆಚ್ಚು ಪರಿಣಾಮಕಾರಿಯಾಗಿರುವುದು ಯಾವಾಗ ಎಂದರೆ ಒಬ್ಬನು ಇತರರೊಂದಿಗೆ ಅವರ ನಾಡಭಾಷೆಯಲ್ಲಿ ಅಂದರೆ ಅವರ ಹೃದಯಕ್ಕೆ ಪ್ರಿಯವಾದ ಭಾಷೆಯಲ್ಲಿ ಮಾತಾಡುವುದೇ. ಇದನ್ನು ಅನೇಕ ಮಿಷನೆರಿಗಳು ಸತ್ಯವೆಂಬುದಾಗಿ ಪದೇ ಪದೇ ಕಂಡುಕೊಂಡಿದ್ದಾರೆ.

ಹಲವಾರು ವರ್ಷಗಳಿಂದ ನಾನು ಮತ್ತು ನನ್ನ ಪತ್ನಿಯು ಅನೇಕ ಜನರಿಗೆ ಬೈಬಲ್‌ ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆಯುವಂತೆ ನೆರವಾಗಲೂ ಶಕ್ತರಾಗಿದ್ದೇವೆ. ಆದರೂ ಕೀರ್ತಿ ನಮಗಲ್ಲ. ಬದಲಾಗಿ ನಾವು ಕಂಡಿರುವ ಉತ್ತಮ ಫಲಿತಾಂಶಗಳಿಗಾಗಿ ಯೆಹೋವನಿಗೆ ಉಪಕಾರ ಹೇಳುತ್ತೇವೆ. ಎಷ್ಟೆಂದರೂ ನಾವು ಬರೇ ಬೈಬಲ್‌ ಸತ್ಯದ ಬೀಜವನ್ನು ಬಿತ್ತುವವರಷ್ಟೇ, ಬೆಳೆಸುವಾತನು ದೇವರೇ.—1 ಕೊರಿಂಥ 3:6.

ಅಡಚಣೆ ಸಹಾಯಕ್ಕೆ ಬಂತು

ಡಿಸ್‌ಲೆಕ್ಸಿಯಾ ನನಗೆ ಅಡಚಣೆಯಾಗಿದ್ದರೂ ಅದು ನನಗೆ ಉಪಯುಕ್ತವೂ ಆಯಿತು. ಹೇಗೆ? ಸಭೆಯಲ್ಲಿ ನಾನು ಭಾಷಣಗಳನ್ನು ಕೊಡುವಾಗ ನೋಟ್ಸ್‌ ಮೇಲೆ ಹೆಚ್ಚು ಆತುಕೊಳ್ಳುವುದಿಲ್ಲ. ಆದ್ದರಿಂದ ನಾನು ಸಭಿಕರೊಂದಿಗೆ ಉತ್ತಮ ದೃಷ್ಟಿಸಂಪರ್ಕವನ್ನೂ ಇಟ್ಟುಕೊಳ್ಳಬಲ್ಲೆ. ಅಲ್ಲದೆ ದೃಷ್ಟಾಂತಗಳನ್ನೂ ನಾನು ಚೆನ್ನಾಗಿ ಉಪಯೋಗಿಸುತ್ತೇನೆ. ನೆನಪಿಸಿಕೊಳ್ಳಲು ಅವು ಬಲು ಸುಲಭ. ಹೀಗೆ ಕೆಲವು ವಿಷಯಗಳಲ್ಲಿ ನನಗಿರುವ ವಿಕಲತೆಯು ಬೋಧನಾ ಕೌಶಲಗಳನ್ನು ವಿಕಸಿಸಲು ನನಗೆ ಸಹಾಯಮಾಡಿದೆ.

ಕ್ರೈಸ್ತ ಅಪೊಸ್ತಲ ಪೌಲನು ಬರೆದದ್ದು: “ದೇವರು ಬಲಿಷ್ಠರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ.” (1 ಕೊರಿಂಥ 1:27) ನನ್ನ ವಿಕಲತೆಯು ಖಂಡಿತವಾಗಿಯೂ ಕೆಲವು ವಿಷಯಗಳಲ್ಲಿ ನನ್ನನ್ನು ‘ಬಲಹೀನನನ್ನಾಗಿ’ ಮಾಡಿದೆ. ಆದರೂ ನಾನೂ ಇತರ ಅನೇಕರೂ ಕಲಿತ ಪ್ರಕಾರ ಯೆಹೋವನು ನಮ್ಮ ಕೊರತೆಯನ್ನು ಸದುಪಯೋಗಕ್ಕೆ ಹಾಕಶಕ್ತನು. ಆದರೆ ನಾವು ಕೆಲವು ನ್ಯಾಯಸಮ್ಮತ ಗುರಿಗಳನ್ನಿಡಬೇಕು, ಸಾಮರ್ಥ್ಯಕ್ಕೆ ಮೀರಿ ನಿರೀಕ್ಷಿಸಬಾರದು, ದೇವರ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಬೇಕು ಮತ್ತು ಕೆಲಸವನ್ನು ಪೂರೈಸಲು ಮುಂದಡಿಯಿಡಬೇಕು ಅಷ್ಟೇ. (g 2/09)

[ಪಾದಟಿಪ್ಪಣಿ]

^ ಲಾಟ್ವೀಯದಲ್ಲಿ ಆರು ವರ್ಷ ಸೇವೆಮಾಡಿದ ನಂತರ ಹೆನ್‌ಬಾಗ್‌ ದಂಪತಿ ಇತ್ತೀಚಿಗೆ ಘಾನಕ್ಕೆ ನೇಮಿಸಲ್ಪಟ್ಟರು.

[ಪುಟ 20ರಲ್ಲಿರುವ ಚೌಕ]

ಡಿಸ್‌ಲೆಕ್ಸಿಯಾಕ್ಕೆ ಕಾರಣ?

ಕಲಿಕೆಯ ವಿಕಲತೆ ಅಥವಾ ಡಿಸ್‌ಲೆಕ್ಸಿಯಾ ಅಂದರೇನು? “ಡಿಸ್‌ಲೆಕ್ಸಿಯಾ” ಪದವು ಗ್ರೀಕ್‌ ಮೂಲದಿಂದ ಬಂದಿದೆ. ಅದಕ್ಕೆ “ಮಾತು ದೋಷ” ಎಂಬರ್ಥವಿದೆ. ಅದೊಂದು ಜೀವನ ಪರ್ಯಂತದ ಅಸ್ವಸ್ಥ. ಡಿಸ್‌ಲೆಕ್ಸಿಯಾವು ಭಾಷಾ ಸಂಬಂಧಿತ ವಿಕಲತೆಯಾಗಿದೆ, ವಿಶೇಷವಾಗಿ ಓದುವಿಕೆಯ ಅಡಚಣೆಯು ಅದರಲ್ಲಿ ಒಳಗೂಡಿದೆ. ಡಿಸ್‌ಲೆಕ್ಸಿಯಾ ಬಾಧಿತರು ಅಕ್ಷರಗಳ ನಡುವಣ ವ್ಯತ್ಯಾಸ ಮತ್ತು ಆ ಅಕ್ಷರಗಳ ಧ್ವನಿಯ ನಡುವಣ ಸಂಬಂಧವನ್ನು ಅರ್ಥಮಾಡಲು ಕಷ್ಟಪಡುತ್ತಾರೆ. ಆದರೂ ಇದರ ನಿರ್ದಿಷ್ಟ ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರಬಹುದು.

ಡಿಸ್‌ಲೆಕ್ಸಿಯಾಕ್ಕೆ ಕಾರಣಗಳು? ನಿಜ ಕಾರಣವು ಸ್ಪಷ್ಟವಾಗಿ ತಿಳಿದಿಲ್ಲವಾದರೂ ಅನುವಂಶೀಯತೆ ಒಂದು ಕಾರಣ. ಮಿದುಳಿನ ಅಸಾಮಾನ್ಯ ಬೆಳವಣಿಗೆ ಮತ್ತು ಕಾರ್ಯಗತಿಯು ಅದಕ್ಕೆ ಕಾರಣವೆಂದು ಅಧ್ಯಯನಗಳು ಸೂಚಿಸುತ್ತವಾದರೂ ಡಿಸ್‌ಲೆಕ್ಸಿಯಾವು ಸಾಮಾನ್ಯ ಬುದ್ಧಿಶಕ್ತಿಯ ಕೊರತೆಗೆ ಅಥವಾ ಕಲಿಕೆಯ ಅಪೇಕ್ಷೆಯ ಕೊರತೆಗೆ ಸಂಬಂಧಿಸಿಲ್ಲ. ವಾಸ್ತವದಲ್ಲಿ ಉಚ್ಚ ಭಾಷಾ ಕೌಶಲಗಳು ಅವಶ್ಯವಿಲ್ಲದ ಕ್ಷೇತ್ರಗಳಲ್ಲಿ ಈ ಬಾಧಿತರು ಉತ್ತಮವಾಗಿ ಕೆಲಸ ನಡಿಸಶಕ್ತರು.

ಡಿಸ್‌ಲೆಕ್ಸಿಯಾಕ್ಕೆ ಉಪಚಾರ? ಈ ರೋಗಲಕ್ಷಣವನ್ನು ಆರಂಭದ ಹಂತದಲ್ಲೇ ಗುರುತಿಸುವುದು ಪ್ರಾಮುಖ್ಯ. ಇಂಥವರಿಗೆ ಭಾಷಾ ಕೌಶಲಗಳಲ್ಲಿ ಕೊಡುವ ಪರಿಣಾಮಕಾರಿ ತರಬೇತಿಯಲ್ಲಿ ಹಲವಾರು ಜ್ಞಾನೇಂದ್ರಿಯಗಳು ಸೇರಿರುತ್ತವೆ, ವಿಶೇಷವಾಗಿ ಶ್ರವಣ, ದರ್ಶನ ಮತ್ತು ಸ್ಪರ್ಶ. ತಮ್ಮ ಶಕ್ತಿಗನುಸಾರ ಸಾವಕಾಶವಾಗಿ ಪ್ರಗತಿಯನ್ನು ಮಾಡುವಂತೆ ಇಂಥ ಅನೇಕ ವಿದ್ಯಾರ್ಥಿಗಳಿಗೆ ವೈಯಕ್ತಿಕ ಸಹಾಯಬೇಕು. ಅವರಿಗೆ ಶಾಲೆಯಲ್ಲಿ ಉಂಟಾಗುವ ಅಡಚಣೆಗಳಿಂದಾಗಿ ಬರುವ ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸಲು ಸಹ ನೆರವಿನ ಅಗತ್ಯವಿದ್ದೀತು. ಒಳ್ಳೇ ಪಾಠಕಲಿಸುವಿಕೆ ಮತ್ತು ಶ್ರಮದ ಪ್ರಯತ್ನದಿಂದಾಗಿ ಕಲಿಕೆಯ ವಿಕಲತೆಯುಳ್ಳ ವಿದ್ಯಾರ್ಥಿಗಳು ಓದು-ಬರಹವನ್ನು ಚೆನ್ನಾಗಿ ಕಲಿತುಕೊಳ್ಳಬಲ್ಲರು. *

[ಪಾದಟಿಪ್ಪಣಿ]

^ ಮೇಲಿನ ವಿಷಯವು ಇಂಟರ್‌ ನ್ಯಾಷನಲ್‌ ಡಿಸ್‌ಲೆಕ್ಸಿಯಾ ಎಸೋಸಿಯೇಷನ್‌ನಿಂದ ಒದಗಿಸಿದ ಮಾಹಿತಿಯ ಮೇಲೆ ಆಧರಿಸಿದೆ. ಈ ಪತ್ರಿಕೆಯಲ್ಲಿರುವ “ಕಲಿಕೆಯ ವಿಕಲತೆಯುಳ್ಳ ಮಕ್ಕಳಿಗೆ ಸಹಾಯ” ಎಂಬ ಲೇಖನವನ್ನೂ ನೋಡಿ.

[ಪುಟ 21ರಲ್ಲಿರುವ ಚಿತ್ರ]

ಶ್ರೀಲಂಕದಲ್ಲಿ ಜೊತೆ ಸಾಕ್ಷಿಯೊಂದಿಗೆ

[ಪುಟ 21ರಲ್ಲಿರುವ ಚಿತ್ರ]

ಲಾಟ್ವೀಯದಲ್ಲಿ ಕ್ಯಮಿಲಾಳೊಂದಿಗೆ