ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆನೆ ಸವಾರಿ—ಮಾವುತನ ಕಾಮಗಾರಿ

ಆನೆ ಸವಾರಿ—ಮಾವುತನ ಕಾಮಗಾರಿ

ಆನೆ ಸವಾರಿ—ಮಾವುತನ ಕಾಮಗಾರಿ

ಭಾರತದ ಎಚ್ಚರ! ಲೇಖಕರಿಂದ

ಮಾವುತನೊಬ್ಬನು ನರ್ಮದಾ ನದೀ ತೀರದಲ್ಲಿ ಅಡಿಗೆ ಮಾಡುತ್ತಿದ್ದನು. ಅವನು ತನ್ನ ಮಗುವನ್ನು, “ಮೈಚಾಚಿ ಮಲಗಿರುವ ಆನೆಯ ಮುಂಗಾಲುಗಳ ಮತ್ತು ಸೊಂಡಿಲ ಮಧ್ಯೆ ಕೂರಿಸಿದ್ದನು. ಮಗು ಅಂಬೆಗಾಲಿಡುತ್ತಾ ಆನೆಯಿಂದಾಚೆ ತೆರಳಲು ಪದೇ ಪದೇ ಪ್ರಯತ್ನಿಸಿತು. ಆದರೆ ಆನೆ ತನ್ನ ಸೊಂಡಿಲನ್ನು ಮಗುವಿನ ಸುತ್ತಲೂ ಕೋಮಲವಾಗಿ ಬಳಸಿ ಇದ್ದ ಸ್ಥಳಕ್ಕೇ ಪುನಃ ಪುನಃ ಎಳೆಯುತ್ತಿತ್ತು. ತನ್ನ ಪಾಡಿಗೆ ಅಡಿಗೆಮಾಡುತ್ತಾ ಇದ್ದ ಮಾವುತನಿಗೆ ತನ್ನ ಮಗು ಸುರಕ್ಷಿತ ಹಸ್ತದಲ್ಲಿದೆ ಎಂಬ ದೃಢವಿಶ್ವಾಸವಿತ್ತು” ಎನ್ನುತ್ತದೆ ಪ್ರಾಜೆಕ್ಟ್‌ ಎಲಿಫೆಂಟ್‌ ಎಂಬ ಪುಸ್ತಕ.

ಕ್ರಿ.ಪೂ. 2000 ಇಸವಿಯಷ್ಟು ಪೂರ್ವದಿಂದಲೂ ಆನೆಗಳನ್ನು ಮನುಷ್ಯರು ದುಡಿಮೆಗಾಗಿ ಬಳಸುತ್ತಿದ್ದಾರೆ. ಪುರಾತನ ಕಾಲದಲ್ಲಿ ಅವುಗಳನ್ನು ಮುಖ್ಯವಾಗಿ ಯುದ್ಧಗಳಿಗಾಗಿ ಪಳಗಿಸಲಾಗುತ್ತಿತ್ತು. ಇಂದು ಭಾರತದಲ್ಲಿ ಆನೆಗಳನ್ನು ಕೆಲಸಕ್ಕಾಗಿ ಪಳಗಿಸಲಾಗುತ್ತದೆ. ಮರದ ದಿಮ್ಮಿಗಳನ್ನು ಸಾಗಿಸುವ ಕೆಲಸದಲ್ಲಿ, ಹಬ್ಬಉತ್ಸವಗಳಲ್ಲಿ, ಮದುವೆಗಳಲ್ಲಿ, ಜಾಹೀರಾತುಗಳಲ್ಲಿ, ಸರ್ಕಸ್‌ಗಳಲ್ಲಿ ಮಾತ್ರವಲ್ಲ ಭಿಕ್ಷಾಟನಗಾಗಿಯೂ ಅವುಗಳನ್ನು ಬಳಸಲಾಗುತ್ತದೆ. ಈ ಆನೆಗಳನ್ನು ಸಾಧುಗೊಳಿಸುವುದೂ ಪಳಗಿಸುವುದೂ ಹೇಗೆ?

ಆನೆ ಪಳಗಿಸುವ ಪರಿ

ಕಾಡಿನಲ್ಲಿ ಸೆರೆಹಿಡಿದ, ತಬ್ಬಲಿಯಾದ ಇಲ್ಲವೆ ಗಾಯಗೊಂಡ ಆನೆಮರಿಗಳನ್ನು ಆರೈಕೆಮಾಡಲಿಕ್ಕಾಗಿ ಭಾರತದಲ್ಲಿ ಅನೇಕ ಕೇಂದ್ರಗಳು ಸಜ್ಜಿತವಾಗಿವೆ. ಅಂಥ ಒಂದು ಕೇಂದ್ರವು ಕೇರಳದ ಕೋನಿ ಎಂಬ ಸ್ಥಳದಲ್ಲಿದೆ. ಇಲ್ಲಿ ಆನೆಮರಿಗಳನ್ನು ದುಡಿಮೆಗೆಂದು ಪಳಗಿಸಲಾಗುತ್ತದೆ. ಮಾವುತನು ಮೊದಲಾಗಿ ಆನೆಮರಿಯ ವಿಶ್ವಾಸವನ್ನು ಗೆಲ್ಲಬೇಕು. ಈ ವಿಶ್ವಾಸ ಗೆಲ್ಲಲು ಆಹಾರ ತಿನ್ನಿಸುವಿಕೆ ಪ್ರಾಮುಖ್ಯ ವಿಧಾನ. ಆನೆಮರಿ ಮಾವುತನ ಸ್ವರವನ್ನು ಗುರುತಿಸುತ್ತದೆ. ತಿನ್ನಲು ಕರೆದಾಕ್ಷಣ ಅದು ದಡದಡನೆ ಧಾವಿಸಿಬಂದು ಹಾಲು ಮತ್ತು ಧಾನ್ಯದ ಮುದ್ದೆಯನ್ನು ಗಬಗಬನೆ ತಿನ್ನುತ್ತದೆ. ಈ ಆನೆಮರಿಗಳಿಗೆ ಹದಿಮೂರು ವರ್ಷಗಳಾಗುವ ತನಕ ಕೆಲಸಕ್ಕಾಗಿ ಪಳಗಿಸಲಾಗುವುದಿಲ್ಲ. ಅನಂತರ 25 ವರ್ಷವಾದಾಗ ಅವನ್ನು ಕೆಲಸಕ್ಕೆ ತೊಡಗಿಸಲಾಗುತ್ತದೆ. ದುಡಿಮೆಯ ಆನೆಗಳಿಗೆ 65 ವಯಸ್ಸಾದಾಗ ನಿವೃತ್ತಿಯಾಗಬೇಕೆಂದು ಕೇರಳ ಸರಕಾರದ ನಿಯಮವಿದೆ.

ಸುರಕ್ಷಿತವಾಗಿ ಆನೆ ಸವಾರಿ ಮಾಡಬೇಕಾದರೆ ಮಾವುತನು ಒಳ್ಳೇ ತರಬೇತಿಯನ್ನು ಪಡೆದಿರಬೇಕು. ಕೇರಳದ ತ್ರಿಚೂರ್‌ನ ಎಲಿಫೆಂಟ್‌ ವೆಲ್ಫೇರ್‌ ಎಸೋಸಿಯೇಷನ್‌ಗೆ ಅನುಸಾರವಾಗಿ ಹೊಸ ಮಾವುತನಿಗೆ ಕಡಿಮೆಪಕ್ಷ ಮೂರು ತಿಂಗಳ ತೀವ್ರ ತರಬೇತಿ ಅತ್ಯಾವಶ್ಯಕ. ಅಂಥ ತರಬೇತಿಯಲ್ಲಿ ಕೇವಲ ಅಪ್ಪಣೆಕೊಡಲು ಕಲಿಯುವುದು ಮಾತ್ರವೇ ಅಲ್ಲ ಆನೆಯ ಬದುಕಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನೂ ಅವನು ಕಲಿಯಬೇಕು.

ಪೂರ್ತಿಬೆಳೆದ ಆನೆಯ ಪಳಗಿಸುವಿಕೆಗೆ ಹೆಚ್ಚು ಸಮಯಬೇಕು. ಆನೆಲಾಯದ ಹೊರಗಿಂದ ಮಾವುತನು ಮೊದಲಾಗಿ ಅದಕ್ಕೆ ತನ್ನ ಅಪ್ಪಣೆಗಳನ್ನು ಅರ್ಥಮಾಡಿಕೊಳ್ಳಲು ಕಲಿಸುತ್ತಾನೆ. ಹೇಳಿದ ಕೆಲಸವನ್ನು ಮಾಡುವಂತೆ ಆನೆಗೆ ಕಲಿಸಲು ಕೇರಳದ ಮಾವುತನು ಸುಮಾರು 20 ಅಪ್ಪಣೆಗಳನ್ನು ಮತ್ತು ಸನ್ನೆಗಳನ್ನು ಬಳಸುತ್ತಾನೆ. ಅವನು ಸ್ಪಷ್ಟವೂ ಗಟ್ಟಿಯೂ ಆದ ಸ್ವರದಿಂದ ಅಪ್ಪಣೆಕೊಡುತ್ತಾನೆ ಮಾತ್ರವಲ್ಲ ಅದು ಏನು ಮಾಡಬೇಕೆಂದು ಸೂಚಿಸಲು ಅಂಕುಶದಿಂದ ಆನೆಯನ್ನು ಚುಚ್ಚುತ್ತಾನೆ. ಅಪ್ಪಣೆಯು ಪಾಲಿಸಲ್ಪಟ್ಟಾಗ ಅದಕ್ಕೆ ಅಚ್ಚುಮೆಚ್ಚಿನ ತಿನಿಸನ್ನು ನೀಡಲಾಗುತ್ತದೆ. ಆನೆಯ ದೋಸ್ತಿ ಮಾವುತನಿಗೆ ಖಚಿತವಾದಾಗ ಅವನು ಸುತ್ತುವರಿಯೊಳಗೆ ಹೋಗಿ ಅದನ್ನು ಪ್ರೀತಿಯಿಂದ ಮೈದಡವುತ್ತಾನೆ. ಈ ಸ್ನೇಹಬಂಧವು ಪರಸ್ಪರ ವಿಶ್ವಾಸವನ್ನು ಕಟ್ಟುತ್ತದೆ. ಸಮಯಾನಂತರ ಆನೆಯನ್ನು ಹೊರಗಡೆ ಒಯ್ಯಬಹುದಾದರೂ ಎಚ್ಚರಿಕೆ ಆವಶ್ಯಕ ಏಕೆಂದರೆ ಇನ್ನೂ ಕೆಲವು ಮೃಗೀಯ ವೈಲಕ್ಷಣಗಳು ಅದರಲ್ಲಿರಬಹುದು. ಆನೆಯು ಪೂರ್ಣವಾಗಿ ಪಳಗಿದೆ ಎಂದು ತಿಳಿಯುವ ವರೆಗೆ, ಪಳಗಿರುವ ಎರಡು ಆನೆಗಳ ನಡುವೆ ಅದನ್ನು ಸಂಕೋಲೆಯಿಂದ ಬಿಗಿದು ಸ್ನಾನಕ್ಕೋ ಇನ್ನಿತರ ವಿನೋದ ವಿಹಾರಕ್ಕೋ ಒಯ್ಯುಲಾಗುತ್ತದೆ.

ಆನೆಯು ಮಾವುತನ ಬಾಯಿಮಾತಿನ ಅಪ್ಪಣೆಗಳನ್ನು ಅರ್ಥಮಾಡಿಕೊಳ್ಳಲು ಕಲಿತ ಬಳಿಕ ಅವನು ಅದರ ಮೇಲೆ ಕೂತು, ಕಾಲ್ಬೆರಳುಗಳಿಂದ ಮತ್ತು ಹಿಮ್ಮಡಿಗಳಿಂದ ಚುಚ್ಚಿ ತಿಳಿಸುವ ದೈಹಿಕ ಸನ್ನೆಗಳಿಗೆ ಹೇಗೆ ಪ್ರತಿಕ್ರಿಯಿಸುವುದು ಎಂಬುದನ್ನು ಕಲಿಸುತ್ತಾನೆ. ಆನೆಯು ಮುಂದೆ ಚಲಿಸುವಂತೆ ಮಾಡಲು ಮಾವುತನು ತನ್ನ ಎರಡೂ ಕಾಲ್ಬೆರಳುಗಳಿಂದ ಅದರ ಕಿವಿಗಳ ಹಿಂಭಾಗವನ್ನು ತಿವಿಯುತ್ತಾನೆ. ಅದು ಹಿಂದೆ ಸರಿಯುವಂತೆ ಮಾಡಲು ಮಾವುತನು ತನ್ನ ಎರಡೂ ಹಿಮ್ಮಡಿಗಳಿಂದ ಆನೆಯ ಭುಜಗಳನ್ನು ಒತ್ತುತ್ತಾನೆ. ಆನೆಗೆ ಗಲಿಬಿಲಿಯಾಗದಂತೆ ಬಾಯಿಮಾತಿನ ಅಪ್ಪಣೆಗಳನ್ನು ಕೇವಲ ಒಬ್ಬನೇ ಮಾವುತನು ಕೊಡುತ್ತಾನೆ. ಎಲ್ಲಾ ಅಪ್ಪಣೆಗಳನ್ನು ಒಂದು ಆನೆಯು ಮೂರು ನಾಲ್ಕು ವರ್ಷಗಳೊಳಗೆ ಕಲಿಯುತ್ತದೆ. ತದನಂತರ ಅದು ಅವನ್ನು ಮರೆಯುವುದೇ ಇಲ್ಲ. ಆನೆಯ ಬೃಹದಾಕಾರದ ದೇಹಕ್ಕೆ ಹೋಲಿಸುವಾಗ ಅದರ ಮಿದುಳಿನ ಗಾತ್ರವು ಅತಿ ಚಿಕ್ಕದಾಗಿದ್ದರೂ ಅದು ಅತಿ ಚುರುಕುಬುದ್ಧಿಯುಳ್ಳ ಜೀವಿ.

ಆನೆ ಸಾಕಣೆ

ಆನೆಯ ಆರೋಗ್ಯ ಕಾಪಾಡುವುದೂ ಅದನ್ನು ಸಂತೋಷವಾಗಿಡುವುದೂ ಅತ್ಯಗತ್ಯ. ಪ್ರತಿದಿನ ಅದಕ್ಕೆ ಸ್ನಾನವೂ ಬೇಕು. ಗಜಸ್ನಾನದ ಸಮಯ ಕಲ್ಲುಗಳನ್ನೋ ಅಚ್ಚುಕಟ್ಟಾಗಿ ಕೊಯ್ದ ತೆಂಗಿನ ನಾರನ್ನೋ ಮಾವುತನು ಬಳಸಿ ದಪ್ಪಗಿದ್ದರೂ ಮೃದುವಾದ ಹಾಗೂ ಸೂಕ್ಷ್ಮಗ್ರಾಹಿಯಾದ ತನ್ನ ಆನೆಯ ಚರ್ಮವನ್ನು ಉಜ್ಜುತ್ತಾನೆ.

ಆಮೇಲೆ ಗಜೋಪಹಾರ ಸಿದ್ಧ. ಗೋದಿ, ಜೋಳ, ಹುರುಳಿ ಮತ್ತು ಇತರ ಧಾನ್ಯಗಳ ಹಿಟ್ಟಿನ ದಪ್ಪ ಮುದ್ದೆಯನ್ನು ಮಾವುತನು ತಯಾರಿಸುತ್ತಾನೆ. ಬಿದಿರು, ತಾಳೆಯೆಲೆ ಮತ್ತು ಹುಲ್ಲುಗಳು ಆನೆಯ ಮುಖ್ಯ ಆಹಾರದಲ್ಲಿ ಕೂಡಿವೆ. ಕಬ್ಬು ಮತ್ತು ಕ್ಯಾರೆಟ್‌ ಅದರಲ್ಲಿದ್ದರಂತೂ ಆನೆಗೆ ಖುಷಿಯೋ ಖುಷಿ. ಆನೆಗಳಿಗೆ ತಿನ್ನುವುದೆಂದರೆ ಬಲು ಇಷ್ಟ. ಅವುಗಳಿಗೆ ದಿನವೊಂದಕ್ಕೆ ಸುಮಾರು 140 ಕೆ.ಜಿ. ಆಹಾರ 150 ಲೀಟರ್‌ ನೀರು ಬೇಕು! ತನ್ನ ಈ ಬೃಹತ್ಕಾಯದ ಪ್ರಾಣಿಯ ಒಡನಾಡಿಯಾಗಿರಲು ಮಾವುತನು ಅದರ ಈ ಎಲ್ಲಾ ಅಗತ್ಯಗಳನ್ನು ತೃಪ್ತಿಗೊಳಿಸಬೇಕು.

ಆನೆಗೆ ಕಿರುಕುಳ ಕೊಟ್ಟಲ್ಲಿ

ಭಾರತದ ಈ ಸೌಮ್ಯ ಗಜರಾಜನನ್ನು ಒಂದು ನಿರ್ದಿಷ್ಟ ಹಂತಕ್ಕಿಂತ ಹೆಚ್ಚು ಸಮಯ ದುಡಿಸಲು ಮಾತ್ರ ಸಾಧ್ಯವಿಲ್ಲ. ಬಾಯಿಮಾತಿನಲ್ಲಿ ಅಥವಾ ಬೇರೆ ರೀತಿಯಲ್ಲಿ ಕಠಿಣವಾಗಿ ಶಿಕ್ಷಿಸುವ ಮಾವುತರ ಮೇಲೆ ಆನೆಗಳು ಕ್ರೋಧಾವೇಶದಿಂದ ತಿರುಗಿಬೀಳುತ್ತವೆ. ಮಾವುತರಿಂದ ತೀಕ್ಷ್ಣವಾಗಿ ಥಳಿಸಲ್ಪಟ್ಟ ಗಂಡಾನೆಯೊಂದು “ಉನ್ಮತ್ತತೆಯಿಂದ” ವರ್ತಿಸಿದರ ಕುರಿತು ಸಂಡೇ ಹೆರಲ್ಡ್‌ ವಾರ್ತಾಪತ್ರವು ತಿಳಿಸಿತ್ತು. “ಅದು ಮಾವುತನ ಏಟುಗಳಿಂದ ರೊಚ್ಚಿಗೊಂಡು ಸಿಕ್ಕಾಬಟ್ಟೆ ಆವೇಶದಿಂದ ಮುನ್ನುಗ್ಗಿತು. ಆ ಆನೆಯನ್ನು ನಿಯಂತ್ರಣಗೊಳಿಸಲು ಸಾಧ್ಯವಾದದ್ದು ಅರಿವಳಿಕೆಯಿಂದ ಮಾತ್ರ.” ಏಪ್ರಿಲ್‌ 2007ರ ಇಂಡಿಯ ಟುಡೇ ಇಂಟರ್‌ನ್ಯಾಷನಲ್‌ ಪತ್ರಿಕೆ ವರದಿ ಮಾಡಿದ್ದು: “ಕಳೆದ ಎರಡೇ ತಿಂಗಳುಗಳಲ್ಲಿ 10ಕ್ಕಿಂತಲೂ ಹೆಚ್ಚು ಗಂಡಾನೆಗಳು ಹಬ್ಬಉತ್ಸವಗಳಲ್ಲಿ ರೊಚ್ಚಿಗೆದ್ದವು. ಕಳೆದ ವರ್ಷದ ಜನವರಿ ತಿಂಗಳಿಂದ ಈ ತನಕ 48 ಮಾವುತರು ಉನ್ಮತ್ತಗೊಂಡ ಆನೆಗಳಿಂದ ಕೊಲ್ಲಲ್ಪಟ್ಟರು.” ಆನೆಗಳು ಮದವೇರಿದ ಸಮಯದಲ್ಲಿ ಅಂಥಾ ಅನಾಹುತಗಳು ಸಂಭವಿಸುತ್ತವೆ. ಗಂಡು-ಹೆಣ್ಣು ಕೂಡುವ ಕಾಲಕ್ಕೆ ಸಂಬಂಧಿಸಿ ವಾರ್ಷಿಕವಾಗಿ ನಡೆಯುವ ಶಾರೀರಿಕ ಕ್ರಿಯೆ ಇದಾಗಿದ್ದು ಬೆಳೆದ ಗಂಡಾನೆಗಳಲ್ಲಿ ಲೈಂಗಿಕ ಹಾರ್ಮೋನಿನ ಪ್ರಮಾಣವು ಹೆಚ್ಚುವ ಸಮಯದಲ್ಲಿ ಹಾಗೆ ನಡೆಯುತ್ತದೆ. ಫಲಿತಾಂಶವಾಗಿ ಆ ಆನೆಗಳು ಇತರ ಗಂಡಾನೆಗಳ ಮೇಲೆ ಮತ್ತು ಮನುಷ್ಯರ ಮೇಲೆ ಕೋಪಾವೇಶದಿಂದ ಎರಗುತ್ತವೆ ಇಲ್ಲವೆ ಹುಚ್ಚಾಬಟ್ಟೆ ವರ್ತಿಸುತ್ತವೆ. ಮದವೇರುವ ಈ ಸ್ಥಿತಿ 15 ದಿನಗಳಿಂದ ಮೂರು ತಿಂಗಳ ತನಕ ಇರಬಲ್ಲದು.

ಆನೆಯನ್ನು ಬೇರೆಯವರಿಗೆ ಮಾರಿದಾಗ ಮತ್ತು ಹೊಸ ಮಾವುತನು ಬಂದಾಗ ಸಹ ಆನೆಯು ರೊಚ್ಚಿಗೇಳುತ್ತದೆ. ಹಳೆಯ ಮಾವುತನೊಂದಿಗೆ ಅದಕ್ಕಿರುವ ನೆಚ್ಚಿನ ಸಂಬಂಧ ಇದರಿಂದ ವ್ಯಕ್ತ. ಆದ್ದರಿಂದ ಆನೆ ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಸುಲಭವಾಗುವಂತೆ ಹಳೆಯ ಮಾವುತನು ಸಾಮಾನ್ಯವಾಗಿ ಅದರೊಂದಿಗೆ ಅದರ ಹೊಸ ಮನೆಗೆ ಹೋಗುತ್ತಾನೆ. ಆನೆಯ ಇಷ್ಟಾನಿಷ್ಟಗಳಿಗೆ ಹೊಸ ಮಾವುತನು ಹೊಂದಿಕೊಳ್ಳುವ ತನಕ ಆ ಇಬ್ಬರು ಮಾವುತರು ಒಟ್ಟಾಗಿ ಕೆಲಸಮಾಡುತ್ತಾರೆ. ಒಂದುವೇಳೆ ಹಳೆ ಮಾವುತನು ಸತ್ತುಹೋಗಿ ಹೊಸ ಮಾವುತನು ಬಂದಲ್ಲಿ ಸಮಸ್ಯೆ ಇನ್ನೂ ಗಂಭೀರ. ಆದರೂ ಕೊನೆಗೆ ಆ ಆನೆ ಹೊಸತಾದ ಪರಿಸ್ಥಿತಿಗೆ ಒಗ್ಗಿಕೊಂಡು ಜೀವಿಸುತ್ತದೆ.

ಈ ಬೃಹದಾಕಾರದ ವನ್ಯಜೀವಿಗೆ ಕೆಲವರು ಭಯಪಡುತ್ತಾರಾದರೂ ಚೆನ್ನಾಗಿ ಪಳಗಿಸಲ್ಪಟ್ಟ ಆನೆಯು ಮಾವುತನ ಪ್ರೀತಿಗೆ ಸೋಲುತ್ತದೆ. ತನ್ನನ್ನು ಪೋಷಿಸುವ ಮಾವುತನ ಆಜ್ಞೆಯನ್ನು ಚಾಚೂತಪ್ಪದೆ ಪಾಲಿಸುತ್ತದೆ. ಆನೆಯನ್ನು ದಯೆಯಿಂದ ನೋಡಿಕೊಂಡಲ್ಲಿ ಸ್ವಲ್ಪ ಸಮಯ ಮಾವುತನು ಇರದಿದ್ದಾಗಲೂ ಅದನ್ನು ಸರಪಣಿಯಿಂದ ಬಂಧಿಸಿಯೇ ಇಡಬೇಕೆಂದಿಲ್ಲ. ತನ್ನ ಕೋಲಿನ ಒಂದು ತುದಿಯನ್ನು ಆನೆಯ ಕಾಲಿನ ಮೇಲೂ ಇನ್ನೊಂದು ತುದಿಯನ್ನು ನೆಲದಲ್ಲೂ ಕೇವಲ ಇಟ್ಟು, ‘ಇಲ್ಲೇ ಇರು ಎಲ್ಲೂ ಹೋಗಬೇಡ’ ಎಂದು ಆಜ್ಞೆ ಕೊಟ್ಟರೆ ಸಾಕು. ಆನೆ ವಿಧೇಯತೆಯಿಂದ ಆ ಸ್ಥಳ ಬಿಟ್ಟು ಅಲುಗಾಡುವುದಿಲ್ಲ. ಆರಂಭದಲ್ಲಿ ತಿಳಿಸಿದಂತೆ ಆನೆ ಮತ್ತು ಅದರ ಮಾವುತನ ಸಂಬಂಧವು ಆಶ್ಚರ್ಯಕರವೂ ಹೃದಯಸ್ಪರ್ಶಿಯೂ ಆಗಿದೆ. ಹೌದು, ಆನೆಯು ತನ್ನ ಪ್ರೀತಿಯ ಮಾವುತನ ವಿಶ್ವಾಸಕ್ಕೆ ಪಾತ್ರವಾಗಿದೆ. (g 4/09)

[ಪುಟ 12ರಲ್ಲಿರುವ ಚೌಕ/ಚಿತ್ರ]

ಮನುಷ್ಯನೊಂದಿಗೆ ಆನೆಯ ಇತಿಹಾಸ

ಮನುಷ್ಯನು ಆನೆಯನ್ನು ಪಳಗಿಸಿ ಸಾಧುಗೊಳಿಸಿದ ವಿಧಾನ ಒಂದು ದೀರ್ಘ ಇತಿಹಾಸವೇ ಸರಿ. ಇದಕ್ಕೆ ಪ್ರಾಯಶಃ ಪ್ರಾಚೀನ ಕಾಲದ ಒಂದು ಅತಿ ಪ್ರಖ್ಯಾತ ಉದಾಹರಣೆ ಎಂದರೆ ಕಾರ್ತೇಜ್‌ನ ಸೇನಾನಿಯಾದ ಹನಿಬಾಲ್‌ನದ್ದು. ಕ್ರಿ. ಪೂ. ಮೂರನೆಯ ಶತಮಾನದಲ್ಲಿ ಉತ್ತರ ಆಫ್ರಿಕದ ಕಾರ್ತೇಜ್‌ ಪಟ್ಟಣವು ರೋಮಿನೊಂದಿಗೆ ಶತಮಾನದಷ್ಟು ದೀರ್ಘಕಾಲದ ಯುದ್ಧಗಳನ್ನು ನಡೆಸಿತ್ತು. ಇದಕ್ಕೆ ‘ಪ್ಯೂನಿಕ್‌ ಯುದ್ಧಗಳು’ ಎಂದು ಹೆಸರು. ಸೇನಾನಿ ಹನಿಬಾಲ್‌ನು ಒಂದು ಸೈನ್ಯವನ್ನು ಸ್ಪೆಯಿನ್‌ನ ಕಾರ್ಟಜಿನ ಪಟ್ಟಣದಲ್ಲಿ ಒಟ್ಟುಗೂಡಿಸಿ ರೋಮಿಗೆ ಮುತ್ತಿಗೆ ಹಾಕಲು ಮುನ್ನಡೆದನು. ಇಂದು ಫ್ರಾನ್ಸ್‌ ಎಂದು ಕರೆಯಲ್ಪಡುವ ದೇಶವನ್ನು ಪ್ರವೇಶಿಸಲಿಕ್ಕಾಗಿ ಪೈರನೀಸ್‌ ಬೆಟ್ಟಪ್ರದೇಶವನ್ನು ಅವನು ಮೊದಲಾಗಿ ದಾಟಿದನು. ಅನಂತರ, ಆರ್ಕಿಯೋಲಾಜಿ ಎಂಬ ಪತ್ರಿಕೆ ಯಾವುದನ್ನು “ಇತಿಹಾಸದಲ್ಲೇ ಅತ್ಯಂತ ಧೀರ ಮಿಲಿಟರಿ ಕಾರ್ಯಾಚರಣೆ” ಎಂದು ಕರೆಯುತ್ತದೋ ಅದರಲ್ಲಿ ಅವನು 25,000 ಸೈನಿಕರೂ 37 ಆಫ್ರಿಕನ್‌ ಆನೆಗಳೂ ಆಹಾರ ಸಂಗ್ರಹಗಳನ್ನು ಹೊತ್ತ ಪ್ರಾಣಿಗಳ ತಂಡಗಳೂ ಇದ್ದ ಸೇನೆಯೊಂದಿಗೆ ಪರ್ವತ ನೆತ್ತಿಗಳನ್ನು ದಾಟಿ ಇಟಲಿಗೆ ಕಾಲಿಟ್ಟನು. ಮೈಕೊರೆಯುವ ಚಳಿ, ಭಾರಿ ಹಿಮಪಾತಗಳು, ಶಿಲಾಪಾತಗಳು, ಬೆಟ್ಟಗುಡ್ಡಗಳ ಶತ್ರುಗಳೇ ಮುಂತಾದವುಗಳನ್ನು ಅವರು ಎದುರಿಸಬೇಕಾಗಿತ್ತು. ಆನೆಗಳಿಗಾದರೋ ಆ ಪ್ರಯಾಣವು ಅತ್ಯಂತ ಪ್ರಯಾಸಕರವಾಗಿತ್ತು. ಎಷ್ಟೆಂದರೆ ಹನಿಬಾಲ್‌ನು ಇಟಲಿಗೆ ಬಂದ ಮೊದಲನೇ ವರ್ಷದಲ್ಲಿ ಅವುಗಳಲ್ಲಿ ಒಂದು ಆನೆಯಾದರೂ ಬದುಕಿ ಉಳಿಯಲಿಲ್ಲ.

[ಕೃಪೆ]

© Look and Learn Magazine Ltd/The Bridgeman Art Library

[ಪುಟ 11ರಲ್ಲಿರುವ ಚಿತ್ರ]

ದಪ್ಪಗಿದ್ದರೂ ನುಣುಪೂ ಸೂಕ್ಷ್ಮಗ್ರಾಹಿಯೂ ಆದ ಚರ್ಮವುಳ್ಳ ಆನೆಯನ್ನು ಮಾವುತನು ತಿಕ್ಕಿ ತಿಕ್ಕಿ ತೊಳೆಯುತ್ತಾನೆ

[ಕೃಪೆ]

© Vidler/mauritius images/age fotostock

[ಪುಟ 10ರಲ್ಲಿರುವ ಚಿತ್ರ ಕೃಪೆ]

© PhotosIndia/age fotostock