ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಥೈರಾಯಿಡ್‌ ಹೇಗಿದೆ?

ನಿಮ್ಮ ಥೈರಾಯಿಡ್‌ ಹೇಗಿದೆ?

ನಿಮ್ಮ ಥೈರಾಯಿಡ್‌ ಹೇಗಿದೆ?

ಬ್ರಸಿಲ್‌ನ  ಎಚ್ಚರ! ಲೇಖಕರಿಂದ

ಸಾರ ಎಂಬಾಕೆ ಗರ್ಭಿಣಿಯಾಗಿ ಮೂರೇ ತಿಂಗಳೊಳಗೆ ಗರ್ಭಸ್ರಾವದಿಂದ ಮಗುವನ್ನು ಕಳಕೊಂಡಳು. ಇದರಿಂದಾದ ಅತೀವ ದುಃಖವನ್ನು ಮರೆಯುವಷ್ಟರಲ್ಲಿ ಒಂದು ವರ್ಷದೊಳಗೆ ಮತ್ತೊಮ್ಮೆ ಗರ್ಭಪಾತ! ಹತ್ತಾರು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿದರೂ ಕಾರಣವೇನೆಂದು ಗೊತ್ತಾಗಲಿಲ್ಲ. ಹಿತಮಿತ ಆಹಾರ ಸೇವಿಸಿ, ಕ್ರಮವಾಗಿ ವ್ಯಾಯಾಮ ಮಾಡುತ್ತಿದ್ದರೂ ವರ್ಷಗಳು ಕಳೆದಂತೆ ಆಕೆಯ ದೇಹ ತೂಕ ಹೆಚ್ಚಾಗತೊಡಗಿತು. ಕಾಲುಸೆಡೆತ ಕೂಡ ಇತ್ತು, ಚಳಿಯನ್ನು ಸ್ವಲ್ಪವೂ ತಡೆದುಕೊಳ್ಳಲು ಆಗುತ್ತಿರಲಿಲ್ಲ. ಕೊನೆಗೆ ರಕ್ತ ಮತ್ತು ಅಲ್ಟ್ರಾಸೌಂಡ್‌ ಪರೀಕ್ಷೆಯಿಂದ ಸಾರಳಿಗೆ ‘ಹಾಶಿಮೋಟೊ ಥೈರಾಡೈಟಿಸ್‌’ ಎಂಬ ಕಾಯಿಲೆಯಿದೆ ಎಂದು ಪತ್ತೆಹಚ್ಚಲಾಯಿತು. ಅವಳಿಗಾದ ಗರ್ಭಪಾತಗಳಿಗೆ ಪ್ರಾಯಶಃ ಇದೇ ಕಾರಣವಾಗಿತ್ತು. *

ಹೆಚ್ಚಿನವರಂತೆ ಸಾರಳು ಕೂಡ ತನ್ನ ಥೈರಾಯಿಡ್‌ ಬಗ್ಗೆ ಯೋಚಿಸಿರಲೇ ಇಲ್ಲ. ಆದರೆ ಹದಗೆಡುತ್ತಿದ್ದ ಆಕೆಯ ಆರೋಗ್ಯವು ಆ ಗ್ರಂಥಿ ಎಷ್ಟು ಮಹತ್ತ್ವದ್ದು ಎಂಬುದನ್ನು ಹೊರಪಡಿಸಿತು.

ಥೈರಾಯಿಡ್‌ ಗ್ರಂಥಿ

ನಮ್ಮ ಕುತ್ತಿಗೆಯ ಮುಂಭಾಗದಲ್ಲಿ ಗಂಟಲ ಮಣಿಯ ಕೆಳಗೆ ಚಿಟ್ಟೆಯಾಕಾರದಲ್ಲಿ ಥೈರಾಯಿಡ್‌ ಎಂಬ ಪುಟ್ಟ ಗ್ರಂಥಿ ಇದೆ. ಈ ಗ್ರಂಥಿಗೆ ಎರಡು ಭಾಗಗಳಿದ್ದು, ಶ್ವಾಸನಾಳವನ್ನು ಸುತ್ತಿಕೊಂಡಿದೆ. ಆ ಇಡೀ ಗ್ರಂಥಿಯ ತೂಕ 30 ಗ್ರಾಮ್‌ಗಳಿಗಿಂತ ಕಡಿಮೆ. ಅದು ನಮ್ಮ ದೇಹದಲ್ಲಿರುವ ನಿರ್ನಾಳ ಗ್ರಂಥಿಗಳ ಅಂದರೆ ಹಾರ್ಮೋನ್‌ಗಳನ್ನು ಉತ್ಪತ್ತಿಮಾಡಿ, ಸಂಗ್ರಹಿಸಿ, ನೇರವಾಗಿ ರಕ್ತಪ್ರವಾಹದೊಳಕ್ಕೆ ಸ್ರವಿಸುವ ಅಂಗಗಳ ಮತ್ತು ಅಂಗಾಂಶಗಳ ಗುಂಪಿಗೆ ಸೇರಿದೆ.

ಥೈರಾಯಿಡ್‌ ಗ್ರಂಥಿಯಲ್ಲಿ ಲೆಕ್ಕವಿಲ್ಲದಷ್ಟು ಅತಿ ಸಣ್ಣ ಸಣ್ಣ ಕೋಶಿಕೆಗಳಿವೆ. ಇವುಗಳಲ್ಲಿ ದಪ್ಪವಾದ ದ್ರವವಿದೆ. ಈ ದ್ರವದಲ್ಲಿ ಥೈರಾಯಿಡ್‌ ಹಾರ್ಮೋನ್‌ಗಳಿವೆ ಮತ್ತು ಇವುಗಳಲ್ಲಿ ಅಧಿಕ ಪ್ರಮಾಣದ ಅಯೋಡಿನ್‌ ಅಂಶ ಇರುತ್ತದೆ. ಇಡೀ ದೇಹದಲ್ಲಿರುವ ಅಯೋಡಿನ್‌ ಅಂಶದಲ್ಲಿ ಸುಮಾರು 80 ಪ್ರತಿಶತ ಥೈರಾಯಿಡ್‌ನಲ್ಲಿರುತ್ತದೆ. ಆಹಾರದಲ್ಲಿ ಅಯೋಡಿನ್‌ ಕೊರತೆ ಇದ್ದಾಗ ಈ ಥೈರಾಯಿಡ್‌ ಗ್ರಂಥಿ ಉಬ್ಬಿಕೊಳ್ಳಬಹುದು ಅಂದರೆ ಗಳಗಂಡ ಕಾಯಿಲೆ ಕಾಣಿಸಿಕೊಳ್ಳಬಹುದು. ಚಿಕ್ಕ ಮಕ್ಕಳಲ್ಲಿ ಅಯೋಡಿನ್‌ ಕೊರತೆಯಿದ್ದಲ್ಲಿ ಥೈರಾಯಿಡ್‌ ಹಾರ್ಮೋನ್‌ಗಳ ಉತ್ಪಾದನೆಗೆ ತಡೆಯುಂಟಾಗಿ ದೈಹಿಕ, ಮಾನಸಿಕ, ಲೈಂಗಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇದನ್ನು ‘ಕ್ರೆಟಿನಿಸಮ್‌’ ಎಂದು ಕರೆಯಲಾಗುತ್ತದೆ.

ಥೈರಾಯಿಡ್‌ ಹಾರ್ಮೋನ್‌ಗಳ ಕಾರ್ಯವೈಖರಿ

ಥೈರಾಯಿಡ್‌ ಹಾರ್ಮೋನ್‌ಗಳನ್ನು ಟಿ-3, ಆರ್‌ಟಿ-3 (ರಿವರ್ಸ್‌ ಟಿ-3) ಮತ್ತು ಟಿ-4 * ಎಂದು ಹೆಸರಿಸಲಾಗಿದೆ. ಟಿ-4 ಎಂಬ ಹಾರ್ಮೋನ್‌ನಿಂದ ಟಿ-3 ಮತ್ತು ಆರ್‌ಟಿ-3 ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತವೆ. ಆದರೆ ಈ ಪರಿವರ್ತನೆಯಾಗುವುದು ಥೈರಾಯಿಡ್‌ ಗ್ರಂಥಿಯ ಹೊರಗೆ ದೇಹದ ಅಂಗಾಂಶಗಳಲ್ಲಿ. ಆದ್ದರಿಂದ ದೇಹಕ್ಕೆ ಹೆಚ್ಚು ಥೈರಾಯಿಡ್‌ ಹಾರ್ಮೋನ್‌ಗಳ ಅಗತ್ಯಬಿದ್ದಾಗ ಥೈರಾಯಿಡ್‌ ಗ್ರಂಥಿಯು ಟಿ-4 ಹಾರ್ಮೋನ್‌ಗಳನ್ನು ರಕ್ತಪ್ರವಾಹಕ್ಕೆ ಸ್ರವಿಸಿ, ಬಳಿಕ ಟಿ-4 ಮತ್ತು ಅದರಿಂದ ಉತ್ಪತ್ತಿಯಾಗುವ ಇತರ ಹಾರ್ಮೋನ್‌ಗಳು ದೇಹಾದ್ಯಂತವಿರುವ ಜೀವಕೋಶಗಳನ್ನು ತಲಪುತ್ತವೆ.

ಥೈರಾಯಿಡ್‌ ಹಾರ್ಮೋನ್‌ಗಳು ದೇಹದ ಚಯಾಪಚಯ ಅಂದರೆ ಶಕ್ತಿ ಮತ್ತು ಹೊಸ ಅಂಗಾಂಶಗಳನ್ನು ಉತ್ಪಾದಿಸುವ ಜೀವಕೋಶಗಳಲ್ಲಿನ ರಾಸಾಯನಿಕ ಕೆಲಸಗಳ ವೇಗವನ್ನು ನಿಯಂತ್ರಿಸುತ್ತವೆ. ಅವು ವಾಹನದ ಇಂಜಿನ್‌ನ ವೇಗವನ್ನು ನಿಯಂತ್ರಿಸುವ ಆಕ್ಸೆಲರೇಟರ್‌ನಂತೆ ಕೆಲಸಮಾಡುತ್ತವೆ. ಹೀಗಾಗಿ ಥೈರಾಯಿಡ್‌ ಹಾರ್ಮೋನ್‌ಗಳು ಅಂಗಾಂಶಗಳ ಸಹಜ ಬೆಳವಣಿಗೆ ಮತ್ತು ದುರಸ್ತಿಗೆ ಕಾರಣವಾಗಿದೆ, ಹೃದಯದಲ್ಲಿ ರಕ್ತ ಪಂಪಾಗುವ ವೇಗವನ್ನು ಪ್ರಭಾವಿಸುತ್ತದೆ, ಸ್ನಾಯುಗಳಿಗೂ ದೇಹದ ಉಷ್ಣತೆಗೂ ಬೇಕಾಗುವ ಶಕ್ತಿಯ ಉತ್ಪಾದನೆಯನ್ನು ನೋಡಿಕೊಳ್ಳುತ್ತದೆ.

ಥೈರಾಯಿಡ್‌ ಹಾರ್ಮೋನ್‌ಗಳು ಇತರ ಪ್ರಾಮುಖ್ಯ ಕೆಲಸಗಳನ್ನೂ ಮಾಡುತ್ತವೆ. ಉದಾಹರಣೆಗೆ, ರಕ್ತಪ್ರವಾಹದಲ್ಲಿರುವ ಅತಿಯಾದ ಟ್ರೈಗ್ಲಿಸರೈಡ್ಸ್‌ ಎಂಬ ಕೊಬ್ಬನ್ನು ಹಾಗೂ ಕಡಿಮೆ ಸಾಂದ್ರತೆಯುಳ್ಳ ಲಿಪೋಪ್ರೋಟಿನ್‌ ಅಂದರೆ ಕೆಟ್ಟ ಕೊಲೆಸ್ಟರಾಲ್‌ ಅನ್ನು ಹೊರಹಾಕಲು ಯಕೃತ್ತಿಗೆ ಸಹಾಯಮಾಡುತ್ತವೆ. ಈ ಕೆಟ್ಟ ಕೊಲೆಸ್ಟರಾಲ್‌ ಪಿತ್ತರಸಕ್ಕೆ ಸೇರಿ ಮಲದ ಮೂಲಕ ದೇಹದಿಂದ ವಿಸರ್ಜನೆಯಾಗುತ್ತದೆ. ಆದರೆ ಥೈರಾಯಿಡ್‌ ಹಾರ್ಮೋನ್‌ ಕಡಿಮೆ ಪ್ರಮಾಣದಲ್ಲಿರುವಾಗ ಕೆಟ್ಟ ಕೊಲೆಸ್ಟರಾಲ್‌ ಅಧಿಕಗೊಂಡು ಹೆಚ್ಚು ಸಾಂದ್ರತೆಯುಳ್ಳ ಲಿಪೋಪ್ರೊಟೀನ್‌ ಅಂದರೆ ಹೃದಯಸ್ನೇಹೀ ಕೊಲೆಸ್ಟರಾಲ್‌ ಕಡಿಮೆಯಾಗುತ್ತದೆ.

ಥೈರಾಯಿಡ್‌ ಹಾರ್ಮೋನ್‌ಗಳು ಹೊಟ್ಟೆ ಮತ್ತು ಕರುಳುಗಳಲ್ಲಿ ಜೀರ್ಣರಸಗಳ ಸ್ರವಿಸುವಿಕೆಯ ವೇಗವನ್ನು ಹಾಗೂ ಆಹಾರವನ್ನು ಮುಂದಕ್ಕೆ ತಳ್ಳಲು ನೆರವಾಗುವ ಸ್ನಾಯುಗಳ ಅಲೆಗಳಂಥ ಚಲನೆಯನ್ನು ಕೂಡ ಹೆಚ್ಚಿಸುತ್ತವೆ. ಆದ್ದರಿಂದ ಥೈರಾಯಿಡ್‌ ಹಾರ್ಮೋನ್‌ಗಳು ಅತಿಯಾದಾಗ ಆಗಾಗ್ಗೆ ಮಲವಿಸರ್ಜನೆ, ಕಡಿಮೆಯಾದಾಗ ಮಲಬದ್ಧತೆ ಉಂಟಾಗುತ್ತದೆ.

ಥೈರಾಯಿಡ್‌ನ ಜುಟ್ಟು ಯಾರ ಕೈಯಲ್ಲಿ?

ಥೈರಾಯಿಡ್‌ ಗ್ರಂಥಿಯನ್ನು ಅಂಕೆಯಲ್ಲಿಡುವುದು ಮಿದುಳಿನ ಮಸ್ತಿಷ್ಕನಿಮ್ನಾಂಗ (ಹೈಪತ್ಯಾಲಮಸ್‌) ಎಂಬ ಭಾಗ. ಇದು ದೇಹಕ್ಕೆ ಥೈರಾಯಿಡ್‌ ಹಾರ್ಮೋನ್‌ಗಳ ಅಗತ್ಯವಿದೆಯೆಂದು ಪತ್ತೆಹಚ್ಚಿದಾಗ ಹತ್ತಿರದಲ್ಲಿರುವ (ಅಂದರೆ ಮಿದುಳಿನ ಬುಡದಲ್ಲಿ ಬಾಯಿಯ ಅಂಗುಳದ ಮೇಲಿರುವ) ಪಿಟ್ಯೂಟರಿ ಗ್ರಂಥಿಗೆ ಸಂದೇಶವನ್ನು ಕಳುಹಿಸುತ್ತದೆ. ಆಗ ಪಿಟ್ಯೂಟರಿ ಗ್ರಂಥಿಯು ಥೈರಾಯಿಡ್‌ ಉತ್ತೇಜಕ ಹಾರ್ಮೋನ್‌ (ಟಿ.ಎಸ್‌.ಎಚ್‌.) ಅನ್ನು ರಕ್ತಪ್ರವಾಹದಲ್ಲಿ ಬಿಡುಗಡೆಮಾಡಿ ಥೈರಾಯಿಡ್‌ ಗ್ರಂಥಿಗೆ ಕೆಲಸ ಶುರುಮಾಡಲು ಹಸಿರು ನಿಶಾನೆ ತೋರಿಸುತ್ತದೆ.

ಆದ್ದರಿಂದ ರಕ್ತದಲ್ಲಿರುವ ಟಿ.ಎಸ್‌.ಎಚ್‌. ಮತ್ತು ಥೈರಾಯಿಡ್‌ ಹಾರ್ಮೋನ್‌ಗಳ ಪ್ರಮಾಣವನ್ನು ಪರೀಕ್ಷಿಸುವ ಮೂಲಕ ವೈದ್ಯರು ಥೈರಾಯಿಡ್‌ ಗ್ರಂಥಿಯ ಕಾರ್ಯಗತಿ ಹಾಗೂ ರೋಗನಿದಾನ ಮಾಡುತ್ತಾರೆ. ಇದನ್ನು ತಿಳಿದುಕೊಳ್ಳುವುದು ಪ್ರಾಮುಖ್ಯ ಏಕೆಂದರೆ ಥೈರಾಯಿಡ್‌ ಸಮಸ್ಯೆಗಳು ಹುಟ್ಟುವ ಸಾಧ್ಯತೆಗಳಿವೆ.

ಥೈರಾಯಿಡ್‌ನ ಅಸೌಖ್ಯಕ್ಕೆ ಕಾರಣ

ಥೈರಾಯಿಡ್‌ನ ಅಸೌಖ್ಯಕ್ಕೆ ಪ್ರಾಯಶಃ ಇವು ಕಾರಣವಾಗಿರುತ್ತವೆ: ಆಹಾರದಲ್ಲಿ ಅಯೋಡಿನ್‌ ಅಭಾವ, ದೈಹಿಕ ಅಥವಾ ಮಾನಸಿಕ ಒತ್ತಡ, ವಂಶವಾಹಿ ದೋಷ, ಸೋಂಕುಗಳು, ಕಾಯಿಲೆ (ಹೆಚ್ಚಾಗಿ ಆಟೋಇಮ್ಯೂನ್‌ ರೋಗ), ಅಥವಾ ಬೇರೆ ಬೇರೆ ಕಾಯಿಲೆಗಳಿಗೆ ಶಿಫಾರಸು ಮಾಡಲಾದ ಔಷಧಿಗಳ ಅಡ್ಡಪರಿಣಾಮಗಳು. * ಥೈರಾಯಿಡ್‌ ಗ್ರಂಥಿ ಊದಿಕೊಳ್ಳುವುದು (ಗಳಗಂಡ) ರೋಗದ ಲಕ್ಷಣವೂ ಆಗಿರಬಹುದು. ಇಡೀ ಗ್ರಂಥಿಯು ಊದಿಕೊಳ್ಳಬಹುದು ಅಥವಾ ಆ ಗ್ರಂಥಿಯಲ್ಲಿ ಸಣ್ಣ ಸಣ್ಣ ಗಂಟುಗಳೂ ಆಗಬಹುದು. ಗಳಗಂಡ ಸಾಮಾನ್ಯವಾಗಿ ಹಾನಿಕರವಲ್ಲವೆಂದು ಕಂಡುಬಂದರೂ ವೈದ್ಯರಿಗೆ ತೋರಿಸಿಕೊಳ್ಳಲೇಬೇಕು. ಏಕೆಂದರೆ ಅದು ಕ್ಯಾನ್ಸರ್‌ನಂಥ ದೊಡ್ಡ ರೋಗದ ಸೂಚನೆಯೂ ಆಗಿರಬಹುದು. *

ಸಾಮಾನ್ಯವಾಗಿ ಥೈರಾಯಿಡ್‌ ಅಸೌಖ್ಯ ಬಿದ್ದಾಗ ಒಂದೊ ಅತಿ ಹೆಚ್ಚು ಇಲ್ಲವೆ ಅತಿ ಕಡಿಮೆ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ. ಅತಿ ಹೆಚ್ಚಿನ ಉತ್ಪಾದನೆಯನ್ನು ಹೈಪರ್‌ಥೈರಾಯಿಡಿಸಂ ಎನ್ನುತ್ತಾರೆ; ಅತಿ ಕಡಿಮೆ ಉತ್ಪಾದನೆಯನ್ನು ಹೈಪೊಥೈರಾಯಿಡಿಸಂ ಎನ್ನುತ್ತಾರೆ. ಥೈರಾಯಿಡ್‌ ರೋಗವು ಆಮೆಗತಿಯಲ್ಲಿ ಮತ್ತು ಗೊತ್ತಾಗದಂಥ ರೀತಿಯಲ್ಲಿ ಬರುವ ಕಾರಣ ಆ ರೋಗ ಅನೇಕ ವರ್ಷಗಳಿಂದ ಇದ್ದರೂ ಗೊತ್ತೇ ಆಗಲಿಕ್ಕಿಲ್ಲ. ಹೆಚ್ಚಿನ ಕಾಯಿಲೆಗಳ ವಿಷಯದಲ್ಲಿ ಸತ್ಯವಾಗಿರುವಂತೆ ಇದನ್ನೂ ಆರಂಭದಲ್ಲೇ ಪತ್ತೆಹಚ್ಚಿದರೆ ಗುಣಪಡಿಸಬಹುದು.

ಸರ್ವಸಾಮಾನ್ಯ ಥೈರಾಯಿಡ್‌ ವ್ಯಾಧಿಗಳೆಂದರೆ ‘ಹಾಶಿಮೋಟೊ ಥೈರಾಡೈಟಿಸ್‌’ ಮತ್ತು ‘ಗ್ರೇವ್ಸ್‌ ರೋಗ.’ ಇವೆರಡನ್ನೂ ಆಟೋಇಮ್ಯೂನ್‌ ರೋಗಗಳೆಂದು ಕರೆಯಲಾಗುತ್ತದೆ. ಇಂಥ ರೋಗವಿರುವವರಲ್ಲಿ ದೇಹದಲ್ಲಿರುವ ರೋಗನಿರೋಧಕ ರಕ್ಷಣಾ ವ್ಯವಸ್ಥೆಯು ಒಳ್ಳೇ ಜೀವಕೋಶಗಳನ್ನು ಪರಕೀಯ ಅಂಗಾಂಶಗಳೆಂದು ಎಣಿಸಿ ಅವುಗಳ ಮೇಲೆ ದಾಳಿಮಾಡುತ್ತದೆ. ‘ಹಾಶಿಮೋಟೊ ಥೈರಾಡೈಟಿಸ್‌’ ರೋಗವಿರುವ ಸ್ತ್ರೀಯರ ಸಂಖ್ಯೆ ಪುರುಷರ ಸಂಖ್ಯೆಗಿಂತ ಆರು ಪಟ್ಟು ಹೆಚ್ಚಾಗಿರುತ್ತದೆ. ಇದರಿಂದ ಸಾಮಾನ್ಯವಾಗಿ ಹೈಪೊಥೈರಾಯಿಡಿಸಂ ಕಾಣಿಸಿಕೊಳ್ಳುತ್ತದೆ. ಗ್ರೇವ್ಸ್‌ ರೋಗವಿರುವ ಸ್ತ್ರೀಯರ ಸಂಖ್ಯೆ ಪುರುಷರಿಗಿಂತ ಎಂಟು ಪಟ್ಟು ಹೆಚ್ಚಿರುತ್ತದೆ. ಇದರಿಂದ ಸಾಮಾನ್ಯವಾಗಿ ಹೈಪರ್‌ಥೈರಾಯಿಡಿಸಂ ಕಾಣಿಸಿಕೊಳ್ಳುತ್ತದೆ.

ಥೈರಾಯಿಡ್‌ ರೋಗ ಪರೀಕ್ಷೆ ಎಷ್ಟೆಷ್ಟು ಸಮಯಕ್ಕೆ ಮಾಡಿಸಬೇಕೆಂಬ ವಿಷಯದಲ್ಲಿ ಭಿನ್ನ ಅಭಿಪ್ರಾಯಗಳಿವೆ. ಆದರೆ ನವಜಾತ ಶಿಶುಗಳಿಗೆ ಈ ಪರೀಕ್ಷೆ ಮಾಡಿಸುವುದು ಅತಿ ಮಹತ್ತ್ವವೆಂದು ಕಂಡುಕೊಳ್ಳಲಾಗಿದೆ. (“ನವಜಾತ ಶಿಶುಗಳಿಗೆ ಬೇಕು ಈ ಪರೀಕ್ಷೆ” ಚೌಕ ನೋಡಿ.) ಥೈರಾಯಿಡ್‌ ಗ್ರಂಥಿಯು ಹಾರ್ಮೋನ್‌ಗಳನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸುತ್ತಿದೆಯೆಂದು ವೈದ್ಯಕೀಯ ತಪಾಸಣೆಯಿಂದ ತಿಳಿದುಬಂದರೆ, ಆ ಗ್ರಂಥಿಯ ಮೇಲೆ ದಾಳಿಮಾಡುತ್ತಿರುವ ಪ್ರತಿಕಾಯಗಳಿವೆಯೋ ಎಂದು ಪರೀಕ್ಷೆಮಾಡಿಸುವಂತೆ ವೈದ್ಯರು ಸಾಮಾನ್ಯವಾಗಿ ಹೇಳುತ್ತಾರೆ. ಥೈರಾಯಿಡ್‌ ಗ್ರಂಥಿಯು ಮಿತಿಮೀರಿ ಹಾರ್ಮೋನ್‌ ಉತ್ಪಾದಿಸುತ್ತಿದೆಯೆಂದು ತಪಾಸಣೆಯಲ್ಲಿ ತಿಳಿದುಬಂದರೆ ಗರ್ಭಿಣಿಯರು ಅಥವಾ ಹಾಲುಣಿಸುವ ತಾಯಂದಿರನ್ನು ಹೊರತುಪಡಿಸಿ ಇತರರಿಗೆ ಥೈರಾಯಿಡ್‌ನ ಸ್ಕಾನ್‌ ಮಾಡಿಸುವಂತೆ ವೈದ್ಯರು ಹೇಳುತ್ತಾರೆ. ಥೈರಾಯಿಡ್‌ ಗ್ರಂಥಿಯಲ್ಲಿ ಸಣ್ಣ ಸಣ್ಣ ಗಂಟುಗಳಿರುವಲ್ಲಿ ಅವು ಹರಡಿಕೊಳ್ಳುತ್ತಿಲ್ಲ ಎಂಬುದನ್ನು ಖಚಿತಪಡಿಸಲು ಬೈಆಪ್ಸಿ (ಅಂಗಾಂಶ ಪರೀಕ್ಷೆ) ಮಾಡಿಸುತ್ತಾರೆ.

ಚಿಕಿತ್ಸೆ ಅಗತ್ಯವಿರುವಾಗ

ಹೈಪರ್‌ಥೈರಾಯಿಡಿಸಂನ ಲಕ್ಷಣಗಳಾದ ತೀವ್ರ ಎದೆಬಡಿತ, ಸ್ನಾಯು ಕಂಪನ, ಕಳವಳ ಇತ್ಯಾದಿಗಳು ಔಷಧೋಪಚಾರದಿಂದ ಕಡಿಮೆಯಾಗಬಲ್ಲವು. ಬೇರೆ ಚಿಕಿತ್ಸೆಯಲ್ಲಿ, ಹಾರ್ಮೋನ್‌ಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಥೈರಾಯಿಡ್‌ ಜೀವಕೋಶಗಳನ್ನು ನಾಶಪಡಿಸಲಾಗುತ್ತದೆ. ಕೆಲವೊಮ್ಮೆಯಂತೂ ಶಸ್ತ್ರಕ್ರಿಯೆ ಮೂಲಕ ಥೈರಾಯಿಡ್‌ ಗ್ರಂಥಿಯನ್ನೇ ತೆಗೆದುಹಾಕಬೇಕಾದೀತು.

ಹೈಪೊಥೈರಾಯಿಡಿಸಂ ಇರುವವರಿಗೆ ಅಥವಾ ಥೈರಾಯಿಡ್‌ ಗ್ರಂಥಿಯನ್ನು ತೆಗೆಸಿಕೊಂಡವರಿಗೆ ವೈದ್ಯರು ಸಾಮಾನ್ಯವಾಗಿ ಪ್ರತಿದಿನ ಟಿ-4 ಹಾರ್ಮೋನ್‌ ಇರುವ ಔಷಧಿಯನ್ನು ಸೇವಿಸಲು ಹೇಳುತ್ತಾರೆ. ಔಷಧಿಯ ಪ್ರಮಾಣ ಸರಿಯಾಗಿರುವಂತೆ ನೋಡಿಕೊಳ್ಳಲು ವೈದ್ಯರು ರೋಗಿಗಳ ಮೇಲೆ ಹೆಚ್ಚು ನಿಗಾವಹಿಸುತ್ತಾರೆ. ಥೈರಾಯಿಡ್‌ ಗ್ರಂಥಿಯ ಕ್ಯಾನ್ಸರ್‌ಗಾಗಿ ಔಷಧ, ಶಸ್ತ್ರಕ್ರಿಯೆ, ಕಿಮೋಥೆರಪಿ, ವಿಕಿರಣ ಶಕ್ತಿಯ ಅಯೋಡಿನ್‌ ಸೇರಿಸಿ ಹಲವಾರು ವಿಧಗಳಲ್ಲಿ ಚಿಕಿತ್ಸೆ ನೀಡಸಾಧ್ಯ.

ಆರಂಭದಲ್ಲಿ ತಿಳಿಸಲಾದ ಸಾರಳು, ಟಿ-4ರ ಹಾರ್ಮೋನ್‌ ಬದಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಮತ್ತು ಸಂತುಲಿತ ಆಹಾರ ಸೇವನೆಗೆ ಪೋಷಣಾ ತಜ್ಞೆಯೊಬ್ಬರು ನೆರವು ನೀಡಿದ್ದಾರೆ. ಫಲಿತಾಂಶ ಒಳ್ಳೇದಾಗಿದೆ. ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬಂತೆ ಪುಟ್ಟ ಥೈರಾಯಿಡ್‌ ಗ್ರಂಥಿಯ ಮಹತ್ತ್ವವನ್ನು ಸಾರಳಂತೆ ಅನೇಕ ಜನರು ಗ್ರಹಿಸಿದ್ದಾರೆ. ಆದ್ದರಿಂದ ನಿಮ್ಮ ಥೈರಾಯಿಡ್‌ ಅನ್ನು ಚೆನ್ನಾಗಿ ನೋಡಿಕೊಳ್ಳಿ. ಸಾಕಷ್ಟು ಅಯೋಡಿನ್‌ ಇರುವ ಸಂಪೂರ್ಣ ಆಹಾರ ಸೇವಿಸಿ. ದೀರ್ಘಕಾಲದ ಒತ್ತಡವನ್ನು ವರ್ಜಿಸಿರಿ. ಒಳ್ಳೇ ಆರೋಗ್ಯ ಕಾಪಾಡಿಕೊಳ್ಳಲು ನಿಮ್ಮಿಂದಾದಷ್ಟನ್ನು ಮಾಡಿ. (g09-E 05)

[ಪಾದಟಿಪ್ಪಣಿಗಳು]

^ ಥೈರಾಯಿಡ್‌ ಗ್ರಂಥಿ ತನ್ನ ಕೆಲಸವನ್ನು ಕಡಿಮೆ ಪ್ರಮಾಣದಲ್ಲಿ ಮಾಡಿದಾಗ ಗರ್ಭಿಣಿಯರಿಗೆ ಸಮಸ್ಯೆಗಳು ಉಂಟಾಗುತ್ತವಾದರೂ ಥೈರಾಯಿಡ್‌ ತೊಂದರೆಯಿರುವ ಹೆಚ್ಚಿನ ಮಹಿಳೆಯರು ಆರೋಗ್ಯವಂತ ಶಿಶುಗಳಿಗೆ ಜನ್ಮಕೊಡುತ್ತಾರೆ. ಆದರೆ ತಾಯಿಯು ಹಾರ್ಮೋನ್‌ ಬದಲಿ ಚಿಕಿತ್ಸೆ ಪಡೆಯುವುದು ಅತ್ಯಂತ ಪ್ರಾಮುಖ್ಯ. ಏಕೆಂದರೆ ಗರ್ಭದಲ್ಲಿರುವ ಶಿಶುವಿಗೆ ಆರಂಭದಲ್ಲಿ ಥೈರಾಯಿಡ್‌ ಹಾರ್ಮೋನ್‌ ಸಿಗುವುದು ತಾಯಿಯ ಮೂಲಕ ಮಾತ್ರ.

^ ಟಿ-3 ಅಂದರೆ ಟ್ರೈಅಯಡೋಥೈರೊನಿನ್‌. ಟಿ-4 ಅಂದರೆ ಥೈರಾಕ್ಸಿನ್‌. 3 ಮತ್ತು 4 ಎಂಬ ಸಂಖ್ಯೆಗಳು ಆ ಹಾರ್ಮೋನಿನಲ್ಲಿರುವ ಅಯೋಡಿನ್‌ ಪರಮಾಣುಗಳ ಸಂಖ್ಯೆಯನ್ನು ಸೂಚಿಸುತ್ತವೆ. ಥೈರಾಯಿಡ್‌ ಗ್ರಂಥಿ ಕ್ಯಾಲ್ಸಿಟೊನಿನ್‌ ಎಂಬ ಹಾರ್ಮೋನ್‌ ಅನ್ನೂ ಉತ್ಪಾದಿಸುತ್ತದೆ. ಈ ಹಾರ್ಮೋನ್‌ ರಕ್ತದಲ್ಲಿರುವ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ.

^ ಎಚ್ಚರ! ಪತ್ರಿಕೆಯು ಯಾವುದೇ ನಿರ್ದಿಷ್ಟ ಚಿಕಿತ್ಸೆಯನ್ನು ಶಿಫಾರಸು ಮಾಡುವುದಿಲ್ಲ. ಥೈರಾಯಿಡ್‌ ಸಮಸ್ಯೆಗಳಿರಬಹುದೆಂದು ನಿಮಗೆ ಸಂಶಯವಿದ್ದರೆ ಆ ರೋಗದ ತಡೆಗಟ್ಟುವಿಕೆ ಮತ್ತು ನಿಯಂತ್ರಿಸುವಿಕೆಯಲ್ಲಿ ಅನುಭವವಿರುವ ವೈದ್ಯರನ್ನು ಭೇಟಿಮಾಡಿ.

^ ತಲೆ ಮತ್ತು ಕುತ್ತಿಗೆಯಲ್ಲಿ ರೇಡಿಓಥೆರಪಿ (ವಿಕಿರಣಗಳ ಚಿಕಿತ್ಸೆ) ಪಡೆದವರಿಗೆ, ಹಿಂದೆ ಕ್ಯಾನ್ಸರ್‌ ಇದ್ದವರಿಗೆ ಅಥವಾ ಥೈರಾಯಿಡ್‌ ಕ್ಯಾನ್ಸರ್‌ಪೀಡಿತ ಸಂಬಂಧಿಕರಿರುವವರಿಗೆ ಥೈರಾಯಿಡ್‌ ಕ್ಯಾನ್ಸರ್‌ ಬರುವ ಅಪಾಯ ಹೆಚ್ಚು.

[ಪುಟ 23ರಲ್ಲಿರುವ ಸಂಕ್ಷಿಪ್ತ ವಿವರಣೆ]

ವಾಹನದ ಇಂಜಿನ್‌ನ ವೇಗವನ್ನು ನಿಯಂತ್ರಿಸುವ ಆಕ್ಸೆಲರೇಟರ್‌ನಂತೆ ಥೈರಾಯಿಡ್‌ ಹಾರ್ಮೋನ್‌ಗಳು ದೇಹದ ಚಯಾಪಚಯ ಕೆಲಸಗಳ ವೇಗವನ್ನು ನಿಯಂತ್ರಿಸುತ್ತವೆ

[ಪುಟ 25ರಲ್ಲಿರುವ ಸಂಕ್ಷಿಪ್ತ ವಿವರಣೆ]

ಥೈರಾಯಿಡ್‌ ರೋಗವು ಆಮೆಗತಿಯಲ್ಲಿ ಮತ್ತು ಗೊತ್ತಾಗದಂಥ ರೀತಿಯಲ್ಲಿ ಬರುವ ಕಾರಣ ಆ ರೋಗ ಅನೇಕ ವರ್ಷಗಳಿಂದ ಇದ್ದರೂ ಗೊತ್ತೇ ಆಗಲಿಕ್ಕಿಲ್ಲ

[ಪುಟ 24ರಲ್ಲಿರುವ ಚೌಕ/ಚಿತ್ರ]

ಸಾಮಾನ್ಯ ರೋಗಲಕ್ಷಣಗಳು

ಹೈಪರ್‌ಥೈರಾಯಿಡಿಸಂ: ತೀವ್ರ ಚಡಪಡಿಕೆ, ಕಾರಣವಿಲ್ಲದೆ ತೂಕ ನಷ್ಟ, ತೀವ್ರ ಎದೆಬಡಿತ, ಆಗಾಗ್ಗೆ ಮಲವಿಸರ್ಜನೆ, ಹೆಂಗಸರಲ್ಲಿ ಕ್ರಮತಪ್ಪಿದ ಋತುಸ್ರಾವ, ಕಿರಿಕಿರಿ, ಕಳವಳ, ಮನಃಸ್ಥಿತಿಯಲ್ಲಿ ಏರುಪೇರು, ಮುಂಚಾಚಿರುವ ಕಣ್ಣುಗುಡ್ಡೆಗಳು, ಸ್ನಾಯು ದೌರ್ಬಲ್ಯ, ನಿದ್ರಾಹೀನತೆ ಮತ್ತು ಕೂದಲು ತೆಳ್ಳಗಾಗಿ ಬೇಗನೆ ಒಡೆಯುವುದು. *

ಹೈಪೊಥೈರಾಯಿಡಿಸಂ: ದೈಹಿಕ ಮತ್ತು ಮಾನಸಿಕ ಆಲಸ್ಯ, ಕಾರಣವಿಲ್ಲದೆ ತೂಕ ಹೆಚ್ಚಳ, ಕೂದಲು ಉದುರುವಿಕೆ, ಮಲಬದ್ಧತೆ, ಚಳಿಯನ್ನು ಸ್ವಲ್ಪವೂ ತಡೆದುಕೊಳ್ಳಲು ಆಗದಿರುವುದು, ಹೆಂಗಸರಲ್ಲಿ ಕ್ರಮತಪ್ಪಿದ ಋತುಸ್ರಾವ, ಖಿನ್ನತೆ, ಧ್ವನಿ ಬದಲಾವಣೆ (ಗೊಗ್ಗರು ಅಥವಾ ತಗ್ಗು ಧ್ವನಿ), ಮರೆವು, ಆಯಾಸ.

[ಪಾದಟಿಪ್ಪಣಿ]

^ ಕೆಲವು ಲಕ್ಷಣಗಳಿಗೆ ಬೇರೆ ಕಾರಣಗಳೂ ಇರಬಹುದಾದ್ದರಿಂದ ಥೈರಾಯಿಡ್‌ ಸಮಸ್ಯೆಯಿದೆಯೋ ಎಂದು ಖಚಿತಪಡಿಸಲು ವೈದ್ಯರ ಬಳಿ ಹೋಗಿ.

[ಪುಟ 24ರಲ್ಲಿರುವ ಚೌಕ]

ನವಜಾತ ಶಿಶುಗಳಿಗೆ ಬೇಕು ಈ ಪರೀಕ್ಷೆ

ನವಜಾತ ಶಿಶುವಿನಿಂದ ಕೆಲವು ತೊಟ್ಟು ರಕ್ತವನ್ನು ತೆಗೆದು ಥೈರಾಯಿಡ್‌ ತೊಂದರೆ ಇದೆಯೋ ಎಂದು ಪರೀಕ್ಷಿಸಲಾಗುತ್ತದೆ. ರಕ್ತ ಪರೀಕ್ಷೆಯಿಂದ ಸಮಸ್ಯೆಯಿರುವುದು ಕಂಡುಬಂದರೆ ವೈದ್ಯರು ಅದನ್ನು ಸರಿಪಡಿಸಲು ಕ್ರಮತಕ್ಕೊಳ್ಳಬಹುದು. ಒಂದುವೇಳೆ ಶಿಶುವಿನಲ್ಲಿ ಸಾಕಷ್ಟು ಥೈರಾಯಿಡ್‌ ಹಾರ್ಮೋನ್‌ಗಳಿಲ್ಲದಿದ್ದಲ್ಲಿ ಅದರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇದನ್ನು ಕ್ರೆಟಿನಿಸಮ್‌ ಎಂದು ಕರೆಯಲಾಗುತ್ತದೆ. ಆದ್ದರಿಂದ ಮಗು ಹುಟ್ಟಿ ಕೆಲವೇ ದಿನಗಳ ಬಳಿಕ ಸಾಮಾನ್ಯವಾಗಿ ಈ ಪರೀಕ್ಷೆ ಮಾಡಲಾಗುತ್ತದೆ.

[ಪುಟ 25ರಲ್ಲಿರುವ ಚೌಕ/ಚಿತ್ರ]

ನಿಮ್ಮ ಆಹಾರದಲ್ಲಿ ಆವಶ್ಯಕ ಪೌಷ್ಟಿಕಾಂಶಗಳಿವೆಯೋ?

ಸರಿಯಾದ ಪೌಷ್ಟಿಕಾಂಶವುಳ್ಳ ಆಹಾರವು ಥೈರಾಯಿಡ್‌ ಸಮಸ್ಯೆಗಳನ್ನು ತಡೆಯಬಲ್ಲದು. ಉದಾಹರಣೆಗೆ, ಥೈರಾಯಿಡ್‌ ಹಾರ್ಮೋನ್‌ಗಳ ಉತ್ಪಾದನೆಗೆ ಅತ್ಯಗತ್ಯವಾದ ಅಯೋಡಿನ್‌ ಅಂಶ ನೀವು ಸೇವಿಸುವ ಆಹಾರದಲ್ಲಿ ಸಾಕಷ್ಟಿದೆಯೋ? ಉಪ್ಪುನೀರಿನ ಮೀನು, ಕಡಲ ಆಹಾರ ಆಯೋಡಿನ್‌ನ ಕಣಜ. ಆಯಾ ಪ್ರದೇಶದ ಮಣ್ಣಿಗನುಸಾರ ತರಕಾರಿ ಹಾಗೂ ಮಾಂಸಗಳಲ್ಲಿ ಅಯೋಡಿನ್‌ನ ಪ್ರಮಾಣ ವ್ಯತ್ಯಾಸವಾಗಿರುತ್ತದೆ. ಆಹಾರದಲ್ಲಿ ಅಯೋಡಿನ್‌ನ ಕೊರತೆಯನ್ನು ಸರಿದೂಗಿಸಲು ಕೆಲವು ಸರ್ಕಾರಗಳು ಅಯೋಡಿನ್‌ಯುಕ್ತ ಉಪ್ಪಿನ ತಯಾರಿಕೆಯನ್ನು ಆದೇಶಿಸಿವೆ.

ಥೈರಾಯಿಡ್‌ ಗ್ರಂಥಿಗೆ ಸೆಲೀನಿಯಮ್‌ ಕೂಡ ಅಗತ್ಯವಾಗಿ ಬೇಕು. ಈ ಲೇಶಧಾತು ಟಿ-4ನ್ನು ಟಿ-3 ಆಗಿ ಪರಿವರ್ತಿಸುವ ಕಿಣ್ವದಲ್ಲಿದೆ. ಆಯಾ ಮಣ್ಣಿಗೆ ಹೊಂದಿಕೆಯಲ್ಲಿ ತರಕಾರಿ, ಮಾಂಸ, ಹಾಲಿನಲ್ಲಿ ಸೆಲೀನಿಯಮ್‌ ಪ್ರಮಾಣ ಸಹ ಭಿನ್ನವಾಗಿರುತ್ತದೆ. ಕಡಲ ಆಹಾರ, ಮಾಂಸ ಮತ್ತು ಧಾನ್ಯಗಳಲ್ಲಿ ಸೆಲೀನಿಯಮ್‌ ಸಮೃದ್ಧವಾಗಿರುತ್ತದೆ. ನಿಮಗೆ ಥೈರಾಯಿಡ್‌ ಸಮಸ್ಯೆಯಿದೆ ಎಂಬ ಶಂಕೆಯಿರುವಲ್ಲಿ ನೀವೇ ಮದ್ದು ಮಾಡಲು ಪ್ರಯತ್ನಿಸಬೇಡಿ, ವೈದ್ಯರನ್ನು ಸಂಪರ್ಕಿಸಿರಿ.

[ಪುಟ 24ರಲ್ಲಿರುವ ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಶ್ವಾಸನಾಳ

ಧ್ವನಿಪೆಟ್ಟಿಗೆ (ಗಂಟಲ ಮಣಿ)

ಥೈರಾಯಿಡ್‌

ಶ್ವಾಸನಾಳ