ಗರ್ಭಪಾತಕ್ಕೆ ನಾವು ಒಪ್ಪಲಿಲ್ಲ
ಗರ್ಭಪಾತಕ್ಕೆ ನಾವು ಒಪ್ಪಲಿಲ್ಲ
‘ಗರ್ಭಪಾತಕ್ಕೆ ನಾನು ಒಪ್ಪುವುದೇ ಇಲ್ಲ’ ಎಂದಳು ವಿಕ್ಟೋರಿಯ ತನ್ನ ಬಾಯ್‌ಫ್ರೆಂಡ್ ಬಿಲ್‌ಗೆ. “ನನ್ನ ಒಡಲಲ್ಲೊಂದು ಜೀವ ಇದೆ ಎಂದನಿಸಿತ್ತು ನನಗೆ. ಬಿಲ್‌ನೊಂದಿಗೆ ಉಳಿದಲ್ಲಿ ಈ ನಾಜೂಕು ಸ್ಥಿತಿಯಲ್ಲಿ ನನ್ನ ಆರೈಕೆಮಾಡನು ಎಂದೆಣಿಸಿ ನಾನವನನ್ನು ಬಿಟ್ಟುಹೋದೆ.”
ಆದರೂ ಸ್ವಲ್ಪ ಸಮಯದ ಬಳಿಕ ಬಿಲ್ ತನ್ನ ಮನಸ್ಸನ್ನು ಬದಲಾಯಿಸಿದ. ತನ್ನನ್ನು ಮದುವೆಯಾಗುವಂತೆ ವಿಕ್ಟೋರಿಯಳನ್ನು ಕೇಳಿದ. ಆದರೆ ತಮ್ಮ ಹೊಸ ಮಗುವಿನ ಪರಿಪಾಲನೆ ಮಾಡುವುದು ಅವರಿಗೆ ಕಷ್ಟಸಾಧ್ಯವೆನಿಸಿತು. “ನಮ್ಮ ಹತ್ರ ಹಣವಿರಲಿಲ್ಲ, ಹೆಚ್ಚು ಬಟ್ಟೆಬರೆಗಳಿರಲಿಲ್ಲ, ಇದ್ದದ್ದು ಎಲ್ಲವೂ ಅಲ್ಪಸ್ವಲ್ಪ. ಬಿಲ್‌ಗೆ ಬರುತ್ತಿದ್ದ ಸಂಬಳವೂ ಕಡಿಮೆ, ಬಡತನದ ಕೇರಿಯಲ್ಲಿ ವಾಸಿಸುತ್ತಿದ್ದೆವು, ಆದರೂ ಬಿಟ್ಟುಕೊಡಲಿಲ್ಲ” ಎನ್ನುತ್ತಾಳೆ ವಿಕ್ಟೋರಿಯ.
ಬಯಸದ ಬಸಿರಿನ ಕಾರಣದಿಂದಾಗಿ ಇತರರು ಸಹ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ. ಆದರೂ ಅವರು ಗರ್ಭಪಾತಮಾಡಲು ನಿರಾಕರಿಸಿದ್ದಾರೆ. ಅಷ್ಟು ದೃಢತೆಯಿಂದ ನಿರಾಕರಿಸುವಂತೆ ಮಾಡಿದ್ದು ಯಾವುದು? ಅಯೋಜಿತ ಅಥವಾ ಬೇಡವಾದ ಮಗುವನ್ನೂ ಬೆಳೆಸುವ ಒತ್ತಡವನ್ನು ನಿಭಾಯಿಸಲು ಹೇಗೆ ಅವರಿಗೆ ಸಾಧ್ಯವಾಯಿತು? ಅದರ ಒಳಗುಟ್ಟು ಬೈಬಲಿನ ವಿವೇಕದ ನುಡಿಮುತ್ತುಗಳನ್ನು ಅನ್ವಯಿಸಿದ್ದೇ.
ದುಡುಕಬೇಡಿ—ವ್ಯಾವಹಾರಿಕವಾಗಿ ಯೋಜಿಸಿ
“ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ; ಆತುರಪಡುವವರಿಗೆಲ್ಲಾ ಕೊರತೆಯೇ” ಎನ್ನುತ್ತದೆ ಬೈಬಲಿನ ವಿವೇಕದ ನುಡಿಮುತ್ತು.—ಜ್ಞಾನೋಕ್ತಿ 21:5.
ಕಾನೀ ಎಂಬಾಕೆಗೆ ಮೂರು ಗಂಡುಮಕ್ಕಳು. ಅದರಲ್ಲೂ ಒಂದು ಮಗು ಅಂಗವಿಕಲ. ಇದರ ಮೇಲೆ ಇನ್ನೊಂದು ಮಗು ಹುಟ್ಟಿದರಂತೂ ಕಂಗೆಟ್ಟು ಹೋಗುವ ಸ್ಥಿತಿ. “ಬೇಡವೇ ಬೇಡ ಎಂದೆಣಿಸಿತು, ಆದ್ದರಿಂದ ಗರ್ಭಪಾತ ಮಾಡಿಸುವುದೇ ಲೇಸು ಎಂದು ನಿರ್ಣಯಿಸಿದೆವು” ಎಂದಳು ಕಾನೀ. ಆದರೆ ದುಡುಕಿ ಹಾಗೆ ಮಾಡುವ ಬದಲು ಸಹೋದ್ಯೋಗಿ ಕೇ ಎಂಬವಳೊಂದಿಗೆ ಅಂತರಂಗವನ್ನು ಹೇಳಿಕೊಂಡಳು. ಕಾನೀಯ ಗರ್ಭದಲ್ಲಿ ಸಜೀವ ಜೀವವೇ ಇದೆ ಎಂಬ ವಾಸ್ತವಾಂಶವನ್ನು ಕೇ ವಿವರಿಸಿದಾಗ ಅವಳ ಯೋಚನೆ ಬದಲಾಯಿತು.
ಯೋಜನೆ ಮಾಡಲು ವ್ಯಾವಹಾರಿಕ ಸಹಾಯ ಕಾನೀಗೆ ಬೇಕಿತ್ತು. ಕಾನೀಯ ದೊಡ್ಡಮ್ಮನ ಮನೆ ಸಮೀಪದಲ್ಲೇ ಇದ್ದದರಿಂದ ಅವರನ್ನು ಸಂಪರ್ಕಿಸುವಂತೆ ಕೇ ಸೂಚಿಸಿದಳು. ದೊಡ್ಡಮ್ಮ ಸಹಾಯಮಾಡಲು ಮುಂದಾದಳು. ಅಷ್ಟಲ್ಲದೆ ಕಾನೀಯ ಗಂಡ ಎರಡು ಕಡೆ ಕೆಲಸ ಮಾಡತೊಡಗಿದ, ಚಿಕ್ಕ ಮನೆಗೆ ಬದಲಾಯಿಸಿದರು. ಹೀಗೆ ಅವರು ಇನ್ನೊಂದು ಮಗುವನ್ನು ಸಾಕಲು ತಯಾರಾದರು.
ಅನಿರೀಕ್ಷಿತ ಗರ್ಭಧಾರಣೆ ಹೊಂದುವ ಮಹಿಳೆಯರಿಗೆ ಸಹಾಯ ಕೊಡುವ ಕೆಲವು ಏಜೆನ್ಸಿಗಳನ್ನು ಕಂಡುಹಿಡಿಯಲು ಸಹ ಕೇ ಕಾನೀಗೆ ನೆರವಾದಳು. ಸಹಾಯ ಬೇಕಾದ ಬಾಣಂತಿಯರಿಗೆ ಈ ರೀತಿ ನೆರವು ನೀಡುವಂಥ ಏಜೆನ್ಸಿಗಳು ಅನೇಕ ದೇಶಗಳಲ್ಲಿವೆ. ಸಾಮಾನ್ಯವಾಗಿ ಲೈಬ್ರರಿಗಳಲ್ಲಿರುವ ಇಂಟರ್‌ನೆಟ್ ಅಥವಾ ಸ್ಥಳಿಕ ಫೋನ್ ಡೈರೆಕ್ಟರಿಗಳಲ್ಲಿ ಅವುಗಳ ವಿಳಾಸಗಳನ್ನು ಕಂಡುಕೊಳ್ಳಬಹುದು. ಸಹಾಯವನ್ನು ಕೋರಲು ಹೆಚ್ಚು ಪ್ರಯತ್ನ ಪಡಬೇಕಾದೀತು. ಆದರೆ ‘ಶ್ರಮಶೀಲರ ಯತ್ನಗಳಿಂದ’ ಸಾಫಲ್ಯ ಖಚಿತ.
ಸಜೀವ ಜೀವವೇ ಗರ್ಭದಲ್ಲಿ
“ಜ್ಞಾನಿಯ ಕಣ್ಣು ಅವನ ತಲೆಯಲ್ಲಿರುವದು, ಮೂಢನು ಕತ್ತಲಲ್ಲಿ ನಡೆಯುವನು” ಎನ್ನುತ್ತದೆ ಬೈಬಲ್.—ಪ್ರಸಂಗಿ 2:14.
ನಿಜವಾಗಿ ಜ್ಞಾನಿಯಾದ ಸ್ತ್ರೀ ನಿಜ ಸಂಗತಿಗೆ ಕಣ್ಮುಚ್ಚಿಕೊಂಡಿರುವುದಿಲ್ಲ ಅಂದರೆ ‘ಕತ್ತಲಲ್ಲಿಯೋ’ ಎಂಬಂತೆ ನಡೆಯುವುದಿಲ್ಲ. ಅವಳು ತನ್ನ ‘ತಲೆಯಲ್ಲಿರುವ ಕಣ್ಣುಗಳನ್ನು’ ಉಪಯೋಗಿಸುವಳು, ಅವು ಕಾರ್ಯತಃ ಆಕೆ ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸುವಂತೆ ನೆರವಾಗುವವು. ಇದು ಅವಳಿಗೆ ತನ್ನ ಕ್ರಿಯೆಗಳ ಫಲಿತಾಂಶಗಳನ್ನು ನಿಖರವಾಗಿ ತೂಗಿನೋಡಲು ಸಾಧ್ಯಮಾಡುತ್ತದೆ. ಹೀಗೆ ಗರ್ಭದಲ್ಲಿ ಏನು ಸಂಭವಿಸುತ್ತಿದೆ ಎಂಬ ವಾಸ್ತವಿಕತೆಗೆ ಕಣ್ಮುಚ್ಚುವವರಿಗೆ ವ್ಯತಿರಿಕ್ತವಾಗಿ ಜ್ಞಾನವಂತೆಯಾದರೋ ತನ್ನ ಗರ್ಭದಲ್ಲಿರುವ ಜೀವಂತ ಭ್ರೂಣವನ್ನು ಕಾಪಾಡಲು ಮನಃಪೂರ್ವಕ ಕನಿಕರದಿಂದ ಕ್ರಿಯೆಗೈಯುವಳು.
ಸ್ಟೆಫಾನೀ ಎಂಬ ಗರ್ಭಿಣಿ ಹುಡುಗಿ ಸಹ ಗರ್ಭಪಾತ ಮಾಡಲು ಯೋಜಿಸಿದ್ದಳು. ಅವಳ ಗರ್ಭದಲ್ಲಿದ್ದ ಎರಡು ತಿಂಗಳ ಮಗುವಿನ ಸೋನೊಗ್ರಾಮನ್ನು ಅವಳಿಗೆ ತೋರಿಸಲಾಯಿತು. “ಅದನ್ನು ನೋಡಿ ದುಃಖದಿಂದ ಕಣ್ಣೀರು ಸುರಿಸುತ್ತಾ, ನನ್ನ ಕರುಳಕುಡಿಯನ್ನು ಹೇಗೆ ಕೊಲ್ಲಲಿ” ಎಂದು ಮಮ್ಮಲ ಮರುಗಿದಳು ಸ್ಟೆಫಾನೀ.
ಡೆನೀಸ್ ಎಂಬ ಇನ್ನೊಬ್ಬ ಗರ್ಭಿಣಿ ಯುವತಿಯು ಸಹ ತನ್ನ
ಗರ್ಭದಲ್ಲಿರುವ ಭ್ರೂಣ ಜೀವಂತ ಜೀವ ಎಂಬ ವಾಸ್ತವಿಕತೆಯನ್ನು ಮನಗಂಡಳು. ಆಕೆಯ ಬಾಯ್‌ಫ್ರೆಂಡ್ ಅವಳ ಕೈಗೆ ಹಣ ಕೊಟ್ಟು “ತೆಗೆಸಿಬಿಡು ಅದನ್ನು” ಎಂದನು. “ಏನು? ಗರ್ಭಪಾತ ಮಾಡಿಸಬೇಕೋ? ನನ್ನಿಂದಂತೂ ಆಗದೇ ಆಗದು!” ಎಂದಳವಳು. ಹೀಗೆ ಅವಳು ತನ್ನ ಗರ್ಭದಲ್ಲಿದ್ದ ಜೀವವನ್ನು ಕೊಲ್ಲಲು ಒಪ್ಪಲಿಲ್ಲ.ಮನುಷ್ಯ ಭಯ ಉರುಲು
ಕೆಲವು ಸಾರಿ ಗರ್ಭಪಾತ ಮಾಡಿಸುವಂತೆ ಜನರ ಒತ್ತಾಯಕ್ಕೆ ಒಳಗಾಗಿ ಅದನ್ನು ಮಾಡಿಬಿಡಲು ಕೆಲವರು ಯೋಚಿಸಲೂಬಹುದು. ಆದರೆ ಅದಕ್ಕೆ ಮುಂಚೆ ಅವರು ಬೈಬಲಿನ ಈ ನುಡಿಮುತ್ತನ್ನು ಪರಿಗಣಿಸುವುದು ಒಳ್ಳೇದು: “ಮನುಷ್ಯನ ಭಯ ಉರುಲು; ಯೆಹೋವನ ಭರವಸ ಉದ್ಧಾರ.”—ಜ್ಞಾನೋಕ್ತಿ 29:25.
ಹದಿನೇಳು ವರ್ಷದ ಮೋನಿಕ ತನ್ನ ಬಿಸಿನೆಸ್ ಕೋರ್ಸನ್ನು ಆರಂಭಿಸಲಿದ್ದಾಗಲೇ ತನ್ನ ಬಾಯ್‌ಫ್ರೆಂಡ್‌ನಿಂದ ಗರ್ಭಿಣಿಯಾದಳು. ಐದು ಮಕ್ಕಳಿದ್ದ ಅವಳ ವಿಧವೆ ತಾಯಿ ಇದನ್ನು ಕೇಳಿ ಕಂಗೆಟ್ಟು ಹೋದಳು. ಯಾಕಂದರೆ ತನ್ನ ಮಗಳು ಆ ಕೋರ್ಸ್ ಮುಗಿಸಿ ಒಳ್ಳೇ ಕೆಲಸ ಹಿಡಿದು ತಮ್ಮ ಬಡತನವನ್ನು ನೀಗಿಸಾಳೆಂದು ತಾಯಿ ನೆನಸಿದ್ದಳು. ದಿಕ್ಕುತೋಚದೆ ಮೋನಿಕ ಗರ್ಭಪಾತ ಮಾಡಿಕೊಳ್ಳಲೇ ಬೇಕೆಂದು ತಾಯಿ ಹಠಹಿಡಿದಳು. “ಗರ್ಭಪಾತ ಮಾಡೋಣವೇ ಎಂದು ಡಾಕ್ಟರ್ ನನ್ನನ್ನು ಕೇಳಿದಾಗ ನಾನದಕ್ಕೆ ಸುತರಾಂ ಒಪ್ಪಲಿಲ್ಲ” ಎಂದು ವಿವರಿಸಿದಳು ಮೋನಿಕ.
ಮಗಳ ಭವಿಷ್ಯದ ಹಾದಿ ಹಳಿತಪ್ಪಿದ್ದನ್ನು ಕಂಡು ಹಾಗೂ ಮತ್ತೊಂದು ಮಗುವಿನ ಜವಾಬ್ದಾರಿಯೂ ಬರುವುದನ್ನು ಯೋಚಿಸಿದ ತಾಯಿ ಮನೆಬಿಟ್ಟು ಹೋಗು ಎಂದು ಮಗಳನ್ನು ಒತ್ತಾಯಿಸಿದಳು. ಮನೆಬಿಟ್ಟು ಬಂದ ಮೋನಿಕ ತನ್ನ ದೊಡ್ಡಮ್ಮನ ಮನೆಯಲ್ಲಿ ಉಳಿದಳು. ಕೆಲವು ವಾರಗಳು ಕಳೆದ ಬಳಿಕ ತಾಯಿ ವಿಷಾದಪಟ್ಟು, ಮಗಳು ಮನೆಗೆ ಹಿಂತಿರುಗಿ ಬಂದು ಮನೆಯಲ್ಲೇ ಹೆರಿಗೆಯಾಗುವಂತೆ ಅನುಮತಿಸಿದಳು. ಲಿಯೋನ್ ಹುಟ್ಟಿದಾಗ ಮೋನಿಕಳ ತಾಯಿ ಅವನ ಪಾಲನೆಯಲ್ಲಿ ನೆರವಾದಳು. ಆ ಪುಟ್ಟ ಹುಡುಗನನ್ನು ಅತಿಯಾಗಿ ಪ್ರೀತಿಸಿದಳು ಸಹ.
ರಾಬೀನ್ ಎಂಬ ವಿವಾಹಿತ ಮಹಿಳೆಗೆ ಬಂದ ಒತ್ತಡವಾದರೋ ಬೇರೊಂದು ತರಹದ್ದು. ಅವಳನ್ನುವುದು: “ನಾನು ಗರ್ಭಿಣಿಯಾದಾಗ ಡಾಕ್ಟರ್ ಬಳಿ ಹೋದೆ. ಬಸಿರನ್ನು ಪರೀಕ್ಷಿಸುವ ಮೊದಲೇ ಕಿಡ್ನಿ ಇನ್‌ಫೆಕ್ಷನ್‌ಗೆ ಮದ್ದು ಕೊಟ್ಟರು. ಮಗು ತೀವ್ರ ಬುದ್ಧಿಮಾಂಧ್ಯದಿಂದ ಹುಟ್ಟುವ ಸಾಧ್ಯತೆಯಿದೆ ಎಂದು ಹೇಳುತ್ತಾ, ‘ಗರ್ಭಪಾತ ಮಾಡಿಸಿಕೋ’ ಎಂದು ಒತ್ತಾಯಿಸಿದರು. ನಾನು ಅವರಿಗೆ ಜೀವದ ಬಗ್ಗೆ ಬೈಬಲಿನ ದೃಷ್ಟಿಕೋನವನ್ನು ವಿವರಿಸಿದೆ. ಗರ್ಭಪಾತವನ್ನು ನಾನೆಂದೂ ಮಾಡಿಸಲಾರೆ ಎಂದು ಖಂಡಿತವಾಗಿ ಹೇಳಿದೆ.”
ಆ ಡಾಕ್ಟರ್‌ರ ಕಳಕಳಿಯಲ್ಲಿ ಅರ್ಥವಿತ್ತು, ಆದರೆ ರಾಬೀನ್‌ಳ ಜೀವಕ್ಕೆ ಆ ಕೂಡಲೇ ಏನೂ ಅಪಾಯವಿರಲಿಲ್ಲ. * “ನನ್ನ ಮಗಳು ಜನಿಸಿದ ಮೇಲೆ ಮಾಡಿದ ಪರೀಕ್ಷೆಯಲ್ಲಿ ಅವಳಿಗೆ ಕೇವಲ ಲಘು ಮಿದುಳ ಲಕ್ವ ಹೊಡೆದಿದೆ ಎಂದು ತಿಳಿದುಬಂತು. ಈಗ ಮಗುವಿಗೆ 15 ವರ್ಷ. ಅವಳ ಕ್ಷೇಮ ಸಾಕಷ್ಟು ಸುಧಾರಿಸಿದೆ. ಓದುವಿಕೆಯಲ್ಲಿ ದಿನೇ ದಿನೇ ಪ್ರಗತಿಮಾಡುತ್ತಿದ್ದಾಳೆ. ಅವಳೆಂದರೆ ನನಗೆ ಪ್ರಾಣ. ಅವಳನ್ನು ಕೊಟ್ಟದ್ದಕ್ಕಾಗಿ ದಿನದಲ್ಲಿ ಅನೇಕ ಬಾರಿ ಯೆಹೋವ ದೇವರಿಗೆ ಥ್ಯಾಂಕ್ಸ್ ಹೇಳುತ್ತೇನೆ.”
ದೇವರ ಮಿತ್ರತ್ವ ಬಲವರ್ಧಕ
ಬೈಬಲ್ ಹೇಳುವುದು: “ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು.”—ಕೀರ್ತನೆ 25:14.
ಗರ್ಭಪಾತ ನಿರಾಕರಿಸುವ ಅನೇಕರ ನಿರ್ಣಯವನ್ನು ಯಾವುದು ಪ್ರಭಾವಿಸುತ್ತದೆ? ಅವರ ನಿರ್ಮಾಣಿಕನು ಅದನ್ನು ಹೇಗೆ ವೀಕ್ಷಿಸುತ್ತಾನೆಂದು ಅವರು ಪರಿಗಣಿಸುವುದೇ. ದೇವರೊಂದಿಗೆ ಮಿತ್ರತ್ವವನ್ನು ಗಳಿಸುವುದು ಹಾಗೂ ಆತನಿಗೆ ಮೆಚ್ಚಿಗೆಯಾದದ್ದನ್ನು ಮಾಡುವುದೇ ಅವರ ಅತ್ಯಂತ ಪ್ರಧಾನ ಚಿಂತೆ. ಈ ಚಿಂತೆಯೇ ಆರಂಭದಲ್ಲಿ ತಿಳಿಸಿದ ವಿಕ್ಟೋರಿಯಳನ್ನು ಬಲವಾಗಿ ಪ್ರಭಾವಿಸಿತು. “ಜೀವ ಕೊಡುವಾತನು ದೇವರೇ ಎಂದು ನಾನು ದೃಢವಾಗಿ ನಂಬಿದ್ದೆ. ಆತನು ಕೊಟ್ಟ ಜೀವವನ್ನು ತೆಗೆಯುವ ಹಕ್ಕು ನನಗಿಲ್ಲ” ಎಂದಳಾಕೆ.
ವಿಕ್ಟೋರಿಯ ಶ್ರದ್ಧೆಯಿಂದ ಬೈಬಲನ್ನು ಅಧ್ಯಯನ ಮಾಡಲು ತೊಡಗಿದಾಗ ದೇವರೊಂದಿಗೆ ಅವಳ ಮಿತ್ರತ್ವ ಬೆಳೆಯುತ್ತಾ ಬಂತು. ಅವಳು ತಿಳಿಸಿದ್ದು: “ನನ್ನ ಮಗುವನ್ನು ಉಳಿಸಲು ತಕ್ಕೊಂಡ ನಿರ್ಣಯವು ದೇವರಿಗೆ ನನ್ನನ್ನು ಹೆಚ್ಚು ಆಪ್ತಳನ್ನಾಗಿಮಾಡಿತು. ಜೀವನದ ಎಲ್ಲಾ ವಿಷಯಗಳಲ್ಲಿ ಆತನನ್ನು ಮೆಚ್ಚಿಸಲು ಪ್ರಯತ್ನಿಸುವಂತೆ ಮಾಡಿತು. ಆತನ ಮಾರ್ಗದರ್ಶನೆಗಾಗಿ ಬೇಡಿದಾಗ ಬೇರೆಲ್ಲವೂ ಸುಸೂತ್ರವಾಗಿ ನಡೆಯಿತು.”
ಜೀವದ ಮೂಲನಾದ ದೇವರೊಂದಿಗಿನ ಮಿತ್ರತ್ವವು ಗರ್ಭದಲ್ಲಿರುವ ಜೀವಕ್ಕೆ ನಮ್ಮ ಗೌರವವನ್ನು ಆಳಗೊಳಿಸುತ್ತದೆ. (ಕೀರ್ತನೆ 36:9) ಬಯಸದ ಯಾವುದೇ ಬಸಿರನ್ನು ಉಳಿಸಿ ಪೋಷಿಸಲು ಒಬ್ಬಾಕೆ ಸ್ತ್ರೀ ಮತ್ತು ಅವಳ ಕುಟುಂಬಕ್ಕೆ ನೆರವಾಗಲು ‘ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು’ ದೇವರು ಒದಗಿಸಬಲ್ಲನು. (2 ಕೊರಿಂಥ 4:7) ಜೀವದ ವಿಷಯದಲ್ಲಿ ದೇವರ ದೃಷ್ಟಿಕೋನವನ್ನು ಗೌರವಿಸಿದವರಿಗೆ ತಾವು ಹಿಂದೆ ಮಾಡಿದ ನಿರ್ಣಯದ ಕುರಿತು ಹೇಗನಿಸುತ್ತದೆ?
ಕಿಂಚಿತ್ತೂ ವಿಷಾದವಿಲ್ಲ
ಈ ಹೆತ್ತವರನ್ನು ಯಾವ ದೋಷಭಾವನೆಯಾಗಲಿ ಅಪರಿಹಾರ್ಯ ದುಃಖವಾಗಲಿ ನಷ್ಟದ ಭಾವನೆಯಾಗಲಿ ಬಾಧಿಸುವುದಿಲ್ಲ. “ಗರ್ಭಫಲವು . . . ಬಹುಮಾನವೇ” ಶಾಪವಲ್ಲ ಎಂದವರು ಸಮಯಾನಂತರ ನಿಜವಾಗಿಯೂ ಕಂಡುಕೊಂಡರು. (ಕೀರ್ತನೆ 127:3) ಆರಂಭದಲ್ಲಿ ತಿಳಿಸಲಾದ ಕಾನೀ ಎಂಬವಳು ಮಗುವನ್ನು ಹಡೆದ ಎರಡೇ ತಾಸುಗಳಲ್ಲಿ ಇದನ್ನು ಅರಿತುಕೊಂಡಳು! ಭಾವೋದ್ವೇಗದಿಂದ ತನ್ನ ಸಹೋದ್ಯೋಗಿ ಕೇಯನ್ನು ಕರೆದು ತನ್ನ ಕಂದಮ್ಮಳನ್ನು ಸಾಕಿಸಲಹಲು ದೊರೆತ ಈ ಅವಕಾಶಕ್ಕಾಗಿ ತಾನೆಷ್ಟು ಪುಳಕಿತಳೆಂದು ಬಡಬಡಿಸಿದಳು. ಆನಂದತುಂದಿಲಳಾಗಿ ಅವಳಂದದ್ದು: “ದೇವರಿಗೆ ಮೆಚ್ಚಿಗೆಯಾದದ್ದನ್ನು ಮಾಡುವವರನ್ನು ಆತನು ತಪ್ಪದೆ ಆಶೀರ್ವದಿಸುತ್ತಾನೆಂಬುದು ಎಷ್ಟು ಸತ್ಯ!”
ಜೀವದ ಬಗ್ಗೆ ದೇವರ ದೃಷ್ಟಿಕೋನಕ್ಕೆ ಹೊಂದಿಕೆಯಾಗಿ ಕಾರ್ಯನಡಿಸುವುದು ಅದೇಕೆ ಅಷ್ಟು ಪ್ರತಿಫಲದಾಯಕ? ಏಕೆಂದರೆ ಜೀವದ ಬುಗ್ಗೆಯಾದ ದೇವರು ಬೈಬಲಿನಲ್ಲಿ ತನ್ನ ನಿಯಮಗಳನ್ನು, ನೀತಿಯ ಮಟ್ಟಗಳನ್ನು ಇಟ್ಟಿರುವುದು “[ನಮ್ಮ] ಮೇಲಿಗಾಗಿ” ಅಥವಾ ನಮ್ಮ ಸುಕ್ಷೇಮಕ್ಕಾಗಿಯೇ.—ಧರ್ಮೋಪದೇಶಕಾಂಡ 10:13.
ಈ ಲೇಖನದಲ್ಲಿ ತಿಳಿಸಲಾದ ವಿಕ್ಟೋರಿಯ ಮತ್ತು ಬಿಲ್‌ರ ಅನುಭವಕ್ಕನುಸಾರ, ಅವರು ಗರ್ಭಪಾತವನ್ನು ನಿರಾಕರಿಸಿದ ನಿರ್ಣಯವು ಅವರ ಜೀವನದಲ್ಲಿ ಒಂದು ತಿರುಗುಬಿಂದುವಾಯಿತು. ಅವರದನ್ನು ಹೀಗೆ ವಿವರಿಸುತ್ತಾರೆ: “ನಾವು ಅತಿಯಾಗಿ ಡ್ರಗ್ಸ್ ಸೇವಿಸುತ್ತಿದ್ದೆವು. ಹಾಗೆಯೇ ಮುಂದುವರಿಸಿದ್ದರೆ ಬಹುಶಃ ಸತ್ತೇ ಹೋಗುತ್ತಿದ್ದೆವೋ ಏನೋ. ಆದರೆ ಅಜಾತ ಮಗುವಿನ ಜೀವಕ್ಕೆ ಗೌರವ ತೋರಿಸಿದ್ದು ಸ್ವತಃ ನಮ್ಮ ಜೀವನದ ಬಗ್ಗೆ ಕಾಳಜಿವಹಿಸುವಂತೆ ಸಾಧ್ಯಮಾಡಿತು. ಯೆಹೋವನ ಸಾಕ್ಷಿಗಳ ಸಹಾಯದಿಂದ ನಮ್ಮ ಬದುಕು ಬದಲಾಯಿತು.”
ಅವರ ಮಗನಾದ ಲಾನ್ಸ್‌ಗೆ ಈಗ ಸುಮಾರು 34 ವರ್ಷ ಪ್ರಾಯ. ಅವನ ಮದುವೆಯಾಗಿ ಈಗ 12 ವರ್ಷ. ಲಾನ್ಸ್ ಹೇಳುವುದು: “ಬಾಲ್ಯದಿಂದಲೇ ಬೈಬಲಾಧಾರಿತ ನಿರ್ಣಯಗಳನ್ನು ಮಾಡಲು ಹೆತ್ತವರು ಕಲಿಸಿದರು. ಇದು ನನಗೆ, ನನ್ನ ಪತ್ನಿ, ಮಗನಿಗೆ ತುಂಬ ಪ್ರಯೋಜನಕರವಾಯಿತು. ಎಷ್ಟೆಂದರೆ ಇದಕ್ಕಿಂತ ಅಧಿಕ ಸಂತೋಷದಿಂದಿರಲು ಸಾಧ್ಯವಿದ್ದಿರಲಿಲ್ಲ ಎಂಬ ಭಾವನೆ ನಮ್ಮದು.” ಗರ್ಭಪಾತ ಮಾಡಿಸಬೇಕೆಂದು ವಿಕ್ಟೋರಿಯಗೆ ಮೊದಲು ಹೇಳಿದ್ದ ಬಿಲ್ ಈಗ ಅನ್ನುವುದು: “ನಮ್ಮ ಅಮೂಲ್ಯ ಪುತ್ರನನ್ನು ಇನ್ನೇನು ಕಳಕೊಳ್ಳುವ ಹಂತಕ್ಕೆ ನಾವು ಹೋದದ್ದನ್ನು ನೆನಸಿದರೇ ನಮಗೆ ನಡುಕವುಂಟಾಗುತ್ತದೆ.”
ತಾಯಿಯ ಒತ್ತಡದ ಮಧ್ಯೆಯೂ ಗರ್ಭಪಾತವನ್ನು ನಿರಾಕರಿಸಿದ ಮೋನಿಕಳನ್ನು ಪುನಃ ಗಮನಿಸಿ. ಅವಳು ಹೇಳುವುದು: “ನನ್ನ ಮಗನು ಹುಟ್ಟಿದ ಎರಡು ವಾರಗಳಲ್ಲೇ ಯೆಹೋವನ ಸಾಕ್ಷಿಗಳು ನನ್ನನ್ನು ಸಂಪರ್ಕಿಸಿದರು. ಮತ್ತು ನನ್ನ ಜೀವನವನ್ನು ದೇವರ ನಿಯಮದೊಂದಿಗೆ ಪೂರ್ಣ ಹೊಂದಿಕೆಗೆ ತರುವುದು ಹೇಗೆಂದು ನಾನು ಕಲಿತೆ. ನನ್ನ ಮಗ ಲಿಯೋನ್‌ಗೆ ದೇವರ ನಿಯಮಕ್ಕೆ ವಿಧೇಯನಾಗುವುದು ಎಷ್ಟು ಪ್ರಾಮುಖ್ಯವೆಂದು ಕಲಿಸ ತೊಡಗಿದೆ. ಸಮಯ ಕಳೆದಂತೆ ಅವನು ದೇವರಲ್ಲಿ ಬಲವಾದ ಪ್ರೀತಿಯನ್ನು ಬೆಳೆಸಿಕೊಂಡ. ಅವನೀಗ ಯೆಹೋವನ ಸಾಕ್ಷಿಗಳ ಸಂಚರಣಾ ಶುಶ್ರೂಷಕನಾಗಿದ್ದಾನೆ.”
ತನ್ನ ತಾಯಿಯ ನಿರ್ಣಯದ ಕುರಿತು ಯೋಚಿಸುತ್ತಾ ಲಿಯೋನ್ ಹೇಳುವುದು: “ಒತ್ತಡಗಳ ನಡುವೆಯೂ ನನ್ನ ತಾಯಿ ನನ್ನ ಜೀವವನ್ನು ಉಳಿಸುವಷ್ಟು ಪ್ರೀತಿಸಿದ್ದಳೆಂದು ತಿಳಿಯುವುದು ನಿಜವಾಗಿಯೂ ನನ್ನ ಜೀವನವನ್ನು ಅತ್ಯುತ್ತಮ ರೀತಿಯಲ್ಲಿ ಉಪಯೋಗಿಸಲು ಸ್ಫೂರ್ತಿ ಕೊಟ್ಟಿತು. ಈ ಆಶ್ಚರ್ಯಕರ ಕೊಡುಗೆಗಾಗಿ ನಾನು ದೇವರಿಗೆ ಸದಾ ಗಣ್ಯತೆಯನ್ನು ತೋರಿಸುವೆ.”
ಜೀವದ ಬಗ್ಗೆ ದೇವರ ದೃಷ್ಟಿಕೋನ ತಿಳಿದ ಅನೇಕರಿಗೆ ತಮ್ಮ ನಿರ್ಣಯದ ಕುರಿತು ಕಿಂಚಿತ್ತೂ ಪಶ್ಚಾತ್ತಾಪವಿಲ್ಲ. ಅವರು ಕಾಪಾಡಿ ಉಳಿಸಿದ ಮಗುವಿನ ಜೀವವು ಅವರಿಗೀಗ ಒಂದು ನೆಚ್ಚಿನ ನಿಧಿಯಂತಿದೆ. ಅವರ ಹೃದಯವೀಗ ಕೃತಜ್ಞತೆಯಿಂದ ತುಂಬಿತುಳುಕುತ್ತಾ ಹೇಳುವುದು, “ನಾವು ಗರ್ಭಪಾತ ಮಾಡದಿದ್ದದ್ದು ಎಷ್ಟು ಒಳ್ಳೇದು!” (g 6/09)
[ಪಾದಟಿಪ್ಪಣಿ]
^ ಕೆಲವೊಮ್ಮೆ ಹೆರಿಗೆಯ ಸಮಯದಲ್ಲಿ ತಾಯಿ ಅಥವಾ ಮಗು ಇವರಲ್ಲಿ ಒಬ್ಬರ ಜೀವಕ್ಕೆ ಅಪಾಯವಿರುತ್ತದೆ. ಆಗ ಯಾರ ಜೀವವನ್ನು ಉಳಿಸಬೇಕೆಂಬ ಆಯ್ಕೆ ಮಾಡುವುದು ಅದರಲ್ಲಿ ನೇರವಾಗಿ ಒಳಗೂಡಿರುವ ವ್ಯಕ್ತಿಗಳಿಗೆ ಸೇರಿದೆ. ಆದರೆ ಈಗ ಅನೇಕ ದೇಶಗಳಲ್ಲಿ ವೈದ್ಯಕೀಯ ಉಪಚಾರಗಳಲ್ಲಾದ ಪ್ರಗತಿಗಳಿಂದಾಗಿ ಇಂಥ ಸನ್ನಿವೇಶಗಳು ಅತಿ ವಿರಳ.
[ಪುಟ 13ರಲ್ಲಿರುವ ಚಿತ್ರ]
ತನ್ನ ಗರ್ಭದಲ್ಲಿದ್ದ ಎರಡು ತಿಂಗಳ ಮಗುವಿನ ಸೋನೋಗ್ರಾಮ್ ನೋಡಿದಾಗ ಸ್ಟೆಫಾನೀ ನಿರ್ಣಯ ಮಾಡಶಕ್ತಳಾದಳು
(ಹೊರರೇಖೆ ಸೇರಿಸಲಾಗಿದೆ)
[ಪುಟ 14ರಲ್ಲಿರುವ ಚಿತ್ರ]
ವಿಕ್ಟೋರಿಯ ಮತ್ತು ಲಾನ್ಸ್
[ಪುಟ 14ರಲ್ಲಿರುವ ಚಿತ್ರ]
ಇಂದು ಲಾನ್ಸ್ ಮತ್ತು ಅವನ ಕುಟುಂಬದೊಂದಿಗೆ ವಿಕ್ಟೋರಿಯ ಮತ್ತು ಬಿಲ್
[ಪುಟ 15ರಲ್ಲಿರುವ ಚಿತ್ರ]
ಗರ್ಭಪಾತದ ಒತ್ತಡವನ್ನು 36 ವರ್ಷಗಳ ಹಿಂದೆ ಮೋನಿಕ ಎದುರಿಸಿದ್ದಕ್ಕಾಗಿ ಅವಳೂ ಅವಳ ಮಗನೂ ತುಂಬಾ ಕೃತಜ್ಞರು