ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಹಾಯ‘ಸಾಂತ್ವನದ ದೇವರಿಂದ’

ಸಹಾಯ‘ಸಾಂತ್ವನದ ದೇವರಿಂದ’

ಸಹಾಯ‘ಸಾಂತ್ವನದ ದೇವರಿಂದ’

ರಾಜ ದಾವೀದನು ಕಡುಸಂಕಟ ಮತ್ತು ಅನೇಕ ‘ಚಿಂತಾಲೋಚನೆಗಳಿಂದ’ (NIBV) ಬಳಲಿ ಕುಗ್ಗಿದ ವ್ಯಕ್ತಿಯಾಗಿದ್ದನು. ಹಾಗಿದ್ದರೂ ನಿರ್ಮಾಣಿಕನಾದ ದೇವರು ನಮ್ಮನ್ನು ಎಲ್ಲಾ ವಿಧಗಳಲ್ಲಿ ಅರ್ಥಮಾಡಿಕೊಳ್ಳಶಕ್ತನೆಂಬ ವಿಷಯದಲ್ಲಿ ಅವನು ಎಂದೂ ಶಂಕಿಸಿರಲಿಲ್ಲ. ಅವನು ಬರೆದದ್ದು: “ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ; ನಾನು ಕೂತುಕೊಳ್ಳುವದೂ ಏಳುವದೂ ನಿನಗೆ ಗೊತ್ತದೆ; ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತೀ; ಯೆಹೋವನೇ, ನನ್ನ ನಾಲಿಗೆಯ ಮಾತುಗಳಲ್ಲಿ ನೀನು ಅರಿಯದೆ ಇರುವಂಥದು ಒಂದೂ ಇಲ್ಲ.”—ಕೀರ್ತನೆ 139:1, 2, 4, 23.

ನಮ್ಮ ನಿರ್ಮಾಣಿಕನು ನಮ್ಮನ್ನು ಅರ್ಥಮಾಡಿಕೊಳ್ಳಬಲ್ಲನೆಂದು ನಾವು ಸಹ ಖಾತ್ರಿಯಿಂದಿರಬಲ್ಲೆವು. ನಮ್ಮ ದೋಷಯುಕ್ತ ತನುಮನಗಳ ಮೇಲೆ ಖಿನ್ನತೆಯು ಹಾಕಬಲ್ಲ ಕುಗ್ಗಿಸುವ ಪ್ರಭಾವವನ್ನು ಆತನು ಬಲ್ಲನು. ಖಿನ್ನತೆಗೆ ಕಾರಣವೇನೆಂದೂ ಸದ್ಯದ ಪರಿಸ್ಥಿತಿಯಲ್ಲಿ ನಾವದನ್ನು ಉತ್ತಮವಾಗಿ ಹೇಗೆ ನಿಭಾಯಿಸಬಹುದೆಂದೂ ಆತನಿಗೆ ಗೊತ್ತಿದೆ. ಅದಲ್ಲದೆ ಖಿನ್ನತೆಯನ್ನು ನಿತ್ಯನಿರಂತರಕ್ಕೂ ಹೇಗೆ ಗುಣಪಡಿಸುವನೆಂದೂ ಆತನು ತಿಳಿಸಿದ್ದಾನೆ. ನಮಗೆ ನೆರವಾಗಲು ನಾವು ನಮ್ಮ ಕನಿಕರದ ದೇವರಲ್ಲದೆ ಬೇರೆ ಯಾರನ್ನೂ ಮೊರೆಹೋಗಬಯಸೆವು. ಯಾಕಂದರೆ ಆತನು “ಕುಗ್ಗಿದವರನ್ನು ಸಂತೈಸುವ ಪ್ರೋತ್ಸಾಹಿಸುವ ಚೈತನ್ಯಗೊಳಿಸುವ ಮತ್ತು ಹುರಿದುಂಬಿಸುವ ದೇವರು.”—2 ಕೊರಿಂಥ 7:6, ದಿ ಆ್ಯಂಪ್ಲಿಫೈಡ್‌ ಬೈಬಲ್‌.

ಸಂಕಟಕರ ಭಾವನೆಗಳನ್ನು ಅನುಭವಿಸುವಾಗ ದೇವರು ತಮಗೆ ಹೇಗೆ ಸಹಾಯಮಾಡಬಲ್ಲನೆಂದು ಖಿನ್ನರು ಆಲೋಚಿಸಬಹುದು.

ದೇವರು ಖಿನ್ನರನ್ನು ಅರ್ಥಮಾಡಿಕೊಳ್ಳುತ್ತಾನೋ?

ಖಿನ್ನರಾದ ತನ್ನ ಸೇವಕರಿಗೆ ದೇವರು ಎಷ್ಟು ಹತ್ತಿರವಾಗಿದ್ದಾನೆಂದರೆ ಆತನು ‘ಜಜ್ಜಿಹೋದ ದೀನಮನದೊಂದಿಗೆ ಇದ್ದುಕೊಂಡು ದೀನನ ಆತ್ಮವನ್ನೂ ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸುವವನಾಗಿದ್ದಾನೆ.’ (ಯೆಶಾಯ 57:15) “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ” ಎಂದು ತಿಳಿಯುವುದು ಅದೆಷ್ಟು ಸಾಂತ್ವನಕರ.—ಕೀರ್ತನೆ 34:18.

ಖಿನ್ನರು ದೇವರಿಂದ ಹೇಗೆ ಸಾಂತ್ವನ ಹೊಂದಬಲ್ಲರು?

ದಿನದ ಯಾವುದೇ ಸಮಯದಲ್ಲಿ ದೇವರ ಆರಾಧಕರು ‘ಪ್ರಾರ್ಥನೆಯನ್ನು ಕೇಳುವವನಾದ’ ದೇವರನ್ನು ಪ್ರಾರ್ಥನೆಯ ಮೂಲಕ ಸಮೀಪಿಸಬಲ್ಲರು. ಮನಸ್ಸನ್ನು ಕುಗ್ಗಿಸುವಂಥ ಭಾವನೆಗಳು ಮತ್ತು ಸನ್ನಿವೇಶಗಳನ್ನು ನಿಭಾಯಿಸಲು ಆತನು ಸಹಾಯಮಾಡಬಲ್ಲನು. (ಕೀರ್ತನೆ 65:2) ನಮ್ಮ ಹೃದಯ ಬಿಚ್ಚಿ ಮಾತಾಡುವಂತೆ ಬೈಬಲ್‌ ನಮ್ಮನ್ನು ಉತ್ತೇಜಿಸುತ್ತದೆ: “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.”—ಫಿಲಿಪ್ಪಿ 4:6, 7.

ಅನರ್ಹರೆಂಬ ಭಾವನೆಯಿಂದಾಗಿ, ನಮ್ಮ ಪ್ರಾರ್ಥನೆಗಳನ್ನು ದೇವರು ಕೇಳುವುದಿಲ್ಲವೆಂದು ನಾವು ನೆನಸುವುದಾದರೆ ಆಗೇನು?

ಖಿನ್ನತೆಯು, ದೇವರನ್ನು ಮೆಚ್ಚಿಸಲು ನಾವು ಸಾಕಷ್ಟು ಪ್ರಯತ್ನವನ್ನು ಮಾಡುತ್ತಿಲ್ಲ ಎಂದು ನೆನಸುವಂತೆಯೂ ಮಾಡಬಹುದು. ಆದರೂ ನಮ್ಮ ಸ್ವರ್ಗೀಯ ತಂದೆಯು ನಮ್ಮ ದುರ್ಬಲ ಭಾವನೆಗಳಿಗೆ ಸೂಕ್ಷ್ಮಗ್ರಾಹಿಯಾಗಿದ್ದಾನೆ, “ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:14) “ನಮ್ಮ ಹೃದಯಗಳು ನಮ್ಮನ್ನು ಯಾವುದೇ ಸಂಬಂಧದಲ್ಲಿ ಖಂಡಿಸಬಹುದಾದರೂ ದೇವರು ನಮ್ಮ ಹೃದಯಗಳಿಗಿಂತ ಹೆಚ್ಚು ಶ್ರೇಷ್ಠನಾಗಿದ್ದಾನೆ ಮತ್ತು ಎಲ್ಲವನ್ನೂ ತಿಳಿದವನಾಗಿದ್ದಾನೆ” ಎಂದು ನಾವು ಅರಿತುಕೊಳ್ಳಬೇಕು. (1 ಯೋಹಾನ 3:19, 20) ಆದ್ದರಿಂದ ಪ್ರಾರ್ಥನೆಯಲ್ಲಿ ಬೈಬಲ್‌ ವಚನಗಳಿಂದ ನೀವು ಆಯ್ದುಕೊಂಡ ಅಭಿವ್ಯಕ್ತಿಗಳನ್ನು ಉಪಯೋಗಿಸಸಾಧ್ಯವಿದೆ. ಉದಾಹರಣೆಗೆ, ಕೀರ್ತನೆ 9:9, 10; 10:12, 14, 17; 25:17.

ನಮ್ಮ ಮನಸ್ಸಿನ ದುಗುಡಗಳನ್ನು ಹೇಳಿಕೊಳ್ಳಲಾಗದಷ್ಟು ದುಃಖವು ನಮಗಾಗುತ್ತಿದ್ದಲ್ಲಿ ಆಗೇನು?

ನಿಮಗಿರುವ ತೀವ್ರ ದುಃಖದಿಂದಾಗಿ ಮಾತುಗಳು ಸರಿಯಾಗಿ ಹೊರಡದಿದ್ದಲ್ಲಿ ಎದೆಗುಂದಬೇಡಿ! “ಕರುಣೆಯ ತಂದೆಯೂ ಸಕಲ ಸಾಂತ್ವನದ ದೇವರೂ” ಆಗಿರುವಾತನಿಗೆ ಪ್ರಾರ್ಥಿಸುತ್ತಾ ಇರಿ. ಆತನು ನಿಮ್ಮ ಭಾವನೆಗಳನ್ನೂ ಅಗತ್ಯಗಳನ್ನೂ ಅರ್ಥಮಾಡುತ್ತಾನೆ. (2 ಕೊರಿಂಥ 1:3) ಈ ಲೇಖನ ಮಾಲೆಯ ಆರಂಭದಲ್ಲಿ ತಿಳಿಸಲಾದ ಮಾರೀಯ ಹೇಳುವುದು: “ನಾನು ತೀರ ಗಲಿಬಿಲಿಗೊಂಡಾಗ ಏನು ಪ್ರಾರ್ಥಿಸುವುದೆಂದೇ ತೋಚುವುದಿಲ್ಲ. ಆದರೆ ದೇವರು ಅದನ್ನು ಅರ್ಥಮಾಡಿಕೊಂಡು ನನಗೆ ನೆರವಾಗುತ್ತಾನೆಂದು ತಿಳಿದಿದೆ.”

ದೇವರು ನಮ್ಮ ಪ್ರಾರ್ಥನೆಯನ್ನು ಆಲಿಸುವುದು ಹೇಗೆ?

ದೇವರು ಈಗಲೇ ನಮ್ಮೆಲ್ಲಾ ಕಷ್ಟಕಾರ್ಪಣ್ಯಗಳನ್ನು ತೆಗೆದುಬಿಡುತ್ತಾನೆಂದು ಬೈಬಲು ಸೂಚಿಸುವುದಿಲ್ಲ. ಆದರೂ ಖಿನ್ನತೆಯೂ ಸೇರಿದಂತೆ “ಎಲ್ಲವನ್ನು” ನಿಭಾಯಿಸಲಿಕ್ಕೆ ಬೇಕಾದ ಬಲವನ್ನು ದೇವರು ನಮಗೆ ಕೊಡುತ್ತಾನೆ. (ಫಿಲಿಪ್ಪಿ 4:13) ಮಾರ್ಟೀನ ಹೇಳುವುದು: “ಖಿನ್ನತೆಯಿಂದ ನಾನು ಮೊದಲು ಬಳಲಿದಾಗ ಆ ಕೂಡಲೇ ನನ್ನನ್ನು ಗುಣಪಡಿಸುವಂತೆ ನಾನು ಯೆಹೋವನಿಗೆ ಪ್ರಾರ್ಥಿಸಿದೆ ಯಾಕಂದರೆ ನಾನದನ್ನು ಹೆಚ್ಚು ಸಮಯ ಸಹಿಸಿಕೊಳ್ಳಲಾರೆನೆಂದು ನನಗನಿಸಿತು. ಈಗ ನಾನು ಬಲಕ್ಕಾಗಿ ದಿನದಿನವೂ ಪ್ರಾರ್ಥಿಸುವುದರಲ್ಲಿ ತೃಪ್ತಳು.”

ಖಿನ್ನತೆಯನ್ನು ನಿಭಾಯಿಸಲು ಜನರಿಗೆ ನೆರವಾಗಲು ಬೇಕಾದ ಬಲವನ್ನು ಕೊಡುವ ಪ್ರಧಾನ ಮೂಲವು ದೇವರ ವಾಕ್ಯವಾದ ಬೈಬಲ್‌ ಆಗಿದೆ. 35 ವರ್ಷಗಳಿಂದ ಖಿನ್ನತೆಯಿಂದ ಬಳಲಿದ್ದ ಸೇರ ಎಂಬಾಕೆ ಬೈಬಲನ್ನು ದಿನದಿನವೂ ಓದುವ ವ್ಯಾವಹಾರಿಕ ಮೌಲ್ಯವನ್ನು ಕಂಡುಕೊಂಡಳು. ಅವಳು ಹೇಳುವುದು: “ವೈದ್ಯರು ಕೊಟ್ಟ ಸಹಾಯವನ್ನು ನಾನು ನಿಜವಾಗಿ ಗಣ್ಯಮಾಡುತ್ತೇನೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ, ದೇವರ ವಾಕ್ಯವನ್ನು ಓದುವುದರಿಂದ ದೊರಕುವ ಆಧ್ಯಾತ್ಮಿಕ ಮತ್ತು ವ್ಯಾವಹಾರಿಕ ಮೌಲ್ಯವನ್ನು ನಾನು ಮನಗಂಡಿದ್ದೇನೆ. ಅನುದಿನವೂ ಅದನ್ನೋದುವ ಅಭ್ಯಾಸವನ್ನು ಮಾಡಿಕೊಂಡಿದ್ದೇನೆ.”

ಖಿನ್ನತೆ ಇನ್ನಿಲ್ಲ ಎಂದೆಂದಿಗೂ!

ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ ವೇದನಾಮಯ ಕಾಯಿಲೆಗಳನ್ನು ವಾಸಿಮಾಡಲು ದೇವರು ಕೊಟ್ಟ ಶಕ್ತಿಯನ್ನು ಬಳಸಿದನು. ಪ್ರಾಣಾಂತಕ ರೋಗಪೀಡಿತ ಜನರನ್ನು ವಾಸಿಮಾಡಲು ಆತನು ಬಹು ಆತುರದಿಂದಿದ್ದನು. ಅದಲ್ಲದೆ ಖಿನ್ನರು ಅನುಭವಿಸುವ ಕಡು ಬೇಗುದಿಯನ್ನು ಆತನು ಸ್ವತಃ ತಿಳಿದಿದ್ದಾನೆ. ವೇದನಾಮಯ ಮರಣದ ಮುಂಚಿನ ರಾತ್ರಿ ಕ್ರಿಸ್ತನು “ತನ್ನನ್ನು ಮರಣದಿಂದ ಕಾಪಾಡಲು ಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸುತ್ತಾ ಯಾಚನೆಗಳನ್ನೂ ಬಿನ್ನಹಗಳನ್ನೂ ಸಲ್ಲಿಸಿದನು.” (ಇಬ್ರಿಯ 5:7) ಆ ಸಮಯದಲ್ಲಿ ಅದು ಯೇಸುವಿಗೆ ಅಷ್ಟು ಸಂಕಟಕರವಾಗಿದ್ದರೂ ಈಗ ನಾವು ಅದರಿಂದ ಪ್ರಯೋಜನ ಹೊಂದುತ್ತೇವೆ ಯಾಕಂದರೆ “ಅವನು ತಾನೇ ಕಷ್ಟವನ್ನು ಅನುಭವಿಸಿರುವುದರಿಂದ ಪರೀಕ್ಷಿಸಲ್ಪಡುವವರಿಗೆ ಸಹಾಯಮಾಡಲು ಅವನು ಶಕ್ತನಾಗಿದ್ದಾನೆ.”—ಇಬ್ರಿಯ 2:18; 1 ಯೋಹಾನ 2:1, 2.

ಖಿನ್ನತೆಯನ್ನು ಉಂಟುಮಾಡುವ ಎಲ್ಲ ದುಃಖಕರ ಪರಿಸ್ಥಿತಿಗಳನ್ನು ತೆಗೆಯಲು ದೇವರು ಉದ್ದೇಶಿಸಿದ್ದಾನೆಂದು ಬೈಬಲ್‌ ಹೇಳುತ್ತದೆ. ಆತನು ವಾಗ್ದಾನಿಸುವುದು: “ಇಗೋ, ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು, ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ.” (ಯೆಶಾಯ 65:17, 18) ದೇವರ ರಾಜ್ಯವಾದ “ನೂತನಾಕಾಶಮಂಡಲವು” ಭೂಮಿಯ ಮೇಲೆ ನೀತಿಯ ಜನ ಸಮಾಜವಾದ “ನೂತನಭೂಮಂಡಲವನ್ನು” ಪುನಃಸ್ಥಾಪಿಸುವುದು. ಅಲ್ಲಿ ಪರಿಪೂರ್ಣವಾದ ಶಾರೀರಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಆರೋಗ್ಯವಿರುವುದು. ಎಲ್ಲ ರೋಗರುಜಿನಗಳು ಶಾಶ್ವತವಾಗಿ ಇಲ್ಲದೆ ಹೋಗುವವು. (g 7/09)

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಯೆಹೋವನೇ, ಅಗಾಧವಾದ ನೆಲಮಾಳಿಗೆಯಲ್ಲಿ ನಿನ್ನ ಹೆಸರೆತ್ತಿ ಪ್ರಾರ್ಥಿಸಿದೆನು. ನೀನು ನನ್ನ ಧ್ವನಿಯನ್ನು ಕೇಳಿದಿ; (ನನ್ನ ನಿಟ್ಟುಸುರಿಗೂ ಮೊರೆಗೂ ಕಿವಿಯನ್ನು ಮರೆಮಾಡಿಕೊಳ್ಳಬೇಡ!) ನಾನು ನಿನ್ನನ್ನು ಕೂಗಿಕೊಂಡಾಗ ನನ್ನ ಸಮೀಪಕ್ಕೆ ಬಂದು ಭಯಪಡಬೇಡ ಎಂದು ಹೇಳಿದಿ.”—ಪ್ರಲಾಪಗಳು 3:55-57

[ಪುಟ 7ರಲ್ಲಿರುವ ಚೌಕ/ಚಿತ್ರಗಳು]

“ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಿರಿ”

ಬಾಬ್ರ ಎಂಬಾಕೆಗೆ ಖಿನ್ನತೆ ಮತ್ತು ನಿಷ್ಪ್ರಯೋಜಕಳೆಂಬ ಕೀಳರಿಮೆಯು ಸಹಿಸಲಸಾಧ್ಯವೆಂದು ಕಂಡಾಗ ಆಕೆ ಮತ್ತು ಆಕೆಯ ಗಂಡ ತಮ್ಮ ಕುಟುಂಬ ಸ್ನೇಹಿತರಾದ ಕ್ರೈಸ್ತ ಮೇಲ್ವಿಚಾರಕ ಜೆರಾರ್ಡ್‌ರಿಗೆ ಫೋನ್‌ ಮಾಡುತ್ತಾರೆ. ಬಾಬ್ರ ಒಂದೇಸವನೆ ಅಳುತ್ತಾ ಹಿಂದೆ ತಿಳಿಸಿದ ಅದೇ ಬೇನೆಬೇಗುದಿಯನ್ನು ಪುನಃ ಪುನಃ ಹೇಳುತ್ತಾ ಇರುವಾಗ ಜೆರಾರ್ಡ್‌ ಯಾವಾಗಲೂ ತಾಳ್ಮೆಯಿಂದ ಕಿವಿಗೊಡುತ್ತಾರೆ.

ಅವಳಲ್ಲಿ ತಪ್ಪುಹುಡುಕದೆ, ವಾದವಿವಾದಮಾಡದೆ ಅಥವಾ ಖಂಡಿಸದೆ ಅವಳಿಗೆ ಜೆರಾರ್ಡ್‌ ಕಿವಿಗೊಡುತ್ತಾರೆ. (ಯಾಕೋಬ 1:19) ಬೈಬಲ್‌ ತಿಳಿಸುವಂತೆ, ‘ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಲು’ ಅವರು ಕಲಿತಿದ್ದಾರೆ. (1 ಥೆಸಲೊನೀಕ 5:14) ಯೆಹೋವ ದೇವರಿಗೆ, ಅವಳ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ಬಾಬ್ರ ಬಹು ಅಮೂಲ್ಯಳು ಎಂಬ ಭರವಸೆಯನ್ನು ಕೊಡುತ್ತಾ ಅವರು ತಾಳ್ಮೆಯಿಂದ ಮಾತಾಡುತ್ತಾರೆ. ಅವರು ಸಾಮಾನ್ಯವಾಗಿ ಬೈಬಲಿನ ಒಂದೆರಡು ಆದರಣೆಯ ಮಾತುಗಳನ್ನು ಓದುತ್ತಾರೆ. ಮುಂಚೆ ಅವನ್ನು ಓದಿಹೇಳಿದ್ದರೂ ಪುನಃ ಓದುತ್ತಾರೆ. ನಂತರ ಫೋನಿನಲ್ಲೇ ಆಕೆ ಮತ್ತು ಆಕೆಯ ಗಂಡನೊಂದಿಗೆ ತಪ್ಪದೆ ಪ್ರಾರ್ಥನೆಮಾಡುತ್ತಾರೆ. ಇದು ಆ ದಂಪತಿಗೆ ಯಾವಾಗಲೂ ಮನಸ್ಸಿಗೆ ತುಂಬಾ ಸಮಾಧಾನ ಕೊಡುತ್ತದೆ.—ಯಾಕೋಬ 5:14, 15.

ತಾನು ವೈದ್ಯನಲ್ಲ ಎಂಬುದು ಜೆರಾರ್ಡ್‌ಗೆ ಚೆನ್ನಾಗಿ ತಿಳಿದಿದೆ. ಮತ್ತು ಬಾಬ್ರಳ ವೈದ್ಯರೋ ಎಂಬಂತೆ ವರ್ತಿಸಲು ಸಹ ಪ್ರಯತ್ನಿಸುವುದಿಲ್ಲ. ಆದರೂ ಅವಳ ವೈದ್ಯಕೀಯ ಉಪಚಾರಕ್ಕೆ ಕೂಡಿಸಿ, ಹೆಚ್ಚಿನ ವೈದ್ಯರು ಕೊಡಲಾರದಂಥ ಬೇರೇನನ್ನೋ ಅವರು ಕೊಡುತ್ತಾರೆ. ಅದೇನೆಂದರೆ ದೇವರ ವಾಕ್ಯದ ಸಂತೈಸುವ ವಚನಗಳು ಮತ್ತು ಆದರಣೆ ನೀಡುವ ಪ್ರಾರ್ಥನೆಗಳೇ.

‘ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಲು’

ನೀವು ಹೀಗೆ ಹೇಳಬಹುದು: “ನಿಮ್ಮ ಕುರಿತೇ ಯೋಚಿಸುತ್ತಿದ್ದೆ, ನಿಮಗೆ ಅಷ್ಟು ಸೌಖ್ಯ ಇಲ್ಲ ಅಂತ ನನಗೆ ಗೊತ್ತು, ಈಗ ಹೇಗಿದ್ದೀರಿ?”

ನೆನಪಿಡಿ: ಹೃತ್ಪೂರ್ವಕವಾಗಿ ಮಾತಾಡಿ ಮತ್ತು ಖಿನ್ನತೆಯ ವ್ಯಕ್ತಿ ಹೇಳಿದ್ದನ್ನೇ ಹೇಳಿದರೂ ಅನುಕಂಪದಿಂದ ಕಿವಿಗೊಡಿ.

ನೀವು ಹೀಗೆ ಹೇಳಬಹುದು: “ನಿಮ್ಮ ಆರೋಗ್ಯ ಚೆನ್ನಾಗಿಲ್ಲ ಆದರೂ ನೀವು ಸುಮ್ಮನೆ ಕೂತಿಲ್ಲ. (ಅಥವಾ “ನೀವು ತೋರಿಸುವ ಕ್ರಿಸ್ತೀಯ ಗುಣಗಳು ಮೆಚ್ಚತಕ್ಕವೇ) ಹೆಚ್ಚು ಮಾಡಲಿಕ್ಕೆ ಆಗದಿದ್ದರೂ ಚಿಂತಿಲ್ಲ ಯೆಹೋವನ ಪ್ರೀತಿ ಆದರಗಳು ನಿಮ್ಮ ಮೇಲಿವೆ, ನಮ್ಮದು ಸಹ.”

ನೆನಪಿಡಿ: ಕನಿಕರವೂ ದಯೆಯೂ ಉಳ್ಳವರಾಗಿರ್ರಿ.

ನೀವು ಹೀಗೆ ಹೇಳಬಹುದು: “ನನಗೊಂದು ಉತ್ತೇಜಕ ವಚನ ಸಿಕ್ಕಿತು” ಅಥವಾ “ನನ್ನ ಅಚ್ಚುಮೆಚ್ಚಿನ ಈ ಬೈಬಲ್‌ ವಚನವನ್ನು ಓದುತ್ತಿದ್ದಾಗ ನಿಮ್ಮ ನೆನಪು ಬಂತು.” ಆಮೇಲೆ ವಚನವನ್ನು ಓದಿ ಅಥವಾ ಉಲ್ಲೇಖಿಸಿ.

ನೆನಪಿಡಿ: ಸೂಚನೆ ನೀಡುವ ರೀತಿಯಲ್ಲಿ ಮಾತಾಡಬೇಡಿ.

[ಪುಟ 9ರಲ್ಲಿರುವ ಚೌಕ]

ದೇವರ ವಾಕ್ಯದಿಂದ ಸಮಾಧಾನ

ಯೆಶಾಯ 41:10ರಲ್ಲಿ ಕಂಡುಬರುವ ಯೆಹೋವ ದೇವರ ವಾಗ್ದಾನದಿಂದ ಲರೇನ್‌ ಬಲಹೊಂದಿದಳು: “ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.”

ಕೀರ್ತನೆ 34:4, 6ರಲ್ಲಿರುವ ಮಾತುಗಳು ಹೆಚ್ಚಾಗಿ ತನ್ನನ್ನು ಸಂತೈಸುತ್ತವೆ ಎಂದು ಆಲ್‌ವರೂ ಹೇಳುತ್ತಾನೆ: “ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು. ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು ಯೆಹೋವನು ಕೇಳಿ ಎಲ್ಲಾ ಬಾಧೆಗಳಿಂದ ಬಿಡಿಸಿದನು.”

ಕೀರ್ತನೆ 40:1, 2ರ ಓದುವಿಕೆಯು ತನಗೆ ಯಾವಾಗಲೂ ಸಾಂತ್ವನ ಕೊಟ್ಟಿದೆ ಎಂದು ನಾಓಯಾ ಹೇಳುತ್ತಾನೆ: “ನಾನು ಯೆಹೋವನಿಗೋಸ್ಕರ ನಿರೀಕ್ಷಿಸಿಯೇ ನಿರೀಕ್ಷಿಸಿದೆನು; ಆತನು ನನ್ನ ಮೊರೆಗೆ ಕಿವಿಗೊಟ್ಟು ಲಕ್ಷಿಸಿದನು . . . ನಾನು ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.”

ಯೆಹೋವನು “ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ” ಎಂದು ನಾಓಕೋ ಎಂಬಾಕೆಗೆ ಕೀರ್ತನೆ 147:3 ಆಶ್ವಾಸನೆ ಕೊಡುತ್ತದೆ.

ಲೂಕ 12:6, 7ರಲ್ಲಿ ದಾಖಲಾದ ಯೇಸುವಿನ ಮಾತುಗಳು ಯೆಹೋವನ ಪರಾಮರಿಕೆಯಲ್ಲಿ ಭರವಸೆಯಿಡಲು ಎಲೀಸ್‌ ಎಂಬಾಕೆಗೆ ಸಹಾಯಮಾಡಿದೆ: “ಚಿಕ್ಕ ಬೆಲೆಯ ಎರಡು ಕಾಸಿಗೆ ಐದು ಗುಬ್ಬಿಗಳು ಮಾರಲ್ಪಡುತ್ತವೆ, ಅಲ್ಲವೆ? ಹಾಗಿದ್ದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ. ನಿಮ್ಮ ತಲೆಗಳ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದುದರಿಂದ ಭಯಪಡಬೇಡಿರಿ; ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು.”

ಇನ್ನಿತರ ಬೈಬಲ್‌ ವಚನಗಳು:

ಕೀರ್ತನೆ 39:12: “ಯೆಹೋವನೇ, ನನ್ನ ಪ್ರಾರ್ಥನೆಯನ್ನು ಲಾಲಿಸು; ನನ್ನ ಮೊರೆಗೆ ಕಿವಿಗೊಡು. ನನ್ನ ಕಣ್ಣೀರನ್ನು ನೋಡು, ಸುಮ್ಮನಿರಬೇಡ.”

2 ಕೊರಿಂಥ 7:6: ದೇವರು ‘ಕುಗ್ಗಿಸಲ್ಪಟ್ಟಿರುವವರನ್ನು ಸಾಂತ್ವನಗೊಳಿಸುತ್ತಾನೆ.’

1 ಪೇತ್ರ 5:7: “ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.”