ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೂರಕವೋ ಮಾರಕವೋ?

ಪೂರಕವೋ ಮಾರಕವೋ?

ಪೂರಕವೋ ಮಾರಕವೋ?

ಕಾರ್‌ ಚಾಲಕನು ನಿಯಂತ್ರಣ ತಪ್ಪಿ ರಸ್ತೆಬದಿಯ ಕಂಬವೊಂದಕ್ಕೆ ಡಿಕ್ಕಿ ಹೊಡೆಯುತ್ತಾನೆ. ಪ್ರಯಾಣಿಕರೊಬ್ಬರಿಗೆ ತೀವ್ರ ಗಾಯವಾಗುತ್ತದೆ. ತಕ್ಷಣ ಚಾಲಕನು ತನ್ನ ಮೊಬೈಲ್‌ನಿಂದ ಕರೆಮಾಡಿ ಸಹಾಯ ಕೋರುತ್ತಾನೆ. ಅದು ಸರಿ, ಅವನಿಗೆ ಕಾರಿನ ನಿಯಂತ್ರಣ ತಪ್ಪಿದ್ದಕ್ಕೆ ಕಾರಣವೇನು? ಕಾರ್‌ ಚಲಾಯಿಸುತ್ತಿದ್ದಾಗ ರಸ್ತೆ ಮೇಲಿದ್ದ ದೃಷ್ಟಿಯನ್ನು ರಿಂಗಣಿಸುತ್ತಿದ್ದ ತನ್ನ ಮೊಬೈಲ್‌ ಕಡೆ ಕ್ಷಣಮಾತ್ರಕ್ಕೆ ತಿರುಗಿಸಿದ್ದೇ!

ಆಧುನಿಕ ತಂತ್ರಜ್ಞಾನದ ವಸ್ತುಗಳು ನಮಗೆ ಪೂರಕವೂ ಆಗಬಲ್ಲವು, ಮಾರಕವೂ ಆಗಬಲ್ಲವು. ಇದು ನಾವು ಅವುಗಳನ್ನು ಹೇಗೆ ಬಳಸುತ್ತೇವೋ ಅದರ ಮೇಲೆ ಹೊಂದಿಕೊಂಡಿದೆ. ಹೆಚ್ಚಿನವರಿಗೆ ಇಂದಿನ ನವನವೀನ ಮಾದರಿಯ ಸಾಧನಗಳೇ ಬೇಕು, ಹಳೇ ಮಾದರಿಯ ಸಾಧನಗಳತ್ತ ತಿರುಗಿಯೂ ನೋಡುವುದಿಲ್ಲ. ಏಕೆ ಎಂಬುದಕ್ಕೆ ಒಂದು ಉದಾಹರಣೆ ತಕ್ಕೊಳ್ಳಿ. ಬೇಸರ ಹುಟ್ಟಿಸುವ ಕೆಲಸಗಳನ್ನು ಕಂಪ್ಯೂಟರ್‌ನಲ್ಲಿ ಚಕಚಕನೆ ಮಾಡಿಮುಗಿಸಬಹುದು, ಖರೀದಿ ಮತ್ತು ಬ್ಯಾಂಕ್‌ ವ್ಯವಹಾರಗಳನ್ನು ಆನ್‌ಲೈನ್‌ನಲ್ಲಿ ಮಾಡಬಹುದು, ಇ-ಮೇಲ್‌, ವಾಯ್ಸ್‌ ಮೇಲ್‌ ಅಥವಾ ವಿಡಿಯೋ ಲಿಂಕ್‌ ಮೂಲಕ ಇತರರೊಂದಿಗೆ ಸದಾ ಸಂಪರ್ಕ ಇಟ್ಟುಕೊಳ್ಳಬಹುದು.

ಸ್ವಲ್ಪ ಕಾಲದ ಹಿಂದೆ, ಕುಟುಂಬದಲ್ಲಿ ಎಲ್ಲರೂ ಬೆಳಗ್ಗೆ ತಮ್ಮ ತಮ್ಮ ದಾರಿಹಿಡಿದು ಮನೆಯಿಂದ ಹೊರಟರೆ ಮತ್ತೆ ಸಂಜೆ ಮನೆಗೆ ಹಿಂತೆರಳುವ ವರೆಗೆ ಅವರ ಮಧ್ಯೆ ಮಾತುಕತೆಯೇ ಇರುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. “ಸೆಲ್‌ಫೋನ್‌ ಇರುವ ದಂಪತಿಗಳಲ್ಲಿ 70% ಮಂದಿ ಪ್ರತಿದಿನ ಪರಸ್ಪರ ಕ್ಷೇಮ ವಿಚಾರಿಸಲು ಮತ್ತು 64% ಮಂದಿ ತಮ್ಮ ಕೆಲಸಕಾರ್ಯಗಳನ್ನು ಸಂಘಟಿಸಲು ಫೋನ್‌ ಮಾಡುತ್ತಾರೆ. ಹೆತ್ತವರಲ್ಲಿ 42% ಮಂದಿ ತಮ್ಮ ಮಕ್ಕಳನ್ನು ಸಂಪರ್ಕಿಸಲು ಪ್ರತಿದಿನ ಸೆಲ್‌ಫೋನ್‌ ಬಳಸುತ್ತಾರೆ” ಎನ್ನುತ್ತದೆ ಯುಎಸ್‌ಎ ಟುಡೇ ವಾರ್ತಾಪತ್ರಿಕೆಯ ಒಂದು ವರದಿ.

ಅಮೃತ ವಿಷವಾಗದಿರಲಿ

ತಂತ್ರಜ್ಞಾನದ ಅತಿಯಾದ ಬಳಕೆ ಅಥವಾ ದುರ್ಬಳಕೆಯಿಂದ ಮಾನಸಿಕ, ಶಾರೀರಿಕ ಹಾನಿಯಿದೆಯೇ? ಪಾಶ್ಚಾತ್ಯ ದೇಶದ ಒಂದು ನವದಂಪತಿಯನ್ನು ಪರಿಗಣಿಸಿ. ಒಂದು ವಾರ್ತಾ ವರದಿಯ ಪ್ರಕಾರ, ಅವರು “ಕಾರಲ್ಲಿ ಪ್ರಯಾಣಿಸುತ್ತಿರಲಿ, ಜಿಮ್‌ನಲ್ಲಿರಲಿ ಯಾವಾಗ ನೋಡಿದರೂ ಫೋನಲ್ಲಿ ಗಂಟೆಗಟ್ಟಲೆ ಮಾತಾಡುತ್ತಿದ್ದರು. ಅಷ್ಟೇಕೆ ತಮ್ಮ ಮನೆಯೊಳಗೆ ಬೇರೆ ಬೇರೆ ಕೋಣೆಯಲ್ಲಿರುವಾಗ ಪರಸ್ಪರರನ್ನು ಮಾತಾಡಿಸುತ್ತಿದ್ದದ್ದೂ ಫೋನ್‌ ಮೂಲಕವೇ.” ಕೆಲವೊಮ್ಮೆ ಅವರು ತಿಂಗಳಿಗೆ 4,000 ನಿಮಿಷಗಳನ್ನು ಅಂದರೆ 66ಕ್ಕಿಂತಲೂ ಹೆಚ್ಚು ತಾಸುಗಳನ್ನು ಫೋನ್‌ನಲ್ಲಿ ಕಳೆಯುತ್ತಿದ್ದರು. ಫೋನ್‌ ಇಲ್ಲದೆ ತಮ್ಮ ಕೈಕಾಲು ಓಡುವುದಿಲ್ಲ ಎಂದರವರು. ಈ ದಂಪತಿಯಲ್ಲಿ “ಮೊಬೈಲ್‌-ವ್ಯಸನದ ಲಕ್ಷಣಗಳಿವೆ. . . . ಅವರು ಒಂದು ನಿರ್ಜೀವ ವಸ್ತುವಿನ ಮೂಲಕ ಪರಸ್ಪರ ಸಂಬಂಧ ಇಟ್ಟುಕೊಂಡಿದ್ದಾರೆ” ಎಂದು ಮಾನಸಿಕ ಸ್ವಾಸ್ಥ್ಯ ತಜ್ಞರಾದ ಡಾಕ್ಟರ್‌ ಹ್ಯಾರಿಸ್‌ ಸ್ಟ್ರೇಟ್ನರ್‌ ಹೇಳುತ್ತಾರೆ.

ಈ ದಂಪತಿ ಮಾಡುತ್ತಿರುವುದು ಅತಿರೇಕ ಎಂಬಂತೆ ತೋರಬಹುದಾದರೂ ಇದು ಒಂದು ಆತಂಕಕಾರಿ ಸನ್ನಿವೇಶದ ಪ್ರತಿಬಿಂಬ. ಸೆಲ್‌ಫೋನ್‌ ಅಥವಾ ಕಂಪ್ಯೂಟರ್‌ನಲ್ಲಿ ಕೈಯಾಡಿಸದೆ ಒಂದು ತಾಸು ಸುಮ್ಮನಿರುವುದನ್ನು ಅನೇಕರಿಗೆ ಊಹಿಸಲೂ ಅಸಾಧ್ಯ. “ನಮಗೆ ಯಾವಾಗಲೂ ಇ-ಮೇಲ್‌ ನೋಡುತ್ತಾ ಇರಬೇಕು, ಇಂಟರ್‌ನೆಟ್‌ ಬಳಸುತ್ತಾ ಇರಬೇಕು, ನಮ್ಮ ಮಿತ್ರರಿಗೆ ಮೆಸೆಜ್‌ ಮಾಡುತ್ತಾ ಇರಬೇಕು” ಎನ್ನುತ್ತಾಳೆ ಒಬ್ಬಾಕೆ ಯುವ ಸ್ತ್ರೀ.

ಕಂಪ್ಯೂಟರ್‌ ಅಥವಾ ಮೊಬೈಲ್‌ “ನಿಮ್ಮ ಹೆಚ್ಚಿನ ಸಮಯವನ್ನು ನುಂಗಿ, ಮತ್ತಿತ್ತರ ಕೆಲಸಗಳೆಲ್ಲವೂ ಮೂಲೆಗುಂಪಾಗುತ್ತಿರುವಲ್ಲಿ ಎಲ್ಲೋ ಎಡವಟ್ಟಾಗುತ್ತಿದೆ ಎಂಬದಕ್ಕೆ ಇದು ಎಚ್ಚರಿಕೆಯ ಗಂಟೆ” ಎಂದು ದ ಬಿಸ್‌ನೆಸ್‌ ಟೈಮ್ಸ್‌ ಆಫ್‌ ಸಿಂಗಾಪುರ್‌ ಎಂಬ ಪತ್ರಿಕೆಯಲ್ಲಿ ಡಾಕ್ಟರ್‌ ಬ್ರಾಯನ್‌ ಯಾವ್‌ ಹೇಳುತ್ತಾರೆ. ಇದಲ್ಲದೆ, ಬೇರೆಯವರೊಂದಿಗೆ ಬೆರೆಯದೆ ಇಂಥ ಸಾಧನಗಳೊಂದಿಗೇ ಗಂಟೆಗಟ್ಟಲೆ ಕಾಲಕಳೆಯುವವರಿಗೆ ತೀರ ಕಡಿಮೆ ವ್ಯಾಯಾಮ ಸಿಗುವುದರಿಂದ ಅವರು ಹೃದಯ ಸಂಬಂಧೀ ರೋಗ, ಮಧುಮೇಹ ಅಥವಾ ಇನ್ನಿತರ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಹೆಚ್ಚು.

ಇದಲ್ಲದೆ ತಕ್ಷಣ ಮುತ್ತಿಕೊಳ್ಳುವ ಅಪಾಯಗಳೂ ಇವೆ. ಉದಾಹರಣೆಗೆ ಇತ್ತೀಚಿನ ಅಧ್ಯಯನದ ಪ್ರಕಾರ, ಮೊಬೈಲನ್ನು ಕೈಯಲ್ಲಿ ಹಿಡಿದೋ ಇಯರ್‌ ಫೋನ್‌ ಬಳಸಿಯೋ ಮಾತಾಡುವ ವಾಹನ ಚಾಲಕರಿಗೆ ಪಾನಮತ್ತ ಚಾಲಕರಿಗಿರುವಷ್ಟೇ ಅಪಾಯವಿದೆ! ವಾಹನ ಚಲಾಯಿಸುವಾಗ ಮೆಸೆಜ್‌ ಮಾಡುವುದು ಸಹ ಪ್ರಾಣಾಂತಿಕ. ಒಂದು ಸಮೀಕ್ಷೆಗನುಸಾರ 16-27ರ ವಯೋಮಾನದ ಸುಮಾರು 40% ಚಾಲಕರು ವಾಹನ ಚಲಾಯಿಸುವಾಗ ಮೆಸೆಜ್‌ ಮಾಡುತ್ತಾರೆ. ಇಷ್ಟೇ ಅಲ್ಲ, ವಾಹನ ಚಲಾಯಿಸುತ್ತಿರುವಾಗ ಮೊಬೈಲಿನಲ್ಲಿ ಮಾತಾಡುವ ಅಥವಾ ಮೆಸೆಜ್‌ ಮಾಡುವ ಮನಸ್ಸಾದರೆ ನೆನಪಿಡಿ, ಅಪಘಾತವಾದರೆ ಪೊಲೀಸರು ಮತ್ತು ವಿಮಾ ಕಂಪೆನಿಯವರು ಅಪಘಾತಕ್ಕೆ ಸ್ವಲ್ಪ ಮುಂಚೆ ನೀವು ಮೊಬೈಲನ್ನು ಬಳಸುತ್ತಿದ್ದೀರೋ ಎಂಬುದನ್ನು ಪರೀಕ್ಷಿಸುವರು. ಹೀಗೆ ಒಂದು ಸಣ್ಣ ಫೋನ್‌ ಕರೆಗೆ ಅಥವಾ ಮೆಸೆಜ್‌ಗೆ ನೀವು ತೆರಬೇಕಾದ ಬೆಲೆ ದುಬಾರಿಯಾದೀತು! * ಇದಕ್ಕೊಂದು ಉದಾಹರಣೆ ಇಲ್ಲಿದೆ. 2008ರಲ್ಲಿ ಯು.ಎಸ್‌.ಎ. ಕ್ಯಾಲಿಫೋರ್ನಿಯದಲ್ಲಿ ನಡೆದ ರೈಲು ಅಪಘಾತವೊಂದು 25 ಜೀವಗಳ ಬಲಿತಕ್ಕೊಂಡಿತು. ತನಿಖೆಗನುಸಾರ ಈ ಅಪಘಾತವಾಗುವ ಕೆಲವೇ ಸೆಕೆಂಡುಗಳ ಮುಂಚೆ ರೈಲು ಚಾಲಕನು ಮೆಸೆಜ್‌ ಕಳುಹಿಸುವುದರಲ್ಲಿ ತಲ್ಲೀನನಾಗಿದ್ದ. ಅವನು ಬ್ರೇಕ್‌ ಕೂಡ ಹಾಕಿರಲಿಲ್ಲ!

ಮೊಬೈಲ್‌, ಕಂಪ್ಯೂಟರ್‌ ಹಾಗೂ ಇತರ ಮನರಂಜನಾ ಮಾಧ್ಯಮಗಳನ್ನು ಬಳಸುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಮಕ್ಕಳು ಅವುಗಳನ್ನು ವಿವೇಕಯುತವಾಗಿ ಮತ್ತು ಜವಾಬ್ದಾರಿಯುತವಾಗಿ ಬಳಸಲು ಕಲಿಯುವುದು ಅಗತ್ಯ. ಅವರಿಗೆ ಹೇಗೆ ಸಹಾಯ ನೀಡಬಹುದು? ಮುಂದಿನ ಲೇಖನವನ್ನು ತಪ್ಪದೆ ಓದಿ. (g09-E 11)

[ಪಾದಟಿಪ್ಪಣಿ]

^ ಬೈಬಲ್‌ ಬೋಧನೆಗಳಿಗನುಸಾರ ನಡೆಯಲು ಪ್ರಯತ್ನಿಸುವವರೆಲ್ಲರೂ, ಅಪಾಯದ ಸಂಭಾವ್ಯತೆಯಿರುವ ಸನ್ನಿವೇಶಗಳಲ್ಲಿ ಯಾವುದೇ ಸಂಗತಿಯಿಂದ ಅಪಕರ್ಷಿತರಾಗದಂತೆ ನೋಡಿಕೊಳ್ಳಬೇಕು.—ಆದಿಕಾಂಡ 9:5, 6; ರೋಮನ್ನರಿಗೆ 13:1.

[ಪುಟ 15ರಲ್ಲಿರುವ ಚಿತ್ರ]

ಮೊಬೈಲ್‌ ನಿಮ್ಮ ಸಮಯವನ್ನೆಲ್ಲ ನುಂಗುತ್ತಿದೆಯೇ?